ತೇಜಸ್ವಿ ಎಂಬ ‘ಹೀರೋ’ ಬಗ್ಗೆ..

ತೇಜಸ್ವಿ

ಬಾಗೇಶ್ರೀ

ಕೃಷಿ, ಶಿಕಾರಿ, ಚಿತ್ರಗ್ರಹಣ, ಸಂಗೀತ, ಪರಿಸರ ಅಧ್ಯಯನ, ಲೋಹಿಯಾ ಚಳುವಳಿ, ರೈತ ಚಳುವಳಿ, ಕನ್ನಡ ಕಂಪ್ಯೂಟಿಂಗ್… ಕೊನೆಗೆ ಸ್ಕೂಟರ್ ರೆಪೇರಿ… ಹೀಗೆ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ಸಕಲಕಲಾವಲ್ಲವನ್ ಪೂರ್ಣಚಂದ್ರ ತೇಜಸ್ವಿ. ನಮ್ಮ ಟೀವಿಗಳಲ್ಲಿ ಎಲ್ಲದರ ಬಗ್ಗೆಯೂ ಮಾಡುವ ಹಾಗೆ ಕನ್ನಡ ಸಾಹಿತ್ಯ ಲೋಕದ ”ಹೀರೋ”ಗಳ ಬಗ್ಗೆ ರೇಟಿಂಗ್ ಏನಾದರೂ ಮಾಡಿದರೆ ನಮ್ಮಂತ ಮಧ್ಯವಯಸ್ಕ ಹೆಂಗಸರಂತೂ en-masse ಮೊದಲ ಸ್ಥಾನಕ್ಕೆ ತೇಜಸ್ವಿಗೆ ವೋಟ್ ಹಾಕಿಯೇವು . ಹೀರೋತನವನ್ನು ಮೆರೆಯದೆ, ಈ ನಮ್ಮ ಉಳಿದ ಪೇಟೆ ಸಾಹಿತಿ ಹೀರೋಗಳ ಸಹವಾಸ ಜಾಸ್ತಿ ಸಹಿಸಿಕೊಳ್ಳುವುದು ಕಷ್ಟ ಅನ್ನುವ ಧಾಟಿಯಲ್ಲಿ ಮಲೆನಾಡಿನ ಮೂಲೆಗೆ ಹೋಗಿ ಇದ್ದುಬಿಟ್ಟ ಕಾರಣಕ್ಕೆ ತೇಜಸ್ವಿ ಇನ್ನಷ್ಟು ಹೀರೋ! ಸರಿ. ಊರವರಿಗೆಲ್ಲ ಹೀರೋ ಆಗುವುದು ಅಷ್ಟೇನೂ ಕಷ್ಟ ಅಲ್ಲ. ಆದರೆ ಗಂಡಂದಿರ ನಿಜವಾದ ದಶಾವತಾರಗಳನ್ನು ಬಲ್ಲ ಹೆಂಡತಿಯರ ಹತ್ತಿರ ಹೀರೋ ಅನ್ನಿಕೊಳ್ಳುವುದು ಸುಲಭವಲ್ಲ. ಆದರೆ ನೋಡಿ, ಈ ತೇಜಸ್ವಿ ಈ ಅಸಂಭವವನ್ನೂ ಸಂಭವ ಮಾಡಿ ಇವರ ಸುಧೀರ್ಘ ೫೦ ವರ್ಷ ಜೊತೆಗಿದ್ದ ಹೆಂಡತಿಯ ಕಣ್ಣಿಗೂ ಹೀರೋ ಆಗಿ ಕಂಡಿದ್ದಾರೆಂದರೆ… ಇವರನ್ನು ಹೀರೋ ಅನ್ನದೆ ಮತ್ತ್ಯಾವ ಹೆಸರಿಟ್ಟು ಕರೆಯಲಿಕ್ಕೆ ಸಾಧ್ಯ?ರಾಜೇಶ್ವರಿ ಅವರ ”ನನ್ನ ತೇಜಸ್ವಿ” ಪುಸ್ತಕ ಅರವತ್ತರ ದಶಕದಲ್ಲಿ “ಪೂರ್ಣಚಂದ್ರನಂತೆ” ಹೊಳೆಯುತ್ತಾ ಪಾಪದ ಸಣ್ಣ ಹುಡುಗಿಯರಿಗೆ ಸಿಕ್ಕಾಪಟ್ಟೆ ಬೀಪಿ ಬರುವ ಹಾಗೆ ಮಾಡುತ್ತಿದ್ದ ತೇಜಸ್ವಿಯ ಮೈಸೂರಿನ ಕಾಲೇಜಿನ ದಿನಗಳೊಂದಿಗೆ ಆರಂಭವಾಗುತ್ತದೆ. ಹೇಗೆ ಬೀಪಿ ಬರಿಸಿಕೊಂಡು ಒದ್ದಾಡಿದವರಲ್ಲಿ ರಾಜೇಶ್ವರಿಯೂ ಒಬ್ಬರು.ಇದು ಪ್ರೇಮಕ್ಕೆ ತಿರುಗಿದ್ದು, ನಿರಂತರ ಒಬ್ಬರೊಬ್ಬರಿಗೆ ಬರೆದ ಪ್ರೇಮಪತ್ರಗಳು, ಬಹು ದಿನಗಳ ಕೋರ್ಟ್ ಶಿಪ್, ವಿಶಿಷ್ಟವಾದ ಮಂತ್ರ ಮಾಂಗಲ್ಯ ಪದ್ಧತಿಯ ಸರಳ ಮಾಡುವೆ, ಮಕ್ಕಳು ಬೆಳೆದು ದೊಡ್ದವರಾದದ್ದು, ಕುವೆಂಪು ಸಂಸಾರದೊಂದಿಗೆ ಒಡನಾಟ… ಹೀಗೆ ಸಾಗುತ್ತಾ ಹೋಗಿ ತೇಜಸ್ವಿಯ ಅನಿರೀಕ್ಷಿತ ಮರಣ ಮತ್ತು ಅದು ಹುಟ್ಟಿಸಿದ ನಿರ್ವಾತದವರೆಗೂ ರಾಜೇಶ್ವರಿ ಸವಿವರವಾಗಿ ಬರೆಯುತ್ತಾರೆ. “ನೆನಪುಗಳೆಲ್ಲಾ ಬಿಡಿ ಬಿಡಿಯಾಗಿ ಪ್ರತ್ಯೇಕ ಘಟನೆಗಳಂತೆ ಕಾಲದ ಸರಪಳಿಯಲ್ಲಿ ಕೂಡಿಕೊಳ್ಳದೆ ಎಳೆ ತುಂಡಾಗಿ ಉರುಳಾಡುವ ಮಣಿಗಳಂತೆ ಸ್ಮೃತಿ ಪಟಲದಲ್ಲಿ ಆವರಿಸಿದವು” ಎಂಬ “ಕರ್ವಾಲೋ” ಕಾದಂಬರಿಯ ಸಾಲಿನೊಂದಿಗೆ ಮುಕ್ತಾಯವಾಗುತ್ತದೆ.ಬರೆದ ಪ್ರೇಮಪತ್ರಗಳಿಂದ ಹಿಡಿದು, ತೇಜಸ್ವಿ ಹಕ್ಕಿ ಪಿಕ್ಚರ್ ತೆಗೆಯಲು ಕಟ್ಟುತ್ತಿದ್ದ ಹೈಡೌಟು, ಮನೆಗೆ ಬಂದು ಹೋದ, ಬಾರದೆ ಹೋದ ವ್ಯಕ್ತಿಗಳ ವಿವರಗಳವರೆಗೆ ಗಂಡ ಹಿಡಿದದ್ದು ಮುಟ್ಟಿದ್ದು ಯಾವುದನ್ನೂ ಬಿಡದೆ ೫೪೮ ಪುಟಗಳಷ್ಟು ಸುಧೀರ್ಘವಾಗಿ (ಕೆಲವು ಸಲ ಅಯ್ಯೋ ಶಿವಾ ಇದೂ ಬರೆಯಬೇಕಾ ಅನ್ನಿಸುವಷ್ಟರ ಮಟ್ಟಿಗೆ) ರಾಜೇಶ್ವರಿ ಬರೆದಿದ್ದಾರೆ. ಇವರು ಹೆಕ್ಕಿ ತೋರುವ ಪ್ರತಿ ಮಣಿಯಲ್ಲಿ ತೇಜಸ್ವಿ ವ್ಯಕ್ತಿತ್ವದ ವಿವಿಧ ರೂಪ ಕಾಣುತ್ತದೆ. ಉದಾಹರಣೆಗೆ ಇವರ ಪ್ರೇಮಪತ್ರಗಳ ಕೋಪ, ತಾಪ, ತುಂಟಾಟ, ಉತ್ಕಟ ಹಂಬಲ ಇತ್ಯಾದಿ ವಿವಿಧ ಮೂಡುಗಳು… “ರಾಜೇಶ್, ಲವ್ ಅಂದರೆ ಏನು ಗೊತ್ತಾ. ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತೆಯನ್ನು ಸ್ವೀಕರಿಸುವುದು. ದೈಹಿಕವಾಗಿ, ಮಾನಸಿಕವಾಗಿ. ನೀವು ತಿಳಿದಿರೋ ಅಂತ ಸುಲಭದ್ದಲ್ಲ. ಕೆಲವರು ಮುನ್ನೋಟಕ್ಕೆ ಹೆದರಿ ಅಂಬಿಕೆಯಂತೆ ಬಿಳಿಚಿಕೊಳ್ಳುತ್ತಾರೆ. ಇಲ್ಲ ಅಂಬಾಲಿಕೆಯಂತೆ ಅಂಧರಾಗುತ್ತಾರೆ. ಇದೆಲ್ಲಾ ಯಾಕೆ ಹೇಳಿದೆನಂದರೆ ನಿನ್ನ spiritual ಸ್ಲೋಗನ್ನುಗಳಿಗೆ ಹೆದರಿ ಹೇಳಿದ್ದು ರಾಜೇಶ್. I love you. – ನಿಮ್ಮ ಪೂ.ಚಂ, ತೇ.” ಮತ್ತೊಂದು ಕಡೆ ರಾಜೇಶ್ವರಿ ಸೌಂದರ್ಯವರ್ಧನೆಗೆ ಮುಖಕ್ಕೆ ಮೀನೆಣ್ಣೆ ಪುಸುತ್ತಿದ್ದರ ಬಗ್ಗೆ ಛೇಡಿಸುತ್ತಾ “ಮದುವೆಯಾದ ನಂತರ ಮಲಗುವಾಗ ಅದನ್ನು ಹಚ್ಚಿಕೊಳ್ಳುವಂತಿಲ್ಲ. ಏಕೆಂದರೆ ನನಗೇನೋ ಮೀನೆಣ್ಣೆ ನೆಕ್ಕಬೇಕೆಂದು ಡಾಕ್ಟರ್ ಹೇಳಿಲ್ಲವಲ್ಲ…” ಎಂದು ಬರೆಯುತ್ತಾರೆ. ಇನ್ನೇನು ಸುಮಾರು ರೊಮ್ಯಾಂಟಿಕ್ ಆಗುತ್ತಿದ್ದಾರಲ್ಲ ಅನ್ನಿಸುವಷ್ಟರಲ್ಲಿ ವ್ಯಂಗ್ಯದ ಮೊನಚಿನಿಂದ ಚುಚ್ಚಿಬಿಡುವ ಟಿಪಿಕಲ್ ತೇಜಸ್ವಿಯ ಶೈಲಿ ಪ್ರೇಮ ಪಾತ್ರಗಳಲ್ಲೂ ಇದೆ. ಪುಸ್ತಕದಲ್ಲಿ ತುಂಬ ಖುಷಿ ಕೊಡುವುದು ರಾಜೇಶ್ವರಿ ಅವರು ಕಟ್ಟಿ ಕೊಡುವ ಗಂಡ ಹೆಂಡತಿ ಸೇರಿ ಕಾಡು ಮೇಡು ಸುತ್ತಿದ, ಬೆಟ್ಟ ಗುಡ್ಡ ಅಲೆದ, ಮನೆಯ ಸುತ್ತಲ ತೋಟ ಮಾಡಿದ, ಹೊಸರೀತಿಯ ಪಾಕ ಪ್ರಯೋಗಗಳನ್ನು ಮಾಡಿದ ಚಿತ್ರಣಗಳು. ಮೋಡದಿಂದ ಆವೃತವಾದ ಚಾರ್ಮಡಿ ಘಾಟ್, ಮಲೆನಾಡಿನ ಹನಿ ಕಡಿಯದ ಮಳೆ, ರಾಶಿಗಟ್ಟಲೆ ದೀರ್ಕ ಹಣ್ಣನ್ನು ತಂದು ಇಬ್ಬರೂ ಸೇರಿ ”ಆಡುಳಿ” ತಯಾರಿಸಿದ್ದು, ಬದಲಾಗುತ್ತಾ ಹೋದ ಮೂಡಿಗೆರೆಯ ಚಿತ್ರಣ (ಗೊಬ್ಬೆ ಸೀರೆ ಉಡುವ ಹೆಂಗಸರು ಕಾಣೆಯಾಗಿ ಪುಟ್ಟ ಊರಿಗೆ ೧೩ ಬ್ಯೂಟಿ ಪಾರ್ಲರ್ರುಗಳು ಬಂದದ್ದು!) , ಇಬ್ಬರೂ ಸಿಟ್ ಔಟಿನಲ್ಲಿ ಕುಳಿತು ಸುಮ್ಮನೆ ತೋಟ, ಅದರಾಚೆಯ ಕಾಡು ಬೆಟ್ಟ ಗುಡ್ಡ ನೋಡುತ್ತಿದ್ದದ್ದು… ಹೀಗೆ ಹತ್ತು ಹಲವು ಘಟನೆಗಳನ್ನು ರಾಜೇಶ್ವರಿ ತಣ್ಣಗೆ ಮೆಲುಕು ಹಾಕುತ್ತಾರೆ. ಹೇಗೆ ಬರೆಯುವಾಗ ಅವರ ಶೈಲಿಯಲ್ಲಿ ಹೆದರಿಕೆ ಆಗುವಷ್ಟು ಖ್ಯಾತಿಯ ತಮ್ಮ ಗಂಡನನ್ನಾಗಲಿ ಅಥವಾ ಮಾವನನ್ನಾಗಲಿ ಅನುಕರಿಸುವ ಪ್ರಯತ್ನವಾಗಲೀ, ಕೃತಕವಾಗಿ ಆಲಂಕಾರಿಕವಾಗಿಯೋ ಕಾವ್ಯಮಯವಾಗಿಯೋ ಬರೆಯುವ ತಹತಹವಾಗಲಿ ಕಾಣುವುದಿಲ್ಲ. ಅನ್ನಿಸಿದ್ದನ್ನು ನೇರವಾಗಿ, ಅಳುಕಿಲ್ಲದೆ ಬರೆಯುವ ರಾಜೇಶ್ವರಿ ಅವರ ಶೈಲಿ ಚೆಂದ. ಕೆಲವೊಮ್ಮೆ ಪ್ರಯತ್ನಪೂರ್ವಕ ಅನ್ನಿಸದೆ ಕಾವ್ಯ ಧ್ವನಿಸುತ್ತದೆ. ತೇಜಸ್ವಿಯ ಸಾವಿನ ಬಗ್ಗೆ ರಾಜೇಶ್ವರಿ ಬರೆಯುವ ರೀತಿ ಭಾವಾತಿರೇಕಕ್ಕೆ ಎಡೆಮಾಡದೆ, ಮನಮಿಡಿಯುವಂತಿದೆ. “ನನ್ನ ತೇಜಸ್ವಿ ಕಾಡಿನ ಉಸಿರಿನಲ್ಲಿ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಿನಲ್ಲಿದೆ, ನನಗೆ ಅವರು ಬೇಕು.” ಅನ್ನುವ ಸರಳ ಮಾತು ಇಡೀ ಜೀವನ ಇಬ್ಬರೂ ಒಟ್ಟಿಗೆ ಏಗಿದ ಕತೆಯನ್ನು ಎರಡೇ ವಾಕ್ಯದಲ್ಲಿ ಹೇಳುತ್ತದೆ. ಮೊದಲಿಂದ ಕೊನೆಯವರೆಗೂ ರಾಜೇಶ್ವರಿಯವರ ಧ್ವನಿ ಅತ್ಯಂತ ಸಹನಶೀಲ ಸದ್ಗೃಹಿಣಿ ಹಾಗೂ ಸಹಧರ್ಮಿಣಿಯದ್ದು. ಈ ದೊಡ್ಡ ಪುಸ್ತಕವನ್ನು ಹಿಂದೆ ಮುಂದೆ ತಿರುಗಿಸಿ ಹುಡುಕಿದರೂ ರಾಜೇಶ್ವರಿ ಅವರು ತೇಜಸ್ವಿ ಮೇಲೆ ಸಿಟ್ಟಾಗಿ ಸಿಡುಕಿದ ಪ್ರಸಂಗಗಲಾಗಲಿ, ಅವರ ಜೊತೆ ಯಾವುದೇ ವಿಷಯಕ್ಕೆ ತಗಾದೆ ತೆಗೆದು ತಮ್ಮನ್ನು ತಾವು ಅಸರ್ಟ್ ಮಾಡಿಕೊಂಡು ನಾನೇ ಸರಿ ಎಂದು ವಾದಿಸಿದ ಉದಾಹರಣೆಯಾಗಲಿ ಸಿಗುವುದಿಲ್ಲ (ಕಡೆಯ ದಿನಗಳಲ್ಲಿ ತೇಜಸ್ವಿಗೆ ಇಷ್ಟ ಇಲ್ಲದಿದ್ದರೂ ಕ್ರಿಕೆಟ್ ನೋಡುತ್ತಿದ್ದದ್ದು, ಮೀನಿನ ಕಟ್ಲೆಟ್ಟು ಮಾಡಿ ಮಾಡಿ ಸಾಕಾಗಿ ನೀರಿನಲ್ಲಿ ಮೀನ್ಯಾಕಾದರೂ ಇದೆಯಪ್ಪಾ ಅನ್ನಿಸಿತ್ತು ಅಂತ ಒಮ್ಮೆ ಒಮ್ಮೆ ಹೇಳುವ ತಮಾಷೆಯ ಕಂಪ್ಲೇಂಟು ಬಿಟ್ಟರೆ!). ಎಂ.ಎ. ತತ್ವಶಾಸ್ತ್ರ ಓದಿದ ರಾಜೇಶ್ವರಿ ತನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತೇಜಸ್ವಿಯ ಪ್ರಖರ ವರ್ಚಸ್ಸಿನ ವ್ಯಕ್ತಿತ್ವದಲ್ಲಿ ಕರಗಿಸಿಕೊಂಡು ಬದುಕಿದ್ದರ ಬಗ್ಗೆ ವಿಷಾದದ ಛಾಯೆ ಎಲ್ಲೂ ಇಣುಕುವುದಿಲ್ಲ. ಯಾವತ್ತೂ ಧನ್ಯತಾ ಭಾವ, ಅರ್ಪಣಾ ಭಾವವೇ ಎದ್ದು ಕಾಣುತ್ತದೆ. ತಾವು ಯಾಕೆ ತಮ್ಮದೇ ಆಸಕ್ತಿಗಳ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಎಂದು ಬರೆಯುತ್ತಾ ”ಮುಖ್ಯವಾಗಿ ಮನದಾಳದಲ್ಲಿ ‘ನನ್ನ ಗಂಡ ಹೀಗೆಲ್ಲ ಇದ್ದಾನೆ’ ಎನ್ನುವ ಹೆಮ್ಮೆ ಆನಂದವೇ ದೊಡ್ಡದಾಗಿತ್ತು ನನಗೆ” (ಪುಟ ೪೨೮) ಅನ್ನುತ್ತಾರೆ ರಾಜೇಶ್ವರಿ. ಇನ್ನೊಂದೆಡೆ ”ಉದಯ ರವಿ”ಯಲ್ಲಿ “ಇಬ್ಬರು ಸರಸ್ವತಿ ಸುಪುತ್ರರ ನಡುವೆ ನಾನು ಬದುಕಿದ್ದು, ನನ್ನ ಬಾಳ್ವೆ ಸಾಗಿದ್ದು ನನ್ನ ಬದುಕಿನ ಸಾರ್ಥಕತೆಯ ದೊಡ್ಡ ಹೆಮ್ಮೆ” ಎಂದು ಉಲ್ಲೇಖಿಸುತ್ತಾರೆ. ಈ ರಾಜೇಶ್ವರಿಯವರ ಎಂದೂ ಕುಗ್ಗದ ಪ್ರಶಂಸೆಯ, ವಿಮರ್ಶಾರಹಿತ ಆರಾಧನಾ ದೃಷ್ಟಿಕೋನ ವಿಶೇಷವಾಗಿ ಇರುಸುಮುರಿಸು ತರುವುದು ತೇಜಸ್ವಿ ಭಾಗವಹಿಸಿದ ಚಳುವಳಿಗಳು ಮತ್ತು ಕೆಲವು ವಿವಾದಾತ್ಮಕ ಘಟನೆಗಳ ಬಗ್ಗೆ ಇವರು ಬರೆಯುವಾಗ. ಕುದುರೆಮುಖ ಗಣಿಗಾರಿಕೆ ಸಂದರ್ಭದಲ್ಲಿ ತೇಜಸ್ವಿಯ ನಿಲುವು, ಕುವೆಂಪು ಹಸ್ತಪ್ರತಿ ವಿವಾದ, ರೈತ ಸಂಘ ಮತ್ತು ನವ ನಿರ್ಮಾಣ ಕ್ರಾಂತಿಯ ಸುತ್ತಲಿನ ವಿಷಯ, ವಿವಾದಗಳ ಬಗ್ಗೆ ಬರೆಯುವಾಗ ಒಂದೋ ಸಂಪೂರ್ಣ ತೇಲಿಸಿ ಅಥವಾ ತೇಜಸ್ವಿಯದೆ ಮತ್ತೊಂದು ಕಣ್ಣಿನಂತೆ ರಾಜೇಶ್ವರಿ ನೋಡುವುದರಿಂದ ನಿರಾಸೆಯಾಗುತ್ತದೆ. ಈ ವಿಷಯಗಳ ಬಗ್ಗೆ ರಾಜೇಶ್ವರಿಯವರಿಗೆ ತೇಜಸ್ವಿಯನ್ನು ಅನುಸರಿಸದ ವೈಯ್ಯಕ್ತಿಕ ಅಭಿಪ್ರಾಯ ಏನಾದರೂ ಇದ್ದರೆ ಅದು ಇಲ್ಲಿ ಕಾಣುವುದಿಲ್ಲ. ಉದಾಹರಣೆಗೆ ನವ ನಿರ್ಮಾಣ ಕ್ರಾಂತಿಯ ನಾಯಕತ್ವದ ಬಗ್ಗೆ ಎದ್ದ ವಿವಾದದ ಬಗ್ಗೆ ಮಾತಾಡುತ್ತಾ “ತೇಜಸ್ವಿ ನೊಂದರು. ನಾವು ನೊಂದೆವು” (ಪುಟ ೨೨೮) ಅನ್ನುತ್ತಾರೆಯೇ ಹೊರತು ತೇಜಸ್ವಿಯ ದೃಷ್ಟಿಕೊನದಿಂದಾಚೆ ಇರಬಹುದಾದ ಯಾವ ಹೊಸ ಹೊಳವೂ ನಮಗೆ ಕಾಣುವುದಿಲ್ಲ. ”ನನ್ನ ತೇಜಸ್ವಿ” ಓದುತ್ತಿರುವಾಗ ಒಮ್ಮೊಮ್ಮೆ ಬರಹಗಾರ್ತಿಗೆ ಅಲ್ಲದಿದ್ದರೂ ಓದುಗರಿಗೆ ತೇಜಸ್ವಿಯ ವ್ಯಕ್ತಿತ್ವ ಸಿಕ್ಕಾಪಟ್ಟೆ ಸ್ವಕೇಂದ್ರಿತವಾಗಿಯೂ, ಅಸಹನೆ ತುಂಬಿದ್ದಾಗಿಯೂ ತೋರಬಹುದು. ಹೆಂಡತಿಯ ವ್ಯಕ್ತಿತ್ವವನ್ನು ಸಂಪೂರ್ಣ ತಮಗೆ ತಕ್ಕಂತೆ ಹೊಸ ಎರಕದಲ್ಲಿ ಹೊಯ್ದು, ತಿದ್ದಿ, ತೀಡಿಬಿಟ್ಟರಲ್ಲವೇ ಅನ್ನಿಸುತ್ತದೆ. ತಮಗೆ ಇಷ್ಟವಾದ ಕ್ರೋಷಾ ಹಾಕುವಾಗಲೂ (“ಕಸುಬಿಲ್ಲ” ಅನ್ನಿಸಿಕೊಂಡು), ಮನೆಗೆ ಬೀಸೇಕಲ್ಲು ತರುವಾಗಲೂ ಗಂಡನಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬ ಯೋಚನೆ ರಾಜೇಶ್ವರಿಯರಿಗೆ ಬರದೆ ಇರುತ್ತಿರಲಿಲ್ಲ! ”ಆ ತೋಟ ತಗೋ, ಈ ಕೆಲಸ ಮಾಡು ಎಂದು ನನಗೆ ಒತ್ತಾಯ ಹೇರಬೇಡ, ನನಗೆ ಬೇಕಾದ ಹಾಗೆ ತಿರುಗಾಡಿ ನನಗೆ ಬೇಕಾದ ಹಾಗೆ ಮಾಡುತ್ತೇನೆ” ಅಂತ ತೇಜಸ್ವಿ “ಬಿರುಸಾಗಿಯೇ” ಹೇಳಿದ್ದನ್ನು (ಪುಟ ೨೪೫) ರಾಜೇಶ್ವರಿ ನೆನೆಯುತ್ತಾರೆ. ಇನ್ನೊಂದು ಪತ್ರದಲ್ಲಿ ತೇಜಸ್ವಿ “ಏನು ರಾಜೇಶ್, ನಿನ್ನ ಉಪಚಾರ ಪ್ರೀತಿಗಳೇ ನನಗೆ ಭಯಂಕರ ಎಡರುಗಲಾಗುತ್ತವೆ. ತಿಳುಕೋ. ಕಾರ್ಯರಂಗವೆಂದರೆ ಜೀವನದೊಂದಿಗೆ ಮುಖಾಮುಖಿ ನಿಲ್ಲುವುದೆಂದರೆ ಅದರಲ್ಲೂ ಈಗ ನಾ ಕೈ ಹಾಕಿದ ಕ್ಷೇತ್ರದಲ್ಲಿ ಅದೊಂದು ಭಯಂಕರ ಕುರುಕ್ಷೇತ್ರ ರಣರಂಗ ಗೊತ್ತಾ. ನೀನೆಲ್ಲೋ ಕಾಡಿನಲ್ಲಿ ಬೆಪ್ಪಾಗಿ ಕೂತುಕೊಂಡು ಯೋಚಿಸುತ್ತಿರಬಹುದು ಅದೇನು ಮಹಾ ಎಂದು…” (ಪುಟ ೧೧೫) ನನ್ನಂಥ ಓದುಗರಿಗೆ ಸ್ವಾರ್ಥದ, ಅಹಮಿಕೆಯ ಧ್ವನಿ ಇದರಲ್ಲಿ ಕಂಡರೂ ರಾಜೇಶ್ವರಿಯವರಿಗೆ ಹಾಗೆ ಅನ್ನಿಸಿದಂತೆ ತೋರುವುದಿಲ್ಲ. ಈ ಮಾತುಗಳನ್ನೆಲ್ಲಾ ತೇಜಸ್ವಿ ಯಾವ ”ಧ್ವನಿ”ಯಲ್ಲಿ ಹೇಳಿದರೋ ಗೊತ್ತಿಲ್ಲ. ಗೊತ್ತಾಗುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಈ ಪ್ಯಾಸೆಜುಗಳನ್ನು ಓದಿದಾಗ ನನಗೆ ಲೋಹಿಯಾ ಮಹಿಳೆಯರ ಬಗ್ಗೆ ಮತ್ತು ಸಮಾನ ಸಮಾಜದ ನಿರ್ಮಾಣದಲ್ಲಿ ಅವರ ಪಾತ್ರದ ಬಗ್ಗೆಹೇಳಿದ ಮಾತುಗಳು ನೆನಪಾದದ್ದಂತೂ ಹೌದು. “‘…ಅವತ್ತಿನಿಂದ ಇವತ್ತಿನವರೆಗೆ ಭಾರತೀಯ ಮನಸ್ಸಿನಲ್ಲಿ ತನ್ನ ಪತಿಯ ಶರೀರ, ಮನಸ್ಸು ಅಥವಾ ಆತ್ಮದೊಂದಿಗೆ ತಾದಾತ್ಮ್ಯ ಗೊಂಡಿರುವ” ಮಹಿಳೆಯರು ಇದ್ದ ಹಾಗೆ ಒಬ್ಬ ಗಂಡನೂ ಸಿಗುವುದಿಲ್ಲವಲ್ಲ ಅಂತ “ದ್ರೌಪದಿಯೋ? ಸಾವಿತ್ರಿಯೋ?” ಲೇಖನದಲ್ಲಿ ಹೇಳುತ್ತಾರೆ ಲೋಹಿಯಾ. ಇನ್ನೊಂದೆಡೆ ಕಾಫೀ ಟೇಬಲ್ಲಿನಲ್ಲಿ ಕುಳಿತು ಫ್ರೆಂಚ್ ಕ್ರಾಂತಿಯ ಬಗ್ಗೆ ಮಾತಾಡುತ್ತಿದ್ದ ಗಂಡಸರನ್ನು ನೋಡಿ “ಜಾತಿ, ಲಿಂಗ ಕುರಿತ ಪ್ರತ್ಯೇಕತೆ” ಲೇಖನದಲ್ಲಿ “ನನಗೆ ಮೈ ಉರಿಯತೊಡಗಿತು. ಅಲ್ಲಿ ನೋಡಿದರೆ ಒಬ್ಬ ಶೂದ್ರನಾಗಲಿ, ಹೆಣ್ಣುಮಗಳಾಗಲಿ ಇರಲಿಲ್ಲ. ಇಂಥ ನಿರ್ಜೀವ ಗುಂಪಿನಲ್ಲಿ ನಮ್ಮಂಥ ಗೊಡ್ಡು ಜನರೆಲ್ಲಾ ನೆನ್ನೆಯ ಮೇವನ್ನು ಸುಮ್ಮನೆ ಮೆಲುಕು ಹಾಕುತ್ತಿರುವ ದನಗಳಂತಿದ್ದರು” ಅನ್ನುತ್ತಾರೆ. (ಎರಡೂ ಲೇಖನಗಳ ಅನುವಾದ ”ಸ್ವಾತಂತ್ರದ ಅಂತರ್ಜಲ” ಸಂಕಲನದಲ್ಲಿದೆ.) ಸಹಚರ್ಯ ಎನ್ನುವುದು ಆಧುನಿಕ ಹೋರಾಟಗಾರರ ಮತ್ತು ಚಿಂತಕದ ಬದುಕಿನಲ್ಲೂ ಹದಿಬದೆಯ ಧರ್ಮದ ಚೌಕಟ್ಟನ್ನೂ ಏಕೆ ಮೀರುವುದಿಲ್ಲ ಅನ್ನುವ ಪ್ರಶ್ನೆ ಮನಸ್ಸಿನಲ್ಲಿ “ನನ್ನ ತೇಜಸ್ವಿ” ಓದುವಾಗ ಆಗಾಗ ಏಳುತ್ತದೆ. ಕೊನೆಯ ದಿನಗಳಲ್ಲಿ ತೇಜಸ್ವಿಯವರಿಗೂ ೫೦ ವರ್ಷ ತನ್ನ ಎಲ್ಲಾ ಚಿತ್ರವಿಚಿತ್ರ ಈಡಿಯೋಸಿಂಕ್ರಸಿಗಳ ನಡುವೆಯೂ ಜೊತೆ ನಿಭಾಯಿಸಿದ ವ್ಯಕ್ತಿಯ ಬಗ್ಗೆ ಮೆಚ್ಚುಗೆ, ಆಶ್ಚರ್ಯ ಎಲ್ಲವೂ ಇದ್ದಂತೆ ತೋರುತ್ತದೆ. ಸಾವಿಗೆ ಕೆಲ ದಿನಗಳ ಮುಂಚೆ “ನೀನು ನನಗೆ ಕಂಪನಿ ಕೊಟ್ಯಲ್ಲೇ ಮಾರಾಯ್ತಿ. ನನಗಂತೂ ಎಲ್ಲವು ಆಶ್ಚರ್ಯವಾಗುತ್ತೆ. ಇವತ್ತು ಈ ತುದಿಯಲ್ಲಿ ನಿಂತು ನೋಡಿದರೆ — ಆ ದಿನ ಭೂತನಕಾಡಿನಲ್ಲಿ ಹುಣ್ಣಿಮೆ ದಿನದಿಂದ ನೆನೆದರೆ — ಆ ತುದಿಯಲ್ಲಿದ್ದಾಗ ನುಗ್ಗುವುದೊಂದೇ. ಆಮೇಲೆ ಏನೇನೆಲ್ಲ ನಡೆಯಿತು ಮಾರಾಯ್ತಿ.” ಅಂದದ್ದನ್ನು ರಾಜೇಶ್ವರಿ ನೆನೆಯುತ್ತಾರೆ. ಇವತ್ತು ಇಷ್ಟು ಧೀರ್ಘವಾದ ಪುಸ್ತಕವೊಂದನ್ನು ರಾಜೇಶ್ವರಿ ಬರೆದಿರುವುದು ತೇಜಸ್ವಿಯವರಿಗೂ ಆಶ್ಚರ್ಯ ತರುತ್ತಿತ್ತೇನೋ. ಒಮ್ಮೆ ಶಾಂತವೇರಿ ಗೋಪಾಲಗೌಡರು ಮನೆಗ ಬಂದಾಗ ನೀವೇನಾದರೂ ಬರೆಯುತ್ತೀರಾ ಅಂತ ಗೌಡರು ರಾಜೇಶ್ವರಿಯನ್ನು ಕೇಳಿದ್ದರಂತೆ. “ಅವಳೇನು ಬರೀತಾಳೆ, ಮನೆ ಅಗತ್ಯ ಸಾಮಾನಿನ ಪಟ್ಟಿ ಬರೀತಾಳೆ, ಬೇಕಾದರೆ ಸೋಡಚೀಟಿ ಬರೆದಾಳು” ಅಂತ ಅದಕ್ಕೆ ತಾವೇ ಉತ್ತರ ಹೇಳಿ ತೇಜಸ್ವಿ ನಕ್ಕಿದ್ದರಂತೆ. ಆಗ ಯಾವುದೇ ಕಹಿ ಇಲ್ಲದೆ ರಾಜೇಶ್ವರಿಯವರು ತಾವೂ ನಕ್ಕಿದ್ದಾಗಿ ಪುಸ್ತಕದಲ್ಲಿ ದಾಖಲಿಸುತ್ತಾರೆ. ತೇಜಸ್ವಿಯ ಅತ್ಯಂತ ದೊಡ್ಡ ಫ್ಯಾನ್ ಆಗಿ ಬದುಕಿದ, ಈಗಲೂ ಆಗಿರುವ ರಾಜೇಶ್ವರಿ, “ನನ್ನ ತೇಜಸ್ವಿ” ಬರೆಯುವ ಮೂಲಕ ತೇಜಸ್ವಿಯ ಮಾತನ್ನು ಸುಳ್ಳಾಗಿಸಿರುವುದು ನಿಜವಾಗಿಯೂ ಖುಷಿ ಕೊಡುವ ಸಮಾಚಾರವೆ ಸರಿ! P.S.: ಮತ್ತೆ ಹೀರೋಗಳ ವಿಷಯದ ಬಗ್ಗೆ ಒಂದು ಮಾತು… ತೇಜಸ್ವಿ “ಸಾಹಿತ್ಯ, ಸಂಸ್ಕೃತಿ, ರಾಜಕಾರಣ” ಎಂಬ ತಮ್ಮ ಲೇಖನದಲ್ಲಿ ತಾನು ಫೋಟೋಗ್ರಾಫಿ ಯಾಕೆ ಆಯ್ಕೆ ಮಾಡಿಕೊಂಡೆ ಅನ್ನುವುದರ ಬಗ್ಗೆ ಮಾತನಾಡುತ್ತಾ ಹೀಗೆ ಹೇಳುತ್ತಾರೆ: “ಫೋಟೋಗ್ರಾಫಿಯಲ್ಲಿ the first discipline is that the photographer cannot be a hero of his statement. ಅವನು ಯಾವಾಗಲೂ ಕ್ಯಾಮರಾ ಹಿಂದೆ ಇರಬೇಕೆ ಹೊರತು ಮುಂದೆ ಹೋಗುವುದಕ್ಕೆ ಆಗುವುದಿಲ್ಲ. Whereas in writing I can be a hero, in photography you can exist only as a perspective, as an interpreter, not as a hero… ಹೀಗೆ ಹಂತಹಂತವಾಗಿ ನನ್ನನ್ನು ನಾನು ಕಳೆದುಕೊಳ್ಳುತ್ತಾ ಬಂದಿರೋದು…” (”ತಲೆಮಾರಿನ ತಳಮಳ” ಸಂಕಲನ) ಹೇಗೆ ಬರೆದ ತೇಜಸ್ವಿಯ ಬಗ್ಗೆ ನಾನು, ನನ್ನಂತವರು, ಅವರ ಹೆಂಡತಿ ಎಲ್ಲರೂ ಸೇರಿ ಎಂತಾ ”mystique” ಬೆಳೆಸಿಬಿಟ್ಟಿದ್ದೇವೆ ಅಲ್ಲವಾ? ಹೇಗೆ ಸಾಹಿತ್ಯ ಲೋಕದಲ್ಲಿ charismatic ಅನ್ನಿಸಿಕೊಳ್ಳುವ ವ್ಯಕ್ತಿಗಳ ಸುತ್ತ ಹುಟ್ಟುವ personality cultಗಳು ಎಲ್ಲಾ ಭಾಷೆಯಲ್ಲೂ ಇದೆಯಾ ಅಥವಾ ಇದು ಕನ್ನಡದಲ್ಲಿಯೇ ಜಾಸ್ತಿಯಾ?  ]]>

‍ಲೇಖಕರು G

September 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. prasad raxidi

    ಲೋಹಿಯಾ ಮಾತಿಗೆ ಅಪವಾದವಾಗಿ ಅಥವಾ ಅವರಿದ್ದಿದ್ದರೆ ಮೆಚ್ಚಿಕೊಳ್ಳುತ್ತಿದ್ದ ವ್ಯಕ್ತಿತ್ವ ಮತ್ತು ಬರಹವಾಗಿ ಇಂದಿರಾ ಲಂಕೇಶ್ ಅವರ ಬರಹ ಬರುತ್ತಿದೆ. ಅದನ್ನು ಓದಲು, ಲಂಕೇಶ್ – ತೇಜಸ್ವಿ ಇಬ್ಬರೂ ಇರಬೇಕಿತ್ತು….

    ಪ್ರತಿಕ್ರಿಯೆ
  2. Hanamanth

    ತೇಜಸ್ವಿ ದಂಪತಿಗಳ ಬಗ್ಗೆ ತುಂಬ ಆಪ್ತವಾದ ಬರಹ. ಖುಶಿಯಾಯಿತು

    ಪ್ರತಿಕ್ರಿಯೆ
  3. lalitha siddabasavaiah

    ಪ್ರಿಯ ಬಾಗೇಶ್ರೀ, ನಿಮ್ಮ ಲೇಖನ ಚೆನ್ನಾಗಿದೆ. ನನಗೂ ಈ ಪುಸ್ತಕ ಓದಿದಾಗ ರಾಜೇಶ್ವರಿಯವರ ಪತಿಭಕ್ತಿಯ ಬಗ್ಗೆ ಅಚ್ಚರಿಯೆನಿಸಿತಾದರೂ ಮತ್ತೆ ಮತ್ತೆ ಅದನ್ನೆ ಕುರಿತು ಯೋಚಿಸುತ್ತ ಯೋಚಿಸುತ್ತ ಇದೊಂದು ದಾಂಪತ್ಯದ ಅಪರೂಪದ ಸ್ಯಾಂಪಲ್ ಅನಿಸಿತು. ಸತಿಗೆ ಶಿವ ಅರ್ಧದೇಹ ಕೊಟ್ಟನಂತೆ . ಇಲ್ಲಿ ನಿಜವಾಗಿ ಕೊಟ್ಟದ್ದು ರಾಜೇಶ್ವರಿ !ರಾಜೇಶ್ವರಿ ,ತೇಜಸ್ವಿಯನ್ನು ತನ್ನರ್ಧದಲ್ಲಿ ಕರಗಿಸಿಕೊಂಡು ಬಿಟ್ಟು ಅರ್ಧಪುರುಷೇಶ್ವರ ಆಗಿಬಿಟ್ಟಿದ್ದಾರೆ. ಅವರು ತನ್ನನ್ನು ಕೊಟ್ಟುಕೊಂಡು ತೇಜಸ್ವಿಯನ್ನು ಪಡೆದರು ಮತ್ತು ಭರಿಸಿದರು.ಪಡೆದು ಭರಿಸಿ ಅದರಲ್ಲೆ ಆನಂದಿಸಿದರು. ಬಹುಶಹ ತೇಜಸ್ವಿಗೆ ಈ ಭಾಗ್ಯವಿಲ್ಲ.”ನಿನ್ನಂಥ ತಂದೆ ಎನಗುಂಟು ನಿನಗಿಲ್ಲ , ನಾನು ಸನಾಥ ನೀನೇ ಅನಾಥ “… ತೇಜಸ್ವಿಯಂಥ ಗಂಡ ನನಗುಂಟು , ಹೇ ತೇಜಸ್ವಿ ನಿನಗಿಲ್ಲ – ಇಡೀ ಪುಸ್ತಕ ಈ ನೆಲೆಯಲ್ಲೆ ಮಾತನಾಡಿದೆಯೆಂದು ನನಗನಿಸಿತು. ಒಂದು ಸಿನಿಮಾದಲ್ಲಿ ಹುಡುಗಿಯೊಬ್ಬಳು ದೂರವಿರುವ ತನ್ನ ಪ್ರಿಯಕರನ ಕಡೆಯಿಂದ ದೂತ ಬಂದಾಗ ಅವನ ಕೈ ಮುಟ್ಟಿ ಈ ಕೈಯನ್ನು ಅವನು ಹಿಡಿದಿದ್ದ ಅಲ್ಲವೆ ಇದು ನನಗೆ ಜೇನಿನ ಸಮಾನ ಎನ್ನುತ್ತ ಹುಚ್ಚಿಯಂತೆ ದೂತನ ಮುಂಗೈಯನ್ನೆ ಪ್ರಿಯಕರನ ಮುಂಗೈಯೆಂದು ಭಾವಿಸಿ ಮುತ್ತುಮಳೆ ಸುರಿಸುತ್ತಾಳೆ. ಅದೊಂದು ಉನ್ಮಾದದ ಕ್ಷಣ. ಅದನ್ನು ನೋಡಿ ನಾನೂ ನನ್ನ ಗೆಳತಿ ಇದೆಂಥ ತಿಕ್ಕಲು ಎಂದು ನಗಾಡಿದ್ದೆವು. ರಾಜೇಶ್ವರಿಯವರ ಪುಸ್ತಕ ಓದಿದಾಗ ನನಗೆ ಇಲ್ಲ ಇದು ಹುಚ್ಚಲ್ಲ, ಇಂಥಹ ಕೊಡುಕೊಳೆ ಅಪರೂಪಕ್ಕೊಮ್ಮೆ ನಿಜಬದುಕಿನಲ್ಲಿ ಸಾಧ್ಯ ಅನಿಸಿತು. ಬಹುಶಹ ರಾಜೇಶ್ವರಿಯವರ ಮನಸ್ಸು ದೇಹಗಳೆರಡು ತೇಜಸ್ವಿಸ್ಪರ್ಷದಲ್ಲಿ ತೇಜಸ್ವಿಯೆ ಆಗಿಹೋಗಿರಬಹುದು. ಅಸಾಧ್ಯ ಪ್ರೀತಿಗೆ ಈ ಶಕ್ತಿಯಿದೆಯೇನೋ. – ಲಲಿತಾ ಸಿದ್ಧಬಸವಯ್ಯ

    ಪ್ರತಿಕ್ರಿಯೆ
  4. A P BHAT

    ತೇಜಸ್ವಿಯವರ ಪ್ರತಿಭೆ ಮೂರ್ತವಾಗಲು ಪೂರಕವಾಗಿ ಯಾವದೇ ಗೊಣಗಾಟವಿಲ್ಲದೆ ಬದುಕಿದ ಜೀವ ರಾಜೇಶ್ವರಿ ಎನಿಸುತ್ತದೆ .ರಾಜೆಸ್ವರಿಯಲ್ಲಿಯೇ ಇದ್ದ ಒಬ್ಬ ಬರಹಗಾರ ಕುಟಂಬ ಕ್ಷೇಮಕ್ಕಾಗಿಯೇ ಇಷ್ಟು ದಿನ ಹೊರಬರಲಿಲ್ಲವೋ ಅಥವಾ ಬಹುಮುಖ ವ್ಯಕ್ತಿತ್ವ ದೊದಣ್ಣ
    ದೀರ್ಘ ಒಡನಾಟ ಅವರನ್ನು ಉತ್ತಮ ಬರಹಗಾಥಿಯನ್ನಗಿಸಿತೋ? ಇತ್ತೀಚಿಗೆ ಬಂದ ಭಾರ್ಘವಿ ನಾರಾಯಣ ಅವರ ಜೀವನ ಚರಿತ್ರೆ ಯಲ್ಲಿ
    ಎರಡು ಪ್ರತಿಭೆಗಳು ಸಮಾನ್ಥರವಾಗಿ ಬೆಳೆಯುವಾಗ ಬರುವ ಸಮಸ್ಯೆಗಳು ಚೆನ್ನಾಗಿ ನಿರೂಪಿತವಾಗಿವೆ.

    ಪ್ರತಿಕ್ರಿಯೆ
  5. Somashekhar

    Nice write up. I haven’t read the book yet. But I had a similar feeling after reading a book about Kuvempu by Tarini

    ಪ್ರತಿಕ್ರಿಯೆ
  6. ಎಚ್. ಸುಂದರ ರಾವ್

    ತೇಜಸ್ವಿಗೆ ರಾಜೇಶ್ವರಿ ಸಿಕ್ಕಿದ್ದರಿಂದಲೇ ಕನ್ನಡಕ್ಕೆ ತೇಜಸ್ವಿ ಪೂರ್ತಿಯಾಗಿ ಸಿಕ್ಕಿದ್ದು.

    ಪ್ರತಿಕ್ರಿಯೆ
  7. ashok kumar Valadur

    ಓದಿ ತುಂಬಾ ಖುಷಿಯಾಯಿತು . ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: