ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದುರ್ಗಾಪುರದ ‘ವ್ಯಾಸ’ ಪಥ

‘ವ್ಯಾಸ ಎಂದರೆ ವಿಚಾರ; ವಿಚಾರ ಎಂದರೆ ವ್ಯಾಸ’

ಸಂತೋಷ್ ಅನಂತಪುರ

ಚಿತ್ರ : ಪ್ರತಿಮಾ ಎಸ್

ವಸ್ತು, ವಿಷಯ, ಬಂಧಗಳು ಯಾಕೆ ಇಷ್ಟವಾಗುತ್ತವೆ ಎನ್ನುವುದಕ್ಕೆ ಯಾವುದೇ ರೀತಿಯ ಖಚಿತ ಕಾರಣಗಳು ಬೇಕಾಗಿರುವುದಿಲ್ಲ. ಇಷ್ಟವಾಯಿತು ಅಷ್ಟೇ. ಅಂತರಂಗದ ಒಳ ಬೇಗುದಿಯು ಒಳಗೊಳಗೇ ಕುದಿಕುದಿದು ಸ್ಫೋಟಗೊಂಡು ವ್ಯರ್ಥವಾಗಬಾರದು. ಅಂತಹದ್ದೊಂದು ಕುದಿಯನ್ನು ಸರಿಯಾದ ಹಾದಿಯಲ್ಲಿ ಹಾಯಿಸಿದೆವೆಂದಾದರೆ; ಹರಿವ ಸುಖವನ್ನು ಅನುಭವಿಸಲು ಸಾಧ್ಯ.

ಆ ತರದ ಸಮಾಧಾನದ ಹರಿವನ್ನು ನೀಡುವ ಕಾರ್ಯವನ್ನು ಮನಸ್ಸು ಆಗಾಗ ಮಾಡುತ್ತಿರಬೇಕು. ಅಂತಹದ್ದೊಂದು ನಿರ್ಣಯಕ್ಕೆ ಯಾವಾಗ ಮನಸ್ಸು ಬರುತ್ತದೋ ಆವಾಗಲೇ ಒಳತುಡಿತ, ದುಮ್ಮಾನ, ಬೇಗುದಿಗಳೆಲ್ಲವನ್ನೂ ಹೊರಚೆಲ್ಲಿ ಹಗುರವಾಗುವುದಕ್ಕೆ ಸಾಧ್ಯವಾಗುವುದು. ಆ ರೀತಿಯ ರಹದಾರಿಯೊಂದು ಕತೆ-ಕಾವ್ಯ-ಲೇಖನಗಳ ಮುಖೇನವೇ ಮೂಡುವುದು. ಅಕ್ಷರಗಳಿಗೆ ಭಾವನೆಗಳನ್ನು ತೊಡಿಸಿ ರೂಪುಗೊಳ್ಳುವ ಭಾವಾಕಾರವದು.

ಯಾಕಾಗಿ? ಯಾರಿಗಾಗಿ? ಎಂಬೆಲ್ಲಾ ಅಸಂಗತ ಪ್ರಶ್ನೆಗಳಿಗೆ ಉತ್ತರಿಸುವ ದರ್ದು ತೋರದೆ, ತುರ್ತಾಗಿ ನಿರಾಳವಾಗಲು, ನಿರುಮ್ಮಳಗೊಳ್ಳಲು ಇರುವ ಏಕೈಕ ಮಾರ್ಗವೇ ಬರವಣಿಗೆ. ನಮ್ಮದೇ ಲೋಕದ ಸೃಷ್ಟಿ-ಲಯಕಾರರಾಗಿ ಬೆಳೆದು ನಿಂತು ನಿಟ್ಟುಸಿರಿಡುವ ಸೊಗಸು ಬೇರೆಲ್ಲೂ ದೊರಕದು.

ಬಾಹ್ಯದಲ್ಲಿ ಶಿಷ್ಟವೆನಿಸಿಕೊಂಡ, ಎಲ್ಲರಿಗೆ ಮುಟ್ಟಲೂ ಸಾಧ್ಯವಾಗದ ಮನುಷ್ಯ ಒಳಮನಸ್ಸಿನ ದುಷ್ಟ ವಿಕಾರಗಳನ್ನು ಕುಟ್ಟಿ, ಮುಟ್ಟಿ, ಬಡಿದೆಬ್ಬಿಸಿ, ಪದರು ಪದರುಗಳಾಗಿ ಬಿಡಿಸಿ, ಕೊಯ್ದು ಸಾಹಿತ್ಯ ಕೃಷಿ ಮಾಡಿದವರು- ‘ಎರಡಕ್ಷರದ ವಿಶೇಷ ಕತೆಗಾರ ಎಂ.ವ್ಯಾಸ’. ಅದೆಷ್ಟು ಮಂದಿಗೆ ವ್ಯಾಸ ಅರ್ಥವಾದರು? ಎಂಬ ಪ್ರಶ್ನೆಯು ವ್ಯಾಸರು ಬರೆಯಲು ತೊಡಗಿದಂದಿನಿಂದ ಇಂದಿನವರೆಗೂ ಕಾಡುತ್ತಲೇ ಇರುವ ಪ್ರಶ್ನೆ. ಕಾಲವುರಳುತ್ತಲೇ ಪ್ರಶ್ನೆಯೂ ಗಂಭೀರಗೊಳ್ಳುತ್ತಾ ಹೋಗಿ ಅರ್ಥವಾಗಿಸಿಕೊಂಡವರು ಒಂದಷ್ಟು. ಇನ್ನಷ್ಟು ಅರ್ಥವಾದರೂ ಅರ್ಥವಾಗಲಿಲ್ಲವೆಂದರು. ಬಹಳಷ್ಟು ಅರ್ಥವಾಗಿಸಿಕೊಳ್ಳುವ ದಾರಿಯಲ್ಲಿ ಕ್ರಮಿಸುತ್ತಿರುವವರು.

ಎಂ.ವ್ಯಾಸರು ಉಸಿರು ಚೆಲ್ಲಿ ಹದಿಮೂರು ವರ್ಷಗಳೇ ಸರಿದು ಹೋಗಿವೆ. ಇತ್ತೀಚೆಗೆ ‘ಕ್ಲಬ್ ಹೌಸ್’ನಲ್ಲಿ ಎಂ.ವ್ಯಾಸರು ಅಗಲಿದ ದಿನದಂದು ಅವರ ಕುರಿತಂತೆ ಹಾಗೂ ಅವರ ಬರಹಗಳ ಬಗ್ಗೆ ಸಂವಾದವೊಂದು ನಡೆದಿತ್ತು. ವ್ಯಾಸರನ್ನು ಇಷ್ಟಪಡುವ ಬಹಳಷ್ಟು ಮಂದಿ ಮತ್ತು ವ್ಯಾಸ ಎಂಬ ಕೌತುಕವನ್ನು ಅರಿಯಲು ಹಪಹಪಿಸುವ ಹೊಸ ಪೀಳಿಗೆಯ ಓದುಗ ವರ್ಗವೊಂದು ಅಲ್ಲಿ ಪಾಲ್ಗೊಂಡಿತ್ತು.

ಅಂದು ಅವರ ಮಗಳು ‘ಪ್ರತಿಮಾ’ರ ಬಳಿ ಮಾತನಾಡುವಂತೆ ‘ಅಡ್ಡ್ ಕಸಬಿ ಅಡ್ಡ’ ತಂಡದ ಮೊಡರೇಟರ್ ‘ಜಯರಾಮಾಚಾರಿ’ ಕೇಳಿಕೊಂಡಾಗ- ‘ಸರ್, ಅಪ್ಪ ಇಲ್ಲದ ಹದಿಮೂರು ವರ್ಷಗಳೇ ಕಳೆದರೂ, ಇಂದಿಗೂ ಹದಿಮೂರು ವರ್ಷದ ಹಿಂದಿನ ಅದೇ ಜುಲೈ 23ರಲ್ಲಿ ನಾವು ಮನೆ ಮಂದಿಯೆಲ್ಲರೂ ಇದ್ದೇವೆ. ಮಾತುಗಳು ಹೊರಳುತ್ತಿಲ್ಲ. ಅಪ್ಪನಂತೆಯೇ ನಾವು ಮೂರು ಜನ ಮಕ್ಕಳಿಗೂ ಮಾತು ಕಡಿಮೆಯೇ. ನಮ್ಮದೇನಿದ್ದರೂ ತಾಳ್ಮೆಯ ಕೇಳ್ಮೆ ಮಾತ್ರ. ಅಪ್ಪನ ಪ್ರತಿಯೊಂದು ಬರಹದ ಮೊದಲ ಓದುಗ- ‘ಅಮ್ಮ’ ಆಗಿದ್ದರು’ ಎಂದು ಸ್ಪುಟವಾಗಿ ಹೇಳಿ ಭಾರ ತುಂಬಿದ ಭಾವದೊಂದಿಗೆ ವೇದಿಕೆಯನ್ನು ‘ವ್ಯಾಸ ಪ್ರೇಮಿ’ಗಳಿಗೆ ಬಿಟ್ಟು ಕೊಟ್ಟಿದ್ದರು. ಗುಪ್ತಗಾಮಿನಿಯಾಗಿ ರಾಜ್ಯದಾದ್ಯಂತ ವ್ಯಾಸರು ಅದೆಷ್ಟು ಹರಿದಿದ್ದಾರೆ, ಹರಿಯುತ್ತಿದ್ದಾರೆ ಎಂಬುದರ ವೇದ್ಯವು ಅಂದಾಯಿತಲ್ಲಿ.

ಮಂಗಳೂರಿನ ‘ಆಕೃತಿ ಆಶಯ ಪಬ್ಲಿಕೇಷನ್’ ಪ್ರಕಟಿಸಿದ, ‘ವರದರಾಜ ಚಂದ್ರಗಿರಿ’ ಸಂಪಾದಕತ್ವದ ‘ದುರ್ಗಾಪುರದ ವ್ಯಾಸ ಪಥ’-ಎಂ.ವ್ಯಾಸರ ಸಾಹಿತ್ಯಲೋಕದ ಪರಿಚಯದ ಕೃತಿಯಲ್ಲಿ, ‘ಬನ್ನಂಜೆ ಗೋವಿಂದಾಚಾರ್ಯ, ಕಿ.ರಂ.ನಾಗರಾಜ್, ಎ.ಈಶ್ವರಯ್ಯ, ಕೆ.ವಿ ತಿರುಮಲೇಶ್, ಸುಬ್ರಾಯ ಚೊಕ್ಕಾಡಿ, ಲಕ್ಷೀಶ ತೋಳ್ಪಾಡಿ, ಜಯಂತ ಕಾಯ್ಕಿಣಿ, ಜಿ.ಪಿ.ಬಸವರಾಜ್, ಎನ್. ಎಸ್. ಶ್ರೀಧರ ಮೂರ್ತಿ. ಮುರಳೀಧರ ಉಪಾಧ್ಯ ಹಿರಿಯಡ್ಕ, ಡಾ. ಯು ಮಹೇಶ್ವರಿ, ಡಾ. ಮಣಿಮಾಲಿನಿ ವಿ.ಕೆ, ಡಿ.ವಿ.ಪ್ರಹ್ಲಾದ್, ಡಾ.ನಾ.ದಾ.ಶೆಟ್ಟಿ ಸೇರಿದಂತೆ ಇನ್ನೂ ಹಲವರು ‘ವ್ಯಾಸ ಪಥ’ ಕುರಿತಂತೆ ಮನಸ್ಸು-ಹೃದಯ ಬಿಚ್ಚಿ ಬರೆದಿದ್ದಾರೆ, ಆಡಿದ್ದಾರೆ, ಹಾಡಿದ್ದಾರೆ.

‘ಇಪ್ಪತ್ತನೇ ಶತಮಾನದ ಉದಾರ ಮಾನವತಾವಾದ, ಆ ನಂತರ ಮಾರ್ಕ್ಸ್ ವಾದದತ್ತ, ಮುಂದೆ ಕಿರ್ಕ್ ಗಾರ್ಡ್, ಸಾರ್ತ್ರೆಯ ಜೊತೆಗೆ ಸಾಗಿ ಸಿಗ್ಮನ್ಡ್ ಫಾಯ್ಡ್ ತನಕವೂ ಕನ್ನಡ ಸಾಹಿತ್ಯವು ಹರಿದು ಬಂದಿತು. ಇವುಗಳಲ್ಲಿ ವ್ಯಾಸರ ಕತೆಗಳನ್ನು ಗಮನಿಸಿದಾಗ ಅವರದ್ದು ‘ಫ್ರಾಯ್ಡ್ ಮತ್ತು ಸಾರ್ತ್ರೆ’ಯರ ಸಿದ್ಧಾಂತದ ಮಿಶ್ರಣ ಎಂದೇ ಗುರುತಿಸುವ ‘ವಿಶ್ಲೇಷಣಾತ್ಮಕ ಅಸ್ತಿತ್ವವಾದ’ದ ನಿಲುವಿಗೆ ಹತ್ತಿರವಿದ್ದಂತೆ ಕಾಣುತ್ತಿದೆ’ ಎಂದು ಎಂ.ವ್ಯಾಸರ ನಿಕಟವರ್ತಿ ಹಾಗೂ ಆಪ್ತ ಬಂಧು ಎ.ಈಶ್ವರಯ್ಯ ಹೇಳಿದ್ದಾರೆ.

ಮುಂದುವರಿದು, ‘ವ್ಯಾಸರ ಕತೆಗಳಿಗೆ ತುಸು ಪೂರ್ವ ತಯಾರಿಯ ಅಗತ್ಯವಿದೆ’ ಎಂದು ಹೇಳುವ ಈಶ್ವರಯ್ಯ, ‘ವ್ಯಾಸರ ಕತೆಯಲ್ಲಿ ಒಂದು ಶಿಸ್ತುಬದ್ಧ ಆರಂಭ-ಮಧ್ಯ-ಅಂತ್ಯ ಇರುವುದಿಲ್ಲ. ತುಂಡು, ತುಣುಕುಗಳೇ ತುಂಬಿರುತ್ತವೆ. ಆದರೆ ಒಂದು ವಿಚಾರಧಾರೆ ಮಾತ್ರ ಉದ್ದಕ್ಕೂ ಹರಿಯುತ್ತಿರುತ್ತದೆ’ ಎಂದೂ ವಿಶ್ಲೇಷಿಸುತ್ತಾರೆ.

‘ಕತೆ ಒಂದು ಮೊಳೆಯಾದರೆ ಅಲ್ಲಿ ತೂಗುವುದು ವಿಚಾರ ಎಂಬ ಕೋಟು’ ಎನ್ನುವುದನ್ನು ನಿರೂಪಿಸಿ, ಎಂ.ವ್ಯಾಸರ ಸಂಸ್ಮರಣೆಯಲ್ಲಿ ಎ.ಈಶ್ವರಯ್ಯ ಆಡಿರುವ ಮಾತುಗಳೂ ಈ ಪುಸ್ತಕದಲ್ಲಿ ಅಡಕವಾಗಿರುವುದು ‘ವ್ಯಾಸ ಪಥ’ದ ಕಳೆಯನ್ನು ಹೆಚ್ಚಿಸಿದೆ.

ಆಯಾ ಕಾಲಘಟ್ಟದಲ್ಲಿ ನಡೆಯುವ ಮಂಥನಗಳು ಪರಾಮರ್ಶಿಸುವ ಇಷ್ಟಾನಿಷ್ಟಗಳೇ ನೈಜವಾದದ್ದು ಎಂದು ಪ್ರತಿಪಾದಿಸುವ ಚಿಂತಕರ ಚಾವಡಿಯು ಎಲ್ಲಾ ಕಾಲದಲ್ಲೂ ಇದ್ದದ್ದೇ. ಅಲ್ಲಿ ಮೊಹರು ಬಿದ್ದಿತೆಂದರೆ ಮುಂದೆ ಆ ಕೃತಿಯು ಸರ್ವತ್ರ ಸ್ವೀಕಾರಕ್ಕೆ ಯೋಗ್ಯವೆಂದರ್ಥ. ಇಲ್ಲವಾದಲ್ಲಿ ಅತ್ಯಂತ ಶ್ರೇಷ್ಠ ಕೃತಿಯೂ ಸಹ ನಿರರ್ಥಕವೆನಿಸಿ ಬಿಡುತ್ತಿತ್ತು. ಆ ಕಾರಣದಿಂದಲಾಗಿ ಕನ್ನಡ ಸಾಹಿತ್ಯಲೋಕದ ಬಹುಪಾಲು ಲೇಖಕ, ಕವಿ, ಕತೆಗಾರರಿಗೆ ಪ್ರತಿಭೆಯಿದ್ದರೂ ಮುನ್ನಲೆಗೆ ಬರಲಾಗಲಿಲ್ಲ. ಮುದ್ರೆ ಒತ್ತುವ ಚಿಂತಕರ ಚಾವಡಿಯಿಂದ ಅಂಗೀಕಾರ ಪಡೆದುಕೊಳ್ಳದಿರುವುದೇ ಕೃತಿಯೊಂದರ ಮುಖ್ಯ ಮಾನದಂಡವಾಗಲು- ಅದೆಷ್ಟೋ ಪ್ರಮುಖ ಕೃತಿ ಮತ್ತು ಕೃತಿಕಾರರಿಗೆ ಬೆಳೆದು ಬೆಳಗುವ ಭಾಗ್ಯವು ದೊರಕಲೇ ಇಲ್ಲ. ಸಿದ್ಧ ಸೂತ್ರದೊಳಕ್ಕೆ ಬಂಧಿಯಾಗಿ ಉಸಿರಾಡಿದರಷ್ಟೇ ಬೆಳಗುವ ಯೋಗದ ಪ್ರಾಪ್ತಿಯಾಗುತ್ತಿತ್ತಷ್ಟೇ.
ಎಂ.ವ್ಯಾಸರಿಗೂ ಅಂತಹ ಸರ್ವ ಸ್ವೀಕಾರದ ಮುದ್ರೆ ಚಿಂತಕರ ಚಾವಡಿಯಿಂದ ಬೀಳಲಿಲ್ಲ.

ವಿಮರ್ಶೆಯ ಮಾನದಂಡಗಳ ಅಡಿಯಲ್ಲಿ ವ್ಯಾಸರು ಕತೆ-ಕಾವ್ಯವನ್ನು ಕಟ್ಟಿದವರೇ ಅಲ್ಲ. ಹಾಗಿದ್ದೂ ತಾನೊಬ್ಬ ವಿಶಿಷ್ಟ ಸಮರ್ಥ ಕತೆಗಾರರೆಂದು ಸಾಬೀತು ಪಡಿಸಿದವರು. ಮನಸ್ಸಿನಾಳಕ್ಕೆ ಇಳಿದು ಅಲ್ಲಿರುವ ರೂಪ-ಕುರೂಪ,ಆಕಾರ-ವಿಕಾರ ಭಾವ ತೀವ್ರತೆಗಳನ್ನೆಲ್ಲಾ ಕೆದಕಿ-ಬೆದಕಿ-ಕಲಕಿ ವಿಸಂಗತಿಗಳನ್ನು ಜೋಡಿಸುತ್ತಾ ಅಸ್ತಿತ್ವವಾದದ ಕತೆಯನ್ನು ಹೆಣೆಯುವ ಅಪರೂಪದ ಕತೆಗಾರ-ಎಂ.ವ್ಯಾಸ. ಆದರೆ ಅವರಿಗೆ ‘ವಿಕ್ಷಿಪ್ತ’ ಕತೆಗಾರನೆಂಬ ಹಣೆಪಟ್ಟಿಯು ಲಭಿಸಿ, ಗುರುತಿಸಿಕೊಳ್ಳಬೇಕಾದಷ್ಟು ವ್ಯಾಸ ಮತ್ತವರ ಅಕ್ಷರಯಾನವು ಗುರುತಿಸಿಕೊಂಡಿಲ್ಲ ಎಂಬ ಕೊರಗು ವ್ಯಾಸರನ್ನು ಓದಿದ ಮತ್ತು ಬಲ್ಲವರೆಲ್ಲರಿಗೆ ಇಂದಿಗೂ ಇದೆ.

ಅವರನ್ನು ‘ವಿಕ್ಷಿಪ್ತ’ ಕತೆಗಾರ ಎಂದು ಕೆರೆಯುವುದಕ್ಕೆ ನನ್ನ ತಕರಾರಿದೆ. ಬದಲಿಗೆ ಅವರನ್ನು ‘ವಿಶೇಷ’ ಕತೆಗಾರ ಅನ್ನಿ, ಸಂತೋಷ. ವಿಕ್ಷಿಪ್ತತೆ ಎನ್ನುವುದೊಂದು ಭಾವಸ್ಥಿತಿ. ಅದರೊಳಗಿಳಿದು ಕತೆ ಕಟ್ಟುವುದು ಸುಲಭದ ಮಾತಲ್ಲ. ಅಂತಹ ದುಸ್ಸಾಹಸಕ್ಕೆ ಯಾರೂ ಕೈ ಹಾಕುವುದೇ ಇಲ್ಲ. ಅತಂತಹದ್ದರಲ್ಲಿ ಎಂ.ವ್ಯಾಸರು ಅದು ತನಗೆ ಮಾತ್ರ ಸಾಧ್ಯವೆಂದು ಸಾಧಿಸಿ ತೋರಿಸಿದ್ದಾರೆ ಎನ್ನುವುದು ಹೆಮ್ಮೆ ಮತ್ತು ಅಭಿಮಾನದ ವಿಚಾರ. ವಿಕ್ಷಿಪ್ತ ಭಾವಸ್ಥಿತಿಯನ್ನು ಅಭಿವ್ಯಕ್ತಿಸುವ ವೈಶಿಷ್ಟ್ಯತೆಯು ಕೇವಲ ವ್ಯಾಸರ ಬರಹಗಳಲ್ಲಿ ಮಾತ್ರವೇ ಕಾಣಬಹುದಿತ್ತು. ಹಾಗಾಗಿ ಅವರನ್ನು ‘ವಿಕ್ಷಿಪ್ತ ಕತೆಗಾರ’ನೆಂದು ಕರೆಯುವುದಕ್ಕಿಂತಲೂ ‘ವಿಶಿಷ್ಟ ಸಂವೇದನಾಶೀಲ ಕತೆಗಾರ’ ಎಂದು ಕರೆಯುವುದು ಸೂಕ್ತ.

‘ವ್ಯಾಸ ಪಥ’ವನ್ನು ಓದುತ್ತಿದ್ದರೆ; ಇರುವಾಗ ಅರ್ಥವಾಗದ್ದು, ಇಲ್ಲದಿರುವಾಗ ಅರ್ಥವಾಗುವ ಬಗೆ ಎಂತಹದ್ದು ಎನ್ನುವ ಯೋಚನೆಯು ಮೊಳೆತದ್ದೇ- ಅರಿವಿನ ಬೆಳಕೊಂದು ಅರಿಯದೆ ನಮ್ಮೊಳಗೆ ಬೆಳಗಿ ಬಿಡುತ್ತದೆ. ತಾನು, ತನ್ನ ‘ದುರ್ಗಾಪುರ’ ಮತ್ತು ‘ಶಂಕರಿ ನದಿ’.. ಅಲ್ಲಿ ತನ್ನದೇ ಲೋಕವನ್ನು ಕಟ್ಟಿಕೊಂಡು ಮೂರ್ತದಲ್ಲಿ ಅಮೂರ್ತವನ್ನು ಹುಡುಕುತ್ತಾ ನಡೆದವರು ಎಂ.ವ್ಯಾಸ. ಅವರ ಕೃತಿಗಳ ಮಹತ್ವವೇನು? ಎಂತಹ ಶೈಲಿಯ ಬರವಣಿಗೆ? ಹೇಗೆ ಇತರ ಬರವಣಿಗಾ ಪ್ರಕಾರಗಳಿಗಿಂತ ಅವರ ರಚನೆಗಳು ಭಿನ್ನ? ಯಾವುದೇ ‘ಟ್ಯಾಗ್’ಗಳಿಗೆ ವ್ಯಾಸರು ತಮ್ಮನ್ನು ಯಾಕೆ ಅಂಟಿಸಿಕೊಂಡಿಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೆ ವಿಮರ್ಶಕ ಮಂಡಳಿ ಹಾಗೂ ಕನ್ನಡ ಸಾರಸ್ವತ ಲೋಕವು ಹೇಳಿಕೊಳ್ಳುವಷ್ಟು ಮುಂದಾಗಲಿಲ್ಲ. ಹಾಗೊಂದು ವೇಳೆ ಮುಂದಾಗಿದ್ದರೂ ವ್ಯಾಸರ ಹಾಗೂ ಅವರ ಕೃತಿಗಳನ್ನು ಸೀಮಿತ ನೆಲೆಗಟ್ಟಿನಲ್ಲಿ ಚರ್ಚೆ ನಡೆದು ಅರಿಯುವ ಕಾರ್ಯವು ನಡೆದಿರಬಹುದಷ್ಟೆ. ವ್ಯಾಸರು ಇಹವನ್ನು ಬಿಟ್ಟು ಹದಿಮೂರು ವರ್ಷಗಳು ಕಳೆದ ಮೇಲೆ ಇದೀಗ ‘ಮತ್ತೆಮತ್ತೆ ವ್ಯಾಸ’ ಎನ್ನುತ್ತಾ ಹೊಸ ತಲೆಮಾರೊಂದು ವ್ಯಾಸರನ್ನು ಇನ್ನಷ್ಟು, ಮತ್ತಷ್ಟು ಅರಿತುಕೊಳ್ಳಲು ಮುಂದಾಗಿರುವುದು ಖುಷಿಯ ಸಂಗತಿ.

ಒಬ್ಬ ಅಕ್ಷರ ಪ್ರೇಮಿಗೆ, ಸಾಹಿತ್ಯ ಕೃಷಿಕನಿಗೆ ಗುರುತಿಸುವಿಕೆ ಎನ್ನುವುದು ಬಲುಮುಖ್ಯ ಅಂಗೀಕಾರ. ಯಾಕೆ ಗುರುತಿಸುತ್ತಿಲ್ಲ? ಎಂದು ಕೇಳಿದರೆ ಕಾರಣಗಳು ಹಲವಾರು. ಅದರಲ್ಲೆಷ್ಟು ಪೂರಕವಾದುವುಗಳು ಎನ್ನುವದನ್ನು ತೀರ್ಮಾನಿಸುವ ತಲೆಗಳೇ ಬೇಕು-ಬೇಡಗಳನ್ನು ವಿಂಗಡಿಸಿ ಇಷ್ಟಾರ್ಥ ಸಿದ್ಧಿಯನ್ನು ನೆರವೇರಿಸಿಕೊಳ್ಳುತ್ತಿರುತ್ತವೆ. ಆ ಕಾರಣಗಳಿಂದಲಾಗಿ ಸೊರಗುವ ಕಾವ್ಯ, ಲೇಖನ, ಕತೆಗಳದೆಷ್ಟೋ? ಕೋಠಿಯೊಳಗೆ ಝಳಪಿಸುವ ಕಠಾರಿಗಳು ಕೋಠಿ ಬಿಟ್ಟು ಹೊರಬರಲು ತಯಾರಿರುವುದಿಲ್ಲ. ಅಷ್ಟಕ್ಕೇ ಹೊಸತನದ ಬೆರಗುಗಳು ಮೇಲ್ಪದರಿನ ಮಾತುಗಳಿಂದ ಸವರಿಸಿಕೊಂಡು ತಣ್ಣಗಾಗಿ ಬಿಡುತ್ತವೆ. ವಿಮರ್ಶಾ ಮಾನದಂಡಗಳು ಕೃತಿ ಮತ್ತು ಕೃತಿಕಾರನನ್ನು ಸಿದ್ಧ ಚೌಕಟ್ಟಿನ ಹರಿತ ನುಡಿಗಳಿಂದ ‘ಫಟ್’ ಎಂದು ಮಕಾಡೆ ಮಲಗಿಸಲು-ಒಂದೊಳ್ಳೆಯ ಕಾವ್ಯ-ಲೇಖನ-ಕತೆಯು ಕಮರಿ ಬಿಡುತ್ತದೆ. ಜೊತೆಗೆ ಕವಿ-ಲೇಖಕ-ಕತೆಗಾರನೂ ಸದ್ದಿಲದೆ ಕೊರಗಿ ಮರೆಯಾಗುತ್ತಾನೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ.

ಅಂತಹ ಒಂದು ಕಾಲವಿತ್ತು. ಅದರರ್ಥ ಈಗಿಲ್ಲವೆಂದಲ್ಲ. ಈಗಲೂ ಇದೆ. ಆದರೆ ಮಾಹಿತಿ ತಂತ್ರಜ್ಞಾವನ್ನು ಹೊದೆದುಕೊಂಡ ಜಗತ್ತು ನಾವಂದುಕೊಂಡದ್ದಕ್ಕಿಂತಲೂ ವೇಗವಾಗಿ ಬೆಳೆದು ನಿಂತ ಪರಿಗೆ ದೊರಕಿದ ‘ತೆರೆದುಕೊಳ್ಳುವಿಕೆ’ ಎಂಬ ಅವಕಾಶವಿದೆಯಲ್ಲ, ಅದು ಅಂಗೈಯಲ್ಲೇ ಅರಮನೆಯನ್ನು ಕಾಣುವಂತೆ ಮಾಡಿದ್ದು ಸುಳ್ಳಲ್ಲ. ಹಾಗಿರಲು ಸತ್ಯ-ಮಿಥ್ಯಗಳ ಯಥಾವತ್ತುಗಳನ್ನು ‘ಥಟ್..’ ಎಂದು ಅರಿತು ತಿಳಿದುಕೊಳ್ಳುವ ಸ್ವೀಕಾರ ಗುಣವು ಹೆಚ್ಚಾಗಲು ಕೃತಿ ಮತ್ತು ಕೃತಿಕಾರನ ರುಚಿಗಳ ಮಹತ್ತು, ನಿಲುವು, ಬದ್ಧತೆ, ಒಲವುಗಳ ಸಾಮೀಪ್ಯನಗಳೆಲ್ಲವೂ ಮತ್ತಷ್ಟು, ಮಗದಷ್ಟು ಹಿಗ್ಗಿ ಬೆಳಕಿಗೆ ಬಂದುವು. ಜೊತೆಗೆ ಕೃತಿ ಮತ್ತು ಕೃತಿಕಾರರೂ ಸಾಹಿತ್ಯ ಮಾರುಕಟ್ಟೆಯಲ್ಲಿ ಅಂಗೀಕರಿಸಲ್ಪಟ್ಟರು.

‘ಇಲ್ಲ, ಇನ್ನಿಲ್ಲ ವ್ಯಾಸ
ಅಲ್ಲ ವೇದವ್ಯಾಸ
ಅಲ್ಲ ಕುವರವ್ಯಾಸ
ನಮ್ ವ್ಯಾಸ
ನಿಮ್ ವ್ಯಾಸ
ಎಮ್ ವ್ಯಾಸ
ನಮ್ಮನ್ನಗಲಿದ ಅಹ ವ್ಯಾಸ
ಏಕಾಂತದ ಮೌನಾಂತದ ಹವ್ಯಾಸ
ಎದೆ ತಟ್ಟುವ ಮನ ಮುಟ್ಟುವ ಪದ ಪದ ವಿನ್ಯಾಸ
ಸಂಸಾರಿಯ ಸಂನ್ಯಾಸ’ – ಎಂದು ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಆಪ್ತ ಸ್ನೇಹಿತ ವ್ಯಾಸರು ಅಗಲಿದಾಗ ಬರೆದ ‘ವ್ಯಾಸಾಂಜಲಿ’ ಕವಿತೆಯೂ ಪುಸ್ತಿಕೆಯ ಮಹತ್ತನ್ನು ಹೆಚ್ಚಿಸಿದೆ.

‘ಮಡಿಸಿಟ್ಟ ಒದ್ದೆ ಕೊಡೆಗಳು
ಕಾಗೆಗಳಾಗುವ ಪವಾಡ …
ಸರೋವರದ ಸರೀ ಎದೆಗೇ ಗುರಿಯಿಟ್ಟು ಎಸೆದ ಕಲ್ಲಿಗೆ
ನೀರು ಇನಿತೂ ಗಾಯಗೊಳ್ಳದೆ
ಬಳೆ ಬಳೆಯಾಗಿ ಉನ್ಮುಖ ಉಮ್ಮಳದ
ಹೂವಾಗಿ ಅರಳುವ ಪವಾಡ…ಬಲ್ಲಿರಿ’ – ಕವಿ ಜಯಂತ ಕಾಯ್ಕಿಣಿ ಎಂ.ವ್ಯಾಸರ ಬಗ್ಗೆ ‘ಬೇಫಿಕ್ರರಾಗಿ’ ಹರಿಸಿದ ಜೀವವಾಣಿಯನ್ನು ಓದಿಯೇ ಅನುಭವಿಸಬೇಕಷ್ಟೆ.

‘ಕೃತಿಕಾರ ಸಾರ್ವಜನಿಕವಾಗಿ ಮಾತಾಡಬೇಕೆಂದೇನೂ ಇಲ್ಲ. ಏನೇ ಮಾತನಾಡಿದರೂ ಅದು ಕೃತಿಯ ಮೂಲಕವೇ. ಕೃತಿಯ ಮುಖೇನ ಅಂತರಂಗವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿದೆ ಎಂಬ ನಂಬಿಕೆ, ಅವರಲ್ಲಿರುತ್ತದೆ. ಸಂಸರಂತಹ ನಾಟಕಕಾರರು ಹೇಳುವುದೆಲ್ಲವನ್ನೂ ನಾಟಕದ ಮೂಲಕವೇ ಹೇಳುತ್ತಿದ್ದರು. ತನ್ನ ಕೃತಿಗಳ ಸಂವಹನದಿಂದ ಮಾತ್ರ ತಾನು ಗುರುತಿಸಿಕೊಳ್ಳಬೇಕು ಎಂದು ಬಯಸಿದ ವಿಶಿಷ್ಟ ಲೇಖಕ ವ್ಯಾಸ. ಸಮಕಾಲೀನವಾದ ಸಾಹಿತ್ಯ ಸಂದರ್ಭವನ್ನು ಗಂಭೀರವಾಗಿ ವ್ಯಾಸರು ಸ್ವೀಕರಿಸಿದವರೇ ಅಲ್ಲ. ಅವರೊಬ್ಬ ಸ್ವಕೇಂದ್ರಿತ ಲೇಖಕ.

ನಮ್ಮಲ್ಲಿ ನವೋದಯ, ಪ್ರಗತಿಶೀಲ, ನವ್ಯ ಇನ್ನಿತರ ಸಾಹಿತ್ಯ ಬೆಳವಣಿಗೆಗಳು ನಡೀತಾ ಇದ್ದರೆ ಅದರ ಪ್ರಭಾವ ವ್ಯಾಸರ ಕತೆಗಳ ಒಳಗೆ ಆಗಿರಬಹುದೇ ಹೊರತು ಹೊರಗಡೆ ಅಲ್ಲ. ವ್ಯಾಸರ ಕತೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಗೆ ಒಳಪಡುತ್ತವೆ ನಿಜ. ಆದರೆ ಅದರ ಬೆನ್ನು ಹತ್ತಿ ಹೋಗಿ ವಿಚಾರ ಮಾಡೋ ಉದ್ದೇಶ, ಅಭಿಲಾಷೆ ಅವರಿಗಿಲ್ಲ. ಈ ಕಾರಣಕ್ಕೋಸ್ಕರ ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಶಿಷ್ಟ ಕ್ರಮ ಅಂತಲೇ ತಿಳಿಯಬೇಕಾಗಿದೆ’ – ಕಿ.ರಂ.ನಾಗರಾಜ್ ಅವರು ವ್ಯಾಸರ ಸಾಹಿತ್ಯ ಕೃಷಿಯನ್ನು ಮೆಚ್ಚಿ ‘ರುದ್ರ ಕಾಲದ ಲಯಗಳನ್ನು ಹಿಡಿದ ಪ್ರತಿಭೆ’ ಎಂದು ವ್ಯಾಸರನ್ನು ಕೊಂಡಾಡಿದ್ದಾರೆ.

ಸೂರ್ಯ ಕಂತಿದ ಮೇಲೆ ಅವನು ಚೆಲ್ಲಿದ ಬೆಳಕಿಗೆ ಮುಖವೊಡ್ಡುವಂತೆ, ಆತ ಹಬ್ಬಿಸಿದ ರಂಗುಗಳಲ್ಲಿ ಮಿಂದೇಳುವ ಬಯಕೆಯು ಇನ್ನಿಲದೆ ಕಾಡಿ ಮುತ್ತುವಂತೆ-ಎಂ.ವ್ಯಾಸರ ವಿಚಾರಧಾರೆಗಳೂ. ತುಂಡು, ತುಣುಕು ಚಿಂತನೆಗಳಿಂದ ವಿಸ್ತಾರವಾಗಿ ಕಟ್ಟಲ್ಪಟ್ಟ ವ್ಯಾಸರ ‘ದುರ್ಗಾಪುರ’, ಮತ್ತಲ್ಲಿ ಸೆಲೆ ಬತ್ತದೆ ಹರಿಯುವ ‘ಶಂಕರಿ ನದಿ’ಯ ತಟದಲ್ಲಿ ಕುಳಿತಿರಲು- ಮಗುಚಿಯೂ ಮಗುಚಲಾಗದ ಅಲೆಯಾಗಿ, ಬತ್ತಿದರೂ ಚಿಮ್ಮಲಾರದ ಒರತೆಯಾಗಿ, ಹರಿಯುತ್ತಲೇ ಥಟ್ಟನೆ ಆವಿಯಾಗಿ ಒಣಗುವ ಹನಿಯೊಂದರ ಭಾವಸ್ಥಿತಿಯು ನಿರ್ಮಾಣಗೊಳ್ಳುತ್ತದೆ. ವ್ಯಾಸರೆಂದರೇನೇ ಹಾಗೆ, ಎಲ್ಲರಿಗೂ ಮುಟ್ಟಲಾಗದ ಪ್ರಖರ ವಿಚಾರದಂತೆ.

ಬಿಳಿ ಅಂಗಿಯನ್ನು ತೋಳವರೆಗೆ ಸುರುಟಿ ಮಡಿಸಿ, ಕಪ್ಪಗಿನ ಪ್ಯಾಂಟನ್ನು ಧರಿಸಿ, ಕೆದರಿ ಹಾರುತ್ತಿರುವ ಗುಂಗುರು ಕೂದಲನ್ನು ನೆತ್ತಿಯಲ್ಲಿ ಒತ್ತಿ ಕುಳ್ಳಿರಿಸಿ, ಕೈಯಲ್ಲೊಂದು ಕಪ್ಪಗಿನ ಪುಟ್ಟ ಬ್ಯಾಗ್ ಮತ್ತದರ ಹಿಡಿಯನ್ನು ಮುಂಗೈಗೆ ಸುತ್ತಿಸಿಕೊಂಡು ಹಸಿರು ಪ್ರೀಮಿಯರ್ ಪದ್ಮಿನಿ ಕಾರಿನೊಳಕ್ಕೆ ವ್ಯಾಸರು ಕುಳಿತುಕೊಳ್ಳುತ್ತಿದ್ದರು.

‘ಮನ್ನಿಪ್ಪಾಡಿ’ಯಿಂದ ಹೊರಡುವ ಕಾರು ಸೀದಾ ಹೋಗಿ ‘ಕಾಸರಗೋಡು ಪೇಟೆ’ಯ ‘ಮಲ್ಲಿಕಾರ್ಜುನ ಸ್ವಾಮಿ’ ದೇವಸ್ಥಾನದ ಮುಂಭಾಗದಲ್ಲಿ ವಿರಮಿಸುತ್ತಿತ್ತು. ಪೇಟೆಗೆ ಬಂದ ಕಾರ್ಯವನ್ನು ಪೂರೈಸಿಕೊಳ್ಳುವವರೆಗೂ ವ್ಯಾಸರು ಮಾತ್ರ ಕಾರಲ್ಲೇ ಕುಳಿತು ಸಿಗರೇಟು ಸುಡುತ್ತಿರುವ ದೃಶ್ಯ ಇಂದಿಗೂ ಅವರನ್ನು ಬಲ್ಲ, ಕಂಡ ನನ್ನಂತವರ ಮನದಲ್ಲಿ ಹಸಿರಾಗಿಯೇ ಉಳಿದಿದೆ. ಕೆಲವೊಮ್ಮೆ ಅವರೊಬ್ಬರೇ ಬಂದು ಒಂದಷ್ಟು ಸಿಗರೇಟುಗಳನ್ನು ಸುಟ್ಟು ಹೋಗುತ್ತಿದ್ದದ್ದೂ ಇತ್ತು.

ಅವರ ಒಂದು ಮುಷ್ಠಿಯೊಳಗೆ ರಂಗಿನ ಕರ್ಚಿಫ್ ಬೆವರನ್ನು ಹೀರಿಕೊಳ್ಳಲು ತಯಾರಾಗಿಯೇ ಕುಳಿತಿರುತ್ತಿತ್ತು. ನಡೆದಾಡುವ ಮಂದಿಗೆ, ಓಡಾಡುವ ಯಂತ್ರಗಳಿಗೆ ಅವರೊಬ್ಬ ಅಚ್ಚರಿಯ ಅಕ್ಷರ ಸಂತನಾಗಿ ಕಂಡರೂ ವ್ಯಾಸರು ಮಾತ್ರ ಅದ್ಯಾವುದರತ್ತಲೂ ತಲೆ ಹಾಕದೆ ಧುನಿಯೊಳಗೆ ಸುಡುವ ಅಗ್ಗಿಷ್ಟಿಕೆಯಂತೆ ಮತ್ತಷ್ಟು, ಮಗದಷ್ಟು ಸಿಗರೇಟನ್ನು ಸುಡುತ್ತಲೇ ಇರುತ್ತಿದ್ದರು. ಅಂತರ್ಮುಖಿಯಾದ ಕತೆಗಾರ ಎಂ.ವ್ಯಾಸರಿಗೆ ಅದೆಷ್ಟೋ ಬಾರಿ ಬೆರಳುಗಳ ಎಡೆಯಲ್ಲಿ ಸಿಲುಕಿದ ಸಿಗರೇಟು ಸುಟ್ಟರೂ ಗೊತ್ತಾಗುತ್ತಿರಲಿಲ್ಲ. ಅದ್ಯಾವುದೋ ಗಳಿಗೆಯಲ್ಲಿ ಚರ್ಮ ಸುಟ್ಟು ಅತ್ತಾಗ, ಬೆಂಕಿಯ ಕಿಡಿ ಹಾರಿ ಬಿಳಿ ಅಂಗಿಗೆ ಮುತ್ತಿಕ್ಕಿದಾಗ ಥಟ್ಟನೆ ಎಚ್ಚರಗೊಳ್ಳುತ್ತಿದ್ದರು. ಅದೆಂತಹ ಧ್ಯಾನಸ್ಥ ಸ್ಥಿತಿಯದು!

ಎಲ್ಲೋ ಕಳೆದು ಹೋಗಿ ಸಮಯವೊಂದು ಮತ್ತೆ ಹಾರಿ ಬರಲು; ಇಳೆಗೆ ಮುತ್ತಿಕ್ಕುವ ಧಾವಂತದಲ್ಲಿರುವ ಮಳೆ ಹನಿಗಳ ಭಾವಸ್ಥಿತಿಯೊಂದು ಅವರಲ್ಲಿ ಮನೆ ಮಾಡಿಕೊಳ್ಳುತ್ತಿತ್ತು. ಎಲ್ಲಿಯೋ ಕಳೆದೇ ಹೋಗಿ, ಮತ್ತಿನ್ನ್ಯಾವುದೋ ಗಂಭೀರ ಚಿಂತನೆಯಲ್ಲಿ ವ್ಯಾಸರು ಮುಳುಗೇಳುತ್ತಿರಲು- ಪರಿಚಯಸ್ಥರು ಅವರನ್ನು ಕಂಡು ಮಾತನಾಡಿಸಿದರೆ; ಬಾಯಿ ತೆರೆಯದ ಸಹೃದಯ ಮುಗುಳು ನಗೆಯೊಂದರ ವಿನಿಮಯವಷ್ಟೆ. ಅತ್ಯಾಪ್ತರು ಬಂದರೆಂದರಷ್ಟೇ ಒಂದೆರಡು ಅಪ್ಯಾಯಮಾನವಾದ ಮಾತುಗಳು. ಅದೂ ಕೂಡ ತೂಕದ್ದು-ಅವರ ವಿಚಾರಗಳಂತೆ..ಕತೆ-ಕಾವ್ಯ-ಲೇಖನಗಳಂತೆ.

‘ವರದರಾಜ ಚಂದ್ರಗಿರಿ’ ಸಂಪಾದಕತ್ವದ ‘ವಿಶಿಷ್ಟ ಸಂವೇದನಾಶೀಲ ಕತೆಗಾರ ಎಂ. ವ್ಯಾಸ’ರ ಸಾಹಿತ್ಯ ಲೋಕದ “ದುರ್ಗಾಪುರದ ವ್ಯಾಸ ಪಥ” ಹಾಗೂ ಹೊಸ ಪೀಳಿಗೆಯ ಓದುಗರ ಮುಖಾಮುಖಿ ಹೇಗಿರಬಹುದು? ಎಂಬ ಅಚ್ಚರಿಯ ಬೆರಗು ನನ್ನೊಳಗಿದೆ.

‍ಲೇಖಕರು Admin

23 September, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading