ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ಆ ಗುಜರಿ

ತೇಜಸ್ವಿ ಕಥನ-೯

ಪ್ರಸಾದ್ ರಕ್ಷಿದಿ

ತೊಂಬತ್ತರ ದಶಕದ ಪ್ರಾರಂಭದ ವರ್ಷಗಳಲ್ಲಿ ನಾನು ಹಾನುಬಾಳಿನಿಂದಾಚೆ ದೇವಾಲದಕೆರೆ ಎಂಬ ಊರಿನ ಬಳಿ ಕಾಫಿಎಸ್ಟೇಟೊಂದರ ಉಸ್ತುವಾರಿ ನಡೆಸುತ್ತಿದ್ದೆ, ಸಾಮಾನ್ಯವಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಅಲ್ಲಿಗೆ ಹೋಗಿಬರುತ್ತಿದ್ದೆ. ಜನ್ನಾಪುರದ ಬಳಿಯ ಖಾಸಿಂ ಸಾಬಿ ಎಂಬ ಗುಜರಿ ವ್ಯಾಪಾರಿ ಸೈಕಲ್ಲಿನಲ್ಲಿ ಆ ಕಡೆಯೆಲ್ಲ ಸುತ್ತಾಡುತ್ತ ಬರುತ್ತಿದ್ದ. ಸೈಕಲ್ಲಿನ ಕ್ಯಾರಿಯರಿನಲ್ಲಿ ಐಸ್ ಕ್ಯಾಂಡಿ ಡಬ್ಬವನ್ನಿಟ್ಟುಕೊಂಡು ಪಕ್ಕದಲ್ಲೆರಡು ಗೋಣಿಚೀಲವನ್ನು ಕಟ್ಟಿರುತ್ತಿದ್ದ. ಈತನಿಗೆ ಐಸ್ ಕ್ಯಾಂಡಿಗೆ ಹಣವನ್ನೇ ಕೊಡಬೇಕೇಂದೇನಿರಲಿಲ್ಲ ಕಬ್ಬಿಣ, ಅಲ್ಯುಮಿನಿಯಂ, ಚೂರುಪಾರುಗಳು, ಖಾಲಿ ಕ್ವಾರ್ಟರ್ ಬಾಟ್ಳಿಗಳು ಯಾವುದಾದರೂ ಸರಿ ಎಲ್ಲಕ್ಕೂ ಬದಲಿಯಾಗಿ ಐಸ್ ಕ್ಯಾಂಡಿ ಕೊಡುತ್ತಿದ್ದ. ಹೆಚ್ಚಾಗಿ ಶಾಲೆಗೆ ಹೋಗುವ ಮಕ್ಕಳೇ ಇವನ ಗಿರಾಕಿಗಳು. ಸಾಮಾನ್ಯವಾಗಿ ನಾವು ಎಸ್ಟೇಟಿನ ಗೇಟಿನ ಒಳಗಡೆ ಇಂತಹ ವ್ಯಾಪಾರದವರನ್ನು ಬಿಡುವುದಿಲ್ಲ. ಇವನ ಐಸ್ ಕ್ಯಾಂಡಿ ಆಸೆಗೆ ಕೆಲಸಗಾರರ ಮಕ್ಕಳು ಮನೆಯಲ್ಲಿದ್ದ ಹತಾರ (ಕೃಷಿ ಉಪಕರಣಗಳು) ಗಳನ್ನು ಕೊಟ್ಟು ಐಸ್ ಕ್ಯಾಂಡಿ ತಿನ್ನುತ್ತಿದ್ದುದು ಇದಕ್ಕೆ ಕಾರಣವಾಗಿತ್ತು.

ಖಾಸಿಂಸಾಬಿಗೆ ಮಾತ್ರ ತೋಟದೊಳಕ್ಕೆ ಬರಲು ಅನುಮತಿ ಇತ್ತು. ಮಕ್ಕಳು ತೋಟದ ವಸ್ತುಗಳನ್ನು ತಂದರೆ ಅವನು ತೆಗೆದುಕೊಳ್ಳುತ್ತಿರಲಿಲ್ಲವಷ್ಟೇ ಅಲ್ಲ ಅವರಿಗೆ ಬುದ್ದಿ ಹೇಳಿ ವಾಪಸ್ ಕಳುಹಿಸುವುದೂ ಅಲ್ಲದೆ ಅದನ್ನು ನಮ್ಮ ಗಮನಕ್ಕೂ ತರುತ್ತಿದ್ದ. ಆದರೆ ಎಷ್ಟೋಬಾರಿ ಬರಿಗೈಯಿಂದ ಬಂದ ಮಕ್ಕಳಿಗೂ ಪುಕ್ಕಟೆಯಾಗಿ ಐಸ್ ಕ್ಯಾಂಡಿ ಕೊಡುತ್ತಿದ್ದ.

ನನ್ನ ಪರಿಚಯವಾದ ನಂತರ ಖಾಸಿಂಸಾಬಿ ನಮ್ಮೂರು ಬೆಳ್ಳೇಕೆರೆಯತ್ತಲೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ.

ಒಮ್ಮೊಮ್ಮೆ ನಮ್ಮ ಮನೆಗೂ ಬರುತ್ತಿದ್ದ. ಹೀಗೇ ಒಂದುದಿನ ಮಾತಾಡುತ್ತ ಮೂಡಿಗೆರೆ ಹ್ಯಾಂಡ್ ಪೋಸ್ಟಲ್ಲಿ ಒಬ್ರು ಕತೆ ಬರಿಯೋರಿದಾರಲ್ಲ ಭಾಳಾ ಪೇಮಸ್, ಅವ್ರ ಮನೀಗೋಗಿದ್ದೆ ಅಂದ.

ಅವನು ಹೇಳುತ್ತಿರುವುದು ಯಾರ ಮನೆಯೆಂದು ನನಗೆ ತಿಳಿಯಿತು. ಅವ್ರಿಗೂ ಐಸ್ ಕ್ಯಾಂಡಿ ಕೊಟ್ಯಾ ಎಂದೆ.

ಅಲ್ಲಿ ಮಕ್ಳು ಮರಿ ಯಾರೂ ಕಾಣ್ಲಿಲ್ಲ, ನಮಗೇನು ಜಾಸ್ತಿ ಗುಜ್ರಿ ಇದ್ರೆ ದುಡ್ಡಿಗೇ ವ್ಯಾಪಾರ ಮಾಡ್ತೀನಿ. ಆದರೆ ನಾನು ಅಲ್ಲಿಗೆ ಹೋಗ್ಬೇಕಾದರೆ ಒಂದ್ ಪಾರ್ಟಿ, ಒಂದು ಟಾರ್ಪಾಲ್  ಅಂಗಳದಲ್ಲಿ ಹಾಸ್ಕೊಂಡು ಒಂದು ಹಳೇ ಸ್ಕೂಟರ್ ಪೂರಾ ಬಿಚ್ಕೊಂಡು ಏನೋ ಮಾಡ್ತಿದ್ರು. ಯಾರೋ ಮೆಕೇನಿಕ್ ಸಾಬ್ರು ಬಂದವ್ರೆ ಅಂತ ಅಂದ್ಕಂಡು, ಅವರತ್ರ ಹೋಗಿ ಮನೇಲಿ ಸಾವ್ಕಾರಿದಾರ ಅಂದೆ. ನೋಡಿದ್ರೆ ಅವ್ರೇ ಸಾವ್ಕಾರ್ರು.!

ನಿರುತ್ತರಾದಲ್ಲಿ ತೇಜಸ್ವಿ ಸ್ಕೂಟರ್

ಇವ್ರೇ ರಿಪೇರಿ ಮಾಡ್ತಿರ್ಬೇಕಾದ್ರೆ ಗುಜ್ರಿ ಇದ್ದೇ ಇರುತ್ತೆ ಆಂತಾಯ್ತು. ಕೇಳಿದ್ರೆ ಇವಾಗ ಪುರುಸೋತ್ತಿಲ್ಲ ಇನ್ನೊಂದಿನ ಬಾ ಅಂದ್ರು. ನಾನೂ ಅವ್ರು ರಿಪೇರಿ ಮಾಡೋದ್ನ ನೋಡ್ತಾ ಹಂಗೇ ನಿಂತ್ಕಂಡೆ, ನೀವ್ ಏನಾರ ಅನ್ನಿ ಈ ಮೆಷಿನ್ ರೀಪೇರಿ ಒಳ್ಗೆ ನಮ್ಮ ಸಾಬ್ರುಗಳ್ನ ಬಿಟ್ರೆ ಬೇರೇವ್ರು ಅಷ್ಟೊಂದು ಕರೆಕ್ಟಾಗಿ ಮಾಡಾಕಿಲ್ಲ. ಆದ್ರೆ ಇವ್ರುನ್ನ ನೋಡಿದ್ನಲ್ಲ ಯಾವ ಸಾಬ್ರಿಗೂ ಬಿಟ್ ಕೊಡಾಕಿಲ್ಲ. ಆ ಥರಾ ಕೆಲ್ಸ ಮಾಡೋರು, ಹಂಗೇ ನೋಡ್ತಾ ನಿಂತಿದ್ನಲ್ಲ. ಸ್ವಲ್ಪ ಹೊತ್ತು ಆದ್ಮೇಲೆ ಎಲ್ಲೋ ಸಾಬು ನಿನ್ನ ಗುಜ್ರಿ ಸ್ವಲ್ಪ ತೆಗಿ ಅಂದ್ರು. ನಾನೂ ಇದೇನೋ ಚಕ್ ಮಾಡ್ತಾರಪ್ಪ ಅಂತ ತೆಗ್ದು ತೋರುಸ್ದೆ. ನನ್ನ ಗುಜ್ರಿಂದ್ಲೇ ಒಂದು ಮೂರು ನಾಕು ಐಟಮ್ ತಗೊಂಡ್ರು!, ಅಮೇಲೆ ನೋಡೋ ಸಾಬಣ್ಣ ಆ ಶೆಡ್ಡಿನ ಮೂಲೇಲಿ ಒಂದಷ್ಟು ಬೇಡ್ದೇ ಇರೋವ್ನ ಬಿಸಾಕಿದೀನಿ ಎಲ್ಲ ತೊಗೊಂಡೋಗು ಅಂದ್ರು. ಎಲ್ಲ ತೊಗೊಂಡು ಲೆಕ್ಕ ಹಾಕಿ ದುಡ್ಡು ಕೊಡೋಕೆ ಹೋದ್ರೆ ಬ್ಯಾಡ ಹೋಗು ಅಂದ್ರು. ಆಮೇಲ್ ಗೊತ್ತಾಯ್ತು ನನ್ಗೆ, ಅವ್ರು ಕುವೆಂಪು ಅವರ್ ಮಗಾ ಅಂತೆ. ಈ ಭೂಮಿ ಮೇಲೆ ಎಂತೆಂಥವ್ರೆಲ್ಲ ಇರ್ತಾರ್ನೋಡಿ ಎಂದು, ಸ್ವಲ್ಪ ತಡೆದು ಇವಾಗ ನನ್ಗೆ ಅವ್ರು ಚೆನ್ನಾಗ್ ಪರಿಚಯ ದಾರೀಲಿ ಕಂಡ್ರೂ ಮಾತಾಡುಸ್ತೀನಿ ಎಂದ.

ಖಾಸಿಂಸಾಬಿಗೆ ಆಗಲೇ ಸಮಾರು ನಲುವತ್ತೈದು ವರ್ಷ ದಾಟಿರಬಹುದು. ಸಾಬ್ರೆ ನಿಮ್ಮ ಮಕ್ಳು ಏನ್ಮಾಡ್ತಿದಾರೆ ನಿಮ್ಮಂಗೆ ಗುಜ್ರಿ ಆಯೋಕೆ ಬಿಟ್ಟಿದ್ದೀರೋ ಇಲ್ಲ ಏನಾದ್ರೂ ವಿದ್ಯೆ ಕಲ್ತಿದಾರಾ ಎಂದು ಕೇಳಿದೆ. ದೇವು ನನ್ಗೆ ಅದೊಂದು ಯೋಗ ಕೊಟ್ಟಿಲ್ಲ ಸಾರ್ ಎಂದು.  ಗುಜರಿ ತುಂಬಿ ಭಾರವಾಗಿದ್ದ ಸೈಕಲನ್ನು ನಿಧಾನವಾಗಿ ತಳ್ಳಿಕೊಂಡು ಹೋದ. ನಾನು ಅವನು ಹೋಗುವುದನ್ನೇ ನೋಡುತ್ತ ನಿಂತೆ.

ಇತ್ತೀಚಿನ ವರ್ಷಗಳಲ್ಲಿ ಖಾಸಿಂಸಾಬಿಯನ್ನು ನಾನು ನೋಡಿಲ್ಲ. ಆತ ಎಲ್ಲೋ ಮಾಯಾಲೋಕದಲ್ಲಿ ಗುಜರಿ ಹುಡುಕುತ್ತಾ ಮಕ್ಕಳಿಗೆ ಐಸ್ ಕ್ಯಾಂಡಿ ಮಾರುತ್ತಿರಬಹುದು.

‍ಲೇಖಕರು G

27 May, 2011

6 Comments

  1. Dr.B.R.Satyanarayana

    ವಿದ್ಯಾವಂತರಿರಲಿ, ಅವಿದ್ಯಾವಂತರಿರಲಿ ತೇಜಸ್ವಿಯವರನ್ನು ಬೇಟಿಯಾದ ಯಾರೊಬ್ಬರೂ ಅವರ ಬಗ್ಗೆ ನೆಗೆಟೀವ್ ಆಗಿ ಮಾತನಾಡುವುದಿಲ್ಲ. ಏಕೆಂದರೆ ಅಷ್ಟೊಂದು ಸಹಜವಾಗಿ ಇರುತ್ತಿತ್ತು ತೇಜಸ್ವಿಯವರ ನಡವಳಿಕೆ. ಆದರೆ ಅವರ ಬಗ್ಗೆ, ಅವರಿಗೆ ಕೋಪ ಜಾಸ್ತಿ, ಬಂದವರನ್ನು ಮಾತನಾಡಿಸುತ್ತಾರೋ ಇಲ್ಲವೋ, ಸಿಡುಕುತ್ತಾರೆ ಮುಂತಾದ ಉಹಾಪೋಹಗಳನ್ನು ಹಬ್ಬಿಸಿರುವುದು ಅವರನ್ನು ಒಮ್ಮೆಯೂ ಬೇಟಿ ಮಾಡದವರೇ ಅನ್ನಿಸುತ್ತೆ!!!

  2. ರಾಧಿಕಾ

    ಒಂದು ಒಳ್ಳೆಯ ಸರಣಿ ಅವಧಿ. ತೇಜಸ್ವಿಯವರ ಬಗೆ ಎಷ್ಟು ಓದಿದರೂ ಮತ್ತಷ್ಟು ಓದಬೇಕೆನಿಸುತ್ತದೆ.

  3. swqthi

    hello sir….how r u..it was feb 3rd…ನಾನು ಕರವೇ ನಲ್ನುಡಿ magazine ನಲ್ಲಿ ನಿಮ್ಮ article ಓದಿ ಕಾಲೇಜು library ಇಂದ ಹೊರಬಂದವಳೇ ನಿಮಗೆ ಫೋನ್ ಮಾಡಿದೆ..ಆ ಕಡೆಯಿಂದ hello ಎಂದ ನೀವು ನಾನು busy ಇದೀನಿ ಅಂತ phone cut ಮಾಡಿದ್ರಿ…i was disappointed…ನಿಮ್ಮ number save ಮಾಡ್ಕೊಂಡು ಮನೆಗೆ ಬಂದೆ…ಸಂಜೆ ನೀವು ನಂಗೆ phone ಮಾಡಿದ್ರಿ..i was surprised…ನೀವು ನಂಜೊತೆ ತುಂಬಾ ಚೆನ್ನಾಗಿ ಮಾತಾಡಿದ್ರಿ..ನನ್ನ hobbies ಕೇಳಿದ್ರಿ..ನನ್ನ ಸಾಹಿತ್ಯದ ಅಭಿರುಚಿಯನ್ನು ಹೊಗಳಿದ್ರಿ…ನಂಗೆ ತುಂಬಾ ಖುಷಿ ಆಯ್ತು…i marked that day in my dairy.thanks a lot sir.

  4. swathi

    thanks for d aricles about tejaswi..ನನ್ನನ್ನು ತುಂಬಾ ಕಾಡಿದ ಹಾಗೂ ಕಾಡುವ ವ್ಯಕ್ತಿ ತೇಜಸ್ವಿ ಮಾತ್ರ..ಆ ಹೆಸರಿನಲ್ಲೇ ಒಂದು ಮಾಂತ್ರಿಕತೆ ಇದೆ

  5. ಸಿ ಪಿ ನಾಗರಾಜ

    ತೇಜಸ್ವಿ ಅವರ ಬರಹಗಳನ್ನು ಓದುವಾಗ ನಮಗೆ ನಾವೇ ನಕ್ಕು ನಲಿಯುತ್ತಿದ್ದಂತೆ … ಖಾಸಿಂ ಸಾಬ್ರು ” ಯಾರೋ ಮೆಕೇನಿಕ್ ಸಾಬ್ರು ಬಂದವ್ರೆ ಅಂತ ಅಂದ್ಕಂಡು ” ತೇಜಸ್ವಿ ಅವರನ್ನು ನೋಡಲು ಬಂದು ಗುಜರಿ ವ್ಯಾಪಾರ ಮಾಡಿದ ಸನ್ನಿವೇಶದಲ್ಲೂ ನಕ್ಕು ನಲಿಯುತ್ತೇವೆ . ಇದನ್ನೆಲ್ಲಾ ಓದುತ್ತಿದ್ದರೆ ತೇಜಸ್ವಿ ಸತ್ತಿದ್ದಾರೆ ಅಂತ ಅನ್ನಿಸುವುದೇ ಇಲ್ಲ . ಸಿ ಪಿ ನಾಗರಾಜ ಬೆಂಗಳೂರು .

  6. prasadraxidi

    hello swathi hegiddiri?… tejasvi odanaata enthavarigoo ondashtu manushyaranthe nadkollodannu kalisitu, namagella astu saakallave?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading