ತೇಜಸ್ವಿ ಕಥನ-೪
2008 ರಲ್ಲಿ ಸಕಲೇಶಪುರದ ರೋಟರಿ ಸಂಸ್ಥೆಯ ಆಶ್ರಯದಲ್ಲಿ ‘ತೇಜಸ್ವಿ ನೆನಪು’ ಕಾರ್ಯಕ್ರಮವಿತ್ತು. ತೇಜಸ್ವಿಯವರ ಬಗ್ಗೆ ಮಾತನಾಡಲು ವೇದಿಕೆಯಲ್ಲಿ ಪ್ರದೀಪ್ ಕೆಂಜಿಗೆ ಮತ್ತು ನಾನು ಇದ್ದೆವು. ಮೊದಲು ಮಾತನಾಡಿದ ನಾನು ಈ ಮೇಲಿನ ಘಟನೆಯನ್ನು ನೆನಪಿಸಿಕೊಂಡು ತೇಜಸ್ವಿಯವರ ಬಗ್ಗೆ ಮಾತನಾಡಿದೆ. ನಂತರ ಮಾತನಾಡುವಾಗ ಪ್ರದೀಪ್ ಅಂದು ನಡೆದ ಸಂಗತಿಯನ್ನು ಒಂದು ತಿದ್ದುಪಡಿಯೊಂದಿಗೆ ವಿವರಿಸಿದರು. ಆ ದಿನ ನಾವೆಂದುಕೊಂಡಂತೆ ತೇಜಸ್ವಿಯವರು ಸ್ವೀಕರಿಸಬೇಕಾದ್ದು ರಾಜ್ಯೋತ್ಸವ ಪ್ರಶಸ್ತಿ ಅಲ್ಲ. ಅಂದಿನ ಘಟನೆಯನ್ನು ಪ್ರದೀಪ್ ಅವರ ಮಾತಿನಲ್ಲಿ ಕೇಳಿ.
೧/೧೧/೧೯೮೮ ರಂದು ದೆಹಲಿಗೆ ಹೋಗದೆ ನಮ್ಮಲ್ಲಿ ಬಂದು ಮಾಡಿದ ಭಾಷಣದ ಫೋಟೋ
ಅಂದು ಸಂಜೆ ನಾಲ್ಕರವೇಳೆಗೆ ತೇಜಸ್ವಿಯವರು ‘ಬಾ ಇಲ್ಲೇ ಬೆಳ್ಳೇಕೆರೆಗೆ ಹೋಗಿಬರೋಣ, ಒಂದು ರಂಗ ತರಬೇತಿ ಶಿಬಿರ ಮಾಡ್ತಾ ಇದ್ದಾರೆ’ ಎಂದರು. ಇಬ್ಬರೂ ಅವರ ಸ್ಕೂಟರಿನಲ್ಲೇ ಹೊರಟೆವು. ದಾರಿಯಲ್ಲಿ ಚಿಟ್ಟನಹಳ್ಳದ (ಹಾನುಬಾಳಿನಿಂದೀಚೆ ಅಗಲಟ್ಟಿ ಗ್ರಾಮದಲ್ಲಿ ಚಿಟ್ಟನ ಹಳ್ಳ ಹರಿಯುತ್ತದೆ) ಹತ್ತಿರ ಬರುವಾಗ ಸ್ಕೂಟರ್ ನಿಲ್ಲಿಸಿ ‘ಇಲ್ಲಿ ಎಂಥ ಮೀನಿದೆ ನೋಡೋಣ ಬಾ’ ಎಂದು ಹಳ್ಳದ ಹತ್ತಿರ ಹೋದರು. ನಾನು ಅವರ ಹಿಂದೆಯೇ ಹೋದೆ. ಹಳ್ಳದ ಬಳಿ ಪ್ಯಾಂಟಿನ ಜೇಬಿಗೆ ಕೈ ಹಾಕಿ ಏನನ್ನೋ ತೆಗೆದರು. ಅಷ್ಟರಲ್ಲಿ ಒಂದು ಚೀಟಿ ಅವರ ಜೇಬಿನಿಂದ ಜಾರಿ ಕೆಳಗೆ ಬಿತ್ತು. ಹೆಕ್ಕಿ ಕೊಡೋಣವೆಂದು ತೆಗೆದು ನೋಡಿದೆ. ಅದೊಂದು ವಿಮಾನಯಾನದ ಟಿಕೆಟ್ ಅದೂ ದೆಹಲಿಗೆ. ‘ನೋಡಿ ಪ್ಲೈಟ್ ಟಿಕೆಟ್’ ಎಂದು ಅವರಿಗೆ ಕೊಟ್ಟೆ. ಅದನ್ನೊಮ್ಮೆ ಬಿಡಿಸಿನೋಡಿ ‘ಇದರಮನೆ ಹಾಳಾಯ್ತು’ ಎಂದು ಹೊಳೆಗೆಸೆದರು. ಹೊಳೆಯಲ್ಲಿನ ಮೀನುಗಳನ್ನು ನೋಡಿ ಮತ್ತೆ ಬೆಳ್ಳೇಕೆರೆಯತ್ತ ಹೊರಟೆವು.
ಅವರ ‘ತಬರನ ಕಥೆ’ ಸಿನಿಮಾ ಆಗಿ ಕಥಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿತ್ತು. ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಸರ್ಕಾರ ಕಳಿಸಿದ ವಿಮಾನಯಾನದ ಟಿಕೆಟ್ಟಾಗಿತ್ತು ಅದು. ದೆಹಲಿಗೆ ಹೋಗುವುದನ್ನು ಬಿಟ್ಟು ಅಂದು ಅವರು ಬೆಳ್ಳೇಕೆರೆಗೆ ನಮ್ಮ ರಂಗ ಶಿಬಿರದ ಉದ್ಘಾಟನೆಗಾಗಿ ಬಂದಿದ್ದರು !
* * *
ನಮ್ಮ ರಂಗ ತಂಡದ ನಟಿ ಶೋಭಾ, ತೇಜಸ್ವಿಯವರ ಕಾದಂಬರಿ ‘ಕರ್ವಾಲೋ ದಲ್ಲಿ ಬರುವ ಬಿರ್ಯಾನಿ ಕರಿಯಪ್ಪನ ಮಗಳು. ನಮ್ಮೂರಿಗೆ ಅಂಗನವಾಡಿಗೋ ಶಿಶುವಿಹಾರಕ್ಕೋ ಟೀಚರಾಗಿ ಬಂದ ಶೋಭಾ ನಮ್ಮ ರಂಗತಂಡದ ಹಿರಿಯ ನಟ ಉಗ್ಗಪ್ಪನನ್ನು ಮದುವೆಯಾಗಿ ಇಲ್ಲೇ ನೆಲೆಸಿದಳು. ತೇಜಸ್ವಿಯವರು ಜನ್ನಾಪುರದ ಚಿತ್ರಕೂಟದಲ್ಲಿದ್ದಾಗ ಈ ಕರಿಯಪ್ಪನ ಸಂಸಾರವೆಲ್ಲ ಅವರಲ್ಲಿಗೆ ಕೆಲಸಕ್ಕೆ ಹೋಗುತ್ತಿತ್ತಂತೆ. ಆ ಪರಿಚಯದಿಂದ ಈಕೆ ರಂಗ ಶಿಬಿರದ ಉದ್ಘಾಟನೆಗೆಂದು ಬಂದಿದ್ದ ತೇಜಸ್ವಿಯವರನ್ನು ಮಾತಾಡಿಸಿದಳು.
ಮುಂದೆ ಈ ಶೋಭಾ ಮೂಡಿಗೆರೆಗೆ ಹೋದಾಗ ಕೆಲವುಸಾರಿ ತೇಜಸ್ವಿಯವರ ಮನೆಗೆ ಹೋಗಿ ನಮ್ಮ ರಂಗ ವಾರ್ತೆಗಳನ್ನು ಬಿತ್ತರಿಸತೊಡಗಿದಳು. ಈಕೆಯ ಮೂಲಕ ತೇಜಸ್ವಿಯವರಿಗೆ ನಮ್ಮ ರಂಗ ಚಟುವಟಿಕೆಗಳು, ನಮ್ಮ ಜಗಳಗಳೆಲ್ಲ ವರದಿಯಾಗತೊಡಗಿದವು.
ಬಿರ್ಯಾನಿ ಕರಿಯಪ್ಪ ಮಾಂಸದಡುಗೆಗೆ ಬಹಳ ಪ್ರಸಿದ್ಧ. ಈತನ ಖ್ಯಾತಿ ನಮ್ಮ ಸಕಲೇಶಪುರ-ಮೂಡಿಗೆರೆ ಮಾತ್ರವಲ್ಲ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನವರೆಗೂ ಹರಡಿದೆ. 1970 ಮತ್ತು 80ರ ದಶಕಗಳಲ್ಲಿ ಯಾವುದೇ ಸಮಾರಂಭದಲ್ಲಿ ಕರಿಯಪ್ಪ ಗೌಡರ ಅಡಿಗೆ ಎಂದು ಸುದ್ದಿಯಾದರೆ ಸಾಕು ಊಟಕ್ಕೆ ಹಾಜರಾಗುವವರ ಸಂಖ್ಯೆ ಇಮ್ಮಡಿಯಾಗುತಿತ್ತು! ಈ ಅಡಿಗೆ ಕಲೆ ತಂದೆಯಿಂದ ಮಗಳಿಗೂ ಇಳಿದುಬಂದಿದೆ.
೧೮/೧/೨೦೦೯ ರಂದು ತೇಜಸ್ವಿ ನೆನಪಿನ ನಾಟಕೋತ್ಸವದಲ್ಲಿ ಬಿರಿಯಾನಿ ಕರಿಯಪ್ಪ ರಿಗೆ ಸನ್ಮಾನ. ಚಿತ್ರದಲ್ಲಿ ಮಂಡ್ಯ ರಮೇಶ್ ಕೂಡ ಇದ್ದಾರೆ
(ಇನ್ನೂ ಇದೆ..)






ತೇಜಸ್ವಿಯವರ ದೆಹಲಿ ಪ್ರಯಾಣದ ರದ್ಧತಿ ಮತ್ತು ರಂಗ ಪ್ರೇಮದ ಕುರಿತು ಓದಿ ಮೆಚ್ಚುಗೆಯಾಯಿತು ಸರ್…
shri B.Kariyappanavara photo nodi tumbaaaa santhoshavaayitu. vandanegalu, kanam