ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಭಾ ಪ್ರಶ್ನೆ: ರಾಧಾಕೃಷ್ಣನ್ ಅವರನ್ನು ವೈಯಕ್ತಿಕ ಬದುಕಿನ ಕಾರಣಕ್ಕೆ ಶೂಲಕ್ಕೇರಿಸಬಹುದೇ?

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.

ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಖವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.

ಅದು ಇಲ್ಲಿದೆ 

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರು ಬರೆದ ಉತ್ತರ ಇಲ್ಲಿದೆ-

ದೊಡ್ಡವರು ತೋರಿದ ಹಾದಿಯಲ್ಲಿ ನಡೆಯಿರಿ ಅವರು ನಡೆದ ಹಾದಿಯಲ್ಲಿ ಅಲ್ಲ

ಪ್ರತಿಭಾ ನಂದಕುಮಾರ್

ಒಂದು ಸಲ ನಾನು ಫೇಸ್ ಬುಕ್ ನಲ್ಲಿ ಬರೆಯುತ್ತಾ ಜಿ ಎಸ್ ಶಿವರುದ್ರಪ್ಪ ಅವರ ಎರಡನೇ ಹೆಂಡತಿ ಪದ್ಮ ಮೇಡಂ ನಮಗೆ ಬಿ ಎ ನಲ್ಲಿ ಮೇಡಂ ಆಗಿದ್ದರು ಎಂದು ಹೇಳುತ್ತಾ ಒಂದು ನಾಟಕಕ್ಕೆ ಜಿ ಎಸ್ ಎಸ್ ಇಬ್ಬರು ಹೆಂಡತಿಯರ ಜೊತೆಗೆ ಬಂದ ಬಗ್ಗೆ ತಮಾಷೆಯಾಗಿ ಬರೆದಿದ್ದೆ.

ತಕ್ಷಣ ನನ್ನ ಕೆಲವು ಗೆಳೆಯರು ಅದು ಚೀಪ್ ಜೋಕ್ ಎಂದೂ ತಕ್ಷಣ ತೆಗೆಯಬೇಕೆಂದೂ ಹೇಳಿದ್ದಕ್ಕೆ ನಾನು ತಕ್ಷಣ ಡಿಲೀಟ್ ಮಾಡಿದೆ.

ಇದು ಎಸ್ ರಾಧಾಕೃಷ್ಣನ್ ಅವರ ಬಗ್ಗೆ ಗೋಪಾಲ್ ಬರೆದ ಜೀವನ ಚರಿತ್ರೆಗೆ ಹೇಗೆ  ಅನ್ವಯಿಸುತ್ತದೆ ಎಂದು ವಿವರಿಸುತ್ತೇನೆ.

ನಮ್ಮ ಗುರುಗಳು ಮತ್ತು ನಮ್ಮ ತಂದೆತಾಯಿಗಳು ಆದರ್ಶವಾಗಿರಬೇಕು ಎಂದು ನಾವು ಬಯಸುತ್ತೇವೆ ನಿಜ. ಆದರೆ ಅವರ ಬದುಕನ್ನು ವ್ಯಾಖ್ಯಾನಿಸುವಾಗ ನಾವು ನಿಷ್ಟೂರ ವಿಮರ್ಶಕರಾದಾಗ ಅವರ ಬದುಕಿನ ಅನಿವಾರ್ಯತೆಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಹಾಗಾಗಿ ಜಡ್ಜ್ ಮೆಂಟಲ್ ಆಗುತ್ತೇವೆ.

Photo: TheLallantop.com

ಮಹಾತ್ಮ ಗಾಂಧಿಯ ಮಗ “ತನ್ನ ತಾತ ತನಗೆ ಒಳ್ಳೆಯ ತಾತನಾಗಲಿಲ್ಲ” ಎಂದು ಹೇಳಿದಾಗ ಅವನ ದೌರ್ಭಾಗ್ಯಕ್ಕೆ ಸಂತಾಪ ಸೂಚಿಸಬಹುದೇ ಹೊರತು ಗಾಂಧೀ ದೇಶಕ್ಕಾಗಿ ಮಾಡಿದ್ದನ್ನು ಅಳಿಸಲಾಗುವುದಿಲ್ಲ.

ಇದನ್ನೇ ಎಸ್ ರಾಧಾಕೃಷ್ಣನ್ ಅವರಿಗೂ ಅನ್ವಯಿಸಬಹುದು. ಅವರ ಸಾಧನೆಗಳು ಅವರ ವೈಯಕ್ತಿಕ ದೌರ್ಬಲ್ಯಗಳಿಗಿಂತ ದೊಡ್ಡದು.

ಎಸ್ ರಾಧಾಕೃಷ್ಣನ್ ಅವರ ಬಗ್ಗೆ ಅವರ ಮಗ ಗೋಪಾಲ್ ಬರೆದ ಜೀವನ ಚರಿತ್ರೆಯನ್ನು ಮತ್ತು ಅದರ ಹಿಂದಿನ ಭಾವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಇವತ್ತು ತಮಗೆ ಬೇಕಾದಂತೆ ವ್ಯಾಖ್ಯಾನಿಸುವುದು ಮತ್ತು ಶಿಕ್ಷಕರ ದಿನಾಚರಣೆಯನ್ನೇ ಕ್ಯಾನ್ಸಲ್ ಮಾಡಿ ಎಂದು ಹೇಳುವುದು ಮಾನಸಿಕ ಮತ್ತು ಬೌದ್ಧಿಕ ಅಪಕ್ವತೆಯನ್ನು ತೋರುತ್ತದೆ.

1.     ಮೊದಲನೆಯದಾಗಿ ಎಸ್ ರಾಧಾಕೃಷ್ಣನ್ ಅವರು ಭಾರತದ ಮೊದಲ ಪ್ರೆಸಿಡೆಂಟ್ ಆದಾಗ ಅವರ  ವಿದ್ಯಾರ್ಥಿಗಳು ಅವರ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ಕೇಳಿದಾಗ ಅವರು ನನ್ನ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಹೇಳಿದಾಗ ವಿದ್ಯಾರ್ಥಿಗಳು ಮತ್ತೂ ಒತ್ತಾಯಿಸಿದಾಗ ಅವರು ಆ ದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಿದರೆ ನಾನು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಕ್ಕೆ ಇದು ಆಚರಣೆಗೆ ಬಂದಿತು.

ಅದು ಆ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರ ಮೇಲಿದ್ದ ಪ್ರೀತಿಯ ಕಾರಣ ಜಾರಿಗೆ ಬಂದ ಆಚರಣೆಯೇ ಹೊರತು ಯಾವ ಕಾನೂನು ಕ್ರಮ ಪಾಸು ಮಾಡಿ ತಂದದ್ದಲ್ಲ.

2. ಅಲ್ಲದೆ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ಇರುವ ಮುಖ್ಯ ಕಾರಣ – ಅವರು ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರು.  ಉದ್ದಕ್ಕೂ ಅವರು ಶಿಕ್ಷಕರಾಗಿ ಹೆಸರು ಮಾಡಿದವರು. ಮದ್ರಾಸು ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡಿದವರು.  ಆಕ್ಸ್ ಫೋರ್ಡ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಹುದ್ದೆ ಅಲಂಕರಿಸಿದ ಮೊದಲ ಭಾರತೀಯರು.  ಮ್ಯಾಂಚೆಸ್ಟರ್ ನಲ್ಲಿ ಮತ್ತು ಚಿಕಾಗೋ ವಿವಿಗಳಲ್ಲಿ ಅಧ್ಯಾಪಕರಾಗಿದ್ದರು.

3. ರಾಧಾಕೃಷ್ಣನ್ ಅವರು ಮೂವರು ಹೆಂಡತಿಯರನ್ನು ಹೊಂದಿದ್ದರು ಎನ್ನುವುದನ್ನು ಹೇಳಿ ಗೋಪಾಲ್ ಅವರನ್ನು “mistresses” ಎಂದು ಹೇಳುತ್ತಾರೆ ವಿನಾ “ಹಲವಾರು ಹೆಂಗಸರೊಡನೆ ವಿವಾಹ ಬಾಹಿರ ಲೈಂಗಿಕ ಸಂಬಂಧಗಳ ಸರಣಿಯನ್ನು ಹೊಂದಿದ್ದರು” ಎಂದು ವಡ್ಡಗೆರೆ ವ್ಯಾಖ್ಯಾನಿಸುತ್ತಾರೆ.

ನಮ್ಮ ಕಾಲದಲ್ಲೇ ಬದುಕಿದ ಕರುಣಾನಿಧಿ ಅವರಿಗೆ ಐವರು ಹೆಂಡತಿಯರಿದ್ದರು.  ಒಬ್ಬ ಗಂಡು ಮೂವರನ್ನು ಮದುವೆಯಾಗಿದ್ದು ಅಕ್ರಮ, ಅನೈತಿಕ ನಿಜ ಆದರೆ ಆ ಕಾಲದಲ್ಲಿ ಅದನ್ನು ನೋಡುವ ರೀತಿ ಬೇರೆಯಾಗಿತ್ತು ಅನ್ನುವುದನ್ನೂ ನಾವು ಮರೆಯಬಾರದು.

ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಕೂಡಾ ಯಾರೊಬ್ಬರೂ ಅವರ ಎರಡನೇ ಹೆಂಡತಿಯ ಕಾರಣ ಅವರು ಅಧಿಕಾರದಲ್ಲಿರಬಾರದು ಎಂದು ಹೇಳಲಿಲ್ಲ.

ಜಗತ್ತಿಗೆಲ್ಲ ಪಾಠ ಹೇಳುವ ಪ್ರಸಿದ್ಧ ಪತ್ರಕರ್ತರುಗಳೇ ಎರಡೆರಡು ಮದುವೆಯಾಗಿರುವಾಗ ಆ ಬಗ್ಗೆ ಚಕಾರ ಎತ್ತದೇ ನೂರು ವರ್ಷದ ಹಿಂದಿನವರ ಬಗ್ಗೆ ನೈತಿಕತೆಯ ಬೆರಳು ಎತ್ತುವುದು ವ್ಯರ್ಥ.  ಅದಕ್ಕಿಂತ ಹೆಚ್ಚಾಗಿ ರಾಧಾಕೃಷ್ಣನ್ ಅವರ ಜೀವಮಾನದ ಎಲ್ಲಾ ಸಾಧನೆಗಳನ್ನು ಈ ಕಾರಣಕ್ಕೆ ತುಚ್ಚಿಕರಿಸುವಾಗ ಇದು ಒಂದು ರೀತಿಯ ಸೆಲೆಕ್ಟಿವ್ ನೈತಿಕತೆ ಎನ್ನಿಸುತ್ತದೆ.

ಅಂಬೇಡ್ಕರ್ ತಮ್ಮ ಕೊನೆಯ ದಿನಗಳಲ್ಲಿ ತಮಗಿಂತ ಬಹಳಾ ಕಮ್ಮಿ ವಯಸ್ಸಿನ ಹುಡುಗಿಯನ್ನು ಮದುವೆಯಾದದ್ದನ್ನು ಆ ಕಾಲದ ಎಲ್ಲರೂ  ಸಹಜ ಎಂದೇ ಭಾವಿಸಿದರು. ಅದನ್ನು ಈಗ ವ್ಯಾಖ್ಯಾನಿಸುವುದು ವ್ಯರ್ಥ.

ರಾಧಾಕೃಷ್ಣನ್ ಅವರು ತಮ್ಮ ಪತ್ನಿ ಶಿವಕಾಮು ಸತ್ತಾಗ ನಡೆದುಕೊಂಡ ರೀತಿ ಬಗ್ಗೆ ಮತ್ತು ಅವರು ತಮ್ಮ ಪತ್ನಿಯ ಬಗ್ಗೆ ಇಟ್ಟಿದ್ದ ಪ್ರೀತಿಯ ಬಗ್ಗೆ ಗೋಪಾಲ್ ಹೀಗೆ ಹೇಳುತ್ತಾರೆ. “The end of a long chapter’, was his remark as he returned from the funeral. Doubtless he lived through again in his mind the years when she had supported him and recollected his need for her love at later times even though he had not rejected self-indulgence elsewhere. The black misery that enveloped him on her death was no assumed posture.”  No assumed posture ಅಂದರೆ ಅದು ನಾಟಕವಲ್ಲ ನಿಜವಾದದ್ದು ಎಂದರ್ಥ.

ಗಂಡ ಹೆಂಡತಿಯ ನಡುವಿನ ಸಂಬಂಧ ಯಾವತ್ತೂ ಕಪ್ಪುಬಿಳಿ ಆಗಿರುವುದಿಲ್ಲ.  ಅದಕ್ಕಿಂತ ಹೆಚ್ಚಾಗಿ ಗೋಪಾಲ ಸ್ವತಃ “”throughout a long life had never been guilty of a mean deed; and it is unlikely that he ever had a mean thought” ಎಂದು ಹೇಳುತ್ತಾರೆ. ತನ್ನ ತಂದೆಯ ಬಗ್ಗೆ ನಿರ್ದಾಕ್ಷಿಣ್ಯವಾಗಿ ಬರೆದ ವ್ಯಕ್ತಿಯೇ ಹೀಗೆ ಹೇಳಿರುವಾಗ ನೂರು ವರ್ಷಗಳ ನಂತರ ಈಗ ರಾಧಾಕೃಷ್ಣನ್ ಅವರನ್ನು ಅವರ ವೈಯಕ್ತಿಕ ಬದುಕಿನ ಕಾರಣಕ್ಕೆ ಶೂಲಕ್ಕೇರಿಸಬಹುದೇ?

4.  ಮುಖ್ಯವಾಗಿ ಗೋಪಾಲ್ ಅವರು ರಾಧಾಕೃಷ್ಣನ್ ಬಗ್ಗೆ ಸಂಪೂರ್ಣ ಗೌರವ ಇಟ್ಟುಕೊಂಡೆ ಪುಸ್ತಕ ಬರೆದಿದ್ದಾರೆಯೇ ಹೊರತು ತಿರಸ್ಕಾರದಿಂದಲ್ಲ.

ಪೀಠಿಕೆಯಲ್ಲೇ ಅವರು “Sarvepalli Radhakrishnan was a man of versatile talent and varied achievements. He served India in a number of ways and worked for the reconciliation of mankind at the deepest level. But first and foremost he was a philosopher of the front rank and the final place to encounter and assess him is in his philosophical writings.” ಎಂದು ಹೇಳಿ ರಾಧಾಕೃಷ್ಣನ್ ಅವರನ್ನು ಎದುರಿಸಿ ಅವರ ಮೌಲ್ಯ ಮಾಪನ ಮಾಡುವ ಅಂತಿಮ ನಿಲುವು ಅವರ ತಾತ್ವಿಕ ಬರಹಗಳೇ ಎನ್ನುತ್ತಾರೆ. ಆ ವಿಶಾಲತೆಯನ್ನು ನಾವು ಕಲಿಯಬೇಕಿದೆ.

5. ತಾನು  ತಂದೆಯವರಿಗೆ ಹತ್ತಿರವಾಗಿದ್ದೆ, ನಾವು ಆಗಿನ ಕಾಲಕ್ಕೆ ಅಪರೂಪವಾಗಿದ್ದ ತಂದೆ ಮಗನ ಸಂಬಂಧ ಹೊಂದಿದ್ದೆವು ಎನ್ನುತ್ತಾರೆ. ಜೊತೆಗೆ ಆ ಹತ್ತಿರದಿಂದಾಗಿ ತಾವಿಬ್ಬರೂ ಅನುಭವಿಸಿದ ನೋವನ್ನೂ ಕುರಿತು ಹೇಳಿದ್ದಾರೆ.

ಅದಕ್ಕಾಗಿಯೇ “This is a son’s book. The relations between my father and me were closer and more continuous than is usual, in this age, between parents and children ; and they brought with it, at times, obscure pains on both sides. Such close association enabled me to be witness to a great deal in the later years that has been recounted here. But I have tried not to be swayed by personal affection and have shirked nothing.” ಒಬ್ಬ ಮಗನೇ ಹೀಗೆ ಹೇಳಿದ ಮೇಲೆ ರಾಧಾಕೃಷ್ಣನ್ ಅವರನ್ನು ಜಡ್ಜ್ ಮಾಡಿ ತೀರ್ಮಾನ ಕೊಟ್ಟು ಅವರ ಹೆಸರಿನ ದಿನಾಚರಣೆಯನ್ನೇ ನಿಲ್ಲಿಸಬೇಕು ಎಂಬುದು ಹೇಳಲು ಯಾರಿಗೇನು ಹಕ್ಕಿದೆ?

6. ಗೋಪಾಲ್ ಅವರ ನೆಹರು ಜೀವನ ಚರಿತ್ರೆ ಬಗ್ಗೆ ಬಂದಿರುವ ವಿಮರ್ಶೆಗಳಲ್ಲಿ ಕೂಡಾ ಪ್ರಧಾನವಾಗಿ “His reconstruction of history was interpretative, not always documentative” ಎಂದೇ ಇದೆ.

7. ಅಫೀಶಿಯಲ್ ದಾಖಲೆಯ ಪ್ರಕಾರ ರಾಧಾಕೃಷ್ಣನ್ ಅವರು ಹುಟ್ಟಿದ್ದು ಸೆಪ್ಟೆಂಬರ್ ೫, ೧೮೮೮.  ಅವರು ಖಾಸಗಿಯಾಗಿ ಮಾತನಾಡುತ್ತ ಮಗನ ಬಳಿ ಅದು ಸೆಪ್ಟೆಂಬರ್ ೨೦ ಇರಬಹುದು ಎಂದು ಹೇಳಿದ್ದನ್ನು ನಾವು ಪರಿಗಣಿಸಬೇಕಾಗಿಲ್ಲ. ಅಧಿಕೃತವಾಗಿ ಸೆಪ್ಟೆಂಬರ್ ಐದು ಅವರ ಜನ್ಮದಿನ ಎಂದು ದಾಖಲಾಗಿರುವಾಗ ಅದನ್ನೇ ಪರಿಗಣಿಸಬಹುದು.  ಐವತ್ತು ವರ್ಷಗಳ ಹಿಂದೆ ಹುಟ್ಟಿದ ಎಷ್ಟೋ ಜನರ ಜನನ ಪ್ರಮಾಣಪತ್ರವೇ ಇಲ್ಲದಿರುವಾಗ.

8. ಗೋಪಾಲ್ ತಮ್ಮ ತಂದೆಯ ಖಾಸಗಿ ಬದುಕಿನ ಬಗ್ಗೆ ಕೆಲವು ಪ್ಯಾರಾಗಳನ್ನು ಹೇಳಿ ಪುಟಗಟ್ಟಲೆ ಅವರ ಬೌದ್ಧಿಕ, ತಾತ್ವಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳ ಬಗ್ಗೆ ವಿವರಿಸಿದ್ದಾರೆ. ಗೋಪಾಲರಿಗೆ ಕಾಡದ ಸಂಧಿಗ್ಧತೆ ಟೀಕಾಕಾರರನ್ನು ಕಾಡಿದೆಯೇ?

9. ಗೋಪಾಲ್ ಅವರೇ ತಮ್ಮ ತಂದೆ ಬರೆದ ಖಾಸಗಿ ಟಿಪ್ಪಣಿಗಳ ಹೇಳುತ್ತಾ “In 1950, he wrote in Fragments of a Confession: “No particular good fortune has lifted me above the sphere in which our common humanity struggles along, and I have had my own share of the burdens and anxieties of life. Although these are of immense importance to me, discretion forbids me to speak of them. Besides, they are of no particular interest to the philosophical public.” And that was that.” ಎಂದು ಹೇಳಿದ್ದಾರೆ. ಇದನ್ನು ಯಾಕೆ ನಾವು ಪರಿಗಣಿಸಬಾರದು?

10. ಒಂದು ಅದ್ಭುತ ಕಲಾಕೃತಿಯನ್ನು ಮೆಚ್ಚಿಕೊಳ್ಳಬೇಕಾದರೆ ಕಲಾವಿದನ ಜೀವನ ನಿಷ್ಠೆ ಆಧಾರವಾಗಿರಬೇಕೇ? ಅದರಲ್ಲೂ ವಿಶೇಷವಾಗಿ ತಾವು ಆರೋಪಿಸುತ್ತಿರುವ ವ್ಯಕ್ತಿ ಜೀವಂತ ಇಲ್ಲದಾಗ, ತನ್ನ ಬದುಕಿನ ನಿರ್ಣಯಗಳನ್ನು ಕುರಿತು ವಿವರಿಸಲು ಇಲ್ಲದಿರುವಾಗ ಅವರ ಬಗ್ಗೆ ಜಡ್ಜ್ ಮೆಂಟಲ್ ಆಗುವುದು ಸರಿಯಲ್ಲ. ರಾಧಾಕೃಷ್ಣನ್ ಅವರ ಸಾಧನೆಯನ್ನೇ ಮಾದರಿಯಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲದವರು ಅವರ ವೈಯಕ್ತಿಕ ಬದುಕನ್ನು ಪ್ರಶ್ನಿಸಿ ಅದರಿಂದ ತಮ್ಮ ಬೌದ್ಧಿಕ ಚಿಂತನೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿ ಇಡೀ ರಾಧಾಕೃಷ್ಣನ್ ಅವರ ಬದುಕನ್ನೇ ತಿರಸ್ಕರಿಸುವುದು ನೋಡಿ ದಂಗಾಗುತ್ತಿದೆ.  ಇದೇ ಜನಗಳು ಇವತ್ತು ಎಂತೆಂತಹವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುತ್ತಿದ್ದಾರೆ!

ಕೊನೆಯದಾಗಿ ಯಾವುದೇ ಕಾರಣಕ್ಕೂ ಎಸ್ ರಾಧಾಕೃಷ್ಣನ್ ಅವರ ಬದಲಿಗೆ ಪುಲೆ ಅವರ ಹೆಸರು ಹೇಳುವುದು ಸರಿಯಲ್ಲ. ಇಬ್ಬರು ಬೇರೆ ಬೇರೆ ರೀತಿಯಲ್ಲಿ ಬೆಳೆದುನಿಂತ ಮರಗಳು.

(ಪುಸ್ತಕ ಓದಿಲ್ಲದವರು ಇಲ್ಲಿ ಓದಿ https://archive.org/stream/in.ernet.dli.2015.131084/2015.131084.Radhakrishnan-A-Biography_djvu.txt)

 

‍ಲೇಖಕರು avadhi

6 September, 2019

2 Comments

  1. Sudha Hegde

    ಕಣ್ಣು ತೆರೆಸುವ ಲೇಖನ

  2. Abhilasha S

    ತುಂಬಾ ಚೆನ್ನಾಗಿ ವಿವರಗಳ ಸಹಿತ ಬರೆದಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading