
ದೀಪಾ ಹಿರೇಗುತ್ತಿ ಕನ್ನಡಿಗರಿಗೆ ಅಂಕಣಕಾರ್ತಿಯಾಗಿ ಪರಿಚಯ. ಅವರು ಮೂಲತಃ ಕುಮಟಾದ ಹಿರೇಗುತ್ತಿಯವರು. ಬಾಲ್ಯ, ಓದು ಶಿರಸಿಯಲ್ಲಿ. ಸ್ನಾತಕೋತ್ತರ ಪದವಿ ಧಾರವಾಡದಲ್ಲಿ ಪೂರೈಸಿದರು. ರಾಮಚಂದ್ರ ನಾಯಕ, ಭಾಗೀರಥಿ ನಾಯಕ ಶಿಕ್ಷಕ ದಂಪತಿಗಳ ಮಗಳಾದ ದೀಪಾ ಕಂಪರ್ಟ್ ಝೋನ್ ನಿಂದ ಹೊರಗೆ ನಿಂತು ಬದುಕನ್ನು ಆಯ್ಕೆ ಮಾಡಿಕೊಂಡವರು. ಅವರ ಪತಿ ಸುಧೀರ್ ಕುಮಾರ್ ಮುರೊಳ್ಳಿ ವಕೀಲರಾಗಿ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಂಗ್ಲ ಸಾಹಿತ್ಯದ ಪ್ರಭಾವ ದೀಪಾ ಅವರನ್ನು ರೂಪಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ಅವರು ಆರಂಭದಲ್ಲಿ ಬರೆದದ್ದು ಕವಿತೆಗಳನ್ನು. ಅವರ ಕವಿತೆಗಳು `ಪರಿಮಳವಿಲ್ಲದ ಹೂಗಳ ಮಧ್ಯೆ’ ಕವಿತಾ ಸಂಕಲನದ ಮೂಲಕ ಪ್ರಕಟವಾಯಿತು.
ಇವರ ಕವಿತೆಗಳಿಗೆ ಸಂಕ್ರಮಣ, ಸಂಚಯ ನಡೆಸಿದ ಕವನ ಸ್ಪರ್ಧೆಗಳಲ್ಲಿ ಬಹುಮಾನ ಸಹ ಪಡೆದಿದ್ದಾರೆ. ‘ವಿಜಯವಾಣಿ’ಯಲ್ಲಿ `’ನಾನು ನೀವು ಮತ್ತು…’ ಎಂಬ ಅಂಕಣ ಬರೆದರು. ಈ ಅಂಕಣ ಬರಹಗಳು ‘ಫೀನಿಕ್ಸ್’ ಹೆಸರಲ್ಲಿ ಪುಸ್ತಕವಾಗಿದೆ. ಈ ಕೃತಿಗೆ ಗೀತಾ ದೇಸಾಯಿ ದತ್ತಿ ಪ್ರಶಸ್ತಿ ಹಾಗೂ ಬೇಂದ್ರೆ ಪ್ರತಿಷ್ಠಾನ ಪ್ರಶಸ್ತಿ ಬಂದಿದೆ.
………………………………………………………………………………………………………….
ನೀವು ಕವಿತೆ ಹಾಗೂ ಲೇಖನಗಳನ್ನು ಯಾಕೆ ಬರೆಯುತ್ತೀರಿ ?
ಕವಿತೆ, ಕತೆ ಅಥವಾ ಲೇಖನ ಯಾವುದೇ ಇರಲಿ ಅವನ್ನು ಬರೆಯುವುದು ಹೇಳಲಿಕ್ಕೆ ಏನೋ ಇರುವುದರಿಂದ. ನಮ್ಮನ್ನು ಕಾಡಿದ ಸಂಗತಿಗಳನ್ನು, ಹೇಳಬೇಕೆನಿಸಿದ ವಿಚಾರಗಳನ್ನು ಹೇಳಲು ಬರಹ ಸಹಾಯ ಮಾಡುತ್ತದೆ.
ಕವಿತೆ, ಲೇಖನ ಹುಟ್ಟುವ ಕ್ಷಣ ಯಾವುದು ?
ನಾನು ಲೇಖನವನ್ನು ಯಾವಾಗ ಬೇಕಾದರೂ ಬರೆಯಬಲ್ಲೆ. ಆದರೆ ನನಗೆ ಕವಿತೆಯನ್ನು ಯೋಚನೆ ಮಾಡಿ ಬರೆಯಲು ಸಾಧ್ಯವಿಲ್ಲ. ನನ್ನ ಒಂದು ಅನುಭವ ಹೇಳಬೇಕೆಂದರೆ ನನ್ನ ಬಾಲ್ಯ ಸ್ನೇಹಿತೆಯೊಬ್ಬಳು ಹದಿನೆಂಟು ತುಂಬುವುದರೊಳಗೇ ಮದುವೆಯಾಗಿದ್ದಳು. ಮದುವೆಯಾದ ಐದನೇ ವರ್ಷ ಬೆಂಕಿ ಅಪಘಾತವೊಂದರಲ್ಲಿ ಅವಳು ಮೃತ ಪಟ್ಟಿದ್ದಾಳೆಂಬ ಸುದ್ದಿ ಧಾರವಾಡದಲ್ಲಿ ಎಂ.ಎ. ಓದುತ್ತಿದ್ದ ನನಗೆ ಸಿಕ್ಕಿತ್ತು. ನಾಲ್ಕು ವರ್ಷದ ಮಗಳನ್ನು ಬಿಟ್ಟು ಸಾಯುವಾಗ ಅವಳು ಗರ್ಭಿಣಿಯಾಗಿದ್ದಳು! ನೊಂದು ಸುಮ್ಮನಾಗಿದ್ದೆ.
ಅದಾದ ಏಳು ವರ್ಷಗಳ ನಂತರ ಅಂದರೆ ೨೦೦೯ ರ ಒಂದು ದಿನ ಮತ್ತೊಬ್ಬ ಗೆಳತಿ ಕರೆ ಮಾಡಿ ಹೇಳಿದಳು, ಆಕೆ ಸತ್ತದ್ದು ಆಕಸ್ಮಿಕವಲ್ಲ, ದುಡ್ಡಿನ ವಿಷಯಕ್ಕೆ ಗಂಡನೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು ಎಂದು. ಆಗ ನಾಲ್ಕು ವರ್ಷದವಳಾಗಿದ್ದ ಅವಳ ಮಗಳು ಅದನ್ನು ನೋಡಿದ್ದಾಳೆ. ಗಂಡ ಈ ಮಗುವಿಗೆ ಯಾರ ಹತ್ತಿರವಾದರೂ ಹೇಳಿದರೆ ಸಾಯಿಸಿಬಿಡುವುದಾಗಿ ಹೇಳಿದ್ದಾನೆ. ಆಕೆ ಈಗ ಏಳು ವರ್ಷದ ನಂತರ ಅಜ್ಜಿ, ಚಿಕ್ಕಮ್ಮನ ಹತ್ತಿರ ಬಾಯಿಬಿಟ್ಟಿದ್ದಾಳೆ! ನನ್ನ ರಾತ್ರಿಯ ನಿದ್ದೆ ಹಾರಿ ಹೋಯಿತು.
ಅದಾಗಿ ಒಂದು ವಾರದ ನಂತರ ‘ಪ್ರಜಾವಾಣಿ’ ಮತ್ತು ‘ವಿಮೋಚನಾ’ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯ ಬಗ್ಗೆ ಓದಿದೆ. ಅದು ಇದ್ದದ್ದು ವರದಕ್ಷಿಣೆಯ ಬಗ್ಗೆ. ಅವತ್ತು ರಾತ್ರಿಯೂ ನಿದ್ದೆ ಬಾರದೇ ಹೊರಳಾಡುತ್ತಿದ್ದಾಗ ಕವನದ ಸಾಲುಗಳು ಮೂಡಲಾರಂಭಿಸಿದವು. ಎದ್ದು ಕೂತವಳು ತಡರಾತ್ರಿಯವರೆಗೆ ಬರೆದು ಮುಗಿಸಿ ನಿಟ್ಟುಸಿರಿಟ್ಟೆ. ಆ ಕವನ ಮೊದಲ ಅತ್ಯುತ್ತಮ ಕವನವಾಗಿ ಆಯ್ಕೆಯಾಗಿ ‘ಭೂಮಿಕಾ’ದ ಮುಖಪುಟದಲ್ಲೇ ಪ್ರಕಟವಾಯಿತು ಮತ್ತು ಕೀರಂ ಮುಂತಾದ ಹಿರಿಯರು ಒಳ್ಳೆಯ ಮಾತುಗಳನ್ನೂ ಬರೆದಿದ್ದರು.ಅಂತೆಯೇ ಯೋಚನೆ ಮಾಡಿ ಕವನ ಬರೆಯಲು ಹೊರಟಾಗ ವಿಫಲಳಾಗಿದ್ದೇನೆ.

ನಿಮ್ಮ ಅಂಕಣ ಬರಹಗಳ ವಸ್ತು ಯಾವುದು ,ಈ ವರೆಗೆ ಬರೆದ ಅಂಕಣ ಬರಹಗಳ ದೃಷ್ಟಿಯಿಂದ ?
ಅಂಕಣಗಳ ಲಾಭವೆಂದರೆ ಯಾವ ವಿಷಯದ ಬಗ್ಗೆ ಬೇಕಾದರೂ ಬರೆಯಬಹುದು. ನಷ್ಟವೆಂದರೆ ಜನಪ್ರಿಯವಾಗುವ, ಓದುಗರು ಬಯಸುವ ವಿಷಯಗಳ ಬಗ್ಗೆ ಬರೆಯುವ ಒತ್ತಡಕ್ಕೊಳಗಾಗುತ್ತೇವೆ. ನಾನು ನನ್ನ ಅಂಕಣಗಳಲ್ಲಿ ಬಹಳ ವಿಷಯಗಳನ್ನು ಎತ್ತಿಕೊಳ್ಳುತ್ತೇನೆ. ಆದರೂ ಓದುಗರ ಒತ್ತಾಸೆಯಂತೆ ವ್ಯಕ್ತಿತ್ವ ವಿಕಸನ ಲೇಖನಗಳು ಹೆಚ್ಚು ಬರೆಸಿಕೊಳ್ಳುತ್ತವೆ.
ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ?
ಅಂಕಣಗಳಲ್ಲಿ ಆಗಾಗ್ಗೆ. ಕವಿತೆಗಳಲ್ಲಿ ಹೌದು.
ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?
ಭಾವನಾತ್ಮಕ ಸಂಗತಿಗಳೇ ಓಟ್ ಬ್ಯಾಂಕ್ ಆಗಿರುವುದು ನಮ್ಮ ದೌರ್ಭಾಗ್ಯ ಅಷ್ಟೇ ಅಲ್ಲ, ದುರಂತ ಕೂಡ. ದೇಶದ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ಶಿಕ್ಷಣ, ಬಡತನ, ಆರೋಗ್ಯ, ಆರ್ಥಿಕ ಕುಸಿತ, ನೈಸರ್ಗಿಕ ವಿಕೋಪಗಳು ಇವನ್ನು ಬಿಟ್ಟು ಧರ್ಮ, ಮಂದಿರ, ಮಸೀದಿ, ಕಾಶ್ಮೀರ, ಪಾಕಿಸ್ತಾನ ಇವು ಮುಖ್ಯ ವಿಷಯಗಳೆಂಬಂತೆ ಬಿಂಬಿಸಲ್ಪಡುತ್ತಿವೆ. ಭಾವನಾತ್ಮಕ ಸಂಗತಿಗಳು ಎಲ್ಲರನ್ನೂ ಕ್ಷಣಾರ್ಧದಲ್ಲಿ ತಲುಪುತ್ತವೆ. ಆದರೆ ಬದುಕಿನ ಸಂಕಷ್ಟಗಳು ತಮ್ಮ ಮನೆ ಬಾಗಿಲಿಗೆ ಬಂದಾಗ ಮಾತ್ರ ಅರಿವಾಗುತ್ತದೆ. ಬೇರೆಯವರಿಗೆ ಕಷ್ಟವಾದರೆ ನಾನೂ ಸ್ಪಂದಿಸಬೇಕು ಎಂಬ ಮನೋಭಾವ ಎಲ್ಲರಲ್ಲೂ ಬರಬೇಕು.
ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?
ನಾನು ಹೆಣ್ಣಾಗಿ ಹುಟ್ಟಿರುವಂತೆ ಹಿಂದೂ ಧರ್ಮದಲ್ಲಿ ಹುಟ್ಟಿರುವುದೂ ನಿಜ. ಅವನ್ನು ಸಹಜವಾಗಿ ಸ್ವೀಕರಿಸಬೇಕೇ ಹೊರತು ಲಿಂಗ, ಧರ್ಮ, ಜಾತಿ ನಮ್ಮಲ್ಲಿ ಮೇಲರಿಮೆ, ಕೀಳರಿಮೆ, ದ್ವೇಷ ಉಂಟುಮಾಡಬಾರದು. ಇನ್ನು ನಮ್ಮನ್ನು ಮೀರಿದ ಒಂದು ಶಕ್ತಿ ಜಗತ್ತಿನಲ್ಲಿ ಇದ್ದೇ ಇದೆ. ಅದನ್ನು ದೇವರು ಎಂದಾದರೂ ಅನ್ನಿ, ಏನಾದರೂ ಅನ್ನಿ. ಬದುಕಿನ ಬಗ್ಗೆ ಭರವಸೆ ಮೂಡಿಸಲು ಆ ಒಂದು ವಿಶ್ವಾಸ ಅಗತ್ಯ. ಆದರೆ ಬೇರೆಯವರ ಬದುಕನ್ನು ನಿರ್ದೇಶಿಸಲು ದೇವರು ಧರ್ಮವನ್ನು ಉಪಯೋಗಿಸಿಕೊಳ್ಳಲು ನನ್ನ ವಿರೋಧವಿದೆ.
ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?
ತಮ್ಮ ನಿಲುವುಗಳ ಬಗ್ಗೆ ಸ್ಪಷ್ಟತೆ ಹೊಂದಿರುವವರು ಇದ್ದಾರೆ. ಆದರೆ ತಾವು ಎಲ್ಲ ಕಡೆಗೂ ಸಲ್ಲುವವರು ಎಂದು ತೋರಿಸಿಕೊಳ್ಳಲು ಶತಪ್ರಯತ್ನ ಪಡುವ ಜನರು ಬಹಳವಿದ್ದಾರೆ. ತಾವು ಬಹಳ ಶ್ರೇಷ್ಠರು, ಬೇರೆಯವರಿಗೆ ಏನೂ ಗೊತ್ತಿಲ್ಲ ಎಂಬ ಮನಸ್ಥಿತಿಯ ಜನ ಎಲ್ಲ ಕಡೆಯೂ ಇದ್ದಾರೆ. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವವರ ದುರಂತ ಗೊತ್ತಿದ್ದರೂ ಏಕೆ ಹೀಗಾಡುತ್ತಾರೆ ಎಂದೇ ಗೊತ್ತಾಗುವುದಿಲ್ಲ.
ದಸರಾ ಕವಿಗೋಷ್ಟಿಗೆ ಒಮ್ಮೆ ಹೋಗಿದ್ದಾಗ ಹಿರಿಯ ಸಾಹಿತಿಗಳೊಬ್ಬರು ಸಿಕ್ಕು ಕವಿಗೋಷ್ಟಿಯ ಅಧ್ಯಕ್ಷರ ಬಗ್ಗೆ ಹಗುರವಾಗಿ ಮಾತಾಡಿದರು. ಈ ಕವಿಗೋಷ್ಟಿಯಿಂದ ಏನು ಪ್ರಯೋಜನ ಎನ್ನುವ ಭಾವ ಅವರಲ್ಲಿತ್ತು. ಆದರೆ ಅವರು ಬಂದಿದ್ದೂ ಸಾಹಿತ್ಯದ ಕಾರ್ಯಕ್ರಮವೊಂದಕ್ಕೇ. ಈ ರೀತಿಯ ಇಬ್ಬಗೆಯ ನೀತಿ ನನಗೆ ನಗು ತರಿಸುತ್ತದೆ.
ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? .
ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಕೂಡ ಭಿನ್ನಮತವೆಂದರೆ ಅಪರಾಧ ಎನ್ನುವ ನೀತಿ ಮುನ್ನೆಲೆಗೆ ಬರುತ್ತಿರುವುದು ಬಹು ಆತಂಕಕಾರಿ. ತಮ್ಮ ನಿಲುವುಗಳಿಗೆ ವಿರುದ್ಧ ನಿಲುವು ಹೊಂದಿದ್ದಾರೆಂದು ಸಂಗೀತಕಾರರ, ನೃತ್ಯಪಟುಗಳ ಕಾರ್ಯಕ್ರಮವನ್ನೇ ಪ್ರತಿಭಟಿಸಿ ರದ್ದುಗೊಳಿಸುವುದು ಮೂರ್ಖತನದ ಪರಮಾವಧಿ. ಇನ್ನು ಸಾಹಿತ್ಯದ ರಾಜಕಾರಣದ ಬಗ್ಗೆ ಮಾತನಾಡದಿರುವುದೇ ಒಳಿತು. ನನ್ನ ಫೋಟೋವನ್ನು ಲೈಕ್ ಮಾಡಿದರೆ ಮಾತ್ರ ನಾನು ನಿನ್ನ ಫೋಟೋ ಲೈಕ್ ಮಾಡುತ್ತೇನೆ ಎಂಬ ಫೇಸ್ ಬುಕ್ ಮನಸ್ಥಿತಿ ಇಲ್ಲಿಗೂ ಬಂದಿದೆ.
ಪ್ರಭಾವೀ ವ್ಯಕ್ತಿಗಳ ಬಾಲ ಹಿಡಿದು ಕವಿಗೋಷ್ಟಿ, ಸಾಹಿತ್ಯ ಸಮ್ಮೇಳನಗಳಲ್ಲಿ ಹೆಸರು ಹಾಕಿಸಿಕೊಳ್ಳುವುದು ನಡೆಯುತ್ತಿದೆ. ಎಲ್ಲವೂ ಗೊತ್ತಿದ್ದೂ ಏನೂ ಗೊತ್ತಿಲ್ಲದವರ ಹಾಗೆ ಇರುವ ‘ಸಜ್ಜನ’ರ ಸಂಖ್ಯೆ ಹೆಚ್ಚುತ್ತಿದೆ. “The best lack all conviction, worst are full of passionate intensity” ಎಂಬ ಯೇಟ್ಸ್ ಮಾತು ನೆನಪಾಗುತ್ತದೆ. ಆದರೆ ಅದರ ಹೊರತಾಗಿಯೂ ನೈಜ ಸಾಹಿತ್ಯಾಸಕ್ತ ಕವಿ, ಲೇಖಕ, ಸಹೃದಯರು ಸಾಂಸ್ಕೃತಿಕ ಲೋಕವನ್ನು ಸಹ್ಯವಾಗಿಸಿದ್ದಾರೆ ಎನ್ನಬಹುದು.
ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?
ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮನಸ್ಸನ್ನು ನೋಯಿಸಿದೆ. ಬನಾರಸ್ ವಿವಿಯ ಸಂಸ್ಕೃತ ವಿಭಾಗದ ಮುಸ್ಲಿಂ ಪ್ರೊಫೆಸರ್ ಆಗಿ ನೇಮಕಗೊಂಡ ಫಿರೋಝ್ ಖಾನ್ ವಿರುದ್ಧ ಪ್ರತಿಭಟನೆ ನಡೆದಿರುವುದು ಮತ್ತು ಅವರು ರಾಜೀನಾಮೆ ನೀಡಬೇಕಾಗಿ ಬಂದದ್ದು ನಾಚಿಕೆಗೇಡಿನ ವಿಚಾರ.
ನನ್ನ ಭಾರತ ವಿಶಿಷ್ಟವಾದ ದೇಶ. ವಿವಿಧತೆಯೇ ಇಲ್ಲಿನ ಬಲ. ಈ ವೈವಿಧ್ಯವನ್ನು ನಾಶಗೊಳಿಸಲು ಯತ್ನಿಸಿದವರು ನಾಶವಾಗಿದ್ದಾರೆಯೇ ಹೊರತು, ಅವರಿಂದ ನಮ್ಮ ದೇಶದ ಸಹಬಾಳ್ವೆಯ ಎಳೆಗಳನ್ನು ಕತ್ತರಿಸಲಾಗಿಲ್ಲ. ಹಾಗಾಗಿ ಈ ದೇಶದ ಚಲನೆ ಮುಮ್ಮುಖವಾಗಿಯೇ ಸಾಗಲಿದೆ.
ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?
ಬರೆಯುವ ಕನಸುಗಳೇನೂ ಸದ್ಯಕ್ಕೆ ಇಲ್ಲ. ಆದರೆ ತುಂಬ ತುಂಬ ಓದುವ ಕನಸಿದೆ. ಎಷ್ಟು ಸಾಧ್ಯವೋ ಅಷ್ಟು ಓದಬೇಕು. ಕೇವಲ ಸಾಹಿತ್ಯವಲ್ಲ, ಇತಿಹಾಸ, ಭೂಗೋಳ ಎಲ್ಲ! ಜಗತ್ತಿನಲ್ಲಿ ತಿಳಿದುಕೊಳ್ಳಲು ಎಷ್ಟೆಲ್ಲ ವಿಷಯಗಳಿವೆ! ಹಾ, ಅಮೆರಿಕದ ಗುಲಾಮೀ ಪದ್ಧತಿಯ ಕರುಣಾಜನಕ ಕತೆಗಳು ನನ್ನನ್ನು ಸದಾ ಕಾಡುತ್ತವೆ. ಅವುಗಳ ಬಗ್ಗೆ ಅಧ್ಯಯನ ಮಾಡುವ ಮನಸ್ಸಿದೆ.
ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಲೇಖಕ, ಕವಿ ಯಾರು ?
ಕನ್ನಡದಲ್ಲಿ ನನ್ನ ಇಷ್ಟದ ಲೇಖಕರು, ಕವಿಗಳು ಬಹಳಷ್ಟು ಮಂದಿ. ಬೇಂದ್ರೆ, ಕುವೆಂಪು, ತೇಜಸ್ವಿ, ಅನಂತಮೂರ್ತಿ, ಕಾರ್ನಾಡ್, ಬಿಜಿಎಲ್ ಸ್ವಾಮಿ, ರಹಮತ್ ತರೀಕೆರೆ, ದೇವನೂರು ಇನ್ನೂ ಬಹಳಷ್ಟು ಹೆಸರುಗಳಿವೆ.. ವಿಕ್ರಮ ವಿಸಾಜಿಯವರ ಕಾವ್ಯ ಇಷ್ಟ. ವಿನಯಾ ಮತ್ತು ಡಾ ಅನುಪಮಾರಂತಹ ಲೇಖಕಿಯರ ಬರವಣಿಗೆ ಬದ್ಧತೆ ಎರಡೂ ಇಷ್ಟ. ಎಲ್ಲ ಕಾಲಕ್ಕೂ ಸಲ್ಲುವ ಶೇಕ್ಸ್ಪಿಯರ್ ನನ್ನ ನೆಚ್ಚಿನ ಬರಹಗಾರ. ಯೇಟ್ಸ್, ನೆರೂದ ಕೂಡ ಇಷ್ಟ. ಡಾನ್ ಬ್ರೌನ್, ಫ್ರೆಡರಿಕ್ ಫರ್ಸಿಥ್, ಪಾವ್ಲೋ ಕೊಯೆಲೋ ಅವರ ಪುಸ್ತಕಗಳನ್ನು ಓದುತ್ತಿರುತ್ತೇನೆ.

ಕೊನೆಯದಾಗಿ ನೀವು ಈ ಸಮಾಜಕ್ಕೆ ಏನನ್ನು ಹೇಳಲು ಬಯಸುತ್ತೀರಿ ?
ಜಗತ್ತು ಎಲ್ಲರಿಗೂ ಬದುಕಲು ಯೋಗ್ಯವಾದ ಸ್ಥಳವಾಗಿರಬೇಕು ಎಂಬುದು ಎಲ್ಲ ಮಹಾನ್ ವ್ಯಕ್ತಿಗಳು ಕಂಡ ಕನಸಾಗಿತ್ತು. ಆದರೆ ಗಡಿ, ಧರ್ಮ, ಸಂಪತ್ತಿನ ವ್ಯಾಮೋಹ ಜಗತ್ತನ್ನು ಕುರುಡಾಗಿಸುತ್ತಿದೆ.
ವಾರದಲ್ಲೊಮ್ಮೆಯಾದರೂ ಅಸೀಫಾಳ ಚಿತ್ರ, ಕಡಲತೀರದಲ್ಲಿ ಬಿದ್ದ ಕೊಬಾನಿಯದ ಮಗುವಿನ ಚಿತ್ರ, ನಾಝಿಗಳ ಅಟ್ಟಹಾಸಕ್ಕೊಳಗಾದ ಯುಹೂದಿಗಳ ಚಿತ್ರ, ಶಾಲೆಗಳಲ್ಲಿನ ಶೂಟ್ ಔಟ್ಗಳು, ಭಯೋತ್ಪಾದಕರ ಅಟ್ಟಹಾಸ, ಗುಲಾಮಗಿರಿಗೆ ದೂಡುವ ಬದಲು ಮಗಳನ್ನು ಕೊಂದು ಸುರಕ್ಷಿತ ಸ್ಥಳಕ್ಕೆ ಮಗಳನ್ನು ಕಳಿಸಿದ್ದೇನೆನ್ನುವ `ಬಿಲೊವೆಡ್’ ಕಾದಂಬರಿಯ ನಾಯಕಿ, ಮರ್ಯಾದಾ ಹತ್ಯೆಗೊಳಗಾಗುವ ಜೋಡಿಗಳು, ಗುಂಪುಹತ್ಯೆಗೊಳಗಾದ ವ್ಯಕ್ತಿಗಳ ಅಮಾಯಕ ಕಣ್ಣುಗಳು, ಮೀಸೆ ಬಿಟ್ಟಿದ್ದಕ್ಕೆ, ಕುದುರೆ ಏರಿದ್ದಕ್ಕೆ ಕೊಲೆಗೀಡಾಗುವ ದಲಿತ ತರುಣರು, ಕೆಂಪು ದೀಪ ಪ್ರದೇಶಕ್ಕೆ ಮಾರಲ್ಪಡುವ ಎಳೆಯ ಬಾಲೆಯರು, ಇವರೆಲ್ಲ ನನ್ನ ರಾತ್ರಿಗಳ ನಿದ್ದೆಯನ್ನು ದೂರ ದೂಡುತ್ತಾರೆ. ಈ ಜಗತ್ತು ಭಯರಹಿತ ರಾತ್ರಿಗಳನ್ನು ಎಂದಾದರೂ ಕಳೆದೀತೆಂಬ ನಂಬಿಕೆಯಿಂದ ನಿದ್ರಿಸಲು ಪ್ರಯತ್ನಿಸುತ್ತೇನೆ.
………..
ಈ ಸಂದರ್ಶನ ಮೊದಲು ‘ಕಡಲವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು






ದೀಪಾ ಮಾತು ಅಂದರೆ ಹೀಗೆ
ಹಸಿ ಗೋಡೆಗೆ ಹರಳಿಟ್ಟ ಹಾಗೆ
ರಾತ್ರಿಗಳನ್ನು ಭಯವಿಲ್ಲದೆ ಕಳೆಯುವ ದಿನಗಳು ಎಲ್ಲರ ಬದುಕಿನ್ನಲ್ಲಿರಲಿ ಎಂಬ ನಿಮ್ಮ ಹಾರೈಕೆ ಅರ್ಥಪೂರ್ಣ
ತುಂಬಾ ಇಷ್ಟವಾಯ್ತು, ದೀಪಾ.
ಪ್ರಾಮಾಣಿಕ ಮಾತುಗಳು ದೀಪಾರವರೆ.
ಸಂದರ್ಶನದ ಕೊನೆಯ ಪ್ರಶ್ನೆಗೆ ನಿಮ್ಮ ಉತ್ತರ ಅತ್ಯದ್ಭುತ…
ಉತ್ವಮ ಕಾವ್ಯ ಹುಟ್ಟುವ ಸಹಜತೆಯನ್ನು, ಯೋಚನೆ ಮಾಡಿ ಬರೆವ ಕವಿತೆ ಕಳಹೀನವಾಗಿರುತ್ತದೆಂಬ ಅನಿಸಿಕೆ ಇಷ್ಟವಾಯಿತು. ಆದರೆ ಅವರ ಬರಹ ಇನ್ನಷ್ಟು ಆದ್ರವಾಗಿರಲು ಆಶಿಸುತ್ತೇನೆ.
ಅಂಕಣಕಾರರು ಸಮಾಜದ ಕನ್ನಡಿ ಇದ್ದಂತೆ ನನ್ನ ಅಭಿಪ್ರಾಯ, ಅದರಲ್ಲಿ ದೀಪಾ ಹಿರೇಗುತ್ತಿ ಒಬ್ಬರು ಭರವಸೆಯ ಅಂಕಣಕಾರ್ತಿ, ಲೇಖಕಿ ಮತ್ತು ಉತ್ತಮ ಉಪನ್ಯಾಸಕಿ.
ನಿಮ್ಮ ವಿಚಾರಗಳು ತುಂಬಾ ಚಾನ್ನಾಗಿರುತ್ತವೆ ಮೇಡಮ್ .
ಎದುರಿಗೆ ಕೂತು ಮಾತಾಡಿದಂತೆ ಅನಿಸಿತು.
Madam your vision towards country is speech less no doubt your the best
ಹೃದಯಸ್ಪರ್ಶಿ ಬರೆಹ.
ದೀಪಾ ಹಿರೇಗುತ್ತಿಯವರೆ ನಿರ್ಭಯಾ ಪ್ರಕರಣ ನೆನಪಾಗಲಿಲ್ಲವೆ.
To be sensitive, the great human quality!
ಕವಿತೆಯ ಹಾಗಿರುವ ಸಂದರ್ಶನ
ತುಂಬಾ ಅರ್ಥಪೂರ್ಣ ಸಂದರ್ಶನ….
ಶುಭವಾಗಲಿ
..