-ಡಾ ಶ್ರೀರಾಮ ಇಟ್ಟಣ್ಣವರ
ಅನುವಾದ ಕವಿತೆಗಳ ಟಿಪ್ಪಣಿ
ಯುದ್ದ ವಿರೋಧಿ ಶಾಂತಿ ಕವಿತೆಗಳನ್ನೊಳಗೊಂಡ ಈ ಸಂಕಲನದಲ್ಲಿ ದೇವೂ ಮಾಕೊಂಡ ಅವರಿಂದ ಕನ್ನಡಕ್ಕೆ ಅನುವಾದಗೊಂಡ ದೇಶ ವಿದೇಶ ಕವಿಗಳ ೫೧ ಇಂಗ್ಲಿಷ್ ಕವಿತೆಗಳಿವೆ.
ಯುದ್ಧ ಎನ್ನುವುದು ಸಾವಿರಾರು ವರ್ಷಗಳಿಂದ ಮನುಷ್ಯ ಕಟ್ಟಿಕೊಂಡುಬಂದ ಸಂಸ್ಕೃತಿಯನ್ನು ಹಾಳುಗೆಡಹುತ್ತದೆ;ನಮ್ಮನ್ನು ಕೊಲ್ಲುತ್ತದೆ.ಕೀರ್ತಿ ಲಾಲಸೆ, ಮತೀಯ ಅಂಧಾಭಿಮಾನ, ಆತ್ಮ ಸಂರಕ್ಷಣೆ ಹೀಗೆ ಯುದ್ಧಕ್ಕೆ ನೂರು ಕಾರಣವಿದ್ದರೂ ಘೋರ ಪರಿಣಾಮ ಮಾತ್ರ ಒಂದೇ ಅದು ವಿನಾಶ.
ಜಗತ್ತಿನ ತುಂಬ ಯುದ್ಧ ವಿರೋಧಿಸುವ ಪ್ರಬುದ್ಧ ರಾಜಕಾರಣಿಗಳಿದ್ದಾರೆ,ಬುದ್ಧಿ ಜೀವಿಗಳಿಗಳಿದ್ದಾರೆ, ಅನುಭಾವಿಗಳಿದ್ದಾರೆ.ಇವರೆಲ್ಲರ ದನಿಗೆ ಕಿವುಡಾದ ಮನುಷ್ಯ ಮನಸ್ಸಿನ ವಿಕಾರಗಳು ಮನುಷ್ಯ ಸಂತಿಯನ್ನು ಹಾಳುಗೆಡಹುತ್ತಿವೆ.ಇದು ಬರಿ ಇಂದು ನಿನ್ನೆಯದಲ್ಲ. ಯುದ್ಧದ ಕ್ರೌರ್ಯ ಶಾಂತಿ ಶಕ್ತಿಯನ್ನು ಹ್ರಾಸಗೊಳಿಸುತ್ತಲೇ ಬಂದಿದೆ.
ಹೀಗಿರುವ ಯುದ್ಧದ ಭೀಕರತೆಯನ್ನು ಹಲವು ನೆಲೆಗಳಲ್ಲಿ ಇಲ್ಲಿಯ ಕವಿತೆಗಳು ತೆರೆದಿಟ್ಟಿವೆ.ಡೇವಿಡ್ ರಾಬರ್ಟ್ಸ್, ರವೀಂದ್ರನಾಥ ಟ್ಯಾಗೋರ್,ಡಿ.ಎಚ್.ಲಾರೆನ್ಸ್ , ಗ್ಲೇನ್ನಿ ಲಿನೋ ಮೊದಲಾದವರ ಮಾತುಗಳೆಲ್ಲ ವಿವರಗಳಾಗಿ, ವ್ಯಾಖ್ಯೆಗಳಾಗಿ ಕವಿಯ ಅಂತರಂಗದ ವೇದನೆಗಳಾಗುತ್ತವೆ.
ಸಂಕಲನದ ತುಂಬ ನೋವಿನ ದನಿಯಿದೆ.
ಯುದ್ಧ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಗೋಡೆಗೆ ಒರಗಿ ಕುಳಿತುಕೊಂಡಿರುವ ಮಕ್ಕಳು ಒಂದೆಡೆ ಕಾಣಸಿಗುತ್ತಾರೆ.ತನ್ನ ಪ್ರೀತಿಯ ಗಂಡನ ಬರುವಿಕೆಗಾಗಿ ಕಾಯುತ್ತ ಪತ್ನಿಯೊಬ್ಬಳು ಕುಳಿತಿದ್ದಾಳೆ.ಇನ್ನೂ ಗರ್ಭದಿಂದ ಜನಿಸದೆ ಇರುವ ಮಗುವಿಗೆ ಹೆಣದ ಚೀಲ ಹೊಲಿಯುತ್ತಿರುವ ನತದೃಷ್ಟ ತಾಯಿಯೊಬ್ಬಳು ಇನ್ನೊಂದೆಡೆಗಿದ್ದಾಳೆ.
ಯುದ್ಧ ವಿದ್ರೋಹಿಗೆ ಶಾಂತಿ ಮಂತ್ರಗಳನ್ನು ಅನೇಕ ಕವಿಗಳು ಹೇಳಿದ್ದಾರೆ.
ನಾನು ತ್ಯಾಗ ಮತ್ತು ಸತ್ಯದ ಹುಡುಕಾಟದಲ್ಲಿದ್ದೇನೆ ಎನ್ನುವ ಮೊಹಸಿನ್ ಬಿನ್ ಮುಸ್ತಾಕ್ ಶಾಂತಿಯನ್ನು ನೆನೆಯುತ್ತಾನೆ.
ಶಾಂತಿ ಎಂಬುದು ಪ್ರತಿ ಸೈನ್ಯಕ್ಕೂ ಪರಮ ಶತ್ರುವೆನ್ನುವ ಡಾ.ಆಪೋಸ್ಟಲೋಸ್ ಅದು ನಾಗರಿಕತೆಯ ಬ್ರಹ್ಮಾಂಡ ಸಮೃದ್ಧಿ ಎನ್ನುತ್ತಾನೆ.
ಯಾಘಿ ಲೈಲಾನ ಕವಿತೆಯ ಕೊನೆಯಲ್ಲಿ ತಾಯಿಯೊಬ್ಬಳು ‘ನಮ್ಮ ಮಕ್ಕಳನ್ನು ಕೊಲ್ಲುವುದ ನಿಲ್ಲಿಸಿ,ನಮ್ಮ ಮಕ್ಕಳನ್ನು ಕೊಲ್ಲುವುದ ನಿಲ್ಲಿಸಿ’ ಎಂದು ಕೂಗುತ್ತಿದ್ದಾಳೆ.ಇದು ತಾಯಿಯ ಒಡಲ ಉರಿಯಾಗಿರುವಂತೆ ಶಾಂತಿಯ ಕರೆಯೂ ಆಗಿದೆ.
ಹೀಗೆ ಯುದ್ಧ ಭೀಕರತೆಗೆ ಕವಿಗಳನೇಕ ಸಂತಾಪಗೊಂಡು ಶಾಂತಿ ಪಾಠ ಪಠಿಸುತ್ತಾರೆ.ಆದರೆ ಶಾಶ್ವತ ಪರಿಹಾರದ ಬೆಳಕು ತೋರುವ ಯಾವುದೇ ಅಜೆಂಡಾ ಇವರ ಮುಂದಿಲ್ಲ.
ಕವಿತೆಗಳನ್ನು ಓದುತ್ತ ಹೋದಂತೆ ಇಲ್ಲಿಯ ನೋವು ನಮ್ಮದೂ ಆಗಿಬಿಡುತ್ತದೆ.ಅನುವಾದಗಳ ಸಾರ್ಥಕತೆಯೇ ಇದು.ದೇವೂ ಮಾಕೊಂಡ ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.ಮಾಕೊಂಡ ಅವರು ಇದುವರೆಗೆ ಐದು ಪುಸ್ತಕಗಳನ್ನು ಹೊರತಂದಿದ್ದಾರೆ.ಇದು ಆರನೆಯದು.ದೇವೂ ಅವರಲ್ಲಿ ಇತ್ತಿತ್ತಲಾಗಿ globalisation ಪರಿಕಲ್ಪನೆ ದಟ್ಟವಾಗುತ್ತಿದೆ.ಇಂಥದೊಂದು ಪ್ರಜ್ಞೆ ಕವಿಯನ್ನು ಬೆಳೆಸುತ್ತದೆ, ಮನುಷ್ಯನನ್ನು ಬೆಳೆಸುತ್ತದೆ.






0 Comments