25-30 ವರ್ಷಗಳ ಹಿಂದಿನ ಪತ್ರಿಕೆಗಳನ್ನು ಗಮನಿಸಿ. ಪಡಿತರ ಅಂಗಡಿಗಳಲ್ಲಿ ಅಕ್ಕಿ ವಿಳಂಬ, ಸಕ್ಕರೆ ತೂಕ ಸರಿಯಾಗಿಲ್ಲ, ಸೀಮೆ ಎಣ್ಣೆ ಕಾಲಕಾಲಕ್ಕೆ ತಲುಪುತ್ತಿಲ್ಲ, ಬೆಳೆಗೆ ಬೆಂಬಲ ಬೆಲೆ ಸಕಾಲಕ್ಕೆ ಬಂದಿಲ್ಲ ಎಂಬುದು ಸುದ್ದಿ ಆಗುತ್ತಿದ್ದ ದಿನಗಳವು. ‘ಹಸಿವೆ’ ದೇಶಕ್ಕೆ ಆದ್ಯತೆಯದಾಗಿತ್ತು. ಪತ್ರಕರ್ತರಿಗೂ ಕೂಡ.
ಆದರೆ, ಅಲ್ಲಿಂದೀಚೆಗೆ ಲಿಬರಲೈಸೇಷನ್ನಿನ ಗಾಳಿ ಬೀಸತೊಡಗಿದ ಮೇಲೆ ಮಾಧ್ಯಮಗಳಲ್ಲಿ ವಿಚಿತ್ರ ಬದಲಾವಣೆಗಳಾಗಿಬಿಟ್ಟಿವೆ. ಟೆಲಿವಿಷನ್ ಬಂದಮೇಲಂತೂ, ಸುದ್ದಿ ಓದುವುದಕ್ಕಷ್ಟೇ ಅಲ್ಲ; ಕಾಣುವುದಕ್ಕೂ ಆಕರ್ಷಕವಾಗಿರಬೇಕು, ಜನ ಮುಗಿಬಿದ್ದು
ನೋಡುವಂತಿರಬೇಕು ಎಂಬ ಮಾನದಂಡ ಒಪ್ಪಿತವಾಗಿದೆ. ಪತ್ರಕರ್ತರೂ ನಾಲ್ಕು ಕಾಸು ಮಾಡಿಕೊಂಡಿದ್ದಾರೆ. ಹಾಗಾಗಿ, ಅವರ ಸುದ್ದಿ ಆದ್ಯತೆಗಳು ಕೂಡ ಅವರ ಮೂಗಿನ ನೇರಕ್ಕೆ ಬದಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಲೈಂಗಿಕ ಕಿರುಕುಳಗಳು ಸುದ್ದಿಮನೆಯ ದೃಷ್ಟಿಕೋನದಲ್ಲಿ ಆಕರ್ಷಕ, ಜನಮನ ಸೆಳೆಯುವ ಸುದ್ದಿಗಳು. ಅವು ಕ್ಲಿಪ್ಪಿಂಗ್ – ಚಿತ್ರ ಸಮೇತ ಲಭ್ಯವಾಯಿತೆಂದರಂತೂ ಕೇಳುವುದೇ ಬೇಡ. ಇಂತಹ “ರಸಭರಿತ” ಸುದ್ದಿಗಳ ಮಹಾಪಾಕದ ಮುಂದೆ, ಅದರ ಹಿಂದಿರುವ ವರ್ಗ-ಜಾತಿ ತಾರತಮ್ಯಗಳು, ಆರ್ಥಿಕ ತಾರತಮ್ಯಗಳು, ಸಾಮಾಜಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳೆಲ್ಲವೂ ಗೌಣವಾಗಿಬಿಡುತ್ತವೆ. ಯಾವುದೇ ದೊಡ್ಡ ಲಾಜಿಕ್ಕು ಬೇಕಿಲ್ಲದ ಸಿಟ್ಟು-ಸಮಾನತೆ-ಅಸಹಾಯಕತೆಗಳ ಸುತ್ತ ಇಡಿಯ ಚರ್ಚೆ ಡ್ರಾಯಿಂಗ್ ರೂಮುಗಳಲ್ಲೆಲ್ಲ ಗಿರಕಿ ಹಾಕತೊಡಗುತ್ತದೆ. ಮಾಧ್ಯಮಗಳ ಜವಾಬ್ದಾರಿ ಅಲ್ಲಿಗೇ ಕೊನೆಗೊಳ್ಳುತ್ತಿದೆ.
***
ಬೆಂಗಳೂರಿನಂತಹ ಮಹಾನಗರಗಳಿಗೆ ಜನ ಯಾಕೆ ಗುಳೆ ಬರುತ್ತಾರೆ?
ಬೆಂಗಳೂರಿನಂತಹ ನಗರಗಳು ಅಷ್ಟೊಂದು ಜನರಿಗೆ ಆರೋಗ್ಯಕರ ಬದುಕನ್ನು ಕೊಡುವ ಸಾಮರ್ಥ್ಯ ಹೊಂದಿದೆಯೇ?
ಹಳ್ಳಿಗಳಲ್ಲಿ ಜನರನ್ನು ಪಟ್ಟಣಗಳ ಕಡೆ ದೂಡುತ್ತಿರುವವರು ಯಾರು ಮತ್ತು ಯಾಕೆ?
ಹೋಗಲಿ, ತೊಂದರೆ ಆಗುತ್ತದೆ ಎಂದಾದರೆ ಮದ್ಯದಂಗಡಿಗಳು ಯಾಕೆ ನಿಷೇಧಗೊಳ್ಳುವುದಿಲ್ಲ? ಲೈಂಗಿಕ ಅನಾರೋಗ್ಯವನ್ನು ಪ್ರೇರಿಸುವ ಚಿತ್ರಗಳು, ಸನ್ನಿವೇಶಗಳು, ಒತ್ತಡಗಳನ್ನು ಯಾಕೆ ಮೂಲದಲ್ಲೇ ಕತ್ತರಿಸಲು ಸಾಧ್ಯವಾಗುತ್ತಿಲ್ಲ? ಎಂಬಂತಹ ಪ್ರಶ್ನೆಗಳಾಗಲೀ, ಅದಕ್ಕೆ ಉತ್ತರಗಳಾಗಲೀ ಯಾರಿಗೂ ಬೇಡವಾಗಿದೆ.
ಮನುಷ್ಯ-ಮನುಷ್ಯರ ನಡುವೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವಂತಹ ಒಂದು ಆರೋಗ್ಯಕರ ಅಂತರ ಕೂಡ ಸಿಗದಿರುವಷ್ಟು ಕಿಕ್ಕಿರಿದಿರುವ ಬೆಂಗಳೂರು ಬಿಡಿ, ಉಡುಪಿ-ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಹಾಸನದಂತಹ ಪಟ್ಟಣಗಳಲ್ಲೇ ಸಂಜೆ ಹೊತ್ತು, ಮುಂಜಾನೆ ನಡೆದಾಡುವ ಮಹಿಳೆಯರು ತಮ್ಮ ಕತ್ತಿನಲ್ಲಿರುವ ಚಿನ್ನವನ್ನು ಕಾಪಾಡಿಕೊಳ್ಳುವುದು ಕೂಡ ಸವಾಲಾಗಿಬಿಟ್ಟಿದೆ.
ಹಸಿದಿರುವ ಭಾರತವೊಂದು ಇನ್ನೂ ಒಂದು ಮೂಲೆಯಲ್ಲಿ ಅನ್ನಕ್ಕಾಗಿ ಪರಿತಪಿಸುತ್ತಿರುವಂತೆಯೇ ಇನ್ನೊಂದೆಡೆ ಹೊಟ್ಟೆ ತುಂಬಿರುವ ಭಾರತವೊಂದು ಸುಖಕ್ಕಾಗಿ, ಮೋಜಿಗಾಗಿ ಕಾತರಿಸುತ್ತಿದೆ. ಎಲ್ಲೆಲ್ಲಿ ಅಂಚುಗಳಲ್ಲಿ ಅವು ಎರಡೂ ಒಂದನ್ನೊಂದು ಸಂಧಿಸುತ್ತವೆಯೋ, ಅಲ್ಲೆಲ್ಲ ನರಕ ಸೃಷ್ಟಿ ಆಗುತ್ತಿದೆ.
***
ಮೊನ್ನೆ ಬೆಂಗಳೂರಿನ ಎಂ.ಜಿ. ರೋಡಿನಲ್ಲಿ ನಡೆದ ಘಟನೆಗೆ juxtapose ಮಾಡಬಹುದಾದ ಸಂಗತಿಯೊಂದನ್ನು ವಿವರಿಸುತ್ತೇನೆ. ಅದು ನಾವಿಂದು ಎದುರಿಸುತ್ತಿರುವ ಸಮಸ್ಯೆಗೆ ಉತ್ತರವೂ ಆಗಿರಬಹುದು.
ಕೋಟೇಶ್ವರ, ಕುಂದಾಪುರ ಎಂಬ ಗ್ರಾಮೀಣ ನಗರದ ಸಣ್ಣ ಗ್ರಾಮ. ಕಡಲ ತಡಿಯ ಈ ಗ್ರಾಮದಲ್ಲಿ ಪ್ರತೀ ವರ್ಷ ರಥೋತ್ಸವ ನಡೆಯುತ್ತದೆ. ಕರಾವಳಿಯ ಉದ್ದಗಲಕ್ಕೂ ಕೊಡಿಹಬ್ಬ ಎಂದೇ ಹೆಸರಾಗಿರುವ ಈ ಹತ್ತು-ಹದಿನೈದು ದಿನಗಳ ಸಂಭ್ರಮದಲ್ಲಿ ರಥೋತ್ಸವದ ದಿನವಂತೂ ಲಕ್ಷಕ್ಕೂ ಮಿಕ್ಕಿ ಜನ ತೀರಾ ಇಕ್ಕಟ್ಟಾದ ಒಂದೆರಡು ಕಿಲೋ ಮೀಟರ್ ಉದ್ದದ ರಸ್ತೆಯೊಳಗೆ ತುಂಬಿಕೊಳ್ಳುತ್ತಾರೆ. ಈ ಜನಸಂದಣಿ ಎಷ್ಟಿರುತ್ತದೆ ಎಂದರೆ, ಒಮ್ಮೆ ಈ ಸಂದಣಿಯ ನಡುವೆ ಸಿಕ್ಕಿಹಾಕಿಕೊಂಡರೆ ಇನ್ನೊಂದು ತುದಿಯಲ್ಲೇ ಹೊರಬೀಳಬೇಕು- ನಡೆಯದಿದ್ದರೂ!
ಅಲ್ಲೂ ಗ್ರಾಮದ, ಆಸುಪಾಸಿನ ಗ್ರಾಮಗಳ ಬಹುತೇಕ ಎಲ್ಲ ಮನೆಗಳ ವಯಸ್ಕರು, ಎಳೆಯರು ಸೇರಿರುತ್ತಾರೆ. ಗ್ರಾಮೀಣ ಬಡ, ಮಧ್ಯಮವರ್ಗದ ಕುಟುಂಬಗಳ ಜನರೇ ಹೆಚ್ಚಿರುವ ಆ ಸಂದಣಿಯಲ್ಲಿ ಬಹುತೇಕ ಎಲ್ಲರೂ ಆ ದಿನ ಹೊಸ ಬಟ್ಟೆ ಧರಿಸಿ ಬಂದವರೇ; ಅವರಲ್ಲಿ ಎಷ್ಟೋ ಜನ ವರ್ಷದಲ್ಲಿ ಅದೊಂದು ದಿನ ಮಾತ್ರ “ಕಾರಣವಿಲ್ಲದೆ ಹಬ್ಬದ ಗರ ಸುತ್ತಿ ಸಂಭ್ರಮಿಸಲು” ಹೊರಟವರು.
ಅಲ್ಲೂ, ಗುಂಪಾಗಿ ಹಬ್ಬದ ಸಂತೆಯಲ್ಲಿ ಖರೀದಿ ಮಾಡುವ, ಸುತ್ತಾಡುವ ಹೆಣ್ಣುಮಕ್ಕಳಿಗೆ ಕೀಟಲೆ ಮಾಡುವ ಪಡ್ಡೆ ಹುಡುಗರು, ಮಾನಸಿಕವಾಗಿ ಲೈಂಗಿಕ ತೊಂದರೆಗಳಿರುವವರು ಎಲ್ಲ ಇರುತ್ತಾರೆ. ಆದರೂ ಯಾವತ್ತೂ ಅಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದದ್ದಿಲ್ಲ. ಇಡಿಯ ರಾತ್ರಿ ಊರಿಡೀ ಹಬ್ಬದ ಸಂಭ್ರಮ ಇರುತ್ತದೆ. ಯಾವುದೇ ವೇಳೆಯಲ್ಲಿ ಎಲ್ಲರೂ ಮನೆಗೆ ಹೋಗುವ ರಸ್ತೆಗಳಲ್ಲಿ, ಗದ್ದೆ ತೋಟದಂಚುಗಳಲ್ಲಿ ಏಕಾಂಗಿಯಾಗಿ ಹೋಗಿ ಬಂದರೂ, ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ.
ಪೊಲೀಸರೂ ಸಣ್ಣ ಪ್ರಮಾಣದಲ್ಲಿ ಕಾವಲಿರುತ್ತಾರೆ. ಆಸುಪಾಸಿನ ಎಲ್ಲ ಠಾಣೆಗಳಿಂದ ಬಂದೋಬಸ್ತಿಗೆ ಬಂದಿರುವ ಅವರಿಗೆ ಅವರವರ ಊರಿನ ಹುಡುಗರು, ಪುಂಡರು, ವಯಸ್ಕರ ಮುಖ ಪರಿಚಯ ಇರುತ್ತದೆ. ಒಂದಕ್ಕಿಂತ ಹೆಚ್ಚು ಸುತ್ತು ಹಬ್ಬದ ರಸ್ತೆಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿದರೆ, ಅಂತಹ ಪುಂಡರ ಗುಂಪುಗಳನ್ನು ಪೋಲೀಸರು ಕರೆದು ಮಾತನಾಡಿಸಿ, ಎಚ್ಚರಿಸಿ ಕಳುಹಿಸುತ್ತಾರೆ. ಅವರ ಫೋಕಸ್ ಇರುವುದು ಪರವೂರಿನಿಂದ ಬರುವ ಕಿಸೆಕಳ್ಳರು-ಸರಗಳ್ಳರ ಮೇಲೇ ಹೊರತೂ ಲೈಂಗಿಕ ಅಪರಾಧಗಳ ಮೇಲೆ ಅಲ್ಲ.
ಈಗೀಗ ಕರಾವಳಿಯ ಎಲ್ಲೆಡೆ ಇರುವ ರೋಗಗಳು ಇಲ್ಲೂ ಸಣ್ಣಗೆ ತಲೆಯೆತ್ತಿವೆಯಾದರೂ ಇನ್ನೂ ನಿಯಂತ್ರಣ ತಪ್ಪಿ, ಹಬ್ಬದ ಸಂಭ್ರಮ ಹಾಳುಗೆಡಹುವ ಮಟ್ಟಕ್ಕೆ ಹೋಗಿಲ್ಲ.
ಇಂತಹದೊಂದು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಆರೋಗ್ಯಕರ ಸಂಬಂಧಗಳ ಅಂದಾಜಿಲ್ಲದ, ಒಂದೇ ಅಪಾರ್ಟ್ ಮೆಂಟ್ ಕಟ್ಟಡದ ಒಂದೇ ಫ್ಲೋರಿನ ಆಚೆ ಬಾಗಿಲಿನಲ್ಲಿ ಯಾರಿದ್ದಾರೆಂದು ನಮಗೆ ಗೊತ್ತಿರುವುದೇ ಇಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ “ನಗರ” ಗಳಿಗೆ ಇದೆಲ್ಲ ಅರ್ಥವಾಗುವುದಾದರೂ ಹೇಗೆ?!!





“ಹಸಿದಿರುವ ಭಾರತವೊಂದು ಇನ್ನೂ ಒಂದು ಮೂಲೆಯಲ್ಲಿ ಅನ್ನಕ್ಕಾಗಿ ಪರಿತಪಿಸುತ್ತಿರುವಂತೆಯೇ ಇನ್ನೊಂದೆಡೆ ಹೊಟ್ಟೆ ತುಂಬಿರುವ ಭಾರತವೊಂದು ಸುಖಕ್ಕಾಗಿ, ಮೋಜಿಗಾಗಿ ಕಾತರಿಸುತ್ತಿದೆ.”
ಈ ಒಂದು ಸಾಲು, ಅಖಂಡ ಭಾರತದ ಭೂತ ಮತ್ತು ವರ್ತಮಾನಗಳೆರಡರ ಚಿತ್ರಣ..
ಧನ್ಯವಾದಗಳು ಸರ್!
Bahala chennagide vishleshane. Sakaalika baraha. rathothsava. Karaga muntaada dhaarmika aacharanegalalli. Intha laingika dourjanya gala ghatane saamanya keli bandilla. Adu allina dhaarmika bhaavada samooha sanni. Devara melina bhaya bhakti aagirabahude emba sanna anumaana ashte.
ಯಾವುದೇ ಊರಿನ ರಥೋತ್ಸವ, ಆ ದೇವಸ್ಥಾನದ ಪೌಳಿ ದಾಟಿದ ಬಳಿಕ , ಊರ ಜನರ ಸಂಭ್ರಮ ಮಾತ್ರ. ಅಲ್ಲಿಗೂ ಧಾರ್ಮಿಕ ಭಾವಕ್ಕೂ, ಜಾತಿ-ಧರ್ಮ-ದೊಡ್ಡಸ್ಥಿಕೆಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಈಗೀಗ ಈ ಸಂಬಂಧಗಳನ್ನು ಕಲ್ಪಿಸುತ್ತಿರುವ (ಅದಕ್ಕೂ ಕರಾವಳಿಯಲ್ಲಿ ನಿದರ್ಶನಗಳಿವೆ) ಕಡೆಗಳಲ್ಲೆಲ್ಲ ಜಾತ್ರೆಗಳು ಸೋಲುತ್ತಿವೆ. ಇದು ನನ್ನ ಅನುಭವ. – ರಾಜಾರಾಂ ತಲ್ಲೂರು