ಶ್ಯಾಮಲಾ ಮಾಧವ್
**
ನನ್ನ ‘ತುಷಾರ ಹಾರ’ವನ್ನು ತನ್ನದಾಗಿಸಿಕೊಂಡು ಅತ್ಯಂತ ಹೃದ್ಯವಾದ ಮುನ್ನುಡಿ ಬರೆದು ನನ್ನಂತರಂಗದಲ್ಲಿ ಸ್ಥಾಯಿಯಾದವರು ಪ್ರಸಾದ್ ನಾಯ್ಕ್. ಈ ನಮ್ಮ ಪ್ರತಿಭಾವಂತ ಯುವ ಸಾಹಿತಿಯನ್ನು ಮುಂಬೈಯ ನಮ್ಮ ಮೈಸೂರ್ ಅಸೋಸಿಯೇಶನ್ ಗೆ ಕರೆದೊಯ್ದು ನಮ್ಮ ಸೃಜನಾ ಸದಸ್ಯೆಯರನ್ನೂ, ಮುಂಬೈಯ ಇತರ ಸಾಹಿತ್ಯಾಸಕ್ತರನ್ನೂ ಭೇಟಿಯಾಗಿಸುವ ಸಂತಸ ನನ್ನದಾಯ್ತು. ಪ್ರಸಾದ್ ಮುಂಬೈಗೆ ಹೊರಟ ದಿನ, ಮೊನ್ನೆ ಜುಲೈ ಎಂಟರ ಬಿರುಮಳೆಯಿಂದ ಮುಂಬೈ ಮುಳುಗಿದಂತೆ ಆದ ದಿನ. ಅವರು ಮುಂಬೈ ಸಮಯದಲ್ಲಿ ತಲುಪುವ ಬಗ್ಗೆ ಸಂಶಯವಿದ್ದರೆ, ಅವರಿಗಾಗಿಯೇ ದಾರಿ ಮಾಡಿದಂತೆ ಫೋರ್ ಕಾಸ್ಟ್ ಸುಳ್ಳಾಗಿ ಮಳೆ ನಿಂತು ಪ್ರಸಾದ್ ದಾರಿ ಸುಗಮವಾಯ್ತು.
ಮೈಸೂರ್ ಅಸೋಸಿಯೇಶನ್, ಸೃಜನಾ ಲೇಖಕಿಯರು ಹಾಗೂ ಇತರ ಸಾಹಿತ್ಯಾಸಕ್ತರು ಮೈಸೂರ್ ಅಸೋಸಿಯೇಶನ್ ನಲ್ಲಿ ಕಾದಿದ್ದರು. ‘ಹಾಯ್ ಅಂಗೋಲಾ’ದಿಂದ ಆರಂಭಿಸಿ, ತಮ್ಮ ವೃತ್ತಿ, ಪ್ರವೃತ್ತಿಗಳ ಅನುಭವ ಕಥನವನ್ನು ಹಂಚಿಕೊಂಡ ಪ್ರಸಾದ್ ಮಾತುಗಳಿಗೆ ಶ್ರೋತೃಗಳು ಕಿವಿಯಾಗಿ ಸಂಪನ್ನರಾದರು. ಅಲ್ಲಿಯ ಕಡು ದಾರಿದ್ರ್ಯದ ಜನಜೀವನ ಚಿತ್ರಣವನ್ನು, ವಾರಿಸ್ ಡಿರಿಯ ‘ಸಫಾ’ ದಲ್ಲಿ ಚಿತ್ರಿತವಾದ ಸ್ತ್ರೀಕುಲದ ಅಮಾನುಷ ಬವಣೆಗಳನ್ನು ಪ್ರಸಾದ್ ತೆರೆದಿಟ್ಟರು. ತಮ್ಮ ಅನುವಾದದಲ್ಲಿ ಪ್ರಕಟವಾಗಲಿರುವ ಜೆರಿ ಪಿಂಟೋ ಅವರು ಸಂಗ್ರಹಿಸಿದ ಕಥಾನಕಗಳ ಮಾನಸ ಮಾಯಾ ಲೋಕದ ಚಿತ್ರಗಳಲ್ಲಿನ ತಮ್ಮ ಆಸಕ್ತಿಯನ್ನು, ಇತ್ತೀಚೆಗೆ ತಾವು ತೊಡಗಿಸಿಕೊಂಡಿರುವ ಮಕ್ಕಳ ಸಾಹಿತ್ಯ ಕೃಷಿಯ ಒಲವನ್ನು ವಿವರಿಸಿದರು. ತಾವು ತೊಡಗಿಕೊಂಡ ಅಂಕಣ ಬರಹಗಳ ಬಗ್ಗೆ, ವಿವಿಧ ಜಾಲತಾಣಗಳಲ್ಲಿನ ತಮ್ಮ ತೊಡಗಿಸಿಕೊಳ್ಳುವಿಕೆಯ ಬಗ್ಗೆ ತಿಳಿಸಿದರು.
ದೆಹಲಿ ಕರ್ನಾಟಕ ಸಂಘ ಹಾಗೂ ದೆಹಲಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಚಟುವಟಿಕೆಗಳ ಮಾಹಿತಿ ನೀಡಿದರು. ಕರೆಗೆ ಪ್ರೀತಿಯಿಟ್ಟು ಆಗಮಿಸಿದ ಮೈಸೂರ್ ಅಸೋಸಿಯೇಶನ್ ನ ಡಾ.ಮಂಜುನಾಥ್ ಹಾಗೂ ಡಾ.ಮಂಜುನಾಥಯ್ಯ, ಬಹಳ ಸಕ್ರಿಯರಾಗಿ ಸಂವಾದದಲ್ಲಿ ಭಾಗಿಯಾಗಿ ತಮ್ಮ ಆಫ್ರಿಕಾ ಖಂಡದ ಅನುಭವಗಳನ್ನೂ ಹಂಚಿಕೊಂಡರು. ಅಸೋಸಿಯೇಶನ್ ನ ಗೆಳತಿ ಭವಾನಿ ಭಾರ್ಗವ್, ಸೃಜನಾ ಸಂಚಾಲಕಿ ಪದ್ಮಜಾ ಮಣ್ಣೂರು, ಸೃಜನಾ ಸಂಸ್ಥಾಪಕಿ ಸಾಹಿತಿ ಡಾ.ಸುನೀತಾ ಶೆಟ್ಟಿ, ಉಪ ಸಂಚಾಲಕಿ ಜಿ.ಪಿ.ಕುಸುಮ್, ಮಿತ್ರಾ ವೆಂಕಟ್ರಾಜ್, ಅಮಿತಾ ಭಾಗ್ವತ್, ಯಶೋದಾ ಶೆಟ್ಟಿ, ಕೆರೆಗೆ ಓಗೊಟ್ಟು ಬಂದ ಸಾ. ದಯಾ, ಕೆ.ಎಮ್. ಕೋಟ್ಯಾನ್, ಡಾ.ನವಿಲೇಕರ್ ಹೀಗೆ ಪ್ರಸಾದ್ ಮಾತುಗಳಿಗೆ ಕಿವಿಯಾಗಿ, ಜೊತೆಗೆ ಸಂವಾದದಲ್ಲಿ ಭಾಗವಹಿಸಿದ ಸಾಹಿತ್ಯಾಸಕ್ತರಿಂದ ಈ ಸಾಹಿತ್ಯ ಸಂಜೆ ಬಲು ಸೊಗಸಾಗಿ ಸಂಪನ್ನವಾಯ್ತು. ಪ್ರಸಾದ್, ಮತ್ತೆ ಮತ್ತೆ ಬರುತ್ತಿರಿ, ನಮ್ಮ ಮುಂಬೈಗೆ.
ಪ್ರಸಾದ್ ಅವರ ಭೇಟಿಯ ಸುಮಧುರ ಕ್ಷಣಗಳ ಫೋಟೋಗಳು ಇಲ್ಲಿವೆ.
**














0 Comments