ಎಂ.ಬಿ.ಮುಳ್ಳಯ್ಯನವರು ರೈತ ಚಳುವಳಿಯ ಕಾಲದಿಂದಲೂ ನಮ್ಮೊಡನಿರುವ ಮಾವಿನಹಳ್ಳಿಯ ಅತಿ ಸಣ್ಣ ರೈತ. ಇವರು-ರೈತ ಚಳುವಳಿಯಲ್ಲಿ ಗಾಢವಾಗಿ ತೊಡಗಿಕೊಂಡವರಲ್ಲದೆ. ಅನೇಕ ಹೋರಾಟಗಳಲ್ಲಿ ನಮಗೆ ನಾಯಕತ್ವ ನೀಡಿದವರು. ಅದರೊಂದಿಗೆ ಅತ್ಯಂತ ನ್ಯಾಯ ನಿಷ್ಟುರಿಯಾಗಿರುವರು. ಯಾವುದೇ ಜಗಳ ತೀರ್ಮಾನಗಳಿರಲಿ-ಆಸ್ತಿ ವಿವಾದಗಳಿರಲಿ-ಗಂಡ ಹೆಂಡತಿ ಜಗಳವಿರಲಿ ಅತ್ಯಂತ ಪ್ರಗತಿಪರ ಚಿಂತನೆಯಿಂದ ಯಾವುದೇ ಮೂಢನಂಬಿಕೆಗಳ ಬಲ ಪಡೆಯದೆ-ಸಮಸ್ಯೆಗಳನ್ನು ಬಗೆಹರಿಸಬಲ್ಲರು. ಇವರು ಯಾವುದೇ ತೀರ್ಮಾನಕ್ಕೆ ದೇವರು-ಹರಕೆಗಳಿಗಿಂತ ಆತ್ಮಸಾಕ್ಷಿಗೇ ಒತ್ತು ನೀಡಿದವರು. ಈಗಲೂ ಕೂಡಾ ನಮ್ಮ ಸುತ್ತಲಿನ ಊರುಗಳಲ್ಲಿ ಯಾವುದೇ ಸಮಸ್ಯೆ ಬಂದಾಗ ಈ ಸಮಸ್ಯೆಯ ವಿಚಾರಕ್ಕೆ ಮುಳ್ಳಯ್ಯಣ್ಣ ಏನು ಹೇಳ್ತಾರೆ ಎಂದು ತಿಳಿಯುವ ತವಕ ಎಲ್ಲರಿಗೂ ಇದ್ದೇ ಇರುತ್ತದೆ. ಇದುವರೆಗೂ ಒಂದೇ ಒಂದು ಚುನಾವಣೆಗೂ ಸ್ಪರ್ಧಿಸದೆ ಎಲ್ಲ ಚುನಾವಣೆಗಳಲ್ಲಿ ಆಸಕ್ತಿ ವಹಿಸಿದವರು. ಮುಳ್ಳಯ್ಯ ಇಂದಿಗೂ ಅತಿ ಸಣ್ಣ ರೈತರಾಗಿಯೇ ಇದ್ದಾರೆ.
ನಮ್ಮೂರಿನಲ್ಲಿ ತೇಜಸ್ವಿ ನೆನಪಿನ ನಾಟಕೋತ್ಸವ ನಡೆದಾಗ ಕವಿಯಲ್ಲದ ಕವಿ ಮುಳ್ಳಯ್ಯ ರಚಿಸಿ ವಾಚಿಸಿದ ಕವನ ಇಲ್ಲಿದೆ.
(ಮುಳ್ಳಯ್ಯ ಕವನ ಓದುತ್ತಿರುವ ಚಿತ್ರ )
ತೇಜಸ್ವಿ ಓ… ಪೂರ್ಣಚಂದ್ರ ತೇಜಸ್ವಿ
ಸ್ವೀಕರಿಸು ಈ ನಮ್ಮ ಪತ್ರ
ಓ.. ಕನ್ನಡ ಕವಿಕುಲಪುತ್ರ
ನಿನ್ನ ಅಬಚೂರಿನ ಪೋಸ್ಟಾಫಿಸಿನಿಂದಲೇ
ರವಾನಿಸುತಿಹೆವು
ಕೇವಲ ಅಗಲಿಕೆಯ ಬಗಲಲ್ಲಿ ಬೊಗಳೆಯಲ್ಲ
ನಿಜ ನುಡಿನಮನ ಸಲ್ಲಿಸುತಿಹೆವು
ಸ್ವೀಕರಿಸು ಈ ನಮ್ಮ ಪತ್ರ
ಓ…ಕನ್ನಡ ಕವಿಕುಲ ಪುತ್ರ
ಚಿತ್ರರಂಗದಲಿ ಚಾರಿತ್ರ್ಯ ಮೆರೆದು ರಾಷ್ಟ್ರ ಮನ್ನಣೆ
ಪಡೆದ ತಬರ
ಚಿತ್ರವಿಚಿತ್ರ ಜೀವ ವಿಸ್ಮಯಗಳ ಬೆನ್ನಟ್ಟಿ
ಬೇಟೆಯಾಡಿದ ಶಬರ
ಜೀವವಿಕಾಸ ವೈಜ್ಞಾನಿಕ ಅನ್ವೇಷಣೆಯಲ್ಲಿ ಹಾರುವ
ಓತಿಯ ಹಿಡಿಯ ಹೊರಟ ಕರವಾಲೋ..
ಜೀವ ತುಂಬಿದ ಪಾತ್ರಪೋಷಣೆಯ ಸಜೀವ
ಬರಹದ ಹಾಸ್ಯಪ್ರPಜ್ಞೆಯ ಬೀರಬಲ್ಲೊ..
ಹಕ್ಕಿ ಸಂಕುಲದ ಒಳಹೊಕ್ಕು ಒಂದೊಂದನೇ ಹೆಕ್ಕಿ ಹೆಕ್ಕಿ
ಪರಿಚಯಿಸಿದ ಪರಿಸರ ಪ್ರಜ್ಞಾಗಾರ
ಹಕ್ಕ-ಬುಕ್ಕರಂತೆ ರಾಜ್ಯ ಕಟ್ಟದೆ, ತನ್ನದೇಎಲ್ಲೆಯ
ಸಾರಸ್ವತ ಸಾಮ್ರಾಜ್ಯದೊಳು ಸಾರ್ವಬೌಮತ್ವ
ಪ್ರದರ್ಶಿಸಿದ ಪಾಳೇಗಾರ
ಸ್ವೀಕರಿಸು ಈ ನಮ್ಮ ಪತ್ರ
ಓ.. ಕನ್ನಡ ಕವಿಕುಲಪುತ್ರ
ನಿನ್ನ ರೈತ ಪರನಿಲುವು, ಸಾಮಾಜಿಕ ಕಳಕಳಿ,
ಕುರುಡು ಸಂಪ್ರದಾಯ ನಿರಾಕರಣೆ.. ಎಲ್ಲವೂ ವಿಶಿಷ್ಟ
ಆನೆ ನಡೆದದ್ದೇ ದಾರಿ, ಯಾರ ಹಂಗೂ ಇಲ್ಲ, ಯಾರ
ಅನುಕರಣೆಯೂ ಇಲ್ಲ, ನೀನು ದೂರ್ವಾಸನಲ್ಲ ವಸಿಷ್ಟ
ಕೂಸು ಬಲಿತೊಡನೆ ಬೆಂಗಳೂರಿನತ್ತ ಮುಖಮಾಡುವ
ಹಿಂಡುಗಳೊಳಗೆ ಬಂಡುಕೋರನಂತೆ ಮುಡಿಗೆರೆಗೇ ಮುಡಿಪಾಗಿ
ನಾಡುನುಡಿಯ ಸೊಗಡ ಮುಡಿಗೇರಿಸಿಕೊಂಡ ಮೋಡಿಗಾರ
ಪಂಚತಾರಾ ಹೋಟೆಲ್‌ಗಳು ಕೈಬೀಸಿ ಕರೆಯುತ್ತಿದ್ದರೂ
ತಡಿಕೆ ಹೋಟೆಲಿನ ಅಡಿಕೆ ಹಾಳೆಯಲಿ ಬಿರಿಯಾನಿ ಬಯಸಿದ
ಮಡಿಕೆ ಪ್ಯಾಂಟಿನ ಫ್ಯಾಷನ್ ಗಡ್ಡದ ಮೋಜುಗಾರ
ಸ್ವೀಕರಿಸು ಈ ನಮ್ಮ ಪತ್ರ
ಓ.. ಕನ್ನಡ ಕವಿಕುಲಪುತ್ರ
ನೀನು ಗಾಳ ಹಾಕುತ್ತಿದ್ದುದು ಮೀನಿಗಾಗಿ ನೀರಿನಾಳಕ್ಕೋ
ಅಲ್ಲ, ಯಾವುದೋ ಹೊಸ ಅಧ್ಯಯನದ ಮೂಲ
ಬೇರಿನಾಳಕ್ಕೋ
ನಮಗಿನ್ನೂ ನಿಗೂಡ ನಿನ್ನ ಈ ಹವ್ಯಾಸ
ಆತುರಾತುರವಾಗಿ ನಿನ್ನ ಎರಡುಗಾಲಿಯ ಗಾಡಿಯಿಂದಿಳಿದು
ಗೂಡುಬಿಟ್ಟು ಓಡಿಹೋದೆ
ಬರಸೆಳೆದರೇ ಆ ನಿನ್ನ ಗೆಳೆಯರು,
ಲಂಕೇಶ, ರಾಮದಾಸ,
ಇದು ವಿಪರ್ಯಾಸ, ಏನಿತ್ತು ಅವರಿಗೆ ತುರ್ತು ಕೆಲಸ
ನಿನ್ನೀ ಅಗತ್ಯ ಇನ್ನೂ ಈ ನಾಡಿಗಿತ್ತು
ನೀನು ಜೀವ ಜಗದ ಸ್ವತ್ತು
ಯಾರು ವಹಿಸುವರು ಆ..ನಿನ್ನ ಪಾತ್ರ
ಓ ಪೂರ್ಣ ಚಂದ್ರ ತೇಜಸ್ವಿ
ನೀನು ಸಾಹಿತ್ಯ ಕಲಾ ತಪಸ್ವಿ…
–ಎಂ.ಬಿ. ಮುಳ್ಳಯ್ಯ, ಮಾವಿನಹಳ್ಳಿ
ಸಕಲೇಶಪುರ ತಾಲ್ಲೂಕು






ತೇಜಸ್ವಿಯವರ ಬದುಕು ಮತ್ತು ಬರಹ – ಎರಡನ್ನು ಹೆಣೆದು ರಚಿಸಿರುವ ಕವನ ತುಂಬಾ ಚೆನ್ನಾಗಿದೆ . ಶ್ರೀ ಮುಳ್ಳಯ್ಯನವರ ಕವಿಮನದ ಮಿಡಿತ , ಓದುಗರ ಮನವನ್ನು ಮತ್ತೆ ಮಿಡಿಸುವಂತಿದೆ .
Very Nice
ಕವನ ತುಂಬ ಚೆನ್ನಾಗಿದೆ…
ಮುಳ್ಳಯ್ಯನವರಿಗೆ ಅಭಿಬಂದನೆಗಳು. ತೇಜಸ್ವಿ ಇಂತಹ ಮುಗ್ಧ ಮನಸುಗಳಲ್ಲಿ ಚಿರಾಯುವಾಗಿದ್ದಾರೆ! ತುಂಬಾ ಖುಷಿಯಾಯಿತು. ಒಂದು ಸಣ್ಣ ತಿದ್ದುಪಡಿ: ತೇಜಸ್ವಿ ಮರಣಹೊಂದಿದ ನಂತರ ರಾಮದಾಸ್ ಮರಣಹೊಂದಿದ್ದು, ಅಲ್ಲವೇ? ಅಲ್ಲಿಗೆ ರಾಮದಾಸರ ಬದಲು ಸುಂದರೇಶ ಅಥವಾ ನಂಜುಂಡಸ್ವಾಮಿ ಅವರ ಹೆಸರು ಸೇರಿಸಬಹುದೇನೋ!