ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ‘ತೇಜಸ್ವಿ ನಂ ನೆಂಟ್ರು ಗೊತ್ತಾ’..

ತೇಜಸ್ವಿ ಕಥನ ೧೩ ಪ್ರಸಾದ್ ರಕ್ಷಿದಿ

ಅನುಮಾನಂ ಪೆದ್ದರೋಗಂ.. ಸುಮ್ನೆ ಬಾರಯ್ಯ ಎಂದು ಹೋಟೆಲ್ ಬಿಲ್ಲನ್ನು ಅವನೇ ಪಾವತಿಸಿ, ನನ್ನನ್ನು ಕಾಫಿಯ ಋಣದಲ್ಲಿ ಸಿಲುಕಿಸಿ ಮತ್ತೆ ಬೈಕನ್ನೇರಿದ, ಅನಿವಾರ್ಯವಾಗಿ ಅವನೊಡನೆ ಹೊರಟೆ. ಬೈಕು ‘ನಿರುತ್ತರ’ ದತ್ತ ಸಾಗಿತು.

ನಾವು ಹೋದಾಗ ತೇಜಸ್ವಿ ಮನೆಯಲ್ಲೇ ಇದ್ದರು. ಮನೆಯವರೆಲ್ಲ ಮೈಸೂರಿಗೆ ಹೋಗಿದ್ದಾರೆಂದು, ಸಧ್ಯಕ್ಕೆ ತಾನೊಬ್ಬನೇ ಇದ್ದೇನೆಂದು ತಿಳಿಸಿದರು. ಊಟಕ್ಕೆ ಏನು ಮಾಡ್ತೀರಿ? ಎಂದದಕ್ಕೆ. ಅನ್ನವನ್ನು ಮಾಡಿಕೊಳ್ಳುತ್ತೇನೆಂದೂ, ಒಂದು ವಾರಕ್ಕಾಗುವಷ್ಟು ಸಾರನ್ನು ರಾಜೇಶ್ವರಿ ಮಾಡಿಟ್ಟು ಹೋಗಿದ್ದಾರೆಂದೂ ಹೇಳಿ ಅದಕ್ಕೆ ದಿನಾ ಒಂದಿಷ್ಟು ಉಪ್ಪು- ನೀರು, ಏನು ಬೇಕೋ ಅದನ್ನು ಹಾಕಿ ಕುದಿಸುತ್ತಾ ಇದ್ದರೆ ರಾಜೇಶ್ವರಿಯವರು ಬರುವವರೆಗೂ ಎನೂ ತೊಂದರೆ ಇಲ್ಲವೆಂದು.. ಮುಂದೆ ಅವರೇ ಬರೆದ ಪಾಕಕ್ರಾಂತಿಯ ಕೆಲವು ವಿವರಗಳನ್ನು ನೀಡಿದರು.

ಮಾತು ಮುಂದುವರೆದಂತೆ ‘ಹೇಗಿದೆ ನಿಮ್ಮ ರಂಗ ಚಟುವಟಿಕೆ’ ಎಂದು ನನ್ನಲ್ಲಿ ವಿಚಾರಿಸಿಕೊಂಡರು. ಹಾಗೇ ಮಾತು ‘ ಮೈಸೂರಿನ ರಂಗಾಯಣ’ದತ್ತ ತಿರುಗಿತು. ಆಗಿನ್ನೂ ಬಿ.ವಿ.ಕಾರಂತರೇ ರಂಗಾಯಣದ ನಿರ್ದೇಶಕರಾಗಿದ್ದರು. ಅಲ್ಲಾ ಕಣ್ರಿ ಅವತ್ತು ನಿಮ್ಮಲ್ಲಿ ರಂಗ ಶಿಬಿರ ಮಾಡೋಕೆ ಬಂದಿದ್ದರಲ್ಲ ಹುಡುಗರು (ಮಂಡ್ಯ ರಮೇಶ್ ಮತ್ತು ಕೃಷ್ಣಕುಮಾರ್ ನಾರ್ಣಕಜೆ) ಅವ್ರಿನ್ನೂ ಅಲ್ಲೇ ಇದ್ದಾರೇನ್ರಿ? ಎಂದರು.

ಅಲ್ಲೇ ಇದ್ದಾರೆ ಸಾರ್ ಎಂದೆ.

ಆ ಕಾರಂತ ಎಲ್ಲ ಸರಿ ಆದ್ರೆ ಆಡಳಿತನೇ ಸರಿಯಾಗಿ ಗೊತ್ತಿಲ್ಲ ಕಣ್ರಿ.. ಪಾಪ ಈ ಹುಡುಗರ ಭವಿಷ್ಯ ಏನು, ನಾಟಕನೇ ನಂಬ್ಕೊಂಡು ಮುಂದೆ ಏನ್ಮಾಡ್ತಾರೆ. ಎಲ್ಲ ಅವ್ಯವಸ್ಥೆ ಆಗಿದಿಯಂತಲ್ರಿ, ಇದನ್ನೆಲ್ಲ ಸರಿಯಾಗಿ ಯೋಚ್ನೆ ಮಾಡ್ದೇ ಮಾಡ್ಬಾರ್ದು, ಎಲ್ಲಾ ಬೇಜವಾಬ್ದಾರಿ ಅನ್ಸುತ್ತೆ, ನಂಗೆ ಆ ಹುಡುಗರನ್ನ ಯೋಚೆ ಮಾಡಿದ್ರೆ ಬೇಜಾರಾಗುತ್ತೆ ಕಣ್ರಿ ಎಂದರು.  ರಂಗಾಯಣದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅವರು ಅಂದೇ ಊಹಿಸಿದ್ದರು. ನಮ್ಮ ಮಾತು ಹೀಗೇ ಮುಂದುವರಿಯಿತು.  ಕೊನೆಗೆ ತೇಜಸ್ವಿಯರಿಗೆ ಮಾತು ಸಾಕೆನಿಸಿ

ಮತ್ತೇನು ಈಕಡೆ ಬಂದ್ರಿ ಎಂದು ಮುಕ್ತಾಯದ ಸೂಚನೆ ನೀಡಿದರು.

ನಾವು ಇಷ್ಟೆಲ್ಲ ಮಾತನಾಡಿದರೂ ನಾರಾಯಣ ಗೌಡ ಮಾತ್ರ ಮೈಯೆಲ್ಲ ಮುಳ್ಳಾಗಿಸಿಕೊಂಡು ಹಲಸಿನಕಾಯಿಯಂತೆ ಕೂತಿದ್ದ.

ಆಗ ನಾನು ನಿರ್ವಾಹವಿಲ್ಲದೆ ನಾನು ಇವತ್ತು ಇಲ್ಲಿಗೆ ಬರುವ ಉದ್ದೇಶವಿರಲಿಲ್ಲವೆಂದೂ, ಈ ನಾರಾಯಣಗೌಡ ನನ್ನನ್ನು ಕರೆದುಕೊಂಡು ಬಂದನೆಂದೂ ಹೇಳಿದೆ.

ಆಗ ನಾರಾಯಣಗೌಡ ಅನಿವಾರ್ಯವೆಂಬಂತೆ ಬಾಯಿ ತೆರೆದ ಅಣ್ಣಾ ನಿಮ್ಮಂತೋರೆಲ್ಲ ಕಷ್ಟಪಟ್ಟು ನಮ್ಮ ಈ ಹಾಳುಬಿದ್ದ ಮೂಡಿಗೆರೆಗೆ ಒಂದು ಕೃಷಿ ಬ್ಯಾಂಕು ತಂದ್ರಿ, ಅದ್ರಿಂದ ಇದು ಒಂದು ಊರು ಅಂತ ಆಯ್ತು. ಇಂದ್ರಾಗಾಂಧಿ ಬ್ಯಾಂಕನ್ನೆಲ್ಲ ರಾಷ್ಟ್ರೀಕರಣ ಮಾಡಿದ್ರಂದ ನಮ್ಮಂತೋರೆಲ್ಲ ಬ್ಯಾಂಕೊಳಗೆ ಕಾಲಿಡೋಹಂಗಾಯ್ತು, ಇಲ್ಲಾಂದ್ರೆ ಮೂಡಿಗೆರೇಲಿ ಬರೀ ಹತ್ತು ಹನ್ನೆರಡು ಜನರಿಗೆ ಮಾತ್ರ ಬ್ಯಾಂಕೊಳಗೆ ನುಗ್ಗೋಕೆ ಅವಕಾಶ ಇತ್ತು. ಆದ್ರೆ ಈಗ ನೀವೆಲ್ಲ ಇತ್ತೀಚೆಗೆ ಆ ಕಡೆಗೆ ಬರೋದು ಕಡಿಮೆ ಮಾಡಿದ್ರಿ. ಇವ್ರುನೆಲ್ಲಾ ವಿಚಾರಿಸ್ಕೊಳಣಾ ಅಂದ್ರೆ ರೈತಸಂಘನೂ ಇಲ್ಲ ಅದ್ಕೇ ಈ ಬ್ಯಾಂಕಿನೋರೆಲ್ಲ ಹಿಂಗ್ ಹೆಚ್ಚಿಕೊಂಡಿದ್ದಾರೆ. ನಾನೇನೋ ನ್ಯಾಯ ಮಾತಾಡಕ್ಕೋದ್ರೆ ಬ್ಯಾಂಕ್ ಮೇನೇಜರ್ ನಿನ್ ಮ್ಯಾಲೆ ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅಂದ. ಅಲ್ಲೇ ಇದ್ದ ಚಂದ್ರೇಗೌಡ್ರು ಮತ್ ಆ ಮಕಾನಳ್ಳಿ ಕಡೆಯೋರೆಲ್ಲಾ ಬ್ಯಾಂಕಿನ ಪರನೇ ಮಾತಾಡಿದ್ರು, ನೀವಿಲ್ದೇ ಹೋಗಿದ್ರೆ ಈ ಮೂಡಿಗೆರೆಗೆ ಕೃಷಿ ಬ್ಯಾಂಕೆಲ್ಲಿ ಬರ್ತಿತ್ತಣ್ಣ ಎಂದು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಹಲವು ವಿಷಯಗಳನ್ನೆಲ್ಲಾ ಜೋಡಿಸಿ ಹೇಳುತ್ತಾ, ತೇಜಸ್ವಿಯವರನ್ನು ಯದ್ವಾತದ್ವಾ ಹೊಗಳತೊಡಗಿದ.

ಅದೇನು ಹೇಳ್ಬೇಕೋ ಹೇಳು ಸುಮ್ನೆ ಸುತ್ತಿ ಬಳಸಿ ಮಾತಾಡ್ಬೇಡ ಎಂದರು ತೇಜಸ್ವಿ. ಧ್ವನಿಯಲ್ಲಿ ಸಣ್ಣ ಅಸಹನೆಯಿತ್ತು.

ಚಿತ್ರ ಕೃಪೆ: ಆಯಾಮ

ಅದೇ ಅಣ್ಣ ಬ್ಯಾಂಕಲ್ಲಿ ಸ್ವಲ್ಪ ಲೋನ್ ಬಾಕಿ ಆಗಿತ್ತು. ಹಂಗಂತ ಇಡೀ ಬ್ಯಾಂಕಿಗೆ ನಾನೊಬ್ನೇ ಸುಸ್ತಿದಾರ ಅನ್ನೋತರ ಎಲ್ರ ಎದ್ರಿಗೆ, ಮ್ಯಾನೇಜರು, ಕೋರ್ಟು ಕಛೇರಿ, ಜಪ್ತಿ, ಅಂದ್ರೆ, ಹೆಂಗ್ಹೇಳಿ?. ನಂಗೂ ಸಿಟ್ಬಂತು. ನಾನೂ ಒಂದ್ಸೊಲ್ಪ ರಾಂಗಾದೆ. ಅಷ್ಟಕ್ಕೇ ಪೋಲಿಸಿಗೆ ಫೋನ್ ಮಾಡ್ತೀನಿ ಅಂದ್ರು. ನಾನೂ ‘ಹಂಗಾದ್ರೆ ನನ್ ಮನೆ ಜಪ್ತಿ ಮಾಡೇ ತಗಳಿ ನಿಮ್ ಹಣವ’ ಅಂದೆ. ಅಲ್ಲಾ ಅಲ್ಲಿದ್ದೋರೆಲ್ಲಾ ನನ್ನಂಗೆ ಸುಸ್ತಿದಾರ್ರೇ, ಅವ್ರೆಲ್ಲಾ ನಂದೇ ತಪ್ಪು ಅನ್ನೋತರ ಮಾತಾಡದ, ಅದ್ಕೇ ನೀವೊಂಸೊಲ್ಪ ಬುದ್ದಿ ಹೇಳಿ ಆ ಮ್ಯಾನೇಜರಿಗೆ ಅವುಂದ್ಯಾಕೋ ಅತಿಯಾಯ್ತು ಎಂದ. ಮ್ಯಾನೇಜರ್ ಬಗ್ಗೆ ಹೇಳುವಾಗ ನಾರಾಯಣಗೌಡನ ಮಾತು ಅವನ ಸಿಟ್ಟಿಗೆ ಅನುಗುಣವಾಗಿ ಏಕವಚನ ಬಹುವಚನಗಳ ಮಧ್ಯೆ ಹೊಯ್ದಾಡುತ್ತಿತ್ತು.

ಅಲ್ಲ ಕಣಯ್ಯ ನಂಗೀಗ ಅರ್ಥ ಆಯ್ತು ಆ ಮೇನೇಜರ್ ನಂಗೂ ಫೋನ್ ಮಾಡಿದ್ರು, ನೀನು ಅವ್ರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡ್ತೀನಿ ಅಂದ್ಯಂತೆ, ‘ತೇಜಸ್ವಿ ನಂ ನೆಂಟ್ರು ಗೊತ್ತಾ’ ಅಂತ ಹೆದರ್ಸೋತರ ಹೇಳಿದಿಯಂತೆ. ನಾನೇ ಹೇಳ್ದೆ ನನ್ನ ಹೆಸರು ಹೇಳ್ಕೊಂಡು ಏನಾದರೂ ಬೇಡದ್ದು ಮಾಡಿದ್ರೆ ಫೋಲಿಸಿಗೆ ಕೊಡಿ ಅಂತ, ನಿಂಗೇನಾದ್ರು ತಲೆಗಿಲೆಕೆಟ್ಟಿದಿಯೇನಯ್ಯ, ಬ್ಯಾಂಕಿನೋರು ಸಾಲ ಕೊಡಬೇಕಾದ್ರೆ ನಿನ್ನತ್ರ ಎಲ್ಲಾದಕ್ಕೂ ಸೈನ್ ತಗೊಂಡೇ ಅಲ್ವಾ ಕೊಟ್ಟಿರೋದು ಸುಮ್ನೆ ಗಲಾಟೆಮಾಡಿ ಒಂದೆರಡು ಕೇಸು ಮೈಮೇಲೆ ಎಳ್ಕೊಳ್ತೀಯಾ ಅಷ್ಟೆ, ಏನಾದ್ರೂ ಮಾಡಿ ಸಾಲ ತಿರ್ಸೋಕ್ಕಾಗುತ್ತೋ ನೋಡು ಎಂದು ಹೇಳಿ, ಸ್ವಲ್ಪ ಯೋಚಿಸಿ, ಈ ದೇಶದಲ್ಲಿ ರೈತ ಒಂದುಸಾರಿ ಸಾಲಮಾಡಿದ್ರೆ ಅದು ತೀರಿದ್ದೇ ಕಾಣೆ, ಅದ್ಯಾಕಯ್ಯ ಅಷ್ಟೊಂದು ಸಾಲ ಮಾಡಿದ್ದೀಯಂತೆ ಎಂದರು.

ಅಣ್ಣಾ ಅದೊಂದು ಕತೆ. ಈಗ ಮೂರನೇ ವರ್ಷದಲ್ಲಿ ಒಂದೂವರೆ ಲಕ್ಷ ಲೋನ್ ಮಾಡಿ ಹೊಳೆಪಕ್ಕದ ನಾಕೆಕರೆಗೆ ಪಚ್ಚಬಾಳೆ ಹಾಕಿದ್ದೆ, ಎಂತಾ ಚನ್ನಾಗಿ ಬಂದಿತ್ತೂ ಅಂತೀರಿ, ಹಂಗೇ ಮೈನ್ ರೋಡಿಗೆ ಕಾಣದಲ್ಲ, ಎಲ್ಲಾರೂ ಕೇಳೋರೆ ‘ಅದುಯಾರ್ದು ಮಾರಾಯ್ರೆ ಪಚ್ಚಬಾಳೆ, ಒಂದೊಂದು ಗೊನೆ ಏನಿಲ್ಲ ಅಂದ್ರೂ ಇಪ್ಪತೈದ್ ಕೇಜಿ ಮೇಲೆ ಬೀಳುತ್ತೆ’ ಅನ್ನೋರು. ಹಂಗ್ ಬಂದಿತ್ತು ಬಾಳೆ. ನೋಡೀ ನೋಡೀ ಜನಗಳ್ದೇ ಕಣ್ಣಾಯ್ತೋ ಏನೋ, ಆ ವರ್ಷ ಡಿಸೆಂಬರಲ್ಲಿ ಬಿತ್ತಲ್ಲ ಚಳಿ, ಒಂದೇವಾರದ ಚಳೀಗೆ ಬಾಳೆ ಎಲ್ಲಾ ಕೆಂಪಾಗಿ ಬತ್ತಿದಂಗಾಯ್ತು, ಆ ಮೇಲೆ ಏನೆಲ್ಲಾ ಮಾಡ್ದೆ, ಕೊನೀಗ್ ನೋಡಿದ್ರೆ ಗೊನೆಗಳೆಲ್ಲ ಪೀಚಾಗಿ ಏಳ್ ಕೇಜಿ ಎಂಟು ಕೇಜಿ ಮೇಲ್ ಬರ್ಲೇ ಇಲ್ಲ. ಪೂರಾ ಲಾಸಾಯ್ತು. ಇನ್ನು ಬ್ಯಾಂಕಿನ ಕಂತೆಲ್ಲಿ ಕಟ್ಟಲಿ ಎಂದ.

ಚಳಿ ತೀರಾ ಹೆಚ್ಚಾದರೆ ನಮ್ಮಲ್ಲಿರುವ ಅನೇಕ ಜಾತಿಯ ಸಸ್ಯಗಳ ಬೇರುಗಳು ಕೆಲಸವನ್ನೇ ನಿಲ್ಲಿಸಿಬಿಡುವುದರಿಂದ ಈರೀತಿ ಆಗುತ್ತದೆಂದೂ, ಇದು ಯಾರ ಕಣ್ಣಿನ ಪ್ರಭಾವವೂ ಅಲ್ಲವೆಂದೂ ತೇಜಸ್ವಿ ವಿವರಿಸಿದರು.

ಆ ವರ್ಷ ನಾನೂ ಕೂಡಾ ಸ್ವಲ್ಪ ಪಚ್ಚಬಾಳೆ ಬೆಳೆದಿದ್ದೆನೆಂದೂ, ಆ ಸಂದರ್ಭದಲ್ಲಿ ಬಾಳೆಗೆ ಚೆನ್ನಾಗಿ ನೀರು ಹಾಯಿಸಿದರೆ ಚಳಿಯ ಪ್ರಭಾವ ಕಮ್ಮಿಯಾಗುತ್ತದೆಂದೂ ನನಗೆ ಹಿರಿಯರೊಬ್ಬರು ಹೇಳಿದ್ದರು. ಅದರಂತೆ ನಾನೂ ಬಾಳೆಗೆ ಏಳೆಂಟು ದಿನಗಳ ಕಾಲ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಮಾಡಿಸಿದ್ದೆ. ಇದರಿಂದ ಬಾಳೆಗೆ ಆದಹಾನಿ ಬಹಳಷ್ಟು ಕಡಿಮೆಯಾಗಿತ್ತು. ಈ ವಿಚಾರವನ್ನು ನಾನು ಅವರಿಗೆ ತಿಳಿಸಿದೆ.

ಹೌದು ಅದೂ ಒಂದು ಪರಿಣಾಮಕಾರಿ ವಿಧಾನವೇ ಎಂದರು.

ಅಣ್ಣ ಅಲ್ಲಿಗೇ ನಿಂತಿಲ್ಲ ನನ್ ಕತೆ, ಹೆಂಗೂ ಇನ್ನು ಈ ಬಾಳೆಕಾಯಿ ಮಾರಿ ಬ್ಯಾಂಕ್ ಸಾಲ ತೀರ್ಸದು ಕನಸು ಅಂದ್ಕಂಡು ಇನ್ನೂ ಒಂದು ಲಕ್ಷ ಸಾಲ ತಗಂಡು, ಸಕಲೇಶಪುರದಲ್ಲಿ ಕೃಷ್ಣ ಅಂತಿದ್ದಾನೆ ನನ್ ಫ್ರೆಂಡು, ಚಕ್ಕೆ ವ್ಯಾಪಾರ ಮಾಡ್ತಾನೆ. ಅವುನು ಜೊತೆ ಪಾರ್ಟನರ್ ಆಗಿ ಸುಂಡೆಕೆರೆ ಹತ್ರ ಒಂದು ಸಾಬರ ಎಸ್ಟೇಟಿನ ಚಕ್ಕೆ ಕಂಟ್ರಾಕ್ಟ್ ಮಾಡುದ್ವು, ಎಲ್ಲಾ ಸರಿಯಾಗಿದ್ರೆ ನಾಕ್-ನಾಕ್ ಲಕ್ಷ ಲಾಭ ಉಳ್ದಿರೋದು. ಚಕ್ಕೆ ಎಲ್ಲಾ ಕೆತ್ತಿ ಇನ್ನೇನು ಪಮರ್ಿಟ್ ಸಿಕ್ಕೋ ಹೊತ್ತಿಗೆ ಅದೇನೋ ಕಾಂಪ್ಲಿಕೇಷನ್ ಆಗಿ ಚಕ್ಕೆ ಎಲ್ಲಾ ಪಾರೆಸ್ಟ್ನೋರು ಸೀಜ್ ಮಾಡಿದ್ರು. ಅದೆಲ್ಲಾ ಸರಿಮಾಡಿ ನಾವು ಬಚಾವಾಗಿ ಚಕ್ಕೆ ಮಾರೋಹೊತ್ತಿಗೆ ಅಲ್ಲಿಗಲ್ಲಿಗೆ ಸರಿಯಾಗಿ, ಕೈ ಕಾಲಿಯಾಯ್ತಣ್ಣ. ಅಲ್ಲಾ ಆ ಬ್ಯಾಂಕ್ ಮ್ಯಾನೇಜರು ಎಲ್ರ ಎದುರಿಗೆ ನನ್ ಮರ್ಯಾದಿ ಕಳುದ್ರೆ ಸಿಟ್ ಬರಲ್ವಣ್ಣ, ಅದ್ಕೇ ನಿಮ್ ಹೆಸರು ಹೇಳ್ದೆ, ಅವಾಗ ಸ್ವಲ್ಪ ಸುಮ್ನಾದ ಎಂದು ಕರುಣಾಜನಕವಾಗಿ ತನ್ನ ಕತೆಯನ್ನು ಹೇಳಿದ.

ಸರಿ ಮಾರಾಯ ಮತ್ತೀಗ ಸಾಲಕ್ಕೆಂತ ಮಾಡ್ತೀಯಾ ಎಂದು ತೇಜಸ್ವಿ.

ಇನ್ನೆಂತದು ಮಾಡ್ಳಿ, ನನ್ನ ಹೊಳೆ ಸಾಲು ಗದ್ದೆ ಮೇಲೆ ತುಂಬಾ ಜನಕ್ಕೆಕಣ್ಣಿರಾದು, ಅದರಲ್ಲೇ ಎರಡು ಎಕರೆ ಮಾರ್ಬೇಕು ಅಂತಿದ್ದೀನಿ. ಅಲ್ಲಿವರ್ಗೂ ಸ್ವಲ್ಪ ಸುಮ್ನಿರೋಕೇ ಆ ಮ್ಯಾನೇಜರಿಗೆ ಹೇಳಿ ಎಂದ.

ಸರಿ ಆದ್ರೆ ಪದೇ ಪದೇ ನನ್ನ ಹೆಸರು ಹೇಳಕೊಂಡು ತಿರುಗ್ಬೇಡಾ, ನೀವೆಲ್ಲ ಒಂದು ಶಿಸ್ತು ಕಲೀಬೇಕು ಕಣ್ರಯ್ಯ ಇಲ್ಲಾಂದರೆ ಯಾರೂ ನಮ್ಮ ಸಹಾಯಕ್ಕೆ ಬರೋದೇ ಇಲ್ಲ, ಸಕರ್ಾರವಂತೋ ಬರೋದೇ ಇಲ್ಲ, ತಿಳ್ಕಳಿ ಎಂದರು.

ನಂತರ ಅವರೇ ಒಂದಷ್ಟು ಕಾಫಿ ಮಾಡಿ ತಂದು ಕೊಟ್ಟರು.  ಕಾಫಿ ಕುಡಿದು ನಾವು ಹೊರಡುವಾಗ ನಾರಾಯಣ ಗೌಡನಿಗೆ. ಹೆಂಗಾದ್ರು ಒಂದ್ಸಾರಿ ಬಚಾವಾಗೋ ದಾರಿ ಹುಡ್ಕು ಎಂದರು.

ಆಗಲೇ ಗಂಟೆ ಆರಾಗುತ್ತ ಬಂದಿತ್ತು. ನಾರಾಯಣ ಗೌಡ ನನಗೆ ಕೊಟ್ಟ ಮಾತಿನಂತೆ ನನ್ನನ್ನು ಬೈಕಿನಲ್ಲಿ ಹೇರಿಕೊಂಡು ಸಕಲೇಶಪುರದ ಹಾದಿ ಹಿಡಿದ. ಹಾನುಬಾಳಿಗೆ ಬರುತ್ತಿದ್ದಂತೆ ಇಲ್ಲೇ ‘ಸಾಯಂಕಾಲದ ಕಾರ್ಯಕ್ರಮ’ ಮುಗಿಸೋಣವೆಂದೂ, ನಿನ್ನನ್ನು ಊರಿಗೆಬಿಟ್ಟು ತಾನು ಸಕಲೇಶಪುರಕ್ಕೆ ಬದಲಾಗಿ ಹೆಗ್ಗದ್ದೆಗೆ ನೆಂಟರಮನೆಗೆ ಹೋಗುವುದಾಗಿಯೂ ತಿಳಿಸಿದ. ಸಾಯಂಕಾಲದ ಕಾರ್ಯಕ್ರಮಕ್ಕೆ ಕುಳಿತಿದ್ದಾಗ ನಾರಾಯಣ ಗೌಡನಿಂದ ತಿಳಿದ ಸತ್ಯವೆಂದರೆ ಚಕ್ಕೆ ವ್ಯಾಪಾರದಲ್ಲಿ ಆದನಷ್ಟವನ್ನು ತುಂಬಿಕೊಳ್ಳಲು ಅವನು ಇಸ್ಪೀಟಾಡಲು ಪ್ರಾರಂಭಿಸಿ ಈಗ ಅದೇ ಚಟವಾಗಿ ಬಿಟ್ಟಿತ್ತು. ಎಲ್ಲೆಲ್ಲಿ ‘ರಮ್ಮಿ ನಾಕೌಟ್’ ಜಾತ್ರೆಗಳಾಗಲೀ ಅಲ್ಲೆಲ್ಲ ಹೋಗಿ ಇಸ್ಪೀಟಾಡುತ್ತಿದ್ದ. ಮತ್ತಷ್ಟು ಹಣವನ್ನು ಕಳೆದುಕೊಂಡಿದ್ದ. ಇದರಿಂದ ಅವನ ಆಥರ್ಿಕ ಪರಿಸ್ಥಿತಿ ತುಂಬ ಹದಗೆಟ್ಟು ಹೋಗಿತ್ತು. ಅವನು ಹತಾಶನಾದಂತಿದ್ದ. ಏನೇನೋ ಸುಳ್ಳುಗಳನ್ನು ಹೇಳುತ್ತಾ ಎಲ್ಲರನ್ನೂ ನಂಬಿಸಲು ಪ್ರಯತ್ನಿಸುತ್ತಿದ್ದ.

ಇದನ್ನು ಊಹಿಸಿಯೇ ತೇಜಸ್ವಿಯವರು ಶಿಸ್ತು ಕಲೀಬೇಕು ಕಣ್ರಯ್ಯ ಎಂದಿರಬೇಕು.

‍ಲೇಖಕರು G

31 May, 2011

1 Comment

  1. ಸಿ ಪಿ ನಾಗರಾಜ

    ನಾರಾಯಣಗೌಡ ಮೊದಲು ಬಾಳೆ ಬೆಳೆದ , ಅದರಲ್ಲಾದ ಹಾನಿ ತುಂಬಿಕೊಳ್ಳಲು ಚೆಕ್ಕೆ ವ್ಯಾಪಾರ ಮಾಡಿದ , ಅದರಲ್ಲಿ ಕೈಸುಟ್ಕೊಂಡು ಇಸ್ಪೀಟು ಆಟಕ್ಕೆ ಇಳಿದ . ಕೊನೆಗೆ ಮಾಡಿದ್ದ ಸಾಲದ ತೀರಿಸುವುದಕ್ಕೆ ಜಮೀನು ಮಾರಿದ . ವ್ಯವಸಾಯವನ್ನೇ ನಂಬಿ ನೆಲಕಚ್ಚುವ ರೈತರೆಲ್ಲರ ಬದುಕಿನ ಕತೆ ಒಂದಲ್ಲ ಒಂದು ಬಗೆಯಲ್ಲಿ ಇದೇ ಹಾದಿಯಲ್ಲಿರುತ್ತದೆ . ಆದ್ದರಿಂದಲೇ ತೇಜಸ್ವಿ ಅವರ ಬಾಯಲ್ಲಿ ” ಈ ದೇಶದಲ್ಲಿ ರೈತ ಒಂದುಸಾರಿ ಸಾಲಮಾಡಿದ್ರೆ ಅದು ತೀರಿದ್ದೇ ಕಾಣೆ ” ಎಂಬ ಸಂಕಟದ ನುಡಿಗಳು ಬಂದಿವೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading