ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪ್ತಿ ಭದ್ರಾವತಿ ಬರೆದ ಸಣ್ಣ ಕಥೆ

ತಿಮ್ಮಯ್ಯ ಮಾರ್ಕೆಟ್

ದೀಪ್ತಿ ಭದ್ರಾವತಿ


ವಿಐಎಸ್ಎಲ್ ಕಾರ್ಖಾನೆಯ ಸಂಜೆ ಐದರ ವಿಷಲ್ ಉಂಯ್ ಎಂದು ಕೂಗಿಕೊಂಡು ತಾಸು ಕಳೆದಿದ್ದರೂ ಬಿಸಿಲು ಮಾತ್ರ ಒಂದು ಚೂರು ಅತ್ತಿತ್ತಾಗುವ ಲಕ್ಷಣ ತೋರಿರಲಿಲ್ಲ. ಭದ್ರಾವತಿಯ ಬಿಸಿಲೇ ಹಾಗೆ ದಿನದ ಪಾಳಿ ಮುಗಿದ ಮೇಲೂ ಓವರ್ ಟೈಮ್ ಮಾಡುವ ನೌಕರನಂತೆ ದುಡಿಯುತ್ತದೆ ಅಷ್ಟೇ ಅಲ್ಲದೆ ಒಂದಿಷ್ಟು ಹೊತ್ತು ಅವರಿವರ ಸತಾಯಿಸಿ , ಬೆವರಿಳಿಸದೇ ಹಿಂಸಿಸಿ ಹನಿಯಾಗಿ ಕರಗಿಹೋಗದೆ ಒದ್ದಾಡಿಸಿ ಕತ್ತಲು ಕವಿಯುವ ಹೊತ್ತಿಗೆ ಸಾಕಷ್ಟು ಸುಸ್ತು ಮಾಡಿ ತಮಾಷೆ ನೋಡುತ್ತದೆ.
ಹಾಗಾಗಿಯೇ ಇಲ್ಲಿನ ಮುಕ್ಕಾಕಲು ಪಾಲು ಜನರೆಲ್ಲ ದೋಸೆ ಕಾವಲಿಯಲ್ಲಿ ಕಂಬಳಿ ಹೊದ್ದುಕೊಂಡ ಕಾಣುತ್ತಾರೆ, ಅದೂ ಅಲ್ಲದೆ ಕಬ್ಬಿಣ ಕಾಖರ್ಾನೆಯ ಗಾಳಿಯ ಪ್ರಬಾವದಿಂದಾಗಿಯೋ ಏನೋ ಸಾಮಾನ್ಯ ಎನ್ನುವಂತೆ ಬಹುತೇಕರು ಭದ್ರಾವತಿ ಚಿನ್ನ ಎನ್ನುವ ಅಡ್ಡ ಹೆಸರೊಂದನ್ನು ಹುಟ್ಟುತ್ತಿರುವಾಗಲೇ ಉಚಿತವಾಗಿ ಪಡೆದುಕೊಂಡೇ ಹುಟ್ಟುತ್ತಾರೆ. ಅದೇ ಬಣ್ಣ ಹೊತ್ತ ಮಾರಿಮುತ್ತು ಬೆಳಗಿನಿಂದ ಆ ಉರಿ ಬಿಸಿಲಿನಲ್ಲಿ ಕೂತು ಒಣಗಿ ಹೋಗಿದ್ದಾಳೆ. ಅವಳದ್ದು ದಿನಾ ಅದೇ ಕಾಯಕ. ಆಕೆ ಹಾಗೆ ಕೂರುತ್ತಾ ಒಂದು ದಶಕವೇ ಕಳೆದುಹೋಗಿದೆ. ಅವಳನ್ನು ಮಡಿಲಲ್ಲಿ ಕೂರಿಸಿಕೊಂಡು ಅಮ್ಮನಂತೆ ತಲೆ ನೇವರಿಸುವ ತಿಮ್ಮಯ್ಯ ಮಾಕರ್ೆಟ್ಟಿಗೂ ಅವಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಹಾಗಂತ ಆಕೆಯೇನು ಅಲ್ಲಿ ಸುಮ್ಮನೆ ಕೂರುವುದಿಲ್ಲ. ತನ್ನ ಮುಂದೆ ತಾಜಾ ತಾಜಾ ಸೊಪ್ಪುಗಳನ್ನು ಹರವಿಕೊಂಡು ಗಿರಾಕಿಗಳ ಕಾಯುತ್ತ ಕೂರುತ್ತಾಳೆ. ಯಾರಾದರೂ ಗಿರಾಕಿ ತಿಮ್ಮಯ್ಯ ಮಾಕರ್ೆಟ್ಟಿನ ಎದುರಿಗೆ ಹಾದು ಹೋಗಿರುವ ಬಿ.ಎಚ್.ರಸ್ತೆಯಲ್ಲಿ ಇವಳೆಡೆಗೆ ಒಮ್ಮೆ ನೋಡಿಹೋದರೂ ಸಾಕು ಹರಿವೆಸೊಪ್ಪು, ಪಾಲಕ್ಸೊಪ್ಪು, ಹೊನಗಾನೆ ಸೊಪ್ಪು , ಕಿರೆಕಿರೆ ಸೊಪ್ಪು, ಲಿಂಬೆಹಣ್ಣು, ಹಸಿಮೆಣಸು, ಕೊತ್ತಂಬರಿ , ಕರಿಬೇವು ಹೀಗೇ ರೈಲ್ವೇ ಬೋಗಿಗಳು ಸಾಗಿದ ಹಾಗೆ ಒಂದರ ಹಿಂದೆ ಒಂದು ಸೊಪ್ಪಿನ ಹೆಸರು ತಾರಕಸ್ತರದಲ್ಲಿ ಅವಳ ಗಂಟಲಿನಿಂದ ದಢದಢನೆ ಧುಮ್ಮಿಕ್ಕಿ ಬೋರ್ಗರೆದು ಹರಿದು ಆಚೆ ಸಾಗಿ ಆ ವ್ಯಕ್ತಿಯ ಕಿವಿಯಲ್ಲಿ ರಿಂಗಣಿಸಿ ರಸ್ತೆಯಲ್ಲಿ ಸಾಗುವ ವಾಹನಗಳ ಶಬ್ಧದೊಂದಿಗೆ ಲೀನವಾಗಿ ಬಿಡುತ್ತದೆ.
ದಶಕಗಳ ಹಿಂದೆ ನಗರಕ್ಕೆ ಹೃದಯವಿದ್ದಂತೆ ಇರುವ ತಿಮ್ಮಯ್ಯ ಮಾಕರ್ೆಟ್ಟಿನಲ್ಲಿ ಮಾರಿಮುತ್ತುವಿನ ಅಂದರೆ ಅವಳ ಗಂಡ ಇಳಂನ ಅಂಗಡಿ ಇತ್ತು. ಇಳಂ ಅಲಿಯಾಸ್ ಇಳಂಗೋವನ್ ಮೂಲತ: ತಮಿಳು ನಾಡಿನ ಕಾಟ್ಪಾಡಿಯವನು. ಅವನ ತಂದೆ ಆ ಭಾಗದ ದೊಡ್ಡ ತೆಂಗಿನ ಎಣ್ಣೆ ವ್ಯಾಪಾರಿ. ಇಳಂಗೋವನ್ ಅವನ ಹುರಿ ಮೀಸೆಯ ಕಾಲಕ್ಕೆ ರಂಗಿನಾಟಕ್ಕೆ ಬಿದ್ದಿದ್ದರಿಂದ ಅವನಪ್ಪ ಬೈಯ್ದು ಮನೆಯಿಂದ ಹೊರಹಾಕಿದ್ದ. ಅಲ್ಲಿಂದ ಬರಿಗೈಯ್ಯಲ್ಲಿ ಬಂದವ ಯಾರ್ಯಾರದೋ ಸಹಾಯದಿಂದ ಬೆಂಕಿಪುರಕ್ಕೆ ಅಂದರೆ ಭದ್ರಾವತಿ ಬಂದು ಸೇರಿದ್ದ. ಆಗಿನ್ನೂ ಕಬ್ಬಿಣದ ಕಾಖರ್ಾನೆ ಕಣ್ಣುಬಿಟ್ಟು ಕೆಲವು ದಿನಗಳಾಗಿದ್ದವಷ್ಟೇ. ತಮಿಳರು, ತೆಲಗರು, ಮಲೆಯಾಳಿಗಳು ಎಲ್ಲರೂ ದಂಡಿಗೆ ದಂಡೇ ಬಂದು ಬಿದ್ದಿದ್ದರು. ಅವರ ಜೊತೆ ಜೊತೆಗೇ ಕಾರ್ಖಾನೆಗೆ ಅದಿರು ಬಂದು ಬೀಳುವ ಹಾಗೆ ಇವನೂ ಬಂದು ಬಿದ್ದಿದ್ದ. ಆದರೆ ಅದಿರನ ಧೂಳು ಕುಡಿಯುವ ಸೌಭಾಗ್ಯ ಇವನಿಗೆ ಇಲ್ಲದ ಕಾರಣಕ್ಕೋ ಏನೋ ಕಾಖರ್ಾನೆಯ ಸಂಸ್ಥಾಪಕರಾಗಿದ್ದ ವಿಶ್ವೇಶ್ವರಯ್ಯನವರು ಒಮ್ಮೆ ಭೇಟಿಗೆಂದು ಬಂದಾಗ ಕುರಿಮಂದೆಯಂತೆ ತುಂಬಿದ್ದ ಕಾರ್ಖಾನೆ ನೋಡಿ ಇವರೆಲ್ಲ ದಿವಾಳಿ ಎಬ್ಬಿಸಿಯೇ ಇಲ್ಲಿಂದ ಹೋಗೋದು ಎಂದು ಅರಿತು ಬೇಡವಾದವರನ್ನೆಲ್ಲ ಕಿತ್ತು ಆಚೆ ಬಿಸುಟಿದ್ದರು. ಹಾಗೆ ಬಿಸಾಡಿದರ ಪಟ್ಟಿಯಲ್ಲಿ ಇಳಂಗೋವನ್ ತರಹದ ಅಪ್ಪನಿಂದ ಬೈಸಿಕೊಂಡು ಬಂದಿದ್ದವರೇ ಬಹಳಷ್ಟಿದ್ದರು. ಹೊರಗೆ ಬಿದ್ದವರೆಲ್ಲ ಚಲ್ಲಾಪಿಲ್ಲಿಯಾಗಿ ಹೋದರೂ ಇಳಂಗೋವನ್ ಮಾತ್ರ ಅಲ್ಲಾಡಿರಲಿಲ್ಲ. ಅಪ್ಪನ ಹತ್ತಿರ ಹೋಗೋದಾದ್ರೆ ಕಂತೆ ಕಂತೆ ದುಡ್ಡು ತಕೊಂಡೇ ಎನ್ನುವ ನಿಧರ್ಾರಕ್ಕೆ ಕಟ್ಟು ಬಿದ್ದು ಅಂಟಿನಿಂತಿದ್ದರಿಂದ ಕಾಖರ್ಾನೆಯಿಂದ ಹೊರಬಿದ್ದದ್ದೇ ತಡ ಅಲ್ಲೇ ಕಾರ್ಖಾನೆಯ ಗೇಟಿನ ಹೊರಗೆ ತಳ್ಳುಗಾಡಿಯಲ್ಲಿ ಚಹಾ,ಕಾಈ, ಬೊಂಡ , ಬಜ್ಜಿ ಮಾರತೊಡಗಿದ್ದ. ವ್ಯಾಪಾರವೇನೋ ಕುಂಟುತ್ತಾ ಸಾಗತೊಡಗಿತ್ತು. ಆದರೆ ಇಳಂಗೆ ಬೇಗ ಬೇಗ ಹಣ ಮಾಡುವ ಹುಚ್ಚು, ಹೀಗಾಗಿ ಸಣ್ಣಪುಟ್ಟಕ್ಕೆ ಓಸಿ ಲೆಕ್ಕ ಬರೆಯತೊಡಗಿದ. ಸ್ವಲ್ಪ ದಿನದಲ್ಲೇ ಕೈಯ್ಯಲ್ಲಿ ಕಾಸು ಝಣ ಝಣ ಓಡಾಡತೊಡಗಿತ್ತು. ಕಾರ್ಖಾನೆಯೆಡೆಗೆ ಹೋಗುತ್ತಿದ್ದ ಹೆಜ್ಜೆಗಳೆಲ್ಲ ಮೊದಲು ಇಳಂಗೋವನ್ ಅಂಗಡಿಗೆ ಬಂದು ಚಹಾ ಕುಡಿದು ಬೇಕಾದ ನಂಬರ್ ಬರೆಸಿ ನಂತರ ಕೆಲಸಕ್ಕೆ ಹೋಗತೊಡಗಿದವು. ಇಳಂಗೋವನ್ ನಿಧಾನಕ್ಕೆ ಸಣ್ಣ ಪುಟ್ಟ ಸಾಲವನ್ನು ಕೊಡುವ ಮಟ್ಟಿಗೆ ಬೆಳೆದು ನಿಂತ. ಸಾಲ ಮತ್ತು ಸಾಲಗಾರರ ಜೊತೆಗಿನ ಸಂಬಂಧದಿಂದಾಗಿ ಕೆಲವೇ ದಿನಗಳ ಅಂತರದಲ್ಲಿ ಎಲ್ಲರಿಗೂ ಬೇಕಾದವನಾಗುತ್ತ ಇಳಂಗೋವನ್ ಎಂಬ ಹೆಸರಿನಿಂದ ಇಳಮಣ್ಣ ಇಳಂ ಆಗಿಬಿಟ್ಟ. ಇವನ ತಳ್ಳುಗಾಡಿಯ ಬುಡದಲ್ಲಿ ಬಂದು ನಿಂತು ಬೀಡಿ ಸೇದುವವರ ಸಂಖ್ಯೆ ಏರುಗತಿಯಲ್ಲಿ ನಡೆಯತೊಡಗಿ ಇದು ಕಾರ್ಖಾನೆಯ ಆಡಳಿತಾಧಿಕಾರಿಯ ಟೇಬಲ್ಲು ತಲುಪಿ, ತೀರಾ ಶಿಸ್ತಿನ ಅಧಿಕಾರಿಯಾಗಿದ್ದ ಆತ ಪೋಲೀಸರಿಗೆ ವಿಷಯ ಮುಟ್ಟಿಸಿ ಇಳಂನ ತಳ್ಳುಗಾಡಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿಸಿದ.
ಆ ನಂತರ ಅವರಿವರ ಕಾಲು ಕೈ ಹಿಡಿದು ತಿಮ್ಮಯ್ಯ ಮಾಕರ್ೆಟ್ಟಿನಲ್ಲಿ ಮುನ್ಸಿಪಾಲಿಟಿಗೆ ಸೇರಿದ ಮಳಿಗೆಯೊಂದನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ. ತದನಂತರವೂ ಅವನ ಒಂದಂಕಿ ವ್ಯವಹಾರವಾಗಲಿ, ಬಡ್ಡಿಲೇವಾದೇವಿಯಾಗಲಿ ನಿಲ್ಲಲಿಲ್ಲ. ತೆರದದ್ದು ಪುಟ್ಟ ತರಕಾರಿ ಅಂಗಡಿಯಾದರೂ ವರ್ಷಗಳ ನಡುವಿನಲ್ಲಿ ಕೈಗೆ ನಾಲ್ಕು ನಾಲ್ಕು ಉಂಗುರ ಕತ್ತಿನಲ್ಲೊಂದು ದಪ್ಪ ಹಗ್ಗದಂತಹ ಸರವನ್ನು ಹಾಕಿಕೊಂಡು ಅಡ್ಡಾಡತೊಡಗಿದ. ಬರುಬರುತ್ತ ಅವನ ಅಂಗಡಿ ದೊಡ್ಡ ದಾಸ್ತಾನು ಮಳಿಗೆಯಾಯಿತು. ಭದ್ರಾವತಿಯ ಸುತ್ತಮುತ್ತಲಿಗೂ ಇವನೇ ತರಕಾರಿ ಸರಬರಾಜು ಮಾಡತೊಡಗಿದ್ದ. ಆಗಲೇ ಮಾರಿಮುತ್ತು ಇಳಂನ ಕಣ್ಣಿಗೆ ಬಿದ್ದಿದ್ದಳು ದಪ್ಪ ಬೀಟ್ರೂಟಿನಂತೆ ಹೊಳೆಯುತ್ತಿದ್ದ ಮಾರಿಮುತ್ತು ಮೊದಮೊದಲು ತನ್ನ ಅಪ್ಪನ ಜೊತೆ ತರಕಾರಿ ಖರೀದಿಗೆ ಬರುತ್ತಿದ್ದವಳು ಕ್ರಮೇಣ ಇಳಂನ ಅಂಗಡಿಯ ಮಾಲೀಕಳಾದಳು.
ಮಾಕರ್ೆಟ್ಟಿನ ನಾಲ್ಕನೇ ಅಂಗಡಿ ಅಂದರೆ ಇಳಂನ ಎದುರು ಮಳಿಗೆ ಮಲ್ಲೇಶನದು. ಇಳಂ ಅಲ್ಲಿಗೆ ಬರುವವರೆಗೂ ಮಲ್ಲೇಶನದ್ದೇ ಕಾರುಬಾರು. ಇಳಂ ಬಂದ ಮೇಲೆ ಮಲ್ಲೇಶಿ ಪೂತರ್ಿಯಾಗಿ ಅಲ್ಲದಿದ್ದರೂ ಅರ್ಧಕ್ಕರ್ಧ ನೆಲಕಚ್ಚಿದ್ದ. ಮಲ್ಲೇಶನಿಗೆ ಇಳಂನನ್ನು ಕಂಡರಾಗುತ್ತಿರಲಿಲ್ಲ. ಎಲ್ಲೆಲ್ಲಿಂದಲೋ ಬಂದು ನಮ್ ಅನ್ನ ಕಿತ್ಕೋತಾವೆ ಕಾಟ್ಪಾಡಿಗಳು ಎಂದು ಅವರಿವರಲ್ಲಿ ಬೈಯ್ಯತ್ತ ತಿರುಗುತ್ತಿದ್ದ. ಇಳಂ ತಮಿಳುಗನ್ನಡದಲ್ಲಿ ಮಾತನಾಡುವಾಗಲೆಲ್ಲ ಹಂಗಿಸಿ ನಗುತ್ತಿದ್ದ. ಇದರಿಂದಾಗಿ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿ ತಾರಕಕ್ಕೇರುತ್ತಿತ್ತು. ಅವರ ಕದನ ಬಿಡಿಸಲು ಇಡೀ ತಿಮ್ಮಯ್ಯ ಮಾಕರ್ೆಟ್ ಒಂದಾಗಿ ಬಿಡುತ್ತಿತ್ತು. ಆ ದಿನವೂ ಆದದ್ದು ಹೀಗೆ, ಬೆಳಿಗ್ಗೆ ತರಕಾರಿ ಹೇರಿಕೊಂಡು ಬಂದ ಲಾರಿಯೊಂದರ ನಿಲುಗಡೆಯ ಸಲುವಾಗಿ ಜಗಳ ಆರಂಭವಾಗಿತ್ತು. ಯಾರೆಷ್ಟೇ ಪ್ರಯತ್ನ ಪಟ್ಟರೂ ಅವರಿಬ್ಬರ ಜಗಳ ಬಿಡಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಮಾತಿಗೆ ಮಾತು ಬೆಳೆಯುತ್ತಲೇ ಹೋಗಿ ಅದು ಇಳಂನ ಸಾವಿನೊಂದಿಗೆ ಪರ್ಯಾವಸನಗೊಂಡಿತ್ತು. ಮಲ್ಲೇಶ ಜೈಲು ಪಾಲಾಗಿದ್ದ.
ಇಳಂ ಸತ್ತ ನಂತರ ಮಾರಿಮುತ್ತು ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಳು. ತನ್ನ ಗಂಡನಿಂದ ಸಾಲ ಪಡೆದವರ್ಯಾರು ವಾಪಾಸ್ಸು ಕೊಡದೆ ನಾಮ ಹಾಕಿದರು. ಇಳಂ ಬಾಕಿ ಉಳಿಸಿಕೊಂಡಿದ್ದ ಹಣದ ಬಾಬ್ತು ಪಡೆಯಲು ಸಾಲಗಾರರು ಮುಗಿಬಿದ್ದರು. ಸ್ವಂತದವರು ಅವಳೆಡೆಗೆ ತಲೆ ಹಾಕಿಯೂ ಮಲಗಲಿಲ್ಲ. ಇದ್ದ ಮೂರು ಮಕ್ಕಳ ಸಲುವಾಗಿ ಗಂಡ ಸತ್ತ ತಿಂಗಳೊಳಗೆ ವ್ಯಾಪಾರಕ್ಕೆ ಕೂರುವುದು ಆಕೆಗೆ ಅನಿವಾರ್ಯವಾಯಿತು. ಇತ್ತ ಮಲ್ಲೇಶನ ಹೆಂಡತಿ ಜಾಂಬವತಿ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿ ಏನೂ ಇರಲಿಲ್ಲ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಮೂರು ತಿಂಗಳ ಅಂತರದಲ್ಲಿ ಆಕೆಯೂ ಮಾಕರ್ೆಟ್ಟಿನ ನಾಲ್ಕನೇ ಅಂಗಡಿಯ ಗಲ್ಲಾ ಪೆಟ್ಟಿಗೆ ಏರಿದಳು. ಒಂದೇ ದೋಣಿಯಲ್ಲಿ ಕೂತ ಹೆಂಗಸರಿಬ್ಬರೂ ದಿನಾ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳಲೇ ಇರಬೇಕಾದ ಸಂಧಿಗ್ಧತೆಗೆ ಸಿಲುಕಿಕೊಂಡರು. ಆಗಾಗ್ಗೆ ಕಣ್ಣುಗಳು ಡಿಕ್ಕಿ ಹೊಡೆದು ಕೆಂಡ ಕಾರುತ್ತಿದ್ದವು. ತಮ್ಮಗಳ ಇಂದಿನ ಸ್ಥಿತಿಗೆ ಒಬ್ಬರನ್ನೊಬ್ಬರು ದೂಷಿಸಿಕೊಳ್ಳತೊಡಗಿದರು. ಒಳಗೊಳಗೆ ಕುದಿಯುತ್ತ ಉಕ್ಕುತ್ತ ಒಬ್ಬರನ್ನು ನೋಡಿದಾಗ ಮತ್ತೊಬ್ಬರು ನೆಟಿಗೆ ಮುರಿದುಕೊಳ್ಳುತ್ತ ದಿನದೂಡುತ್ತಿದ್ದರು. ದಿನಕಳೆದಂತೆ ಅಮ್ಮಂದಿರನ್ನು ಹುಡುಕಿ ಬರುತ್ತಿದ್ದ ಅವರಿಬ್ಬರ ಮಕ್ಕಳು ಅವರ ನಡುವಿನ ತಂತುಗಳಾದರು. ಅವು ತಮ್ಮ ತಮ್ಮ ಅಮ್ಮಂದಿರ ಕಣ್ಣು ತಪ್ಪಿಸಿ ಸಂಧಿಮೂಲೆಯಲ್ಲಿ ಕಣ್ಣಮುಚ್ಚಾಲೆ ಆಡುತ್ತ, ಕುಂಟಬಿಲ್ಲೆ ಆಡುತ್ತ ಬಂಧ ಬೆಸೆಯತೊಡಗಿದವು. ಅವರಿಬ್ಬರಿಗೂ ಅದೇ ಬೇಕಿತ್ತೇನೋ ಎನ್ನುವಂತೆ ಮಕ್ಕಳನ್ನು ನೋಡಿಯೂ ನೋಡದವರಂತೆ ಸುಮ್ಮನಿರತೊಡಗಿದರು. ಮೆಲ್ಲಗೆ ಮಾತು ಆರಂಭಿಸಿ ಹೊಸೆದುಕೊಂಡರು.
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವ ಸಮಯಕ್ಕೆ ಸರಿಯಾಗಿ ಅವರಿಬ್ಬರ ಜೀವನ ಚಕ್ರ ಪೂತರ್ಿ ಕೆಟ್ಟು ಬೀದಿಗೆ ಬಂದಿತ್ತು. ಬಕಾಸುರನಂತಹ ಯಂತ್ರವುಂದು ರಸ್ತೆ ಅಗಲೀಕರಣದ ನೆಪವೊಡ್ಡಿ ಇಡೀ ತಿಮ್ಮಯ್ಯ ಮಾಕರ್ೆಟ್ನ ನಗುವನ್ನೇ ತಿಪ್ಪೆಗೆಸೆದು ನಡೆದುಬಿಟ್ಟಿತು. ಜಾಂಬವತಿ ದಿಕ್ಕು ತೋಚದೆ ತನ್ನ ತಂದೆ ಮನೆಗೆ ಹೊರಟು ನಿಂತಳು. ಹಾಗೆ ಹೊರಡುವುದಕ್ಕೂ ಮೊದಲು ಮಾರಿಮುತ್ತುವಿನ ಮಡಿಲಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿ ಅತ್ತಳು. ಹಾಗೆ ಬಿಕ್ಕುವ ಮಧ್ಯ ಮಧ್ಯದಲ್ಲಿ ತನ್ನ ಗಂಡನನ್ನು ಕ್ಷಮಿಸು: ಎಂದು ಪದೇ ಪದೇ ಬೇಡಿಕೊಂಡಳು. ಅವಲ ಆ ಮಾತಿಗೆ ಸಮ್ಮತಿ ಸೂಚಿಸುವಂತೆ ತಲೆಯಾಡಿಸಿ ತಾನೂ ಕೂಡ ಸೆರಗಿನಂಚಿನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತ ಎಲ್ಲ ಒಳ್ಳೇದಾಯ್ತದೆ ಎನ್ನುತ್ತ ಅವಳ ಮಕ್ಕಳ ತಲೆ ನೇವರಿಸಿ ಎಲೆ ಅಡಿಕೆಯ ಜೊತೆ ಮಕ್ಕಳಿಗೆಂದು ಜಿಲೇಬಿಯನ್ನು ಕೊಟ್ಟು ಕಳಿಸಿದ್ದಳು. ಈ ಎಲ್ಲ ಘಟನೆಯಿಂದ ಮಾರಿಮುತ್ತು ಕೆಲವು ದಿನ ಏನೂ ಮಾಡಲು ತೋಚದೆ ಅನಾಥಳಂತೆ ಕೂತಿದ್ದಳು. ಮನೆಯಲ್ಲಿದ್ದ ಅಕ್ಕಿ ಬೇಳೆಗಳೆಲ್ಲ ನಾ ಮುಂದು ತಾ ಮುಂದು ಎಂದು ಖಚರ್ಾಗುತ್ತಿದ್ದು ಅರಿವಿಗೆ ಬಂದ ನಂತರ ಮತ್ತೆ ಅದೇ ಮಾಕರ್ೆಟ್ಟಿನ ರಾಶಿ ಬಿದ್ದ ಕಲ್ಲುಗಳನ್ನು ಬದಿಗೆ ಎತತಿ ಹಾಕಿ ಹಾಕಿ ತನ್ನ ಸೊಪ್ಪಿನ ಬುಟ್ಟಿಗಳನ್ನು ಇಟ್ಟು ಮಾರುವಷ್ಟು ಜಾಗ ಹುಡುಕಿಕೊಂಡಳು. ಇವಳ ಈ ಸಾಹಸ ನೋಡಿದ ಇನ್ನಿತರರೂ ಅದೇ ದಾರಿ ಕಂಡುಕೊಂಡರು. ಮತ್ತೆ ಅಲ್ಲಿ ಹೊಸ ರೀತಿಯ ಸಾಮ್ರಾಜ್ಯವೊಂದು ಹುಟ್ಟಿಕೊಂಡಿತು.
ದಿಕ್ತಟ ಇದೀಗ ಪೂರ್ತಿ ನಶೆ ಏರಿಸಿಕೂತಿತ್ತು. ಮಾರಿಮುತ್ತು ಉಳಿದಿದ್ದ ಹರವಿದ್ದ ಸೊಪ್ಪುಗಳನ್ನೆಲ್ಲ ತನ್ನ ಬಿದಿರು ಬುಟ್ಟಿಯಲ್ಲಿಟ್ಟುಕೊಂಡು ಅದರ ಮೇಲೊಂದು ಒದ್ದೆಯಾದ ಗೋಣಿ ತಾಟು ಮುಚ್ಚಿಕೊಂಡಿದ್ದೇ ಕಂಕುಳಲ್ಲಿ ಇರಿಸಿಕೊಂಡು ಬಿರಬಿರನೆ ಹೆಜ್ಜೆ ಹಾಕತೊಡಗಿದಳು. ಮನೆಗೆ ಹೋಗಿ ರಾಗಿಮುದ್ದೆ ತಿರುವುವಷ್ಟರಲ್ಲಿ ಮಕ್ಕಳು ಮಲಗದಿದ್ದರೆ ಸಾಕು ತಡವಾಯಿತು ಎಂದುಕೊಳ್ಳುತ್ತ ರಂಗಪ್ಪವೃತ್ತದಲ್ಲಿ ಅಡ್ಡ ತಿರುಗುವುದಕ್ಕು ಸರಿಯಾಗಿ ವ್ಯಕ್ತಿಯೊಬ್ಬ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದೇಬಿಟ್ಟಳು. ಕೆಕ್ಕರಿಸಿಕೊಂಡು ಏನಲೇ ಕಣ್ ಕಾಣಾಕಿಲ್ವ ನಿಗಾ ಮಡಿಕ್ಕಂಡು ಓಗಕ್ಕಾಗಕಿಲ್ವ ಎಂದು ಕೂಗಿವುದಕ್ಕೂ ಆ ವ್ಯಕ್ತಿ ಬೀದಿ ದೀಪದಲ್ಲಿ ಸರಿಯಾಗಿ ಗೋಚರಿಸುವುದಕ್ಕೂ ಒಂದೇ ಆಯಿತು. ಮಾರಿಮುತ್ತು ಆ ಆಸಾಮಿಯನ್ನು ಕಂಡದ್ದೇ ತಡ ಗರಬಡಿದವಳಂತೆ ನಿಂತು ಸಾವರಿಸಿಕೊಂಡು ಅಕ್ಷರಶ: ಓಡಿ ಮನೆ ಸೇರಿಕೊಂಡಳು.
ಮನೆಗೆ ಬಂದ ಮೇಲೆಯೂ ಅಡಿಗೆ ಮಾಡಿ ಮಕ್ಕಳಿಗೆ ಊಟ ಹಾಕಿ ಮಲಗಿಸುವಾಗಲೂ ಅವಳಿಗೆ ಆ ಕ್ಷಣದ ಅನಿರೀಕ್ಷತೆಯಿಂದ ಹೊರಬರಲಾಗಲಿಲ್ಲ. ಹೌದು ಅವನೇ ಜೈಲಿಗೆ ಹೋಗಿದ್ದ ಮಲ್ಲೇಶ ನನ್ನ ಬದುಕನ್ನೇ ಬೀದಿಗೆ ತಂದವ, ತನ್ನ ತನ್ನ ಮೂವರು ಮಕ್ಕಳ ಬದುಕನ್ನೇ ಮೂರಾಬಟ್ಟೆ ಮಾಡಿಹಾಕಿದವ ಎಂದು ತನ್ನ ಗಂಡನ ಸಾವಿನ ಘಟನೆಯನ್ನು ನೆನಪಿಸಿಕೊಂಡಳು ಮನಸ್ಸು ಕ್ಷುದರವಾಯಿತು. ಇಳಂನ ಸಾವಿನ ನಂತರ ತಾನು ಪಟ್ಟ ಕಷ್ಟಗಳು ಒಂದೊಂದೇ ಎದುರುನಿಂತತಾಗಿ ದು:ಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತಳು. ಸ್ವಲ್ಪ ನಿರಾಳವಾದಂತೆ ಅನ್ನಿಸಿತು. ತನಗೆ ತಾನೆ ಸಮಾಧಾನ ಹೇಳಿಕೊಂಡಳು ಎಲ್ಲ ನನ್ನ ಗ್ರಹಚಾರ ಅವ್ನು ನಪಕ್ಕೆ ..ಆ ದಿನ ಇಳಂ ಮಲ್ಲೇಶನ ಕಪ್ಪಾಳಕ್ಕೆ ಹೊಡೆಯದೇ ಹೋಗಿದ್ದರೆ ಮಲ್ಲೇಶ ಯಾಕೆ ಕುತ್ತಿಗೆಗೆ ಕೈ ಹಾಕಿ ತಳ್ಳುತತಿದ್ದ ಎಂದು ತನ್ನನ್ನೇ ಪ್ರಶ್ನಿಸಿಕೊಂಡಳು. ಉತ್ತರವನ್ನು ಹುಡುಕಿಕೊಂಡವಳ ಹಾಗೆ ಎಲ್ಲಾ ನನ್ನ ನನ್ನ ಮಕ್ಕಳ ಕರ್ಮ ಎಂದುಕೊಳ್ಳುತ್ತ ದೀರ್ಘ ನಿಟ್ಟಿಸಿರೊಂದನ್ನು ಹೊರಹಾಕಿ ಚಾಪೆಯ ಮೇಲೆ ಉರುಳಿಕೊಂಡಳು.
ಮರುಗಳಿಗೆಯಲ್ಲೇ ಮಲ್ಲೇಶ ಯಾಕೆ ಬಂದಿರಬಹುದು ಎಂಬ ವಿಚಾರ ಪ್ರಶ್ನೆಯ ರೂಪದಲ್ಲಿ ಅವಳ ತಲೆ ಹೊಕ್ಕು ಗಿರಕಿ ಹೊಡೆಯತೊಡಗಿತು. ಜಾಂಬವತಿ ಊರಿಗೆ ಹೋಗಿದ್ದು ಗೊತ್ತಿಲ್ಲದೆ ಬಂದಿರಬಹುದಾ? ಇಳಂ ಮೇಲಿನ ದ್ವೇಷ ಇನ್ನೂ ಎದೆಯೊಳಗೆ ಇದ್ದಿರಬಹುದಾ? ಎಣಿಸಿದಳು. ಹೃದಯ ಕಂಪಿಸಿತು ದೇವ್ರೇ ಕಾಪಾಡು ಎನ್ನುತ್ತ ತನ್ನೆರಡು ಕೈಗಳಿಂದ ಗಲ್ಲ ಬಡಿದುಕೊಂಡು ಎದುರಿನ ಪೋಟೋಕ್ಕೆ ಕೈ ಮುಗಿದಳು. ಜಾಂಬವತಿ ಇರಬೇಕಿತ್ತು ಮನಸ್ಸು ಹತ್ತಾರು ಬಾರಿ ಆಶಿಸಿತು. ಹೊಯ್ದಾಟದಲ್ಲಿಯೇ ಇದ್ದ ಮನಸ್ಸು ನಿದ್ರೆಯ ಕಡೆಗೆ ಯಾವಾಗ ಜಾರಿತೋ ಆಕೆಗೆ ಗೊತ್ತಾಗಲಿಲ್ಲ.
ಮರುದಿನ ಬೆಳಿಗ್ಗೆ ಮಾರಿಮುತ್ತು ಮಾಕರ್ೆಟ್ಟಿನಲ್ಲಿ ತನ್ನ ಅಂಗಡಿ ಸರಿ ಮಾಡುತ್ತಿರುವಾಗಲೇ ಮಲ್ಲೇಶ ಹಾಜರಾಗಿದ್ದ. ಬೇಕಂತಲೇ ಅಟತ್ತ ಇತತ ಓಡಾಡುತ್ತ ಅವಳ ಗಮನ ಸೆಳೆಯುವ ಪ್ರಯತ್ನ ಮಾಡತೊಡಗಿದ. ತನ್ನ ಹಳೆಯ ಸ್ನೇಹಿತರನ್ನೆಲ್ಲಾ ಸೇರಿಸಿಕೊಂಡು ಅದೂ ಇದು ಕಥೆ ಹೇಳಿ ಚಹಾ ಕುಡಿಸಿದ. ಅಲ್ಲಿದ್ದವರೆಲ್ಲ ಹಳೆಯದನ್ನು ಮರೆತೇ ಬಿಟ್ಟವರಂತೆ ಅವನ ಜೊತೆಗೆ ಹರಟೆ ಕೊಚ್ಚುತ್ತಿದ್ದರು. ಆದರೆ ಇದನ್ನೆಲ್ಲ ತನ್ನ ಓರೆಗಣ್ಣಿನಲ್ಲಿಯೇ ನೋಡುತ್ತಿದ್ದ ಮಾರಿಮುತ್ತುಗೆ ಕೋಪ ತಾರಕಕ್ಕೇರುತ್ತಿದ್ದರೂ ಅದುಮಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು. ಅವನು ತನ್ನ ಜೈಲು ಅನುಭವಗಳ ಹೇಳಿಕೊಂಡು ನಗುವಾಗಲಲ್ಲ ಮಾರಿಮುತ್ತುವಿಗೆ ತನ್ನ ಗಂಡ ಇಲ್ಲವಾಗಲು ಇವನೇ ಕಾರಣ ಎಂದಿಗೂ ಇವನನ್ನು ಕ್ಷಮಿಸಬಾರದು ಎಂದೆನ್ನಿಸುತ್ತಿತ್ತು. ತನ್ನ ಕಡೆಗಣ್ಣಿನಲ್ಲಿ ಅವನ ಪ್ರತಿ ಚಲನವಲನ ಗಮನಸುತ್ತಿದ್ದರೂ ತಲೆ ಎತ್ತಿ ನೋಡುವ ಧೈರ್ಯ ಸಾಲದೆ ಸುಮ್ಮನಿದ್ದಳು. ಮೂರ್ನಾಲ್ಕು ದಿನ ಇದೇ ಪುನರಾರ್ವತನೆಯಾಯಿತು. ಬೇಕೆಂತಲೇ ಅವಲ ಇವಳ ಬಳಿ ಬರುವ ಪ್ರಯತ್ನ ಮಾಡುತ್ತಿದ್ದ ಇವಳಿಗೆ ಕೇಳುವಂತೆ ಮಾತನಾಡುತ್ತಿದ್ದ. ತನ್ನ ಪ್ರತಿ ನಡವಳಿಕೆಯನ್ನು ಅವಳು ಗಮನಿಸಲಿ ಎನ್ನುವ ಭಾವ ಅವನಲ್ಲಿ ಹಾಸುಹೊಕ್ಕಿತ್ತು. ಅವ ಯಾಕೆ ಹೀಗೆಲ್ಲ ಮಾಡುತ್ತಿರಬಹುದು ಎಂದು ತಿಳಿಯದೆ ಮಾರಿಮುತ್ತು ಚಿಂತೆಗೀಡಾದಳು. ಅಂತೆಯೇ ಅವನ ಕುರಿತಾದ ಅವಳ ಭಯವೂ ದಿನದಿನಕ್ಕೆ ಹೆಚ್ಚಾಗತೊಡಗಿತು.
ಈ ಎಲ್ಲದರ ನಡುವೆಯು ಮಾರಿಮುತ್ತುವಿಗೆ ಜಾಂಬವತಿ ಹೇಗಿದ್ದಾಳೆ? ಮಕ್ಕಳು ಹೇಗಿದ್ದಾವೆ? ಮತ್ತೆ ಆಕೆ ಇಲ್ಲಿಗೆ ವಾಪಾಸ್ಸು ಬರ್ತಾಳಾ? ಎಂದು ಕೇಳಬೇಕೆನ್ನಿಸುತ್ತಿತ್ತು. ಆದರೆ ಮನದೊಳಗೆ ಅವನ ಕುರಿತಾಗಿನ ಭೀತಿ ಮತ್ತು ಕೋಪ ಇದಕ್ಕೆ ಆಸ್ಪದವನ್ನೇ ನೀಡಲಿಲ್ಲ. ಕೊನೆಗೊಂದು ದಿನ ಏನಾದರಾಗಲಿ ಕೇಳಿಯೇ ಬಿಡುವ ಎನ್ನುವ ನಿಧರ್ಾರಕ್ಕೆ ಬಂದು ಬಿಟ್ಟಳು.ಆದರೆ ಆದದ್ದೇ ಬೇರೆ ಆಕೆಯ ಹದಿನೈದು ವರ್ಷದ ಮಗಳು ಶಾಲೆಯಿಂದ ಬಂದವಳೇ ಗಾಬರಿಯಾಗಿ ತನ್ನನ್ನು ಯಾವುದೋ ಗಂಡಸು ಮನೆಯವರೆಗೆ ಹಿಂಬಾಲಿಸಿ ಬಂದದ್ದಾಗಿ ತಿಳಿಸಿ ಮಲ್ಲೇಶನ ಚಹರೆ ಹೇಳಿದಳು. ಅರೇ ಈ ಮಗುವಿನ ಪರಿಚಯ ಹೇಗೆ ಇವನಿಗೆ ಅನ್ನಿಸಿ ಆಶ್ಚರ್ಯವಾಯಿತಾದರೂ ಮಗಳು ಅಂಗಡಿಯ ಹತ್ತಿರ ಬಂದಾಗಲೇ ನೋಡಿರಬೇಕು ಎಂದುಕೊಂಡಳು. ಮರುಹೊತ್ತಿನಲ್ಲೇ ಸಿಟ್ಟು ನೆತ್ತಿಗೇರಿತು. ಅನುಮಾನವೂ ನುಗ್ಗಿ ಬಂದಿತು. ತಂಗ್ಯಾರು ದಿಕ್ಕಿಲ್ಲ ಅಂತ ಇಂಗೆ ಇಂದೆ ಬಿದ್ದವ್ನಾ? ನಾಳೆ ಒತ್ತಾರೆ ಸಿಗ್ಲಿ ಅವ್ನು ಅಲ್ಲ ಮಗೀನ್ ಬೆನ್ ಇಡ್ದವ್ನೇ ಅಂದ್ರೇ ಕೊಲೆಗಡುಕ್ ನನ್ಮಗ ಏನ್ ಬೇಕಾರು ಮಾಡ್ಬೌದು ಅಂದ್ಕಂಡಿದ್ದಾನೆ ಅಡವುಗಚ್ಚಿದಳು.
..
 
ರಂಗಪ್ಪ ವೃತ್ತದಲ್ಲಿ ಮಲ್ಲೇಶ ಆಕಸ್ಮಿಕವಾಗಿ ಮಾರಿಮುತ್ತುವಿಗೆ ಡಿಕ್ಕಿ ಹೊಡೆದಿದ್ದ. ಆದರೆ ಆತ ಯಾರನ್ನು ಅರಸಿ ಬಂದಿದ್ದನೋ ಆಕೆ ಇಷ್ಟು ಬೇಗ ಸಿಗಬಹುದೆಂದುಕೊಂಡಿರಲಿಲ್ಲ. ಒಂದು ಕ್ಷಣ ಅವನಿಗೂ ಅವಳ ಗುರುತು ಹತ್ತಿರಲಿಲ್ಲ. ಮತ್ತೆ ನಿಮಿಷದಲ್ಲೇ ಸ್ಪಷ್ಟವಾಗಿ ಗುರುತಿಸಿದ್ದ. ಹತ್ತು ವರ್ಷದ ಅವಧಿಯಲ್ಲಿ ಸಾಕಷ್ಟು ಸೊರಗಿದ್ದ ಅವಳ ತೊಳೆದ ಕಣ್ಣುಗಳು ಮಾತ್ರ ಹಾಗೆಯೇ ಇದ್ದವು. ತನ್ನ ಗುರುತು ಹತ್ತಿ ಅವಸರರವಸರವಾಗಿ ಹೋಗುತ್ತಿದ್ದವಳನ್ನು ಕರೆದು ನಿಲ್ಲಿಸಬೇಕೆನ್ನಿಸಿತು..ಧೈರ್ಯ ಜೊತೆ ನೀಡಿರಲಿಲ್ಲ. ಅವಳು ಕಣ್ಮರೆಯಾಗುವವರೆಗೂ ಅವಳನ್ನೇ ನೋಡುತ್ತಿದ್ದ ಮಣಗಟ್ಟಲೇ ಬಂಗಾರ ಹೇರಿಕೊಂಡು ನವಿರಾಗಿ ನಗುತ್ತಿದ್ದ ಆಕೆಗೂ ಸೊಪ್ಪಿನ ಒಣಗಿದ ದಂಟಿನಂತಿರುವ ಈಕೆಗೂ ಅಜಗಜಾಂತರ. ಆಕೆಯ ಹಿಂದೆ ಬೀಸಿ ಹಾರುತ್ತಿದ್ದ ಸೆರಗಿನ ತೇಪೆ ಅವನ ಕಣ್ಣಿನಲ್ಲಿ ಹನಿಯ ರಾಶಿಯನ್ನೇ ಕಡೆದು ತಂದಿತ್ತು. ಅವಳ ಇಂದಿನ ಸ್ಥಿತಿಗೆ ತಾನೇ ಕಾರಣ ಎಂಬ ಭಾವದ ಬಿರುಗಾಳಿ ಅವನೆದೆಯ ದಡದಲ್ಲಿ ಎದ್ದು ಅವನ ಕಂಗಳಲ್ಲಿ ಇಣುಕಿ ನೋಡಿತು. ತಾನು ಅಂದು ಸುಮ್ಮನಿರಬೇಕಿತ್ತು. ಅವನು ಹತ್ತು ವರ್ಷಗಳ ಕಾಲ ಜೈಲಿನ ಕಂಬಿಗಳ ಹಿಂದೆ ಪ್ರತಿದಿನ ಜಪಿಸಿದ ಮಂತ್ರವನ್ನೊಮ್ಮೆ ಮತ್ತೆ ಉಚ್ಚರಿಸಿದ.
ಜಾಂಬವತಿ ಊರು ಖಾಲಿ ಮೇಲೆ ಅವನಿಗೆ ಅಲ್ಲಿಗೆ ಬರುವ ಅಗತ್ಯವಿರಲಿಲ್ಲ. ಆದರೆ ತನ್ನ ಹೆಂಡತಿ ಮಕ್ಕಳನ್ನು ನೋಡುವುದಕ್ಕೂ ಮೊದಲು ಮಾರಿಮುತ್ತುವನ್ನು ಕಾಣುವ ಹಂಬಲ ಅವನಲ್ಲಿ ಅಧಿಕವಾಗಿತ್ತು. ಮಾರಿಮುತ್ತುವಿನ ಬಳಿಯೊಮ್ಮೆ ಮಾತಾಡಿ ಕ್ಷಮೆ ಬೇಡಿ ತನ್ನ ಮನಸ್ಸನ್ನು ಖಾಲಿ ಮಾಡಿಕೊಳ್ಳಬೇಕು ಅನ್ನುವ ತುಡಿತ ಅವನನ್ನು ಜೈಲಿನಿಂದ ಬಿಡುಗಡೆಯಾದ ತತ್ಕ್ಷಣಕ್ಕೆ ಭದರಾವತಿಗೆ ಎಳೆದು ತಂದಿತ್ತು. ಬಂದ ದಿನವೇ ಅವಳ ಹಠಾತ್ ಭೇಟಿಯ ನಂತರ ನಡುರಾತ್ರಿಯಲ್ಲಿ ಅವ ಮಾಕರ್ೆಟ್ಟಿನ ಬಳೀ ಬಂದಿದ್ದ. ಮೂಲೆಯಲ್ಲಿ ಬಿದ್ದಿದ್ದ ಮಣ್ಣಿನ ಗುಡ್ಡೆಯಲ್ಲಿ ಒಂದೊಂದೇ ಇಟ್ಟಿಗೆ ಚೂರುಗಳನ್ನು ಹೆಕ್ಕಿ ಸವರಿದ. ಇಳಂನ ಅಂತ್ಯಕ್ಕೆ ಸಾಕ್ಷಿಯಾದ ಗೋಡೆಯ ಜೊತೆ ತನ್ನ ಸುಂದರ ಹತ್ತು ವರ್ಷಗಳ ಬಲಿ ತೆಗೆದುಕೊಂಡ, ಜಾಂಬವತಿ ತನ್ನಿಬ್ಬರು ಪುಟ್ಟ ಮಕ್ಕಳ, ಮಾರಿಮುತ್ತುವಿನ ಆಕೆಯ ಮಕ್ಕಳ ಗುಲಾಬಿ ಕನಸುಗಳನ್ನು ಒಂದೇ ಕ್ಷಣದಲ್ಲಿ ಕಬಳಿಸಿ ಹಾಕಿದ್ದ ಗೋಡೆಗಳು… ಎಲ್ಲವೂ ಒಂದೇ ಕಡ ಬಿದ್ದು ಕೆಲಸಕ್ಕೆ ಬಾರದ ಸಿಮೆಂಟು ಮೆತತಿಕೊಂಡ ಕಲ್ಲು ಮಣ್ಣಿನ ಚೂರುಗಳಾಗಿ ಹೋಗಿದ್ದವು. ಆ ಮಣ್ಣಿನ ರಾಶಿಯಲ್ಲಿ ಯಾವುದನ್ನೂ ಗುರುತಿಸಲಾಗಲಿಲ್ಲ. ಅಷ್ಟೇ ಏಕೆ ತನ್ನ ಅಂಗಡಿಯ ಅವಶೇಷಗಳು ಕೂಡ ಗುರುತು ಹತ್ತಲಿಲ್ಲ. ಆ ನಿರ್ಜನ ರಸ್ತೆಯಲ್ಲಿ ಕೂತು ಜೋರಾಗಿ ಅತ್ತುಬಿಟ್ಟ. ಆ ರೋಧನ ಅಲ್ಲಿನ ಕಲ್ಲು ಮಣ್ಣಿನ ರಾಶಿಯ ಹೃದಯವನ್ನೂ ಕಲಕುವಂತಿತ್ತು. ಬಹಳಷ್ಟು ಹೊತ್ತು ಕೂತು ಕಳೆದು ಹಿಂತಿರುಗಿದ್ದ.
ಬಂದಾಗಿನಿಂದ ಮಾರಿಮುತ್ತುವನ್ನು ಮಾತಾಡಿಸಲೇಬೇಕೆಂದು ಪ್ರಯತ್ನಿಸುತ್ತಲೇ ಇದ್ದರೂ ಆಕೆ ಇವನನ್ನು ನೋಡಿದಷ್ಟೂ ಅಡಗಿಕೊಳ್ಳಲಾರಂಭಿಸಿದಳು. ನಾಲ್ಕೈದು ದಿನದ ಅವನ ಪ್ರಯತ್ನ ಒಂದಿಂಚೂ ಕೈಗೂಡಿರಲಿಲ್ಲ. ಅವ ಮಗಳ ಮುಖಾಂತರ ತಾನು ಬಂದ ಉದ್ದೇಶ ಹೇಳಿಕಳಿಸುವ ಪ್ರಯತ್ನವನ್ನೂ ಮಾಡಿನೋಡಿದ ಪ್ರಯೋಜನವಾಗಲಿಲ್ಲ. ಅವಳ ಕಣ್ಣುಗಳು ಆಕಸ್ಮಕವಾಗಿ ತನ್ನ ಕಂಡಾಗಲೂ ಅದರಲ್ಲಿ ತನ್ನನ್ನೇ ಸುಟ್ಟು ಬಿಡುವಷ್ಟು ಕೋಪ ಜ್ವಲಿಸುವುದ ಕಂಡು ಹೆದರಿಬಿಟ್ಟಿದ್ದ. ಪರಿಚಯವಿದ್ದವರ ಬಳಿ ಹೇಳೋಣವೆಂದುಕೊಂಡರೂ ಆಕೆ ಏನಾದರೂ ಹುಯಿಲೆಬ್ಬಿಸಿದರೆ ಎಂದು ಸುಮ್ಮನಾಗಿದ್ದ. ಏನು ಮಾಡಲು ತೋಚದೇ ಹೆಂಡತಿ ಮಕ್ಕಳನ್ನು ಕಂಡುಬರುವ ಸಲುವಾಗಿ ಹೊರಟುಬಿಟ್ಟ.
ಎರಡು ದಿನ ಮಲ್ಲೇಶ ಎಲ್ಲೂ ಕಾಣಲಿಲ್ಲ. ಮಾರಿಮುತ್ತು ನಿರಾಳವಾದಳು. ಸದ್ಯ ಕಂಟಕ ತೊಲಗಿತು. ಎಂದುಕೊಂಡಳು. ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ಬರುವಷ್ಟರಲ್ಲಿ ಮಲ್ಲೇಶ ತನ್ನದೇ ಮನೆಯ ಬಾಗಿಲಲ್ಲಿ ಕೂತು ತನ್ನದೇ ಮಕ್ಕಳ ಜೊತೆ ಕೂತು ಹರಟುತ್ತಿದದ ದೃಶ್ಯ ಕಂಡು ಅಸ್ವಸ್ಥಳಾದಳು. ಕೋಪ ಹಾದಿ ತಪ್ಪಿತು. ಅವನನ್ನು ಕಿರುಗಣ್ಣಿನಿಂದಲೂ ನೋಡದೆ ಅವನ ಮುಂದೆಯೇ ಮಕ್ಕಳಿಗೆ ಎರಡೆರಡು ಬಿಗಿದು ಒಳಗೆ ಎಳೆದುಕೊಂಡಳು ಅವನೇನು ಪ್ರತಿಕ್ರಿಯೆ ತೋರಲಿಲ್ಲ. ಅವನು ಕೂತಿದ್ದ ಹಾಗೆಯೇ ದಢಾರ್ ಎಂದು ಬಾಗಿಲು ಮುಚ್ಚಿದಳು ಅಮ್ಮನ ಈ ಅವತಾರಕ್ಕೆ ಮಕ್ಕಳು ಬೆಚ್ಚಿ ಸಣ್ಣನೆ ದನಿಯಲ್ಲಿ ಅಳತೊಡಗಿದವು.
ಒಂದರ್ಧ ಗಂಟೆ ಕಳೆದ ಮೇಲೆ ಮಾರಿಮುತ್ತುವಿನ ಮನಸ್ಸು ಸ್ಥಿಮಿತಕ್ಕೆ ಬಂದಂತಾಯಿತು. ಅವನು ಹೋಗಿರಬಹುದು ಎನ್ನುವ ವಿಶ್ವಾಸದೊಂದಿಗೆ ಮೆಲ್ಲಗೆ ಬಾಗಿಲು ಸಂಧಿಯಲ್ಲಿ ಇಣುಕಿದಳು. ಅವನು ಆಗಲೂ ಅಲ್ಲಿಯೇ ಕೂತಿದ್ದ. ಯಾಕೆ ಹೀಗೆ ನಮ್ಮಗಳ ಕಾಡುತ್ತಿದ್ದಾನೋ ಎಂದು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತ ಬಾಗಿಲು ಚಿಲಕವನ್ನು ಭದ್ರ ಪಡಿಸಿದಳು.. ಎಷ್ಟೋ ಹೊತ್ತಿನ ನಂತರ, ಆಕೆಗೆ ತಾನು ಅವನೊಂದಿಗೆ ಹಾಗೆ ನಡೆದುಕೊಳ್ಳಬಾರದಿತ್ತು ಎನ್ನಿಸಿತು. ಊರುಬಿಟ್ಟು ಹೋಗುವಾಗ ನನ್ನ ಗಂಡನ ಕ್ಷಮಿಸು ಎನ್ನುತ್ತ ಜಾಂಬವತಿ ಕೈ ಮುಗಿದ್ದ ದೃಶ್ಯಗಳು ಸಾಲು ಸಾಲು ಎದುರು ನಿಲ್ಲತೊಡಗಿದವು. ಮಲಗುವ ಪ್ರಯತ್ನ ಮಾಡಿದಷ್ಟು ನಿದ್ರೆ ದೂರ ದೂರಕ್ಕೆ ಓಡತೊಡಗಿತು. ಜಾಂಬವತಿ ಅವಳ ಮಕ್ಕಳು ಅವಳ ಸಂಸಾರ ತನ್ನಂತೆಯೇ ಅವಳು ಪಟ್ಟ ಕಷ್ಟಗಳು ಹೀಗೆ ನೂರೆಂಟು ಆಲೋಚನೆಗಳು ಮಗ್ಗಲು ಬದಲಿಸಿ ಮಲಗಿದಷ್ಟು ಮೈ ಏರಿ ಸವಾರಿ ಮಾಡತೊಡಗಿದವು. ಏನಾದರಾಗಲಿ ಬಂದ ಉದ್ದೇಶವೇನೆಂದು ಕೇಳಿ ಕಳಿಸೋಣ ಎಂದು ಇಲ್ಲದಿದ್ದರೆ ಇವ ದಿನಾ ಬಂದು ಮನೆಯೆದುರು ಕೂತಾನು ಎಂದು ಯೋಚಿಸುತ್ತ ಬಾಗಿಲು ತೆರೆದಳು. ಅವನು ಅಲ್ಲಿರಲಿಲ್ಲ. ಮುದ್ದೆ ಮುದ್ದೆಯಾಗಿದ್ದ ಹಣದ ಕಂತೆಯೊಂದು ಅವಳನ್ನೇ ಕಾಯುತ್ತ ಗಾಳಿಯಲ್ಲಿ ಹೊಯ್ದಾಟ ನಡೆಸುತ್ತ ಕೂತಿತ್ತು. ಅದರಿಂದ ಮೆಲ್ಲಮೆಲ್ಲನೆ ಹಾದು ಬಂದು ಜೈಲು ಕಂಬಿಗಳ ಕಂಪು ಅವಳ ಪಾದವನ್ನು ಅವಳಿಗೆ ಅರಿವಿಲ್ಲದಂತೆ ಸೋಕತೊಡಗಿತು.
 

‍ಲೇಖಕರು G

29 December, 2014

2 Comments

  1. Anonymous

    Good…

  2. aagi

    Good…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading