ದೊಡ್ಡ ಪರದೆಯೆಂಬ ದುರ್ಬೀನು

 

ಶ್ರೀಕಲಾ ಕಂಬ್ಳಿಸರ

ದೊಡ್ಡ ಪರದೆಯ ಮೇಲೆ ನೋಡಬೇಕಾದ ಸಿನಿಮಾ ಮತ್ತು ಸಣ್ಣ ಪರದೆಯ ಮೇಲೆ ನೋಡಬಹುದಾದ ಸಿನಿಮಾಗಳ ನಡುವಿನ ಗೆರೆ ಯಾವತ್ತೂ ಅಳಿಸಲಾಗದ್ದು. ಅದೆಷ್ಟೇ ಗಟ್ಟಿ ಕತೆಯಿರಲಿ, ವಿನೂತನ ನಿರ್ದೇಶನವಿರಲಿ, ಭಾವುಕ ನಟನೆಯಿರಲಿ, ಟಾಕೀಜ಼ಿಗೆ ದುಡ್ಡು ಕೊಟ್ಟು ಸಿನಿಮಾ ನೋಡುವ ಮುನ್ನ ಅದರಿಂದ ಸಿಗಬಹುದಾದ ತೃಪ್ತಿಯ ಯೋಚನೆ ಬರುತ್ತದೆ(ಸಿನಿಮಾ ಪ್ರಿಯರನ್ನು ಹೊರತುಪಡಿಸಿ). ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಪೈರೇಟೆಡ್ ಪ್ರತಿಗಳು ಸಿಗುತ್ತಿರುವುದು, ಒಂದೆರಡು ವಾರಗಳಲ್ಲಿಯೇ ಸಿನಿಮಾಗಳು ಸಣ್ಣ ಪರದೆಗಳಲ್ಲಿ ನೋಡಲಿಕ್ಕೆ ಲಭ್ಯವಾಗುವುದು, ಕೆಲವು ಸಿನಿಮಾಗಳಲ್ಲಿ ದೊಡ್ಡ ಪರದೆಯ ಮೇಲೆ ನೋಡುವಂತಹ ವಿಶೇಷಗಳು ಇಲ್ಲದೇ ಇರುವುದು, ಚಿಕ್ಕ ಪರದೆಗೆಂದೇ ತಯಾರಗುವ ಸಿನಿಮಾಗಳು – ಮತ್ತಿತರ ಕಾರಣಗಳು ದೊಡ್ಡ ಪರದೆ ಮತ್ತು ಸಣ್ಣ ಪರದೆಗಳ ನಡುವುಣ ಕಂದಕವನ್ನು ಇನ್ನೂ ಆಳಗೊಳಿಸುತ್ತವೆ.

ನೆಚ್ಚಿನ ನಾಯಕನ ಸಿನಿಮಾ ಎಂದೋ, ಅದ್ಧೂರಿ ಸೆಟ್ಟಿಂಗ್ ಎಂದೋ, 3ಡಿ ಸಿನಿಮಾ ಎಂದೋ ಟಾಕೀಜ಼ಿಗೊಂದಿಷ್ಟು ಜನ ಹೋದರೂ, ಅದೇ ಸಿನಿಮಾವನ್ನು ಗೆಲ್ಲಿಸುವ ಮಾಯೆಯಾಗಿರುವುದಿಲ್ಲ. ಅದೊಂದು ಸಂಗೀತ ಕಛೇರಿಯಿದ್ದಂತೆ. ಹಾಡುಗಾರ ಯಾರು, ಪಕ್ಕವಾದ್ಯಗಳ ಹೊಂದಾಣಿಕೆ, ಮೈಕಿನ ಗುಣಮಟ್ಟ , ಹಾಡುವ ರಾಗ ಅಥವಾ ಹಾಡುಗಳೇ ಸಂಗೀತ ಕಛೇರಿಯ ಯಶಸ್ಸನ್ನು ನಿರ್ಧರಿಸುವುದಿಲ್ಲ. ಬದಲಿಗೆ, ಮೇಲೆ ಹೇಳಿದ ವಿಷಯಗಳು ಕೇಳುಗನ ಆಸಕ್ತಿಗನುಸಾರವಾಗಿ ಹೊಂದಿಸಲ್ಪಟ್ಟಿವೆಯೇ ಎನ್ನುವುದು ಪರಿಗಣಿಸಬೇಕಾದ ವಿಚಾರವಾಗಿದೆ.

ಎನಿಮೇಟೆಡ್ ಸಿನಿಮಾಗಳು ವಿದೇಶದಲ್ಲಿ ದುಡಿಯುವಷ್ಟು ಭಾರತದ ನಗರಗಳಲ್ಲಿ ದುಡಿಯುವುದಿಲ್ಲ. ಇನ್ನು ಪಟ್ಟಣಗಳಲ್ಲಂತೂ ಅಂತಹ ಸಿನಿಮಾಗಳಿಗೆ ಹೊತ್ತು ಕಳೆಯಲು ಹೋದವರು ಅರ್ಧಕ್ಕೇ ಆಕಳಿಸಿಕೊಂಡು ಹೊರಬರುವುದೇ ಜಾಸ್ತಿ. ಆದರೆ ಅಂತಹ ಸಿನಿಮಾಗಳನ್ನು ಟಿವಿಯಲ್ಲೋ, ಮೊಬೈಲಿನಲ್ಲೋ ನೋಡಿ ಅರೆ! ಈ ಸಿನಿಮಾ ಚಂದವಿದೆಯಲ್ಲ ಎಂಬ ಉದ್ಘಾರ ತೆಗೆಯುವ ಪಟ್ಟಣದ ಕೆಲವರಿಗೆ ಮತ್ತೆ ಅಂತಹ ಸಿನಿಮಾ ನೋಡಸಿಗುವುದು ಅಪರೂಪವೇ. ಪಟ್ಟಣದ ಸಿನಿಮಾಮಂದಿರಗಳು ಬಹುತೇಕ ಪ್ರಾದೇಶಿಕ ಸಿನಿಮಾಗಳನ್ನೇ ನೆಚ್ಚಿಕೊಂಡಿರುತ್ತವೆ. ಈಗಿನ ಮೊಬೈಲ್ ತಂತ್ರಜ್ಞಾನದಿಂದಾಗಿ ಇಂಗ್ಲೀಷ್ ಸಿನಿಮಾದ ಪ್ರಚಾರ ಹಳ್ಳಿಯ ಮೂಲೆಮೂಲೆಯವರೆಗೂ ಆದರೂ ಕೂಡ, ಆ ಸಿನಿಮಾವನ್ನು ತೋರಿಸುವ ಪಟ್ಟಣದ ಟಾಕೀಜ಼ು ಸಂಪಾದನೆ ಮಾಡುವಲ್ಲಿ ಸೋಲುತ್ತದೆ.

ಹಿಂದಿ ಡಬ್ಬಿಂಗ್, ಕನ್ನಡ ಡಬ್ಬಿಂಗ್ ಇದ್ದರೂ ಸಹ ಸಿನಿಮಾದ ದೃಶ್ಯಗಳು, ಕತೆ, ಮತ್ತಿತರೆ ವಿವರಣೆಗಳ ಪರಿವೇಶ ಜನರನ್ನು ಸೆಳೆಯಲಾರದು. ಇನ್ನು ಪಟ್ಟಣಗಳ ಟಾಕೀಜ಼ುಗಳು ಇರುವ ಸ್ಥಿತಿಯಲ್ಲಿ(ಪರಿಸ್ಥಿತಿಯಲ್ಲಿ) ಚಿತ್ರ ಪರದೆಯಮೇಲೆ ದೊಡ್ಡದಾಗಿ ಕಾಣಿಸುವುದೇ ಪ್ರಮುಖ ವಿಷಯವಾಗಿರುತ್ತದೆ. ಧೂಳುಹಿಡಿದ ಪರದೆ, ಗಂಟಲು ಕಟ್ಟಿಕೊಂಡ ಧ್ವನಿಪೆಟ್ಟಿಗೆಗಳು ಸಿನಿಮಾದ ನಿಜವಾದ ಮಜವನ್ನು ಅಡಗಿಸುತ್ತವೆ. ಹಿಟ್ ಸಿನಿಮಾ ಎಂದೋ, ಟಿವಿಯಲ್ಲಿ ಪ್ರಸಾರವಾಗುವುದಕ್ಕೂ ಮೊದಲೇ ನೋಡಿದೆ ಎನ್ನುವ ಹೆಮ್ಮೆಗೋ ಅಥವಾ ಸುಮ್ಮನೆ ಸಮಯ ಕಳೆಯಲೆಂದು ಟಾಕೀಜ಼ಿಗೆ ಹೋಗಬೇಕೇ ಹೊರತು, ಅದಕ್ಕೂ ಹೆಚ್ಚಿನ ಕಾರಣಗಳು ಅಲ್ಲಿ ಕಾಣಿಸುವುದಿಲ್ಲ. ಹೀಗಾಗಿಯೇ ಪಟ್ಟಣ ಮತ್ತು ಆಸುಪಾಸಿನ ಹಳ್ಳಿಗಳ ಜನರು  ತಮ್ಮ ಊರಿನಲ್ಲಿ ಸಿನಿಮಾಮಂದಿರವಿರುವುದನ್ನೇ ಮರೆತು ಬಿಟ್ಟಿದ್ದಾರೆ. ಟಿವಿ ಬಂದಮೇಲಂತೂ ಟಾಕೀಜುಗಳು ಹೊಸ ತರುವಾಯದ ಹುಡುಗರು ಹೋಗುವ ಸ್ಥಳವೆನ್ನುವಂತಾಗಿಬಿಟ್ಟಿದೆ. ಆದರೂ ಒಟ್ಟಾರೆಯಾಗಿ ನೋಡಿದರೆ ದುರವಸ್ಥೆಯಲ್ಲಿರುವ ಪಟ್ಟಣದ ಟಾಕೀಜುಗಳು ಪ್ರೇಕ್ಷಕರನ್ನು ದೂರಮಾಡಿದವೋ ಅಥವಾ ಪ್ರೇಕ್ಷಕರ ಬದಲಾದ ಆಸಕ್ತಿಗಳು ಟಾಕೀಜ಼ನ್ನು ದುರವಸ್ಥೆಗೆ ತಳ್ಳಿದವೋ ಎನ್ನುವುದನ್ನು ವಿಶ್ಲೇಷಿಸುವುದು ಕಷ್ಟ.

ಆದರೆ ನಗರಗಳಲ್ಲಿ ಟಾಕೀಜ಼ಿಗೆ ಹೋಗುವವರ ಸಂಖ್ಯೆ ದೊಡ್ಡದಿದೆ. ಹಾಗೆ ಹೋದವರೆಲ್ಲ ಸಿನಿಮಾದ ಪ್ರತೀ ಅಂಶವನ್ನೂ ಹೇಗೆ ಸವಿಯುತ್ತಾರೆ ಎಂಬುದು ಅವರವರಿಗೇ ಬಿಟ್ಟ ವಿಚಾರ. ಆದರೆ ಒಂದು ಸಾಧಾರಣವಾದ ದೃಶ್ಯ ಸಹ ತನ್ನೆಲ್ಲ ಸೂಕ್ಷ್ಮಗಳನ್ನು  ಪರದೆಯ  ಮೇಲೆ ಹರಡಿಕೊಳ್ಳುವುದನ್ನು ನೋಡಲು ಕಣ್ಣಿಗೆ ಹಬ್ಬ. ತೆರೆಯ ಮೇಲಿರುವ ಎಲ್ಲ ವಸ್ತುಗಳನ್ನು ದುರ್ಬೀನಿನಲ್ಲಿ ನೋಡಿದಂತೆ ವಿವರವಾಗಿ ನೋಡಬಹುದು. ನೆಲದಲ್ಲರಳಿದ ಪುಟ್ಟ ಹೂವಿರಬಹುದು, ಮರದ ಮೇಜಿನ ವಿವರಗಳಿರಬಹುದು, ಯಂತ್ರವೊಂದರ ಮೇಲ್ಮೈ ವಿನ್ಯಾಸವಿರಬಹುದು  ಹೂದಾನಿಯ ನವಿರುಗಳಿರಬಹುದು, ಕಲಾವಿದರು ವ್ಯಕ್ತಪಡಿಸುವ ಸೂಕ್ಷ್ಮವಾದ ಭಾವನೆಗಳಿರಬಹುದು – ಹೀಗೆ ತೆರೆಯ ಮೇಲೆ ಬರುವ ಪುಟ್ಟಪುಟ್ಟ ವಿಷಯಗಳ ವಿವರಣೆಗಳು ಅಲ್ಲಿರುತ್ತವೆ.

ಸಿನಿಮಾದ ಒಂದು ದೃಶ್ಯವೆಂದರೆ ಅದು ಬರೇ ಪಾತ್ರಧಾರಿಗಳ ಮುಖ ತೋರಿಸುವುದಲ್ಲವಷ್ಟೇ; ಬದಲಿಗೆ ನೋಡುಗರನ್ನೆಲ್ಲ ಆ ದೃಶ್ಯದ ಸೊಬಗಿನಲ್ಲಿ ಕಳೆದುಹೋಗುವಂತೆ ಮಾಡುವುದು. ಜೊತೆಗೆ ಆ ದೃಶ್ಯ ಹೊಸತೂ ಆಗಿರಬೇಕು. ಹಾಗೆ ನೋಡಿದರೆ ಸಿನಿಮಾದ ಪ್ರತೀ ದೃಶ್ಯವನ್ನು ಕಟ್ಟುವುದು ಕಷ್ಟವೇ. ಸೈನಿಕರಿಲ್ಲದ ಯುದ್ಧಗಳನ್ನು ತೋರಿಸಲಿಕ್ಕಾಗುವುದಿಲ್ಲ, ವೈಭವವಿಲ್ಲದ ಮದುವೆಯನ್ನು ತೋರಿಸಲಿಕ್ಕಾಗುವುದಿಲ್ಲ, ಯಂತ್ರಗಳಿಲ್ಲದ ಕಾರ್ಖಾನೆಗಳು, ಅನ್ನವಿಲ್ಲದ ತಟ್ಟೆಗಳು, ನುಜ್ಜುಗುಜ್ಜಾಗದ ಅಪಘಾತಗಳು, ಪ್ರಾಣಿಗಳಿಲ್ಲದ ಕಾಡುಗಳು- ಹೀಗೆ ಒಂದು ದೃಶ್ಯದ ಚೌಕಟ್ಟಿನ ಮೂಲೆಮೂಲೆಗಳನ್ನು ಸಹ ಶಿಸ್ತಾಗಿ ಸಜ್ಜುಗೊಳಿಸಿ, ಒಂದಿನಿತೂ ವ್ಯತ್ಯಾಸ ಕಾಣದಂತೆ ಹೊಂದಿಸುವುದೆಂದರೆ ಅದು ಬೃಹ್ಮಸೃಷ್ಟಿಯೇ ಸರಿ. ಅದೆಷ್ಟೋ ಪುಟ್ಟಪುಟ್ಟ ವಿವರಗಳು ಒಂದು ದೃಶ್ಯದಲ್ಲಿ ಚಿತ್ರಿಸಲ್ಪಟ್ಟಿರುತ್ತವೆ. ಅಂತಹ ಪುಟ್ಟ ವಿವರಣೆಗಳನ್ನು ದೊಡ್ಡ ಪರದೆಯಲ್ಲಿ ನೋಡಿದಾಗ ಮಾತ್ರ ಹೆಕ್ಕಿಕೊಳ್ಳಲು ಸಾಧ್ಯ. ಟೀವಿಗಳಲ್ಲಿ ಮತ್ತು ಮೊಬೈಲುಗಳಲ್ಲಿ ಒಂದು ದೃಶ್ಯದ ಎಲ್ಲಾ ವಿವರಗಳನ್ನು ಹುಡುಕಿ ತೆಗೆಯುವುದು ಕಷ್ಟ. ಅಲ್ಲಿ ನಟರ ಚಾತುರ್ಯವಷ್ಟೇ ಲಭ್ಯ. ಇನ್ನು 3ಡಿ ಸಿನಿಮಾಗಳಂತೂ ವೀಕ್ಷಕನೂ ದೃಶ್ಯದ ಅಂಶವೇ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತವೆ. ಯಾರೋ ನಮ್ಮನ್ನು ಎತ್ತಿಕೊಂಡು ಕಲ್ಪನಾಲೋಕದಲ್ಲಿ ವಿಹರಿಸುತ್ತಿರುವಂತಹ ಅನುಭವವನ್ನು ಅನುಭವಿಸಿಯೇ ನೋಡಬೇಕು.

ಬಹಳಷ್ಟು ಮಂದಿ ಈ ಟಾಕೀಜ಼ುಗಳು ಯುವಕರು ಭೇಟಿನೀಡುವ ಜಾಗ ಎಂದು ಭ್ರಮಿಸುವುದನ್ನು ಕಂಡಿದ್ದೇನೆ. ಆದರೆ ಅದು ಪ್ರತಿಯೊಬ್ಬ ಕಲ್ಪನಾಜೀವಿಯೂ ಪದೇ ಪದೇ ಭೇಟಿಕೊಡುತ್ತಲೇ ಇರಬೇಕಾದ ತಾಣ. ಬಾಲಿವುಡ್ಡಿನ ಹಿಟ್ ಸಿನಿಮಾ ಇರಬಹುದು, ಹಾಲಿವುಡ್ಡಿನ ಸಾಧಾರಣ ಸಿನಿಮಾ ಇರಬಹುದು ಅಥವಾ ನಮ್ಮ ಕನ್ನಡದ ಕನ್ನಡಿಗರಷ್ಟೇ ನೋಡುವ ಸಿನಿಮಾ ಇರಬಹುದು; ನನ್ನ ಮಟ್ಟಿಗಂತೂ ಟಾಕೀಜ಼ಿನಲ್ಲಿ ಸಿನಿಮಾ ನೋಡುವುದೆಂದರೆ ಕನಸಿನ ಲೋಕದಲ್ಲಿ ವಿಹರಿಸಿದಂತೆ.

‍ಲೇಖಕರು avadhi

November 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: