ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಲಿತ ನಾಯಕರು: ಚರ್ಚೆ ಆರಂಭ

‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು.

‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ.

ರಾಮಯ್ಯ ಅವರ ನೋಟವನ್ನು ಈಗ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗಿಟ್ಟಿದ್ದೇವೆ. ನೇರ ನೋಟಕ್ಕೆ ಹೆಸರಾದ ನಾ ದಿವಾಕರ್ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ-

ಸಿದ್ದಲಿಂಗಯ್ಯನವರು ಒಂದೆಡೆ ತಮ್ಮಲ್ಲಿ ಎಪ್ತತ್ತರ ದಶಕದ ಆಕ್ರೋಶ ಉಳಿದಿಲ್ಲ ಎಂಬ ಹತಾಶ ಭಾವನೆ ವ್ಯಕ್ತಪಡಿಸುತ್ತಾರೆ. ರಾಮಯ್ಯನವರು ದಲಿತ ನಾಯಕರನ್ನು ಡಕಾಯಿತರಿಗೆ ಹೋಲಿಸುತ್ತಾ ದಲಿತ ಚಳುವಳಿಯ ಅವಸಾನವನ್ನು ಪರೋಕ್ಷವಾಗಿ ಬಿಂಬಿಸುತ್ತಾರೆ.ಈ ಎರಡೂ ಅಭಿಪ್ರಾಯಗಳನ್ನು ನೋಡಿದರೇನೇ ದಲಿತ ಚಳುವಳಿಯ ಸ್ಥಿತಿಗತಿ ತಿಳಿಯುತ್ತದೆ.

ಆದರೆ ಸಮಸ್ಯೆ ಕೇವಲ ಸಮಕಾಲೀನ ಸನ್ನಿವೇಶದ್ದಲ್ಲ ಎಂಬ ಸಂಗತಿಯನ್ನು ಗಮನಿಸಬೇಕಿದೆ. ಕ್ರಾಂತಿಯ ಕಿಡಿಗಳನ್ನು ಹೊತ್ತಿಸುತ್ತಿದ್ದ ದಲಿತ ಸಾಹಿತಿಗಳು, ನಾಯಕರು,ಕಾರ್ಯಕರ್ತರು ಇಂದು ಈ ರೀತಿಯ ಹತಾಶ ಭಾವನೆ ವ್ಯಕ್ತಪಡಿಸುವುದರ ಹಿಂದೆ ಚಳುವಳಿಯ ಮೂಲಭೂತ ನ್ಯೂನತೆ ಸಹ ಅಡಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ತಮ್ಮ ಪ್ರಾರಂಭಿಕ ದಿನಗಳಲ್ಲಿ ತಾವು ಗ್ರಹಿಸಲಾಗದ ಕೆಲವು ಸತ್ಯಗಳನ್ನು ಈ ನಾಯಕರುಗಳು ಇಂದು ಗ್ರಹಿಸುತ್ತಿರುವುದೇ ಈ ಹತಾಶೆಗೆ ಕಾರಣವೆಂದು ಹೇಳಬೇಕಿಲ್ಲ.

ಇಂದು ದಲಿತ ಚಳುವಳಿ ಕವಲು ಹಾದಿಯಲ್ಲಿದೆ ಆದರೆ ಸತ್ತಿದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಸಮಸ್ಯೆಗಳಿರುವವರೆಗೂ ಚಳುವಳಿಯ ಪ್ರಸ್ತುತತೆಯೂ ಇದ್ದೇ ಇರುತ್ತದೆ.ದಲಿತ ನಾಯಕರುಗಳು ಡಕಾಯಿತರುಗಳಾಗಿ ಕಾಣುವುದಾದರೆ ಅದಕ್ಕೆ ಕಾರಣ ದಲಿತ ಚಳುವಳಿ ನಗರಕೇಂದ್ರಿತವಾಗಿರುವುದು ಮತ್ತು ದಲಿತ ಸಮುದಾಯಗಳ ಮೂಲಭೂತ ಪ್ರಶ್ನೆಯಾದ ಭೂಮಿ ಪ್ರಶ್ನೆಯನ್ನು ಕೈಗೆತ್ತಿಕೊಳ್ಳದಿರುವುದು. ನವ ಉದಾರವಾದ ಮತ್ತು ಜಾಗತೀಕರಣ ದಲಿತ ಸಮುದಾಯಗಳ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ಸೂಕ್ತವಾಗಿ ಗ್ರಹಿಸುವುದರಲ್ಲೇ ದಲಿತ ಚಳುವಳಿ ಎಡವಿರುವುದು ಪ್ರಸ್ತುತ ಸಮಸ್ಯೆಗಳಿಗೆ ಮತ್ತು ಹತಾಶ ಮನೋಭಾವಕ್ಕೆ ಕಾರಣ.

ರಾಮಯ್ಯನವರ ಆಳವಾದ ಅಧ್ಯಯನ ಮತ್ತು ಅಪಾರ ಅನುಭವಗಳು ಅವರ ಅಭಿಪ್ರಾಯದ ಹಿಂದೆ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಪ್ರಸಕ್ತ ದಲಿತ ಯುವ ಪೀಳಿಗೆಗೆ ಈ ಅನುಭವದ ಮನನ ಮಾಡಬೇಕಿದೆ. ಈ ಕೆಲಸ ರಾಮಯ್ಯ,ಸಿದ್ಧಲಿಂಗಯ್ಯ ಮುಂತಾದವರಿಂದ ಸಾಧ್ಯವಾಗಬಹುದು. ಪ್ರಯತ್ನಿಸಿ ನೋಡಿ. ಇಡೀ ಚಳುವಳಿಯ ಪರಾಮರ್ಶೆ ಮತ್ತು ಪುನರ್ ವಿಮರ್ಶೆ ಅತ್ಯಗತ್ಯವಾಗಿರುವ ಸಂದರ್ಭದಲ್ಲಿ ಹತಾಶೆಯ ನುಡಿಗಳಿಗಿಂತಲೂ ಭರವಸೆಯ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತದೆ. ಬಾಯಿ ಮುಚ್ಚಿಸುವವರು ಎಲ್ಲೆಡೆ ಇದ್ದೇ ಇರುತ್ತಾರೆ. ಆದರೆ ಬಾಯಿ ತೆರೆದರೆ ಕೇಳಿಸಿಕೊಳ್ಳುವವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರಲ್ಲವೇ ?

– ನಾ ದಿವಾಕರ

 

‍ಲೇಖಕರು G

11 July, 2011

3 Comments

  1. Vithal Dalawai

    Khandita sir

  2. k.m.byrappa

    ke.ramayya avr abhipraya sariyagide. aadre, ondaagi horadida dalitru indu tamm bouddhika ahankaradinda odedu hogiddare. ivaru avarannu bytare. avru ivaranu bytare. ondu tayiya makklu heegadare munde nammanta yuvakaru yara hinde hoguvudu…che. i ahankarigla matu tumba besara trisutte..

  3. ಹುಲಿಕುಂಟೆ ಮೂರ್ತಿ

    ದಿವಾಕರ ಅವರ ಗ್ರಹಿಕೆಯಲ್ಲಿ ನೇರನೋಟವಿದೆ ಎಂದು ಸಂಪಾದಕರು ಹೇಳಿದರೆ, ದಯಮಾಡಿ ಆ ಪದದ ಅರ್ಥವನ್ನು ಬದಲಾಯಿಸಬೇಕೇನೋ..? ಶ್ರೀಯುತರು ಸಿದ್ಧಲಿಂಗಯ್ಯನವರ ಮಾತುಗಳು ಹಾಗೂ ರಾಮಯ್ಯನವರ ಮಾತುಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುತ್ತಿರುವುದೇ ಅವರ ನೋಟದ ಬಗ್ಗೆ ಅನುಮಾನ ಹುಟ್ಟಿಸುತ್ತದೆ. ದಲಿತ ಚಳವಳಿ ತನ್ನ ತೀವ್ರತೆಯನ್ನು ಕಳೆದುಕೊಂಡಂದಿನಿಂದ ಇಂದಿನವರೆಗೂ ರಾಮಯ್ಯರನ್ನು ಹತ್ತಿರದಿಂದ ಕಾಣಲು ಸಾಧ್ಯವಾಗದವರು ಮಾತ್ರ ಈ ರೀತಿ ಮಾತನಾಡಲು ಸಾಧ್ಯ. ಸಿದ್ಧಲಿಂಗಯ್ಯನವರು ತಮ್ಮಲ್ಲಿ 70ರ ದಶಕದ ಆಕ್ರೋಶ ಉಳಿದಿಲ್ಲ ಎಂದು ಹೇಳಿದ ಮಾತ್ರಕ್ಕೇ ಅದು ಹತಾಶೆ ಹೇಗಾಗುತ್ತದೆ..? ಅಂದರೆ, ಸಿದ್ಧಲಿಂಗಯ್ಯನವರು ಎಪ್ಪತ್ತರ ದಶಕದಲ್ಲಿ ರಚಿಸಿದ ಸಾಹಿತ್ಯವನ್ನು ಕನ್ನಡ ಜಗತ್ತು ಕೇವಲ ಆಕ್ರೋಶದಂತೆಯೇ ನೋಡಿ, ಅವರು ಬರೆಯುವುದನ್ನು ನಿಲ್ಲಿಸಿದಾಗ ಸುಮ್ಮನಾಯಿತೆ..? ಹಾಗೇನಾದರೂ ಆಗಿಬಿಟ್ಟರೆ ಕನ್ನಡ ಸಾಹಿತ್ಯಕ್ಕೆ ಬೆಲೆ ಇರುತ್ತದೆಯೇ..? ಈಗ ರಾಮಯ್ಯನವರು ಆಡುತ್ತಿರುವ ಮಾತುಗಳು ಕೇವಲ ಹೋಲಿಕೆ ಮಟ್ಟದಲ್ಲಿವೆಯೇ..? ‘ಈ ಎರಡೂ ಅಭಿಪ್ರಾಯಗಳನ್ನು’ ನೋಡಿಯೇ ದಲಿತ ಚಳವಳಿಯ ಸ್ಥಿತಿಗತಿಯನ್ನು ತಿಳಿಯಲು ಯತ್ನಿಸುವುದನ್ನು ಯಾವ ನೋಟದಿಂದ ನೋಡಬೇಕು..? ದಲಿತ ಚಳವಳಿಯ ಮೂಲಭೂತ ನ್ಯೂನತೆಯನ್ನು ಶೋಧಿಸುವ ಶಕ್ತಿಯಿರುವವರಿಗೆ ಸಮಾಜಮುಖಿ ಜನಾಂದೋಲನವೊಂದು ಕವಲುದಾರಿಯಲ್ಲಿದ್ದಾಗ ಅದನ್ನು ಸರಿದಾರಿಗೆ ತರುವ ದರ್ದು ಇರುವುದಿಲ್ಲವೇ..? ಇಷ್ಟಕ್ಕೂ ದಲಿತ ಚಳವಳಿ ಬಯಸಿದ್ದು ಇಡೀ ಭಾರತೀಯ ಸಮಾಜದ ಒಳಿತನ್ನಲ್ಲವೇ..? ಅದೇನು ಸರ್ಕಾರ ತಮ್ಮ ಜನಕ್ಕೆ ‘ಡಿ’ ದರ್ಜೆ ನೌಕರಿ ಕೊಡಬೇಕೆನ್ನುವ ಮಟ್ಟದ ಹೋರಾಟವೇ…? ‘ನವ ಉದಾರವಾದ ಮತ್ತು ಜಾಗತೀಕರಣ ದಲಿತ ಸಮುದಾಯಗಳ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ಸೂಕ್ತವಾಗಿ ಗ್ರಹಿಸುವುದರಲ್ಲೇ ದಲಿತ ಚಳುವಳಿ ಎಡವಿರುವುದು ಪ್ರಸ್ತುತ ಸಮಸ್ಯೆಗಳಿಗೆ ಮತ್ತು ಹತಾಶ ಮನೋಭಾವಕ್ಕೆ ಕಾರಣ..’ ಎಂಬ ದಿವಾಕರರ ಮಾತು ನಿಜವಾದರೂ ಇದನ್ನು ರಾಮಯ್ಯ ಹಿಂದಿನಿಂದ ಹೇಳುತ್ತಲೇ ಬಂದಿದ್ದಾರೆ. ರಾಮಯ್ಯನವರ ಅಧ್ಯಯನಶೀಲತೆ ಹಾಗೂ ಅನುಭವಗಳನ್ನು ಊರ ಗೌಡ ಕೆಲಸದಾಳಿನ ಕುಶಲತೆ ಮೆಚ್ಚಿ ಮಾತನಾಡುವ ರೇಂಜಿನಲ್ಲಿ ಮಾತನಾಡಿಬಿಟ್ಟರೆ ಏನು ಸಾಧಿಸಿದಂತೆ ಆಗುವುದಿಲ್ಲ. ರಾಮಯ್ಯನಂಥವರ ಅನುಭವದ ಬೆಳಕಿನಲ್ಲಿ ಎದೆಗಳನ್ನು ಬೆಳಗಿಸಿಕೊಳ್ಳುತ್ತಿರುವ ನೂರಾರು ಯುವಜನರಿದ್ದಾರೆ ಎಂಬುದನ್ನು ಈ ಮೂಲಕ ದಿವಾಕರರಿಗೆ ತಿಳಿಸಬಯಸುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading