ತುಳು ನಾಡಿನ ಆಚರಣೆಗಳ ಬಗ್ಗೆ ಅಗಾಧ ಪ್ರೀತಿ ಹೊಂದಿರುವವರು ಲಕ್ಷ್ಮಿ ವಿ ಪ್ರಸಾದ್ .
ಕೋಟಿ ಚನ್ನಯರ ಅಕ್ಕ ಕಿನ್ನಿದಾರು ಮನೆಗೆ ಹೋಗಿದ್ದನ್ನು ಬಣ್ಣಿಸಿದ್ದರು.
ಈಗ ದಾರಿ ತಪ್ಪಿದ್ದು ಹೇಗೆ ಒಳ್ಳೆಯದಾಯಿತು ಎಂದು ಸಂಭ್ರಮಗೊಂಡಿದ್ದಾರೆ

ಡಾ ಲಕ್ಷ್ಮೀ ಜಿ ಪ್ರಸಾದ
2009 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕಿಯಾಗಿ ನಾನು ಆಯ್ಕೆಯಾದಾಗ, ತುಳು ಸಂಶೋಧನೆಯ ಕನಸನ್ನು ಕಾಣುತ್ತಲೇ ಬೆಳ್ಳಾರೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಅನ್ನು ಆಯ್ಕೆ ಮಾಡಿಕೊಂಡಿದ್ದೆ.
ಅಲ್ಲಿನ ಸುತ್ತ ಮುತ್ತಲಿನ ಭೂತಾರಾಧನೆ ಬಗ್ಗೆ ವಿಚಾರಿಸುತ್ತಿದ್ದಾಗ ಬೆಳ್ಳಾರೆಗೆ ಸಮೀಪದ ಎಡಮಂಗಲದ ಮಾಲೆಂಗ್ರಿ ಪಿಲಿಕುಂಜದಲ್ಲಿ ಮಾಲಿಂಗರಾಯ ಎಂಬ ಅಪರೂಪದ ದೈವದ ಆರಾಧನೆ ಇರುವ ಬಗ್ಗೆ ತಿಳಿಯಿತು. ಆ ದೈವದ ಕೋಲವನ್ನು ರೆಕಾರ್ಡ್ ಮಾಡುವ ಸಲುವಾಗಿ 2010 ಜನವರಿ ಹತ್ತನೇ ತಾರೀಕು ಬೆಳ್ಳಾರೆಯಿಂದ ಒಂದು ಅಟೋ ಹಿಡಿದು ಸುಮಾರು 10- 12 ಮೈಲು ದೂರದಲ್ಲಿ ಇರುವ ಮಾಲೆಂಗ್ರಿ ಪಿಲಿಕುಂಜ ಬೀಡಿಗೆ ಹೊರಟಿದ್ದೆ .
“ಹಳ್ಳಿಯ ದಾರಿ, ಆದರೆ ಅಲ್ಲಿ ತನಕ ಮಾರ್ಗ ಇದೆ. ಆದರೆ ಹಳ್ಳಿಯ ಕಾಡಿನ ದಾರಿ, ಸರಿಯಾಗಿ ದಾರಿ ಗೊತ್ತಿರುವ ಅಟೋ ಚಾಲಕನ ಆಟೋದಲ್ಲಿ ಬನ್ನಿ, ಬಸ್ಸು ಕೂಡ ಇದೆ ಆದರೆ ಅದು ಸುತ್ತು ಸುತ್ತಿಕೊಂಡು ಬರುತ್ತದೆ ” ಎಂದು ಬೀಡಿನ ಒಡೆಯ ರಾಮ ಕೃಷ್ಣ ರೈ ಗಳು ಹೇಳಿದ್ದರು .
ಅಟೋ ಚಾಲಕ “ತನಗೆ ದಾರಿ ಗೊತ್ತಿದೆ” ಎಂದು ಹೇಳಿದ ಕಾರಣವೇ ಆತನ ಅಟೋ ಹತ್ತಿದ್ದೆ. ಆದರೆ ದಾರಿಯಲ್ಲಿ ಆತನಿಗೂ ಗೊಂದಲವಾಯಿತು. ಎತ್ತ ನೋಡಿದರೂ ಕಾಡು, ಗುಡ್ಡದ ಪರಿಸರದಲ್ಲಿ ಯಾರಿಗಾದರೂ ಗೊಂದಲ ಆಗುವುದು ಸಹಜ. ಅಲ್ಲಿ ಯಾವುದೇ ಒಂದು ಮನೆಯಾಗಲೀ, ಓಡಾಡುವ ಜನರಾಗಲೀ ಕಾಣಿಸಲಿಲ್ಲ.
”ಇಲ್ಯಾಕೆ ಯಾರ ಮನೆಯೂ ಇಲ್ಲ” ಎಂದು ಅಟೋ ಚಾಲಕನಲ್ಲಿ ಕೇಳಿದೆ.”ಈ ಊರಿನವರೆಲ್ಲ ತುಂಬಾ ಶ್ರೀಮಂತರು ಮೇಡಂ ಒಬ್ಬೊಬ್ಬರಿಗೆ ನೂರು ನೂರೈವತ್ತು ಎಕರೆ ಭೂಮಿ ಇದೆ. ಹಾಗಾಗಿ ನೂರು ಎಕರೆಗೊಂದು ಮನೆ ಇದ್ದರೆ ಹೆಚ್ಚು” ಎಂದು ಹೇಳಿದ. ಅವನು ಹೇಳಿದ ಮಾತು ನಿಜ ಎಂದು ಅನಂತರ ನನ್ನ ಅರಿವಿಗೆ ಬಂತು ಕೂಡ!
ದಾರಿ ತಪ್ಪಿ ಯಾವುದೊ ಮಣ್ಣಿನ ಮಾರ್ಗದಲ್ಲಿ ಸುಮಾರು ದೂರ ಅಟೋ ಹೋಯಿತು. ಅಷ್ಟರಲ್ಲಿ ದಾರಿ ತಪ್ಪಿದ್ದು ಗಮನಕ್ಕೆ ಬಂತು. ಆದರೆ ಸರಿಯಾದ ದಾರಿ ಕೇಳಲು ಅಲ್ಲಿ ಜನ ಸಂಚಾರವೇ ಇರಲಿಲ್ಲ. ಅಷ್ಟು ನಿರ್ಜನ ಹಳ್ಳಿಯದು .ಸ್ವಲ್ಪ ಹಿಂದೆ ಬಂದು ಇನ್ನೊಂದು ಮಣ್ಣಿನ ಮಾರ್ಗದಲ್ಲಿ ಸ್ವಲ್ಪ ಮುಂದೆ ಹೋದೆವು .ಆಗ ಅಲ್ಲಿ ದೋಲ ಅರಮನೆಗೆ ದಾರಿ ಎಂದು ಬರೆದಿತ್ತು ದೋಲ ಬಾರಿಕೆಯಲ್ಲಿ ಕಿನ್ನಿದಾರುವಿನ ಮನೆ ಈಗಲೂ ಇದೆ ಎಂದು ಹೇಳುವುದನ್ನು ಕೇಳಿದ್ದೆ. ಅದೇ ಇರಬಹುದೇನೋ ಎಂದು ಅದೇ ದಾರಿಯಲ್ಲಿ ಮುಂದುವರಿಯಲು ಹೇಳಿದೆ..
ಹೌದು ನನ್ನ ಊಹೆ ಸರಿಯಾಗಿತ್ತು. ನಾವು ಅದೇ ದಾರಿಯಲ್ಲಿ ಸುಮಾರು ಒಂದೂವರೆ ಮೈಲು ಮುಂದೆ ಹೋದಾಗ ಒಂದು ಹಳೆಯ ಮಣ್ಣಿನ ಮನೆ ಸಮೀಪ ಬಂದೆವು. ಅಲ್ಲಿ ಓರ್ವ ವೃದ್ಧರೂ ಕೂಡ ಇದ್ದರು. ಹಾಗೆ ಅವರಲ್ಲಿ ಆ ಹಳೆ ಮನೆ ಬಗ್ಗೆ ವಿಚಾರಿಸಿದೆ. ಆಗ ಅವರು ಅದು ಕೋಟಿ ಚೆನ್ನಯರ ಅಕ್ಕ ಕಿನ್ನಿದಾರುವಿನ
ಮನೆ ಎಂದು ಹೇಳಿದರು. ವರ್ಷಕ್ಕೊಮ್ಮೆ ಅಲ್ಲಿ ನೂರೊಂದು ದೈವಗಳಿಗೆ ಕೋಲ ಆಗುತ್ತದೆ ಎಂದು ಕೂಡ ಹೇಳಿದರು. ಎಣ್ಮೂರು ಗರಡಿಯಲ್ಲಿ ಕೋಟಿ ಚೆನ್ನಯರಿಗೆ ನೇಮ ಆಗುವಾಗ ಕಿನ್ನಿದಾರುವಿಗೂ ಕೋಲ ಕೊಟ್ಟು ಆರಾಧಿಸುತ್ತಾರೆ. ಕಿನ್ನಿದಾರು ಮತ್ತು ಕೋಟಿ ಚೆನ್ನಯರ ಭೇಟಿಯ ಪ್ರಸಂಗವನ್ನು ಕೋಲದಲ್ಲಿ ಸಾಂಕೇತಿಕವಾಗಿ ನಿರೂಪಿಸುತ್ತಾರೆ.
ಅಲ್ಲಿ ಕೋಟಿ ಚೆನ್ನಯರು ನೀರು ಕುಡಿದ ಬಾವಿ ಕೂಡ ಎದುರಿಗೆ ಇದೆ.
ಅಲ್ಲಿಂದ ಸ್ವಲ್ಪ ಮುಂದೆ ಕೋಟಿ ಚೆನ್ನಯರ ಪ್ರತೀಕವಾಗಿರುವ ಎರಡು ಜೋಡು ತಾಳೆ ಮರಗಳು ಕೂಡ ಇವೆ ಎಂದು ಅವರು ತೋರಿಸಿದರು ಅಲ್ಲಿಂದ ಫೋಟೋ ಹಿಡಿದು ಎಡಮಂಗಲಕ್ಕೆ ಹೋಗುವ ದಾರಿ ಕೇಳಿದೆ.
ಅವರು ಸ್ವಲ್ಪ ದೂರ ನಮ್ಮ ಜೊತೆ ಅಟೋದಲ್ಲಿ ಬಂದು ಸರಿಯಾದ ದಾರಿಯನ್ನು ತೋರಿಸಿದರು. ಅಲ್ಲಿಂದ ಯಾವುದೇ ದಾರಿ ತಪ್ಪದೆ ನಾವು ಮಾಲೆಂಗ್ರಿ ಪಿಲಿಕುಂಜ ಬೀಡಿಗೆ ಬಂದೆ.
ಆಗ ದಾರಿ ತಪ್ಪಿದ್ದಾಗ ತುಂಬಾ ಆತಂಕವಾಗಿತ್ತು. ಕಂಡು ಕೇಳದ ದಾರಿಯಲ್ಲಿ ಸಂಪೂರ್ಣ ಅಪರಿಚಿತ ಪರಿಸರದಲ್ಲಿ, ದಾರಿಯೇ ಇಲ್ಲದ ದಾರಿಯಲ್ಲಿ ಸಾಗುವಾಗ ನಿಜಕ್ಕೂ ಭಯವಾಗಿತ್ತು. ದಾರಿ ಗೊತ್ತಿದ್ದೂ ಅಟೋ ಚಾಲಕ ನನ್ನನ್ನು ನಿರ್ಜನ ಪ್ರದೇಶಕ್ಕೆ ಒಯ್ಯುತ್ತಿದ್ದಾನೋ ಏನೋ ಎಂಬ ಸಂಶಯ ಬೇರೆ ಕಾಡುತ್ತಿತ್ತು. ಜೊತೆಗೆ ಅಟೋ ಆಗಾಗ ಆಫ್ ಆಗಿ ನಿಲ್ಲುತ್ತಾ ಇತ್ತು! ಅಲ್ಲೆಲ್ಲೂ ಮೊಬೈಲ್ ಸಿಗ್ನಲ್ ಸಿಗುತ್ತಾ ಇರಲಿಲ್ಲ.
ಅಂದಿನ ಆತಂಕದ ಕ್ಷಣಗಳು ಇಂದು ಸವಿನೆನಪಾಗಿ ಸದಾ ಹಸಿರಾಗಿ ಉಳಿದಿದೆ. ಆಗ ದಾರಿ ತಪ್ಪಿದ್ದೇ ಒಳ್ಳೆಯದಾಯಿತು. ಅದರಿಂದಾಗಿ ಕಿನ್ನಿದಾರುವಿನ ಮನೆ ನೋಡಲು ಸಾಧ್ಯವಾಯಿತು ಎನಿಸುತ್ತದೆ!.
ಒಂದೊಮ್ಮೆ ನಾನು ಬಸ್ಸಿನಲ್ಲಿ ಹೋಗಿದ್ದರೂ ಕೂಡ ನನಗೆ ಕಿನ್ನಿದಾರುವಿನ ಮನೆ ನೋಡಲು ಸಿಗುತ್ತಿರಲಿಲ್ಲ. ಸುಮಾರು 300-350 ವರ್ಷ ಪ್ರಾಚೀನವಾಗಿರುವ, ಸ್ಮಾರಕವಾಗಿ ಸಂರಕ್ಷಿಸಿ ಇಡಬೇಕಾಗಿರುವ ಕಿನ್ನಿದಾರುವಿನ ಮನೆಗೆ ಹೋಗಲು ಸರಿಯಾದ ರಸ್ತೆ ಕೂಡ ಇಲ್ಲ.
ತುಳುನಾಡನ್ನು ಬೆಳಗಿದ ಅಪ್ರತಿಮ ವೀರರಾದ ಕೋಟಿ ಚೆನ್ನಯರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ





0 Comments