ಜಿ ಎನ್ ಮೋಹನ್
ಕೃಪೆ ವಿಜಯ ಕರ್ನಾಟಕ
ನನ್ನ ಇನ್ ಬಾಕ್ಸ್ ಗೆ ಒಂದು ನಿಟ್ಟುಸಿರು ಬಂದು ಬಿತ್ತು. ಅದೊಂದು ಗಾಢ ನಿಟ್ಟುಸಿರು. ತನ್ನ ಒಡಲೊಳಗಿನ ನೋವನ್ನೆಲ್ಲಾ ನನ್ನೆದುರು ಸುರಿದ ನಿಟ್ಟುಸಿರು. ನನಗೆ ಆ ನೋವಿನ ಗುಂಗಿನಿಂದ ಇನ್ನೂ ಹೊರಗೆ ಬರಲು ಆಗಿರಲೇ ಇಲ್ಲ ಆಗಲೇ ಇನ್ನೊಂದು ನಿಟ್ಟುಸಿರು ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು. ಅದೇನೆಂದು ನೋಡುವ ವೇಳೆಗೆ ಮತ್ತೊಂದು, ಅದನ್ನು ತಿರುವಿ ಹಾಕುವುದರೊಳಗೆ ಮಗದೊಂದು..
.
ನಾನು ಈಗ ಶಾಲೆಯಲ್ಲಿ ಟೆಸ್ಟ್ ಬರೆಯಬೇಕು. ಟೆಸ್ಟ್ ಬರೆಯಲು ಅವಕಾಶ ನೀಡಬೇಕೆಂದರೆ ಸ್ಟೀಲ್ ತಟ್ಟೆಯೊಂದನ್ನು ತಂದುಕೊಡಬೇಕು ಎಂದು ಶಾಲೆಯ ಮೇಷ್ಟ್ರು ತಾಕೀತು ಮಾಡಿದ್ದಾರೆ ನಾನು ಆ ತಟ್ಟೆಯನ್ನು ಎಲ್ಲಿಂದ ತಂದುಕೊಡಲಿ? ಎಂದು ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕೇಳುತ್ತಿದ್ದಾಳೆ. ನನಗೆ ಎಲ್ಲರಂತೆ ಮರಕೋತಿ, ಚಿನ್ನಿ ದಾಂಡು, ಲಗೋರಿ, ಕಬಡ್ಡಿ ಆಡಬೇಕು ಎನ್ನುವ ಆಸೆ. ನಾನು ಹೋದರೆ ಸಾಕು ನನ್ನ ಕಂಡೊಡನೆ ಎಲ್ಲರೂ ಓಡಿ ಹೋಗುತ್ತಾರೆ. ನಾನು ಯಾರೊಂದಿಗೆ ಆಡಲಿ? ಎಂದು ಪ್ರಶ್ನಿಸುವ ದಲಿತ ಹುಡುಗ ತನ್ನನ್ನು ಮುಟ್ಟಿಸಿಕೊಳ್ಳದವರ ಕಥೆಯನ್ನು ಹೇಳುತ್ತಾನೆ. ನನಗೆ ಪಿಂಚಣಿ ಬರಬೇಕು ಆದರೆ ಅಂಚೆಯವ ನನಗೆ ಇನ್ನು ಮುಂದೆ ಪಿಂಚಣಿ ಇಲ್ಲ ಎಂದು ಹೇಳುತ್ತಿದ್ದಾನೆ. ಇದು ಯಾಕೆ? ಎನ್ನುವುದು ವಿಧವಾ ವೇತನದಲ್ಲಿಯೇ ಬದುಕು ನಡೆಸುತ್ತಿದ್ದ ಆ ಅಸಹಾಯಕ ವೃದ್ಧೆಯ ಪ್ರಶ್ನೆ. ನನ್ನ ಊರಿನಲ್ಲಿ ಜುಳು ಜುಳು ಹರಿಯುತ್ತಿದ್ದ ನದಿಯನ್ನು ಕಲುಷಿತ ಮಾಡಿದವರು ಯಾರು? ಗಣಿಯ ಧೂಳನ್ನು ಬೆರಸಿ ನೀರನ್ನು ಕುಡಿಯಲಾಗದಂತೆ ಕಪ್ಪಾಗಿ ಮಾಡಿದವರು ಯಾರು? ಎನ್ನುವುದು ಜಾರ್ಖಂಡ್ ನ ಎಲ್ಲರ ಪ್ರಶ್ನೆ. ಹೀಗೆ ನಿಟ್ಟುಸಿರ ಗಾಥೆಗೆ ಕೊನೆಯೇ ಇಲ್ಲ.
.
ನನಗೆ ಅದುವರೆಗೆ ಗೊತ್ತಿದ್ದದ್ದು ‘ದಿನಕ್ಕೊಂದು ಕಥೆ’ ಮಾತ್ರ. ಸೊಂಪಾಗಿ ಮಲಗಲೆಂದು ಅಮ್ಮ ಮಾಯಾ ಲೋಕಕ್ಕೆ, ಕಿನ್ನರ ಲೋಕಕ್ಕೆ, ಬೆರಗಿನ ಲೋಕಕ್ಕೆ, ರಾಜಕುವರಿಯರ ಲೋಕಕ್ಕೆ ಕರೆದೊಯ್ಯುತ್ತಿದ್ದ ದಿನಕ್ಕೊಂದು ಕಥೆಗಳು. ಆದರೆ ಇಲ್ಲಿಯೂ ದಿನಕ್ಕೊಂದು ಕಥೆ ಇದೆ. ಆದರೆ ಇದು ನಿದ್ದೆಯಲ್ಲಿದ್ದವರನ್ನು ಎಬ್ಬಿಸುವ ಕಥೆಗಳು. ಸುಖದ ಸಂಭ್ರಮದ ನಡುವೆ ಇದ್ದವರನ್ನು ನಿಡುಸುಯ್ಯುವಂತೆ ಮಾಡುವ ಕಥೆಗಳು. ನಮ್ಮೊಳಗನ್ನು ಪ್ರಶ್ನಿಸುವಂತೆ ಮಾಡುವ ಕಥೆಗಳು. ದಿನಕ್ಕೊಂದು ನಿಟ್ಟುಸಿರ ಕಥೆಗಳು.
ಪ್ರತೀ ದಿನ ಹೀಗೆ ಒಂದೊಂದು ನಿಟ್ಟುಸಿರ ಕಥೆಯನ್ನು ನಮ್ಮ ಇ- ಮೇಲ್ ಗೆ ದೂಡಿ ನಾವು ಸದಾ ಅಸ್ವಸ್ಥರಾಗಿ ಉಳಿಯುವಂತೆ ಮಾಡುತ್ತಿರುವವರು ‘ವಿಡಿಯೋ ವಾಲಂಟಿಯರ್ಸ್’. ಸಿ ಎನ್ ಎನ್, ಫಾಕ್ಸ್, ಕೋರ್ಟ್ ಟಿ ವಿ ಹೀಗೆ ಹಲವು ವರ್ಷಗಳ ಕಾಲ ಟಿ ವಿ ಚಾನಲ್ ಗಳಲ್ಲಿ ಕೆಲಸ ಮಾಡಿದ ಜೆಸ್ಸಿಕಾ ಮೇಬೆರ್ರಿ ಒಂದು ದಿನ ತಾನು ಮಾಡುತಿರುವ ಕೆಲಸದ ಅರ್ಥವಾದರೂ ಏನು ಎನ್ನುವ ಪ್ರಶ್ನೆ ಎದ್ದು ನಿಂತಿತು. ಸದಾ ಅತಿರೇಕದ ವರದಿ ಮಾಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎನಿಸಿದಾಕ್ಷಣ ರಾಜಿನಾಮೆ ನೀಡಿ ಹೊರಬಂದರು. ಹಾಗೆ ಹೊರಬಿದ್ದವರು ನೇರವಾಗಿ ಬಂದು ಇಳಿದದ್ದು ಅಹಮದಾಬಾದ್ ಗೆ . ಅಲ್ಲಿನ ಮಹಿಳೆಯರಿಗೆ ಕ್ಯಾಮೆರಾ ಹಿಡಿಯುವ, ಅದನ್ನು ತಮ್ಮ ಒಳಿತಿಗಾಗಿ ಬಳಸಿಕೊಳ್ಳುವುದನ್ನು ಹೇಳಿಕೊಡಲು ನಿಂತರು. ಅಮೇರಿಕನ್ ಇಂಡಿಯಾ ಫೌಂಡೇಷನ್ ಇವರ ಬೆನ್ನಿಗಿತ್ತು. ಸತತವಾಗಿ ಒಂದು ವರ್ಷ ಭಾರತದ ಮೂಲೆ ಮೂಲೆ ಅಲೆಯುತ್ತಾ, ಮಹಿಳೆಯರ ಪಿಸು ಮಾತನ್ನು ಆಲಿಸುತ್ತಾ, ಹೇಳಿಕೊಳ್ಳಲಾಗದ ಕಥೆಗಳನ್ನು ಕೇಳುತ್ತಾ ಹೋದ ಇವರಿಗೆ ತಮ್ಮ ಎದುರು ಇನ್ನೂ ದೊಡ್ಡ ಸವಾಲಿದೆ ಅನಿಸಿತು. ಕೇವಲ ಮಹಿಳೆಯರು ಮಾತ್ರವಲ್ಲ ಅಭಿವೃದ್ಧಿ ಎನ್ನುವುದು ತಾಕಿಯೇ ಇಲ್ಲದ, ಸದಾ ನಿಟ್ಟುಸಿರಿನಲ್ಲಿ ಕೈ ತೊಳೆಯುತ್ತಿದ್ದವರ ಕಥೆಗೆ ದನಿಯಾಗಬೇಕು ಅನಿಸಿತು. ಆ ವೇಳೆಗೆ ಕ್ಯಾಮೆರಾ ಕಣ್ಣಿನ ಮೂಲಕ ಮಾತನಾಡುತ್ತಿದ್ದ ಕೆ ಸ್ಟಾಲಿನ್ ಜೊತೆಯಾದರು. ‘ವಿಡಿಯೋ ವಾಲಂಟಿಯರ್ಸ್’ ಸಂಸ್ಥೆ ತಲೆ ಎತ್ತಿತು.
ದೇಶದ ಮೂಲೆ ಮೂಲೆಗಳಲ್ಲಿ ಕ್ಯಾಮೆರಾ ಓಡಾಡಬೇಕು. ಯಾರೂ ಮುಟ್ಟದ ಪರ್ವತದ ತುದಿ, ಕೊರೆಯುವ ಹಿಮರಾಶಿ, ಕಾಲಿಡಲಾಗದ ಘಟ್ಟಗಳು, ಓಡಾಡಲು ರಸ್ತೆ ಇರದ ತಾವುಗಳು ಎಲ್ಲೆಲ್ಲೂ ಕ್ಯಾಮೆರಾಗಳು ಅಲೆಯಬೇಕು ಅದುವರೆಗೂ ಭಾರತಕ್ಕೇ ಗೊತ್ತಿಲ್ಲದ ಭಾರತವನ್ನು ಪರಿಚಯ ಮಾಡಬೇಕು. ಅದುವರೆವ್ಗೂ ಭಾರತ ಕೇಳಿಲ್ಲದ ನಿಟ್ಟುಸಿರ ಕಥೆಗಳನ್ನು ಹೇಳಬೇಕು ಎಂದು ಹಂಬಲಿಸಿದರು. ಇಂದು ಭಾರತದ ಮೂಲೆ ಮೂಲೆಗಳಲ್ಲಿ ‘ವಿಡಿಯೋ ವಾಲಂಟಿಯರ್ಸ್’ ನ ಕಾರ್ಯಕರ್ತರಿದ್ದಾರೆ. ತಮ್ಮ ಹೆಗಲಿಗೆ ಕ್ಯಾಮೆರಾ ಏರಿಸಿ ದಿಕ್ಕು ದಿಕ್ಕಿಗೆ ಹರಡಿಹೋಗುತ್ತಾರೆ. ಒಬ್ಬ ಆಟೋ ಚಾಲಕ, ಒಬ್ಬ ಕೂಲಿಯಾಳು, ಶಾಲೆ ಬಿಟ್ಟು ದಿಕ್ಕುಪಾಲಾಗಿದ್ದ ಹುಡುಗ, ಮದ್ಯವ್ಯಸನದ ವಿರುದ್ಧ ಹೋರಾಡಿದ ಮಹಿಳೆಯರು, ಸ್ಮಶಾನದಲ್ಲಿ ಮಣ್ಣು ಹೊರುತ್ತಿದ್ದ ಆಳು ಎಲ್ಲರೂ ಇಂದು ಈ ವಿಡಿಯೋ ವಾಲಂಟೀರ್ಸ್ ನ ವರದಿಗಾರರು.
‘ಇವತ್ತು ಕುಗ್ರಾಮಗಳಲ್ಲಿ ವರದಿಗಾರರೆಲ್ಲಿದ್ದಾರೆ? ಅಲ್ಲಿನ ದನಿ ಯಾವ ಮಾಧ್ಯಮದಲ್ಲಿ ಬರುತ್ತಿದೆ ಹೇಳಿ? ಇವತ್ತು ಮಾಧ್ಯಮಗಳು ವರದಿಗಳನ್ನು ಹೊರತೆಗೆಯುವ ಮಾತನಾಡುತ್ತಿವೆ. ಆದರೆ ನಾವು ವರದಿಗಳನ್ನು ಹೊರಗೆ ಕಳಿಸುವ ಬಗ್ಗೆ ಚಿಂತಿಸುತ್ತಿದ್ದೇವೆ’ ಎನ್ನುತ್ತಾರೆ ಜೆಸ್ಸಿಕಾ ಮೇಬೆರ್ರಿ. ಒಂದಲ್ಲಾ ಒಂದು ದಿನ, ಇಂದಲ್ಲಾ ನಾಳೆ ನಾವು ಈ ವಿಡಿಯೋ ಸಾಹಸವನ್ನು ‘ಗ್ರಾಮೀಣ ಭಾರತದ ರಾಯ್ಟರ್ಸ್’ ಆಗಿ ಮಾಡುತ್ತೇವೆ. ಭಾರತದ ಎಲ್ಲಾ 625 ಜಿಲ್ಲೆಗಳಲ್ಲಿಯ್ಪೂ ನಮ್ಮ ಕ್ಯಾಮೆರಾಗಳು ಓಡಾಡಬೇಕು. ಇಂದಿನ ಯಾವ ಮಾಧ್ಯಮದಲ್ಲಿಯೂ ಕಾಣಸಿಗದ ನೋವಿನ ಕಥೆಗಳನ್ನು ಈ ಕ್ಯಾಮೆರಾಗಳು ಹೊರತೆಗೆಯಬೇಕು ಎನ್ನೂತ್ತಾರೆ. ‘ಅದು ಸಾಧ್ಯವಿಲ್ಲ’ ಎಂದು ಹೇಳುವ ಅವಕಾಶವನ್ನು ಈಗಾಗಲೇ ಊರೂರು ಅಲೆಯುತ್ತಿರುವ ಇವರ ಪ್ರತಿನಿಧಿಗಳು ತಪ್ಪಿಸಿಬಿಟ್ಟಿದ್ದಾರೆ.
.
ಮೇಲ್ಜಾತಿಯವರ ಮನೆಗಳ ಮುಂದೆ ಹಾದುಹೊಗಬೇಕಾದಾಗ ಚಪ್ಪಲಿಯನ್ನು ಕಳಚಿ ಕೈನಲ್ಲಿ ಹಿಡಿದು ಹೋಗಬೇಕಾದ ಕಥೆ ರಾಜಸ್ಥಾನದ ಕುಗ್ರಾಮವೊಂದರಿಂದ ಹೊರಬೀಳುತ್ತದೆ. ಮದ್ಯಪಾನ ಮಾಡಿ ಹಾಳಾಗಿ ಹೋದವರಿಗೆ ಪಾಠ ಕಲಿಸಲು ಮುಂದಾದ ಚಿಂಗಾರಿ ಮಹಿಳಾ ಸಮಿತಿಯ ಸಾಹಸ ಜಾರ್ಖಂಡ್ ನ ರಾಯಪುರದಿಂದ ಹೊರಬೀಳುತ್ತದೆ. ಚತ್ತೀಸ್ ಗಢದ ಎದೆಯಲ್ಲಿ ಹಾದು ಹೋಗುವ ರಸ್ತೆಯನ್ನು ನಿರ್ಮಿಸಿದ 22 ಕೂಲಿಕಾರರಿಗೆ ಮೂರು ವರ್ಷವಾದರೂ ವೇತನ ನೀಡದ ಸರ್ಕಾರದ ಕಥೆ ಇನ್ನೊಂದು ಕುಗ್ರಾಮದಿಂದ ಎದ್ದು ನಿಲ್ಲುತ್ತದೆ ಜಾರ್ಖಂಡ್ ನ ಕುಂಟಿ ಗ್ರಾಮದಲ್ಲಿ ರಾತ್ರೋರಾತ್ರಿ ಮರಳು ಕಳುವು ಮಾಡುತ್ತಿದ್ದವರ ಕಥೆ ಎಲ್ಲರ ಮುಂದೆ ಬಯಲಾಗುತ್ತದೆ. ಗಿರಣಿಯ ದೂಳು ನೆರೆಹೊರೆಯವರನ್ನು ಕಾಡುತ್ತಿದ್ದಾಗ ಕ್ಯಾಮೆರಾದ ಕಣ್ಣು ಅದರ ಸುತ್ತಾ ಹರಿದಾಡುತ್ತದೆ.
‘ವಿಡಿಯೋ ವಾಲಂಟಿಯರ್ಸ್’ಗಳು ಕ್ಯಾಮೆರಾ ಹಿಡಿದದ್ದೇ ಅವರ ಸುತ್ತಮುತ್ತಲಿನವರ ಬದುಕು ಹಸನಾಗಿದೆ. ಅವರ ಬದುಕು ಮಾತ್ರವಲ್ಲ ಆ ಕ್ಯಾಮೆರಾ ಹಿಡಿದವರ ಬದುಕೇ ಬದಲಾಗಿ ಹೋಗಿದೆ. ಅದುವರೆಗೂ ಅಸ್ಪೃಶ್ಯ ಎನ್ನುವ ಕಾರಣಕ್ಕಾಗಿ ದೇವಸ್ಥಾನದ ಒಳಗೆ ಹೋಗಲಾಗದ ಯುವಕನಿಗೆ ಕ್ಯಾಮೆರಾ ಹಿಡಿದಾಕ್ಷಣ ದೇವಸ್ಥಾನದೊಳಗೆ ಸಲೀಸಾಗಿ ಪ್ರವೇಶ ಧಕ್ಕಿ ಹೋಗುತ್ತದೆ ಕ್ಯಾಮೆರಾ ಎನ್ನುವುದು ಕೇವಲ ಕ್ಯಾಮೆರಾ ಅಲ್ಲ ಅದು ಅಸ್ತ್ರ. ಜಾತಿಯನ್ನ, ಧರ್ಮವನ್ನ, ಲಿಂಗ ಅಸಮಾನತೆಯನ್ನ, ಭ್ರಷ್ಟಾಚಾರವನ್ನ ತೊಡೆದು ಹಾಕುವ ಅಸ್ತ್ರ ಎನ್ನುವುದು ಈ ವಿಡಿಯೋ ವರದಿಗಾರರಿಗೆ ಗೊತ್ತಾಗಿ ಹೋಗಿದೆ.
ಎಷ್ಟೋ ಜನ ತಾವು ಬಾಲ್ಯದಲ್ಲಿ ಅನುಭವಿಸಿದ ನೋವು ಅಪಮಾನಗಳನ್ನು ಕ್ಯಾಮೆರಾ ಹಿಡಿದಾಕ್ಷಣ ನೆನಪು ಮಾಡಿಕೊಂಡಿದ್ದಾರೆ. ಅಂತಹ ವರದಿಗಳ ಬೆನ್ನು ಹತ್ತಿ ಹೋಗಿದ್ದಾರೆ. ಅವರ ಕ್ಯಾಮೆರಾ ಗ್ರಾಮೀಣ ಬದುಕನ್ನೇ ಬದಲು ಮಾಡಿ ಹಾಕುತ್ತಿದೆ. ಶಾಲೆಯಲ್ಲಿ ದಿನಗಟ್ಟಲೆ ಬಾರದ ಶಿಕ್ಷಕ ಶಾಲೆಗೆ ಬರುವಂತೆ ಮಾಡುತ್ತದೆ. ಅತ್ಯಾಚಾರಕ್ಕೆ ಒಳಗಾದವರ ಕಥೆಯನ್ನು ಸರ್ಕಾರದ ಕಣ್ಣಿಗೆ ರಾಚಿ ಕ್ರಮಕ್ಕೆ ಆಗ್ರಹಿಸುತ್ತದೆ. ನಿರಾಶ್ರಿತರಿಗೆ ಮನೆ ಕಟ್ಟುವಂತೆ ಮಾಡಿದೆ. ಆಸ್ಪತ್ರೆಗಳಿಗೆ ಶುಚಿತ್ವ, ಔಷಧಿ ಎರಡೂ ಬರುವಂತೆ ಮಾಡಿದೆ. ಮರಗಳ್ಳರು ಜೈಲು ಸೇರುವಂತೆ ಮಾಡಿದೆ.
ಈ ಕಥೆಗಳನ್ನು ಚಿತ್ರಿಸಿ ಡಬ್ಬಿಯಲ್ಲಿಟ್ಟರೆ ಯಾರ ಬದುಕು ಬದಲಾಗಲು ಸಾಧ್ಯ? ಅದು ‘ವಿಡಿಯೋ ವಾಲಂಟಿಯರ್ಸ್’ಗೆ ಗೊತ್ತು. ಹಾಗಾಗಿಯೇ ಸಮುದಾಯ ವಿಡಿಯೋ ಕೇಂದ್ರಗಳನ್ನು ಸೃಷ್ಟಿಸಿದೆ. ದೇಶದ ನಾನಾ ಕಡೆ ಇವರು ತಯಾರಿಸುವ ಬಡತನತ ಕಥನಗಳನ್ನು ಈ ಕೇಂದ್ರ ತನ್ನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರದರ್ಶಿಸುತ್ತದೆ. ಅಷ್ಟೇ ಅಲ್ಲ ತನ್ನ ಸುತ್ತಲಿನ ಹಳ್ಳಿಗಳ ಕಥೆಗಳನ್ನು ಕೇಂದ್ರೀಕರಿಸಿದ ವಿಡಿಯೋ ಮ್ಯಾಗಜೈನ್ ತಯಾರಿಸಿ ಅದನ್ನೂ ಪ್ರದರ್ಶಿಸುತ್ತದೆ. ಈ ಎಲ್ಲ ಕಥನಗಳೂ ದೇಶ ವಿದೇಶಿಗರಿಗೆ ನೋಡಲು ಸಿಗಬೇಕು ಎನ್ನುವ ಕಾರಣಕ್ಕೆ ವೆಬ್ ಸೈಟ್ ನಲ್ಲಿ (indiaunheard.videovolunteers.org) ಪ್ರದರ್ಶಿಸುತ್ತದೆ. ಅಷ್ಟೇ ಅಲ್ಲ. ಪ್ರತೀ ದಿನ ತನ್ನ ಸಂಪರ್ಕಕ್ಕೆ ಬಂದವರಿಗೆ ದಿನಕ್ಕೊಂದು ವಿಡಿಯೋ ಮೇಲ್ ಮಾಡುತ್ತದೆ. ಮನೆ ಬಾಗಿಲಿಗೆ ಅಥವಾ ಇ- ಮೇಲ್ ಬಾಗಿಲಿಗೆ ನಾವು ಕಂಡರಿಯದ ಹಳ್ಳಿಯ, ಊಹಿಸಲೂ ಆಗದ ಕಥೆಗಳು ಬಂದು ಸೇರುತ್ತವೆ.
.
‘ಶ್ರೀಮಂತಿಕೆ ಹಾಗೂ ಬಡತನದ ನಡುವಣ ಕಂದರವನ್ನು ತಂತ್ರಜ್ಞಾನ ಇನ್ನಷ್ಟು ಹೆಚ್ಚಿಸುತ್ತಿದೆ. ಅದನ್ನು ತೊಡೆದು ಹಾಕುವುದೇ ನಮ್ಮ ಉದ್ಧೇಶ’ ಎನ್ನುವ ಜೆಸ್ಸಿಕಾ ಕನಸು ನನಸಾಗುತ್ತಲೇ ಹೋಗುತ್ತಿದೆ. ‘ನನ್ನ ತಾಯಿ ಹಾಡಿದ ಒಂದು ಹಾಡಿನಿಂದ ನಾನು ಜಗತ್ತನ್ನು ನೋಡುವ ಕಿಟಕಿಯೊಂದನ್ನು ರೂಪಿಸಿಕೊಂಡೆ’ ಎಂದಿದ್ದರು ಕವಿ ಎಕ್ಕುಂಡಿ. ಒಮ್ಮೆ ‘ವಿಡಿಯೋ ವಾಲಂಟಿಯರ್ಸ್’ನ ವಿಡಿಯೋಗಳನ್ನು ನೋಡುತ್ತಾ ಹೋದರೆ ಹಾಗೇ ಅನಿಸುತ್ತದೆ. ಇವರ ಈ ವಿಡಿಯೋಗಳು ಭಾರತವನ್ನು ಇನ್ನೊಂದು ರೀತಿಯಲ್ಲಿ ನೋಡುವ ಕಿಟಕಿಯನ್ನು ಕಟ್ಟಿಕೊಟ್ಟಿದೆ.










Brilliant article.
ಉತ್ತಮ ಲೇಖನ.. ಧನ್ಯವಾದಗಳು ಹಂಚಿಕೊಂಡಿದ್ದಕ್ಕೆ..
ನಟರಾಜು
ಲೀಡ್ ನ್ಯೂಸ್ ನಲ್ಲಿ ಬೋಪಯ್ಯ ಎಲ್ಲಯ್ಯಾ…ಈಶ್ವರಪ್ಪ ಪ್ರತಿತಂತ್ರ…..ಟಿಪ್ಪು ವಿವಿಯ ಗೊಂದಲಗಳು ಇವನ್ನೇ ನೋಡುತ್ತಿರುವ ಮಾದ್ಯಮಗಳು ಇದನ್ನು ಗಂಬೀರವಾಗಿ ಗಮನಿಸಬೇಕಿದೆ.ಬಿಗ್ ಬಾಸ್ ನಡೆಸಿಕೊಡುವ ಸಲ್ಮಾನ್…ಸತ್ಯಮೇವಜಯತೇಯ ಅಮೀರ್..ಬೇರೆ ಥರಾ ಕಾಣುವುದಕ್ಕೆ ಕಾರಣಗಳಿವೆ.ಥ್ಯಾಂಕ್ಯೂ ಮೋಹನ್ ಸರ್
ವೀಡಿಯೊ ವಾಲೆಂಟಿಯರ್ಸ್ ನವರ ಈ ಕೆಲಸ ನಿಜಕ್ಕೂ ಶ್ಲಾಘನೀಯ. ಮನಮುಟ್ಟುವ ಲೇಖನ.
– ಪ್ರಸಾದ್.ಡಿ.ವಿ.
ಮಾಹಿತಿಪೂರ್ಣ ಲೇಖನ…ಸಮುದಾಯದ ಜಾಗೃತಿಯೇ ಸಮಾಜದ ಏಳಿಗೆ..ಧನ್ಯವಾದಗಳು ಸರ್…
ಇಂದಿನ ಮಾಧ್ಯಮಗಳಿಗೆ ಅವರಿವರು ಜುಟ್ಟು ಹಿಡಿದುಕೊಂಡು ಜಗಳವಾಡುವುದಷ್ಟೇ ಬೇಕು(ಅವರ ಅಕ್ಕ ತಂಗಿ ಸಂಬಂಧದವರಾಗಿರಬಾರದು). ಆದರೆ, ಇಂತಹ ವಾಲೆಂಟಿಯರ್ ಕೆಲಸಗಳನ್ನು ನಾವೆಲ್ಲರೂ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಮಾಡಬೇಕು. ಮಾಹಿತಿಯ ಲೇಖನಕ್ಕೆ ವಂದನೆಗಳು ಗುರುವರ್ಯ… 🙂
wow!!advancement…thrilled after reading this writeup
ಬಹಳ ಒಳ್ಳೆಯ ಬರಹ.ಅಂಥ ಕೆಲಸವನ್ನು ನಾವೂ ಆರಂಭಿಸಬೇಕು.
ಎ .ಆರ್.ಮಣಿಕಾಂತ್.
ಕ್ಯಾಮೆರಾ ಅಲ್ಲ ಅದು ಅಸ್ತ್ರ. ಜಾತಿಯನ್ನ, ಧರ್ಮವನ್ನ, ಲಿಂಗ ಅಸಮಾನತೆಯನ್ನ, ಭ್ರಷ್ಟಾಚಾರವನ್ನ ತೊಡೆದು ಹಾಕುವ ಅಸ್ತ್ರ …ಬಾಲ್ಯದಲ್ಲಿ ಅನುಭವಿಸಿದ ನೋವು ಅಪಮಾನ…..ಬದುಕನ್ನೇ ಬದಲು ಮಾಡಿ ಹಾಕುತ್ತಿದೆ……ಭಾರತವನ್ನು ಇನ್ನೊಂದು ರೀತಿಯಲ್ಲಿ ನೋಡುವ ಕಿಟಕಿಯನ್ನು ಕಟ್ಟಿಕೊಟ್ಟಿದೆ…. copy paste ankobedi.. no kannada typing so sir.., . super sir… badikin aache badukide.. ….