ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ..

ತೇಜಸ್ವಿ ಕಥನ-೧೦

ಪ್ರಸಾದ್ ರಕ್ಷಿದಿ

ನಾವು ಪ್ರಥಮ ಬಾರಿಗೆ ಅವರನ್ನು ನಮ್ಮ ರಂಗತರಬೇತಿ ಶಿಬಿರಕ್ಕೆ ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಲು ಹೋಗುವಾಗ, ಅವರಲ್ಲಿ ಮಾತನಾಡುವುದು ಹೇಗೆಂದು ಹೆದರಿಕೊಂಡಿದ್ದೆವು. ತೇಜಸ್ವಿಯೆಂದರೆ ತುಂಬಾ ಹಾಸ್ಯಪ್ರಜ್ಞೆಯಿರುವ ಮನುಷ್ಯ, ಜೊತೆಯಲ್ಲಿ ದೂರ್ವಾಸಮುನಿ ಕೂಡಾ, ಇನ್ನು ಕೆಲವು ಬಾರಿ ಏನೂ ಪ್ರತಿಕ್ರಿಯೆ ನೀಡದೇ ತಣ್ಣಗೆ ನಿರಾಕರಿಸಿಬಿಡುತ್ತಾರೆ, ಅವರು ಒಮ್ಮೆ ಏನನ್ನಾದರೂ ನಿರ್ಧರಿಸಿದ ಮೇಲೆ ಮತ್ತೆ ಅವರ ತೀರ್ಮಾನವನ್ನು ಬದಲಾಯಿಸಲು ಒಪ್ಪುವವರೇ ಅಲ್ಲ. ಹೀಗೆ ಬೇರೆ ಬೇರೆ ರೀತಿಯಲ್ಲಿ ಅವರ ಗುಣ ದೋಷಗಳ ಮಾಹಿತಿಗಳು- ಹಿಂಡಿನಿಂದ ತಪ್ಪಿಸಿಕೊಂಡುಬಂದು ಊರಪಕ್ಕದಲ್ಲಿ ಸುಳಿದಾಡುತ್ತಿರುವ ಕಾಡಾನೆಯ ಸುದ್ದಿಯಂತೆ ಹರಿದಾಡುತ್ತಿದ್ದವು. ಆದ್ದರಿಂದಲೇ ಅವರ ಸುತ್ತ ಅನೇಕ ಕತೆಗಳು ಹುಟ್ಟಿಕೊಳ್ಳುತ್ತಿದ್ದವು. (ಇದಕ್ಕೆ ಅವರ ಅನೇಕ ಬರಹಗಳೂ ಪುಷ್ಟಿ ನೀಡುತ್ತಿವೆ) ಆ ಕತೆಗಳೆಲ್ಲ ಹೇಗಿವೆಯೆಂದರೆ ಅವುಗಳನ್ನು ಯಾರು ಬೇಕಾದರೂ ಇದು ನನ್ನೊಡನೆಯೇ ನಡೆದ ಘಟನೆ ಎಂದು ವಿವರಿಸಬಹುದು. ಅಂತವುಗಳಲ್ಲಿ ಇದೊಂದು ಉದಾಹರಣೆ.

ಒಂದುದಿನ ತೇಜಸ್ವಿಯವರು ಸ್ಕೂಟರ್ನಲ್ಲಿ ಎಲ್ಲಿಗೋ ಹೋಗುತ್ತಿದ್ದರಂತೆ. ಹಿಂದಿನಿಂದ ಎರಡು ಮೂರು ಬೈಕುಗಳಲ್ಲಿ ಐದಾರು ಜನರು ಅವರನ್ನು ಅಟ್ಟಿಸಿಕೊಂಡು ಬರುವವರಂತೆ ಬಂದು ಮುಂದೆ ಸಾಗಿ, ತಿರುಗಿ ಎದುರಿಗೆ ಬಂದು ಸಾರ್…  ಸಾರ್ ಎಂದು ನಿಲ್ಲಿಸಿದರಂತೆ. ಏನೋ ಅನಾಹುತ ಆಗಿರಬೇಕು ಎಂಬಂತೆ ಸ್ಕೂಟರ್ ನಿಲ್ಲಿಸಿ ತೇಜಸ್ವಿ ಕೆಳಗಿಳಿದು, ಏನ್ರಿ ಎಂದರಂತೆ.

ಅದಕ್ಕೆ ಆ ಬೈಕ್ ಸವಾರರು, ಏನಿಲ್ಲಾ ಸಾರ್, ನೀವಿಲ್ಲಿ ಹೋಗ್ತಾ ಇರೋದು ಗೊತ್ತಾಯ್ತು..ಹೀಗೇ..ಸುಮ್ನೆ ನಿಮ್ಮುನ್ನ ನೋಡಿ..ಮಾತಾಡ್ಸ್ಕೊಂಡು ಹೋಗಾಣ ಅಂತ ಬಂದ್ವಿ ಎಂದರಂತೆ.

ಕೂಡಲೇ ತೇಜಸ್ವಿ ಅಲ್ಲೇ ಹತ್ತಿರದಲ್ಲಿ ರಸ್ತೆ ರಿಪೇರಿಗೆಂದು ತಂದು ಹಾಕಿದ್ದ ಜಲ್ಲಿ ಗುಡ್ಡೆಯ ಮೇಲೆ ಹತ್ತಿ, ಎರಡೂ ಕೈಗಳನ್ನು ಮೇಲಕ್ಕೆತ್ತಿ ನಿಂತು, ಸರಿಯಾಗಿ ನೋಡ್ಕೊಳ್ರೀ ಎಂದರಂತೆ.

ಬೈಕುಸವಾರರು ತಬ್ಬಿಬ್ಬಾಗಿ ನೋಡುತ್ತಿದ್ದಂತೆ ಸರಿ ನೋಡಿಯಾಯ್ತು ಮಾತಾಡಿನೂ ಆಯ್ತು ಇನ್ನು ಹೋಗಿ ಎಂದುಹೇಳಿ ಸ್ಕೂಟರ್ ಹತ್ತಿ ಹೊರಟೇಬಿಟ್ಟರಂತೆ.

ಈ ಕತೆ ಹಲವು ರೀತಿಗಳಲ್ಲಿ ಪ್ರಚಾರದಲ್ಲಿದೆ.

ಅಂದರೆ ತೇಜಸ್ವಿಯವರಿಗೆ ತನ್ನನ್ನು ಒಂದು ಪ್ರದರ್ಶನದ ವಸ್ತುವಿನಂತೆ ನೋಡಲುಬಂದು ಕಾಲಹರಣ ಮಾಡುವವರನ್ನು ಕಂಡರೆ ಆಗುತ್ತಿರಲಿಲ್ಲ. ಆದರೆ ನಿಜವಾದ ಕಾಳಜಿಗಳಿದ್ದಾಗ ಮತ್ತು ಆ ಕೆಲಸದ ಹಿಂದಿನ ಕಾಳಜಿಗಳು ಅವರಿಗೆ ಒಪ್ಪಿಗೆಯಾದಾಗ ಅವರು ಯಾವಾಗಲೂ ಸಹಾಯ-ಸಹಕಾರಗಳನ್ನು ನೀಡಿದ್ದಾರೆ. ಅದರಲ್ಲೂ ರೈತರ-ಕೃಷಿಕರ ಬಗೆಗಿನ ಕಾರ್ಯಕ್ರಮಗಳಿಗೆ ಆಸಕ್ತಿವಹಿಸಿ ಸಮಯ ಹೊಂದಿಸಿಕೊಂಡು ಭಾಗವಹಿಸಿದ್ದಾರೆ. ಆದರೆ ಅಲ್ಲೂ ಕೂಡಾ ತಮ್ಮ ಅಭಿಪ್ರಾಯವನ್ನು ನಿರ್ಧಾಕ್ಷಿಣ್ಯವಾಗಿ ಹೇಳಿದ್ದಾರೆ. ಹೀಗಾಗಿ ಕೆಲವು ಕಾರ್ಯಕ್ರಮಗಳಲ್ಲಿ ಅದರ ಸಂಘಟಕರಾಗಲೀ, ಭಾಗವಹಿಸಿದವರಾಗಲೀ ಅಂದುಕೊಂಡದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಅವರು ಹೇಳಿದ್ದೂ ಉಂಟು.

++

Courtesy:  Sunil Sachi M J

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ (ತೊಂಬತ್ತರ ದಶಕದ ಪ್ರಾರಂಭದಲ್ಲಿ) ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದಷ್ಟು ಜನ ಆಸಕ್ತರು ಸೇರಿ ಕಾರ್ಯಕ್ರಮ ರೂಪಿಸತೊಡಗಿದರು. ಅವರಲ್ಲಿ ಕೆ.ಪಿ.ಸುರೇಶ, ಜಿ.ಎಸ್. ಉಬರಡ್ಕ, ಶಿವರಾಂ ಪೈಲೂರ್, ಎಂ.ಟಿ.ಶಾಂತಿಮೂಲೆ ಮುಂತಾದವರಿದ್ದರು. ಸುಳ್ಯ ತಾಲ್ಲೂಕಿನ ಕುಕ್ಕುಜಡ್ಕ ಎಂಬ ಊರಿನಲ್ಲಿ ಸಭೆ. ತೇಜಸ್ವಿಯವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. (ತಾರಿಣಿಯವರ ಪತಿ ಚಿದಾನಂದಗೌಡರ ಊರು ಅಲ್ಲೇ ಪಕ್ಕದಲ್ಲಿದೆ).

ಸಭೆಗೆ ತೇಜಸ್ವಿಯವರ ಜೊತೆ ವಿಜ್ಞಾನಿ ಚಂದ್ರಶೇಖರ್, ಪ್ರದೀಪ್ ಕೆಂಜಿಗೆ, ಹಾಗೂ ರಾಜೇಶ್ವರಿ ಬಂದಿದ್ದರು. ಇವರೆಲ್ಲರೂ ಕಾರಿನಲ್ಲಿ ಬಂದಿಳಿದಾಗ ಅತಿಥಿಗಳನ್ನು ಕಂಡು ಸಂತೋಷದ ಜೊತೆಗೆ ‘ಕಾರಿನಲ್ಲಿ ಬಂದಿದ್ದಾರೆ ಖರ್ಚು ಕೊಡದಿದ್ದರೆ ಹೇಗೆ’ ಎಂಬ ಆತಂಕವೂ ಸಂಘಟಕರಿಗೆ ಆಯಿತು.

ಸಾವಯವ ಕೃಷಿಯ ಬಗ್ಗೆ ಅಲ್ಲಿನ ಕೆಲವರಲ್ಲದೆ ಚಂದ್ರಶೇಖರ್ ಅವರೂ ಮಾತನಾಡಿದರು. ನಂತರ ತೇಜಸ್ವಿ ಮಾತನಾಡುತ್ತ, ಆಧುನಿಕ ಕೃಷಿಯ ಮತ್ತು ಆಧುನಿಕ ವಿಜ್ಞಾನದ ಅನಾಹುತಗಳಬಗ್ಗೆ ಎಚ್ಚರಿಕೆಯಿಂದಿರಬೇಕಾದ ನಾವು ವೈಜ್ಞಾನಿಕ ದೃಷ್ಟಿಕೋನವನ್ನೇ ನಿರಾಕರಿಸುವಂತಾಗಬಾರದು, ಕೃಷಿವಿಜ್ಞಾನಿಗಳಿಗಿಂತ ಕೃಷಿಕವಿಜ್ಞಾನಿಯಾಗುವುದು ಮುಖ್ಯ ಎಂದರು.

ಎರೆಹುಳುಗಳಬಗ್ಗೆ ಮಾತನಾಡುತ್ತಾ ‘ನಾವೆಲ್ಲ ಎರೆಹುಳು ರೈತನ ಗೆಳೆಯ ಎಂಬ ಪಾಠವನ್ನು ಓದಿದ್ದೇವೆ. ಈಗ ನೀವೂ ಎರೆಹುಳು ಸಾಕಿ ಎನ್ನುತ್ತಿದ್ದೀರಿ, ನಾನು ತೋಟದಲ್ಲಿ ನೆಡಲು ಒಂದಷ್ಟು ಕಾಫಿ-ಕುಕ್ಕೆಗಿಡಗಳನ್ನು ಮಾಡಿದ್ದೆ (ಕುಕ್ಕೆ ಗಿಡ-ಅಂದರೆ ಪಾಲಿಥೀನ್ ಬ್ಯಾಗ್ನಲ್ಲಿ ಮಾಡಿದ ನರ್ಸರಿ) ಅದರಲ್ಲಿ ಸಾಕಷ್ಟು ಎರೆಹುಳುಗಳಿದ್ದವು. ಅವಿದ್ದರೆ ಒಳ್ಳೆಯದು ಅಂದುಕೊಂಡು ಹಾಗೇ ಬಿಟ್ಟೆ, ಎರೆಹುಳಗಳೆಲ್ಲ ದೊಡ್ಡವಾಗಿ ಕುಕ್ಕೆಯೊಳಗೆ ಮೇಲೆ ಕೆಳಗೆ ಹರಿದಾಡಿ ಮಣ್ಣೆಲ್ಲ ಸಡಿಲಾಗಿ ಹೋಯಿತು, ಗಿಡಗಳೆಲ್ಲ ಹಾಳಾದವು.’ ಎಂದರು. ಹೀಗೆ ಯಾವುದೇ ಹೊಸ ಪ್ರಯೋಗವಾದರೂ ರೈತನ ಅನುಭವದ ಪ್ರಯೋಗಶಾಲೆಯಲ್ಲೇ ಅದರ ಮೌಲ್ಯಮಾಪನ ಮತ್ತು ಅಗತ್ಯ ಬದಲಾವಣೆಯ ಅಳವಡಿಕೆ ಆಗಬೇಕು ಎಂದು ಸೂಚ್ಯವಾಗಿ ಹೇಳಿದರು. ಆದರೆ ತೇಜಸ್ವಿಯವರು ಸಾವಯವ ಕೃಷಿಯನ್ನು ಸಮರ್ಥಿಸಿ ಸುಧೀರ್ಘ ಭಾಷಣ ಮಾಡಬಹುದೆಂದು ನಿರೀಕ್ಷಿಸಿ ಬಂದಿದ್ದ ಕೆಲವರು, ಆ ಮಾತನ್ನು ತಮಾಷೆಯೆಂದು ಪರಿಗಣಿಸಿದ್ದೇ ಅಲ್ಲದೆ ತೇಜಸ್ವಿಯವರು ಎರೆಹುಳುಗಳ ಉಪಯೋಗದ ವಿರುದ್ಧವೇ ಮಾತನಾಡಿದರು ಅಂದುಕೊಂಡರು.

ಕಾರ್ಯಕ್ರಮ ಮುಗಿಸಿ ಅತಿಥಿಗಳು ಹೊರಡುವಾಗ ಸಂಘಟಕರು ಕವರಿನಲ್ಲಿ ಸ್ವಲ್ಪ ಹಣವನ್ನಿಟ್ಟು ಕೊಡಲು ಹೋದರೆ, ಕಂಡಿದ್ದೀನಿ ಕಣ್ರಿ ಇಷ್ಟೊಂದು ಕಷ್ಟಪಟ್ಕೊಂಡ್ ಕೆಲಸಮಾಡ್ತಾ ಇದ್ದೀರಿ ಇಟ್ಕೊಳ್ರಿ ಎಂದು ಸಂಭಾವನೆಯಿರಲಿ ದಾರಿಖರ್ಚನ್ನೂ ಸ್ವೀಕರಿಸಲು ನಿರಾಕರಿಸಿದರು.

(ಇನ್ನೂ ಇದೆ..)

‍ಲೇಖಕರು G

28 May, 2011

4 Comments

  1. swathi

    sir thanks a lot for ur nice articles…

  2. sanju kulkarni

    Pls write more article. tejaswi is genius. he is not a selfish writer.

  3. sandhya

    Tejasvi is like our own hemingway.. i have read so many article and works by him and about him, but one can never say that they have captured Tejaswi. entaha maayaavi ee tejaswi..

  4. esha kumar

    tejaswi bagegina kathegalu niduva ola notagalu…ondu reeti baaviya aalada “jalada kanna” haage…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading