ರಾಜೇಶ್ವರಿ ಹುಲ್ಲೇನಹಳ್ಳಿ
**
ಬೆಳಗ್ಗೆ ಎದ್ದವಳು ಮನೆಯಿಂದ ಹೊರಬಂದರೆ ಹೊರಗೆ ಬಿಟ್ಟಿದ್ದ ನನ್ನ ಪಾದರಕ್ಷೆಯಲ್ಲಿ ಒಂದು ಮಾತ್ರ ಇದೆ ಮತ್ತೊಂದು ಕಾಲಿನ ಪಾದರಕ್ಷೆ ಮಾಯ! ಸುತ್ತಲೂ ಹುಡುಕಿದೆ ಗಾರ್ಡನ್ ನಲ್ಲಿ ಕೂಡ ನೋಡಿದೆ ಮನೆಯ ಆಸು ಪಾಸು ಕಣ್ಣಾಯಿಸಿದರೂ ಇಲ್ಲ. ಚಪ್ಪಲಿಯ ಬೆಲೆ ತುಸು ಹೆಚ್ಚು (ನನ್ನ ಭಾವನೆಯಲ್ಲಿ!) ಅದು ನಾಲ್ಕೂವರೆ ಸಾವಿರ ಮುಖ ಬೆಲೆಯ ಅಲ್ಲಲ್ಲಾ ಚಪ್ಪಲಿ ಬೆಲೆಯ ಚಪ್ಪಲಿಯನ್ನು ಆಫರ್ ಎಂಬ ಮಾರಾಟದ ಆಕರ್ಷಣೆಯಲ್ಲಿ ಅಣ್ಣನ ಮಗಳು ಆನ್ ಲೈನ್ ನಲ್ಲಿ ಬುಕ್ ಮಾಡಿ ಮೂರು ಸಾವಿರದ ಆರು ನೂರು ಕೊಟ್ಟು ಖರೀದಿಸಿದ್ದು. ತುಂಬಾ ಹೆಚ್ಚಿನ ಹಣ ಕೊಟ್ಟು ಖರೀದಿಸಿ ಧರಿಸುವವರು ಸಹಸ್ರಾರು ಮಂದಿ ಇದ್ದಿರಬಹುದು. ಆದರೆ ನಾಲ್ಕೈದು ಸಾವಿರ ಕೊಟ್ಟು ಚಪ್ಪಲಿ ಖರೀದಿಸುವುದೆಂದರೆ ಅದು ದುಬಾರಿ ಹಾಗೂ ದುಂದು ವ್ಯಯ ಎಂಬ ಸ್ಥಿತಿ ಹಾಗೂ ಮನಸ್ಥಿತಿ ನನ್ನದು! ಬಾಟಾ ಮತ್ತು ಲಿಬರ್ಟಿ ಕಂಪೆನಿಯ ಒಂದು, ಒಂದು ಸಾವಿರದೈನೂರರ ಆಸು ಪಾಸಿನ ಬೆಲೆಯ ಚಪ್ಪಲಿ ಖರೀದಿಸಿದ್ದು ಬಿಟ್ಟರೆ, ಅದಕ್ಕಿಂತ ಹೆಚ್ಚು ಕೊಟ್ಟು ನಾನೆಂದೂ ಪಾದಕ್ಕೆ ರಕ್ಷೆ ಕೊಂಡಿರಲಿಲ್ಲ. ಇದು ನನ್ನ ಮಿತಿ, ಸ್ಥಿತಿ, ಅಲ್ಲಲ್ಲ ನನ್ನ ಮನಸ್ಥಿತಿ!
ಈಗಿನ ಮಕ್ಕಳಿಗೆ ಅದೆಲ್ಲಾ ತೀರಾ ಕನಿಷ್ಟ! ಹಾಗೇ ನಮ್ಮ ಮನಸ್ಥಿತಿ ಅವರಿಗೆ ಅಣಕ ಹಾಗೂ ನಿಕೃಷ್ಟ! ಮಕ್ಕಳುಗಳ ಬಲವಂತಕ್ಕಾಗಿ ಒಂದು ಹೆಸರಾಂತ ಬ್ರಾಂಡೆಡ್ ಕಂಪೆನಿಯ ಎಕ್ಕಡವನ್ನು ಅಪರೂಪಕ್ಕೆ ಕೊಂಡಿದ್ದೆ. ಪರವಾಗಿಲ್ಲ ಒಳ್ಳೆಯ ಫೀಲಿಂಗ್ ಇತ್ತು ಹಾಗೂ ಲಕ್ಷಣವಾಗಿ ಕೂಡ ಇತ್ತು ಹಾಗೇ ಬಾಳಿಕೆ ಕೂಡ ಬಂದಿತ್ತು. “ಕಾಸಿಗೆ ತಕ್ಕ ಕಜ್ಜಾಯ” ಎಂಬುದು ಸರಿ ಎನಿಸಿತ್ತು. ಪರವಾಗಿಲ್ಲ ಅದಕ್ಕೆ ನಾನು ಕೊಟ್ಟ ಹಣಕ್ಕೆ ಅದು ನನಗೆ ನೀಡುತ್ತಿರುವ ಅಲ್ಲಲ್ಲ ನನ್ನ ಪಾದಕ್ಕೆ ನಿಡುತ್ತಿದ್ದ ಮೃದು ಸ್ಪರ್ಷ, ರಕ್ಷಣೆ ಹಾಗೂ ಅಂದಕ್ಕೆ ಮೆಚ್ಚಿಕೊಂಡೆ ಮೊದಲ ಬಾರಿಗೆ! ಅಂಥಾ ಚಪ್ಪಲಿಯನ್ನು ನನಗೆ ಶಿಫಾರಸ್ಸು ಮಾಡಿ ಕೊಡಿಸಿದ ಅಲ್ಲಲ್ಲಾ, ಕೊಳ್ಳಲು ನನ್ನನ್ನು ಒಪ್ಪಿಸಿದ ಮಕ್ಕಳಿಗೆ ಮನದಲ್ಲೇ ಮೆಚ್ಚುಗೆ ಸೂಸಿದೆ.
ಜೋಡು, ಮೆಟ್ಟುಗೆ, ಚಪ್ಪಲಿ, ಎಕ್ಕಡ, ಹಾವುಗೆ, ಮೆಟ್ಟು, ಪಾದುಕೆ, ಪಾದರಕ್ಷೆ, ಸ್ಲಿಪ್ಪರ್, ಶೂ, ಬೂಟ್ಸು ಹೀಗೆಲ್ಲಾ ಹತ್ತಾರು ನಾಮಗಳಿಂದ ಕರೆಯಲ್ಪಡುವ ಅವುಗಳು ನಮ್ಮ ಪಾದಗಳನ್ನು ಕಲ್ಲು, ಮುಳ್ಳು, ಮಣ್ಣು, ಹುಳು ಉಪ್ಪಟೆಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಧರಿಸುವುದರಿಂದ ಅಲ್ಲೆಲ್ಲಾ, ಅವೆಲ್ಲವುಗಳಿಂದ ನಮ್ಮನ್ನು ರಕ್ಷಿಸುವ ಕಾಯಕ ಮಾಡುವುದರಿಂದ ತಾನೇ ನಾವು ಅವುಗಳಿಗೆ ಪಾದರಕ್ಷೆ ಎಂದು ಗೌರವದಿಂದ ನಾಮಕರಿಸಿರುವುದು! ಹಲವೊಮ್ಮೆ ಈ ಪಾದರಕ್ಷೆಗಳಿವೆಯಲ್ಲಾ ಅವು ನಮ್ಮ ಪಾದಕ್ಕೆ ರಕ್ಷಣೆ ಕೊಡುವ ಬದಲಿಗೆ ನಾವೇ ಅವಕ್ಕೆ ರಕ್ಷಣೆ ಕೊಡಬೇಕಾದ ಪರಿಸ್ಥಿತಿಯುಂಟು, ಅದೂ ದುಬಾರಿ ಪಾದರಕ್ಷೆಗಳನ್ನು ಕೊಂಡಾಗ! ಎಂತ ವಿಪರ್ಯಾಸ ನೋಡಿ ನಮ್ಮ ಪಾದ ರಕ್ಷಣೆಗಾಗಿ ಕೊಂಡ ಅವುಗಳ ರಕ್ಷಣೆಗೇ ನಾವು ನಿಲ್ಲ ಬೇಕಾದ ಸ್ಥಿತಿ! ಕಡಿಮೆ ಬೆಲೆಯದ್ದಾದರೆ ಬಿಡಿ ಕಳೆದು ಹೋದರೂ, ಕಳೆದುಕೊಂಡರೂ, ಅಡ್ಡಿಯಿಲ್ಲ. ಯಾರೋ ಕದ್ದೊಯ್ದರೂ ಚಿಂತೆಯಿಲ್ಲ. ಇದೇನಪ್ಪಾ ಇವರೇನು ಪಾದರಕ್ಷೆಗೇ ರಕ್ಷಣೆ ಕೊಡಬೇಕೆನ್ನುತ್ತಾರಲ್ಲಾ? ಎಂದು ಅಚ್ಚರಿಯೆನಿಸಿರಬೇಕು ನಿಮಗೆ! ಸುಳ್ಳಲ್ಲ ಕಣ್ರೀ ನಿಜವಾಗಿ ನಮ್ಮನ್ನು ಅಲ್ಲಲ್ಲಾ ನಮ್ಮ ಪಾದಗಳನ್ನು ರಕ್ಷಿಸುವ ಪಾದರಕ್ಷೆಗಳಿಗೆ ಅದೂ ದುಬಾರಿ ಪಾದರಕ್ಷೆಗಳನ್ನು ಕೊಂಡಾಗ ಅವುಗಳ ರಕ್ಷಣೆಯ ಸಂದರ್ಭಗಳು ಅವುಗಳ ಬೆಲೆ, ಮತ್ತು ಬ್ಯ್ರಾಂಡ್ ಮೇಲೆ ಅವಲಂಬಿತವಾಗುತ್ತದೆ.
ದುಬಾರಿ ಪಾದರಕ್ಷೆಗಳನ್ನು ಮೆಟ್ಟಿ ದೇವಸ್ಥಾನ, ಸಂಬಂಧಿಕರ, ಸ್ನೇಹಿತರುಗಳ ಮನೆಗಳ ಒಳಗೆ ನಡೆಯುವ ಸಮಾರಂಭಗಳಿಗೆ ಹೋದರಂತೂ ಚಪ್ಪಲಿಯನ್ನು ಹೊರಗೆ ಕಳಚಿ ಹೋದಾಗ ಮನಸ್ಸೆಲ್ಲಾ ಚಪ್ಪಲಿಯ ಕಡೆಗೇ ಇರುತ್ತದೆಯೇ ವಿನಹಃ ದೇವರ, ಅಥವಾ ನಾವಿದ್ದ ಸಮಾರಂಭ ಅಥವಾ ಕಾರ್ಯಕ್ರಮದ. ಮೇಲ್ಲಲ್ಲಾ! ಹೀಗಿರುವಾಗ ಪಾದರಕ್ಷೆ ಎಂಬ ಹೆಸರಿನಿಂದ ಕರೆಯುವುದು ತರವಲ್ಲ ತಾನೇ? ಒಂಥರಾ ನಮ್ಮ ಮನೆ ಕಾಯಲೆಂದು ತಂದ ದುಬಾರಿ ಬೆಲೆಯ ವಿಶೇಷ ತಳಿಯ ನಾಯಿಗೆ ನಾವೇ ಬೆಂಗಾವಲಾದಂತೆ! ದುಬಾರಿ ನಾಯಿಗಳನ್ನೂ ಕದಿಯುವ ಖದೀಮಿರುತ್ತಾರಂತೆ ಗೊತ್ತಾ? ಇನ್ನು ಛತ್ರಗಳಲ್ಲಿ ಪಾರ್ಟಿ ಹಾಲ್ಗಳಲ್ಲಿ ನಡೆಯುವ ಮದುವೆ ಮುಂಜಿ ಇತರೆ ಯಾವುದೇ ಸಮಾರಂಭಕ್ಕೆ ಹೋದರೆ ಪಾದರಕ್ಷೆ ಕಳಚುವಂತಿಲ್ಲವಾದುದರಿಂದ ಕಾರ್ಯಕ್ರಮದಲ್ಲಿ ನಿಶ್ಚಿಂತೆಯಾಗಿ ಪಾಲ್ಗೊಳ್ಳಬಹುದು. ಎಕ್ಕಡದ ಚಿಂತೆ ಮರೆತು ನೆಮ್ಮದಿಯಿಂದ ಇರಬಹುದು.

ಜನರಲ್ಲಿ ಹಣಕಾಸಿನ ವಹಿವಾಟು ಹೆಚ್ಚಿ ಆರ್ಥಿಕವಾಗಿ ಮುಂದುವರೆದಂತೆ ಚಪ್ಪಲಿ ಕಳ್ಳತನ ಕಡಿಮೆಯಾಗಿದೆ. ಆದರೂ ಒಮ್ಮೆ ನನ್ನ ಸಹೋದ್ಯೋಗಿಯೊಬ್ಬರು ಯಾವುದೋ ಕಾರ್ಯಕ್ರಮಕ್ಕೆ ಹೋಗಿ ಕಛೇರಿಗೆ ತಡವಾ ಗಿಬಂದರು. ಬಂದವರೇ “ಎಂಥಾ ಕೆಲ್ಸಾ ಆಯ್ತು ಗೊತ್ತಾ? ಯಾರೋ ನನ್ನ ಚಪ್ಪಲೀನೇ ಹೊಡ್ದುಬಿಟ್ರು ಎಷ್ಟು ಹುಡುಕಿದ್ರೂ ಸಿಗಲಿಲ್ಲ, ಚಪ್ಲಿ ಹುಡುಕೋದ್ರಲ್ಲಿ ತಡ ಆಗೋಯ್ತು.” ಎಂದರು. “ಸರಿಯಾಗಿ ಎಲ್ಲಿ ಬಿಟ್ಟಿದ್ರಿ ಅಲ್ಲಿ ಹುಡುಕಬೇಕಿತ್ತು” ಎಂದರು ಮತ್ತೊಬ್ಬರು. “ಅಯ್ಯೋ ಬಿಟ್ಟ ಕಡೇನೇ ಹುಡುಕಿದೆ ಸಿಗಲೇ ಇಲ್ಲ. ” ಎಂದರು. “ಮತ್ತೇ ಬರಿಗಾಲಲ್ಲಿ ಬಂದೇನೋ ಮಾರಾಯ?”
“ಬರಿ ಕಾಲಲ್ಲಿ ಯಾಕ್ ಬರ್ತಾರೆ, ಚಪ್ಪಲಿ ಹಾಕ್ಕೊಂಡೇ ಬಂದೆ”
“ಸರಿ ಮತ್ತೆ ಸಿಕ್ಕಿದ್ಯಲ್ಲಾ ಬಿಡು ಇನ್ನೇನು.?”
“ಆಂ ಸಿಕ್ಕದಾ? ಸಿಕ್ಕದ್ ಎಲ್ ಬಂತು?”ಎಂದರು ಕೋಪದಿಂದ. “ಮತ್ತೆ ? “ಎಂದು ಅವರ ಪಾದಗಳೆಡೆಗೆ ನೋಡಿದವರು ಹಾಕ್ಕೊಂಡಿದಿಯಲ್ಲಾ?” ಎಂದೊಡನೆ ನನ್ನ ಚಪ್ಪಲಿ ಸಿಗ್ಲಿಲ್ಲ, ನನ್ನ ತರದ್ದೇ ಅಲ್ಲಿ ಯಾವ್ದೋ ಇತ್ತು ನನ್ನದು ಕಪ್ಪು ಬಣ್ಣ, ಅದು ನೀಲಿ ಇತ್ತು ಅದನ್ನೇ ಹಾಕ್ಕೊಂಡ್ ಬಂದೆ ಅತ್ಲಾಗೇ.” ಎಂದಾಗ, ಉಳಿದ ಸಹೋದ್ಯೋಗಿಗಳೆಲ್ಲಾ “ಹಾಂ ನಿನ್ನ ಚಪ್ಪಲಿ ಸಿಗಲಿಲ್ಲಾ ಅಂತ ಬೇರೆಯವರ ಚಪ್ಪಲಿ ಹಾಕ್ಕೊಂಡು ಬಂದಿದಿಯಲ್ಲಾ ಇದೇನೋ ಮಾರಾಯ .” ಎಂದೊಡನೆ, “ಮತ್ತೆ? ನನ್ನ ಚಪ್ಪಲಿ ಯಾವನೋ ಹಾಕ್ಕಂಡೋಗಿದ್ದ ಅದ್ಕೆ ನಾನೂ ನನ್ನ ಚಪ್ಪಲಿ ತರದ್ದೇ ಬೇರೇದು ಹಾಕ್ಕಂಡ್ ಬಂದೆ, ಮತ್ತೆ ಹಂಗೇ ಬರಿಗಾಲಲಿ ಬರಕ್ಕಾಗುತ್ತಾ?” ಎಂದ. ಅವರ ತರ್ಕಕ್ಕೆ ಎಲ್ಲರೂ ಮುಸಿ ಮುಸಿನ ಕ್ಕರು. ಒಬ್ಬ ಅವರ ಗಳಸ್ಯ ಕಂಠಸ್ಯ ಗೆಳೆಯ ಮಾತ್ರ “ಏಯ್ ಹಾಕ್ಕಳದಾಕ್ಕಂಡ್ ಬಂದೆ ಯಾವ್ದಾದ್ರೂ ಕಾಸ್ಟ್ಲೀ ಚಪ್ಪಲಿ ಹಾಕ್ಕಂಡ್ ಬರ್ಬೇಕಿತ್ತೂ ಕಣೋ.” ಎಂದು ಕಿಚಾಯಿಸಿದರು. ನಾನು “ಅಯ್ಯೋ ಚಪ್ಪಲಿ ಕಳೆದು ಹೋದ್ರೆ ಕರ್ಮ ಕಳೆದಂಗೆ ಅಂತಾರೆ ಗೊತ್ತಾ? ಏನೋ ಕಳ್ದೋದ್ರೆ ಹೋಗ್ಗಿ ಕರ್ಮ ಕಳೀತು ಅಂತ ಬರೋದ್ ಬಿಟ್ಟು ಬೇರೆ ಯಾರ್ದೋ ಚಪ್ಪಲಿ ಹಾಕ್ಕೊಂಡ್ಡ್ ಬಂದಿದಿರಲ್ಲಾ?” ಎಂದಾಗ “ಯಾವ್ ಕರ್ಮನೂ ಇಲ್ಲಾ ಯಾವ ಪುಣ್ಯನೂ ಇಲ್ಲ ಬಿಡಮ್ಮಾ ಚಪ್ಪಲಿ ಕಳ್ಕೊಂಡ್ ಬೇಜಾರಾಗದಿರ್ಲಿ ಅಂತ ಹಂಗೆ ಹೇಳ್ತಾರೆ ಅನ್ಸುತ್ತೆ.” ಎಂದರು. ಹೌದು ಅವರ ತರ್ಕವೂ ಸರಿಯಿರಬಹುದು. ಕಳೆದು ಹೋದುದಕ್ಕೆ ಚಿಂತಿಸಬಾರದೆಂದು ಹಾಗೆ ಹೇಳುತ್ತಿದ್ದರೆನಿಸುತ್ತದೆ. ಹಾಗೇ ನೋಡಿ ಚಿನ್ನ ಸಿಕ್ಕಿದರೆ ಒಳ್ಳೆಯದಲ್ಲಾ ಕೆಡುಕು ಎಂದು ಕೂಡ ಹೇಳುವರು ಯಾಕಂದ್ರೆ ಚಿನ್ನ ಸಿಕ್ಕಿದರೂ ವಾಪಸ್ ಮಾಡಿದರೆ ಚಿನ್ನ ಕಳೆದುಕೊಂಡವರು ಸಂಕಟ ಪಡದಂತಾಗುತ್ತದೆ ಎಂದಿರಬಹುದು.
ಹಿಂದೆಲ್ಲಾ ಬಹಳ ಚಪ್ಪಲಿ ಕಳ್ಳತನಗಳಾಗುತ್ತಿದ್ದವು. ದೇವಸ್ಥಾನದ ಮುಂದಂತೂ ಹೆಚ್ಚು ನಡೆಯುತ್ತಿತ್ತು. ಆ ಕಾರಣದಿಂದಲೇ ಅಲ್ಲೊಂದು ಚಪ್ಪಲಿ ಕಾಯುವ ಸಣ್ಣ ಉದ್ಯೋಗದ ಸೃಷ್ಟಿಯಾಯ್ತೆನ್ನಬಹುದು. ಅದು ಕೆಲವರ ಉದರ ನಿಮಿತ್ತ ಕಾಯಕವಾಯ್ತು. ಹಲವು ದೇವಾಲಯಗಳ ಮುಂದೆ ಚಪ್ಪಲಿ ಕಾಯುವ ಕಾಯಕದವರು ಒಂದು ಜೊತೆ ಪಾದರಕ್ಷೆಗೆ ಎರಡು ರೂ ಅಥವಾ ಐದು ರೂ ಎಂದು ಬೋರ್ಡ್ ಹಾಕಿಕೊಂಡಿರುತ್ತಾರೆ. ಅದು ಪಾದ ರಕ್ಷೆಗಲ್ಲ ಪಾದರಕ್ಷೆಗಳ ರಕ್ಷಣೆಗೆ! ಹಲವರಂತೂ ಚಪ್ಪಲಿ ಕಾಯಲು ಹಣ ಕೊಡಬೇಕಲ್ಲಾ ಎಂದು ಒಂದು ಚಪ್ಪಲಿಯನ್ನು ಒಂದು ಕಡೆ ಮತ್ತೊಂದನ್ನು ಇನ್ನೊಂದು ಕಡೆ ಬಿಟ್ಟು ನಂತರ ಎರಡೂ ಬದಿ ಬಿಟ್ಟ ಚಪ್ಪಲಿಗಳ ಹುಡುಕಾಟದ ಸರ್ಕಸ್ ಮಾಡುತ್ತಾರೆ. ಹಾಗೇ ‘ಚಿನ್ನಾರಿ ಮುತ್ತ’ ಸಿನೆಮಾದ ಚಪ್ಪಲಿ ಕದಿಯುವ ಕೆಲಸವೇ ಬದುಕಾಗಿದ್ದ ಹುಡುಗನ ಕಥೆ ಗೊತ್ತಿದೆಯಲ್ಲಾ. ಶೂ ಕದ್ದು ಓಡಿ ಹೋದ ಹುಡುಗನೊಬ್ಬ ಅವನ ವೇಗದ ಓಟದಿಂದ ದೊಡ್ಡ ಓಟಗಾರನಾಗಿ ಪ್ರಸಿದ್ಧನಾಗಿದ್ದು. ಅವನ ಬದುಕಿನ ದಿಕ್ಕನ್ನೇ ಬದಲಿಸಿದ್ದು.
ಹಿಂದೆಲ್ಲಾ ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆಯುವವರು ಬಹಳಷ್ಟಿದ್ದರು. ಭೂಮಿ, ಗಾಜು, ಪ್ಲಾಸ್ಟಿಕ್ ಕೆಮಿಕಲ್ ಮುಕ್ತವಾಗಿತ್ತು. ಬರಿಗಾಲಲ್ಲೇ ನಡೆದರೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಹೊಲ ಗದ್ದೆಗಳಿಗಳಿಗಂತೂ ಚಪ್ಪಲಿ ಮೆಟ್ಟಿ ಕಾಲಿಡುತ್ತಿರಲಿಲ್ಲ. ಅನ್ನ ನೀಡುವ ಭೂತಾಯಿಯ ಬಗ್ಗೆ ಅಪಾರ ಭಯ ಭಕ್ತಿ ಇತ್ತು. ಆದರೆ ಇಂದು ಬರಿಗಾಲಲ್ಲಿ ಹೊಲಕ್ಕೆ ಇಳಿಯುವಂತೆಯೇ ಇಲ್ಲ. ಭೂತಾಯಿ ಇಂದು ರಾಸಾಯನಿಕ ಗೊಬ್ಬರ ತಿಂದು ಅಸ್ವಸ್ಥಳಾಗಿರುವಳು. ಆ ರಾಸಾಯನಯುಕ್ತ ಮಣ್ಣಿನಲ್ಲಿ ಕಾಲಿಟ್ಟರೆ ಹಲವು ಚರ್ಮರೋಗಗಳು ಬರುವ ಸಾಧ್ಯತೆಗಳು ಕೂಡ ಉಂಟು. ಚಪ್ಪಲಿ ಎಂದರೆ ಬಹುತೇಕ ಮನೆಯಿಂದ ಹೊರಗೆ ಪಾದಗಳಿಗೆ ಧರಿಸುವ ವಸ್ತುವಾಗಿತ್ತು, ಚಪ್ಪಲಿ ಬಿಡುವ ಜಾಗ ಮನೆಯಿಂದ ಹೊರಗಿತ್ತು. ಬರ ಬರುತ್ತಾ ಹೆಚ್ಚು ಹಣ ಕೊಟ್ಟು ಕೊಂಡ ಕಾರಣ ಮನೆಯ ಒಳಗೆ ಪಡಸಾಲೆ ಪ್ರವೇಶದ ಅವಕಾಶ ನೀಡಲಾಯ್ತು. ನಂತರ ಅವು ಒಳಗೆಲ್ಲ ಚಲ್ಲಾಡುವಾಗ ಅವುಗಳಿಗಾಗಿ ಮನೆ ಕಟ್ಟುವಾಗಲೇ ಮನೆಯ ಒಳಗೆ ಚಪ್ಪಲಿ ಗೂಡುಗಳನ್ನು ಕಟ್ಟಿಸಿಕೊಳ್ಳುವ ಪರಿಕಲ್ಪನೆ ಹುಟ್ಟಿಕೊಂಡಿತು. ಹಾಗೇ ಮುಂದುವರೆಯುತ್ತಾ ಜನ ಹೆಚ್ಚು ಹೆಚ್ಚು ಹಣ ಕೊಟ್ಟು ಖರೀದಿಸಿದ ಚಪ್ಪಲಿಗಳಿಗೆ ಅವುಗಳ ಬೆಲೆಯ ಘನತೆಗೆ ತಕ್ಕಂತೆ ಅವುಗಳಿಗೆ ಉತ್ತಮ ಸ್ಥಾನ-ಮಾನ ನೀಡುವ ಸಲುವಾಗಿ ವಿವಿಧ ವಿನ್ಯಾಸದ ಮರದ ಶೂ ರ್ಯಾಕ್ ಗಳ ಆವಿಷ್ಕಾರವಾಗಿ, ಮನೆಯ ಒಳಗೆ ಚಪ್ಪಲಿ ಶೂಗಳಿಗೆ ತಮ್ಮದೇ ಆದ ಸ್ಥಾನ ದೊರೆಯಿವಂತಾಯ್ತು. ನಂತರ ಚಂದವಾದ ಅವುಗಳನ್ನು ಮನೆಯ ಒಳಗೂ ಧರಿಸುವ ಅಭ್ಯಾಸಗಳು ಎಲ್ಲೆಡೆಯಲ್ಲಿಯೂ ಪ್ರಚಲಿತಕ್ಕೆ ಬಂದಿವೆ.

ಹಿಂದೆ ಅತ್ಯಂತ ಶೀತ ವಾಯುಗುಣ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ಮಾತ್ರ ದೇಹಕ್ಕೆ ಶೀತ ಹಿಡುಯದಿರಲೆಂದು ಮನೆಯ ಒಳಗೂ ಚಪ್ಪಲಿ ಧರಿಸುವುದು ರೂಢಿಯಲ್ಲಿತ್ತು. ಅದೆಲ್ಲಾ ಕೊಡಗು, ಚಿಕ್ಕಮಗಳೂರೂ, ಊಟಿ, ಇಂತಹ ಕಡೆ ಹಾಗೇ ಬ್ರಿಟಿಷರು ವಾಸಿಸಿದ ಸ್ಥಳಗಳಲ್ಲಿ ಅವರ ಅನುಕರಣೆಯಲ್ಲಿ ಮಾತ್ರ! ಬಹುತೇಕ ಅವರ ವಾಸಸ್ಥಾನಗಳು ತಂಪಾದ ಪ್ರದೇಶಗಳಲ್ಲೇ ಅಲ್ಲವೇ? ಆದರೆ ಈಗ ಬಯಲು ಸೀಮೆಯಲ್ಲೂ ಮನೆಯ ಒಳಗೂ ಚಪ್ಪಲಿ ಮೆಟ್ಟಿ ಓಡಾಡುವುದು ಅಭ್ಯಾಸವಾಗಿದೆ, ಕಾರಣ ಮನೆಯೊಳಗೆ ಸೆಗಣಿ , ರೆಡ್ ಆಕ್ಸೈಡ್, ಫ್ಲೋರಿಂಗ್ ಗಳು ಮಾಯವಾಗಿ ಘನತೆ, ದೊಡ್ಡಸ್ತಿಕೆ ತೋರ್ಪಡಿಸುವಿಕೆಯ ಮತ್ತೊಬ್ಬರ ಅನುಕರಣೆಯ ಭರದಲ್ಲಿ ಎಲ್ಲ ಮಾರ್ಬಲ್, ವೆಟ್ರಿಫೈಡ್ ಮಯವಾಗಿ, ಮನೆ ಕಟ್ಟಿ ವಾಸ ಹೋದ ನಾಲ್ಕಾರು ತಿಂಗಳುಗಳಲ್ಲಿ ಶೀತದಿಂದ ಮಂಡಿ ನೋವು ಶುರುವಾಗಿ, ಮಡಿವಂತ ಹಿರಿಯರು ಕೂಡ ಇಂದು ಮನೆಯೊಳಗೆ ಚಪ್ಪಲಿ ಧರಿಸುವಂತೆ ಮಾಡಿಕೊಂಡಿದ್ದೇವೆ. ಇದು “ಕಾಲಾಯ ತಸ್ಮೈ ನಮಃ” ಅಲ್ಲ. ನಾವೇ ಮಾಡಿಕೊಂಡ “ಸ್ವಯಂಕೃತ ಅಪರಾಧಾಯ ನಮಃ!”
ಶ್ವಾನಗಳು ಚಪ್ಪಲಿ ಹೊತ್ತೊಯ್ವ ಕಥೆ ಇಂದು ನಿನ್ನೆಯದಲ್ಲವಂತೆ, ಮಹಾಭಾರತದಲ್ಲಿನ ಒಂದು ದಂತ ಕತೆಯಂತೆ. ಈ ಶ್ವಾನಕ್ಕೆ ದ್ರೌಪದಿಯ ಶಾಪವಿತ್ತಂತೆ ಆದರೂ ಇಂದಿಗೂ ಕಲಿಯುಗದಲ್ಲೂ ಚಪ್ಪಲಿಯನ್ನು ಹೊತ್ತೊಯ್ಯುತ್ತಲೇ ಇವೆಯಲ್ಲ! ಧರ್ಮರಾಯ ಮತ್ತು ದ್ರೌಪದಿ ಏಕಾಂತದಲ್ಲಿರುವಾಗ ಅದರ ಅರಿವಿರದೇ ಅಚಾನಕ್ಕಾಗಿ ಅರ್ಜುನ ಒಳ ಬಂದಾಗ ಅವರ ಏಕಾಂತಕ್ಕೆ ಭಂಗ ತಂದ ಕಾರಣ ಪ್ರಾಯಶ್ಚಿತ್ತಕ್ಕಾಗಿ ತೀರ್ಥ ಯಾತ್ರೆಗೆ ಹೋಗುವಂತಾಗಿದ್ದು ಈ ನಾಯಿಗಳು ಚಪ್ಪಲಿ ಹೊತ್ತೊಯ್ದುದರಿಂದಲೇ ಎಂಬ ಕತೆಯ ನೆನಪಾಯ್ತು. ಧರ್ಮರಾಯ ಹೊರಗೆ ಬಿಟ್ಟ ಪಾದುಕೆಗಳನ್ನು ನಾಯಿಗಳು ಹೊತ್ತೊಯ್ದ ಕಾರಣ ಅರ್ಜುನನಿಗೆ ಧರ್ಮರಾಯ ದ್ರೌಪದಿಯೊಂದಿಗಿರುವ ಸಂಗತಿಯ ಅರಿವಿರಲಿಲ್ಲವಾಗಿ ಇಲ್ಲಿ ಅರ್ಜುನನ ತಪ್ಪಿಲ್ಲ. ತಪ್ಪೆಲ್ಲಾ ನಾಯಿಗಳದ್ದು! ಹೊರಗೆ ಪಾದರಕ್ಷೆಗಳಿದ್ದಿದ್ದರೆ ಅರ್ಜುನ ಒಳ ಪ್ರವೇಶಿಸುತ್ತಿರಲಿಲ್ಲ, ಈ ಅಚಾತುರ್ಯ ನಡೆಯುತ್ತಿರಲಿಲ್ಲ. ಈ ಅಚಾತುರ್ಯಕ್ಕೆ ಕಾರಣೀಭೂತವಾದ, ಹೊರಗೆ ಬಿಟ್ಟ ಚಪ್ಪಲಿಯನ್ನು ಹೊತ್ತುಕೊಂಡು ಹೋದ ಶ್ವಾನಗಳ ಮೇಲೆ ಅತೀವವಾಗಿ ಕೋಪಗೊಂಡ ದ್ರೌಪದಿ ಇಡೀ ಶ್ವಾನ ಸಂಕುಲಕ್ಕೇ ಶಾಪವಿತ್ತಳಂತೆ. ಅದೆಂದರೆ “ಹೇ ಶ್ವಾನ ಕುಲವೇ, ನನ್ನ ಏಕಾಂತವನ್ನು ಬಯಲಾಗಿಸಿದ ನಿಮ್ಮ ಲೈಂಗಿಕ ಕ್ರಿಯೆ ಬಯಲಲ್ಲಿ ಬಟಾ ಬಯಲಾಗಿ ಕಿರಿಕಿರಿಯಾಗಿ ನಡೆಯಲಿ! ಎಲ್ಲರೂ ಹೇಸಿಗೆ ಪಡುವಂತಾಗಲಿ.” ಎಂದಳಂತೆ. ದ್ರೌಪದಿ ಶಾಪವೋ ಮತ್ತೇನೋ ಕಾಣೆ. ಆದರೆ ಅದೆಷ್ಟೋ ಪ್ರಾಣಿಗಳ ದೈಹಿಕ ಕಾಮನೆಗಳು ಮುಚ್ಚುಮರೆಯಲಿ ನಡೆದರೆ ಈ ಶ್ವಾನ ಸಂಕುಲದ ಈ ಕ್ರಿಯೆ ಬಯಲಲ್ಲಿ! ಬೀದಿ ಬೀದಿಯಲ್ಲಿ. ಆದರೂ ಪಾಪ ಚಪ್ಪಲಿಯನ್ನು ಆಟಿಕೆಯಾಗಿ ಆಡಲು ಹೊತ್ತೊಯ್ದ ಶ್ವಾನಗಳಿಗೆ ಈ ಪರಿಯ ಶಾಪವೇ? ಬಹುಶಃ ನಾಯಿ ಕೃತಜ್ಞತೆಗೆ ಎಷ್ಟೇ ಹೆಸರಾದರೂ ಯಾರನ್ನಾದರೂ ಹೀನಾಯವಾಗಿ ಬೈಯ್ಯುವಾಗ “ಅಬ್ಬಾ! ಮರ್ಯಾದೆಯಿಲ್ಲದವರು ನಾಯಿಗಿಂತ ಕಡೆಯಾದವರು.” ಎಂಬ ಬೈಗುಳಗಳು ಇದಕ್ಕೇ ಇರಬಹುದೆನಿಸುತ್ತದೆ.
ಇನ್ನು ರಾಮಾಯಣದಲ್ಲಿ ಪಾದುಕೆಗಳಿಗೆ ವಿಶೇಷ ಸ್ಥಾನವಿದೆ ಶ್ರೀರಾಮನ ಪಾದುಕೆಗಳನ್ನು ಭರತ ತಲೆಯ ಮೇಲೆ ಹೊತ್ತು ತಂದು ಸಿಂಹಾಸದಲ್ಲಿಟ್ಟು ಶ್ರೀ ರಾಮನೇ ರಾಜನೆಂಬ ಭಾವದಲ್ಲಿ ರಾಜ್ಯಭಾರ ನಡೆಸಿದ್ದು. ಶ್ರೀರಾಮ ವನವಾಸ ಮುಗಿಸಿ ರಕ್ಕಸ ಸಂಹಾರ ಮಾಡಿ ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷೇಕದವರೆಗೂ ಆತನ ಪಾದುಕೆಗಳು ಅವನ ಇರುವಿಕೆಯ ಪ್ರತೀಕವಾಗಿದ್ದುದು ನಮಗೆಲ್ಲಾ ತಿಳಿದ ಸಂಗತಿ. ಬಹಳ ಹಿಂದೆ ಗಂಡಿನ ಸಂಖ್ಯೆ ಕಡಿಮೆ ಇದ್ದು ಗಂಡಿಗೆ ಬರವಿದ್ದಾಗ ಹೆಣ್ಣು ಮಕ್ಕಳಿಗೆ ವರನನ್ನು ಹುಡುಕಲು ವಾಹನ ಸಂಚಾರ ಸಾರಿಗೆ ವ್ಯವಸ್ಥೆ ಇಲ್ಲದ ಕಾಲದಲ್ಲಿ ‘ಗಂಡು ಹುಡುಕಲು ಅದೆಷ್ಟು ಜೊತೆ ಚಪ್ಪಲಿ ಸವೆದವೋ’ ಎಂಬ ಮಾತುಗಳು ಕೇಳಿ ಬರುತ್ತಿದ್ದುದುಂಟು. ಇತ್ತೀಚೆಗೆ ಮನೆಗಳಲ್ಲಿ ಮನೆಯ ಜನರೆಲ್ಲಾ ಊರಿನಿಂದ ಹೊರ ಹೋಗುವುದಾದರೆ ಹೊರಗೆ ಕೆಲವು ಚಪ್ಪಲಿಗಳನ್ನು ಬಿಟ್ಟು ಹೊಗುವುದುಂಟು. ಮನೆಯಲ್ಲಿ ಜನರಿದ್ದಾರೆ ಎಂಬ ಕಲ್ಪನೆಯಿಂದ ಕಳ್ಳಕಾಕರು ಬಾರದಿರಲೆಂಬ ಲೆಕ್ಕಾಚಾರ. ಆದರೂ ಕಳ್ಳರೇನು ಪೆದ್ದರೇ?

ಇಂದು ಪಾದರಕ್ಷೆ ಕೇವಲ ಪಾದರಕ್ಷೆಯಾಗಿಲ್ಲ. ಅದು ಪ್ರತಿಷ್ಟೆಯ ಪ್ರದರ್ಶನ ಕೂಡ ಆಗಿದೆ. ಬ್ರ್ಯಾಂಡೆಡ್ ಚಪ್ಪಲಿ ಧರಿಸಿದರೆ ಘನತೆ ಹೆಚ್ಚು ಎಂಬ ಮನೋಭಾವ ಕೂಡ ಇದೆ. ಒಮ್ಮೊಮ್ಮೆ ಅತ್ಯಂತ ಕಡಿಮೆ ಬೆಲೆಯ ಪಾದರಕ್ಷೆಗಳ ಬಾಳಿಕೆ ಕಡಿಮೆಯಾದಾಗ “ಕೂಳು ಆಟೆಯಾ, ಬಾಳೂ ಆಟೆಯಾ” ಎಂಬ ಗ್ರಾಮೀಣ ಗಾದೆ ನಿಜವೆನಿಸುತ್ತದೆ. ಇನ್ನು ವಿದೇಶಗಳಲ್ಲಿ ದೊಡ್ಡ ದೊಡ್ಡ ಓಟಗಾರರ, ಆಟಗಾರರ ಶೂ ಗಳಿಗಂತೂ ಇನ್ನಿಲ್ಲದ ಕೋಟಿಗಟ್ಟಲೆ ಬೆಲೆ. ಇಂದು ವಿದೇಶಗಳಿಂದ ಹಲವು ಬ್ರ್ಯಾಂಡ್ ಶೂಗಳನ್ನು ತರಿಸಿಕೊಳ್ಳುವ ಹವ್ಯಾಸ ಕೂಡ ಹಲವರಿಗಿದೆ. ದೇಶದಲ್ಲೇ ನೂರಾರು ಅತ್ಯಂತ ಬ್ರ್ಯಾಂಡ್ ಪಾದರಕ್ಷೆಗಳು ದೊರೆಯುತ್ತವೆ. ಹಲವೊಮ್ಮೆ ಆ ವಸ್ತುಗಳ ಮೌಲ್ಯಕ್ಕಿಂತ ಅವುಗಳಿಗೆ ಜಾಹೀರಾತು ನೀಡುವ ಸೆಲೆಬ್ರಿಟಿಗಳಿಂದ ಕೂಡ ಆಕರ್ಶಣೆಗೊಳಗಾಗುತ್ತದೆ. ವಿಶ್ವದ ಅತ್ಯಂತ ದುಬಾರಿ ಬೆಲೆಯ ಅಂದರೆ ನೂರ ಅರವತ್ತ ಮೂರು ಕೋಟಿ ಬೆಲೆಯ ಮೂನ್ ಸ್ಟಾರ್ ಎಂಬ ಹೆಸರಿನ ಚಿನ್ನದ ಶೂ 2017 ರಲ್ಲಿ ತಯಾರಾಗಿದ್ದು, ಇದು ವಜ್ರಗಳಿಂದ ಅಲಂಕೃತಗೊಂಡಿದೆಯಂತೆ. ಅಬ್ಬಾ!
ನಮ್ಮ ರಾಜ್ಯದ ರಾಜಕಾರಿಣಿಯೋರ್ವರು ಚಿನ್ನದ ಶೂ ಧರಿಸಿದ್ದರಂತೆ ಎಂಬ ಸಂಗತಿಯ ವದಂತಿ ಕೂಡ ಇತ್ತು. ಇರಲಿ ಗಾದೆ ಸುಳ್ಳೇ? “ಮುತ್ತಿದ್ದರೆ ಎಲ್ಲಿಯಾದರೂ ಪೋಣಿದಿಕೊಳ್ಳಬಹುದೆಂದು.” ಅದೆಲ್ಲಾ ಸರಿ ನಾನು ನನ್ನ ಎಕ್ಕಡದ ಸಂಗತಿಯನ್ನು ಅರುಹಲು ಹೋಗಿ ಬೇರೇನೋ ಹೇಳಿದಂತಾಯ್ತಲ್ಲಾ. ಇರಲಿ ಬೇಸರಿಸಿಕೊಳ್ಳದಿರಿ. ಮನೆಯಲ್ಲಿ ಮಕ್ಕಳೆಲ್ಲರ ಒತ್ತಾಯಕ್ಕೆ ಬ್ರ್ಯಾಂಡೆಡ್ ಚಪ್ಪಲಿಕೊಂಡು ಅದರ ಗುಣಕ್ಕೆ ಒಂದಷ್ಟು ಮೆಚ್ಚಿದ್ದಾಗಿತ್ತು ಅಷ್ಟರಲ್ಲಿ ಬೆಳಗಾಗುವುದರಲ್ಲಿ ಒಂದು ಚಪ್ಪಲಿ ಮಾಯಾವಾದಾಗ ಬಲು ಬೇಸರವಾಯಿತು. ಅದು ಮಾಯವಾದುದರ ಕುರಿತು ಸಂಶೋಧನೆ ಮಾಡಿದಾಗ ತಿಳಿದದ್ದು. ಅಕ್ಕ ಪಕ್ಕದ ಮನೆಯವರ ಚಪ್ಪಲಿಗಳು ಕೂಡ ಕಾಣೆಯಾಗಿದ್ದು, ಅವುಗಳನ್ನೆಲ್ಲಾ ನಾಯಿಗಳು ಹೊತ್ತು ಹೊಯ್ದಿರುವುದೆಂದು. ಪಕ್ಕದ ಮನೆಯವರ ಕಳೆದು ಹೋದ ಒಂದು ಚಪ್ಪಲಿ ಎಲ್ಲೋ ಮುಂದಿನ ಬೀದಿಯಲ್ಲಿ ತನ್ನ ರೂಪವನ್ನು ಕಳೆದುಕೊಂಡು ವಿರೂಪವಾಗಿ ಬಿದ್ದಿತ್ತಂತೆ! ಹೌದು ನನ್ನ ಚಪ್ಪಲಿಯೂ ಹಾಗೇ ಆಗಿರಬಹುದೆಂದು ಅಲ್ಲೇ ಅಕ್ಕ ಪಕ್ಕದಲ್ಲೆಲ್ಲಾ ಹುಡುಕಾಡಿದೆವು ಅದರ ಸುಳಿವೇ ಸಿಗಲಿಲ್ಲ. ಚಪ್ಪಲಿ ಕಳೆದುಕೊಂಡವರೆಲ್ಲರ ಮಾತು ಕತೆಯಂತೆ ಇದು ನಾಯಿಗಳದೇ ಕೆಲಸ ನಾಯಿಗಳು ಚಪ್ಪಲಿಯನ್ನು ಹೊತ್ತುಕೊಂಡು ಹೋಗಿ ಬಾಯಲ್ಲಿ ಕಡಿದು ಹಾಕುವವೆಂದು ತಿಳಿಯಿತು ಹಾಗೇ ಸಾಕಿದ ನಾಯಿಗಳು ಕೂಡ ಸಣ್ಣ ಮರಿಗಳಿದ್ದಾಗ ಚಪ್ಪಲಿಯನ್ನು ಹಲ್ಲಿನ ನವೆಗೆ ಕಡಿಯುತ್ತವೆ ಎಂದು ಹಿರಿಯರು ಹೇಳಿದ್ದರು.
ನಾಯಿ ಕದ್ದುಕೊಂಡು ಹೋಗಿದ್ದು ಬಲಗಾಲ ಚಪ್ಪಲಿ ಉಳಿದ ಇನ್ನೊಂದು ಕಾಲಿನ ಚಪ್ಪಲಿಯನ್ನು ಬಹಳಷ್ಟು ದಿನ ಹೊರಗೇ ಬಿಟ್ಟರೂ ಅದು ಹಾಗೇ ಇತ್ತು. ಹಾಗಾದರೆ ನಾಯಿ ಮತ್ತೆ ಬರುವುದಿಲ್ಲವೆಂದು ತಿಳಿದೆ. ಸರಿ ಒಂದು ಚಪ್ಪಲಿ ಕಳೆದು ಹೋದ ಮೇಲೆ ಅದೇ ಬ್ರ್ಯಾಂಡಿನ ಎರಡು ಸಾವಿರ ಬೆಲೆಯ ಚಪ್ಪಲಿಯನ್ನುಕೊಂಡು ಅದನ್ನು ಹೊರಗೆ ಬಿಡದೆ ಜೋಪಾನವಾಗಿ ಮನೆಯ ಒಳಗೇ ಬಿಡುತ್ತಿದ್ದೆ. ಒಂದು ದಿನ ಮರೆತೆ ಮರು ದಿನ ಮತ್ತೆ ಒಂದು ಚಪ್ಪಲಿ ಮಾಯ! ಅದೂ ಕೂಡ ಬಲಗಾಲಿನದ್ದೇ! ಅಯ್ಯೋ ಮರೆವೆ? ಮತ್ತೆ ಚಪ್ಪಲಿ ಹೋಯ್ತಲ್ಲಾ ಎಂದು ಕೊರಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ನಾಯಿ ಬಲಗಾಲಿನ ಚಪ್ಪಲಿಯನ್ನೇ ಏಕೆ ಕೊಂಡೊಯ್ತು ಎಂಬುದೇ ಅಚ್ಚರಿಯ ಸಂಗತಿ! ನಾಯಿಗೆ ಎಡಗಾಲಿಲ್ಲವೇನೋ ಅದಕ್ಕೇ ಬರೀ ಬಲಗಾಲಿನದ್ದೇ ಹೊತ್ತಿರಬೇಕು ಎಂದರೆ ಅದಕ್ಕಿರೋದು ಮನುಜರಂತೆ ಬರೇ ಎರಡು ಕಾಲಲ್ಲ, ನಾಲ್ಕು! ಎರಡು ಎಡ, ಎರಡು ಬಲ, ಅಲ್ಲವೇ? ಹಾಗಾದರೆ ನನ್ನ ತರ್ಕ ಸರಿಯಲ್ಲ. ನನ್ನ ಚಪ್ಪಲಿಯದು ನಾಯಿಯ ಕಳ್ಳತನವೆಂದು ತಿಳಿದ ಕಾರಣ ಒಂದು ದಿನ ರಾತ್ರಿ ನಾಯಿ ಬಿಟ್ಟು ಹೋಗಿದ್ದ ಮತ್ತೊಂದು ಚಪ್ಪಲಿಯನ್ನು ಹೊರಗೆ ಬಿಟ್ಟು ಕಾಯ್ದು ಕುಳಿತೆವು. ಚಪ್ಪಲಿ ಕಳ್ಳ ನಾಯಿ ಬರಲಿ ಸರಿಯಾಗಿ ಬಿಟ್ಟರೆ ಮತ್ತೆಂದೂ ಇತ್ತ ಸುಳಿಯದಂತೆ ಮಾಡುವಾ ಎಂದು. ಕಳ್ಳ ನಾಯಿ ಅಲ್ಲಲ್ಲಾ ಚಪ್ಪಲಿಕಳ್ಳ ನಾಯಿ! ಬಂತು ನೋಡಿ ಒಂದು ಕೋಲಿನಿಂದ ಸರಿಯಾಗಿ ಬಿಟ್ಟೆವು. ಅದೋ ಕುಯ್ಯೋ ಮರ್ರೋ ಎನ್ನುತ್ತಾ ಓಡಿ ಹೋಯ್ತು. ಅದೆಲ್ಲಾ ಸರಿ ಆ ನಾಯಿ ಬರೇ ಬಲಗಾಲಿನ ಚಪ್ಪಲಿಯನ್ನೇ ಹೊತ್ತೊಯ್ದದ್ದು ಯಾಕೆಂದು ತಿಳಿಯಲಿಲ್ಲ! ಇದೀಗ ದುಬಾರಿ ಎಕ್ಕಡಗಳ ಸಹವಾಸಕ್ಕೆ ಹೋಗದೆ, “ಬಡವಾ ನೀನು ಮಡಗಿದಂಗಿರು.” ಎನ್ನುವಂತೆ ಸಾಮಾನ್ಯ ಬೆಲೆಯ ಪಾದರಕ್ಷೆಗಳನ್ನು ಕೊಂಡು ಧರಿಸಿ, ಚಪ್ಪಲಿಯ ಚಿಂತೆಯಿಂದ ಪಾರಾಗಿದ್ದೇನೆ. ಪಾದುಕೆಗಳನ್ನು ನನ್ನಂತೆ ನಾಯಿಪಾಲು ಮಾಡಿಬಿಟ್ಟೀರಾ ಜೋಕೆ! ಪಾದರಕ್ಷೆಗಳಿಗೆ ರಕ್ಷೆ ಕೊಡಿ.






0 Comments