ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇಶ ಕಾಲ ಚರ್ಚೆ : ವ್ಯಂಗ್ಯ, ಅಪಹಾಸ್ಯ, ಸುಳ್ಳು ಆರೋಪ ಮತ್ತು ಒಂದಿಷ್ಟು ಬೈಗುಳು

‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಅವರು ಮಂಡಿಸಿದ ಅಭಿಪ್ರಾಯ ಇಲ್ಲಿದೆ. ಮಂಗಳೂರಿನಿಂದ ಜಿ ಎನ್ ಅಶೋಕವರ್ಧನ ತಮ್ಮ ಅನುಭದ ಜೊತೆ ದೇಶಕಾಲದ ಕಥೆಯನ್ನು ಮೇಳೈಸಿದ್ದಾರೆ  ಅದು ಇಲ್ಲಿದೆ. ಸಂದೀಪ್ ಕಾಮತ್ ಬರಹದ ರುಚಿ ನಿಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ಅವರು ಪತ್ರ ಬರೆದಿದ್ದಾರೆ. ಈಗ ಜಿ ರಾಜಶೇಖರ್ ಸ್ಪಂದನ ನೀಡುತ್ತಿದ್ದೇವೆ. ಮಲ್ಲನಗೌಡರ್  ಈ ಲೇಖನ ಒದಗಿಸಿದ್ದಾರೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ ಈ ಅಸಹನೆ ಸಾಹಿತ್ಯ ವಿಮರ್ಶೆಯ ವಿಧಾನವಲ್ಲ -ಜಿ.ರಾಜಶೇಖರ ಪತ್ರಿಕೆಯ ಕಳೆದ ವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ”ದೇಶವಿದೇ ನಹಾ! ಕಾಲವಿದೇನಹಾ!”ಎಂಬ ಲೇಖನದಿಂದ ನನಗೆ ಆಘಾತವಾಗಿದೆ. ವ್ಯಂಗ್ಯ, ಅಪಹಾಸ್ಯ, ಸುಳ್ಳು ಆರೋಪ ಮತ್ತು ಒಂದಿಷ್ಟು ಬೈಗುಳುದ ಮಾತುಗಳನ್ನು ಹೊರತುಪಡಿಸಿ ಆ ಲೇಖನ ’ದೇಶ ಕಾಲ’ ಹಾಗೂ ಅದರ ವಿಶೇಷಾಂಕದ ಬಗ್ಗೆ ಏನು ಹೇಳಲು ಹವಣಿಸುತ್ತಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ. ಲೇಖನದ ಮೊದಲಿಗೇ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರನ್ನು ಪ್ರಸ್ತಾಪಿಸಿ ದೇಶ ಕಾಲ ವಿಶೇಷಾಂಕ ಓದುಗರನ್ನೂ ಸಂಪಾದಕರನ್ನು ಹಂಗಿಸಲಾಗಿದೆ. ಇದು ಎತ್ತಣಿಂದೆತ್ತಣ ಸಂಬಂಧ? ಹೀಗೆ ಹಂಗಿಸುವುದರಿಂದ ಆ ಪ್ರವಾಹ ಸಂತ್ರಸ್ತರಿಗೆ ಏನು ಪ್ರಯೋಜನ? ಅದೇ ಲೇಖನದಲ್ಲಿ ಹಲವೆಡೆ ’ದೇಶ ಕಾಲ’ ಮೇಲುಜಾತಿ ಮತ್ತ ಪ್ರತಿಷ್ಟಿತ ವರ್ಗಗಳಿಗೆ ತಕ್ಕುದಾದ ಮತ್ತು ಅವರಿಗೆ ಮಾತ್ರ ಮೀಸಲಾಗಿರುವ ಪತ್ರಿಕೆ ಎಂಬ ಮಾತನ್ನು ನೇರವಾಗಿ ಹೇಳದೆ, ಸುತ್ತು ಬಳಸು ಮಾತಿಗಳಲ್ಲಿ ಸೂಚಿಸಲಾಗಿದೆ ’ದೇಶ ಕಾಲ’ ವಿಶೇಷಾಂಕದ ಬರಹಗಾರರ ಪಟ್ಟಿಯೇ ಆ ಆಪಾದನೆ ಸುಳ್ಳು ಎಂದು ಸಾಬೀತು ಮಾಡುವುದರಿಂದ, ದಲಿತ, ಶೂದ್ರ ಲೇಖಕರನ್ನು ವಿಶೇಷಾಂಕದ ಜಗಲಿ ಪಡುಸಾಲೆಗಳಲ್ಲಿ ಉಳಿದ ಜಾಗಗಳಲ್ಲಿ ಕುಳ್ಳಿರಿಸಲಾಗಿದೆ ಎಂಬ ಷರಾವನ್ನು ಸಹ ಮೇಲೆ ಕಾಣಿಸಿದ ಲೇಖನದ ಲೇಖಕದ್ವಯರು ಸೇರಿಸಿದ್ದಾರೆ. ಅವರ ಮಾತನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? ಸ್ವತಃ ಆ ಲೇಖಕರಿಗೆ ತಮ್ಮ ಮಾತಿನಲ್ಲಿ ನಂಬಿಕೆ ಇಲ್ಲ . ಸಾಹಿತಿಗಳ ಹಾಗೆ ಸಾಹಿತ್ಯ ವಿಮರ್ಶಕರು ಸಹ, ತಮ್ಮ ಅನಿಸಿಕೆಗಳನ್ನು ಸಂಕೇತ, ರೂಪಕ, ಅನ್ಯೋಕ್ತಿ ಇತ್ಯಾದಿ ಪ್ರತಿಮಾ ವಿಧಾನಗಳಲ್ಲಿ ಮಂಡಿಸತೊಡಗಿದರೆ ಆಗಬಹುದಾದ ಅನರ್ಥಗಳಿಗೆಲ್ಲಾ ಈ ಲೇಖನ ಒಂದು ಪ್ರಮಾಣ ಎಂಬಂತಿದೆ. ಲೇಖನದಲ್ಲಿ ಯಾವ ಮಾತನ್ನು ಯಾರ ಬಗ್ಗೆ ಹೇಳಲಾಗಿದೆ ಎಂದು ‘ಪತ್ತೆ ಮಾಡಲು’ ದೇಶ ಕಾಲ ವಿಶೇಷಾಂಕವನ್ನು ಬಿಡಿಸಿಟ್ಟುಕೊಂಡು ಪುಟಪುಟ ತಪಾಸಣೆ ನಡೆಸಬೇಕಾಗುತ್ತದೆ. ಉದಾಹರಣೆಗೆ ವಿಶೇಷಾಂಕದ ಕೆಲವು ಬರಹಗಳು, ಈ ಲೇಖಕದ್ವಯರಿಗೆ “ಗರ್ಭಪಾತವಾಗಿ ಚೆಲ್ಲಾಪಿಲ್ಲಿಯಾಗಿ ಹೊರಚೆಲ್ಲಿದ ಭ್ರೂಣದ ಚೂರು” ಗಳಂತೆ ಕಂಡಿವೆ. ಈ ಹೋಲಿಕೆಯಿಂದ ಅಸಹ್ಯವೆನ್ನಿಸಿದರೂ ಯಾರ ಬಗ್ಗೆ ಇದನ್ನು ಬಳಸಲಾಗಿದೆ ಎಂದು ಕೆಟ್ಟ ಕುತೂಹಲದಲ್ಲಿ ವಿಶೇಷಾಂಕವನ್ನು ನಾನು ಮೊಗಚಾಡಿದೆ. ಈ ಪತ್ತೇದಾರಿಯಿಂದ ವ್ಯರ್ಥಕಾಲಹರಣವಷ್ಟೇ ಆಯಿತು ’ದೇಶ ಕಾಲ’ದ ಲೇಖಕರಷ್ಟೇ ಯಾಕೆ ಯಾವ ಲೇಖಕ ವಿಮರ್ಶಾತೀತರಲ್ಲ. ಆದರೆ ಅವರ ಬಗ್ಗೆ ನಮ್ಮ ಅಸಮಾಧಾನವಿದ್ದರೆ ಮೊದಲು ಅವರನ್ನು ಹೆಸರಿಸಿ ಅವರ ಕೃತಿಗಳನ್ನು ಉದಾಹರಿಸಿ ನಮ್ಮ ಅನಿಸಿಕೆಗಳನ್ನು ಸಮರ್ಥಿಸುವುದು ವಿಮರ್ಶೆಯ ವಿಧಾನ. ಆದರೆ ಪ್ರಸ್ತುತ ಲೇಖನ ವಿಮರ್ಶೆಯ ಈ ಕನಿಷ್ಠ ಮರ್ಯಾದೆಯನ್ನು ಸಹ ಇಟ್ಟುಕೊಂಡಿಲ್ಲ. ಆದ್ದರಿಂದ ಲೇಖನದ ’ದೇಶ ಕಾಲ’ದ ಬಗ್ಗೆ ಪತ್ರಿಕೆಯ ಓದುಗರಲ್ಲಿ ಹುಟ್ಟಿಸಬಹುದಾದ ಅಪಕಲ್ಪನೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಬಯಸುತ್ತೇನೆ. ೧) ’ದೇಶ ಕಾಲ’- ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಸಾಹಿತ್ಯಿಕ, ವೈಚಾರಿಕ ಪತ್ರಿಕೆಯಾಗಿದ್ದು ಕಳೆದ ಐದು ವರ್ಷಗಳಿಂದ ಇದು ಕ್ಲುಪ್ತ ಕಾಲದಲ್ಲಿ ಹೊರ ಬರುತ್ತಿದೆ. ೨) ಈ ಪತ್ರಿಕೆಯ ಸಂಪಾದಕ ವಿವೇಕ ಶಾನಭಾಗ; ಪ್ರಕಾಶಕರೂ ಅವರೇ; ಚಂದದಾರರಿಗೆ ಅದನ್ನು ಮುಟ್ಟಿಸುವ ಹೊಣೆಯನ್ನೂ ಅವರೇ ಹೊತ್ತಿದ್ದಾರೆ. ವಿವೇಕ ಶಾನಭಾಗ ಮತ್ತು ಅವರ ಒಬ್ಬಿಬ್ಬರು ಗೆಳೆಯರ ಶ್ರಮದಿಂದಾಗಿ ಮಾತ್ರ ಪತ್ರಿಕೆ ಹೊರಬರುತ್ತಿದೆ. ದೇಶ ಕಾಲ ಯಾವುದೇ ಸರ್ಕಾರೀ ಸಂಸ್ಥೆ, ವಿಶ್ವ ವಿದ್ಯಾಲಯ, ಮಠ, ಪ್ರತಿಷ್ಠಾನ ಇತ್ಯಾದಿ ಅಧಿಕಾರ ಕೇಂದ್ರಗಳ ಪ್ರಕಟಣೆ ಅಲ್ಲ. ಹಾಗಾಗಿ ಅದರ ಸಂಪಾದಕರು ಸ್ವತ: ತಾನೇ ಹಾಕಿಕೊಂಡಿರುವ ಅಭಿರುಚಿ ಮತ್ತು ವಿವೇಚನಗಳ ಮಾನದಂಡ ಹೊರತುಪಡಿಸಿ, ತನ್ನ ಪತ್ರಿಕೆಗಳ ಬಗ್ಗೆ ಯಾರಿಗೂ ವಿವರಣೆ ನೀಡ ಬೇಕಾದದ್ದಿಲ್ಲ. ೩) ’ದೇಶ ಕಾಲ’ಕ್ಕೆ ಐದು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಕಟವಾದ ವಿಶೇಷಾಂಕದಲ್ಲಿ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಡ್, ಜಯಂತ ಕಾಯ್ಕಿಣಿ, ಯಶವಂತ ಚಿತ್ತಾಲ, ಶ್ರೀನಿವಾಸ ವೈದ್ಯ , ಅಬ್ದುಲ್ ರಶೀದ್, ಗುರುಪ್ರಸಾದ ಕಾಗಿನೆಲೆ, ಪ್ರಹ್ಲಾದ ಅಗಸನ ಕಟ್ಟೆ, ಸುನಂದಾ ಪ್ರಕಾಶ ಕಡಮೆ, ಬಿ.ಟಿ. ಜಾಹ್ನವಿ, ಜೋಗಿ, ಮೊಗಳ್ಳಿ ಗಣೇಶ್, ಕೆ.ಸತ್ಯನಾರಾಯಣ ಮತ್ತು ಅಮರೇಶ್ ನುಗಡೋಣಿಯವರ ಕತೆಗಳಿವೆ; ವಸುಧೇಂದ್ರರ ಕಿರು ಕಾದಂಬರಿ, ರಘುನಂದನ್‌ರ ಪೂರ್ಣಪ್ರಮಾಣದ ನಾಟಕ, ರಾಘವೇಂದ್ರ ಪಾಟೀಲರ ನೀಳ್ಗತೆ ಮತ್ತು ಕುಂವೀಯವರ ಆತ್ಮಚರಿತ್ರೆಯ ಆಯ್ದ ಪುಟಗಳಿವೆ. ವೈದೇಹಿಯವರ ಎರಡು ವಿಶಿಷ್ಟ ಸಂದರ್ಶನ ಲೇಖನಗಳ ಜೊತೆ, ವೀರಪ್ಪ ಮೊಯ್ಲಿ, ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಶೋಭಾ ಕರಂದ್ಲಾಜೆ, ಕೆ.ಎಸ್.ಪುಟ್ಟಣ್ಣಯ್ಯ, ಸುರೇಶ್‌ಕುಮಾರ್ ಮತ್ತು ಕೃಷ್ಣ ಭೈರೇಗೌಡರ ಜೊತೆ ಪ್ರಕಾಶ ಬೆಳವಾಡಿ ನಡೆಸಿರುವ ಸಂದರ್ಶನಗಳಿವೆ. ವಿಶೇಷಾಂಕದಲ್ಲಿ ಕೆ.ವಿ.ಅಕ್ಷರ, ಕೆ.ಸಚ್ಚಿದಾನಂದನ್, ಲಕ್ಷ್ಮೀಶ ತೋಳ್ಪಾಡಿ, ಎಂ.ಎಸ್. ಶ್ರೀರಾಮ್ ಹಾಗೂ ಎಸ್.ಆರ್. ವಿಜಯಶಂಕರರ ಲೇಖನಗಳೊಂದಿಗೆ, ಚಿತ್ರಕಾರ ಎಸ್.ಜಿ.ವಾಸುದೇವ್ ಅವರ ಜೊತೆ ಪ್ರತಿಭಾನಂದಕುಮಾರ್ ಹಾಗೂ ರಂಗಕರ್ಮಿ ಇಕ್ಬಾಲ್ ಜೊತೆ ಎಸ್.ದಿವಾಕರ್ ನಡೆಸಿರುವ ಶಬ್ದ-ರೇಖೆಗಳ ಕುತೂಹಲಕಾರಿ ಪ್ರಯೋಗಗಳಿವೆ. ಕನ್ನಡದಲ್ಲಿ ಈಗ ಬರೆಯುತ್ತಿರುವ ಪ್ರತಿಭಾವಂತಕವಿಗಳ ಜೊತೆ ಯುವ ಕವಿಗಳೂ ಸೇರಿದಂತೆ ೨೫ ಕವಿಗಳ ಪದ್ಯಗಳನ್ನು ವಿಶೇಷಾಂಕ ಒಳಗೊಂಡಿದೆ. ಅದೂ ಅಲ್ಲದೆ ವಿಶೇಷಾಂಕದಲ್ಲಿ ೨೧ ವಿಮರ್ಶಕರು, ೨೧ನೆಯ ಶತಮಾನದ ಭರವಸೆ ಹುಟ್ಟಿಸುವ ೨೧ ಲೇಖಕರ ಬಗ್ಗೆ ಬರೆದಿದ್ದರೆ, ಬಿ.ಎಲ್.ನಾಗಭೂಷಣಸ್ವಾಮಿ, ಟಿ.ಪಿ.ಅಶೋಕ್ ಮತ್ತು ಸಿ.ಎನ್.ರಾಮಚಂದ್ರನ್ ೨೧ನೆಯ ಶತಮಾನದ ೨೧ ಮುಖ್ಯ ಕೃತಿಗಳನ್ನು ಹೆಸರಿಸಿ ಅವುಗಳ ಬಗ್ಗೆ ಬರೆದಿದ್ದಾರೆ. ಇದೊಂದು ಸಚಿತ್ರ ಸಂಪುಟವಾಗಿದ್ದು, ಇಲ್ಲಿ ಅಚ್ಚಾಗಿರುವ ಚಿತ್ರಗಳು ಸಹ ಸದಭಿರುಚಿಯದ್ದಾಗಿದೆ. ಸಮಕಾಲೀನ ಕನ್ನಡ ಬರವಣಿಗೆಯ ಕೆಲವು ಉತ್ತಮ ಮಾದರಿಗಳನ್ನು ಒದಗಿಸುವ ಈ ವಿಶೇಷಾಂಕದಲ್ಲಿ ಕಂಡುಬರದ ಏಕೈಕ ಮುಖ್ಯ ಲೇಖಕರೆಂದರೆ ಹೆಚ್.ಎಸ್.ಶಿವಪ್ರಕಾಶ್. ಅವರ ಗೈರುಹಾಜರಿ ಸಂಪಾದಕರ ವ್ಯಕ್ತಿಗತ ಪೂರ್ವಾಗ್ರಹದಿಂದ ಆಗಿರುವಂತಹದ್ದಲ್ಲ ಎಂಬ ವಿಶ್ವಾಸ ನನಗಂತೂ ಇದೆ. ೪) ’ದೇಶಕಾಲ’ದ ಎಲೈಟಿಸ್ಟ್ ಧೋರಣೆ ಬಗ್ಗೆ ಕೆಲವು ಎಡಪಂಥೀಯರು ಆಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಇದು ವಿಚಿತ್ರವಾಗಿರುವ ಲೇಬಲ್. ಶ್ರೀಮಂತರಿಗೆ ಮಾತ್ರ ಮೀಸಲಾಗಿರುವ ಶಾಲೆ, ಕಾಲೇಜು, ಕ್ರೀಡೆ, ಹೋಟೆಲ್, ಆಸ್ಪತ್ರೆ ಮುಂತಾದವುಗಳನ್ನು ಎಲೈಟಿಸ್ಟ್ ಎಂದು ತಿರಸ್ಕರಿಸುವುದು ಸರಿ. ಸಾಹಿತ್ಯ ನಿಯತಕಾಲಿಕವೊಂದರ ಸೊಗಸಾದ ಮುದ್ರಣ, ವಿನ್ಯಾಸ, ಬರವಣಿಗೆಯ ಕಸಬುಗಾರಿಕೆಇವೆಲ್ಲ ಯಾವತ್ತಿನಿಂದ ಎಲೈಟಿಸ್ಟ್ ಆದವು? ಹಾಗಾದರೆ ತಮ್ಮ ವೃತ್ತಿಗಳಲ್ಲಿ ಅಸಾಧಾರಣ ನೈಪುಣ್ಯ ಪಡೆದಿರುವ ರೈತರು, ಬಡಗಿಗಳು, ಅಕ್ಕಸಾಲಿಗರು, ನೇಕಾರರು ಮುಂತಾದವರು ಸಹ ಎಲೈಟಿಸ್ಟ್‌ಗಳೋ? ದೇಶಕಾಲವನ್ನು ಎಲೈಟಿಸ್ಟ್ ಎಂದು ಹೀಗಳೆಯುವವರು, ಅದರಲ್ಲಿ ಪ್ರಕಟವಾಗಿರುವ ಒಂದು ಬರಹದ ಉದಾಹರಣೆಯಿಂದಲಾದರೂ ತಮ್ಮ ಮಾತನ್ನು ಸಮರ್ಥಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಒರಟುಒರಟಾಗಿ ಬರೆಯುವುದರಿಂದ ಶೋಷಿತರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ; ಶೋಷಿತರ ಚಳುವಳಿಗಳಿಗೂ ಈ ಬಗೆಯ ವಿಮರ್ಶೆಯಿಂದ ಏನೂ ಆಗಬೇಕಾದದ್ದಿಲ್ಲ.]]>

‍ಲೇಖಕರು avadhi

7 July, 2010

7 Comments

  1. aditi

    ji, rajashekhar avaru madikonda atmavanchaneya lekhana odi besaravayitu.

  2. ಪೂರ್ಣಪ್ರಜ್ಞ

    ದೇಶಕಾಲದ ವಿಶೇಶಾಂಕದ ಬಗ್ಗೆ ರಾಜಶೇಖರವರು ಬರೆದ ಪ್ರತಿಕ್ರಿಯೆ ಸಮಂಜಸವಾಗಿದೆ.
    ಶ್ರೀಯುತರಾದ ಐಜೂರ್ ಹಾಗು ಮಂಜುನಾಥರು ಬರೆದ ಲೇಖನ ಕೇವಲ ವಿಡಂಬನೆಯಿಂದ ಕೂಡಿದೆಯೆ ಹೊರತು ವಿಮರ್ಶಾತ್ಮಕ ಮೌಲ್ಯಗಳಿಂದಲ್ಲ. ಈ ಲೇಖನದಲ್ಲಿ ಅವರುಗಳು ದೇಶಕಾಲದ ಸಂಪಾದಕರನ್ನು ದೋಷಿಯೆಂದು ತೀರ್ಮಾನಿಸಿ ತೀರ್ಪನ್ನು ಕೊಟ್ಟೇಬಿಟ್ಟಿದ್ದಾರೆ! ಹಾಗೆ ಮಾಡಿ ಚರ್ಚೆ ಮುಂದುವರಿಸಲಿಕ್ಕೆ ಅವಕಾಶವನ್ನೇ ಕೊಟ್ಟಿರುವುದಿಲ್ಲ. ಮೇಲಾಗಿ, ಎಲ್ಲಕ್ಕೂ ಜಾತಿಯನ್ನು ಎಳೆದುತಂದು ಸಾಹಿತ್ಯದ ಮೌಲ್ಯಮಾಪನ ಮಾಡುವ ಅಗತ್ಯವಾದರೂ ಏನಿದೆ? ಸಾಹಿತ್ಯ ಬರೆಯುವವನು ಅವನ ಸಮಾಜದ ಸ್ಪಂದನೆಯನ್ನು ಅಭಿವ್ಯಕ್ತಿಗೊಳಿಸುತ್ತಾನೆಯೆ ಹೊರತು ಬೇರೆ ಸಾಧ್ಯವಿಲ್ಲ. ಅಲ್ಲವೆ?
    ನಾನು ಮತ್ತೆ ನನ್ನ ಹತ್ತಿರ ಇದ್ದ ದೇಶಕಾಲದ ಹಳೆಯ ಪ್ರತಿಗಳನ್ನು ತಿರುವಿ ಹಾಕಿ ನೋಡಿದೆ. ಅಲ್ಲಿ ಎಲ್ಲಾ ತರಹದ ಲೇಖಕರನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ಮೌಲ್ಯಕ್ಕೆ ಒತ್ತು ಕೊಟ್ಟಿದ್ದಾರೆಯೆ ಹೊರತು ಜಾತಿಗಲ್ಲ ಯೆಂಬುದು ನನ್ನ ದೃಡ ನಂಬಿಕೆ.
    ಎಲ್ಲಕ್ಕಿಂತ ಮಿಗಿಲಾಗಿ ಕನ್ನಡದವರಿಂದ, ಕನ್ನಡಕ್ಕಾಗಿ, ಕನ್ನಡದಲ್ಲಿ ಒಂದು ಒಳ್ಳೆಯ ಕೆಲಸ ಆಗಿದೆ. ಅದನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸೋಣ.

  3. sreepathi

    ದೇಶಕಾಲದ ವಿಶೇಶಾಂಕದ ಬಗ್ಗೆ ರಾಜಶೇಖರವರು ಬರೆದ ಪ್ರತಿಕ್ರಿಯೆ ಸಮಂಜಸವಾಗಿದೆ.

  4. jyothi umesh

    Aditiyavare, Enu “atmavanchane” antha swalpa sariyaagi vivarisi, please. Idella tumba “klishta” padagaLu.. arthavaagtha illa.. pl..

  5. aditi

    jyotiyavre e salada gouri lankesh patrikeya pratikriyeyannu odi hiriyarada rajashekhara avaru madikonda ‘atmavnchane’ge alli nidarshanagalive. avaru karnatakada sakshiprajne agiddaga nanagoo avara bagge gourava ittu. adare deshakalada sakshiprajne adaga besaravayitu.

  6. m. byregowda

    ondu vishayada mele apadane maduvaga adara ella majalugalannu alochisi apadisabeku. jati hesarininda chedisalu neevu balasiruv bhasheye nimage todarugalagide. neevu helabekaagiruvudannu dayavittu sariyada shabdagalli heli. vimarshe embudu yaavagalu arogyapoornavagirbeku. rajashekarara matugalannu nodiyadaru kaliyiri. yaroo yava jatiya vakalattannu vahisabekilla. yaru yava jaatiya guttigeyannu padedilla. dayavittu bhasheyannu sudharisikolli.

  7. ಹುಲಿಕುಂಟೆ ಮೂರ್ತಿ

    ಜಿ.ರಾಜಶೇಖರ್ ಸರ್ ಇಷ್ಟು ತೆಳುವಾಗಿ ಪ್ರತಿಕ್ರಿಯಿಸುವರು ಎಂದು ಅಂದುಕೊಂಡಿರಲಿಲ್ಲ.. ನಿಜವಾಗಿ ದೇಶಕಾಲದ ಬಗ್ಗೆ ಚಂದ್ರು ಮತ್ತು ಮಂಜುನಾಥ್ ಎತ್ತಿದ ಪ್ರಶ್ನೆಗಳನ್ನು ಇಂಥವರು ಎತ್ತಬೇಕಿತ್ತು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading