ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ದೊಡ್ಡವಳಾಗಿಬಿಟ್ಟಿದ್ದೆ’

ಬಿ ವಿ ಭಾರತಿ 

ಎತ್ತರ-ಗಾತ್ರಕ್ಕಿದ್ದ ನಾನು ಹನ್ನೊಂದು ವರ್ಷದವಳಿರುವಾಗಲೇ ‘ದೊಡ್ಡವಳಾಗಿಬಿಟ್ಟಿದ್ದೆ’.

ನನ್ನ ಇಬ್ಬರು ಗೆಳತಿಯರು ಅದಾಗಲೇ ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದರಾದರೂ, “ದೊಡ್ಡವಳಾಗುವುದು” ಅಂದರೆ ಏನು ಅಂತ ಗೊತ್ತಿಲ್ಲದ ಪಾಪದ ನಾನು, ಮೊದಲ ಬಾರಿ ಆದಾಗ ಅಮ್ಮನಿಗೂ ಹೇಳದೇ ಎರಡು ದಿನ, ದೇಹಕ್ಕೆ ಆದ ಅಲರ್ಜಿಯ ಸೈಡ್ ಎಫೆಕ್ಟ್ ಇರಬೇಕು ಅಂದುಕೊಂಡು ಹಾಗೆಯೇ ಓಡಾಡಿದ್ದೆ! ಮೂರನೆಯ ದಿನಕ್ಕೂ ಸ್ರಾವ ನಿಲ್ಲದಾದಾಗ ಗಾಭರಿಯಿಂದ ಅಮ್ಮನಿಗೆ ಹೇಳಿದ್ದೆ ಮತ್ತು ಅಮ್ಮ ಊರಿಗಿಂತ ಮುಂಚೆ ದೊಡ್ಡವಳಾದ ನನಗೆ ಹೀಗೀಗೆ ಎಂದು ವಿವರಿಸಿದ್ದಳು.

ಯಾಕೋ ಆ ಕ್ಷಣದಲ್ಲಿ ಅದೆಲ್ಲದರ ಬಗ್ಗೆ ಅಸಹ್ಯ ಬಂದು ಹೋಗಿತ್ತು. ದೊಡ್ಡಮ್ಮನ ಮನೆಗೆ ರಜೆಗೆ ಹೋಗಿದ್ದ ನನಗೆ ಇವೆಲ್ಲ ಕಿರಿಕಿರಿಯೆನಿಸಿತ್ತು. ದೊಡ್ಡಮ್ಮನೇ ಮೆತ್ತಗಿನ ಸೀರೆ ಹರಿದು ಕೊಟ್ಟಿದ್ದರು. ಅಮ್ಮ ಅದನ್ನು ಕಟ್ಟಿಕೊಳ್ಳುವುದನ್ನು ಹೇಳಿಕೊಟ್ಟಿದ್ದಳು. ಹಾಗೆ ಹಾಕಿಕೊಂಡ ನಂತರ ಕಾಲಿನ ನಡುವೆ ಅಸಹ್ಯವಾಗಿ ಒತ್ತುವ ಬಟ್ಟೆಯನ್ನು ನಾನು ಶಪಿಸಿದ್ದೆ.

ಓಡುವಾಗ, ಕುಣಿದಾಡುವಾಗ ಜರುಗಿ ಹೋಗಿ ಬಟ್ಟೆಗೆ ಕಲೆಯಾಗುವ ಭಯದಲ್ಲಿ ಅಲ್ಲಾಡದೇ ಮೂಲೆ ಸೇರಿದ್ದೆ. ಪ್ರತಿ ತಿಂಗಳೂ ಹೀಗೆ ಹಾಕಿಕೊಳ್ಳಬೇಕೆನ್ನುವ ಸತ್ಯವನ್ನು ಒಪ್ಪಿಕೊಳ್ಳಬೇಕಿತ್ತು, ತುಂಬ ಅಸಹ್ಯದಿಂದ ಮನಸ್ಸನ್ನು ಸಜ್ಜುಗೊಳಿಸಿದ್ದೆ.‌ ಮೊದಲ ಕೆಲವು ತಿಂಗಳು ನನ್ನ ಬಟ್ಟೆಯನ್ನೂ ಅಮ್ಮನೇ ಒಗೆದು, ಒಣಹಾಕಿ training ಕೊಟ್ಟ ನಂತರ ಅದನ್ನು ನನಗೆ ವಹಿಸಿಕೊಟ್ಟಳು. ಪಾಪ ಅಮ್ಮ ಹೇಗೆ ಅದನ್ನೆಲ್ಲ ಒಗೆಯುತ್ತಿದ್ದಳೋ ದೇವರಿಗೆ ಗೊತ್ತು. ನನ್ನ ಸ್ರಾವದ ಬಟ್ಟೆ ನಾನು ಮುಟ್ಟಿದರೇ ವಾಂತಿ ಬರುವಂತಾಗುತ್ತಿತ್ತು. ಅಸಹ್ಯದಲ್ಲಿ ಮುಖ ಕಿವುಚಿ ಒಗೆದು, ಒಣಹಾಕುತ್ತಿದ್ದೆ.

ಅದಾದ ನಂತರ ಮೈಸೂರಿನಲ್ಲಿ ದೊಡ್ಡಮ್ಮನ ಮಗಳ ಮದುವೆಯಿತ್ತು. ಸಂಭ್ರಮದಿಂದ ರೇಷ್ಮೆ ಲಂಗ ಹಾಕಿ ಓಡಾಡುತ್ತಿರುವಾಗಲೇ ತೊಡೆಯ ನಡುವೆ ಹಸಿಹಸಿಯಾದ ಅನುಭವ. ಹೌಹಾರಿದವಳು ಬಚ್ಚಲಿಗೆ ಓಡಿದರೆ, ಹತ್ತು ದಿನ ಮೊದಲೇ ಸ್ರಾವ ಶುರುವಾಗಿ ಒಳಲಂಗವೆಲ್ಲ ಒದ್ದೆ ಒದ್ದೆ ಮತ್ತು ಹೊರಗಿನ ಲಂಗಕ್ಕೂ ಅಲ್ಲಲ್ಲಿ ಸಣ್ಣ ಕಲೆ! ಅವಮಾನದಿಂದ ಬಚ್ಚಲಿನಲ್ಲೇ ಕುಳಿತು ಯಾರಾದರೂ ಆ ಕಡೆ ಬರುತ್ತಾರಾ, ಬಂದರೆ ಅಮ್ಮನನ್ನು ಕರೆಯೆಂದು ಹೇಳಬೇಕು ಅಂತ ನಿರೀಕ್ಷೆ ಮಾಡುತ್ತಾ ಉಳಿದುಬಿಟ್ಟೆ.

ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ.

ನನ್ನ ಕಸಿನ್ ಒಬ್ಬಳು ಅಲ್ಲಿಗೆ ಬಂದಳು. ಅವಳ ಮೂಲಕ ಸಂದೇಶ ರವಾನೆಯಾಯಿತು. ಅಮ್ಮ ಓಡುತ್ತ ಬಂದವಳು ನನ್ನ ಸ್ಥಿತಿ ನೋಡಿ ಗಾಭರಿಯಿಂದ ನಿಂತುಬಿಟ್ಟಳು. ಡೇಟ್ ಇನ್ನೂ ದೂರದಲ್ಲಿದ್ದುದರಿಂದ ಅಮ್ಮ ಆ ಬಟ್ಟೆ ತಂದಿರಲಿಲ್ಲ! ಈಗೆಲ್ಲಿ ಈ ಮದುವೆ ಮನೆಯಲ್ಲಿ ಮುಟ್ಟಿಗೆ ಕಟ್ಟಿಕೊಳ್ಳಲು ಸೀರೆ ಹರಿದುಕೊಡಿ ಅಂತ ಯಾರ್ಯಾರನ್ನೋ ಕೇಳುವುದು ಅಂತ ಅವಮಾನ. ಕಾಟನ್ ಸೀರೆ ಉಡದ ಅವಳ ಬಳಿ ಒಂದೂ ಸೀರೆಯಿಲ್ಲ! ಕೊನೆಗೆ ಏನು ಮಾಡಲೂ ತೋಚದೆ ಇನ್ನೊಬ್ಬ ದೊಡ್ಡಮ್ಮನ ಮಗಳ ಹತ್ತಿರ ಓಡಿಹೋಗಿ ‘ಮನೆಯಿಂದ ಸೀರೆ ತಂದುಕೊಡುತ್ತೀಯಾ’ ಅಂತ ಕೇಳಿ ಪರಿಸ್ಥಿತಿ ವಿವರಿಸಿದ್ದಾಳೆ ಅಮ್ಮ.

ನನ್ನ ದೊಡ್ಡಮ್ಮನ ಮಗಳು ಮೈಸೂರು ನಗರದವಳು, ನಮ್ಮಂತೆ ಹಳ್ಳಿಮುಕ್ಕಳಲ್ಲ. ಅವಳು ಕೂಡಲೇ ತನ್ನಲ್ಲಿದ್ದ ಕೇರ್ ಫ್ರೀ ಪ್ಯಾಡ್ ಒಂದನ್ನು ತೆಗೆದುಕೊಟ್ಟು, ಹೇಗೆ ಧರಿಸಬೇಕೆಂದು ಅಮ್ಮನಿಗೆ ತೋರಿಸಿಕೊಟ್ಟಳಂತೆ. ಅಮ್ಮ ಸಂಭ್ರಮದಿಂದ ಓಡಿ ಬಂದು ‘ಪಾಪು ಕೊಟ್ಟಳು ಕಣೇ, ಹೀಗೆ ಹಾಕಿಕೊಳ್ಳಬೇಕಂತೆ’ ಅಂತ ತೋರಿಸಿಕೊಟ್ಟಳು. ನಾನು ಸೊಂಟಕ್ಕೆ ಎಲಾಸ್ಟಿಕ್ ಬೆಲ್ಟ್‌ನ ಉಡಿದಾರ ಹಾಕಿ, ಪ್ಯಾಡ್ ಜಾಗಕ್ಕೆ ಸೇರಿಸಿದೆ. ಆಮೇಲೆ ಆ ಲಂಗ, ಪೆಟ್ಟಿಕೋಟ್ ಎಲ್ಲ ಒಗೆದ ಅಮ್ಮ ನಿಟ್ಟುಸಿರು ಬಿಟ್ಟು ಮತ್ತೆ ಮದುವೆಯಲ್ಲಿ ಭಾಗಿಯಾದಳು. ನಾನು ಕೂಡಾ ಬಟ್ಟೆಯಂತೆ ಗಂಟಾಗಿಲ್ಲದ ತೆಳು ಹತ್ತಿಯ ಪ್ಯಾಡ್ ನನ್ನನ್ನು ಹೇಗೆ ಕಾಪಾಡುತ್ತದೋ ಅನ್ನುವ ತುಸು ಅಪನಂಬಿಕೆ, ತುಸು ನೆಮ್ಮದಿ, ತುಸು ಸ್ವಾತಂತ್ರ್ಯದಲ್ಲಿಯೇ ಆಟದಲ್ಲಿ ಮುಳುಗಿದೆ.

ಮತ್ತೆ ಸ್ವಲ್ಪ ಹೊತ್ತು ಕಳೆದ ಮೇಲೆ ಅಮ್ಮ ಬಂದವಳೇ ನನ್ನ ತೋಳು ಹಿಡಿದು ದರದರ ಬಚ್ಚಲಿಗೆ ಎಳೆದೊಯ್ದಳು. ಅಯ್ಯೋ ಮತ್ತೇನಾಯಿತು ಅಂತ ಗಾಭರಿಗೊಳ್ಳುವುದರಲ್ಲಿ ಗೊತ್ತಾಯಿತು ಮತ್ತೆ ಸ್ರಾವ ನನ್ನ ಬಟ್ಟೆಗಳನ್ನು ಕಲೆ ಮಾಡಿದೆ ಎಂದು. ಆಗ ಮಾತ್ರ ಯಾಕೋ ತುಂಬ ಅಳು ಬಂದಂತಾಯಿತು. ಅಮ್ಮ ನನ್ನನ್ನು ಅಲ್ಲೇ ಕೂರಿಸಿ ಮತ್ತೆ ದೊಡ್ಡಮ್ಮನ ಮಗಳ ಹತ್ತಿರಕ್ಕೆ ಓಡಿ ವಿಷಯ ಹೇಳಿದಳು.

ಅವಳು ‘ಹಾಗಾಗಕ್ಕೆ ಸಾಧ್ಯ ಇಲ್ಲವಲ್ಲಾ’ ಅಂತ ಅಂದುಕೊಳ್ಳುತ್ತಾ ಓಡಿ ಬಂದಳು. ಅಳುತ್ತಾ ನಿಂತಿದ್ದ ನನ್ನನ್ನು ಸಮಾಧಾನ ಮಾಡುತ್ತಾ ಮತ್ತೊಂದು ಪ್ಯಾಡ್ ಕೈಗಿತ್ತು, ಹಾಕಿಕೊಳ್ಳಲು ಹೇಳುವಾಗ ಇದ್ದಕ್ಕಿದ್ದಂತೆ ಏನೋ ಹೊಳೆದವಳಂತೆ ‘ನೀಲಿಯ ಶೀಲ್ಡ್ ಕೆಳಗೆ ಮಾಡಿ ಹಾಕಿದ್ದೆ ತಾನೇ?’ ಅಂದಳು. ನಾನು ಕಕ್ಕಾಬಿಕ್ಕಿಯಾಗಿ ‘ಯಾವ ನೀಲಿಯ ಶೀಲ್ಡೇ’ ಅಂದಿದ್ದೆ. ಅವಳು ಅದನ್ನು ತೋರಿಸಿ ಮತ್ತೆ ವಿವರಿಸಿದ್ದಳು. ಮೊದಲು ಅದನ್ನು ಹಾಕಿದಾಗ ಮೇಲಿತ್ತೋ, ಕೆಳಗಿತ್ತೋ ಯಾರಿಗೆ ಗೊತ್ತು! ಹೇಗೆ ಧರಿಸಿದ್ದೆ ಅನ್ನುವುದೇ ನೆನಪಿಲ್ಲದ ನಾನು, ಈ ಬಾರಿ ತುಂಬ ಜಾಗರೂಕತೆಯಿಂದ ನೀಲಿ ಶೀಲ್ಡ್ ಕೆಳಕ್ಕೆ ಮಾಡಿ ಹಾಕಿದ್ದೆ. ಹೊರಬಂದ ಮೇಲೆ ಮೊದಲ ಬಾರಿ ಧರಿಸಿದಾಗಿನ ನಿರಾಳತೆ ಉಳಿಯದೇ, ಆಟವಾಡುವ ಧೈರ್ಯವಿಲ್ಲದೇ ಮಂಕಾಗಿ ಮೂಲೆ ಸೇರಿದ್ದೆ.

ಆ ನಂತರವಂತೂ ಐದೈದು ನಿಮಿಷಕ್ಕೆ ಬಾತ್‌ರೂಮಿಗೆ ಹೋಗುವುದು, ಒಳ ಉಡುಪಿಗೆ ಕಲೆ ಹತ್ತಿದೆಯೇ ಎಂದು ಪರೀಕ್ಷಿಸುವುದು ಇದೇ ಗೀಳಾಗಿ ಹೋಯಿತು. ಘಂಟೆಗಳು ಕಳೆದ ನಂತರವೂ, ಎಲ್ಲ ಸುಸ್ಥಿತಿಯಲ್ಲೇ ಇದ್ದುದರಿಂದ ನೆಮ್ಮದಿಗೊಂಡೆ. ಮತ್ತು ಮಾರನೆಯ ದಿನದ ಧಾರೆ, ರಿಸೆಪ್ಷನ್ ಎಲ್ಲದರಲ್ಲೂ ಭಾಗಿಯಾಗಿ ಕುಣಿದು ಕುಪ್ಪಳಿಸಿದೆ. ಆ ಬಾರಿ ಬಟ್ಟೆ ಒಗೆದು, ಒಣ ಹಾಕುವ ಕರ್ಮಕಾಂಡ ತಪ್ಪಿದ್ದು ಸ್ವಾತಂತ್ರ್ಯ ಮರಳಿ ಪಡೆದಂತಾಗಿತ್ತು ನನಗೆ. ಆದರೆ ನಾವಿದ್ದ ಹಳ್ಳಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಸಿಗುತ್ತಿರಲಿಲ್ಲ. ಒಟ್ಟಿಗೇ ತಂದಿಟ್ಟುಕೊಳ್ಳುವಷ್ಟು ಹಣವೂ ಇರುತ್ತಿರಲಿಲ್ಲ. ಹಾಗಾಗಿ ಊರಿಗೆ ಹಿಂದಿರುಗಿದ ನಂತರ ಮತ್ತೆ ಬಟ್ಟೆಯ ಲಂಗೋಟಿಯೇ ಗತಿಯಾಯಿತು.

ಅದಾಗಿ ಎರಡು ವರ್ಷಗಳ ನಂತರ ಬೆಂಗಳೂರಿಗೆ ಶಿಫ್ಟ್ ಆದೆವು. ಪಕ್ಕದ ಮನೆಯ ಗೀತಾ ಪರಿಚಯವಾದಳು. ಅವಳು ಆಗ ತಾನೇ ದೊಡ್ಡವಳಾಗಿದ್ದಳು. ಮೊದಲ ಬಾರಿ ಅವಳ ಜೊತೆ ಈ ವಿಷಯ ಸಂಕೋಚದಿಂದ ಮಾತಾಡಿದಾಗ ಇಬ್ಬರಿಗೂ ನಾಚಿಕೆ. ಅವಳು ಪ್ಯಾಡ್ ಬಳಸುತ್ತಿದ್ದೇನೆಂದು ಹೇಳಿದಾಗ ಅಮ್ಮನ ಬಳಿ ಬಂದು ‘ಇನ್ನು ಮುಂದೆ ನಾನೂ ಅದನ್ನೇ ಬಳಸುವುದು’ ಅಂತ ಡಿಕ್ಲೇರ್ ಮಾಡಿದ್ದೆ. ಅಮ್ಮ ಒಪ್ಪಿದ್ದಳು. ಈಗ ಎದುರಾದ ಸಂದಿಗ್ಧ ಅದನ್ನು ಕೊಳ್ಳುವ ಬಗೆ! ಅಮ್ಮಂದಿರಿಗೆ ಸಿಕ್ಕಾಪಟ್ಟೆ ನಾಚಿಕೆ. ಹಾಗಾಗಿ ‘ದುಡ್ಡು ಕೊಡುತ್ತೇವೆ. ನೀವೇ ಕೊಂಡು ತರಬೇಕು’ ಅಂತ ಷರತ್ತು ಹಾಕಿದ್ದರು. ನಾವೂ ಒಪ್ಪಿದೆವು.‌

ನಾನು ಮತ್ತು ಗೀತಾ ಅದಕ್ಕಾಗಿ ಪಟ್ಟ ಪಡಿಪಾಟಲು ದೇವರಿಗೇ ಪ್ರೀತಿ. ತಿಂಗಳಿಗೊಮ್ಮೆ ಒಂದು ದಿನ ಶಾಲೆಯಿಂದ ನಾನು, ಕಾಲೇಜಿನಿಂದ ಅವಳು ಮಾತಾಡಿಕೊಂಡು ಬೇಗ ಮನೆಗೆ ಬರುತ್ತಿದ್ದೆವು ಈ ಘನ ವ್ಯಾಪಾರಕ್ಕೋಸ್ಕರ! ರಾಜಾಜಿನಗರದ ESI ಹತ್ತಿರವಿದ್ದ ಮನೆಯಿಂದ ಇಬ್ಬರೂ ಪ್ಯಾಡ್ ವ್ಯಾಪಾರಕ್ಕೆ ಸಜ್ಜಾಗಿ ಹೊರಡುತ್ತಿದ್ದೆವು. ಎದುರಾದ ಮೆಡಿಕಲ್ ಶಾಪಿನಲ್ಲೆಲ್ಲ ಬಗ್ಗಿ ನೋಡುವುದು ಮತ್ತು ಅಯ್ಯೋ ಇಲ್ಲಿ ಚಿಕ್ಕ ಹುಡುಗ ಇದ್ದಾನೆ ನಾನು ಕೇಳಲ್ಲ ಅಂತ ಒಂದು ಅಂಗಡಿ ತಿರಸ್ಕೃತವಾದರೆ, ಇಲ್ಲಿ ತುಂಬ ಗಿರಾಕಿಗಳಿದ್ದಾರೆ ಅಂತ ಮತ್ತೊಂದು ಅಂಗಡಿ ತಿರಸ್ಕೃತವಾಗುತ್ತಿತ್ತು. ಎಲ್ಲ ಕೈಗೂಡಿ ಮೂರನೆಯ ಮೆಡಿಕಲ್ ಶಾಪಿನಲ್ಲಿ ದೇಹ ಹಿಡಿಯಾಗಿಸಿ ಕೇಳಿದರೆ ಅಲ್ಲಿ ಪ್ಯಾಡ್ ಸ್ಟಾಕ್ ಇರುತ್ತಿರಲಿಲ್ಲ! ಮತ್ತೆ ಬೇಟೆ ಮುಂದುವರೆಯುತ್ತಿತ್ತು. ಹೀಗೇ ಭಾಷ್ಯಂ ಸರ್ಕಲ್‌‌ನವರೆಗೂ ನಮ್ಮ ‘ಪ್ಯಾಡ್ ಯಾತ್ರೆ’ ಮುಂದುವರೆಯುತ್ತಿತ್ತು!

ಎಷ್ಟೋ ಬಾರಿ ವಯಸ್ಸಾದವರು ಇರುವ ಅಂಗಡಿ ಕಂಡು ಸಂಭ್ರಮದಿಂದ ಶಾರುಖ್ ಖಾನ್ ತರ ‘ಕೆ .. ಕೆ … ಕೇರ್ ಫ್ರೀ ಇದೆಯಾ’ ಕೇಳಿದಾಗ, ಆ ಓನರ್ ‘ಲೋ ಶೀವಾಸ ಈ ಮಕ್ಳಿಗೆ ಕೇರ್ ಫ್ರೀ ಬೇಕಂತೆ ಕೊಡೋಓಓಓ … ‘ ಅಂತ ಜೋರಾಗಿ ಕೂಗಿಬಿಡುತ್ತಿದ್ದರು. ನಾವಿಬ್ಬರೂ ಅವಮಾನದಿಂದ ಮುದುಡಿಕೊಳ್ಳುತ್ತ ಪ್ರತ್ಯಕ್ಷವಾಗುವ ಶೀವಾಸನಿಗಾಗಿ ಕಾದರೆ, ಧುತ್ತೆಂದು ಚಿಗುರು ಮೀಸೆಯವ ನಮ್ಮತ್ತ ಬಂದು ‘ಹತ್ತರದ್ದೋ, ಇಪ್ಪತ್ತರದ್ದೋ’ ಅಂತ ಮೀಸೆಯಡಿ ಪೋಲಿ ನಗುತ್ತಾ ಕೇಳಿಬಿಡುತ್ತಿದ್ದ. ಮತ್ತೆ ಶಾರುಖ್ ಖಾನ್ ಥರ ‘ಹ … ಹ … ಹತ್ತು’ ಎಂದವರು ಅವನು ಪ್ಯಾಕೆಟ್ ಹಿಡಿದು ಬರುವುದರಲ್ಲಿ ಎದ್ದುಬಿದ್ದು ಅಲ್ಲಿಂದ ಓಡಿಬಿಡುತ್ತಿದ್ದೆವು! ಒಂದಿನ್ನೂರು, ಮುನ್ನೂರು ಮೀಟರ್ ಓಡಿ ಸುಧಾರಿಸಿಕೊಂಡು ಮತ್ತೆ ಮೆಡಿಕಲ್ ಶಾಪ್ ಬೇಟೆಗಿಳಿಯುತ್ತಿದ್ದೆವು …

ಹೀಗೇ ನಾಯಿಪಾಡು ಪಡುತ್ತ ಸಂಪಾದಿಸಿದ ಕೆ .. ಕೆ .. ಕೇರ್ ಫ್ರೀ ಆಗಲಿ, ಸ್ಟೆ … ಸ್ಟೆ ..‌ಸ್ಟೇ ಫ್ರೀ ಆಗಲಿ ಬಟ್ಟೆಗಿಂತ ವಾಸಿಯಿತ್ತೇ ಹೊರತು, ಕಾಲೇಜಿನಲ್ಲಿ ಘಂಟೆಗಟ್ಟಳೆ ಇರಬೇಕಾದಾಗ ಸುರುಟಿಕೊಂಡು, ಮುರುಟಿಕೊಂಡು ತಕ್ಕಮಟ್ಟಿಗೆ ಕಾಟ ಕೊಡುತ್ತಿದ್ದವು. ಹೀಗೇ ಒಂದಿಷ್ಟು ವರ್ಷ ಜೀವನ ಕಳೆದ ಮೇಲೆ ಒಂದು ದಿನ ಭುವಿಯಲ್ಲಿ ವಿಸ್ಪರ್ ಎನ್ನುವ ಮಾಯಾವಿ ಅವತರಿಸಿತು!

ಯಥಾಪ್ರಕಾರ ಅಂಗಡಿಯಲ್ಲಿ ವಿಸ್ಪರಿಸುತ್ತಲೇ ಕೊಂಡ ವಿಸ್ಪರ್ ಘಂಟಾನುಗಟ್ಟಳೆ ಒಣ ಅನುಭವ ನೀಡುತ್ತ, ಸುರುಟಿಕೊಳ್ಳದೇ ಅತ್ಯದ್ಭುತ comfort ಕೊಟ್ಟಾಗ. ‘Long live whisper owner’ ಎಂದು ಹರಸಿದ್ದೆವು. ಕಾಲ ಕಳೆಯಿತು. ಈಗೀಗ ಸೂಪರ್ ಮಾರ್ಕೆಟ್ ಗಳಲ್ಲಿ ಸೋಪಿನ ಪುಡಿ, ಸಕ್ಕರೆ, ಅಕ್ಕಿ, ಬೇಳೆಯ ಜೊತೆ ವಿಸ್ಪರ್ ಅನ್ನೂ ಕೊಳ್ಳುವ ದಿನ ಬಂದುಬಿಟ್ಟಿತು.

ಪುಟ್ಟಪುಟ್ಟ ಹುಡುಗಿಯರು ಸಂಕೋಚವಿಲ್ಲದೇ ಮೆಡಿಕಲ್ ಶಾಪ್‌ನಲ್ಲಿ ‘ಅಂಕಲ್ ವಿಸ್ಪರ್ ಕೊಡಿ’ ಎನ್ನುವುದು ಕಿವಿಗೆ ಬೀಳುವಾಗ, ಮತ್ತು ಆ ಅಂಕಲ್ ‘ರೆಗ್ಯುಲರ್ ಆ, ಲಾಂಗ್ ಆ’ ಅಂತ ಕೂಲಾಗಿ ಕೇಳುವಾಗ ಜಗತ್ತು ಮುಂದುವರೆದು ಎಲ್ಲೆಲ್ಲಿಗೋ ಬಂದುಬಿಟ್ಟಿದೆ, ಕ್ರಾಂತಿ ಆಗಿಹೋಗಿದೆ ಅಂತ ಧನ್ಯತಾ ಭಾವ ಮೂಡುತ್ತಿತ್ತು.‌

ನಮ್ಮ ಕತೆಯೆಲ್ಲ ಡೈನೋಸಾರ್ ಕಾಲದ್ದಿರಬೇಕು ಎಂದುಕೊಳ್ಳುತ್ತಿರುವಾಗಲೇ ಈಗ ಮತ್ತೆ ಸ್ಯಾನಿಟರ್ ನ್ಯಾಪ್ಕಿನ್ ಮೇಲೆ ಹೊರೆಸಿದ ಟ್ಯಾಕ್ಸ್‌ನಿಂದಾಗಿ ಸುದ್ದಿಯಲ್ಲಿದೆ. ಮಾತಿಗೆ ಮಾತು ಬೆಳೆಸಿ ‘ಆರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾಆಆಆಆ …’ ಎಂದು ಕಾದಾಡುವಾಗ ಯಾರೋ ಬಟ್ಟೆಯೇ ಆರೋಗ್ಯಕರ ಎಂದು ಬಿಡುತ್ತಾರೆ!

ಆಯ್ತು, ಒಪ್ಪಿಯೇ ಬಿಡೋಣ. ಆರೋಗ್ಯವಾದುದನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹೇಗೂ ವಾದ ಶುರುವಾಗಿದೆ. ಇದನ್ನೇ ಮುಂದುವರೆಸುತ್ತಾ, ಮತ್ತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳೋಣ …
ಇನ್ನು ಮುಂದೆ ಕಾಲ್ನಡಿಗೆ ಮತ್ತು ಸೈಕಲ್ ಮಾತ್ರ‌ ಬಳಸೋಣ. ಬೈಕು, ಕಾರು, ಮೆಟ್ರೋ ಎಲ್ಲವನ್ನೂ ಉಪಯೋಗಿಸದೇ ಇರೋಣ.

ಹಸಿ ಮಾಂಸವನ್ನೇ ತಿನ್ನೋಣ. ಗ್ಯಾಸ್ ಒಲೆ, ಇಂಡಕ್ಷನ್ ಒಲೆ, ಫ್ರಿಡ್ಜ್, ಮೈಕ್ರೋವೇವ್ ಬಳಸುವುದು ನಿಲ್ಲಿಸೋಣ
ಇರಲು ಮನೆಯೇಕೆ ಬೇಕು, ಪರಿಸರ ಸ್ನೇಹಿ ಗುಹೆಯೇ ಸಾಕು
ತೊಡಲು ಬಟ್ಟೆಯೂ ಬೇಡ, ಎಲೆಯನ್ನೇ ಬಳಸೋಣ ……….

ಉಪಸಂಹಾರ: ತಾಳಿ ಸರದಲ್ಲಿನ ಹವಳದ ಬಗ್ಗೆ ಸುದ್ದಿ ಹರಡಿದಂತೆ, ನಾಳೆ ವಾಟ್ಸಪ್‌ನಲ್ಲಿ ‘ಮುಟ್ಟಾದಾಗ ಬಟ್ಟೆ ಬಳಸಿದರೆ ತೊಡೆಗಳ ನಡುವಣ ಯಾವುದೋ ನರ ಬಲಿಷ್ಠವಾಗಿ, ಗರ್ಭಕೋಶ ಶಕ್ತಿಯುತಗೊಂಡು, ಆರೋಗ್ಯಕರ ಮಕ್ಕಳು ಜನಿಸುತ್ತವೆ ಎನ್ನುವ ಸುದ್ದಿ ಹರಿದಾಡಿದರೆ ಖಂಡಿತಾ ಆಶ್ಚರ್ಯ ಪಡಬೇಡಿ!

‍ಲೇಖಕರು avadhi

9 July, 2017

21 Comments

  1. ಮಮತ

    ಎಂದಿನಂತೆ ಭಾರತಿಯಕ್ಕನ ಸೊಗಸಾದ ಲಘು ಹಾಸ್ಯ ಮಿಶ್ರಿತ ಗಂಭೀರ ಬರಹ . ನಮ್ಮ ಅನುಭವವೂ ಇದಕಿಂತ ಹೊರತಾಗಿಲ್ಲ . ಟೀಕಿಸುತ್ತಲೇ ಹೇಳಬೇಕಾದ್ದನ್ನ ಹೇಳ್ತೀರಿ
    ಧನ್ಯವಾದಗಳು

    • Bharathi B V

      ಥ್ಯಾಂಕ್ಸ್ ಮಮತಾ

  2. Bhavya Sandeep

    ನಿಮ್ಮ ಬರವಣಿಗೆ ಮನೆ ಮುಟ್ಟುವಂತದ್ದು ಪ್ರತಿಯೊಬ್ಬರ ಜೀವನದಲ್ಲೂ ನಡೆದಿರುವುದನ್ನು ಬಹಳ ಸಲೀಸಾಗಿ ವಿವರಿಸಿದ್ದೀರಿ … ಧನ್ಯವಾದಗಳು ಮ್ಯಾಡಮ್…

    • Bharathi B V

      ಥ್ಯಾಂಕ್ ಯೂ ಭವ್ಯಾ

  3. Renuka

    ಚಂದದ ಬರಹ <3

    • Bharathi B V

      ಥ್ಯಾಂಕ್ಸ್ ರೇಣುಕಾ

  4. Anonymous

    ಚೆನ್ನಾಗಿದೆ!

    • Bharathi B V

      ಥ್ಯಾಂಕ್ಸ್ 🙂

  5. Pushpa Kamath

    ಚಂದದ ಬರಹ..

    • Bharathi B V

      ಥ್ಯಾಂಕ್ಸ್!

  6. ಮಾಲಿನಿ

    ಭಾರತಿ..
    ಇದು ನಮ್ಮೆಲ್ಲರ ಕತೆ.
    ಈಗಷ್ಟೇ ನಿರಾಳವಾಗಿ ಉಸಿರಾಡಲಾರಂಭಿಸಿದ್ದೇವೆ. ಉಸಿರುಕಟ್ಟಿಸದಿರಲಿ ಯಾರೂ.

    • Bharathi B V

      ನಿಜ ನಿಜ …

  7. Anonymous

    Olleyadanu svikarisonna
    Kettadannu marethubidoona
    Olleyadakke tax kadime yagali
    Kettadakke tax jasthiyagali
    Jai gst,jai GST
    Nc writing madam

    • Bharathi B V

      Thanks

  8. Anonymous

    ಒಂದು ಮುಟ್ಟಿನ ಕಥೆ !!! ಏನನ್ನಾದರೂ ಬಿಂದಾಸ್ ಆಗಿ ಬರೆಯುವ ಭಾರತಿ ಅಕ್ಕ ನನಗೆ ಇಷ್ಟ 🙂
    ಕೊನೆಯಲ್ಲಿ ಹೇಳಿದ್ದಂತೂ ಸಖತ್ ಆಗಿದೆ.

    • Bharathi B V

      ಥ್ಯಾಂಕ್ ಯೂ 🙂

  9. Asha R Viswanath

    ಹೂಹುಡುಗಿ, ನನ್ನ ಕಥೇನೂ ಕಂಡೆ! ಥ್ಯಾಂಗ್ಸ್ ಕಣೆ.

    • Bharathi B V

      ಥ್ಯಾಂಕ್ಸ್ ಆಶು 🙂

  10. Nishkala gorur

    Awesome note madam…… !!!

    • ಭಾರತಿ ಬಿ ವಿ

      ಥ್ಯಾಂಕ್ಸ್ ನಿಷ್ಕಲಾ!

  11. Anonymous

    ನೆನೆಸಿಕೊಂಡು ಕಣ್ಣಲ್ಲಿ ನೀರು ಬಂತು.. ಮಾಳವಿಕ ಹೇಳಿದ್ದು ಇನ್ನೊಂದು ಮಾತು, ಪಾಶ್ಚಾತ್ಯ ದೇಶದವರು ಪಾಡ್ಗಳನ್ನ ನಮ್ಮ ಮೇಲೆ ಹೇರಿಕೆ ಮಾಡಿದ್ದಾರೆ ಅಂತ.. ನಿಜಕ್ಕೂ ಆ ಹೇರಿಕೆ ಹೆಳ್ಮಕ್ಕಳಿಗೆ ವರವಾಗಿದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading