ದೀಪ ಹಚ್ಚಾ!

ಪ್ರೀತಿಯ ಕರೆಗೆ ಅಷ್ಟು ಶಕ್ತಿ ಇದೆಯೇನೋ ನಮಗೆ ಗೊತ್ತಿಲ್ಲ. ಎಸ್ ವಿ ಪರಮೇಶ್ವರ ಭಟ್ಟರ ಕವನ ದೀಪ ಹಚ್ಚಾ! ದ ಆಯ್ದ ಭಾಗ ನೀಡುತ್ತಿದ್ದಂತೆಯೇ ಅವಧಿಗೆ ಪತ್ರಗಳ ಸುರಿಮಳೆಯೇ ಸುರಿದಿದೆ . ಒಬ್ಬೊಬ್ಬರಿಗೂ ಒಂದೊಂದು ರೀತಿಯ ಭಾವನೆಗಳನ್ನು ಈ ಕವಿತೆ ಬಡಿದೆಬ್ಬಿಸಿದೆ.

ಇಡೀ ಕವನವನ್ನು ಅವಧಿಯಲ್ಲಿ ಕಾಣಿಸಿ ಎಂದು ಎಲ್ಲರೂ ಕೇಳಿದ್ದಾರೆ. ಒಂದು ಕವಿತೆ ಜಗದ ಬೆಳಕಾಗಬಹುದು ಎಂದವರು ಯಾರು? ಇಲ್ಲಿದೆ ಅಂತಹ ಬೆಳಕು ಮೂಡಿಸಿದ ಕವಿತೆ. ಯಥಾ ಪ್ರಕಾರ ಶಿವಮೊಗ್ಗ ಕನ್ನಡ ಸಂಘಕ್ಕೆ, ಜೆ ಕೆ ರಮೇಶ್ ಅವರಿಗೆ ವಂದನೆಗಳು.  

img_1538.jpg

ಪ್ರೀತಿಯ ಕರೆಕೇಳಿ  ಆತ್ಮನ ಮೊರೆಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ

ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ
ದೀಪ ಹಚ್ಚಾ

ಬಾಳ ಮುಂಬೆಳಗುರಿದು ಹಗರಣದ ಬೈಗಿಳಿದು
ಕಪ್ಪೇರಿ ಬಂದಿತು 
ದೀಪ ಹಚ್ಚಾ

ಕರಿಗೆಜ್ಜೆ ಕುಣಿಸುತ್ತಾ ಕಣ್ಣೀರ ಮಿಡಿಯುತ್ತಾ
ಇರುಳಾಕೆ ಬಂದಳು
ದೀಪ ಹಚ್ಚಾ

ಕಾಲರಾಯನ ಗಾಲಿ ಕತ್ಲಲ್ಲೇ ತಿರುಗಲಿ
ನನ್ನೆದೆಗೆ ನಿನ್ನೊಲವ
ದೀಪ ಹಚ್ಚಾ

ದೇಹದ ಗೂಡಲಿ ನಿನ್ನೊಲವು ಮೂಡಲಿ
ಜಗವೆಲ್ಲ ನೋಡಲಿ
ದೀಪ ಹಚ್ಚಾ

ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ
ದೀಪ ಹಚ್ಚಾ

ಬೆಲ್ಲದಂತೆಲ್ಲ ಬಗೆ ಕರಗುತಲಿಹುದೊಳಗೆ
ನಿನ್ನನೆ ಬೇಡುವೆ
ದೀಪ ಹಚ್ಹ್ಚಾ

ದೀಪಿಲ್ಲ ಧೂಪಿಲ್ಲ ಝಳಝಳವಿನಿಸಿಲ್ಲ
ಕಳಕಳವಾಯ್ತೆಲ್ಲ
ದೀಪ ಹಚ್ಚಾ

ಹಳೆಬಾಳು ಸತ್ತಿತ್ತು ಕೊನೆಬಾಳು ಸುಟ್ಟಿತ್ತು
ಹೊಸಬಾಳು ಹುಟ್ಟಿತ್ತು
ದೀಪ ಹಚ್ಹ್ಚಾ

ಸಾವಿನ ಒಳಸಂಚು ಮಾಯದ ಕಣ್ಮಿಂಚು
ನಿನ್ನೆದುರು ನಂದಿತು
ದೀಪ ಹಚ್ಚಾ

ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ
ದೀಪ ಹಚ್ಚಾ

ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ
ಸುಜ್ಞಾನಪ್ರದೀಪ
ದೀಪ ಹಚ್ಚಾ

ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ
ತೇಜೋರೂಪನೆ
ದೀಪ ಹಚ್ಚಾ
ವಿಶ್ವಮೋಹಿತಚರಣ ವಿವಿಧವಿಶ್ವಾಭರಣ
ಆನಂದದ ಕಿರಣ
ದೀಪ ಹಚ್ಚಾ

ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಏಳಲಿ
ದೀಪ ಹಚ್ಚಾ

ಭವದಂಧಕಾರದಿ ಎನ್ನ ಸಂಸಾರದಿ
ನಿಂದೀಪ ಬೆಳಗಲಿ
ದೀಪ ಹಚ್ಚಾ

ನನ್ನಂತರಂಗದಿ ನಂದದೆ ನಿಂದೀಪ
ನಂದಾದೀಪವಾಗಿರಲಿ
ದೀಪ ಹಚ್ಚಾ

‍ಲೇಖಕರು avadhi

January 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. sudhanva deraje

    ಎಲ್ಲದಕ್ಕೂ ಒಂದು ಅವಧಿಯಿದೆ ಎನ್ನುವುದನ್ನು ಸುಳ್ಳಾಗಿಸುವಂತೆ “ಅವಧಿ’ ಚೆನ್ನಾಗಿ ಬರುತ್ತಿದೆ ! ನೀವು ಅಪ್‌ಲೋಡ್ ಮಾಡುವ ಫೋಟೊ ಸೈಜ್ ಕೊಂಚ ಕಡಿಮೆ ಮಾಡಿಕೊಂಡರೆ ಓದಲು ಇನ್ನಷ್ಟು ಸರಾಗವಾದೀತು ಅಂದುಕೊಂಡಿದ್ದೇನೆ.

    ಪ್ರತಿಕ್ರಿಯೆ
  2. chetana

    ee kavana haaDiddu kELidde.bahaLa ishTa paTTidde. But eega, OduvAga innU adbhuta anisuttide.
    dhanyavaada.

    – Chetana

    ಪ್ರತಿಕ್ರಿಯೆ
  3. venkatramana gowda

    ನನಗೆ ಕೂಡ ಈ ಪದ್ಯವನ್ನು ಕೇಳಿಸಿಕೊಳ್ಳುವುದು ತುಂಬಾ ಇಷ್ಟ. ಹಾಡು, ಸಂಗೀತಕ್ಕೆ ಒಂದಿಷ್ಟು ಹೊತ್ತು ಕಿವಿ ತೆರೆದಿಡಬೇಕು ಎಂದುಕೊಂಡಾಗೆಲ್ಲ ಅದಕ್ಕೆ ಈ ಹಾಡೇ ನಾಂದಿ. “ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ ಸೋತ ಉಲಿ ಏಳಲಿ ದೀಪ ಹಚ್ಚ” ಎಂಬ ಸಾಲಂತೂ ನೀಡುವ ಅನುಭವ ದಿವ್ಯವಾದುದು. ಅಡಿಗರ “ಪ್ರಾರ್ಥನೆ” ಕವಿತೆಯಲ್ಲಿ “ಯಾರ ಲೀಲೆಗೋ ಯಾರೊ ಏನೊ ಗುರಿಯಿರದೆ ಬಿಟ್ಟ ಬಾಣ…” ಎಂಬುದು ಕೂಡ ನನ್ನನ್ನು ತೀವ್ರವಾಗಿ ಕಾಡುವ ಸಾಲು. ಮನುಷ್ಯನನ್ನು, ಮನಸ್ಸನ್ನು ಪವಿತ್ರಗೊಳಿಸಬಲ್ಲ ಅದ್ಭುತ ಶಕ್ತಿ ಈ “ದೀಪ ಹಚ್ಚ” ಕವಿತೆಯದ್ದು ಎಂಬುದರಲ್ಲಂತೂ ಎರಡು ಮಾತಿಲ್ಲ.
    -ವೆಂಕಟ್ರಮಣ ಗೌಡ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: