ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿಯನ್ನು ಹುಡುಕುತ್ತಾ : ಮೂಡಿಗೆರೆಯ ದಾರಿಯಲ್ಲಿ…

ಭಾಗ ೦೭

(ಭಾಗ ೦೬ ಕ್ಕೆ ಇಲ್ಲಿ ಕ್ಲಿಕ್ಕಿಸಿ)

’ಎರಡು ಪ್ಲೇಟ್ ಇಡ್ಲಿ ವಡೆ, ಒಂದು ಸೆಟ್ ದೋಸೆ, ಒಂದು ಅವಲಕ್ಕಿ ಬಾತು, ಹಾಗೆ ಒಂದು ಬಾಟ್ಲು ನೀರು…ಸ್ವಲ್ಪ ಬೇಗ ಬಾಸ್….’
‘ಎಳ್ಡೇ ನಿಮ್ಸ ಗುರು…ಲೇಯ್ ಒಂದು ಸೆಟ್ ಆಕೊ….’
‘…..ಸಿಕ್ತಾ ಇದೆ ಅಲ್ವ ದರ್ಶನ್ ಶಾಟ್ಸು?’
‘ಈಗಿನ್ನು ಸ್ಟಾರ್ಟಿಂಗಲ್ವ, ಎಲ್ಲಾ ಓಕೆ ಓಕೆ ಅನ್ನೊ ಥರದ ಶಾಟ್ಸು… ಕೆಲವು ಪರ್ವಾಗಿಲ್ಲ… ಮುಂದೆ ಹೋಗ್ತಾ ಹೋಗ್ತಾ ಇನ್ನೂ ಚೆನ್ನಾಗಿರೊFootagesಸಿಗ್ಬಹುದು’.
‘ಏನೋ ಮಳೆ ಬರೋ ಹಾಗಿದ್ಯಲ್ಲೋ ಹೇಮಂತ. ಮಳೆ ಜೋರ್ ಬಂದ್ರೆ ಏನೋ ಮಾಡೋದು?’
‘ಬರ್ಲಿ ಬಿಡೋ. ಮಳೆ ಬೇಕು ಮಳೆ ಬೇಕು ಅಂತ ನೀನೆ ತಾನೆ ಒಂದೇ ಸಮ ಡೈಲಾಗ್ ಹೊಡಿತ್ತಿದ್ದದ್ದು’.
‘ಮಳೆ ಬಂದ್ರೆ ಓಳ್ಳೊಳ್ಳೆ Footagesಸಿಗುತ್ತೆ. ಆದ್ರೆ ತುಂಬಾ ಜೋರಾದ್ರೆ ಕಷ್ಟ ಅಷ್ಟೆ’.
‘ತುಂಬಾ ಜೋರಾಗಿ ಮಳೆ ಬಂದ್ರೆ ಮ್ಯಾನೇಜ್ ಮಾಡೋಣ ಬಿಡೊ. ಹೆಂಗು ಛತ್ರಿ, ಟಾರ್ಪಲ್ಲು ಎಲ್ಲಾ ಇದೆಯಲ್ವ’.
‘ಓಕೆ. ಹಾಗೇ ವ್ಯಾನ್ ನಿಲ್ಸಿ ನಿಲ್ಸಿ ಚೆನ್ನಾಗಿದೆ ಅನ್ಸಿದ್ ಮಾಂಟೇಜಸ್ ಶೂಟ್ ಮಾಡ್ತಾ ಮಾಡ್ತಾ ಹೋಗ್ತಾ ಇರೋಣ. ನೀನು ಹೇಳಿದ ಕಡೆ ಹುಶಾರಾಗಿ ಗಾಡಿ ನಿಲ್ಲಿಸ್ಬೇಕು ನಿತಿನ್’.
‘ಹೂಮ್…ಓಕೆ…’.
ಅಷ್ಟರಲ್ಲಿ ಆರ್ಡರ್ ಮಾಡಿದ್ದ ತಿಂಡಿಗಳು ನಮ್ಮ ಟೇಬಲ್ ಮೇಲೆ ಬಂದವು.
ನಾನು ಹೇಮಂತ ಇಡ್ಲಿ ವಡೆ ತೆಗೆದುಕೊಂಡೆವು. ದರ್ಶನ್ ಅವಲಕ್ಕಿ ಬಾತಿನ ತಟ್ಟೆ ತಮ್ಮ ಕಡೆ ಎಳೆದುಕೊಂಡರು, ನಿತಿನ್ ಬಿಸಿ ಬಿಸಿ ಸೆಟ್ ದೋಸೆ ಮುರಿಯಲು ಪ್ರಾರಂಭಿಸಿದ.
ಹೋಟೆಲ್ ಗಡಿಯಾರ ಬೆಳಿಗ್ಗೆ ಬೆಳಿಗ್ಗೆ ೯ ಗಂಟೆ ತೋರಿಸುತ್ತಿತ್ತು.
ಅವತ್ತು 2012ರ ಆಗಸ್ಟ್ 09 ಗುರುವಾರ. ಕುಣಿಗಲ್ ಸಮೀಪ ರಾಷ್ಟೀಯ ಹೆದ್ದಾರಿ ೪೮ರ ಹೈವೇ ಬದಿಯ ಹೋಟೆಲೊಂದರಲ್ಲಿ ನಾವು ನಾಲ್ಕು ಜನ ಬೆಳಗಿನ ಉಪಹಾರಕ್ಕೆಂದು ಬಂದು ಕುಳಿತ್ತಿದ್ದೆವು. ಯಥಾಪ್ರಕಾರ ಹೊರಗಡೆ ಮೋಡ ಮುಸುಕಿದ್ದರಿಂದ ಸೂರ್ಯನ ದರುಶನವೇ ಇರಲಿಲ್ಲ. ‘ತೇಜಸ್ವಿಯ ನಿಜ ಹುಡುಕಾಟ’ದ ಪಯಣ ಅವತ್ತಿನಿಂದ ಪ್ರಾರಂಭವಾಗಿತ್ತು.ಅಂದರೆ ಅಂದಿನಿಂದ‘ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ ಚಿತ್ರೀಕರಣ.
ಆಗಬೇಕಿದ್ದ ಪೂರ್ವತಯಾರಿಗಳೆಲ್ಲವೂ ಹೆಚ್ಚು ಕಡಿಮೆ ನಾವು ಅಂದುಕೊಂಡಂತೆ ಮುಗಿದು, ೧೧ ದಿನಗಳ ಮೊದಲ ಹಂತದ ಚಿತ್ರೀಕರಣದ ಯೋಜನೆ ತಯಾರಿಸಿ ಜೊತೆಯಲ್ಲಿಟ್ಟುಕೊಂಡು ಆಗಸ್ಟ್ ೦೯ರ ಗುರುವಾರ ಮೂರು ಜನ ಉತ್ಸಾಹಿಗಳ ತಂಡ ಕಟ್ಟಿಕೊಂಡು ನಾನು ಬೆಂಗಳೂರು ಬಿಟ್ಟು ಹೊರಟ್ಟಿದ್ದೆ.

ಅಂದು ಬೆಳಿಗ್ಗೆ ನಾಲ್ಕಕ್ಕೆ ನಮ್ಮ ಪಯಣ ಆರಂಭವಾಗಿತ್ತು. ಎಂದಿನಂತೆ ಹೇಮಂತ, ಕ್ಯಾಮೆರಾ ಜವಾಬ್ದಾರಿ ವಹಿಸಿಕೊಂಡಿದ್ದ ದರ್ಶನ್ ಹೆಬ್ಬಾಳ್, ವ್ಯಾನಿನ ಡ್ರೈವರ್ ಹುದ್ದೆ ವಹಿಸಿಕೊಂಡಿದು ಬೀಗುತ್ತಿದ್ದ ನಿತಿನ್ ಮತ್ತು ನಾನು, ನಾಲ್ಕೇ ಜನರ ಪುಟ್ಟ ತಂಡ ನಮ್ಮದಾಗಿತ್ತು. ಬೆಳಿಗ್ಗೆ ನಾಲ್ಕು ಗಂಟೆಗೆ ಬೆಂಗಳೂರು ಬಿಟ್ಟು ಯಶವಂತಪುರ ದಾಟಿ ತುಮಕೂರಿನ ಜೋಡಿ ರಸ್ತೆ ಪ್ರಾರಂಭವಾದಲ್ಲಿನಿಂದ ನಮ್ಮ ವ್ಯಾನನ್ನು ಅಲ್ಲಲ್ಲಿ ನಿಲ್ಲಿಸುತ್ತಾ ಹೈವೇಯ ಕೆಲವು ಮಾಂಟೇಜ್ ಶಾಟ್ಸ್ ತೆಗೆದುಕೊಳ್ಳುತ್ತಾ ಮುಂದೆ ಸಾಗುತ್ತಾ ಹೋಗುತ್ತಿದ್ದೆವು. ನೇರವಾಗಿ ತೇಜಸ್ವಿಯವರ ಒಡನಾಡಿಗಳನ್ನು ಕ್ಯಾಮೆರಾದ ಮುಂದೆ ನಿಲ್ಲಿಸಿ ಮಾತನಾಡಿಸಿದರೆ ಸಾಕ್ಷ್ಯಚಿತ್ರವು ಟಿವಿ ನ್ಯೂಸ್ ರೀತಿ ಆಗಿಬಿಡುವ ಅಪಾಯ ಇತ್ತಾದ್ದರಿಂದ ಸಾಕ್ಷ್ಯಚಿತ್ರ ಬೋರಾಗದಂತೆ ರೂಪಿಸಬೇಕಾದರೆ ಹೊಸ ರೀತಿಯ ನಿರೂಪಣಾ ತಂತ್ರ ಹೆಣೆಯುವುದು ನಮಗೆ ತೀರ ಅವಶ್ಯಕವೂ ಅನಿವಾರ್ಯವೂ ಆಗಿತ್ತು. ಹಾಗಾಗಿ ಇಡೀ ಸಾಕ್ಷ್ಯಚಿತ್ರವನ್ನು ತೇಜಸ್ವಿಯ ಲೋಕದೊಳಗೆ ಸಾಕ್ಷ್ಯಚಿತ್ರ ನೋಡುವ ಪ್ರೇಕ್ಷಕನೊಬ್ಬ ಪ್ರಯಾಣವೆಂಬಂತೆ ಸ್ಕ್ರಿಪ್ಟ್ ಮಾಡಿಕೊಂಡಿದ್ದೆ. ಈ ನಿರೂಪಣಾ ತಂತ್ರ ತಂಡದ ಇತರರಿಗೂ ತುಂಬಾ ಇಷ್ಟವಾಗಿ ಒಪ್ಪಿಕೊಂಡಿದ್ದರು.

ಹಾಗಾಗಿ ಸಾಕ್ಷ್ಯಚಿತ್ರಕ್ಕೆ ತೇಜಸ್ವಿ ಒಡನಾಡಿಗಳ ಮಾತುಗಳು ಎಷ್ಟು ಮುಖ್ಯವಾಗಿದ್ದವೋ ಅಷ್ಟೇ ಮುಖ್ಯವಾಗಿ ಅಥವ ಅದಕ್ಕಿಂತಲೂ ಮುಖ್ಯವಾಗಿ ನಮಗೆ ಸಾವಿರಾರು ಮಾಂಟೇಜ್ ಶಾಟ್ಸ್ ಬೇಕಾಗಿದ್ದವು. ಈ ಕಾರಣದಿಂದಾಗಿಯೇ ಪ್ರಯಾಣದ ಹಾದಿಯಲ್ಲಿ ‘ಚೆನ್ನಾಗಿದೆ’ ಎನ್ನಿಸಿದ ಮಾಂಟೇಜ್ ಶಾಟ್ಸ್ ತೆಗೆಯುತ್ತಾ ಮುಂದೆ ಮುಂದೆ ಸಾಗುತ್ತಿದ್ದೆವು.ನಾನು ಹೈವೇ ಬದಿಯಲ್ಲಿ ಸುತ್ತಲೂ ಗಮನಿಸುತ್ತಾ, ವಿಶಿಷ್ಟವಾಗಿ ಕಾಣುತ್ತಿದ್ದ, ಚಿತ್ರೀಕರಿಸಿಕೊಳ್ಳಬಹುದು ಎನ್ನಿಸಿದ ದೃಶ್ಯಗಳನ್ನುಕ್ಯಾಮೆರಾಮನ್ ದರ್ಶನ್ ಗೆ ಹೇಳುತ್ತಿದ್ದೆ. ಹೇಮಂತ ಸಹ ಇದೇ ಕೆಲಸದಲ್ಲಿ ಮುಳುಗಿದ್ದ. ದರ್ಶನ್ ಅವರ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ನಿತಿನ್ ಎನ್ನುವ ೨೦ ವರ್ಷದ ಹುಡುಗ ವ್ಯಾನಿನ ಸ್ಟೀರಿಂಗ್ ಹಿಡಿದು ಕುಳಿತಿದ್ದ. ನಮ್ಮ ಕ್ಯಾಮೆರಾಮನ್ ದರ್ಶನ್ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಬರೆದಿದ್ದೆ. ಇಲ್ಲಿ ನಮ್ಮ ತಂಡದ ಹೊಸ ಸದಸ್ಯನಾಗಿದ್ದ ವ್ಯಾನ್ ಡ್ರೈವರ್ ನಿತಿನ್ ಬಗ್ಗೆ ಎರಡು ಮಾತು ಹೇಳಬೇಕೆನಿಸಿದೆ. ಹಾಗೆ ನೋಡಿದರೆ ಈ ನಿತಿನ್ ಅನ್ನುವ ಹುಡುಗ ವ್ಯಾನ್ ಡ್ರೈವರ್ ಅಲ್ಲ, ನನ್ನ ದೂರದ ಸಂಬಂಧಿ. ಚಿತ್ರೀಕರಣಕ್ಕೆಂದು ಚಿಕ್ಕಮಗಳೂರು, ಮೂಡಿಗೆರೆ, ಶಿವಮೊಗ್ಗ ಕಡೆ ಹೊರಟ್ಟಿದ್ದೇವೆಂಬ ವಿಷಯ ಕೇಳಿದ ನಿತಿನ್ ಚಿತ್ರೀಕರಣವೆಂದರೆ ಅದೇನೇನು ಕಲ್ಪಿಸಿಕೊಂಡನೋ ಏನೋ ‘ಅಣ್ಣ ಶೂಟಿಂಗಿಗೆನಾನು ನಿಮ್ ಜೊತೆ ಬರ್ತೀನಿ’ ಎಂದು ನನ್ನನ್ನು ಪೀಡಿಸಲಾರಂಭಿಸಿದ. ‘ಹೋಗ್ತಾ ಇರೋದು ಸಿನಿಮಾ ಶೂಟಿಂಗಿಗಲ್ಲ, ಡಾಕ್ಯುಮೆಂಟರಿ ಶೂಟಿಂಗು ಮಾರಾಯ. ಅಲ್ಲಿ ನೀನು ಅಂದ್ಕೊಂಡಿರೋ ಹಾಗೆ ಏನೂ ಇರೊಲ್ಲ. ಸುಮ್ನೆ ಇಲ್ಲೇ ಆರಾಮಾಗಿರು’ ಎಂದು ಎಷ್ಟು ಹೇಳಿದರೂ ಕೇಳದೆ ‘ಪರ್ವಾಗಿಲ್ಲ ನಾನು ಬರ್ತೀನಿ. ನಿಮಗ್ಯಾರಿಗೂ ಡಿಸ್ಟರ್ಬ್ ಮಾಡಲ್ಲ. ನನ್ನ ಪಾಡಿಗೆ ನಾನಿರ್ತೀನಿ’ ಎಂದೆಲ್ಲ ವಿಧವಿಧವಾಗಿ ಗೋಗರೆಯತೊಡಗಿದ.
‘ಥು ಇವನಿಂದ ಹ್ಯಾಗಪ್ಪ ಬಿಡಿಸಿಕೊಳ್ಳೋದು’ ಎಂದು ಯೋಚಿಸುತ್ತಿರಬೇಕಾದರೆ ತಕ್ಷಣ ನನಗೆ ಹೊಳೆದ ಸಂಗತಿಯೆಂದರೆ ‘ಇವನಿಗೆ ಡ್ರೈವಿಂಗ್ ಬರುತ್ತದೆ’ ಎಂಬುದು. ನಮಗೆ ಹ್ಯಾಗಿದ್ರು ಒಬ್ಬ ಡ್ರೈವರ್ ಬೇಕಾಗಿದ್ದರಿಂದ ‘ಇವನೇ ಯಾಕಾಗಬಾರದು’ ಎನ್ನಿಸಿ ‘ಸರಿ ಬಾ. ಆದ್ರೆ ಗೆಸ್ಟ್ ಥರ ಅಲ್ಲ. ಗಾಡಿ ಡ್ರೈವರ್ ಆಗಿ. ಆಗುತ್ತ?’ ಎಂದಾಗ ಅವನು ತುಂಬಾ ಸಂತೋಷದಿಂದ ‘ಓಹೋ ಅದಕ್ಕೇನಂತೆ…ಬರ್ತೀನಣ್ಣ ನನಗೂ ಗಾಡಿ ಓಡ್ಸೋದು ಅಂದ್ರೆ ಇಷ್ಟ. ಬರ್ತೀನಿ’ ಎಂದು ತಕ್ಷಣ ಒಪ್ಪಿಕೊಂಡ. ಅವನು ಕಾಲ್ ಸೆಂಟರ್ ಕ್ಯಾಬ್ ಓಡಿಸೋದನ್ನು ನಾನೇ ತುಂಬಾ ಸಲ ನೋಡಿದ್ದರಿಂದ ಅವನ ಡ್ರೈವಿಂಗ್ ಸ್ಕಿಲ್ಸ್ ಬಗ್ಗೆ ಯೋಚಿಸಬೇಕಾಗಿರಲಿಲ್ಲ. (ಆ ಆ ಕ್ಯಾಬ್ ನ ದೆಸೆಯಿಂದ ಅವನು ಎರಡು ಲಕ್ಷ ರೂಪಾಯಿ ನಷ್ಟ ಮಾಡಿ ಕಡೆಗೆ ಹಾಕಿದ ಬಂಡವಾಳವು ದಕ್ಕಲಿಲ್ಲವೆಂದು ಅವನಪ್ಪ ಅವನಿಗೆ ಜಾಡಿಸಿ ಒದ್ದಿದ್ದನ್ನೂ ಕೇಳಿದ್ದೆ).
ಎರಡು ಕಾರಣಗಳಿಗಾಗಿ ಚಿತ್ರೀಕರಣಕ್ಕೆ ನಾಲ್ಕೇ ಜನರ ತಂಡ ಸಾಕೆಂದು ನಾವು ಮೂರು ಜನವೂ ಚರ್ಚಿಸಿ ನಿರ್ಧರಿಸಿದ್ದೆವು. ಹೆಚ್ಚು ಜನವಾದರೆ ಸುಮ್ಮನೆ ಇಲ್ಲದ ಕಾಂಪ್ಲಿಕೇಷನ್ಸುಎನ್ನುವುದು ಒಂದು ಕಾರಣವಾದರೆ ಮತ್ತೊಂದು ಬಹುಮುಖ್ಯ ಕಾರಣ ನಮಗೆ ಕೊಟ್ಟಿದ್ದ ಲಿಮಿಟೆಡ್ ಬಡ್ಜೆಟ್. (ಅಥವ ಇದ್ದ ಲಿಮಿಟೆಡ್ ಬಡ್ಜೆಟ್ ನ ಕಾರಣದಿಂದಾಗಿಯೇ ನಾಲ್ಕು ಜನರಿಗಿಂತ ಹೆಚ್ಚು ಜನರ ತಂಡವಾದರೇ ಸುಮ್ಮನೆ ಇಲ್ಲದ ಕಾಂಪ್ಲಿಕೇಷನ್ಸು ಎಂಬ ನಿರ್ಧಾರ ತೆಗೆದುಕೊಂಡೆವೆಂದು ನನಗೆ ಈಗ ಅನ್ನಿಸುತ್ತದೆ).
(ಆದರೆ ನಮ್ಮ ಈ ನಿರ್ಧಾರ ಕಡೆಗೆ ನಮಗೆ ಸಾಕಷ್ಟು ನೀರು ಕುಡಿಸಿದ್ದು ಬೇರೆಯದೇ ಕಥೆ). ಅಂತು ನಾಲ್ಕು ಜನರ ಪುಟ್ಟ ತಂಡ ಕಟ್ಟಿಕೊಂಡು ತೇಜಸ್ವಿಯ ಹೆಜ್ಜೆಗುರುತುಗಳನ್ನು ಹುಡುಕಿಕೊಂಡು ತೇಜಸ್ವಿ ಲೋಕದೊಳಕ್ಕೆ ಯಾತ್ರೆ ಹೊರಟಿದ್ದೆವು.
ಮೊದಲ ದಿನ ಬೆಂಗಳೂರು-ಕುಣಿಗಲ್-ಚನ್ನರಾಯಪಟ್ಟಣ-ಹಾಸನ-ಬೇಲೂರು ಮಾರ್ಗವಾಗಿ ಪ್ರಯಾಣಿಸಿ ಮಾರ್ಗ ಮಧ್ಯದಲ್ಲಿ ಸಿಗುವ ಮಾಂಟೇಜುಗಳನ್ನು ಚಿತ್ರೀಕರಿಸುತ್ತಾ ಸಂಜೆ ೫ ಗಂಟೆಯಷ್ಟರಲ್ಲಿ ಚಿಕ್ಕಮಗಳೂರಿಗಿಂತಲೂ ಎರಡು ಕಿಲೋಮೀಟರ್ ಮೊದಲೇ ಸಿಗುವ ಹಿರೇಮಗಳೂರು ತಲುಪಬೇಕೆಂದು ಯೋಜನೆ ಹಾಕಿಕೊಂಡಿದ್ದೆವು. ಅಂದು ಸಂಜೆ ೬ಗಂಟೆಗೆ ಶ್ರೀ.ಹಿರೇಮಗಳೂರು ಕಣ್ಣನ್ ರವರನ್ನು ಭೇಟಿ ಮಾಡಿ ತೇಜಸ್ವಿ ಕುರಿತು ಅವರು ಹೇಳುವ ವಿಷಯಗಳನ್ನು ಚಿತ್ರೀಕರಿಸಿಕೊಳ್ಳುವುದಿತ್ತು. ಈ ಕುರಿತಾಗಿ ಶ್ರೀ. ಕಣ್ಣನ್ ರವರಿಗೆ ಮೊದಲೇ ನಮ್ಮ ಯೋಜನೆ ತಿಳಿಸಿ ಅವರ ಅನುಮತಿ ಪಡೆದುಕೊಂಡಿದ್ದೆವು. ಅಂದುಕೊಂಡಂತೆ ಸಂಜೆ ೫.೩೦ರಷ್ಟರಲ್ಲಿ ನಾವೆಲ್ಲರು ಹಿರೇಮಗಳೂರಿನ ಕೋದಂಡರಾಮಸ್ವಾಮಿ ದೇವಸ್ಥಾನದ ಬಳಿ ಬಂದಿದ್ದೆವು. ಶ್ರೀ. ಕಣ್ಣನ್ ರವರು ದೇವಸ್ಥಾನದಲ್ಲೇ ಇದ್ದರು. ಆದರೆ ಅವರು ದೇವಸ್ಥಾನದ ಪೂಜೆ ಹಾಗೂ ಮತ್ತಿತರ ಕೆಲಸಗಳಲ್ಲಿ ಮುಳುಗಿದ್ದರಿಂದ
ಅವರ ಸಹಾಯಕರೊಬ್ಬರು ‘ಕಣ್ಣನ್ ರವರು ಪೂಜೆಯಲ್ಲಿದ್ದಾರೆಂದು, ಒಂದು ಗಂಟೆ ಬಿಟ್ಟು ಬಂದರೆ ಮಾತನಾಡಬಹುದೆಂದು’ ನಮಗೆ ತಿಳಿಸಿದರು. 
ಒಂದು ಗಂಟೆಯ ಮಟ್ಟಿಗೆ ಬಿಡುವು ಸಿಕ್ಕಾಗ ನಮಗೆ ನಾವ್ಯಾರು ಮಧ್ಯಾಹ್ನ ಊಟ ಮಾಡಿಲ್ಲ ಎಂಬ ಅಂಶ ನೆನಪಾಗಿ ಅಲ್ಲಿಂದ ನೇರ ಚಿಕ್ಕಮಗಳೂರಿಗೆ ಬಂದು ಹೋಟೆಲೊಂದರಲ್ಲಿ ಊಟ ಮಾಡಿ ಮತ್ತೆ 6.30ರ ಹೊತ್ತಿಗೆ ಹಿರೇಮಗಳೂರಿಗೆ ವಾಪಸ್ ಬಂದೆವು. ನಮ್ಮನ್ನು ಕಂಡ ತಕ್ಷಣ ದೇವಸ್ಥಾನದಿಂದ ಹೊರಗೆ ಬಂದ ಶ್ರೀ. ಕಣ್ಣನ್ ರವರು, ‘ಕ್ಷಮಿಸಿ ಮಿತ್ರರೆ, ಇವತ್ತು ಸ್ವಲ್ಪ ಕೆಲಸಗಳಿವೆ. ಇವತ್ತು ಆಗೋದಿಲ್ಲ. ಒಂದ್ ಕೆಲ್ಸ ಮಾಡೋಣ… ನಾನು ಉದಯ ಟಿವಿ ಕಾರ್ಯಕ್ರಮದ ಚಿತ್ರೀಕರಣಕ್ಕೆ ಆಗಾಗ ಬೆಂಗಳೂರಿಗೆ ಬರ್ತಾ ಇರ್ತೀನಿ. ಈ ತಿಂಗಳು 25ನೇ ತಾರೀಖು ಸಹ ಬೆಂಗಳೂರಿಗೆ ಬರ್ತಿನಿ. ಅಲ್ಲೇ ಸಿಗೋಣ. ಯಾವ ಆತುರವೂ ಇಲ್ಲದೇ ನಿರಾಳವಾಗಿ ಮಾತಡಬಹ್ದು. 20ನೇ ತಾರೀಖು ಒಂದ್ ಸಲ ಫೋನ್ ಮಾಡಿ confirm ಮಾಡ್ಕೊಳ್ಳಿ’ ಎಂದು ಹೇಳಿದರು. ಚಿತ್ರೀಕರಣದ ಮೊದಲ ದಿನವೇ ನಾವು ಹಾಕಿಕೊಂಡಿದ್ದ ಶೆಡ್ಯೂಲ್ ತಲೆಕೆಳಗಾಗಿದ್ದನ್ನು ಕಂಡು ನಮಗೆ ಕೊಂಚ ಬೇಸರವಾಯಿತು. ಹೆಚ್ಚು ಒತ್ತಾಯಪಡಿಸಿದರೆ ಅವರು ಹೇಳಬೇಕು ಎಂದುಕೊಂಡಿರುವ ವಿಷಯಗಳನ್ನು ಈ ಗಡಿಬಿಡಿಯಲ್ಲಿ ಸರಿಯಾಗಿ ಹೇಳುವುದಿಲ್ಲ ಎಂದುಕೊಂಡು ಅವರನ್ನು ಹೆಚ್ಚು ಬಲವಂತಪಡಿಸದೆ ‘ಬೆಂಗಳೂರಿನಲ್ಲೇ ಸಿಗುತ್ತೇವೆಂದು’ ಹೇಳಿ ಹಿರೇಮಗಳೂರಿನಿಂದ ಹೊರಟು ಬಂದೆವು.
ನಾವು ಮಾಡಿಕೊಂಡಿದ್ದ ಶೆಡ್ಯೂಲ್ ಪ್ರಕಾರ ಹಿರೇಮಗಳೂರು ಕಣ್ಣನ್ ರವರ ಚಿತ್ರೀಕರಣ ಮುಗಿಸಿಕೊಂಡು ನೇರ ಮೂಡಿಗೆರೆಗೆ ಹೋಗಬೇಕಿತ್ತು. ಮೂಡಿಗೆರೆ ತಲುಪಿ ನಾವು ಅಲ್ಲಿರುವಷ್ಟು ದಿನಗಳಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಿತ್ತು. ಕಳೆದ ಬಾರಿ ಸಾಕ್ಷ್ಯಚಿತ್ರದ ರಿಸರ್ಚ್ ಕೆಲಸಕ್ಕಾಗಿ ಮೂಡಿಗೆರೆಗೆ ಬಂದಾಗ ಉಳಿದುಕೊಂಡಿದ್ದ ಅತಿಥಿ ಲಾಡ್ಜ್ ನ ಅವ್ಯವಸ್ಥೆಯನ್ನು ಅನುಭವಿಸಿ ನಮಗೆ ಸಾಕಾಗಿ ಹೋಗಿತ್ತು. ಈಗ ಚಿತ್ರೀಕರಣಕ್ಕೆ ಬಂದಾಗ ಸಹ ಮತ್ತೆ ಅದೇ ಲಾಡ್ಜಿನಲಿ ವಾಸ್ತವ್ಯ ಹೂಡುವ ಧೈರ್ಯ ನಮಗಿರಲಿಲ್ಲ. ಹಾಗಾಗಿ ಮೂಡಿಗೆರೆಯ ಗೆಳೆಯ ಧನಂಜಯರಿಗೆ ನಾವು ನಾಲ್ಕು ಜನಕ್ಕೆ ಉಳಿದುಕೊಳ್ಳಲು ‘ಮೂಡಿಗೆರೆಯ ಸುತ್ತಾಮುತ್ತ ಎಲ್ಲದರೂ ವ್ಯವಸ್ಥೆ ಮಾಡಬಹುದೇ’ ಎಂದು ಕೇಳಿದ್ದೆ. ಧನಂಜಯ್ ‘ತಾನು ವ್ಯವಸ್ಥೆ ಮಾಡುವುದಾಗಿ’ ನಮಗೆ ಧೈರ್ಯ ಕೊಟ್ಟಿದರು. ಹಾಗಾಗಿ ಅಂದು ಸಂಜೆ ಆದಷ್ಟು ಬೇಗ ಮೂಡಿಗೆರೆ ತಲುಪಿ ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ಖಚಿತಪಡಿಸಿಕೊಳ್ಳಬೇಕಿತ್ತು.
ಈಗ ಹಿರೇಮಗಳೂರು ಕಣ್ಣನ್ ರವರ ಭಾಗದ ಚಿತ್ರೀಕರಣ ಆಗಲಿಲ್ಲವಾದ್ದರಿಂದ ನಾವು ನೇರ ಹಿರೇಮಗಳೂರಿನಿಂದ ಹೊರಟು ಚಿಕ್ಕಮಗಳೂರು ದಾಟಿ ಮೂಡಿಗೆರೆಗೆ ಬಂದೆವು. ಸಮಯ ರಾತ್ರಿ 8 ಗಂಟೆ. ಮೂಡಿಗೆರೆಯ ಮೇಲೆ ಸಣ್ಣಗೆ ಮಳೆ. ನಾವು ಮೂಡಿಗೆರೆ ಪ್ರಯಾಣಿಸುತ್ತಿದ್ದಾಗಲೇ ಧನಂಜಯ್ ನನಗೆ ಹಲವು ಬಾರಿ ಫೋನ್ ಮಾಡಿ ಎಲ್ಲಿದ್ದೀರಿ, ಎಲ್ಲಿದ್ದೀರಿ? ಎಂದು ವಿಚಾರಿಸುತ್ತಿದ್ದರು. ಹಾಗಾಗಿ ನಮ್ಮ ವ್ಯಾನು ಮೂಡಿಗೆರೆಯ ಬಸ್ ಸ್ಟಾಂಡ್ ಸರ್ಕಲ್ ತಲುಪಿದ ಕೂಡಲೇ ನಾನು ಧನಂಜಯ್ ಗೆ ಫೋನ್ ಮಾಡಿ ನಾವು ಮೂಡಿಗೆರೆ ತಲುಪಿದ್ದೇವೆಂದು ತಿಳಿಸಿದೆ. ಧನಂಜಯ್ ಬಂದವರೇ ನಮ್ಮನ್ನು ಬಸ್ ಸ್ಟಾಂಡ್ ಎದುರಿನ ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಾವು ನಾಲ್ಕು ಜನಕ್ಕೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಇದಕ್ಕಾಗಿ ಧನಂಜಯ್ ರವರಿಗೆ ಕೃತಜ್ಞತೆ ಹೇಳಲೇಬೇಕು. ಏಕೆಂದರೆ ಮೂಡಿಗೆರೆಯ ಆ ಪ್ರವಾಸಿಮಂದಿರ ನಿಜಕ್ಕೂ ತುಂಬಾ ವಿಶಾಲವಾಗಿ, ಅಚ್ಚುಕಟ್ಟಾಗಿತ್ತು.
ನಂತರ ಧನಂಜಯ್ ರಿಗೆ ನಮ್ಮ ತಂಡದ ಹೊಸ ಸದಸ್ಯರಾಗಿದ್ದ ದರ್ಶನ್ ಹಾಗು ನಿತಿನ್ ರನ್ನು ಪರಿಚಯಿಸಿದೆ. ಧನಂಜಯ್ ರಿಗೆ 12 ದಿನಗಳ ನಮ್ಮ ಸಾಕ್ಷ್ಯಚಿತ್ರ ಚಿತ್ರೀಕರಣದ ಯೋಜನೆಯ ವಿವರಗಳನ್ನೆಲ್ಲಾ ವಿವರಿಸಿದೆ. ನಮ್ಮ ತಯಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧನಂಜಯ್ ನಾಳಿನ ನಮ್ಮ ಚಿತ್ರೀಕರಣದ schedule ಏನು ಎಂದು ಕೇಳಿದರು. ‘ನಾಳೆ ಇಡೀ ದಿನ ಬಾಪು ದಿನೇಶ್ ಅವರ ಜೊತೆಗೆ ತೇಜಸ್ವಿ ಓಡಾಡಿದ ಜಾಗಗಳಿಗೇ ಹೋಗಿ ಆವತ್ತಿನ ಆ ದಿನಗಳ ತೇಜಸ್ವಿಯೊಂದಿಗಿನ ಒಡನಾಟದ ನೆನಪುಗಳನ್ನು ಬಾಪುರವರ ಬಾಯಿಂದಲೇ ಕೇಳುವುದು’ ಎಂದು ಅವರಿಗೆ ನಾಳಿನ ನಮ್ಮ ಚಿತ್ರೀಕರಾದ ಪ್ಲಾನಿಂಗ್ ವಿವರಿಸಿದೆ. ‘Good,ಬಾಪು ದಿನೇಶ್ ಜೊತೆಗೆ ಒಂದು ಇಡೀ ದಿವ್ಸ ಕಳಿಬೇಕು ಬಿಡಿ. ತೇಜಸ್ವಿಯವರನ್ನು ತುಂಬಾ ಹತ್ತಿರದಿಂದ ನೋಡಿದವರು ಅವ್ರು. ಆಗ್ಲಿ ಹಾಗದ್ರೆ, ನನ್ನಿಂದ ಬೇರೆ ಏನಾದ್ರು ಆಗ್ಬೇಕಾಗಿದ್ರೆ ಕೇಳಿ. ಮಾಡ್ತೀನಿ’ ಎಂದು ತುಂಬಾ ಉತ್ಸಾಹದಿಂದ ನುಡಿದರು ಧನಂಜಯ್. ಬೇಕಾದಾಗ ತಿಳಿಸುತ್ತೇವೆಂದು ಹೇಳಿದೆವು.
ಅಷ್ಟೊತ್ತಿಗಾಗಲೆ ಸಮಯ ರಾತ್ರಿ 8.30. ಧನಂಜಯ್ ಮತ್ತೆ ಸಿಗುವುದಾಗಿ ಹೇಳಿ ಪ್ರವಾಸಿ ಮಂದಿರದ ನಮ್ಮ ಕೋಣೆಯಿಂದ ಹೊರಟರು. ಇನ್ನೂ ಸಮಯ ಇದ್ದಿದ್ದರಿಂದ ಮೂಡಿಗೆರೆಯ ರಾತ್ರಿ ಬದುಕಿನ ಕೆಲವು ಮಾಂಟೇಜುಗಳನ್ನು ಚಿತ್ರಿಸಿಕೊಳ್ಳಲು ನಾವು ನಾಲ್ಕು ಜನವೂ ಹೊರಗೆ ಬಂದೆವು. ಮೂಡಿಗೆರೆಯ ಬಸ್ ಸ್ಟಾಂಡ್ ಸರ್ಕಲ್ ನಿಂದ ಪ್ರಾರಂಭಿಸಿ ಹ್ಯಾಂಡ್ ಪೋಸ್ಟಿನವರೆಗು ಹೋಗಿ ರಾತ್ರಿ ಬೀದಿದೀಪದ ಬೆಳಕಿನಲ್ಲಿ ಕಾಣುವ ಮೂಡಿಗೆರೆಯ ಸುಂದರ ನೋಟವನ್ನು ಸಣ್ಣಗೆ ಹನಿಯುತ್ತಿದ್ದ ಮಳೆಯಲ್ಲೇ ಚಿತ್ರೀಕರಿಸಿಕೊಂಡೆವು. ಚಿತ್ರೀಕರಣ ಮುಗಿಯುವ ಹೊತ್ತಿಗೆ ರಾತ್ರಿ 10.30. ರಾತ್ರಿ ಊಟಕ್ಕೆಂದು ಮೂಡಿಗೆರೆಯ ಹೋಟೆಲೊಂದಕ್ಕೆ ಬಂದೆವು. ಅಷ್ಟರಲ್ಲಾಗಲೇ ಸುತ್ತಿ ಸುತ್ತಿ ನಮಗೆಲ್ಲ ತುಂಬಾ ಆಯಾಸದ ಜೊತೆಗೆ ಭಯಂಕರ ಹಸಿವಾಗಿತ್ತು. ಹಾಗಾಗಿ ಅದು ಯಾವ ಹೋಟೆಲ್? ಏನು? ಎತ್ತ? ಏನೂ ನೋಡದೇ ಸೀದಾ ಹೋಟೆಲ್ ಒಳಹೋಗಿ ಊಟಕ್ಕೆ ಆರ್ಡರ್ ಮಾಡಿ ಕುಳಿತೆವು.
ಆಗ ನನ್ನ ಗಮನಕ್ಕೆ ಬಂದಿದ್ದೆಂದರೆ ನಾಲ್ಕು ಜನ ಇದ್ದ ನಾವು ಈಗ ಮೂರೇ ಜನವಾಗಿದ್ದೆವು! ಕ್ಯಾಮೆರಮನ್ ದರ್ಶನ್ ನಮ್ಮಿಂದ ಮಿಸ್ ಆಗಿದ್ದರು. ‘ದರ್ಶನ್ ಎಲ್ಲಿ ಹೋದರು’ ಎಂದು ಕೇಳಿದರೆ ಹೇಮಂತ ತನಗೆ ಗೊತ್ತಿಲ್ಲವೆಂದ,ನಿತಿನ್, ‘ಎಲ್ಲೋ ಸುಸ್ಸು ಮಾಡಕ್ ಓಗಿರ್ಬೇಕುಬುಡಣ್ಣ’ ಎಂದು ತುಂಬಾ ಉದಾಸೀನದಿಂದ ಹೇಳಿದ. ಹೇಳದೆ ಕೇಳದೆ ಎಲ್ಲಿಗೆ ಹೋದ್ರು ಇವರು ಎಂದು ಯೋಚಿಸುತ್ತಾ ಅವರಿಗೆ ಫೋನ್ ಮಾಡಿದೆ. ಫೋನ್ ರಿಸೀವ್ ಮಾಡಿದ ಅವರನ್ನು ‘ಎಲ್ರಿ ಹೋದ್ರಿ?’ಎಂದು ಕೇಳಿದಾಗ ‘ಇಲ್ಲೇ ಪಕ್ಕದ ಬೇಕರಿಲಿ ಬನ್ ತಿಂತಾ ಇದ್ದೀನಿ’!!! ಎಂದರು. ನಾನು ‘ಯಾಕ್ರಿ?’ ಎಂದು ಪರಮಾಶ್ಚರ್ಯದಿಂದ ಕೇಳಿದೆ. ‘ಡೈರೆಕ್ಟ್ರೆ ಅದು ನಾನ್ವೆಜ್ ಹೋಟ್ಲು. ನನಗೆ ನಾನ್ವೆಜ್ ಆಗಲ್ಲ. ಅದಕ್ಕೆ ಸುಮ್ನೆ ಈ ಕಡೆ ಬಂದು ಬೇಕ್ರಿಲಿ ಬನ್ ತಿಂತಾ ಇದೀನಿ’ ಎಂದು ಕಾರಣ ಹೇಳಿದರು. ದರ್ಶನ್ ವೆಜಿಟೇರಿಯನ್ ಎಂದು ನನಗೆ ಗೊತ್ತಿರಲಿಲ್ಲ. ಉಳಿದ ನಾವು ಮೂರು ಜನರೂ ಪ್ಯೂರ್ ನಾನ್ವೆಜಿಟೇರಿಯನ್ಸು. ಅದೂ ಅಲ್ಲದೇ ನಮಗಾಗಿದ್ದ ಸುಸ್ತಿನಲ್ಲಿ ಅದು ಅದು ವೆಜ್ಜೊ ನಾನ್ವೆಜ್ಜೊ ಎಂದು ನೋಡದೇ ಒಳಹೋಗಿ ಕುಳಿತು ಊಟ ಬರುವುದನ್ನೇ ಕಾಯುತ್ತಿದ್ದೆವು. ಕೊನೆಗೆ ಹೇಗೋ ದರ್ಶನ್ ನನ್ನು ಒಪ್ಪಿಸಿ ಕರೆದುಕೊಂಡು ಬಂದು ಅದೇಹೋಟೆಲಿನಲ್ಲಿ ವೆಜ್ ಊಟ ತಿನ್ನಿಸಿದೆವು.
ನಿತಿನ್ ದರ್ಶನ್ ನನ್ನು ರೇಗಿಸಿ ಗೋಳಾಡಿಸುತ್ತಿದ್ದ.ಇಷ್ಟೆಲ್ಲಾ ಆಗುವ ಹೊತ್ತಿಗೆ ರಾತ್ರಿ 11 ಆಗಿತ್ತು. ನೇರ ಮೂಡಿಗೆರೆಯ ಪ್ರವಾಸಿ ಮಂದಿರದ ನಮ್ಮ ಕೋಣೆಗೆ ಬಂದೆವು. ಮರುದಿನದ ಚಿತ್ರೀಕರಣಕ್ಕೆ ಬೇಕಾದ ಕೆಲವು ಸಿದ್ದತೆಗಳನ್ನು ಮಾಡಿಕೊಳ್ಳುತ್ತಾ ನಾಳೆ ಬಾಪು ದಿನೇಶ್ ತೇಜಸ್ವಿಯವರೊಂದಿಗೆ ಅಲೆದಾಡಿದ ಜಾಗಗಳಿಗೆ ಕರೆದುಕೊಂಡು ಹೋಗಿ ಏನೆಲ್ಲಾ ವಿಷಯಗಳನ್ನು ಹೇಳಬಹುದು, ಅದನೆಲ್ಲಾ ಹೇಗೆ ಚಿತ್ರೀಕರಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಪಾಪ, ಬೆಳಿಗ್ಗಿನಿಂದ ನನ್ನೊಬ್ಬನ ಕನಸನ್ನು ಸಾಕಾರಗೊಳಿಸಲು ನನ್ನೊಂದಿಗೆ ಅಲೆದು ಅಲೆದು ದಣಿದಿದ್ದ ನನ್ನ ಮೂವರೂ ಗೆಳೆಯರು ಆಗಲೇ ನಿದ್ರೆಗೆ ಜಾರಿದ್ದರು. ನಾಳೆ ಬೆಳಿಗ್ಗೆ ಅಂದರೆ ಆಗಸ್ಟ್ 10ಶುಕ್ರವಾರ ನಾನಂದುಕೊಂಡಿದ್ದಕ್ಕಿಂತಲೂ ಇಂಟರೆಸ್ಟಿಂಗ್ ಆದ ವಿಷಯಗಳನ್ನು ಬಾಪು ದಿನೇಶ್ ನಮಗೆ ತಿಳಿಸುತ್ತಾರೆ ಎಂದು ನಾನು ಆ ರಾತ್ರಿಊಹಿಸಿಯೂ ಇರಲಿಲ್ಲ. ಕೋಣೆಯ ದೀಪವಾರಿದಾಗ ರಾತ್ರಿ 12 ಗಂಟೆ.
(ಮುಂದುವರೆಯುವುದು…)
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402

‍ಲೇಖಕರು avadhi

4 August, 2013

4 Comments

  1. ಎಂ. ಬೈರೇಗೌಡ

    ಗೆಳೆಯರೆ,
    ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಪುಸ್ತಕ ರೂಪದಲ್ಲಿ ಬಂದಿದೆಯೇ…
    ತೇಜಸ್ವಿ ಕುರಿತು ನೀವು ತಯಾರಿಸಿರುವ ೊಂದು ಡಿ.ವಿ.ಡಿ. ನನ್ನ ವಿಳಾಸಕ್ಕೆ ಕಳುಹಿಸಿಕೊಡಲು ಸಾಧ್ಯವೇ ಅಥವಾ ಎಲ್ಲಿ ದೊರೆಯುತ್ತದೆಂದು ಹೇಳಿದರೆ ತರಿಸಿಕೊಳ್ಳುವೆ
    ತಮಗೆ ಕಳುಹಿಸಿಕೊಡಲು ಸಾಧ್ಯವಾದರೆ ವಿಳಾಸ ಎಂ. ಬೈರೇಗೌಡ, ನಂ. 119, 3ನೇ ಕ್ರಾಸ್, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು -560 104
    ಫೋ: 9448102158

  2. Parameshwara.K

    ಆತ್ಮೀಯ ಗೆಳೆಯರಾದ ಬೈರೇಗೌಡ್ರೆ,
    ನಿಮ್ಮ ಅನಿಸಿಕೆ, ಪ್ರತಿಕ್ರಿಯೆಗೆ ಸಾವಿರ ಧನ್ಯವಾದಗಳು. “ತೇಜಸ್ವಿಯನ್ನು ಹುಡುಕುತ್ತಾ” ಅಂಕಣ ಸದ್ಯಕ್ಕೆ ’ಅವಧಿ’ಯಲ್ಲಿ ಮಾತ್ರ ಪ್ರಕಟವಾಗುತ್ತಿದೆ. ಬಹಳ ಮಂದಿ ಓದುಗರು ಈ ಅಂಕಣವನ್ನು ಒಟ್ಟು ಸೇರಿಸಿ ಪುಸ್ತಕ ರೂಪದಲ್ಲಿ ತರುವಂತೆ ಪ್ರೀತಿಯಿಂದ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಈ ಅಂಕಣ ಮಾಲಿಕೆಯನ್ನು ಪುಸ್ತಕ ರೂಪದಲ್ಲಿ ತರಬೇಕೆಂಬ ಯೋಚನೆ ಇದೆ. ಪುಸ್ತಕ ಮಾಡಿದಾಗ ತಿಳಿಸುತ್ತೇನೆ.
    ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
    ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402
    ಮತ್ತೊಮ್ಮೆ ಧನ್ಯವಾದಗಳು
    ಕೆ.ಎಸ್. ಪರಮೇಶ್ವರ

  3. G Venkatesha

    Nimma Baravanige thumba interesting aagide. Khushiyaagide.

  4. ಪ್ರಶಾಂತ್ ಇಗ್ನೇಷಿಯಸ್

    ಪ್ರೀತಿಯ ಪರಮೇಶ್ವರ್ ರವರೇ,
    ನಿಮ್ಮ ಸಾಕ್ಷ್ಯಚಿತ್ರದ ಡಿ.ವಿ.ಡಿ ಕೊಂಡು ನೋಡಿದೆ.ಅದ್ಭುತವಾಗಿ ಮೂಡಿ ಬಂದಿದೆ. ಕಳೆದ ಸೆಪ್ಟೆಂಬರ್ ನಲ್ಲಿ ನಾನೂ ಸಹ ಮೂಡಿಗೆರೆಗೆ ಬಂದು ತೇಜಸ್ವಿಯವರ ಮನೆಗೆ ಭೇಟಿ ನೀಡಿ ಪುಳಕಿತನಾಗಿದ್ದೆ. ಅಲ್ಲಿನ ಅದ್ಭುತ ಪರಿಸರವನ್ನು ಕಂಡು ಯಾರದರೂ ಸಾಕ್ಷ್ಯಚಿತ್ರ ಮಾಡಬಹುದಲ್ಲ ಎಂದು ಎನಿಸಿತ್ತು. ನೀವು ಮಾಡಿದ್ದೀರಿ. ಅಭಿನಂದನೆಗಳು.

Trackbacks/Pingbacks

  1. ತೇಜಸ್ವಿಯನ್ನು ಹುಡುಕುತ್ತಾ – ಕಾಲಿಗೆ ಬೀಳ್ತಿನಿ ಬಿಟ್ ಬಿಡು ಎಂದರು ಬಿಡದ ಮಳೆರಾಯ « ಅವಧಿ / avadhi - [...] ತೇಜಸ್ವಿಯನ್ನು ಹುಡುಕುತ್ತಾ – ಕಾಲಿಗೆ ಬೀಳ್ತಿನಿ ಬಿಟ್ ಬಿಡು ಎಂದರು ಬಿಡದ ಮಳೆರಾಯ August 11, 2013 by Avadhikannada (ಇಲ್ಲಿಯವರೆಗೆ…) [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading