ತೇಜಸ್ವಿ ಕಾಫೀಪುಡಿ ಕಥೆ

‘ನಿರುತ್ತರ’ದೆಡೆಗೆ

avirata sathish

ಅವಿರತ -ರೋಹಿತ್ ಎಸ್ ಎಚ್

 

ಬಸ್ಸಿನ ಕೊನೆ ಸಾಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಕೂತು, ಆಗಷ್ಟೇ ನಿದ್ದೆಯಿಂದ ಎಚ್ಚರವಾಗುತ್ತಿದ್ದ ನನ್ನ ಕಣ್ಣಿಗೆ ’ಶ್ರೀ ದುರ್ಗಾ ಶಕ್ತಿ ಚಿಕನ್ ಸೆಂಟರ್, ಕೆ.ಎಂ. ರಸ್ತೆ, ಮೂಡಿಗೆರೆ’ ಎಂಬ ಬೋರ್ಡ್ ನೋಡಿದ್ದೇಆಶ್ಚರ್ಯವಾಗಿ, ನಿದ್ದೆ ಎಗರಿ ಹೋಯಿತು. ’ಅರೆ! ಇದೇನಿದು ನಾನು ಮೂಡಿಗೆರೆಯಲ್ಲಿ ಇದ್ದೇನೆ’ ಎಂದು ಗೊಂದಲಗೊಂಡರೂ, ಹಿಂದೆಯೇ ದೊಡ್ಡ ಖುಷಿಯೊಂದು ನಗುವಾಗಿ ಮುಖದ ಮೇಲೆ ಮೂಡಿತ್ತು.

tejasvi5ಇದು ಕನಸೇ?! ಎಂದು ಸಣ್ಣಗೆ ಸಂಶಯವುಂಟಾಗಿ ಕೈ ಚಿವುಟಿಕೊಂಡು, ’ಅಲ್ಲ’ ಎಂದು ಖಚಿತಪಡಿಸಿಕೊಂಡ ಮೇಲೆ, ಆ ಸಣ್ಣ ಕಿಟಕಿಯಿಂದಲೇ ಸಾಧ್ಯವಾದಷ್ಟು ಮೂಡಿಗೆರೆಯನ್ನು ಕಣ್ತುಂಬಿಕೊಂಡೆ. ಕಣ್ಣು, ತೇಜಸ್ವಿಯವರ ಕತೆಗಳಲ್ಲಿ ಬರುವ ಮೂಡಿಗೆರೆಯ, ಮುನ್ಸಿಪಾಲಿಟಿ ಕಚೇರಿ, ಆಸ್ಪತ್ರೆ, ಸ್ಕೂಲು ಇವುಗಳು ಕಾಣಬಹುದೇನೋ ಎಂದು ಹುಡುಕಾಟ ಶುರುಮಾಡಿದ್ದರೆ, ಮನಸ್ಸು, ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದಲ್ಲಿ ಬರುವ ’ನಿರುತ್ತರ’ ಗೇಟನ್ನು ಕಾಣಲು ಹಪಹಪಿಸುತ್ತಿತ್ತು. ಬೆಳಗ್ಗೆ ಕುಪ್ಪಳಿಗೆ ಭೇಟಿ ನೀಡಿ, ಅಲ್ಲಿಂದ ಸಂಜೆ ೪ ರ ಹೊತ್ತಿಗೆ ಮೂಡಿಗೆರೆಗೆ ಬಂದು ರಾಜೇಶ್ವರಿ ಯವರನ್ನು ಭೇಟಿ ಮಾಡುವ ಯೋಜನೆ ನಮ್ಮದಾಗಿತ್ತು.

ರಾಜೇಶ್ವರಿಯವರಿಗೂ ಈ ವಿಷಯ ತಿಳಿಸಿ, ಮೂರು-ನಾಲ್ಕು ದಿನಗಳ ಹಿಂದೆಯೆ ಅವರ ಒಪ್ಪಿಗೆ ಪಡೆದಿದ್ದೆವೂ ಸಹ. ಆದರೆ, ಕಾರಣಾಂತರಗಳಿಂದ ಕುಪ್ಪಳಿಯಲ್ಲೇ ನಾವು ನಮಗೇ ಅರಿವಿಲ್ಲದೆ ಹೆಚ್ಚಿನ ಸಮಯ ಕಳೆದುದರಿಂದ, ಅಮ್ಮಡಿ ಮುಖಾಂತರ ಊಟ ಮುಗಿಸಿ ಹೊರಡುವಾಗಲೇ ಸಮಯ ೪.೩೦ ಆಗಿತ್ತು. ಕುಪ್ಪಳಿಯಿಂದ ಮೂಡಿಗೆರೆಗೆ ೮೨ ಕಿ.ಮೀ ದೂರ. ಸುರಿಯುತ್ತಿದ್ದ ಮಳೆ ಹಾಗೂ ಸಾಗಬೇಕಾದ ಘಾಟಿ ರಸ್ತೆಯನ್ನು ಗಮನಿಸಿದರೆ ಮೂಡಿಗೆರೆಗೆ ತಲುಪುವ ಹೊತ್ತಿಗೆ ೭ ಘಂಟೆ ಆಗಬಹುದು ಎಂದು ಅಂದಾಜಿಸಿ, ಆ ವೇಳೆಯಲ್ಲಿ ಇಷ್ಟು ಜನ (ನಾವೂ ಒಟ್ಟು ೨೯ ಜನರಿದ್ದೆವು) ಒಟ್ಟಿಗೆ ಹೋಗಿ ರಾಜೇಶ್ವರಿಯವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಯೋಚಿಸಿ, ’ನಿರುತ್ತರ’ಕ್ಕೆ ಭೇಟಿ ನೀಡುವ ನಮ್ಮ ಯೋಜನೆಯನ್ನು ಕೈಬಿಡುವುದೆಂದು ನಿರ್ಧಾರ ಮಾಡಿದೆವು. ಅಲ್ಲಿಗೇ ನಿರುತ್ತರಕ್ಕೆ ಹೋಗಬೇಕೆನ್ನುವ ನನ್ನ ಕನಸು ಮೂರನೇ ಬಾರಿಯೂ ಮಣ್ಣಾಯಿತೆಂದೆನಿಸಿ, ಪ್ರಯಾಣದಲ್ಲಿ ಯಾವುದೇ ಕುತೂಹಲ ಉಳಿಯದೆ ಬೇಸರದಲ್ಲಿ ಕಣ್ಣು ಮುಚ್ಚಿದವನಿಗೆ ನಿದ್ದೆ ಹತ್ತಿತ್ತು. ಈ ನಡುವೆ, ಹಿರಿಯ ಗೆಳೆಯರಾದ ಸತೀಶ್, ರಾಜೇಶ್ವರಿಯವರಿಗೆ ಫೋನ್ ಮಾಡಿ, ಬರಲಾಗುತ್ತಿಲ್ಲ ಎಂಬ ವಿಷಯವನ್ನು ಕಾರಣ ಸಹಿತ ವಿವರಿಸಿದ್ದಾರೆ.

 

ಆದರೆ, ರಾಜೇಶ್ವರಿಯವರು, ’ಅಯ್ಯೋ..ಪರವಾಗಿಲ್ಲ ಬನ್ನಿ. ನನಗೇನೂ ತೊಂದರೆಯಿಲ್ಲ. ಬರುವುದೇ ಖುಷಿ’ ಎಂದು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ನಿದ್ದೆ ಮಾಡುತ್ತಿದ್ದ ನನಗೆ ಈ ವಿಷಯ ಗೊತ್ತಿಲ್ಲ. ಹಾಗಾಗಿ, ಎಚ್ಚರಾದಾಗ ಮೂಡಿಗೆರೆ ಎಂದು ನೋಡಿದ ತಕ್ಷಣ ಆಶ್ಚರ್ಯವಾಯಿತು. ಬಸ್ಸು ’ನಿರುತ್ತರ’ ಗೇಟಿನ ಬಳಿ ಬಂದು ನಿಂತಾಗ ಮನಸ್ಸು ಖುಷಿಯಿಂದ ಕುಣಿದಾಡುತ್ತಿತ್ತು. ಕನಸೊಂದು ನನಸಾದಾಗ ಮೂಡುವಖುಷಿಯಲ್ಲ ಅದು. ಕನಸು ನನಸಾಗುವ ಅವಕಾಶವೊಂದು ಕೈ ತಪ್ಪಿಹೋದ ಬೇಸರದ ಹಿಂದೆಯೇ, ಆ ಕೂಡಲೇ ಮತ್ತೊಂದು ಅವಕಾಶ ಕೈ ಹಿಡಿದು, ಕನಸು ನನಸಾಗುವುದಿದೆಯಲ್ಲ, ಆ ರೀತಿಯ ಖುಷಿಯದು. ಅದರ ಸಂಭ್ರಮ, ಸಡಗರವೇ ಬೇರೆ.

tejasvi2ಕೊನೆಗೂ ಮೂಡಿಗೆರೆಯ ’ನಿರುತ್ತರ’ ಮನೆಯ ಗೇಟು ದಾಟಿ ಒಳ ಹೋಗುವಾಗ ೭ ಘಂಟೆಯಾಗಿತ್ತು. ಸುತ್ತಲಿನ ಗಿಡ ಮರಗಳು ಭಯ ಹುಟ್ಟಿಸುವ ರೂಪ ತಾಳುವ ಸಮಯವದು. ಗಾಢಾಂಧಕಾರ ಆವರಿಸುತ್ತಿತ್ತು. ಅಷ್ಟೊತ್ತಿಗಾಗಲೇ ಬೆಳಗಿನಿಂದ ಆಲಸಿಗಳಂತೆ ಬಿದ್ದುಕೊಂಡು, ಕತ್ತಲಾಗುತ್ತಿದ್ದಂತೆ ತಮ್ಮ ಇರುವಿಕೆಯನ್ನು ಸಾರಿ ಸಾರಿ ಹೇಳುವ ಹುಳ ಹುಪ್ಪಟೆಗಳು, ನಿಶಾಚಾರಿಗಳು ಕಾರ್ಯಪ್ರವೃತ್ತವಾಗಿ ವಿಚಿತ್ರವಾದಕೀರುದನಿಯಿಂದತಡೆದುತಡೆದುಕೂಗುತ್ತಾ, ತಾಳಬದ್ದವಾಗಿ ಸದ್ದು ಮಾಡುತ್ತಿದ್ದವು. ಎರಡು ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಯಾವ ಕಾರಣಕ್ಕೋ ಏನೋ ಸ್ವಲ್ಪ ಕಾಲ ವಿರಾಮ ಘೋಷಿಸಿದೆಎನಿಸಿದರೂ, ಮೋಡಗಳುದಟ್ಟವಾಗಿದ್ದವು. ಜೌಗು ನೆಲ, ನೀರು ನಿಂತ ಸಣ್ಣ ಸಣ್ಣ ಹಳ್ಳಗಳು, ಅಲ್ಲೇ ಹರಿದಾಡಿ ಹೋಗುವ ಸಾಧ್ಯತೆಯಿರುವ ಹಾವುಗಳ ಭಯ, ರಕ್ತ ಹೀರುವ ಜಿಗಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ.. ಇವುಗಳ ನಡುವೆ ಮೆಲ್ಲ ಬೀಸುತ್ತಿದ್ದತಣ್ಣನೆಯ ಗಾಳಿ, ಚಳಿ ನಮಗ್ಯಾರಿಗೂ ತಟ್ಟಲೇ ಇಲ್ಲ. ಪ್ರಕೃತಿಯ ನಿಗೂಢತೆಯನ್ನು ಅನ್ವೇಷಿಸ ಹೊರಟ ’ಸದಾ ಕುತೂಹಲಿ’ಯ ಮನೆಗೆ ಭೇಟಿ ನೀಡುವಾಗ ಇದಕ್ಕಿಂತಲೂ ಸೊಗಸಾದ, ಸೂಕ್ತವಾದ ಸ್ವಾಗತ, ಪರಿಸರ ಬೇಕೆ?

’ಅಲೆಮಾರಿಯ ಅಂಡಮಾನ್’ ಕೃತಿಯ ಒಂದು ಸಣ್ಣ ಭಾಗ ನಮಗೆ ಹೈಸ್ಕೂಲಿನಲ್ಲಿ ಪಠ್ಯವಾಗಿತ್ತು. ಅಲ್ಲಿಂದ ತೇಜಸ್ವಿಯವರ ಹುಚ್ಚಿಗೆ ಬಿದ್ದವನು ನಾನು. ಮುಂದೆ ಕಾಲೇಜಿಗೆ ಸೇರಿದಾಗ ಕುತೂಹಲ ತಣಿಯಲು ತೇಜಸ್ವಿಯವರ ಮಿಲೇನಿಯಂ ಸರಣಿಯನ್ನು ಓದಿ, ಗೆಳೆಯರ ಮುಂದೆಲ್ಲ ಪ್ರಪಂಚದ ವಿಸ್ಮಯಗಳ ಬಗ್ಗೆ ಹೇಳುತ್ತಾ ಫೋಸು ಕೊಡುತ್ತಿದ್ದೆ.

ಅದೊಮ್ಮೆ, ನಾವು ೪ ಜನ ಗೆಳೆಯರು ಮಂಗಳೂರಿಗೆ ಹೋಗುತ್ತಿದ್ದಾಗ ದಾರಿ ಬದಿ ’ಮೂಡುಬಿದಿರೆ – ೧೨ ಕಿ.ಮೀ.’ ಎಂಬ ಮೈಲಿಗಲ್ಲನ್ನು ನೋಡಿ, ಗೆಳೆಯರಿಗೆಲ್ಲಾ ಬಲವಂತ ಮಾಡಿ ಗಾಡಿಯನ್ನು ಮೂಡುಬಿದಿರೆ ಕಡೆ ತಿರುಗಿಸಿ, ಮೂಡುಬಿದಿರೆಯೆಲ್ಲಾ ಸುತ್ತಾಡಿಸಿದ್ದೆ; ತೇಜಸ್ವಿಯವರ ಮನೆ ಹುಡುಕುತ್ತಾ!!!! ಹೌದು, ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿನ ತೇಜಸ್ವಿ ಮನೆಯನ್ನು, ಮಂಗಳೂರಿನ ಮೂಡುಬಿದಿರೆಯಲ್ಲಿ ಹುಡುಕಾಡಿದ ಮಹಾನ್ ಸಾಹಸಿ ನಾನು! ಅಲ್ಲಿನ ಪೋಸ್ಟಾಫೀಸ್ ಹಾಗೂ ಪೋಲೀಸ್ ಸ್ಟೇಷನ್ ಹೊರತು ಪಡಿಸಿ, ಎಲ್ಲಾ ಕಡೆ ’ಸರ್, ಇಲ್ಲಿ ತೇಜಸ್ವಿ ಅವರ ಮನೆ ಎಲ್ಲಿದೆ?’ ಅಂತ ಕೇಳುತ್ತಾ ತಿರುಗಾಡಿದ್ದೆ. ನನ್ನ ಪ್ರಶ್ನೆ ಕೇಳಿದ ಎಲ್ಲರೂ, ’ತೇಜಸ್ವಿಯಾ? ಅಡ್ರೆಸ್ಸ್ ಉಂಟಾ?’ ಎಂದು ನನ್ನನ್ನೇ ಪ್ರಶ್ನೆ ಕೇಳಿದ್ದರು. ’ತೇಜಸ್ವಿಯಂತ ವ್ಯಕ್ತಿ ಬಗ್ಗೆ ಗೊತ್ತಿಲ್ಲದ ಜನ!!’ ಅಂತ ನನಗೆ ನಾನೇ ಅವರನ್ನು ಬೈಯ್ದುಕೊಂಡಿದ್ದೆ. ಆ ನಂತರ ನನ್ನ ಕನ್ನಡ ಮೇಷ್ಟ್ರಿಗೆ ಫೋನ್ ಮಾಡಿ, ಅದು ಮೂಡುಬಿದಿರೆಯಲ್ಲ, ಮೂಡಿಗೆರೆಯೆಂದು ತಿಳಿದು, ಗೆಳೆಯರ ಮುಂದೆ ನಗೆಪಾಟಲಿಗೆ ಈಡಾಗಿದ್ದೆ.

ಆ ನಂತರದಲ್ಲಿ ಅವರ ಕೃತಿಗಳನ್ನು ಹೆಚ್ಚು ಹೆಚ್ಚು ಓದಿದಷ್ಟು ಅವರು ಬಹಳ ಇಷ್ಟವಾಗತೊಡಗಿದರು. ಅವರ ಓದುಗರನೇಕರು ಮೂಡಿಗೆರೆಯ ಅವರ ಮನೆಗೆ ಭೇಟಿ ನೀಡಿ ಬಂದುದರ ಬಗ್ಗೆ ಹೇಳುಕೊಳ್ಳುವುದನ್ನು ಓದಿದಾಗ, ಕೇಳಿದಾಗ ಅವರ ಮನೆಗೊಮ್ಮೆ ಭೇಟಿ ನೀಡಬೇಕು ಎಂಬ ಆಸೆ ಬೆಳೆಯುತ್ತಾ ಬಂದಿತು. ಕೃತಿಗಳನ್ನು ಓದಿದ ಮಾತ್ರಕ್ಕೆ ಲೇಖಕರ ಮನೆಗೆ ಭೇಟಿ ನೀಡಬೇಕೆಂದೆನಿಸುವುದೇ?! ಗೊತ್ತಿಲ್ಲ. ಆದರೆ, ನನ್ನ ಈ ಕನಸಿಗೆ ಬಲವಾದ ಕಾರಣವೆಂದರೆ, ’ಚಿಗುರಿದ ಕನಸು’ ಕಾದಂಬರಿಯನ್ನು ಹಾಗೂ ಚಲನಚಿತ್ರವನ್ನು ಬಹಳವಾಗಿ ಇಷ್ಟಪಡುವ ನನಗೆ, ಆ ಕಥೆಯಲ್ಲಿ ಬರುವ ಶಂಕರನ ಪಾತ್ರದ ಜೀವಂತ ಉದಾಹರಣೆಯಂತೆ ತೇಜಸ್ವಿಯವರು ಕಂಡರು. ಕಥೆಯಲ್ಲಿನ ಶಂಕರ ಸಂಬಂಧಗಳ ನಂಟು ಉಳಿಸಿಕೊಳ್ಳುವ ಹಂಬಲದಿಂದ ನಗರದಿಂದ ಹಳ್ಳಿಗೆ ಬಂದರೆ, ತೇಜಸ್ವಿಯವರೂ ಸಹಪ್ರಕೃತಿಯೊಡನೆಸಂಬಂಧಬೆಸೆದುಕೊಳ್ಳುವುದಕ್ಕೋ, ಬೆರಗುಗೊಳಿಸಲಿಕ್ಕೋಏನೋನಗರದಿಂದಹಳ್ಳಿಗೆಹೋಗಿಬದುಕಿಬೆಳೆದವರು.ಅವರಬದುಕಿನಈನಿರ್ಧಾರ, ನಡೆಯೇನನಗೆಯಾವಾಗಲೂಸ್ಪೂರ್ತಿಹಾಗೂಅಚ್ಚರಿಹುಟ್ಟಿಸುವಂತದ್ದು.

ಈ ಹಿಂದೆ ಮೂಡಿಗೆರೆಯ ಮುಖಾಂತರವಾಗಿ ಎರಡು ಬಾರಿ ಹಾದುಹೋಗುವಸಂದರ್ಭ ಬಂದಾಗಲೂ, ಸಮಾನ ಮನಸ್ಕರಿಲ್ಲದೆ ಅಲ್ಲಿಗೆ ಭೇಟಿ ನೀಡಲು ಆಗಲೇ ಇಲ್ಲ. ಇಂತಹ ಯೋಚನೆಗಳು, ನೆನಪುಗಳು ನನ್ನ ಮನಸ್ಸಿನಲ್ಲಿಒಂದರ ಹಿಂದೊಂದರಂತೆ ಮೂಡಿ ಮರೆಯಾಗುತ್ತಿರುವಾಗಲೇ, ಅವರದೇ ನೆಲದಲ್ಲಿ ಸಂಭ್ರಮಿಸುತ್ತಾ ನಡೆದು ತೋಟದ ನಡುವಿನ ಮನೆಯನ್ನು ತಲುಪಿದಾಗ ಕಂಡದ್ದು ನಮ್ಮ ತಂಡದವರನ್ನು ನಗು ಮೊಗದಿಂದ, ಸಂತೋಷದಿಂದ ಬರಮಾಡಿಕೊಳ್ಳುತ್ತಿದ್ದ ರಾಜೇಶ್ವರಿ ತೇಜಸ್ವಿಯವರು.

ದಟ್ಟವಾದ ಗಿಡಮರಗಳ ಸಮೂಹದಲ್ಲಿ ಹುದುಗಿರುವಂತೆ ತೋರುವ ಆ ಮನೆಯಲ್ಲೀಗ ಜನಜಾತ್ರೆ. ಹೌದು! ಜಾತ್ರೆ, ಜನಜಾತ್ರೆ, ಯಾಕೆಂದರೆ ನಾವು ಒಟ್ಟು ೨೯ ಜನ ಹೋಗಿದ್ದೆವು!! ದಿನದ ಬಿಡುವಿಲ್ಲದ ಕೆಲಸಗಳ ನಂತರ ಸಂಜೆಯ ಹೊತ್ತಲ್ಲಿ ವಿರಮಿಸುತ್ತಲೋ, ಓದುತ್ತಲೋ ಆರಾಮವಾಗಿ ಕಳೆಯಬಹುದಾದರೂ, ರಾಜೇಶ್ವರಿಯವರು ನಮ್ಮ ಭೇಟಿಗೆ ಒಪ್ಪಿದ್ದರು. ಪ್ರತಿಯೊಬ್ಬರನ್ನೂ ಬಹಳ ಆತ್ಮೀಯವಾಗಿ, ನಗುಮೊಗದಿಂದ ಬರಮಾಡಿಕೊಂಡರು. ಒಳ ಹೋದ ನಾನು ಕೆಲವು ಸೆಕೆಂಡ್ಗಳ ಕಾಲ ಆಶ್ಚರ್ಯ ಸ್ತಂಭಿತನಾದೆ. ಆಲಂಕಾರಿಕ, ಆಡಂಬರದ ವಸ್ತುಗಳಿಂದ ಅಚ್ಚುಕಟ್ಟಾದ ಗೋಡೌನ್ನಂತಿರದ ಸರಳವಾದ ಮನೆಯದು. ಒಂದೆರಡು ಕುರ್ಚಿಗಳು ಹಾಗೂ ತೇಜಸ್ವಿಯವರ ದೊಡ್ಡದೊಂದು ಫೋಟೋವಷ್ಟೇ ಅಲ್ಲಿನ ಅಲಂಕಾರ. ಅಲ್ಲೇ ನಾವೆಲ್ಲಾ ಓತಪ್ರೋತವಾಗಿ ಶಿಸ್ತಿನಿಂದ ಕುಳಿತೆವು, ರಾಜೇಶ್ವರಿಯವರು ತೇಜಸ್ವಿಯವರ ದೊಡ್ಡ ಫೋಟೋದ ಪಕ್ಕ ಕುರ್ಚಿಯಲ್ಲಿ ಕುಳಿತು ನಮ್ಮೆಲ್ಲರ ಹೆಸರನ್ನು, ವೃತ್ತಿಯನ್ನು ಕೇಳಿ ಪರಿಚಯ ಮಾಡಿಕೊಂಡರು. ಆ ಸಮಯದಲ್ಲೇ ಒಂದಷ್ಟು ಜಾಣತನ ತೋರಿ, ತಮಾಷೆ ಮಾಡಿ, ನಮ್ಮಲ್ಲಿದ್ದ ಆತಂಕವನ್ನು ದೂರ ಮಾಡಿದರು.

ಆ ನಂತರ, ಅಲ್ಲಿ ಸುರಿದಿದ್ದು ನೆನಪಿನ ಮಳೆ, ಹರಿದಿದ್ದು ಖುಷಿಯ ಹೊಳೆ. ಕೆಲವು ನೆನಪುಗಳ ತುಂತುರು;

tejasvi9

 

ನಾಯಿಗುತ್ತಿ – ಗುತ್ತಿನಾಯಿ

ನಮ್ಮೊಂದಿಗೆ ಕೆವೈಎನ್ (ಕೆ.ವೈ.ನಾರಾಯಣ ಸ್ವಾಮಿ) ಮೇಷ್ಟ್ರು ಇದ್ದಿದ್ದರಿಂದ ಮಾತು ಸಹಜವಾಗಿ, ’ಮಲೆಗಳಲ್ಲಿ ಮದುಮಗಳು’ ನಾಟಕದ ಮುಖಾಂತರವಾಗಿ ಶುರುವಾಯಿತು. ಮೈಸೂರಿನಲ್ಲಿ ಮಾತ್ರ ಈ ನಾಟಕದ ಪ್ರದರ್ಶನವನ್ನು ನೋಡಿರುವ ರಾಜೇಶ್ವರಿಯವರಿಗೆ ಇಡೀ ನಾಟಕದಲ್ಲಿ ಇಷ್ಟವಾದ ದೃಶ್ಯವೆಂದರೆ, ಗುತ್ತಿ ಹಾಗೂ ನಾಯಿ ಬೇರ್ಪಡುವ ದೃಶ್ಯವಂತೆ. ಆ ದೃಶ್ಯ ಮೈಸೂರಿನ ಪ್ರದರ್ಶನದಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಆದರೆ, ಬೆಂಗಳೂರಿನಲ್ಲಿ ಆ ದೃಶ್ಯವನ್ನು ಕಡಿತಗೊಳಿಸಲಾಗಿದೆಯೆಂದು ಎರಡೂ ಕಡೆ ನಾಟಕ ನೋಡಿದ್ದ ಅವರ ಮಕ್ಕಳು ಅವರಿಗೆ ಹೇಳಿದ್ದರಂತೆ. ಮಲೆಗಳಲ್ಲಿ ಮದುಮಗಳು ನಾಟಕವನ್ನು ಬೆಂಗಳೂರಿನಲ್ಲಿ ಎರಡು, ಮೂರು ಬಾರಿಗಿಂತಲೂ ಹೆಚ್ಚು ಸಲ ನೋಡಿರುವ ನಮ್ಮ ತಂಡದವರು, ’ಅಂದು ಮಳೆ ಬಂದ ಕಾರಣ, ನಾಟಕವನ್ನು ರಾತ್ರಿ ೧೧.೦೦ ಕ್ಕೆ ಶುರು ಮಾಡಿದ್ರು, ಮೂರನೇ ರಂಗದ ಆಟ ಮುಗಿಯುವ ವೇಳೆಗೆ ಬೆಳಕಾಗಿದ್ದರಿಂದ ನಾಲ್ಕನೇ ರಂಗದ ಆಟವನ್ನು ಸಂಪೂರ್ಣವಾಗಿ ಕಡಿತಗೊಳಿಸಿದ್ದರು’ ಅಂತ ಹಿನ್ನೆಲೆ ತಿಳಿಸಿ ಹೇಳಿದೆವು.

ಕಾಫೀಪುಡಿ ಕಥೆ:

ಒಮ್ಮೆ ಶಿವರಾಮ ಕಾರಂತರು ಇವರ ಮನೆಗೆ ಬಂದು, ಹೊರಡುವಾಗ ಕಾರಂತರಿಗೆ ಇಷ್ಟವಾದ ಕಾಫೀ ಪುಡಿಯನ್ನು ಕೊಡಲು ರಾಜೇಶ್ವರಿಯವರು ಮರೆತುಬಿಟ್ಟರಂತೆ. ಮರೆವಿನಿಂದ ಪೇಚಾಡಿಕೊಂಡ ರಾಜೇಶ್ವರಿಯವರು, ಮರುದಿನವೇ ಕಾಫೀ ಪುಡಿಯನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಆ ನಂತರ ಕಾರಂತರ ಪತ್ರ ಬಂದಿದೆ – ’ಅಮ್ಮಾ, ನೀನು ಕಳುಹಿಸಿಕೊಟ್ಟ ಕಾಫೀ ಪುಡಿಯನ್ನು ಉಪಯೋಗಿಸಲು ನಾನು ಹೊಸದಾಗಿ ಒಂದು ಹಸುವನ್ನೇ ಖರೀದಿಸಬೇಕು!!’

ಜಸ್ಟ್ ಮಿಸ್!!!

ಅದು ತೇಜಸ್ವಿಯವರು ಬೇಟೆ, ಬೇಟೆ ಎಂದು ಹುಚ್ಚತ್ತಿಸಿಕೊಂಡಿದ್ದ ದಿನಗಳು. ಅಂಥಾ ದಿನಗಳಲ್ಲೇ ಇವರ ಕೈಗೆ ಹೊಸದೊಂದು ರೈಫಲ್ ಬಂದು ಸೇರಿದೆ. ಅದನ್ನು ತೆಗೆದುಕೊಂಡು ಬೇಟೆಗೆಂದು ಹೊರಟವರು, ಎಷ್ಟೋ ಹೊತ್ತಿನ ಬಳಿಕ ಕಾಡಿನಲ್ಲಿ ಹೊಂಚು ಹಾಕಿ, ಸಂಚು ಮಾಡಿ ಹಂದಿಯೊಂದನ್ನು ಹೊಡೆಯುವ ಸಲುವಾಗಿ ಗುಂಡು ಹಾರಿಸಿದ್ದಾರೆ. ಹಾಗೆ ಅವರ ಆ ಹೊಸ ಬಂದೂಕಿನಿಂದ ಚಿಮ್ಮಿದ ಗುಂಡು, ತೇಜಸ್ವಿಯವರ ಮನೆಯ ರೂಮಿನ ಕಿಟಕಿಯನ್ನು ಸೀಳಿ, ಕಿಟಕಿ ಪಕ್ಕದ ಕನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತ್ತಿದ್ದ ರಾಜೇಶ್ವರಿಯವರ ಪಕ್ಕದಲ್ಲೇ ಹಾದುಹೋಗಿದೆ! ಇದನ್ನು ಕೇಳಿದ ನಾವೆಲ್ಲರೂ ಒಂದು ಕ್ಷಣ ಸ್ತಬ್ದರಾಗಿಬಿಟ್ಟೆವು!!

ಸಿತಾರ್ ತೇಜಸ್ವಿ

ಒಮ್ಮೆ ತೇಜಸ್ವಿಯವರು ಸೈಕಲ್ ತುಳಿಯುತ್ತಾ ಬರುತ್ತಿರುವಾಗ ರಸ್ತೆ ಬದಿಯಲ್ಲಿರುವ ಅಂಗಡಿಯೊಂದರ ಮುಂದೆ ಅಚಾನಕ್ ಆಗಿ ಸೈಕಲ್ ನಿಲ್ಲಿಸಿ, ಸ್ಟಾಂಡ್ ಹಾಕಿ, ಆ ಅಂಗಡಿಯ ರೇಡಿಯೋದಲ್ಲಿ ಬರುತ್ತಿದ್ದ ಸಂಗೀತವನ್ನು ಕೇಳುತ್ತಾ ನಿಂತು ಬಿಟ್ಟರಂತೆ. ಆ ನಂತರದಲ್ಲಿ, ಆ ಸಂಗೀತದಲ್ಲಿ ಬಳಸಿದ ಉಪಕರಣ ಯಾವುದೆಂದು ಪತ್ತೆ ಮಾಡಿ, ಅದನ್ನು ನುಡಿಸಲು ಕಲಿಯಬೇಕೆಂದು ನಿರ್ಧರಿಸಿಯೇಬಿಟ್ಟರು. ಆ ಸಂಗೀತ ಉಪಕರಣವೇ ಸಿತಾರ್! ಇವರ ಸಿತಾರ್ ಕಲಿಯುವ ಹಾಗೂ ಅದರ ಅಭ್ಯಾಸ ಮಾಡುವ ರೀತಿ ಹೇಗಿತ್ತೆಂದರೆ, ಹಗಲು-ರಾತ್ರಿಯೆನ್ನದೆ ಅಭ್ಯಾಸ ನಿರತರಾಗಿದ್ದ ತೇಜಸ್ವಿಯವರ ಬಳಿ ಒಮ್ಮೆ ಕುವೆಂಪುರವರು ಬಂದು ‘ನನಗೆ ಮೌನವೇ ಸಂಗೀತ’ ಎಂದು ಹೇಳಿದ್ದನ್ನು ನಮ್ಮೊಂದಿಗೆ ಹಂಚಿಕೊಂಡಾಗಲಂತೂ ಕ್ಷಣಕಾಲ ಅಲ್ಲಿ ನಗುವೇ ಮಾತಾಗಿತ್ತು.

ಹೀಗೆ, ಕಾರಂತರ ಕೊನೆಯ ಭೇಟಿ,ಕುವೆಂಪುರವರು ಅವರನ್ನು ‘ಅಕ್ಕಾ’ ಎಂದು ಕರೆಯುತ್ತಿದ್ದುದನ್ನು, ಮೈಸೂರಿನ ‘ಉದಯರವಿ’ ಮನೆಗೆ ಒಂದು ಆಟೋದಲ್ಲಿ ತುಂಬುವಷ್ಟು ಸಾಮಾನುಗಳನ್ನು ಇವರೊಬ್ಬರೇ ತೆಗೆದುಕೊಂಡು ಹೋಗುತ್ತಿದ್ದುದನ್ನು, ಕುವೆಂಪುರವರ ಕೊನೆಯ ದಿನಗಳಲ್ಲಿ, ಮೈಸೂರಿನಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದುದನ್ನು, ತೇಜಸ್ವಿಯವರು ಮೈಸೂರಿನ ಪ್ರೆಸ್ ಮಾರಿ, ಮೂಡಿಗೆರೆಯ ಕಾಡಿನಲ್ಲಿ ಬಂದಿರುವ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ, ’ನಿರುತ್ತರ’ ಎಂದು ಹೆಸರಿಟ್ಟಿದ್ದರ ಬಗ್ಗೆ,ತೇಜಸ್ವಿಯವರೊಮ್ಮೆ ಇವರಿಗೆ, ‘ನನ್ನ ಬೆನ್ನಿಗೆ ಚೂರಿ ಹಾಕಿಬಿಟ್ಟೆಯಲ್ಲ’ ಎಂದು ಹೇಳಿದ್ದರ ಬಗ್ಗೆ, ತೇಜಸ್ವಿ ಮತ್ತವರ ಮಕ್ಕಳ ನಡುವಿನ ಬಾಂಧವ್ಯದ ಬಗ್ಗೆ, ಕಳೆದು ಹೋಗಿರುವ ಪತ್ರವೊಂದನ್ನು ಇನ್ನೂ ಹುಡುಕುತ್ತಿರುವ ಬಗ್ಗೆ, ಅಲ್ಲಿ ಉತ್ತರಾಖಂಡದಲ್ಲಿ ಪ್ರವಾಹವಾಗುತ್ತಿರುವ ಸಂದರ್ಭದಲ್ಲೇ, ಇವರ ಮಗಳು ಲೇಹ್ -ಲಡಾಕ್ ಗೆ ಹೋಗಿದ್ದಾಗಿನ ಇವರ ಆತಂಕದ ಬಗ್ಗೆ, ಇವರ ಮನೆಯಲ್ಲಿ ಸದ್ಯಕ್ಕೆ ಇರುವ ನಾಯಿಯ ಬಗ್ಗೆ, ಹೀಗೆ ಹತ್ತು ಹಲವು ಸಂಗತಿಗಳನ್ನು ನಮ್ಮೊಡನೆ ಹಂಚಿಕೊಂಡರು. ಇವುಗಳಲ್ಲಿ ಹಲವು ಸಂಗತಿಗಳ ಬಗ್ಗೆ ಈಗಾಗಲೇ ಲೇಖನಗಳಲ್ಲಿ ಹಾಗೂ ‘ನನ್ನ ತೇಜಸ್ವಿ’ ಪುಸ್ತಕದಲ್ಲಿ ಬರೆದಿದ್ದೇನಲ್ಲ ಎಂದು ಅವರು ಹೇಳಿದರೂ, ನಾವೆಲ್ಲ ನಿಮ್ಮ ಮಾತುಗಳಲ್ಲೇ ಅವುಗಳನ್ನು ಕೇಳಬೇಕು ಎಂದುಆಸೆ ಪಟ್ಟಾಗ ಇಲ್ಲವೆಂದನ್ನಲಿಲ್ಲ.

ಆನಂತರ ನಮ್ಮನ್ನೆಲ್ಲಾ ಮನೆಯ ಮೇಲಿನ ಕೋಣೆಗೆ ಕರೆದುಕೊಂಡು ಹೋಗಿ, ಅಲ್ಲೇ ಕಿಟಕಿಯೊಂದಕ್ಕೆ ಸಣ್ಣದೊಂದು ತೂತು ಮಾಡಿ ನೇತು ಹಾಕಿರುವ ಕಪ್ಪು ಬಟ್ಟೆಯನ್ನು ತೋರಿಸುತ್ತಾ, ‘ಅದು ಅವರು ಫೋಟೋ ತೆಗೆಯೋದಕ್ಕೆ ಅಂತ ಮಾಡಿಕೊಂಡಿದ್ದರು’ ಎಂದು ಹೇಳಿದರು. ತೇಜಸ್ವಿಯವರ ಸಂಗ್ರಹಾಲಯಕ್ಕೆ ನಡೆಸುತ್ತಿರುವ ತಯಾರಿಯ ಬಗ್ಗೆ ತಿಳಿಸಿದರು, ಅವರು ತೆಗೆಯುತ್ತಿದ್ದ ಫೋಟೋಗಳನ್ನು ಸಂಸ್ಕರಿಸುವ ಸಣ್ಣ ಮೆಷಿನ್ ಒಂದನ್ನೂ ಹಾಗೂ ಫೋಟೋಗಳನ್ನು ತೋರಿಸಿದರು. ಹೀಗೆ, ಇಷ್ಟೆಲ್ಲಾ ಅಚ್ಚರಿ, ಸಂತಸಗಳ ನಡುವೆ ಉಲ್ಲಾಸದಿಂದ ಓಡಾಡಿಕೊಂಡಿದ್ದ ನಮಗೆ ಸಮಯ ಉರುಳಿದ್ದೇ ಗೊತ್ತಾಗಲಿಲ್ಲ.

ಹೊರಡಲು ಸಿದ್ದವಾದಾಗಲೇ ನಮಗೆ ಗೊತ್ತಾಗಿದ್ದು, ಮಳೆಯೂ ಸಹ ನಮ್ಮೊಡನೆ ರಾಜೇಶ್ವರಿಯವರ ಮಾತು ಕೇಳಲು ಇಳಿದುಬಿಟ್ಟಿದೆ ಎಂದು. ಆದರೆ, ನಮಗೆ ಅದರ ಅರಿವೇ ಇರಲಿಲ್ಲ. ಅವರೊಂದಿಗೆ ಮನೆಯ ವರಾಂಡದಲ್ಲಿ ಒಂದು ಗ್ರೂಪ್ ಪೋಟೋ ತೆಗೆಸಿಕೊಂಡು, ನಾವೆಲ್ಲ ತೆಗೆದುಕೊಂಡು ಹೋಗಿದ್ದ ಪೋಂಚೋಸ್ ಧರಿಸಿ, ಕೊಡೆಗಳನ್ನು ತೆರೆದು ಮಳೆಯಲ್ಲಿಯೇ ಹೊರಟೆವು.

‘ಅಮ್ಮಾ ಬರುತ್ತೇನೆ’ ಎಂದು ಹೇಳಿ ಕೊನೆಯವನಾಗಿ ಹೊರಟು, ಸ್ವಲ್ಪ ದೂರ ಬಂದು ನಿಂತು, ಹಿಂತಿರುಗಿ ನೋಡಿ ನನಗೆ ನಾನೇ ಹೇಳಿಕೊಂಡೆ, ‘ಇವರ ಅರಿವು, ತಿಳುವಳಿಕೆ ಎಷ್ಟು ಅಗಾಧವೋ, ಅಂತೆಯೇ ಎಷ್ಟು ಸರಳ!’

ಅಲ್ಲಿಗೆ ಹೋಗಿದ್ದಾಗ ನನಗೊಂದು ಬಗೆಯ ಆನಂದವಿತ್ತು. ನಾನು ಕೇಳಬೇಕೆಂದು ಕೊಂಡಿದ್ದ ಪ್ರಶ್ನೆಗಳು ಈಗಲೂ ಹಾಗೇ ಉಳಿದುಕೊಂಡಿವೆ; ನಿರುತ್ತರ!! ಆದರೂ, ಯಾವುದೋ ಒಂದು ಸತ್ಪ್ರೇರಣೆಯೊಂದಿಗೆ ಹಿಂದಿರುಗಿದೆ…..ಮತ್ತೊಮ್ಮೆ ಅಲ್ಲಿಗೆ ಹೋಗುವ ನಿರ್ಧಾರದೊಂದಿಗೆ.

 

‍ಲೇಖಕರು admin

April 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಚಿತ್ರ

    ನಿಮ್ಮ ಅನುಭವ ಕಥನ ತುಂಬಾ ಚೆನ್ನಾಗಿದೆ. ನನಗೂ “ನಿರುತ್ತರ”ಕ್ಕೆ ಹೋಗುವ ಆಸೆ ಮೂಡಿದೆ.

    ಪ್ರತಿಕ್ರಿಯೆ
  2. Prathap

    Utthama baravanige! Dhanyavaadagalu! (Kannada font illada bagge Kshame irali)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: