ತೇಜಸ್ವಿಯವರು ಮೀನಿನ ಶಿಕಾರಿಗೆ ಎದ್ದು ಹೊರಟವರಂತೆ ದಿಢೀರನೆ ಹೊರಟು ಹೋಗಿದ್ದಾರೆ. ಆದರೆ ವಿಸ್ಮಯವಾಗಿ, ಮೂಡಿಗೆರೆಯ ತನ್ಮಯಿ ಪಥಿಕನಾಗಿ ಇಲ್ಲೇ ನಡೆದಾಡುತ್ತಿದ್ದಾರೆ.
ಕನ್ನಡ ಟೈಮ್ಸ್ ಪತ್ರಿಕೆ ತೇಜಸ್ವಿ ಗಳಿಗೆಗಳನ್ನು ಹಿಡಿದಿಡಲೆಂದೇ ಪ್ರತಿ ಸಂಚಿಕೆಯ ಎರಡನೇ ಪುಟ ಮೀಸಲಿರಿಸಿದೆ. ಅಲ್ಲಿ ಒರತೆಯಂತೆ ಉಕ್ಕುತ್ತಿರುವ ನೆನಪುಗಳು ಆ ಮಾಯಾವಿಯ ಲೋಕವನ್ನು ತೆರೆದಿಡುತ್ತಿವೆ.
ತೇಜಸ್ವಿ ಇಲ್ಲವಾದರು ಎಂಬುದನ್ನು ಒಲ್ಲದೆಯೂ ಒಪ್ಪಲೇಬೇಕಾದಾಗ ನಾಡಿಗೆ ನಾಡೇ ಕಣ್ಣೀರಾಗಿದೆ. ತನ್ನ ತಳಮಳವನ್ನು ಹೇಳಿಕೊಂಡಿದೆ. ತೇಜಸ್ವಿಯವರ ಬದುಕನ್ನು, ಬರಹವನ್ನು, ಅದರ ನಿಗೂಢ ಕುತೂಹಲದ ನಡೆಯನ್ನು ಮತ್ತೆ ಮತ್ತೆ ಗ್ರಹಿಸಲು ಯತ್ನಿಸಿದೆ. ಅಂಥ ಯತ್ನಗಳೆಲ್ಲ ಒಂದು ಸಾಂಸ್ಕೃತಿಕ ತುರ್ತಾಗಿಯೇ ಜರುಗಿವೆ. ಅಂತಃಕರಣಪೂರ್ವಕ ಒತ್ತಾಯಗಳ ಹಿನ್ನೆಲೆಯಲ್ಲಿ ಅವು ನಿಶ್ಚಯಗೊಂಡಿವೆ. ಅದರ ಒಂದು ರೂಪವಾಗಿ ಬಂದ ಬರಹಗಳ ಮೊತ್ತ “ತೇಜಸ್ವಿ ನೆನಪು” ಎಂಬ ಪುಸ್ತಕ. ಬಿ ಚಂದ್ರೇಗೌಡ ಮತ್ತು ಬಿ ಎಲ್ ರಾಜು ಸಂಪಾದಕತ್ವದ ಈ ಪುಸ್ತಕ ಹೂವಿನಹಡಗಲಿಯ(ಬಳ್ಳಾರಿ) ರಂಗಭಾರತಿ ಪ್ರಕಾಶನದ ಪ್ರಕಟಣೆ.
“ಮಯೂರ” ಮಾಸಿಕದ ಜೂನ್ ಸಂಚಿಕೆಯೂ “ತೇಜಸ್ವಿ ನೆನಪಿನ ಸಂಚಿಕೆ”ಯಾಗಿ ರೂಪುಗೊಂಡಿದೆ. ತೇಜಸ್ವಿಯವರ ಕೊನೆಯ ಬರಹವನ್ನು ಒಳಗೊಂಡಿರುವುದು ಈ ಸಂಚಿಕೆಯ ಹೆಗ್ಗಳಿಕೆ.
ಈ ಟಿಪ್ಪಣಿಯನ್ನು ಮುಗಿಸುವ ಮುನ್ನ ಈ ಬಾರಿಯ ಕನ್ನಡ ಟೈಮ್ಸ್ ಪುಟದಲ್ಲಿ ತೇಜಸ್ವಿಯವರ ಬಗ್ಗೆ ಅನಂತಮೂರ್ತಿಯವರು ಹೇಳಿದ ಮಾತುಗಳನ್ನು ಉಲ್ಲೆಖಿಸಬೇಕೆನ್ನಿಸುತ್ತದೆ. ಅದು:
“…ತೇಜಸ್ವಿ ಬಹಳ ಚಿಂತನಶೀಲನಾದ, ಧ್ಯಾನಶೀಲನಾದ ಮನುಷ್ಯ. ಅದಕ್ಕೇ ಅವರಿಗೆ ಫಿಶಿಂಗ್ ಅಂದ್ರೆ ಬಹಳ ಇಷ್ಟ. ಅದು ಧ್ಯಾನದ ಕ್ರಮ. ಅದು ಧ್ಯಾನವೂ ಹೌದು, ಏನನ್ನೋ ಹಿಡಿಯೋದೂ ಹೌದು. ಅದು ನಿಷ್ಪ್ರಯೋಜಕವಾದ ಧ್ಯಾನ ಅಲ್ಲ.”





0 Comments