ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ತೇಜಸ್ವಿ ಮದುವೆ..

ತೇಜಸ್ವಿ ಕಥನ ೭

ಪ್ರಸಾದ್ ರಕ್ಷಿದಿ

ಹೀಗೆ ಕರಿಯಪ್ಪ ಗೌಡರ ನೆನಪಿನ ಪಾಕಶಾಲೆಯಿಂದ ಒಂದೊಂದೇ ಐಟಮ್ಮುಗಳು ಹೊರಬರುತ್ತಿದ್ದವು.

ಮತ್ತೆ ಕರಿಯಪ್ಪ ಗೌಡ್ರೆ ತೇಜಸ್ವಿಯವರ ಮದ್ವೆಲೂ ನೀವೆ ಬಿರಿಯಾನಿ ಮಾಡಿದ್ರಂತೆ ನಾನು ಕೆಣಕಿದೆ.

ಮದುವೇಲಲ್ಲ,.. ಅದೆಂತ ಮದುವೆ ‘ಮಂತ್ರ ಮಾಂಗಲ್ಯ’ ಅದು, ಗಂಡು ಹೆಣ್ಣು ಇಬ್ಬುರ್ನೂ ಎದುರಿಗೆ ನಿಲ್ಲಿಸಿಕೊಳ್ಳೋದು, ಅದೆಂತದೋ ಪುಸ್ತ್ಕ ತಗ್ದು ಅವರಪ್ಪ ಇಂಗ್ರೇಜಿ ಪಾದ್ರಿ ಹಂಗೆ ಓದೋದು. ಆಮೇಲೆ ಇಬ್ರಿಗೂ ಆಶೀರ್ವಾದ ಮಾಡೋದು. ಅಲ್ಲಿಗಾಯ್ತು… ಅದೇ ಒಂದು ಮದುವೆ. ಎಂದು ತೇಜಸ್ವಿಯವರ ಮದುವೆಯನ್ನು ಒಂದು ಕೆಲಸ ತಿಳಿಯದ ಅಡ್ಡಕಸಬಿಗಳು ಮಾಡುವ ಕೃತ್ಯವೆಂಬಂತೆ ವಿವರಿಸಿದರು.

ಮತ್ತೆ ನಿಮ್ಮ ಬಿರಿಯಾನಿ ಊಟ ಮತ್ತೆ ನೆನಪಿಸಿದೆ.

ಅದೇ ಹೇಳ್ತೀನಿ ಕೇಳಿ, ಆಮೇಲೊಂದಿನ ತೇಜಸ್ವಿ, ಕರಿಯಪ್ಪ ನನ್ನ ಮದ್ವೆ ಆಯ್ತು, ನಾಕು ಜನಕ್ಕೆ ಊಟ ಹಾಕ್ಬೇಕಲ್ಲ, ಒಳ್ಳೇ ಬಿರಿಯಾನಿ ಮಾಡ್ಬೇಕು ಅಂದ್ರು. ಆಗ ಅವ್ರ ಅಪ್ಪಾರು ಅಲ್ಲೇ ಇದ್ರು. ನಾನೇನೋ ದೊಡ್ಡೋರ ಮನೆ ಮದುವೆ ಒಂದು ಸಾವಿರ ಜನಕ್ಕೆ ಊಟ ಇಟ್ಕಂಡಿರಬೋದು ಅಂತ, ಸಾಮಾನು ಪಟ್ಟಿ ಬರ್ಕಳಿ ಅಂದೆ. ಅದೆಂತ ಬರಿಯದು ಕರಿಯಪ್ಪ ಒಂದೈವತ್ ಜನಕ್ಕೆ ಸಾಕು ಅಂದ್ರು.  ಆ… ಅದೆಂಥ ಊಟ ಮದುವೆ ಊಟಕ್ಕೂ ಒಂದು ಮರ್ಯಾದಿ ಬೇಡ್ವಾ ಅಂದೆ. ಅದ್ಕೆ ಅಷ್ಟೇ ಜನ ಬರಾದು ಅಂದ್ರು.

ಅಮ್ಮಾವ್ರು ಮನೆ (ರಾಜೇಶ್ವರಿ) ಅಲ್ಲೇ ಮೂಡಿಗೆರೆಂದಾಚೆ  ಭೂತನಕಾಡಿನ ಹತ್ರ ಇತ್ತು. ಅಲ್ಲೇ ಊಟ, ಮನೀಗೆ ಹೋಗೋ ದಾರೀಲೆ ಒಂದು ಸಣ್ಣ ಚಪ್ರ ಹಾಕ್ಸಿದ್ರು. ನಾನು ಹೆಂಗಾರ ಇರ್ಲಿ ಆಮೇಲೆ ಮರ್ಯಾದಿ ಹೋಗದು ಬ್ಯಾಡ ಅಂತ ಅವ್ರು ಐವತ್ ಜನಕ್ಕೆ ಅಂದ್ರೂ ಅರುವತ್ತು ಎಪ್ಪತ್ತು ಜನಕ್ಕೆ ಸುದಾರ್ಸೋವಷ್ಟು ಅಡಿಗೆ ಮಾಡಿದ್ದೆ.

ಎಂಥಾ ಜನ ಅಂತೀರಿ ಊಟಕ್ಕೆ. … ಎಲ್ಲಾ ಸೇರಿ ಇಪ್ಪತ್ತೈದು ಜನ ಬಂದಿದ್ದರು!. ಇವ್ರು ಯಾರಿಗೂ ಹೇಳೇಇಲ್ಲ..ಮಾರಾಯ್ರ ಇನ್ನೂ ನಲುವತ್ ಜನಕ್ಕೆ ಆಗೋವಷ್ಟು ಊಟ ಉಳೀತು. ಅದನ್ನ ನೀನೇ ತಗಂದೋಗು ಕರಿಯಪ್ಪ ಯಾರ್ಗಾದ್ರೂ ಕೊಡು ಅಂದ್ಬುಟ್ರು

“ಕರಿಯಪ್ಪ ಗೌಡ್ರೆ ನೀವು ಅಡಿಗೇಲಿ ತಾಲ್ಲೂಕು ವಿಖ್ಯಾತ ಜಿಲ್ಲಾ ವಿಖ್ಯಾತ ಎಲ್ಲಾ ಆಗಿರ್ಬೋದು, ಅದರೆ ನೀವು ತೇಜಸ್ವಿಯವರ ಕಾದಂಬರಿಯೊಳಗೆ ಸೇರಿಕೊಂಡು ಲೋಕ ವಿಖ್ಯಾತ ಆಗಿಬಿಟ್ರಿ!” ಎಂದೆ.

ಅದಕ್ಕವರು “ಅಲ್ಲಾ ಮನುಷ್ಯ ಅಂದ್ಮೇಲೆ ಸಣ್ಣ ಪುಟ್ಟ ಅರೆಕೊರೆಗಳು ಇದ್ದೇ ಇರ್ತಾವಪ್ಪ, ಅದನ್ನೆಲ್ಲ ಕಥೇಲಿ (ಕರ್ವಾಲೋ ಆಗ ಪಿ.ಯು ತರಗತಿಗೆ ಪಠ್ಯ ಪುಸ್ತಕವಾಗಿತ್ತು) ಬರ್ದು ನನ್ನನ್ನ ಕಾಲೇಜು ಹುಡುಗ್ರ ಬಾಯಿಗೆ ಹಾಕಿದ್ರು. ಅವ್ರಿನ್ನೇನು ಕೇಳ್ಬೇಕ ನನ್ನ ದಾರಿಲೆಲ್ಲ ‘ಬಿರಿಯಾನಿ ಕರಿಯಪ್ಪ’ ಅನ್ನೋಕೆ ಶುರು ಮಾಡಿದ್ರು. ನಾನೇನು ಬಿಡ್ಲಿಲ್ಲ ನೋಡಿ ತೇಜಸ್ವೋರ ಮನೀಗೆ ಹೋಗಿ ಸರ್ಯಾಗಿ ಜಗಳ ಮಾಡ್ದೆ”. ಎಂದು ಹೇಳಿ ಸ್ವಲ್ಪ ತಡೆದು ” ಏನೋ ಅವರಪ್ಪ ತುಂಬಾ ದೊಡ್ಡಮನುಷ್ಯರಂತೆ ನಾನು ಹೆಚ್ಗೆ ತಿಳದಿಲ್ಲ ಬಿಡಿ ಆದ್ರೆ ಈತ ಮಾತ್ರ ಮನುಷ್ಯರಲ್ಲ, ಮತ್ತೆ ಆಕೆನೂ ಅಷ್ಟೆ ಅಮ್ಮ(ರಾಜೇಶ್ವರಿ)ಬಡವರ್ನ ಕಂಡ್ರೆ ತುಂಬ ಪ್ರೀತಿ. ಜಗಳವೆಲ್ಲ ಮುಗದ್ಮೇಲೆ ಕಾಫಿ ತಿಂಡಿಕೊಟ್ರು. ನಾನು ತಿಂತಾ ಇದ್ರೆ, ಈವಯ್ಯ ಅಲ್ಲೇ ನಗ್ತಾ ನಿಂತಿತ್ತು.

“ಇಬ್ರೂ ರಾಮದೇವರ ಜೋಡಿ” ಎಂದರು.

ತೇಜಸ್ವಿಯವರ ಕಥಾ ಲೋಕದ, ನಡೆದಾಡುವ ಪಾತ್ರವಾಗಿರುವ ಕರಿಯಪ್ಪನಿಗೆ ತೇಜಸ್ವಿ ದಂಪತಿ ರಾಮ-ಸೀತೆಯರಂತೆ ಕಂಡಿದ್ದರು!

ಕರಿಯಪ್ಪ ಗೌಡ್ರೆ ಹಂಗಾದರೆ ಅವ್ರಿಬ್ರೂ ರಾಮ-ಸೀತೆ ಅಂಥಾಯ್ತು, ಹೆಂಗೂ ‘ಕುವೆಂಪು’ ಒಂದು ರಾಮಾಯಣ ಬರ್ದಿದ್ದಾರೆ. ನೀವು ನಿಮ್ದೇ ಒಂದು ತೇಜಸ್ವಿ ರಾಮಾಯಣ ಅಂತ ಬರದ್ಬಿಡಿ ಎಂದೆ.

ಇನ್ನೇನು ರಾಮಾಯಣವೇ ಇದು. ಅಲ್ಲಾ ಅವ್ರ ಅಪ್ಪಾರು ಎಂಥಾ ದೊಡ್ಡ ಕೆಲಸದಲ್ಲಿದ್ದರು. ಎಂತೆಂತ ಮಿನಿಷ್ಟ್ರುಗಳೆಲ್ಲ ಇವ್ರ ಮನೀಗೆ ಹೆಣ್ಣು ಕೊಡಕೆ ತಯಾರಾಗಿದ್ರಂತೆ. ದೊಡ್ಡ ದೊಡ್ಡ ಪ್ಲಾಂಟರುಗಳು ತಮ್ಮ ಮಗ್ಳನ್ನ, ಕೊಡಕೆ ಕೇಳಿದ್ರಂತೆ, (ಅಲ್ಲ ಈಕೆ ಪಾಪ ಒಳ್ಳೇ ಹೆಂಗ್ಸು, ಅವರಿಗ್ ತಕ್ಕನಾದೋರೆ) ಇವ್ರು ಮನಸ್ ಮಾಡಿದ್ರೆ ದೊಡ್ಡ ಕೆಲಸ ಸೇರಿ ಪಾರಿನ್ಗೋಬೋದೊತ್ತು. ಅದೆಲ್ಲಾ ಬುಟ್ಟು ಇಲ್ಲಿ ಸಾಸ್ವತ ವನವಾಸ ಬಂದ್ರಲ್ಲ ಅದೇಒಂದು ರಾಮಾಯ್ಣ ಅಲ್ವ!

ತೇಜಸ್ವಿಯರು  ಕರ್ವಾಲೋ ಬರೆದ ಹಲವು ವರ್ಷಗಳ ನಂತರ ಎಲ್ಲೋ ಒಂದು ಕಡೆ ‘ನನ್ನ ಕಥೆಯೊಂದರ ಪಾತ್ರವೇ ಹೀಗೆ ಬಂದು ಜಗಳಕ್ಕೆ ನಿಂತೀತೆಂದು ಎಣಿಸಿರಲಿಲ್ಲ’ ಎಂದಿದ್ದಾರೆ.

ತೇಜಸ್ವಿಯವರ ಕಥೆಯ ಪಾತ್ರವಾಗಿಬಿಟ್ಟಿದ್ದ ಕರಿಯಪ್ಪ ತನ್ನನ್ನು ಸೃಷ್ಟಿಸಿದ ಲೇಖಕನ ಬದುಕಿನ ವಿಮರ್ಶೆಗೇ ತೊಡಗಿದ್ದ.

 

ಮದುವೆ ತೇಜಸ್ವಿದು, ಕರೆಯುತ್ತಿರುವವರು ಕುವೆಂಪು

 

‍ಲೇಖಕರು G

7 September, 2011

9 Comments

  1. Arvind Subbanna

    eShtu paathragaLige thannannu sRuShtisidhavanannE viMarshisuva avakaasha dhoreyuththadhe? thEjasviyavaru kariyappanige kotta swaathamthrya nijakkU avisMaraNIya.

  2. ಸಿ ಪಿ ನಾಗರಾಜ

    ಬಿರ್ಯಾನಿ ಕರಿಯಪ್ಪನವರ ಮಾತುಗಳನ್ನು ಕೇಳುತ್ತಿದ್ದಂತೆಯೇ ಮೈನವಿರೇಳಿತು . ನಮ್ಮ ಮೆಚ್ಚುಗೆಗೆ ಪಾತ್ರನಾಗಿರುವ ಬರಹಗಾರನ ಜೀವನದ ಬಗೆಗಿನ ಹಲವಾರು ವಿಷಯಗಳನ್ನು ತಿಳಿದಂತೆಲ್ಲಾ , ಮತ್ತಷ್ಟು ಆತನ ಬಗ್ಗೆ ನಮ್ಮ ಮೆಚ್ಚುಗೆ ಹೆಚ್ಚಾಗುತ್ತದೆಯೆಂದರೆ , ” ಬರಹಕ್ಕಿಂತ ಬದುಕು ದೊಡ್ಡದು ” ಎಂಬ ಮಾತು ನಿಜವಾಗುತ್ತದೆ . ಸಿ ಪಿ ನಾಗರಾಜ ಬೆಂಗಳೂರು .

  3. prasadraxidi

    Arvind
    adu thesviyavru kotta swathantryavoo alla kariyappa padedaddoo alla, adu avrellarallru badukida- badukutthiruva reethi. tejasvi yaavtthoo tannannaagali ithararannagali mukhyaru- amukhyaru endu vibhaagisi nodale illa adrindaagiye avaru anekarigintha bhinnavaagi- aaptaraaguttare

  4. vidya

    biriyani kariyappananta anekha paatragalu tejasvi bdukinalli haasuhokkagive.

  5. Harish Kera

    ಪ್ರಸಾದ್,
    ನಿಮ್ಮ ನೆನಪುಗಳು ಸಂದರವಾಗಿ ಮೂಡಿ ಬರುತ್ತಿವೆ. ತೇಜಸ್ವಿ ಯಾರ್ಯಾರ ಮನದ ಮೂಸೆಯಲ್ಲಿ ಹೇಗೆ ಹೇಗೆ ಕರಗಿ ಮರು ಹುಟ್ಟಿ ಬರುತ್ತಿದ್ದಾರೆ ಎಂದು ಊಹಿಸಿಕೊಂಡೇ ವಿಸ್ಮಯವಾಗುತ್ತದೆ.
    – ಹರೀಶ್ ಕೇರ

  6. santhosh tarikere

    biriyani kariyaapa ge jai….

  7. Nagesh. KM

    chennagide sir dayavittu munduvarisi nillisabedi

  8. Avinash

    ತೇಜಸ್ವಿ ಯವರು ತಮ್ಮ ‘ಪರಿಸರದ ಕಥೆ ‘ ಪುಸ್ತಕದ್ದಲ್ಲಿ ಕರಿಯಪ್ಪನವರ ಬಗ್ಗೆ ಪ್ರಸ್ತಾಪಿಸಿದ್ದಾರೆ

  9. Deepak

    Nijakku Tejaswi mattu Kuvempu bahala doddavaru karan

    avaru “Badukanna baredaru mattu baredante badukidaru”

    Samanya vagi baduki aasamanyavad kelasa madid mahanubavaru.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading