ಕೆ ಪುಟ್ಟಸ್ವಾಮಿ
ಚಿತ್ರ – ಕೃಪಾಕರ ಸೇನಾನಿ
ನಾವು ಅಂದರೆ ಕೃಪಾಕರ್ ಸೇನಾನಿ ಮತ್ತು ನಾನು, ಪೂರ್ಣಚಂದ್ರ ತೇಜಸ್ವಿ ಅವರನ್ನು ನಿರುತ್ತರದಲ್ಲಿ ಭೇಟಿಯಾಗಿ ನನ್ನ ಅನುವಾದ ಕೃತಿ ಜೀವ ಸಂಕುಲಗಳ ಉಗಮ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಾಗ “ಅಯ್ಯೋ ಮಾರಾಯ್ರ ನಾನು ಬೆಂಗ್ಳೂರಿಗೆ ಬರಲು ಸಾಧ್ಯವೇ ಇಲ್ಲ” ಅಂದರು. “ಇಲ್ಲಿ, ಇಲ್ಲೇ ಚಿಕ್ಕಮಗಳೂರಲ್ಲಿ ಮಾಡೋದು” ಎಂದಾಗ ಒಪ್ಪಿದರು.
ಬಿಡುಗಡೆಯ ದಿನ ಎಲ್ಲರೂ ತೇಜಸ್ವಿಯವರ ಬರುವಿಕೆಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ನನ್ನ ಪುಸ್ತಕದ ಬಗೆಗಿನ ಕುತೂಹಲಕ್ಕಿಂತ ತೇಜಸ್ವಿಯವರೇ ಅಂದಿನ ಮುಖ್ಯ ಆಕರ್ಷಣೆ. ಸಾರ್ವಜನಿಕ ಸಮಾರಂಭಗಳಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ತೇಜಸ್ವಿಯವರ ಬಗ್ಗೆ ಸಹಜವಾಗಿ ಕುತೂಹಲವಿತ್ತು. ನನ್ನ ಸ್ನೇಹಿತರು ಬೆಂಗಳೂರು, ಕೋಲಾರ, ಮಂಡ್ಯ, ಹಾಸನ ಮುಂತಾದ ಕಡೆಯಿಂದ ಬಂದಿದ್ದರು. ನಮ್ಮ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ಅ.ರಾ.ಚಂದ್ರಹಾಸ ಗುಪ್ತಾ ಅವರು ಅಧ್ಯಕ್ಷತೆ ವಹಿಸಲು ಬಂದಿದ್ದರು. ವಾರ್ತಾ ಇಲಾಖೆಯ ಗೆಳೆಯ ಜಗನ್ನಾಥ ಪ್ರಕಾಶ್ ಪತ್ರಕರ್ತ ಗೆಳೆಯ ಮನೋಹರ ಯಡವಟ್ಟಿ ಅವರೊಡನೆ ಹಿಂದಿನ ದಿನವೇ ಕೂಡಿಕೊಂಡಿದ್ದರು.
ನಿಗದಿತ ಸಮಯಕ್ಕೆ ಸರಿಯಾಗಿ ತೇಜಸ್ವಿಯವರು ತಮ್ಮ ಗೆಳೆಯ ರಘು ಅವರೊಡನೆ ಕಾರಿನಲ್ಲಿ ಬಂದಿಳಿದರು.

ಚಿಕ್ಕಮಗಳೂರಿನ ರಂಗಣ್ಣನವರ ಛತ್ರದಲ್ಲಿ ದಿ. 8.9.1991ರಂದು ಅಚ್ಚುಕಟ್ಟಾಗಿ ನಡೆದ ಸಮಾರಂಭದಲ್ಲಿ ತೇಜಸ್ವಿಯವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಭಾಷೆಯ ಬೆಳವಣಿಗೆಗೆ, ತಿಳಿವಳಿಕೆಯ ಹಂಚಿಕೆಗೆ ಅನುವಾದಗಳ ಮಹತ್ವ ಕುರಿತು ಮಾತನಾಡಿದರು. ಆದರೆ ಕನ್ನಡ ಈ ಕ್ಷೇತ್ರದಲ್ಲಿ ಹಿಂದುಳಿದಿರುವ ಬಗ್ಗೆ ಹೇಳುತ್ತಾ ಜಗತ್ತಿನ ಚಿಂತನಾ ಕ್ರಮ ಹೊರಳುದಾರಿ ಹಿಡಿಯುವಂತೆ ಮಾಡಿದ ಡಾರ್ವಿನ್ ಕೃತಿ ಪ್ರಕಟವಾದ ಒಂದೂವರೆ ಶತಕದ ನಂತರ ಕನ್ನಡಕ್ಕೆ ಬರುತ್ತಿರುವ ಮಂದಗತಿಯನ್ನು ಪ್ರಸ್ತಾಪಿಸಿ “ಕನ್ನಡದಲ್ಲಿ ಅನುವಾದದ ಕೆಲಸ ಕನ್ನಡ ಆರ್ಟ್ ಫಿಲಂಗಳಿಗಿಂತಲೂ ಸ್ಲೋ ಕಣ್ರೀ” ಎಂದರು. ಮಧ್ಯ ಮಧ್ಯ ತಮ್ಮ ಮೊನಚಾದ ವ್ಯಂಗ್ಯದಿಂದ ಗ್ರಂಥಾಲಯಗಳ ಅವ್ಯವಸ್ಥೆ ಯನ್ನು ಚುಚ್ಚಿದರು. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ತೇಜಸ್ವಿಯವರು ಹರಿಯಬಿಟ್ಟ ಚಿಂತನಾ ಲಹರಿಯಲ್ಲಿ ಪ್ರೇಕ್ಷಕರು ಭಾವಪರವಶರಾದದ್ದು ಅನುಭವಕ್ಕೆ ಬಂತು.






0 Comments