ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿ ಸಂದರ್ಶನ ಮಾಡಿದ್ದೀಯ..

ಪ್ರಸಾದ್ ರಕ್ಷಿದಿ

2004 ನೇ ಇಸವಿಯ ವೇಳೆಗೆ ಮಲೆನಾಡಿನ ಕಾಫಿವಲಯ ತತ್ತರಿಸಿಹೋಗಿತ್ತು. ಒಂದುಕಡೆ ಅನೇಕ ವರ್ಷಗಳಿಂದ ಇದ್ದ ಕಾಫೀ ಬೋರ್ಡ್  ಏಕಸ್ವಾಮ್ಯದಿಂದ ಕಳಚಿಕೊಂಡು ಮುಕ್ತವಾದ ಕಾಫಿ ಉದ್ಯಮ, ಸ್ವಾತಂತ್ರ್ಯ ದೊರೆತ ಹುಮ್ಮಸ್ಸಿನಲ್ಲಿದ್ದರೆ, ಇನ್ನೊಂದು ಕಡೆ ಕಾಫಿಗೆ ದೊರೆತ-ಅದುವರೆಗೆ ಯಾರೂ ಕನಸಿನಲ್ಲೂ ಊಹಿಸದಿದ್ದಂತಹ ಹೆಚ್ಚಿನ ಬೆಲೆ ದಿಡೀರನೆ ಕುಸಿದು ನೆಲಕಚ್ಚಿತ್ತು. ಅದರೊಂದಿಗೆ ಕಳೆದೆರಡು ವರ್ಷಗಳಿಂದ ಮಳೆಯೂ ಅತ್ಯಂತ ಕಡಿಮೆಯಾಗಿ ನೀರಿನಮೂಲಗಳೆಲ್ಲ ಒಣಗಿಹೋಗಿ ಕಾಫಿತೋಟಗಳೆಲ್ಲ ನಾಶವಾಗುವ ಸ್ಥಿತಿಗೆ ಬಂದಿದ್ದವು. ಪ್ರಥಮಬಾರಿಗೆ ಕಾಫಿತೋಟಗಳ ಮಾಲಿಕರು ಮತ್ತು ಕಾರ್ಮಿಕರು ಒಟ್ಟಾಗಿ ತಮ್ಮ ಉಳಿವಿಗಾಗಿ ಹೋರಾಡಲು ಬೀದಿಗಿಳಿದಿದ್ದರು.

ಬೆಂಗಳೂರು ದೂರದರ್ಶನದಿಂದ ಗೆಳೆಯ ಸುಬ್ಬುಹೊಲೆಯಾರ್ ಫೋನ್ ಮಾಡಿದರು ಕಾಫಿ ಉದ್ಯಮದ ಸಮಸ್ಯೆಗಳ ಬಗ್ಗೆ ದೂರದರ್ಶನದಲ್ಲಿ ಒಂದು  ಕಾರ್ಯಕ್ರಮ ಮಾಡೋಣ ಕಾಫೀ ಬೆಳೆಗಾರರ, ತೋಟಕಾರ್ಮಿಕರ, ವ್ಯಾಪಾರಿಗಳ ಹೀಗೆ ಕಾಫಿ ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲರ ಸಂದರ್ಶನಗಳೂ ಇರಲಿ, ಜನರ ಆಯ್ಕೆ ಮತ್ತು ಸಂದರ್ಶನಗಳ ಜವಾಬ್ದಾರಿ ನಿಮ್ಮದು ಎಂದು ಎಲ್ಲವನ್ನೂ ನನ್ನ ತಲೆಗೆ ಕಟ್ಟಿದರು.

ಸಾಧ್ಯವಿದ್ದರೆ ತೇಜಸ್ವಿಯವರ ಸಂದರ್ಶನಮಾಡಬೇಕೆಂದು ಆಗಲೇ ಅಂದುಕೊಂಡೆ. (ಅವರು ಕೂಡಾ ಕಾಫಿ ಬೆಳೆಗಾರರೇ). ದೂರದರ್ಶನದ ಕ್ಯಾಮರಾ ತಂಡ ನಮ್ಮೂರಿಗೆ ಬಂದಿಳಿಯಿತು. ಮೊದಲನೇ ದಿನ ಸಕಲೇಶಪುರದ ಸುತ್ತಮುತ್ತ ಬೆಳೆಗಾರರಿಂದ ಹಿಡಿದು ಕೂಲಿ ಕಾರ್ಮಿಕರ ತನಕ, ಕಾಫಿ ಕೃಷಿ ಮತ್ತು ಉಧ್ಯಮಕ್ಕೆ ಸಂಬಂಧಿಸಿದ ಅನೇಕರ   ಸಂದರ್ಶನ ಮಾಡಿದೆವು. ಮಾರನೇ ದಿನ ಬೆಳಗ್ಗೆ ತೇಜಸ್ವಿಯವರನ್ನು ಕಾಣಲು ಹೋಗುವ ಯೋಜನೆಯಿತ್ತು. ಫೋನ್ ಮಾಡಿ ತೇಜಸ್ವಿಯವರ ಸಂದರ್ಶನಕ್ಕೆ ಅನುಮತಿಯನ್ನು ಪಡೆದುಕೊಳ್ಳಲು  ನಮಗೆ ಕೆಲವರು ಸಲಹೆ ನೀಡಿದರು. ಆದರೆ ಅವರ ಸ್ವಭಾವದ ಸ್ವಲ್ಪ ಪರಿಚಯವಿದ್ದ ನಾನು, ಫೋನ್ ಮಾಡಿ ಅವರಿಗೆ ತಿಳಿಸುವುದು ಬೇಡವೆಂದು ವಾದ ಮಾಡಿದೆ.

ನಾವೇನಾದರೂ ಪೋನ್ ಮಾಡಿದಾಗ ಅವರು ಸಂದರ್ಶನ ನೀಡಲು ನಿರಾಕರಿಸಿದ್ದರೆ ನಾವು ಅವರಲ್ಲಿಗೆ  ಹೋಗುವ ಆಸೆಯನ್ನೇ ಕೈಬಿಡಬೇಕಾಗುತ್ತಿತ್ತು!. (ಅವರು ಯಾವುದೇ ಟಿ.ವಿ.ಗೆ ಸಂದರ್ಶನ ನೀಡದೇ ಕೆಲವು ವರ್ಷಗಳಾಗಿದ್ದವೆಂಬ ವಿಚಾರ ನನಗೆ ತಿಳಿದಿದ್ದುದರಿಂದ ಸಮ್ಮತಿಸುತ್ತಾರೋ ಇಲ್ಲೋ ಎಂಬ ಸಣ್ಣ ಅಳುಕಿತ್ತು)

ಮಾರನೇದಿನ ಬೆಳಗ್ಗೆ, ನಮ್ಮ ತಂಡ ನೇರವಾಗಿ ತೇಜಸ್ವಿಯವರ ಮನೆಗೆ ಹೋಯಿತು. ಉಳಿದವರನ್ನೆಲ್ಲ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಾನೊಬ್ಬನೇ ಅವರ ಮನೆಗೆ ಹೋದೆ. ರಾಜೇಶ್ವರಿಯವರು ಮನೆಯಲ್ಲಿದ್ದರು. ಅವರಿಗೆ ನಾವು ಬಂದ ಉದ್ದೇಶವನ್ನು ತಿಳಿಸಿದೆ. ಅದಕ್ಕವರು ನೀವೇ ಹೋಗಿ ಕೇಳಿ ತೋಟದಲ್ಲಿ ಏನೋ ಕೆಲಸ ಮಾಡುತ್ತಿದ್ದಾರೆಎಂದರು.

ತೋಟದಲ್ಲಿ ತೇಜಸ್ವಿಯವರು ಸಣ್ಣ ಕವಲಿಯೊಂದರಲ್ಲಿ ಇಳಿದು ನಿಂತಿದ್ದರು. ಜೊತೆಯಲ್ಲಿ ಒಬ್ಬ ಗಾರೆಯವನಿದ್ದ. ಕವಲಿಯಲ್ಲಿ ನೀರು ಸಣ್ಣದಾಗಿ ಹರಿಯುತ್ತಿತ್ತು. ಅವರಿಬ್ಬರೂ ಸೇರಿ ಕವಲಿಗೆ ಕಟ್ಟುಹಾಕಿ ನೀರುನಿಲ್ಲಿಸುವ ಪ್ರಯತ್ನದಲ್ಲಿದ್ದರು.

ನಮಸ್ಕಾರ ಸಾರ್ ಎಂದೆ. ಅಲ್ಲಿಂದಲೇ ತಲೆಯೆತ್ತಿನೋಡಿ

ಚಿತ್ರ: ಡಿ ಜಿ ಮಲ್ಲಿಕಾರ್ಜುನ್

ಓಹೋ ಬಾರಯ್ಯ, ನೋಡು ನಮ್ಮ ಮೂಡಿಗೆರೆಲೂ ನೀರಿಗೆ ಈ ಗತಿ ಬಂತು. ಇದನ್ನೇ ಕಟ್ಟಿನಿಲ್ಸೋಕೆ ಒದ್ದಾಡ್ತಾ ಇದ್ದೀನಿ. ಬಾ ಅಂತ ಹೇಳಿಕಳ್ಸಿದ್ರೆ, ಈ ಗಾರೆಯವ್ನು ಹದಿನೈದು ದಿನ ತಡಮಾಡ್ದ, ಅಷ್ಟರಲ್ಲಿ ನೀರೇ ಅರ್ಧ ಕಮ್ಮಿಯಾಗಿಹೋಯ್ತು ಎಂದರು. ಅದಕ್ಕೆ ಗಾರೆಯವನು ಅವತ್ತು ನೀರು ಜಾಸ್ತಿ ಇತ್ತು ಕಟ್ಟಂಗಿರ್ಲಿಲ್ಲ ಎಂದು ತನ್ನನ್ನು ಸಮರ್ಥಿಸಿಕೊಂಡ.

ನಾವು ಕಳೆದ ವರ್ಷ ‘ಶ್ರೀ ಪಡ್ರೆ’ ಯವರನ್ನು ಕರೆಸಿ ಹಾನಬಾಳು, ಸಕಲೇಶಪುರ, ಬೆಳ್ಳೇಕೆರೆಗಳಲ್ಲಿ ನೀರಿಂಗಿಸುವ ಬಗ್ಗೆ ಜಾಗ್ರತಿ ಮೂಡಿಸುವ ಒಂದು ಕಾರ್ಯಕ್ರಮ ಮಾಡಿದ್ದೆವೆಂದೂ, ಅದರಿಂದ ಈಗ ಕೆಲವರು ತಮ್ಮ ಜಮೀನಿನಲ್ಲಿ ನೀರಿಂಗಿಸುವ ಕೆಲಸ ಮಾಡುತ್ತಿದ್ದಾರೆಂದೂ, ನಾನೂ ನಮ್ಮ ತೋಟದಲ್ಲಿ ನೀರಿಂಗಿಸಲು ಪ್ರಾರಂಭಮಾಡಿ ನನಗೆ ಸ್ವಲ್ಪ ಅನುಕೂಲವಾಗಿದೆಯೆಂದೂ ಹೇಳಿದೆ.

ಈ ನಮ್ಮ ಮೂಡಿಗೆರೆಲೂ ಅಂಥಾದ್ದೇನಾದ್ರೂ ಮಾಡ್ಬೇಕಪ್ಪಎಂದರು.

ಸಾರ್ ಇಲ್ಲೂ ಒಂದು ಕಾರ್ಯಕ್ರಮ ಮಾಡೋಣ ಜನರಿಗೆ ಸ್ವಲ್ಪ ಮಾಹಿತಿನಾದ್ರೂ ಸಿಗುತ್ತೆಎಂದೆ.

ಯಾರಿಗೆ ಹೇಳೋದು ನಂಗಂತೂ ಸಾಕಾಗಿಹೋಗಿದೆ ಕಣಯ್ಯ, ಬಾ ಒಂದು ಕಾಫಿ ಕುಡ್ದು ಬರೋಣ ಎಂದು ಕವಲಿಯಿಂದ ಮೇಲೆಹತ್ತಿ ಮನೆಯ ಕಡೆ ಹೊರಟರು.

ನಾವು ಮನೆಯತ್ತ ತಿರುಗುತ್ತಿದ್ದಂತೆ ನಂಗೆ ಇಲ್ಲೇ ಕಳ್ಸ್ಬುಡಿ ಕಾಫಿ ಕವಲಿಯಿಂದ ಧ್ವನಿ ಕೇಳಿಬಂತು. ಪಕ್ಕನೆ ತೇಜಸ್ವಿಯವರ ಗೆಳೆಯ ರಾಮದಾಸರ ಧ್ವನಿಯಂತಿತ್ತು. ಮತ್ತೊಮ್ಮೆ ಹೊರಳಿ ಯಾರೆಂದು ನೋಡಿದೆ. ಇಲ್ಲ ಹಾಗೆಂದವನು ಗಾರೆಯವನೇ!.

ಸರಿ ಹಾಗಾದ್ರೆ ನೀನಿಲ್ಲೇ ಇರ್ತೀಯ? ಎಂದು ಗಾರೆಯವನಿಗೆ ಹೇಳಿ ತೇಜಸ್ವಿ ಮನೆಯತ್ತ ಹೆಜ್ಜೆ ಹಾಕಿದರು. ನಾನು ಹಿಂಬಾಲಿಸಿದೆ. ಮಾತು ಕಾಫಿಯತ್ತ ತಿರುಗಿದ್ದರಿಂದ, ಇದೇ ತಕ್ಕ ಸಮಯವೆಂದುಕೊಂಡು ಕಾಫಿ ಸಮಸ್ಯೆಯ ಬಗ್ಗೆ ದೂರದರ್ಶನಕ್ಕೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ ಅದಕ್ಕೆ ಸಂಬಂಧಪಟ್ಟಂತೆ ಹಲವರ ಸಂದರ್ಶನ ಮಾಡಿದ್ದೀವಿ ಈಗ ನಿಮ್ದೊಂದು ಸಂದರ್ಶನ ಬೇಕಿತ್ತು ಎಂದೆ.

ನನಗೆ ಅದಕ್ಕೆಲ್ಲ ಬರೋಕಾಗಲ್ಲ ಕಣಯ್ಯ, ಪುರುಸೋತ್ತಿಲ್ಲಎಂದರು.

ನೀವು ಬರ್ಬೇಡಿ ಸಾರ್ ಇಲ್ಲೇ ಮಾಡೋಣ

ಎಂದೋ ಮಾರಾಯ

ಇವತ್ತೇ ಸಾರ್ ಈಗಲೇ

ಎಲ್ಲಿದ್ದಾರೆ ಅವರೆಲ್ಲ ಸಂಚಿನ ವಾಸನೆ ಹಿಡಿದವರಂತೆ ಕೇಳಿದರು.

ಇಲ್ಲೇ ಮೇಲೆ ಕಾಯ್ತಾ ಇದ್ದಾರೆ ಕದ್ದು ದಕ್ಕಿಸಿಕೊಂಡವನಂತೆ ಹೇಳಿದೆ!

ನೀವೆಲ್ಲ ಒಳ್ಳೆ ಕಿರಾತಕರು-ಕರಿ ಅವರನ್ನೂ ಕಾಫಿಗೆ!

ಎಲ್ಲರನ್ನೂ ಮನೆಗೆ ಕರೆದು ಕಾಫಿ ಸಮಾರಾಧನೆ ಆಯಿತು.ಆ ಮೇಲೆ ದೂರದರ್ಶನದವರ ಕ್ಯಾಮರಾ, ಕ್ಯಾಮರಾ ಸ್ಟಾಂಡ್, ಇತ್ಯಾದಿಗಳ ಬೆಲೆ ಅದರ ಸೂಕ್ಷ್ಮತೆ ಇವುಗಳನ್ನೆಲ್ಲ ವಿವರವಾಗಿ ಕೇಳಿ ತಿಳಿದುಕೊಂಡರು. ಎಲ್ಲವನ್ನೂ ನೋಡಿ ಈ ಕ್ಯಾಮರಾ ಇರ್ಲಿ ಅದರ ಸ್ಟಾಂಡನ್ನು ಕೊಳ್ಳೋಕ್ಕಗಾಲ್ಲ ಎಂದವರೇ

ನಂಗಂತೂ ನಿಮ್ಮ ದೂರದರ್ಶನ ಒಂಚೂರೂ ಇಷ್ಟ ಇಲ್ಲ. ಇಷ್ಟೊಳ್ಳೆ ಕ್ಯಾಮರ ಇಟ್ಕೊಂಡಿದ್ದೀರ ಟಿ.ವಿ.ಲಿ ಚಿತ್ರ ನೋಡಿದ್ರೆ ಸರಿಯಾಗಿ ಬರೋದೆ ಇಲ್ಲಎಂದರು.

ಆ ಮೇಲೆ ಅವರ ತೋಟದ ಮಧ್ಯದಲ್ಲೇ ನಿಂತು, ಸಂದರ್ಶನವೂ ನಡೆಯಿತು. ತೇಜಸ್ವಿ ಕಾಫಿ ಬೆಳೆಗಾರರ ಬಗ್ಗೆ ಮಾತನಾಡುತ್ತಾ ‘ನಾವು ಕಳೆದ ನಲುವತ್ತು ವರ್ಷಗಳಿಂದ ಕಾಫಿ ಮಾರಾಟದ ಸಂಪೂರ್ಣ ಜವಾಬ್ಧಾರಿಯನ್ನು ಕಾಫಿಬೋರ್ಡನ ಕೈಗೊಪ್ಪಿಸಿ ಕುಳಿತು ಬಿಟ್ಟಿದ್ದೆವು. ಕಾಫಿಗೆ ತಕ್ಕಮಟ್ಟಿನ ಒಳ್ಳೆಯಬೆಲೆ ದೊರಕುತ್ತಿದ್ದುದರಿಂದ ಈ ಸ್ಥಿತಿ ಶಾಶ್ವತ ಎಂಬಂತೆ ನಿರಾಳವಾಗಿದ್ದೆವು. ಈಗ ನಮ್ಮ ಉತ್ಪನ್ನದ ಮಾರಾಟದ ಜವಾಬ್ದಾರಿಯನ್ನು ಸಮರ್ಥವಾಗಿ ನಾವೇ ನಿರ್ವಹಿಸಲು ಕಲಿಯಬೇಕಾಗಿದೆ.’ ಕೃಷಿಯಲ್ಲಿನ ಅನಿಶ್ಚಿತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅದಕ್ಕೆ ಹೊಂದಿಕೊಂಡು ಬದುಕಲು ಅಗತ್ಯವಾದ ಆರ್ಥಿಕ ಶಿಸ್ತನ್ನು ಕಲಿಯುವ ಬಗ್ಗೆ ಮಾತ್ರವಲ್ಲ ಸಮಗ್ರವಾಗಿ ರೈತರ ಬಗ್ಗೆ, ಅದರಲ್ಲೂ ಕಾಫಿ ಬೆಳೆಗಾರರಿಗಿಂತಲೂ ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಬದುಕುವ-ಹಣ್ಣು ತರಕಾರಿ ಬೆಳೆಯುವ ರೈತರ ಬಗ್ಗೆಯೂ ಮಾತನಾಡಿದರು. ಆ ರೈತರಿಗೆ ಹೋಲಿಸಿದರೆ ಕಾಫಿ ಬೇಳೆಗಾರರ ಸ್ಥಿತಿ ಅವರಷ್ಟು ಚಿಂತಾಜನಕವಲ್ಲವೆಂದು ನನ್ನ ಅಭಿಪ್ರಾಯ ಎಂದರು. ನಂತರ ಯಾವ ಸಕರ್ಾರನೂ ರೈತನ ನೆರವಿಗೆ ಬರೋದಿಲ್ಲ, ಹೆಚ್ಚೆಂದರೆ ಸಾಲ ವಸೂಲಿಯನ್ನು ಮುಂದೂಡೋದೋ ಇಲ್ಲಾ ಬಡ್ಡಿ ಒಂದ್ಸೊಲ್ಪ ಕಡಿಮೆ ಮಾಡೋದೋ ಇಂಥಾ ಸಣ್ಣಪುಟ್ಟ ರಿಯಾಯಿತಿ ಕೊಡಬಹುದಷ್ಟೆ ನಮ್ಮನ್ನು ನಾವೇ ನೋಡಿಕೊಳ್ಳಲು ಕಲೀಬೇಕು ಎಂದರು. ಇವೆಲ್ಲ ದೂರದರ್ಶನದಲ್ಲಿ ಪ್ರಸಾರವೂ ಆಯಿತು.

ಕಾರ್ಯಕ್ರಮವನ್ನು ಟಿ.ವಿ.ಯಲ್ಲಿ ನೋಡಿದ ಕೆಲವರು ಕಾಫಿ ಬೆಳೆಗಾರರು, ನನ್ನಲ್ಲಿ ನೀನು ನಮ್ಮೆಲ್ಲರ ಸಂದರ್ಶನ ಮಾಡಬೇಕಿತ್ತು. ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿಯವರನ್ನು ಸಂದರ್ಶನ ಮಾಡಿದ್ದೀಯ ಅವರು ನಮ್ಮ ವಿರುದ್ದವೇ ಮಾತಾಡಿದರು ಎಂದು ಜಗಳಕ್ಕೆ ಬಂದರು.! ಅವರೆಲ್ಲರಿಗೆ ನಿಜವನ್ನು ಒಪ್ಪಿಕೊಳ್ಳುವುದು ಕಷ್ಟವಾಗಿ ಕಂಡಿರಬೇಕು.

‍ಲೇಖಕರು G

2 June, 2011

2 Comments

  1. prashanth

    thumba chennagi bartha ide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading