ಪಿಯಾರ್ ತುಮ್ಕೂರ್
ಅದೇಕೋ ಹಳೆಯ ಸ್ನೇಹಿತರೆಲ್ಲಾ ಆಕಸ್ಮಿಕವಾಗಿ ಒಮ್ಮೆಗೆ ಸಿಕ್ಕೆವು. ಯೋಜನೆ ಮಾಡಿದ ಹಾಗೆ. ಎಲ್ಲರಲ್ಲೂ ಅವರದೇ ಮಾತು, ಅದರದೇ ನೆನಪು, ಆ ಕ್ಷಣಗಳದ್ದೇ ಮೆಲಕು. ಎಂಟು ವರ್ಷದ ಹಿಂದಿನ ಅಂದರೆ 2007ನೇ ಇಸವಿಯ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನ ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಸಮಯ, ನಾಟಕ, ನಾಟಕ, ನಾಟಕ.
ದಾತಾರರೊಂದಿಗೆ ಇದ್ದ ಕಾಲವದು. ನಾಟಕದ ವಿಚಾರ ಮಂಥನ, ಕೃತಿಗಳ ಅವಲೋಕನ, ವಿಮರ್ಶೆ ಮತ್ತಷ್ಟು, ಮಗದಷ್ಟು, ಮುಗಿಯದಷ್ಟು. ಅವರೊಂದು ಸಂವಾದ; ಲೋಕ ಸಂವಾದ…ಅವರೊಂದು ಕಿಡಿ; ಪ್ರಶಾಂತ ಕಿಡಿ; ಅವರೊಂದು ಭಾವ; ಹೃದಯ ತುಂಬುವ ಭಾವ…ಅವರೊಂದು ಚೇತನ; ಮಹಾ ಚೇತನ.
ಸೌಮ್ಯ ಮುಖ ಭಾವ, ಗಲ್ಲದ ಕುರುಚಲು ಗಡ್ಡ, ಹೊಂಬಣ್ಣದ ಕೂದಲು, ತೀಕ್ಶ್ಣ ಕಂಗಳು, ಸದಾ ಹಸನ್ಮುಖಿ, ಮರಾಠಿ ರಂಗ ಭೂಮಿಯಲ್ಲಿ ಮನೆ ಮಾತಾದ ಮಹಾ ಮಾಂತ್ರಿಕ. ನಾಟಕಕಾರ, ನಟ, ನಿರ್ದೇಶಕ, ರಂಗ ಕರ್ಮಿ ’ಚೇತನ್ ದಾತಾರ”.
ರಂಗ ರಸಿಕರಿಗೆ ಸದಾ ಜೇನನ್ನುಣ್ಣಿಸುತ್ತಿರುವ ರಂಗಶಂಕರವು 2007 ನೇ ಇಸವಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ 9 ದಿನಗಳ ರಂಗ ಹಬ್ಬವನ್ನು ಆಚರಿಸಿತ್ತು. ಭಾರತದ ವಿವಿಧ ರಾಜ್ಯಗಳ ಹೆಸರಾಂತ ನಿರ್ದೇಶಕರನ್ನು ಕನ್ನಡದಲ್ಲಿ ನಾಟಕವನ್ನು ನಿರ್ದೇಶಿಸುವ ಸಲುವಾಗಿ ಕರೆಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಮಹೇಶ್ ಎಲ್ಕುಂಚವಾರ್ ರವರ ಹೋಲಿ ನಾಟಕವೂ ಒಂದು. ಮರಾಠಿ ಭಾಷೆಯ ಹೋಲಿ ನಾಟಕವನ್ನು ಹೇಮಾ ಪಟ್ಟಣಶೆಟ್ಟಿ ಕನ್ನಡ ಭಾಷೆಗೆ ಅನುವಾದಿಸಿದ್ದರು. ಅದರ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತ ಚೇತನ್ ದಾತಾರ್ ಆಗಸ್ಟ್ ತಿಂಗಳಲ್ಲಿಯೇ ಬೆಂಗಳೂರಿಗೆ ಬಂದಿದ್ದರು. ಅವರ ಸರಳ ವ್ಯಕ್ತಿಕ್ತ್ವ, ಹಸನ್ಮುಖ, ಅಪಾರ ಮೇಧಾ ಶಕ್ತಿ ಎಂತವರನ್ನೂ ಸಮ್ಮೋಹಗೊಳಿಸದೆ ಇರಲಾರದು. ಪ್ರದರ್ಶನಕ್ಕೆ ಸಜ್ಜಾಗಿದ್ದ ನಾಟಕ ತಂಡದ ಪ್ರತಿಯೊಬ್ಬರೂ ಕೇಳಿ ತಿಳಿದುಕೊಂಡ, ನೋಡಿ ಅರಿತುಕೊಂಡ, ಬೈಸಿಕೊಂಡು ಅರ್ಥೈಸಿಕೊಂಡ ಸನ್ನಿವೇಶಗಳು, ಸಂದೇಶಗಳು ಹಲವಾರು!
ಕನ್ನಡ ಭಾಷೆಯೇ ಗೊತ್ತಿಲ್ಲದ ಅವರು ಪ್ರತಿಯೊಬ್ಬರ ಹಾವ ಭಾವಗಳಿಂದ ಉಕ್ತ, ಅನುಕ್ತ ಸಂವಹನಗಳನ್ನು ಗ್ರಹಿಸಿ ಬಿಡುತ್ತಿದ್ದರು. ಸದಾ ಸಹನೆಯಿಂದಿರುತ್ತಿದ್ದ ವ್ಯಕ್ತಿ ತನ್ನ ಕೆಲಸದ ವಿಷಯದಲ್ಲಿ ಬಹಳ ಕಠಿಣ. ಅದಕ್ಕಗಿ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದರು. ಅವರೊಡನೆ ಸಂಭಾಷಿಸುತ್ತಿದ್ದರು. ಕೊನೆಗೆ ತಮಗೆ ಬೇಕಾದುದನ್ನು ಜಯಿಸುತ್ತಿದ್ದರು. ನಾನು ಮರಾಠಿ ಭಾಷೆ ಬಲ್ಲವನಾದ್ದರಿಂದ ಅವರೊಡನೆ ಭಾಷಾಂತರ ಪ್ರಕ್ರಿಯೆಯಲ್ಲಿ ಒಡನಾಡುವ ಅವಕಾಶ ಒದಗಿಬಂದಿತ್ತು.
ಕನ್ನಡ ಭಾಷೆಯ ವಿವಿಧ ಸ್ವರಭಾರ, ಕರ್ನಾಟಕದಲ್ಲಿನ ಪಂಗಡಗಳು, ಜಾತಿಗಳು ಅವುಗಳ ಪ್ರಕಾರಗಳು, ಇವೆಲ್ಲವುಗಳ ವಿಷಯವಾಗಿ ಎಲ್ಲರೊಂದಿಗೆ ಸಮಾಲೋಚಿಸುತ್ತಿದ್ದರು. ಇವೆಲ್ಲವೂ ನಾಟಕಕ್ಕೆ ಹಾಗೂ ಪಾತ್ರಗಳಿಗೆ ಅವಶ್ಯವಾದ್ದರಿಂದ ಅವುಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕೆನ್ನುತ್ತಿದ್ದರು. ನನಗೆ ತಿಳಿದಷ್ಟನ್ನು ಹಂಚಿಕೊಳ್ಳಲು ಹೋದ ನಾನು ಅದರ ಹತ್ತರಷ್ಟು ವಿಷಯಗಳನ್ನು ಅವರಿಂದಲೇ ಎರವಲು ಪಡೆಯುತ್ತಿದ್ದೆ. ಯಾವುದಾದರು ವಿಷಯ ತೆಗೆದುಕೊಂಡರೆ ಅದರಲ್ಲಿ ಆಳವಾಗಿ ಹೋಗುತ್ತಿದ್ದರು.
ಹೆಲ ಕಾಯ್ ಮಣ್ತಾತ್? ತ್ಯಲ ಕಾಯ್ ಮಣ್ತಾತ್? – ಇದಕ್ಕೇನನ್ನುತ್ತಾರೆ? ಅದಕ್ಕೇನನ್ನುತ್ತಾರೆ?
ಯೆ ಕಶ್ಯಾಲ್ ತಸ್? ತೇ ಅಸ್ ಕಾ? – ಇದ್ಯಾಕೆ ಹೀಗೆ? ಅದು ಹಾಗಾ?
ಉತ್ತರ ಕನ್ನಡ್ ವಾಲ್ಯೇಚ್ ಕಾಮನ್ ಅಬ್ಯೂಸಿಂಗ್ ಕಾಯ್? ದಕ್ಷಿಣ ಕನ್ನಡ್ ವಾಲ್ಯೇಚ್ ಡ್ರೆಸ್ ಹ್ಯಾಬಿಟ್ಸ್ ಕಸ್? – ಉತ್ತರ ಕನ್ನಡದವರ ಅಬ್ಯೂಸಿಂಗ್ ಗಳು ಏನು? ದಕ್ಷಿಣ ಕನ್ನಡದವರ ಡ್ರೆಸ್ ಹ್ಯಾಬಿಟ್ಸ್ ಹೇಗೆ?
ಹೀಗೆ ಹಲವು ಪ್ರಶ್ನೆಗಳಿಂದ ಸೂಕ್ಷ್ಮವನ್ನು ಅರಿತುಕೊಳ್ಳುತ್ತಿದ್ದರು. ಎಲ್ಲವನ್ನೂ ವಿಷದವಾಗಿ ತಿಳಿಯಲು ಹವಣಿಸುವ ಅವರ ಜಿಙ್ನಾಸೆ ತಾಳ್ಮೆಗೆ ಪ್ರತೀಕವಾದುದು.
ಆದರೆ ಸಂಜೆ ತಾಲೀಮಿಗೆ ಬಂದಾಗ ಅಷ್ಟೆ ಕಠಿಣವಾಗಿರುತ್ತಿದ್ದರು. ಸೀನ್ ಹೀಗೆ ಬರಬೇಕಂದರೆ ಹಾಗೆಯೇ ಬರಬೇಕು. ಎಳ್ಳಷ್ಟು ಕಾಮ್ಪ್ರಮೈಸ್ ಇಲ್ಲ. ಪಣ ತೊಟ್ಟ ವಿಶ್ವಾಮಿತ್ರನಂತೆ ಸಾಧಿಸಿಯೇ ತೋರುತ್ತಿದ್ದರು. ತೂ ಅಪ್ನೆ ಆಪ್ ಕೋ ಬಡಾ ಆಕ್ಟರ್ ಕರ್ಕೆ ಸಮಜ್ ರಹಾಹೆ ಕ್ಯಾ? ಎಂದು ಎಲ್ಲರ ಮುಂದೆ ಹಿಗ್ಗಾ ಮುಗ್ಗಾ ಬೈಯುತ್ತಿದ್ದರು. ಇಂದಿನ ಯೂತ್ ಆರ್ಟಿಸ್ಟ್ ಗಳು ಎಕ್ಸ್ಪ್ರೆಸಿವ್ ಆಕ್ಟಿಂಗ್ ಮೇಲೆ ಬಹಳ ಕೆಲಸ ಮಾಡಬೇಕೆಂದೆನ್ನುತ್ತಿದ್ದರು. ಅವರ ಎಲ್ಲಾ ಮಾತುಗಳ ಅರ್ಥ, ಅವುಗಳ ಪರಿಣಾಮ ಆರ್ಟಿಸ್ಟ್ ಗಳಾದ ನಮಗೆ ಸ್ಟೇಜ್ ಮೇಲೆಯೇ ಅರಿವಾದದ್ದು.
ನಾನು ಡೈರೆಕ್ಷನ್ ಮಾಡೊದು ನಿಮಗಲ್ಲ; ಆಡಿಯನ್ಸ್ ಕಣ್ಣುಗಳಿಗೆ ಎಂದು ಹೇಳುತ್ತಿದ್ದ ಅವರು ಆಡಿಯನ್ಸ್ ಕಂಗಳಿಂದ
ಆಗಸ್ಟ್ ತಿಂಗಳ 3ನೇ ತಾರೀಖಿನ 2008 ನೇ ಇಸವಿಯಂದು ಮರೆಯಾದರು. ಅವರ ರಂಗ ಶಿಷ್ಯರನ್ನು, ಎಲ್ಲ ರಂಗ ಸ್ನೇಹಿತರನ್ನು ದೈಹಿಕವಾಗಿ ಬಿಟ್ಟು ಹೋದರು.
ಇಂದು ಅವರು ನನ್ನ ಸ್ಮೃತಿ ಪಟಲದಲ್ಲಿ ಮಿನುಗುತ್ತಿರುವ ನಕ್ಷತ್ರ. ಇಂದಿಗೂ ಪ್ರತೀ ನಾಟಕದ ಮುನ್ನ ಅವರು ನೆನಪಾಗುತ್ತಾರೆ. ಅವರ ಮಾತುಗಳು ಕಿವಿಯಲ್ಲಿ ಗುಯ್ ಗುಡುತ್ತಿರುತ್ತವೆ. ಅವೇ ನನಗೆ ಸ್ಪೂರ್ತಿ; ಆಶೀರ್ವಾದ.
ಚೇತನ್ ದಾತಾರರು ಹಲವು ನಾಟಕಗಳನ್ನು ಬರೆದಿದ್ದರು. ಅವರು ಬರೆದ ಕೆಲವು ನಾಟಕಗಳಲ್ಲಿ ಅವರು ಅಭಿನಯಿಸಿಯೂ ಇದ್ದರು. ಆದರೆ ಅವರ ನಾಟಕಗಳನ್ನು ಅನ್ಯ ನಿರ್ದೇಶಕರು ನಿರ್ದೇಶಿಸಬೇಕು ಎಂಬುದು ಅವರ ಆಶಯವಾಗಿತ್ತು. ಅದರಿಂದ ನಾಟಕ ರಚನ ಕಾರನ ಇಗೋ ಗೊತ್ತಾಗುತ್ತದೆ ಎನ್ನುತ್ತಿದ್ದರು. ಮರಾಠಿ ರಂಗ ಕೃತಿಯ ಬಗ್ಗೆ ಅದರ ವೈವಿಧ್ಯದ ಬಗ್ಗೆ ಮಾತನಾಡುತ್ತಿದ್ದರು. ಅವರು ಬರೆದ ಮಾಧವ್ ಬಾಗ್ ಅದೇ ರಂಗೋತ್ಸವದ ಅಕ್ಟೋಬರ್ 22 ರಂದು ಪ್ರದರ್ಶನ ಕಂಡಿತ್ತು. ಅದನ್ನು ತಮಿಳಿನ ಖ್ಯಾತ ನಟಿಯಾದ ರೇವತಿ ಮೆನನ್ ಅಭಿನಯಿಸಿದ್ದರು.
ಮರಾಠಿಯ ಪ್ರಖ್ಯಾತ ನಿರ್ದೇಶಕರಾದ ಸತ್ಯ ದೇವ್ ದುಬೆ ಅವರ ಶಿಷ್ಯರಾಗಿದ್ದ ದಾತಾರರು ಮರಾಠಿ ರಂಗಭೂಮಿಯಲ್ಲಿ ಬಹಳ ಪ್ರಯೋಗಗಳನ್ನು ಮಾಡಿದ್ದರು. ಮಹಾರಾಷ್ಟ್ರದಲ್ಲಿ ಆವಿಷ್ಕಾರ್ ಎಂಬ ರಂಗ ತಂಡದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರನ್ನು ಎನ್ ಎಸ್ ಡಿ ನಾಟಕಗಳ ನಿರ್ದೇಶನಕ್ಕೆ ಆಹ್ವಾನಿಸುತ್ತಿದ್ದರು.
ಅವರಿಗೆ ಯುವಕರೆಂದರೆ ಅತೀವ ಆಸಕ್ತಿ. ಯೌವನವು ಏನನ್ನೂ ಹಾಗೂ ಎಲ್ಲವನ್ನೂ ಮಾಡಿ ತೋರಿಸುವ ಶಕ್ತಿ ಹೊಂದಿದೆ ಎನ್ನುತ್ತಿದ್ದರು. ಯುವಕರು ಹೊಸ ನಾಟಕಗಳನ್ನು ಪ್ರಯೋಗಿಸಬೇಕು; ತಮ್ಮನ್ನು ತಾವು ಹೆಚ್ಹಾಗಿ ನಾಟಕಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಆಶಯ ವ್ಯಕ್ತ ಪಡಿಸುತ್ತಿದ್ದರು.
ಅವರ ಆಪ್ತ ಮಿತ್ರರಾದ ರಾಮು ರಾಮನಾಥ್, ಚೇತನ್ ರನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ.
He was on auto-pilot; everything functional, everything with a purpose (ಅವನೊಬ್ಬ ಮಾರ್ಗದರ್ಶಕನಾಗಿದ್ದ. ಎಲ್ಲವೂ ಕಾರ್ಯ ಸಂಬಂಧವಾದದ್ದು; ಎಲ್ಲವೂ ಉದ್ದೇಶಪೂರ್ವವಾದದ್ದು)
ಅವರ ಗೆಳೆಯರಿಗೆ, ಶಿಷ್ಯರಿಗೆ, ಅಭಿಮಾನಿಗಳಿಗೆ ಹಾಗೂ ಅವರ ನೆಚ್ಚಿನ ರಂಗಭೂಮಿಗೆ ವಿದಾಯ ಹೇಳಿ ಕೇವಲ ೪೪ ವಯಸ್ಸಿನ ಚೇತನ್ ದಾತಾರ್ ಆಗಸ್ಟ್ 3, 2008 ಬೆಳಗಿನ ಸಮಯ 7.22 ಕ್ಕೆ ಇಹಲೋಕ ತ್ಯಜಿಸಿದರು. ಇಂದಿಗೆ ಅವರಿಲ್ಲ; ಆದರೆ ಅವರ ವ್ಯಕ್ತಿತ್ವ, ಅವರ ಮಾರ್ಗದರ್ಶನದ ನುಡಿಗಳು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಆ ನೆನಪುಗಳು ಸೈಡ್ ವಿಂಗ್ ನಿಂದ ಸೆಂಟರ್ ಸ್ಟೇಜಿಗೆ ಬಂದು ಕಾಡುತ್ತಿರುತ್ತವೆ.
ಕನ್ನಡ ಭಾಷೆಯ ಬಗ್ಗೆ ಪ್ರತ್ಯೇಕ ಕಾಳಜಿ ಹೊಂದಿದ್ದ The true-blue tehatre person ಇಂದು ಭೌತಿಕವಾಗಿ ನಮ್ಮೊಡನಿಲ್ಲ. ಆದರೆ ಅವರ ರಂಗ ಕಾಳಜಿಯೇ ನಮ್ಮೆಲ್ಲ ಸ್ನೇಹಿತರಿಗೆ ಆದರ್ಶ, ಮಾರ್ಗದರ್ಶನ.







0 Comments