ನಮ್ಮ ನಡುವಿನ ಹೆಮ್ಮೆಯ ಬರಹಗಾರ, ಅಂಕಣಕಾರ ನಾಗೇಶ್ ಹೆಗಡೆ ಅವರಿಗೆ ಪ್ರತಿಷ್ಠಿತ ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ ಸಂದಿದೆ.
‘ಅವಧಿ’ ಅಭಿನಂದನೆಗಳು

‘ಬಿಗ್ ಲಿಟ್ಲ್ ಬುಕ್’ ಪ್ರಶಸ್ತಿ’ ಸ್ವೀಕರಿಸಲು ಮುಂಬೈಗೆ ಬರಬೇಕೆಂದು ಟಾಟಾ-ಪರಾಗ್ ಸಂಸ್ಥೆಯವರು ಫೋನ್ ಮಾಡಿದಾಗ ನನಗೇ ಅಚ್ಚರಿಯಾಗಿತ್ತು.
ಮಕ್ಕಳ ಸಾಹಿತ್ಯದ ಗೌರವವನ್ನು ಎತ್ತರಿಸಬೇಕೆಂದು ಈ ಸಂಸ್ಥೆ ಪ್ರತಿ ವರ್ಷ ಒಂದೊಂದು ರಾಜ್ಯದ ಸಾಹಿತಿಗಳನ್ನು ಗುರುತಿಸುತ್ತದಂತೆ. ಹಿಂದಿನ ವರ್ಷ ಬೆಂಗಾಲಿ, ಅದಕ್ಕೂ ಹಿಂದೆ ಮರಾಠಿ, ಈಗ 3ನೇ ವರ್ಷ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದರು.
ಚಿಕ್ಕ ಮಕ್ಕಳಿಗಾಗಿ ನಾನೇನೂ ಸಾಹಿತ್ಯವನ್ನು ಸೃಷ್ಟಿಸಿದವನಲ್ಲ. 10-15 ವಯಸ್ಸಿನ ಹಿರಿಯ ಮಕ್ಕಳಿಗಾಗಿ ಕಥೆ, ನಾಟಕ, ಭಿತ್ತಿ ಪತ್ರಿಕೆ, ವಾರ್ತಾಪತ್ರ, ಸಿನೆಮಾ ಹಾಡು, ಚಿತ್ರಕಥೆಗಳನ್ನು ನನ್ನಿಂದ ಅನೇಕರು ಬರೆಸಿದ್ದಾರೆ. ‘ಅದೇ ಬೇಕಾಗಿತ್ತು, ಬನ್ನಿ’ ಎಂದಿದ್ದರಿಂದ ಹೋದೆ.
ಪ್ರಶಸ್ತಿಯ ಮೊತ್ತವೇನೊ ಸಾಕಷ್ಟು ದೊಡ್ಡದೇ (ರೂ. 5 ಲಕ್ಷ). ಚೆಕ್ ಜೊತೆ, ಕಿಸೆಯಲ್ಲಿ ಇಟ್ಟುಕೊಳ್ಳಬಹುದಾದಷ್ಟು ಚಿಕ್ಕ ಫಲಕವನ್ನು ಖ್ಯಾತ ಸಾಹಿತಿ ಅನಿಲ್ ಧಾರ್ಕರ್ ನನಗೆ ನೀಡಿದರು.
‘ನುಡಿಸಿರಿ’, ಹಂಪಿ ಕನ್ನಡ ವಿವಿ ಇತ್ಯಾದಿಗಳ ಅಷ್ಟೆತ್ತರ ಫಲಕವಾಗಿದ್ದರೆ ಹೊತ್ತು ತಂದು, ಜಾಗ ಹುಡುಕಿ, ದೂಳು ಕೂರದಂತೆ ನೋಡಿಕೊಳ್ಳುವುದೇ ದುಸ್ತರದ ಕೆಲಸ.
‘ಈ ವರ್ಷ ಕನ್ನಡವನ್ನೇ ಏಕೆ ಆಯ್ದುಕೊಂಡಿರಿ?’ ಎಂದು ಪ್ರಾಯೋಜಕರನ್ನು ಕೇಳಿದೆ. ‘ದಕ್ಷಿಣ ಭಾರತದಲ್ಲಿ ಕನ್ನಡದಲ್ಲೇ ಅತಿ ಹೆಚ್ಚು ಸಾಹಿತ್ಯ ಸೃಷ್ಟಿಯಾಗುತ್ತಿದೆ’ ಎಂದರು. ಅದು ಹೆಮ್ಮೆಯ ಸಂಗತಿ. ಆದರೆ ಓದುಗರನ್ನು ಸೃಷ್ಟಿ ಮಾಡುವುದು ಹೇಗೆ? ಗೊತ್ತಿಲ್ಲ.
ಪ್ರಶಸ್ತಿಯ ಪೂರ್ಣ ಮೊತ್ತವನ್ನು ಅದಕ್ಕೇ ಮೀಸಲಿಡಲು ತೀರ್ಮಾನಿಸಿದ್ದೇನೆ. ಹೊಸ ಉಪಾಯಗಳೇನಾದರೂ ಹೊಳೆದರೆ ನೀವು ತಿಳಿಸಬಹುದು.
-ನಾಗೇಶ್ ಹೆಗಡೆ







Wah entha olle suddi. Nagesh Hegdeyavarige Abhinandanegalu.
ಮಕ್ಕಳಿಗಾಗಿ ಪರಿಸರ ಕಾಳಜಿ ಕುರಿತ ಪುಟ್ಟ ಸಿನಿಮಾ ಗಳನ್ನು ಮಾಡಬಹುದು ನಾಗೇಶ್.
ಖುಷಿಯಾಯ್ತು
ಮತ್ತೆ ಮತ್ತೆ ಅಭಿನಂದನೆ ಸರ್
ಹಿರಿಯರಾದ ಸನ್ಮಾನ್ಯಶ್ರೀ ನಾಗೇಶ ಹೆಗಡೆ ಅವರಿಗೆ,
ಧನ್ಯಕುಮಾರ ಮಿಣಜಗಿ ಮಾಡುವ ಅನಂತ ವಂದನೆಗಳು.
ತಮಗೆ ಬಿಗ್ ಲಿಟ್ಲ ಬುಕ್ ಪ್ರಶಸ್ತಿ ಲಭಿಸಿದ್ದಕ್ಕೆ ನನ್ನ ಹಾರ್ದಿಕ ಅಭಿನಂದನೆಗಳನ್ನು ತಿಳಿಸಲು ಸಂತೋಷವಾಗುತ್ತಿದೆ.
ಮಕ್ಕಳ ಮನೋ ವಿಕಾಸಕ್ಕೆ ಪುಸ್ತಕಗಳು ಚಿಮ್ಮು ಹಲಗೆ ಇದ್ದಂತೆ.ತಾವು ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದೀರಿ. ತಮಗೆ ಪ್ರಶಸ್ತಿರೂಪದಲ್ಲಿ ಬಂದಿರುವ ಹಣದ ಉಪಯೋಗ ಹೇಗೆ ಮಾಡಿದರೆ ಚೆಂದ ಎಂದು ಕೇಳಿದ್ದೀರಿ. ಯಾವುದಾದರೂ ಒಂದು ಗ್ರಾಮೀಣ ಗ್ರಂಥಾಲಯವನ್ನು ದತ್ತುಪಡೆದು ಆ ಗ್ರಂಥಾಲಯದಲ್ಲಿ ಮಕ್ಕಳ ವಿಭಾಗವನ್ನು ಬಲಪಡಿಸಹುದಲ್ಲವೆ? ಈ ನಿಟ್ಟಿನಲ್ಲಿ ಯೋಚಿಸಿ.
ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಇಂತಿ ವಂದನೆಗಳೊಂದಿಗೆ,
ತಮ್ಮ ,
ಧನ್ಯಕುಮಾರ ಮಿಣಜಗಿ.
.