ದುಗುಡದ ನಡುವೆ ಒಂದು ಪ್ರೀತಿಯ ಎಳೆ

ಜಿ ಪಿಬಸವರಾಜು

ವಾರದ ದುಗುಡವನ್ನು ಮಿತ್ರರಾದ ಜಿ.ಎನ್‍. ಮೋಹನ್‍ ನನ್ನ ಮೇಲೆ ಹೊರಿಸಿದ್ದಾರೆ. ಮೊದಲು ಆತಂಕವಾದರೂ, ನಂತರ ನನ್ನನ್ನು ನಾನೇ ಸಮಾಧಾನಿಸಿಕೊಂಡೆ. 365 ದಿನಗಳ ದುಗುಡದ ಭಾರವನ್ನು ಹೊತ್ತವರು ಅವರು. ನಾನು ನಾಲ್ಕಾರು ದಿನಗಳ ಭಾರವನ್ನು ಹೊರುವುದು ಕಷ್ಟವಾಗಲಾರದು ಎಂಬುದೇ ಸಮಾಧಾನ.

ಈ ಭಾರವನ್ನು ಹೊತ್ತು ನಡೆದವರ ಚಿತ್ರವೇ ನನ್ನ ಕಣ್ಮುಂದೆ ಸುಳಿಯುತ್ತದೆ. ಮತ್ತೆ ಮತ್ತೆ ಕಾಡುತ್ತದೆ. ತಲೆಯ ಮೇಲೆ ಸಣ್ಣ ಸಣ್ಣ ಗಂಟುಮೂಟೆಯನ್ನು ಹೊತ್ತು, ಹೆಗಲ ಮೇಲೆ ಮಕ್ಕಳನ್ನು ಹೊತ್ತು, ಭಾರವಾದ ಹೆಜ್ಜೆಗಳನ್ನು ಹಾಕುತ್ತ ನಡೆದವರ ಚಿತ್ರ ಇದು. ದುಡಿಮೆಗಾಗಿ, ಹೊಟ್ಟೆಗಾಗಿ ದೇಶಾಂತರ ಹೋದ ಬಡವರ ಕತೆ ಇದು. ಕೊರೊನಾ ಎಂಬ ಮಾರಿಯೊ, ಮಸಣಿಯೊ, ಮೃತ್ಯುವೊ ಏಕಾಏಕಿ ಬಂದೆರಗಿ ಜಗತ್ತನ್ನು ನಡುಗಿಸಿದಾಗ ಈ ಬಡವರೂ ಕಂಗೆಟ್ಟರು. ತಮ್ಮ ನೆಲಕ್ಕೆ ತಮ್ಮ ಹುಟ್ಟೂರುಗಳಿಗೆ ಹೋಗಿ ಮುಟ್ಟಿದರೆ ಸಾಕು, ನಾವು ಉಳಿಯಬಹುದೆಂದು ಹೊರಟವರು. ಊರು ಯಾವಾಗಲೂ ಆತ್ಮ ವಿಶ್ವಾಸದ, ನಂಬಿಕೆಯ ಪ್ರತೀಕ. ನಮ್ಮೂರು ನಮಗೆ ಕ್ಷೇಮ ಎಂಬ ಭಾವನೆಯೇ ಇದರ ಹಿಂದೆ.

ಬಡವರನ್ನು, ದುಡಿಯುವವರನ್ನು ಯಾವ ಸರ್ಕಾರವೂ ಎಲ್ಲಿಯೂ ಕಣ್ಣೆತ್ತಿ ನೋಡಿದ ಉದಾಹರಣೆಗಳೇ ಅಪರೂಪ. ನಗರಗಳಲ್ಲಿ ದುಡಿಯುವವರು ಬೇಕು. ಅವರೆಲ್ಲಿ ಇರುತ್ತಾರೆ, ಏನು ಉಣ್ಣುತ್ತಾರೆ, ಹೆಂಗೆ ಇರುತ್ತಾರೆ-ಇಂಥ ಯಾವ ಪ್ರಶ್ನೆಗಳನ್ನೂ ನಗರದ ಜನ ಕೇಳುವುದಿಲ್ಲ. ವಲಸೆ ಬರುವವರೆಲ್ಲರ ಕತೆಯೂ ಇದೆ. ಅವರು ದುಡಿಯುವುದು ಬೇಕು, ಅಷ್ಟೆ. ಅದರಾಚೆಗೆ ಯಾರೂ ಯೋಚಿಸುವುದಿಲ್ಲ.

ಈ ಬಡವರು ಮರಳಿ ತಮ್ಮ ಊರುಗಳಿಗೆ ಹೊರಟಾಗಲೂ ಯಾರೂ ಕೇಳಲಿಲ್ಲ. ಬಸ್ಸಿಲ್ಲ, ರೈಲಿಲ್ಲ, ಹೊಟ್ಟೆಗೆ ಊಟವಿಲ್ಲ. ಪಾದಗಳಿಂದ ನೆತ್ತರು ಹರಿಯುತ್ತಿದ್ದರೂ ಅವರು ನಡೆದರು. ನಡೆದು ನಡೆದು ಬಸವಳಿದರೂ ಅವರು ನಡೆದರು. ಕೆಲವರು ದಾರಿಯಲ್ಲಿಯೇ ಕುಸಿದರು. ದಣಿವಾರಿಸಿಕೊಳ್ಳಲೆಂದು ರೈಲು ಕಂಬಿಗಳ ಮೇಲೆ ಮಲಗಿದವರ ಮೇಲೇ ರೈಲುಗಾಡಿಗಳು ಓಡಿದವು. ಹಸಿವಿನಿಂದ ಕಂಗಾಲಾದವರು ನಡುದಾರಿಯಲ್ಲೇ ಬಿದ್ದರು, ಸತ್ತವರು ಎಷ್ಟೋ ಮಂದಿ!

ಇದೊಂದು ಹೆಜ್ಜೆ ಸಾಲಿನ ಪಯಣ. ಗುರಿಯನರಸಿ ಹೊರಟ ಪಯಣ. ನಿಲುಗಡೆಯೇ ಇಲ್ಲದ ನಿರಂತರ ಪಯಣ. ಕರುಣೆ, ಪ್ರೀತಿ, ಒಂದಿಷ್ಟು ಸಾಂತ್ವನ ಸಿಕ್ಕಿದ್ದರೂ, ಈ ವಲಸಿಗರ ಎದೆ ತಂಪಾಗುತ್ತಿತ್ತು; ಹೊಸ ಭರವಸೆ ಚಿಗುರುತ್ತಿತ್ತು. ಆದರೆ ಹಾಗಾಗಲಿಲ್ಲ.

ಇಡೀ ಜಗತ್ತಿನ ಮೇಲೆಲ್ಲ ಈ ಕೊರೊನಾದ ಕರಿನೆರಳು ದಟ್ಟವಾಗಿ ಮುಸುಕಿತ್ತು. ಬಡವರು, ಧನಿಕರು, ಹಸಿದವರು, ಉಂಡವರು, ಮಕ್ಕಳು, ಮುದುಕರು, ಗಂಡಸರು, ಹೆಂಗಸರು-ಇಂಥ ಯಾವ ತಾರತಮ್ಯವೂ ಇಲ್ಲದೆ ಮಿಲಿಯಾಂತರ ಜನ ಅಸುನೀಗಿದರು. ಸೂಪರ್ ಪವರ್ ಎಂದು ಬೀಗುತ್ತಿದ್ದ ದೇಶಗಳೂ ತತ್ತರಿಸಿದವು.

ಕೊರೊನಾ ಏನು, ಇದರ ರೂಪರೇಖೆ ಏನು, ಎಲ್ಲಿಂದ ಇಳಿಯಿತು, ಎತ್ತ ಹೊರಟಿದೆ ಎಲ್ಲ ಪ್ರಶ್ನೆಗಳೂ ನಿರುತ್ತರವಾದವು. ಈಗಲೂ ಉತ್ತರದ ಹುಡುಕಾಟದಲ್ಲಿಯೇ ಜಗತ್ತು ತೊಡಗಿದೆ. ಕೊರೊನಾಗೆ ಬಲಿಗಳಂತೂ ಬೀಳುತ್ತಲೇ ಇವೆ.

ದುಡಿಮೆಯನ್ನು ಹುಡುಕಿ ಬೇರೆ ಬೇರೆ ರಾಷ್ಟ್ರಗಳಿಗೆ ಹೋಗಿರುವ ನಮ್ಮ ಮಕ್ಕಳೂ ವಲಸಿಗರೇ. ಜೀವ ಉಳಿಸಿಕೊಳ್ಳುವುದೇ ಎಲ್ಲರ ಸವಾಲು. ಎಲ್ಲರ ದುಗುಡವೂ ಇದೇ.

ಭಾರತದ ದುಗುಡ ಇನ್ನೂ ಸಾವಿರ ಪಟ್ಟು ಹೆಚ್ಚಿನದು. ಇಲ್ಲಿಯ ಅರ್ಥವ್ಯವಸ್ಥೆ ಕುಸಿದಿದೆ. ಸಾಮಾಜಿಕ ಬದುಕು ಮೂರಾಬಟ್ಟೆಯಾಗಿದೆ. ರಾಜಕೀಯ ಬೆಳವಣಿಗೆಗಳು ತಲ್ಲಣಗೊಳಿಸುತ್ತಿವೆ. ನಮ್ಮ ಸಂವಿಧಾನ ಉಳಿಯುವುದೇ ಎಂಬ ಪ್ರಶ್ನೆಯೂ ಎದುರಾಗಿದೆ. ಸರ್ಕಾರವನ್ನು ಟೀಕಿಸಿದವರು ಜೈಲು ಸೇರುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಸ್ಮಶಾನ ಬಾಯಿತೆರೆದುಕೊಂಡಿದೆ. ಅಲ್ಲಿನ ನಾಯಕರು ಏನಾಗಿದ್ದಾರೆ ಎಂಬುದು ನಿಗೂಢ ಪ್ರಶ್ನೆಯಾಗಿದೆ.

ಈ ಸುಂದರ ರಾಜ್ಯದ ಜನ ಹೇಗೆ ಬದುಕುತ್ತಿದ್ದಾರೆ ಎಂಬುದೂ ತಿಳಿಯದ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಬಹುದೊಡ್ಡ ಭ್ರಮೆಯಾಗಿದೆ. ವಿರೋಧ ಪಕ್ಷಗಳ ಧ್ವನಿಗಳೂ ಕೇಳುತ್ತಿಲ್ಲ. ಲೋಕಸಭೆ, ರಾಜ್ಯಸಭೆಗಳಲ್ಲಿನ ವಿರೋಧವನ್ನು ಸರ್ಕಾರ ಲೆಕ್ಕಕ್ಕೇ ತೆಗೆದುಕೊಳ್ಳದೆ ತನಗೆ ಬೇಕಾದ ಆಟವನ್ನು ಕೇಂದ್ರ ಸರ್ಕಾರ ಆಡುತ್ತಿದೆ. ಕೇಂದ್ರ ಸರ್ಕಾರ ಜಾರಿ ಮಾಡಲು ನಿರ್ಧರಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನೇ ಗಮನಿಸಿ. ಸಂಸತ್ತಿನ ಎರಡೂ ಸದನಗಳಲ್ಲಿ ಇದು ಚರ್ಚೆಯಾಗಲಿಲ್ಲ. ವಿಧಾನ ಸಭೆ, ಪರಿಷತ್ತುಗಳಲ್ಲೂ ಚರ್ಚೆ ನಡೆಯಲಿಲ್ಲ. ಒಕ್ಕೂಟ ವ್ಯವಸ್ಥೆ ಎನ್ನುವುದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ಕೇಂದ್ರ ಸರ್ಕಾರ ವಿಶ್ವಾಸಕ್ಕೇ ತೆಗೆದುಕೊಳ್ಳುತ್ತಿಲ್ಲ. ಹಾಗಾದರೆ ನಮ್ಮ ಜನತಂತ್ರಕ್ಕೆ ಏನು ಅರ್ಥ?

 ಕೊರೊನಾ ಭಯದ ಜೊತೆಗೆ ಅಲ್ಪಸಂಖ್ಯಾತರನ್ನು, ಬಡವರನ್ನು, ದುಡಿಯುವವರನ್ನು, ಮಧ್ಯಮವರ್ಗದವರನ್ನು ಅನೇಕ ಭಯಗಳು ಮುತ್ತಿವೆ. ನಮ್ಮ ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲೆ ಜನತೆ ಇಟ್ಟಿದ್ದ ನಂಬಿಕೆ ಕುಸಿಯುತ್ತಿದೆ. ಹಾಗಾದರೆ ಜನರ ನಂಬಿಕೆ ಯಾರ ಮೇಲೆ?

ಈ ದುಗುಡಗಳ ನಡುವೆ ಮನುಷ್ಯ ನಿಜಕ್ಕೂ ಏಕಾಂಗಿಯಾಗಿದ್ದಾನೆ. ಅವನ ಕ್ರಿಯಾಶೀಲತೆಗೆ ಮಂಕು ಕವಿದಿದೆ. ಆಧುನಿಕ ತಂತ್ರಜ್ಞಾನದ ಕೊಡುಗೆಗಳಾದ ವಾಟ್ಸಪ್, ಫೇಸ್‍ಬುಕ್‍ ಮೊದಲಾದವುಗಳಲ್ಲಿಯಾದರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳಬಹುದಾ ಎಂದು ಜನ ಹುಡುಕಾಟ ನಡೆಸುತ್ತಿದ್ದಾರೆ. ಹೃದಯಗಳ ಮಾತಿರಲಿ, ಮೊದಲು ಮುಖಗಳಾದರೂ ಕಾಣಬೇಕು. ಅದಕ್ಕಾಗಿಯೇ ಈ ಹುಡುಕಾಟ.

‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ; ದಾರಿ ಸಾಗುವುದೆಂತೊ ನೋಡಬೇಕು’- ಎಂದು ಅಡಿಗರೇನೋ ಹೇಳಿದರು. ಇವತ್ತು ಅದೂ ಇಲ್ಲ. ಹೆಳವನ ಹೆಗಲ ಮೇಲೆ ಹೆಳವ, ಕುರುಡನ ಹೆಗಲ ಮೇಲೆ ಕುರುಡ ಕೂತು ಹೊರಟಿದ್ದಾರೆ. ಎಲ್ಲೆಲ್ಲೂ ಗಾಢಾಂಧಕಾರ. ದಾರಿಯೂ ಇಲ್ಲ, ದಿಕ್ಕೂ ಇಲ್ಲ.ಹೇಗೆ ಪಯಣ? ಎತ್ತ ಪಯಣ?

ಎದುರಿಗೆ ಹುಲಿಯೊ,ಕರಡಿಯೊ ಎನ್ನುವ ಮಾತು ಹೋಗಿ ಈಗ ಕೊರೊನಾ ಬಂದಿದೆ. ಮುಂದಿನಿಂದ, ಹಿಂದಿನಿಂದ ಮಾತ್ರವಲ್ಲ, ದಶದಿಕ್ಕಿನಿಂದಲೂ ಬರಬಹುದು ಈ ಕೊರಾನಾ. ಅದನ್ನು ಎದುರಿಸುವುದು ಮಾತ್ರ ಸದ್ಯಕ್ಕೆ ತಿಳಿಯದ ವಿದ್ಯೆ.

ಇಂಥ ದುಗುಡದಲ್ಲೂ, ಕಗ್ಗತ್ತಲಲ್ಲೂ ಬೆಳಕಿನ ಕಿರಣದಂತೆ ನಮ್ಮ ಪಿಸುದನಿಗಳು, ಕ್ರಿಯಾಶೀಲ ಚಟುವಟಿಕೆಗಳು, ಬರೆಯುವ, ಓದುವ, ಚಿತ್ರಿಸುವ, ಮಾತನಾಡುವ, ಚಿಂತನೆಗಳು ಕಾಣಿಸುತ್ತವೆ. ಸಣ್ಣ ಸಣ್ಣ ಸಂಗತಿಗಳು ನಮ್ಮಲ್ಲಿ ಹುಮ್ಮಸ್ಸನ್ನು ತುಂಬುತ್ತಿವೆ; ಬದುಕಿನಲ್ಲಿ ವಿಶ್ವಾಸವನ್ನು ಕುದುರಿಸುತ್ತಿವೆ. 

ಇಂಥದೇ ಒಂದು ಸಂಗತಿಯಾಗಿ, ಸಂಗಾತಿಯಾಗಿ ಕಾಣಿಸುತ್ತಿದೆ- ಅವಧಿ ಮ್ಯಾಗ್‍. ನಮ್ಮ ನಮ್ಮ ಮುಖಗಳನ್ನು ನೋಡಿಕೊಳ್ಳುವ ಕನ್ನಡಿಯೂ ಇದಾಗಿದೆ. ನಮ್ಮ ಎದೆಯ ಮಾತುಗಳನ್ನು ಇಲ್ಲಿ ಆಡಬಹುದಾಗಿದೆ. ಈಗಾಗಲೇ ಸಾವಿರಾರು ಮಿತ್ರರು ಈ ಬ್ಲಾಗನ್ನು ಬಳಸುತ್ತಿದ್ದಾರೆ; ಬೆಳೆಸುತ್ತಿದ್ದಾರೆ. ನಾವು, ನಮ್ಮ ಸುತ್ತಲಿನವರು, ನಮ್ಮ ಬದುಕು, ಅದರ ಬಣ್ಣಗಳು, ಭರವಸೆಗಳು ಹೀಗೆಯೇ ತುಂಬಿಕೊಳ್ಳಬೇಕು.

ಮೋಹನ್‍ ನನ್ನ ಮೇಲೆ ಇಟ್ಟಿರುವ ನಂಬಿಕೆ ದೊಡ್ಡದು. ಮೋಹನ್‍ ಜೊತೆಗಿರುವ ತಂಡ ತೋರಿಸಿರುವ ಸಹಕಾರವೂ ದೊಡ್ಡದು. ನಾಲ್ಕಾರು ದಿನಗಳಲ್ಲಿ ಒಂದು ಭಾನುವಾರಕ್ಕೆ ಬಣ್ಣ ಬಳಿಯುವ ಉಮೇದಿನಿಂದ ಹೊರಟಾಗ ನನ್ನ ಜೊತೆಗೆ ಕೈಸೇರಿಸಿದವರು ಎಷ್ಟೊಂದು ಜನ ಮಿತ್ರರು. ಒಂದೇ ದಿನದಲ್ಲಿ, ಎರಡು ದಿನಗಳಲ್ಲಿ ಬರೆದುಕೊಡಿ ಎಂದು ಕೇಳಿದಾಗ ಒಪ್ಪಿ ಹಾಗೆಯೇ ಬರೆದುಕೊಟ್ಟ ಮಿತ್ರರ ಪ್ರೀತಿಯನ್ನು ಅಳೆಯಲು ಸಾಧ್ಯವೇ?

ಕಿರಿಯ ತಲೆಮಾರಿನ ಬರಹಗಳೇ ಇಲ್ಲಿ ಹೆಚ್ಚಾಗಿವೆ. ಮೂವರು ಹಿರಿಯ ಚಿಂತಕರ ಸಂದರ್ಶನಗಳಿವೆ. ಗಂಭೀರವಾದ ಚಿಂತನೆ ನಮ್ಮ ಕಿರಿಯರನ್ನು ತಲುಪಲಿ ಎಂಬ ಕಾರಣದಿಂದ ಹೀಗೆ ವಿನ್ಯಾಸಗೊಳಿಸಿದ್ದೇನೆ. ಹೊಸ ತಲೆಮಾರು ಕ್ರಿಯಾಶೀಲತೆಯಲ್ಲಿ ತೋರುವ ಉತ್ಸಾಹ ಎಷ್ಟೊಂದು ಮಹತ್ವಪೂರ್ಣವಾಗಿದೆ, ಸೃಜನಶೀಲ ಬರವಣಿಗೆಯಲ್ಲಿ ಈ ತಲೆಮಾರು ತೋರುತ್ತಿರುವ ಗಾಂಭೀರ್ಯ ಅರ್ಥಪೂರ್ಣವಾಗಿದೆ. ನಮ್ಮ ಸಾಹಿತ್ಯದ ದಿಕ್ಕುದೆಸೆಗಳನ್ನೂ ಈ ಬರಹಗಳು ಸೂಚಿಸುವಂತಿವೆ. ಹೊಸ ತಲೆಮಾರಿನ ಈ ಕ್ರಿಯಾಶೀಲತೆಯನ್ನು ‘ಉಡಾಫೆ’ ಎಂದು ಕರೆಯುವವರೂ ಇದ್ದಾರೆ. ಇದು ಉಡಾಫೆ ಎಂದು ನನಗನಿಸುವುದಿಲ್ಲ. ಇದು ಜೀವನೋತ್ಸಾಹ. ಈ ಉತ್ಸಾಹವೇ ನಮ್ಮ ಭವಿಷ್ಯವನ್ನು ನಿರ್ಧರಿಸುವ ಚೇತನವೂ ಹೌದು. ಇದನ್ನು ಸ್ವಾಗತಿಸುತ್ತಲೇ ನನ್ನ ಮತ್ತು ಅವಧಿಯ ಜೊತೆ ಕೈಜೋಡಿಸಿದ ಎಲ್ಲ ಮಿತ್ರರ ನೆರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ಇದನ್ನೆಲ್ಲ ಓದುವುದೆಂದರೆ,ನಮ್ಮ ಜೊತೆ ಕೈಜೋಡಿಸುವುದು ಎಂದೇ ಅರ್ಥ. ಪ್ರೀತಿಯಿಂದ ಒಬ್ಬರ ಕೈ ಒಬ್ಬರು ಹಿಡಿಯುತ್ತ, ಮುಂದೆ ಮುಂದೆ ಸಾಗುವುದೆಂದರೆ ಎಲ್ಲ ಮನುಷ್ಯ ಹೃದಯಗಳಿಗೆ ಕೊಂಡಿ ಬೆಸೆದಂತೆ. ಅಲ್ಲಿ ಜಾತಿ, ಮತ, ಧರ್ಮ, ಭಾಷೆ, ರಾಜ್ಯ, ರಾಷ್ಟ್ರಗಳ ಗಡಿರೇಖೆಗಳು ಇರುವುದಿಲ್ಲ. ಗಂಡು ಹೆಣ್ಣುಗಳೆಂಬ ಭೇದಗಳೂ ಇರುವುದಿಲ್ಲ. ಸಾಹಿತ್ಯ, ಸಂಸ್ಕೃತಿಗಳಿರುವುದೇ ಇಂಥ ಕೆಲಸಕ್ಕಾಗಿ. ಈ ಮೂಲಕ ಅವಧಿಯೂ ಒಂದು ಕೊಂಡಿ ಜೋಡಿಸುತ್ತಿರುವುದು ಸಂತೋಷದ ಸಂಗತಿ. ಪ್ರೀತಿಯಿಂದ ಈ ವಿಶೇಷವನ್ನು ನಿಮ್ಮ ಕೈಗಿಡುತ್ತಿದ್ದೇನೆ.

‍ಲೇಖಕರು Avadhi

September 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಚೈತ್ರಾ ಶಿವಯೋಗಿಮಠ

    “ಹೊಸ ತಲೆಮಾರಿನ ಈ ಕ್ರಿಯಾಶೀಲತೆಯನ್ನು ‘ಉಡಾಫೆ’ ಎಂದು ಕರೆಯುವವರೂ ಇದ್ದಾರೆ. ಇದು ಉಡಾಫೆ ಎಂದು ನನಗನಿಸುವುದಿಲ್ಲ. ಇದು ಜೀವನೋತ್ಸಾಹ. ” ಎಂತಹ ಒಳ್ಳೆಯ ಆಲೋಚನೆ ಮತ್ತು ಮಾತು ಸರ್ ಧನ್ಯವಾದಗಳು..

    ಪ್ರತಿಕ್ರಿಯೆ
  2. ಕೈದಾಳ್ ಕೃಷ್ಣಮೂರ್ತಿ

    ಕಿರಿಯ ತಲೆಮಾರಿನ ಮೇಲೆ ನಿಮಗಿರುವ ಪ್ರೀತಿ ಯಾವ ಅಳತೆಗೋಲಿನಿಂದಲೂ ಅಳೆಯಲು ಸಾಧ್ಯವಿಲ್ಲ. ನಿಮ್ಮ ಕಳಕಳಿ, ಅದಮ್ಯ ಪ್ರೀತಿಗೆ ಅಭಾರಿ.

    ಪ್ರತಿಕ್ರಿಯೆ
  3. Deepa Hiregutti

    ವಿಚಾರಪೂರ್ಣ ಬರೆಹ. ಧನ್ಯವಾದ ಸರ್.

    ಪ್ರತಿಕ್ರಿಯೆ
  4. T S SHRAVANA KUMARI

    ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲವೇನೋ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: