ತೇಜಸ್ವಿಯನ್ನು ಹುಡುಕುತ್ತಾ – ’ಅವ್ರ್ಗೆ ನಮ್ದು ಬಿರ್ಯಾನಿ ಅಂದ್ರೆ ಬಾಳ ಇಷ್ಟ…’

(ಭಾಗ ೧೨)

(ಭಾಗ ೧೧ ಕ್ಕೆ ಇಲ್ಲಿ ಕ್ಲಿಕ್ಕಿಸಿ)

’ಇದೇ ಬಿಲ್ಡಿಂಗು…ಅಲ್ಲಿ ಸಂದಿ ಕಾಣಿಸ್ತಿದ್ಯಲ್ಲ…ಅಲ್ಲಿ ಮೆಟ್ಟ್ಲಿದೆ. ಮೇಲೆ ಫಸ್ಟ್ ಫ್ಲೋರ್ ನಲ್ಲೇ ಆ ಹೋಟ್ಲು. ಹೋಗಿ ಮಾತಾಡ್ಸಿ…’, ಟಿವಿ ಅಂಗಡಿ ಸುರೇಂದ್ರರವರು ತೇಜಸ್ವಿಯವರಿಗೆ ಅಚ್ಚುಮೆಚ್ಚಾಗಿದ್ದ ಆ ಬಿರ್ಯಾನಿ ಅಂಗಡಿಯನ್ನು ನಮಗೆ ತೋರಿಸಿದರು. ’ನೀವು ಬನ್ನಿ, ಗೊತ್ತಿರೋರೊಬ್ರು ಜೊತೆಗಿದ್ರೆ ಒಳ್ಳೇದು…’ ಎಂದು ಅವರನ್ನು ನಮ್ಮ ಜೊತೆ ಬರುವಂತೆ ಒತ್ತಾಯಿಸಿದೆ. ಸುರೇಂದ್ರರವರು ’ಸಾರಿ ಪರಮೇಶ್ವರ್, ತಪ್ಪು ತಿಳ್ಕೋಬೇಡಿ…ಅಂಗಡಿ ಬಿಟ್ಟು ಬಂದು ತುಂಬಾ ಹೊತ್ತಾಗಿದೆ. ಮೊನ್ನೆ ಜೋರಾಗಿ ಸಿಡಿಲು ಹೊಡೆದು ಮೂಡಿಗೆರೆಲಿರೊ ಸುಮಾರು ಟಿವಿಗಳು ಕೆಟ್ಟೊಗಿವೆ. ಅವೆಲ್ಲಾ ನಮ್ ಅಂಗಡಿಗೆ ರಿಪೇರಿಗೆ ಬಂದು ಕೂತಿವೆ. ನೀವೇ ನೋಡಿದ್ರಲ್ಲ…ಅಂಗಡೀಲಿ ಜಾಗಾನೆ ಇರಲಿಲ್ಲ. ಬೇಜಾರ್ ಮಾಡ್ಕೋಬೇಡಿ. ತುಂಬಾ ಕೆಲ್ಸ ಇದೆ. ಮತ್ತೆ ಸಿಕ್ತೀನಿ. ನಿಮ್ ಶೂಟಿಂಗೆಲ್ಲ ಮುಗಿದ ಮೇಲೆ ಫೋನ್ ಮಾಡಿ. ನನ್ನಿಂದ ಏನಾದ್ರು ಸಹಾಯ ಆಗೋದಿದ್ರೆ ಕೇಳಿ…ಮಾಡ್ತೀನಿ….ಬರ್ಲಾ?…’ ಎನ್ನುತ್ತಾ ಸುರೇಂದ್ರ ಹಿಂತಿರುಗಿ ಅವರ ಅಂಗಡಿ ಬೀದಿಯ ಕಡೆ ಹೊರಟೇಬಿಟ್ಟರು. ಸಮಯ ಮಧ್ಯಾಹ್ನ 2ಗಂಟೆ ಸುಮಾರು ಆಗಿತ್ತು.

ಮೆಟ್ಟಿಲು ಹತ್ತಿ ಮೊದಲ ಮಹಡಿಯ ’ಮುಬಾರಕ್ ಹೋಟೆಲ್’ ಎಂಬ ಹೆಸರಿದ್ದ ಪುಟ್ಟ ಹೋಟೆಲೊಂದರ ಹೋಟೆಲಿನ ಮುಂದೆ ನಿಂತೆವು. ಅದು ಸುಮಾರು 20×20 ಅಳತೆಯ ಚಿಕ್ಕ ಹೋಟೆಲ್. ಒಳಗಡೆ ಒಂದು ಬದಿಯಲ್ಲಿ ಮರದ ಟೇಬಲ್ ಮೇಲೆ ಸಾಲಾಗಿ ಮೂರ್ನಾಲ್ಕು ದೊಡ್ಡ ಪಾತ್ರೆಗಳನ್ನು ಜೋಡಿಸಿಟ್ಟಿದ್ದರು. ಅದನ್ನು ನೋಡಿದ ನಿತಿನ್’…ಆ ಹಂಡೆಗಳ ತುಂಬಾ ಬಿರ್ಯಾನಿ ತುಂಬ್ಸಿಟ್ಟಿದ್ದಾರ…?’ ಎಂದು ಹೇಮಂತನ ಹತ್ತಿರ ಮೆಲುದನಿಯಲ್ಲಿ ಕೇಳುತ್ತಿದ್ದ. (ಎರಡು ಗಂಟೆ ಆದರೂ ಹೊಟ್ಟೆಗಿನ್ನು ಏನೂ ಬಿದ್ದಿಲ್ಲ ಎಂದು ನೆನಪಾಗಿಯೋ ಏನೋ) ’ಮುಚ್ಚಳ ಎತ್ತಿ ನೋಡು ಗೊತ್ತಾಗುತ್ತೆ…’ ಹೇಮಂತ ನಿತಿನನ ಮೇಲೆ ಯಾಕೊ ಸಣ್ಣಗೆ ರೇಗಿದ.
ಅಷ್ಟರಲ್ಲಿ ಬಾಲ್ಯದಲ್ಲಿ ಅಕ್ಬರ್ ಬೀರಬಲ್ ಕಥೆಯಲ್ಲಿ ಕೇಳಿದ್ದ ಪಾತ್ರವೊಂದನ್ನು ನೆನಪಿಸುವಂತಿದ್ದ ಸುಮಾರು ಅರ್ಧ ಶತಮಾನ ಕಂಡಿರುವ ಉದ್ದನೆಯ ಬಿಳಿಯ ಗಡ್ಡದ ವ್ಯಕ್ತಿಯೊಬ್ಬರು ನಮ್ಮ ಗಲಾಟೆ ಕೇಳಿ ಹೊರಬಂದು ….ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್ಯ್…ಯಾರ್ ಬೇಕು? ಎಂದು ಕೇಳಿದರು. (ಮೊದಲ ಮಾತಿನಲ್ಲೇ ಅವರಿಗೆ ತೊದಲಿನ ಸಮಸ್ಯೆ ಇದೆ ಎಂದು ನಮಗೆಲ್ಲ ಸ್ಪಷ್ಟವಾಗಿ ಗೊತ್ತಾಯಿತು) ನಾನು ಅವರಿಗೆ ನಮ್ಮ ಪರಿಚಯ ಮಾಡಿಕೊಂಡು ಬಂದಿರುವ ಉದ್ದೇಶ ತಿಳಿಸಿದೆ. ಆ ಹಿರಿಯರು ಹೇಳಿದ್ದನೆಲ್ಲಾ ಕೇಳಿಸಿಕೊಂಡು’ನಾವ್ಯಾರು ಅಂತ ಉಡ್ಕೊಂಡ್ಬಂದ್ರಿ…? ದೊಡ್ಡೋರ್ ಬಗ್ಗೆ ನಾವೇನ್ ಏಳೋದು…’ ಎಂದು ಸಂಕೋಚದ ಮುದ್ದೆಯಾದರು.
’ಅವ್ರ ಬಗ್ಗೆ ನಿಮ್ಮಂತೋರೆ ಕರೆಕ್ಟಾಗಿ ಮಾತಾಡೋಕೆ ಸಾಧ್ಯ. ಏನ್ ಗೊತ್ತೊ ಅದನ್ನೇ ಹೇಳಿ’ ಎಂದು ಹೇಮಂತ ಅವರನ್ನು ಒತ್ತಾಯಿಸಿದ. ’ನೀವ್ ಕೇಳ್ತೀರ ಅಂತ ಹೇಳ್ತೀನಿ’ ಎಂದು ಮಾತು ಪ್ರಾರಂಭಿಸಿದರು. ದರ್ಶನ್ ಅದಾಗಲೇ ಕ್ಯಾಮೆರ ರೋಲ್ ಮಾಡಿ ಸಿದ್ದವಾಗಿ ನಿಂತಿದ್ದರು.
ಓವರ್ ಟು ಬಿರ್ಯಾನಿ ಎಕ್ಸ್ಪರ್ಟ್ ಅಬ್ದುಲ್ ರಶೀದ್… ’ನನ್ ಹೆಸ್ರು ಅಬ್ದುಲ್ ರಶೀದು. ಓಟ್ಲು ನಡುಸ್ತೀನಿ. ಒಂದಿನ ಏನಾಯ್ತು…’…’ಸಾಬ್ರೆ ಬಿರ್ಯಾನಿ ಮಾಡ್ತೀರ?’ ಅಂತ ಕೇಳ್ಕೊಂಡು ಅವ್ರು ನಮ್ ಓಟ್ಲುಗ್ ಬಂದ್ರು. ನಾನು ‘ಹೌದು’ ಅಂದೆ. ಅಲ್ಲಿಂದ ನಮ್ದು ಅವ್ರುದ್ದು ಯಿಶ್ವಾಸ ಸುರು ಆಯ್ತು. ಅಲ್ಲಿಂದ ಸುಮಾರು ನಾಲ್ಕು ವರ್ಸ ನಮ್ ಅತ್ರ ಅವ್ರು ಬಿರ್ಯಾನಿ ತಗೊಂಡೋಗಿದಾರೆ’ ಎಂದು ತೇಜಸ್ವಿಯವರಿಗೆ ಆ ಬಿರ್ಯಾನಿ ಹೋಟೆಲಿನ ಜೊತೆ ಸಂಪರ್ಕ ಪ್ರಾರಂಭವಾದ ದಿನಗಳನ್ನು ನೆನಪಿಸಿಕೊಂಡರು.

’ನಾವು ಬಿರ್ಯಾನಿ ಮಾಡೋದು ಸುಕ್ರುವಾರ ಮಾತ್ರ. ಬೇರೆ ದಿನ ಬೇರೆ ಬೇರೆ ಐಟಮ್ ಮಾಡ್ತೀವಿ. ಅದಕ್ಕೆ ಅವ್ರು ವಾರಕ್ಕೊಂದ್ಸಲ ನಮ್ಮತ್ರ ಬಿರ್ಯಾನಿ ತಗೋತಿದ್ರು. ಗುರುವಾರನೇ ಫೋನ್ ಮಾಡಿ ಎಷ್ಟ್ ಬೇಕು ಅಂತ ಆರ್ಡರ್ ಮಾಡಿಬಿಡೋರು. ಸುಕ್ರುವಾರ ಕರೆಕ್ಟಾಗೆ 1 ಗಂಟೆಗೆ ಬಂದು ಕೆಳಗಡೆ ಸ್ಕೂಟ್ರು ಮೇಲೆ ನಿಂತ್ಕೊಂಡೆ ’ಸಾಬ್ರೆ…..’ ಅಂತ ಕೈ ಎತ್ತಿ ಇಂಗೆ ಸನ್ನೆ ಮಾಡ್ತಿದ್ರು. ನಾನು ಅಥವ ನಮ್ ಉಡ್ಗ ಕೆಳಗಡೆ ಹೋಗಿ ಅವ್ರಿಗೆ ಬಿರ್ಯಾನಿ ಕೊಟ್ ಬರ್ತಿದ್ವಿ. ಅವ್ರತ್ರ ಒಂದ್ ಕುಕ್ಕರ್ ಇತ್ತು. ಅದನ್ನೇ ತರ್ತಿದ್ರು ಬಿರ್ಯಾನಿ ಆಕಿಸ್ಕಂಡ್ ಒಗಕೆ. ಒಟ್ನಲ್ಲಿ ಜಾಸ್ತಿ ಫೋನಿನಲ್ಲೇ ವ್ಯವಹಾರ ನಮ್ದು ಅವ್ರುದ್ದು ಹೆಹೆ’ ಎಂದು ಒಂದೇ ಉಸಿರಿಗೆ ಎಲ್ಲವನ್ನೂ ಹೇಳಿ ಮುಗ್ಧವಾಗಿ ನಕ್ಕರು. ’ಕುಕ್ಕರ್ ತುಂಬಾ ಬಿರ್ಯಾನಿನ ಅಂದ್ರೆ ಯಾವ್ ಥರ ಲೆಕ್ಕ ಅದು?’ ಎಂದು ಹೇಮಂತಅವರಿಗೆ ಕೇಳಿದ. ’ಅದು ಅವ್ರು ಒಂದೊಂದ್ಸಲ ಎರಡು ಅರ್ಡರ್ ಮಾಡ್ತಿದ್ರು, ಕೆಲವು ಸಲ ನಾಲಕ್ಕು, ಐದು, ಎಂಟು…ಹೀಗೆ ಮನೆಗೆ ಜಾಸ್ತಿ ಜನ ಬಂದ್ರೆ ಜಾಸ್ತಿ ಜಾಸ್ತಿ ತಗೊಂಡೋಗೋರು. ಎಷ್ಟೇ ತಗೊಂಡ್ರು ಕುಕ್ಕರ್ ತರ್ತಿದ್ರು ಆಕಿಸ್ಕೊಂಡ್ ಒಗ್ತಿದ್ರು’ ಎಂದು ಹೇಮಂತನ ಪ್ರಶ್ನೆಗೆ ಉತ್ತರಿಸಿದರು.
‘ಎಷ್ಟು ನಿಮ್ ಹೋಟ್ಲಲ್ಲಿ ಬಿರ್ಯಾನಿ?’ನಾನು ಅವರಿಗೆ ಪ್ರಶ್ನಿಸಿದೆ. ’ಮೊದ್ಲು 30 ರೂಪಾಯಿ ಇತ್ತು, ಅಮೇಲೆ 40 ಆಯ್ತು, 50 ಆಯ್ತು. 50ರೂಪಾಯಿವರೆಗೂ ಅವ್ರು ನಮ್ ಬಿರ್ಯಾನಿ ತಿಂದಿದಾರೆ… ಅಮೇಲೆ ….ಏನ್ ಮಾಡೋದು…ದೇವ್ರು…’ಎಂದು ಮಾತನ್ನು ಅರ್ಧಕ್ಕೆ ನುಂಗಿಕೊಂಡರು. ಅವರ ನುಂಗಿದ ಮಾತೇನು ಎಂದು ಅರ್ಥಮಾಡಿಕೊಳ್ಳುವುದು ಕಷ್ಟವಾಗಿರಲಿಲ್ಲ. ’ಆ ದಿವ್ಸ ಕೂಡ ನಿಮ್ ಹೋಟ್ಲು ಬಿರ್ಯಾನಿ ತಗೊಂಡೊಗಿದ್ರಂತಲ್ಲ…’ ಎಂದು ಅವರಿಗೆ ಮತ್ತೊಂದು ಪ್ರಶ್ನೆ ಹಾಕಿದೆ. ರಶೀದ್ ಕಂಡು ಕಾಣದ ಹಾಗೆ ನಗುತ್ತಾ…ಅವತ್ತು ಅವ್ರ ಅಳಿಯ ಬಂದಿದ್ರಂತೆ. ಅದಕ್ಕೆ ಸ್ವಲ್ಪ ಜಾಸ್ತಿ ಆರ್ಡರ್ ಮಾಡಿದ್ರು. ಯತಾಪರ್ಕಾರ ಸುಕ್ರುವಾರ ಬಂದ್ರು. ಜೊತೆಗೆ ಅವ್ರ್ ಮೊಮ್ಮಗ್ಳು ಇತ್ತು. ಬಂದು ಬಿರ್ಯಾನಿ ತಗೊಂಡೋಗಿ ತಿಂದಿದ್ದು….ಅಷ್ಟೇ………’ ಮಾತು ಮತ್ತೆ ಅರ್ಧಕ್ಕೆ ಮೊಟಕಾಯಿತು. ಕೆಲವು ನಿಮಿಷಗಳ ನಂತರ’ಅವ್ರತ್ರ ಬೇಧ ಭಾವನೇ ಇರ್ಲಿಲ್ಲ. ನಮ್ ಹುಡ್ಗುನ್ನ ಅವ್ರ್ ಮನೆಗ್ ಕರ್ಕೊಂಡ್ ಓಗಿ ಊಟ ಆಕಿ, ಕಾಫಿ ಕೊಟ್ಟಿ ಕಳಿಸಿದ್ರು. ಇಷ್ಟ ಆದ್ರೆ ತುಂಬಾ ಪ್ರೀತಿ, ಯಿಸ್ವಾಸ್ದಿಂದ ಮಾತಾಡಿಸ್ತಿದ್ರು…ಸುಳ್ಳು ಗಿಳ್ಳು ಹೇಳೊ ಮನ್ಸ ಅಲ್ಲ……ಅಷ್ಟೇ…’ ಕಡೆಯ ಮಾತೆಂಬಂತೆ ಆಡಿ ಮುಗಿಸಿದರು ಅಬ್ದುಲ್ ರಶೀದ್. ಅವರಿಂದ ನಮ್ಮ ಸಾಕ್ಷ್ಯಚಿತ್ರಕ್ಕೆ ಸಿಕ್ಕಿದ್ದು ಇಷ್ಟೇ ಮಾಹಿತಿ. ಹೊರಡಲು ಸಿದ್ದವಾಗುತ್ತಿದ್ದಾಗ ರಶೀದ್ ಅವರ ಪತ್ನಿ ಮಗನನ್ನು ಕರೆದು ಪರಿಚಯಿಸಿದರು. ಅವರೆಲ್ಲರಿಗೂ ಧನ್ಯವಾದ ಹೇಳಿ ‘ಮುಬಾರಕ್ ಹೋಟೆಲ್’ನಿಂದ ಹೊರಬಂದೆವು. ಮಳೆ ಸಣ್ಣಗೆ ಬರುತ್ತಲೇ ಇತ್ತು.
ಫೋಟೋ ಕೃಪೆ : ಡಿ ಜಿ ಮಲ್ಲಿಕಾರ್ಜುನ
ಆ ಹೋಟೆಲಿನ ಎದುರುಗಡೆ ರಸ್ತೆಯ ಕೊನೆಯಲ್ಲಿದ್ದ ಐಯ್ಯಂಗಾರ್ ಬೇಕರಿಗೆ ತೇಜಸ್ವಿ ಆಗಾಗ ಬರುತ್ತಿದ್ದರೆಂಬ ಮಾಹಿತಿ ರಾಘವೇಂದ್ರ ಪ್ರಿಂಟಿಂಗ್ ಪ್ರೆಸ್ಸಿನ ರಮೇಶ್ ರವರು ನಮಗೆ ಕೊಟ್ಟಿದ್ದರಾದ್ದರಿಂದ ಆ ಬೇಕರಿಯವರನ್ನು ಮಾತನಾಡಿಸಬೇಕೆಂದು ಬೇಕರಿ ಹುಡುಕಿ ಹೊರಟೆವು. ಮೂಡಿಗೆರೆಯ ಒಬ್ಬರು ನಮಗೆ ಆ ಬೇಕರಿಯನ್ನು ತೋರಿಸಿದರು. ಬೇಕರಿಯ ಒಳಗಡೆ ಗಿರಾಕಿಗಳನ್ನು ಸಂಭಾಳಿಸುತ್ತಿದ್ದ ಇಬ್ಬರು ಯುವಕರಿಗೆ ನಮ್ಮ ಉದ್ದೇಶ ತಿಳಿಸಿದೆ. ನಮ್ಮ ಉದ್ದೇಶ ಕೇಳಿ ಆ ಯುವಕರು ಸಂತಸಗೊಂಡರಾದರೂ ಬೇಸರದ ದನಿಯಲ್ಲಿ ಬೇಕರಿಯ ಮಾಲೀಕರು ಬೇರೆ ಊರಿಗ್ ಹೋಗಿದ್ದಾರೆಂದು, ಬರುವುದು ಮೂರ್ನಾಲ್ಕು ದಿನವಾಗುತ್ತದೆಂದು, ತೇಜಸ್ವಿಯವರ ಬಗ್ಗೆ ಅವರೇ ಮಾತನಾಡಬೇಕೆಂದು ತಿಳಿಸಿದರು. ಸ್ವಲ್ಪ ನಿರಾಸೆಯಾದರೂ ತೋರಿಸಿಕೊಳ್ಳದೆ ಅಲ್ಲಿಂದ ಹೊರಟು ಮೂಡಿಗೆರೆಯ ಹೋಟೆಲೊಂದರಲ್ಲಿ ಊಟ ಮಾಡಿ ನೇರ ಮೂಡಿಗೆರೆ ಐಬಿಯ ನಮ್ಮ ರೂಮಿಗೆ ಬಂದೆವು. (ತೇಜಸ್ವಿಯವರ ಫೇವರೇಟ್ ಬಿರ್ಯಾನಿ ಹೋಟೆಲಿನಲ್ಲೇ ಊಟ ಮಾಡಬೇಕೆಂದು ನಮ್ಮ ಮೂವ್ವರಿಗೂ ಅನಿಸಿತ್ತಾದರೂ ದರ್ಶನ್ ವೆಜಿಟೇರಿಯನ್ ಆಗಿದ್ದರಿಂದ ನಮ್ಮ ಯೋಜನೆ ಕೈಬಿಡಬೇಕಾಯಿತು. ಈ ನಿರ್ಧಾರಕ್ಕೆ ನಿತಿನ್ ಕಡೆಯಿಂದ ತುಂಬಾ ಆಕ್ಷೇಪಣೆ ವ್ಯಕ್ತವಾಯಿತು).
ಮಳೆಯಲ್ಲಿ ನೆಂದಿದ್ದ ಬಟ್ಟೆಗಳನ್ನು ಬದಲಾಯಿಸಿ ಒಂದರ್ಧ ಗಂಟೆ ವಿಶ್ರಾಂತಿ ಪಡೆದು ರಿಚಾರ್ಜ್ ಆದ ನಂತರ ನಮ್ಮ ಮೂವ್ವರೂ ಹುಡುಗರಿಗೂ ಮುಂದಿನ ಕೆಲಸವೇನೆಂದು ವಿವರಿಸಿದೆ. ಆ ಪ್ರಕಾರ ಆ ದಿನದ ಕೊನೆಯ ಹೊತ್ತಿಗೆ ಮೂರು ಜನರ ಮಾತುಗಳನ್ನು ಚಿತ್ರೀಕರಿಸುವುದಿತ್ತು. ಅದರಲ್ಲಿ ಮೊದಲನೆಯವರು ದತ್ತಣ್ಣ ಅಂದರೆ ಸುರೇಶ್ಚಂದ್ರದತ್ತರವರು. ಅವರು ಹೇಳಿದ್ದಂತೆನಾಲ್ಕು ಗಂಟೆಯ ಹೊತ್ತಿಗೆ ಅವರ ಮನೆಯ ಬಾಗಿಲಲ್ಲಿ ನಿಂತು ಕಾಲಿಂಗ್ ಬೆಲ್ ಒತ್ತಿದೆ. ದತ್ತಣ್ಣನವರೇ ಬಾಗಿಲು ತೆಗೆದು ನಗು ಮುಖದಿಂದ ‘’ವೆಲ್ ಕಮ್ ವೆಲ್ ಕಮ್…’ಎಂದು ಕೈಕುಲುಕುತ್ತಾ ನಮ್ಮನ್ನು ಸ್ವಾಗತಿಸಿದರು. ಕೆಲವು ನಿಮಿಷಗಳು ನಮ್ಮ ತಂಡದ ಪರಿಚಯ,ಉಭಯಕುಶಲೋಪರಿಗಳಲ್ಲೇ ಮುಗಿದು ಹೋಯಿತು. ನಂತರ ನಿಧಾನವಾಗಿ ವಿಷಯಕ್ಕೆ ಬಂದರು ದತ್ತಣ್ಣ.
’ಇಲ್ಲಸ್ಟ್ರೇಷನ್ಸ್ ಮಾಡಕ್ ಬರುತ್ತೇನಯ್ಯನಿನಗೆ?’
’ನಾನು ಸುರೇಶ್ಚಂದ್ರ ದತ್ತ, ಮೂಡಿಗೆರೆ ಹತ್ತಿರದ ಬೆಳಗೋಡು ಗ್ರಾಮದವನು. ೧೯೯೧ನೇ ಇಸವಿ. ನಾನು ಆಗಷ್ಟೇ ದಾವಣಗೆರೆ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ಅಡ್ವರ್ಟಿಸಿಂಗ್ ಆರ್ಟ್ಸ್ ಡಿಗ್ರಿ ಮುಗಿಸಿ ಮೂಡಿಗೆರೆಗೆ ವಾಪಸ್ ಬಂದಿದ್ದೆ. ಆ ಸಮಯದಲ್ಲಿ ತೇಜಸ್ವಿಯವ್ರು ಅವ್ರ ಪುಸ್ತಕಗಳಿಗೆ ಇಲ್ಲಸ್ಟ್ರೇಷನ್ಸ್ (ಕಥೆ/ಪಾತ್ರ/ಸನ್ನಿವೇಶವನ್ನು ಪ್ರತಿನಿಧಿಸುವ ಸಾಂದರ್ಭಿಕ ಚಿತ್ರಗಳು) ಮಾಡೋರು ಬೇಕು ಅಂತ ಹುಡುಕ್ತಿದ್ದಾಗ ಒಂದಿನ ಕೆಂಜಿಗೆ ಪ್ರದೀಪ್ ನನ್ನನ್ನ ತೇಜಸ್ವಿಯವರಿಗೆ ಪರಿಚಯ ಮಾಡ್ಕೊಟ್ರು. ಹಾಗೆ ಪುಸ್ತಕಗಳಿಗೆ ಚಿತ್ರ ಬಿಡಿಸೊ ನೆಪದಲ್ಲಿ ಶುರುವಾಯ್ತು ಅವ್ರ ಜೊತೆಗೆ ಒಡನಾಟ. ಅದು ಮುಂದೆ ಬೇರೆ ಬೇರೆ ದಿಕ್ಕಿನಲ್ಲಿ ಬೆಳೀತು’, ದತ್ತಣ್ಣ ತೇಜಸ್ವಿಯವರ ಒಡನಾಟದ ನೆನಪುಗಳನ್ನು ಮೊಗೆಯಲು ಪ್ರಾರಂಭಿಸಿದ್ದು ಹೀಗೆ. ’ಮೊದಲ್ನೇ ಭೇಟಿನಲ್ಲೆ ಅವ್ರು ಕೇಳಿದ ಮೊದಲ್ನೇ ಪ್ರಶ್ನೆನೇ ’ನಿನಗೆ ಇಲ್ಲಸ್ಟ್ರೇಷನ್ಸ್ ಮಾಡಕ್ ಬರುತ್ತೇನಯ್ಯ?’ ಅಂತ. ನಾನು ಬರುತ್ತೆ ಸಾರ್ ಅಂದೆ. ಮೊದಲು ಅವ್ರು ನನಗೆ ಕೊಟ್ಟ ಕೆಲಸ ’ಕಿರಗೂರಿನ ಗಯ್ಯಾಳಿಗಳು’. ಆ ಪುಸ್ತಕಕ್ಕೆ ಕವರ್ ಪೇಜ್ ಡಿಸೈನ್ ಮಾಡಿ ಕೊಟ್ಟೆ. ಅಮೇಲೆ ಚಿದಂಬರ ರಹಸ್ಯ, ಮಿಸ್ಸಿಂಗ್ ಲಿಂಕು, ಸಾರಾ ಅಬೂಬಕರ್ ಕಥೆಗಳು ಹೀಗೆ ಪಟ್ಟಿ ಬೆಳೀತಾ ಹೋಯ್ತು. ಅಮೇಲೆ ಕಂಪ್ಯೂಟರ್ ಬಂತು. ಹಾಗಾಗಿ ಅವ್ರೆ ಸ್ವಂತಃ ಕವರ್ ಪೇಜು, ಇಲ್ಲಸ್ಟ್ರೇಷನ್ಸ್ ಮಾಡಿಕೊಳ್ಳೋಕೆ ಶುರು ಮಾಡಿದ್ರು. ಹಾಗಾಗಿ ಅವ್ರ ಜೊತೆಗೆ ಒಡನಾಟ ಸ್ವಲ್ಪ ಕಡಿಮೆ ಆಗ್ತಾ ಬಂತು’ ಎಂದು ಸುಮಾರು ೨೦ ವರ್ಷಗಳ ಹಿಂದಿನ ನೆನಪುಗಳಿಗೆ ಜಾರಿದರು. ತೇಜಸ್ವಿಯವರ ಪುಸ್ತಕಗಳಿಗೆ ಚಿತ್ರ ಬಿಡಿಸುತ್ತಿದ್ದ ದಿನಗಳ ಬಗ್ಗೆ ಮತ್ತಷ್ಟು ವಿವರವಾಗಿ ಹೇಳುವಂತೆ ನಾನು ಅವರನ್ನು ಒತ್ತಾಯಿಸಿದರಿಂದ ದತ್ತಣ್ಣ ಆ ದಿನಗಳ ಸ್ವಾರಸ್ಯಕರ ಘಟನೆಗಳ ಸರಮಾಲೆಯನ್ನೇ ಬಿಡಿಸಿಡತೊಡಗಿದರು.
’ನಿನ್ನನ್ನ ನಂಬ್ಕೊಂಡು ಯಕ್ಕುಟ್ಟೋದೆ ಕಣಯ್ಯ…!!’

’ನಾನಾಗ ತುಂಬಾ ಚಿಕ್ಕವನು. ಆ ವಯಸ್ಸಿಗೆ ತುಂಬಾ ಸೀರಿಯಸ್ ಆಗಿರ್ಲಿಲ್ಲ ನಾನು. ಚೈಲ್ಡಿಷ್ ನೆಸ್ ಜೊತೆಗೆ ಸ್ವಲ್ಪ Lazyness ಬೇರೆ ಇತ್ತು. ಹಾಗಾಗಿ ಅವ್ರು ಹೇಳಿದ ಟೈಮಿಗೆ ಕರೆಕ್ಟಾಗಿ ಡಿಸೈನ್ಸ್ ಕೊಡೋಕೆ ಆಗ್ತಿರ್ಲಿಲ್ಲ ನನಗೆ. ಅವ್ರು ನನ್ನ ಕಾಟನೆಲ್ಲ ಸಹಿಸಿಕೊಂಡು ಹ್ಯಾಗೊ ಕೆಲಸ ಮಾಡಿಸ್ಕೊಳ್ತಿದ್ರು. ಬರ್ತಾ ಬರ್ತಾ ತುಂಬಾ ತಡ ಆಗೋಕೆ ಶುರುವಾಯ್ತು. ಅದಕ್ಕೆ ಅವ್ರಿಗೆ ರೇಗಿ ಹೋಗಿ ಒಂದಿನ ನನ್ ಮನೆಗೆ ಬಂದೋರೆ ’ಹೇಳಿದ ಟೈಮಿಗ್ ಕರೆಕ್ಟಾಗಿ ಕೆಲ್ಸ ಮಾಡಲ್ಲ ಅಲ್ಲ ನೀನು. ಮಾಡ್ತೀನಿ ಇರು ನಿನಗೆ!! ನಿನ್ನನ್ನ ಕಾಯೋಕೆ ಒಬ್ಬ ಸೆಂಟ್ರಿ ಹಾಕ್ತೀನಿ. ಕೆಲ್ಸ ಮುಗ್ಸೊವರ್ಗೂ ಆ ಕಡೆ ಈ ಕಡೆ ಎದ್ದು ಹೋಗ್ಬಾರ್ದು…ಹಾಗ್ ಮಾಡ್ತೀನಿ ಇರು’ ಅಂತ ಹೇಳಿದವ್ರೇ ಇಲ್ಲಿ ರಿತೇಶ್ ಅಂತ ಒಬ್ಬ ಇದ್ದ. ಅವನನ್ನ ಕರ್ಕೊಂಡ್ ಬಂದು ಇವ್ನು ಎಲ್ಲೂ ಹೋಗದ ಹಾಗೆ ನೋಡ್ಕೋ ಅಂತ ಹೇಳಿ ರಿತೇಶನ್ನ ಕಾವಲಿಗೆ ನಿಲ್ಸಿ ಹೋದ್ರು. ನಾನು ಬೇರೆ ದಾರಿ ಇಲ್ದೆ ಚಿತ್ರ ಬಿಡಿಸ್ತಾ ಕೂತೆ. ಸ್ವಲ್ಪ ಹೊತ್ತದ್ಮೇಲೆ ಇದ್ದಕ್ಕಿದ್ದಂಗೆ ತೋಟದ ಕೆಲ್ಸ ನೆನಪಾಯ್ತು. ತೋಟದಲ್ಲಿ ಮುಖ್ಯವಾದ ಕೆಲ್ಸ ಇತ್ತು. ಅದು ನೆನಪಾಗಿ ನನ್ನನ್ನ ಕಾವಲು ಕಾಯ್ತಿದ್ದ ರಿತೇಶನಿಂದ ಹ್ಯಾಗೆ ತಪ್ಪಿಸಿಕೊಂಡು ಎಸ್ಕೇಪ್ ಆಗ್ಲಿ ಅಂತ ಯೋಚ್ನೆ ಮಾಡ್ತಿದ್ದೆ. ಕಡೆಗೆ ಇವನು ಒಬ್ನೆ ಹೋಗೋಕೆ ಬಿಡೊಲ್ಲ ಅಂತ ಗೊತ್ತಾಗಿ ಪ್ಲಾನ್ ಮಾಡಿ ನನ್ನ ಜೊತೆ ಆ ರಿತೇಶನನ್ನು ಕನ್ವಿನ್ಸ್ ಮಾಡಿ ‘ಹೀಗೆ ಹೋಗಿ ಹಾಗೆ ಬಂದು ಬಿಡೋಣ ಬಾ’ ಅಂತ ಪುಸಲಾಯಿಸಿ ಅಲ್ಲಿಂದ ಇಬ್ಬರು ಎಸ್ಕೇಪ್ ಆಗ್ಬಿಟ್ವಿ. ಸ್ವಲ್ಪ ಹೊತ್ತಾದ ನಂತರ ’ಕೆಲ್ಸ ಆಗ್ತಿದ್ಯೊ ಇಲ್ವೊ ಅಂತ ನೋಡೋಣ’ ಅಂತ ತೇಜಸ್ವಿ ಬಂದು ನೋಡಿದ್ರೆ ಕೆಲ್ಸಾನೂ ಇಲ್ಲ ಆಸಾಮಿಗಳು ಪತ್ತೆ ಇಲ್ಲ!!
ಮನೆ ಖಾಲಿ…ಖೈದಿನೂ ಇಲ್ಲ…ಸೆಂಟ್ರಿನೂ ಇಲ್ಲ…ಇಬ್ರೂ ಎಸ್ಕೇಪ್!!! ಅಮೇಲೆ ತೇಜಸ್ವಿ ಸಿಕ್ಕಿ ‘ಅಲ್ಲ ಕಣಯ್ಯ ನಿನ್ನನ್ನ ಕಾಯ್ಲಿ ಅಂತ ಅವನನ್ನ ಬಿಟ್ಟು ಹೋದ್ರೆ ಅವನನ್ನೂ ಮಂಗ ಮಾಡಿ ಕರ್ಕೊಂಡು ಹೋಗಿದ್ದೀಯಲ್ಲ… ನೋಡ್ತಾ ಇರು ನೀನು ಹಿಂಗೇ ಕಾಟ ಕೊಡ್ತಿದ್ರೆ ನಿನ್ನನ್ನ ಯಾವ್ದಾದ್ರು ಕಥೆ ಒಳ್ಗಡೆ ಹಾಕ್ಕೊಂಡು ’ಇವನನ್ನ ನಂಬಿ ಯಕ್ಕುಟ್ಟೋದೆ’ ಅಂತ ಬರ್ದುಬಿಡ್ತೀನಿ’ ಅಂತ ರೇಗಿದ್ರು. ಅಮೇಲೆ ಮದ್ವೆ ಆದ್ಮೇಲೆ ಹೆಂಡ್ತಿನ ಕರ್ಕೊಂಡು ಅವ್ರ ಮನೆಗೆ ಹೋಗಿದ್ದೆ. ಆಗವ್ರು ’ಏನಮ್ಮ ನೀನೂಏನಾದ್ರು ಪೈಟಿಂಗ್ ಗಿಂಟಿಂಗ್ ಕಲ್ತಿದ್ದಿಯೊ ಹೆಂಗೆ?’ ಅಂತ ಕೇಳಿದ್ರು. ಇವ್ಳು ‘ಇಲ್ಲ’ಅಂತ ತಲೆ ಆಡ್ಸಿದ್ಳು. ’ಏನೇ ಆದ್ರೂ ನಿನ್ ಗಂಡನ ಹತ್ರ ಕೆಲ್ಸ ಮಾಡ್ಸೋದು ತುಂಬಾ ಕಷ್ಟ ಕಣಮ್ಮ. ಯದ್ವಾ ತದ್ವಾ ಟಾರ್ಚರ್ ಅವುನ್ದು’ ಅಂತ ಹೇಳಿದ್ರು’ ಎಂದು ತೇಜಸ್ವಿಯವರ ಪುಸ್ತಕಗಳಿಗೆ ಚಿತ್ರಬಿಡಿಸುತ್ತಿದ್ದ ಸಂದರ್ಭದಲ್ಲಿ ಆಗುತ್ತಿದ್ದ ಫಜೀತಿಗಳನ್ನು ವಿವರಿಸುತ್ತಾ ಹೋದರು.
‘ಸುಮ್ನೆ ಹೋಗಿ ಹಾಲು ಕುಡ್ದು ಮಲ್ಕೊಳಿ ಮಕ್ಳ ಥರ’!!
ದತ್ತಣ್ಣನವರ ಮಾತು ಮಧ್ಯೆ ಮಧ್ಯೆ ಎತ್ತೆತ್ತಲೋ ಹರಿಯಿತು. ಅದೇ ಸಮಯದಲ್ಲಿ ಅವರ ಶ್ರೀಮತಿ ಬಿಸಿಬಿಸಿ ಕಾಫಿ ತಂದಿಟ್ಟಿದ್ದರಿಂದ ಮಾತು ಮತ್ತೆ ತೇಜಸ್ವಿ ನೆನಪುಗಳಿಗೆ ಕನೆಕ್ಟ್ ಆಯಿತು. ಕಾಫಿ ಗುಟುಕರಿಸುತ್ತಲೇ ದತ್ತಣ್ಣನವರು ತೇಜಸ್ವಿ ಕಾಫಿ ಮಾಡಿಕೊಡುತ್ತಿದ್ದ ಬಗೆಯನ್ನು ನೆನಪಿಸಿಕೊಂಡರು. ’ಅವ್ರ್ ಮನೆಗೆ ಹೋದ್ರೆ ಅವ್ರೇ ಸ್ವತಃ ಕಾಫಿ ಮಾಡಿ ಅದನ್ನ ಟಂಬ್ಲರ್ ನಲ್ಲಿ ಹಾಕ್ಕೊಂಡ್ ಬಂದು ಮುಂದೆ ಇಟ್ಟು ಕುಡಿ ಅನ್ನೋರು. ಅದು ಕಾಂಸನ್ಟ್ರೇಟೆಡ್ ಡಿಕಾಕ್ಷನ್ ಹಾಕಿ ಸ್ಟ್ರಾಂಗಾಗಿ ಇರೋದು. ಅಷ್ಟ್ ಕಾಫಿ ಹ್ಯಾಗ್ ಕುಡಿಯೋದು ಅಂತ ನಾವೇನಾದ್ರು ಬೇಡ ಸರ್, ಕಡಿಮೆ ಕೊಡಿ ಅಂತ ರಾಗ ತೆಗೆದ್ರೆ, ’ಅದನ್ನ ಆಗ್ಲೆ ಹೇಳ್ಬೇಕಿತ್ತು. ಬಾಯಲ್ಲೇನ್ ಕಡುಬಿಟ್ಕೊಂಡಿದ್ಯ. ಯಾವ್ ಸೀಮೆ ಮಲ್ನಾಡೊನಯ್ಯ ನೀನು. ಕಾಫಿ ಕುಡಿ ಅಂದ್ರೆ ಕ್ಯಾತೆ ತೆಗೀತಿಯ. ಕಾಫಿ ಕುಡಿದ್ರೆ ಅದ್ರಲ್ಲೊರೊ ಕೆಫಿನ್ ಹೋಗಿ…ಯಾವ್ದೊ ಪಾರ್ಟ್ ಹೇಳೋರು…ಅಲ್ಲಿಗ್ ಹೋಗಿ ಹೊಡ್ದು ಬಾಡಿನೆಲ್ಲಾ ಆಕ್ಟಿವೇಟ್ ಮಾಡುತ್ತೆ. ಅದಕ್ಕೆ ಇಷ್ಟ್ ಕಾಫಿ ಕುಡೀಲೇ ಬೇಕು. ಇಲ್ಲಾಂದ್ರೆ ಸುಮ್ನೆ ಹೋಗಿ ಹಾಲು ಕುಡ್ದು ಮಲ್ಕೊಳಿ ಮಕ್ಳ ಥರ’ ಅಂತ ಬೈಯ್ತಿದ್ರು’ ಎನ್ನುತ್ತಾ ನಕ್ಕರು. ಕಾಫಿ ಕುಡಿದು ಮುಗಿಸಿದ ನಂತರ ದತ್ತಣ್ಣ ನಮ್ಮನ್ನು ಅವರ ಮನೆಯ ಮೊದಲ ಅಂತಸ್ತಿಗೆ ಕರೆದುಕೊಂಡು ಹೋದರು. ಕಳೆದ ಸರಿ ರಿಸರ್ಚ್ ವರ್ಕಿಗೆ ಬಂದಾಗಲೇ ಅವರ ಮನೆಯನ್ನು ನೋಡಿದ್ದೆವು. ಸುಂದರ ಒಳಾಂಗಣ ವಿನ್ಯಾಸ ಮಾಡಿರುವ ಮನೆ ಅದು.
ಅದು ಇದು ಮಾತಿನ ನಂತರ ಮಾತು ತೇಜಸ್ವಿಯವರ ಆಸಕ್ತಿ, ಕುತೂಹಲಗಳಿಗೆ ಜಾರಿತು. ತೇಜಸ್ವಿಯವರ ಬೆರಗು, ಕುತೂಹಲಕ್ಕೆ ಸಂಬಂಧಿಸಿದಂತೆ ದತ್ತಣ್ಣ ಹೇಳಿದ ಕೆಲ ಘಟನೆಗಳು ಇಲ್ಲಿವೆ.
’ಒಂದ್ಸಾರ್ತಿ ಏನಾಯ್ತು ತೇಜಸ್ವಿ ಫೋನ್ ಮಾಡಿ ತಕ್ಷಣ ಮನೆಗೆ ಬಾರಯ್ಯ ಅಂತ ಕರೆದ್ರು. ದುರಾದೃಷ್ಟ ಅವತ್ತು ಹೋಗೋಕ್ಕಾಗಲಿಲ್ಲ…ಮೂರ್ನಾಲ್ಕು ದಿನ ಬಿಟ್ಟು ಹೋದೆ. ಅವ್ರು ನನ್ನನ್ ನೋಡಿದ್ದೆ ’ಅಲ್ಲ ಕಣಯ್ಯ ಅವತ್ತು ಫೋನ್ ಮಾಡಿದ್ರೆ ಇವತ್ತು ಬರ್ತಾ ಇದ್ದೀಯಲ್ಲ. ಈ ಊರಿನಲ್ಲಿ ನನಗ್ ಅನ್ಸಿದ್ದನ್ನ ಹೇಳೋಣ ಅಂದ್ರೆ ಅರ್ಥ ಮಾಡ್ಕೊಳ್ಳೊರ್ ಎಷ್ಟ್ ಜನ ಇದಾರಯ್ಯ. ಏನೋ ನೀವಾದ್ರು ಒಂದಿಬ್ರು ಇದೀರ ಅಂದ್ರೆ ನೀವು ಹಿಂಗ್ ಮಾಡ್ತಿರಲ್ಲ’ ಅಂತ ರೇಗಿದ್ರು. ನಾನು ನಿಧಾನಕ್ಕೆ ’ಏನ್ ಸಾರ್ ವಿಷ್ಯ ಅಂದೆ. ಅವ್ರು ಡಿಜಿಟಲ್ ಕ್ಯಾಮೆರದಲ್ಲಿ ತೆಗೆದಿದ್ದ ಫೋಟೋಗಳನ್ನ ತೋರಿಸಿ’ಇಲ್ನೋಡಯ್ಯ ದತ್ತ, ಎಂಥಾ ಕ್ಯಾಮೆರ ಇದು. ಫೋಟೋ ತೆಗೆದ ತಕ್ಷಣಾನೇ ಚೆನ್ನಾಗಿದ್ಯ, ಚೆನ್ನಾಗಿಲ್ವ ಅಂತ ನೋಡಿ ಬೇಡ ಅಂದ್ರೆ ಡಿಲಿಟ್ ಮಾಡಿ ಬಿಸಾಕ್ಬೊದಲ್ಲಯ್ಯ. ಲೈಟು, ಶಾಡೋ ಎಲ್ಲ ಕರೆಕ್ಟಾಗಿ ಸೆಟ್ ಮಾಡಿ ಎಂಥ ಫೋಟೋ ಬೇಕಾದ್ರು ಈಜಿಃಯಾಗಿ ತೆಗೆದು ಬಿಡ್ಬೊದು. ನನ್ಮಗಂದು ಇದು ಒಂದಿಪ್ಪತ್ತು ವರ್ಷ ಹಿಂದೆ ಇದು ಬಂದಿದ್ರೆ ಅದ್ರ ಕಥೆನೇ ಬೇರೆ ಇರ್ತಿತ್ತು. ಅನ್ಯಾಯವಾಗಿ ಅರ್ಧ ಲೈಫ್ ಡಾರ್ಕ್ ರೂಮಿನಲ್ಲಿ ಹಾಳು ಮಾಡ್ಕೊಬಿಟ್ನಲ್ಲಯ್ಯ’ ಅಂತ ಡಿಜಿಟಲ್ ಕ್ಯಾಮೆರ ಬಗ್ಗೆ ಆಶ್ಚರ್ಯ ವ್ಯಕ್ತಪಡ್ಸಿದ್ರು. ಡಿಜಿಟಲ್ ಕ್ಯಾಮೆರಗಳ ಜಮಾನ ಆಗ ತಾನೆ ಶುರುವಾಗಿತ್ತು’ ಎನ್ನುತ್ತಾ ಫೋಟೋಗ್ರಫಿಯ ಬಗ್ಗೆ ತೇಜಸ್ವಿಯವರಿಗಿದ್ದ ಅಪಾರ ಶ್ರಮ, ಶ್ರದ್ಧೆ, ಪ್ಯಾಶನ್ ಕುರಿತು ದೀರ್ಘವಾಗಿ ಮಾತನಾಡಿದರು.
’ಎಷ್ಟ್ ದಿನದಿಂದ ಕಾಯ್ತಿದೆ ಸೇಡು ತೀರಿಸ್ಕೊಳ್ಳೊಕೆ?!!’
ಮಾತು ತೇಜಸ್ವಿಯವರ ಕುತೂಹಲ, ಆಸಕ್ತಿಗಳ ಕುರಿತೇ ಸಾಗಿತ್ತು. ಅದಕ್ಕೆ ಸಂಬಂಧಪಟ್ಟ ಮತ್ತೊಂದು ಘಟನೆ ಇದು; ’ಅವ್ರ ತೋಟದ ಗೇಟ್ ಹತ್ರ ಒಂದ್ ಮರ ಇತ್ತು. ನಾನಾಗ ಫ್ಲೋರ ಆಫ್ ವೆಸ್ಟರ್ನ್ ಘಾಟ್ಸ್ ಪ್ರಾಜೆಕ್ಟಿನಲ್ಲಿ ಕೆಲ್ಸ ಮಾಡಿದ್ರಿಂದ ಗಿಡ ಮರಗಳ ಬಗ್ಗೆ ತಕ್ಕ ಮಟ್ಟಿಗೆ ತಿಳ್ಕೊಂಡಿದ್ದೆ. ಅವ್ರು ನನ್ನನ್ನ ಅದು ಯಾವ ಮರ ಅಂತ ಕೇಳಿದ್ರು. ಪುಣ್ಯಕ್ಕೆ ಆ ಮರ ಯಾವ್ದು ಅಂತ ಗೊತ್ತಿದ್ರಿಂದ ಕಾನ್ಫಿಡೆಂಟಾಗಿ, ’ಅದು ತೂಪುರದ ಹಣ್ಣಿನ ಮರ. ಆ ಹಣ್ಣು ತುಂಬಾ ಸಿಹಿಯಾಗಿರುತ್ತೆ. ಸಿಕ್ರೆ ಅದೃಷ್ಟ!! ಅಷ್ಟು ಟೇಸ್ಟಿಯಾಗಿರುತ್ತೆ ಅಂತೆಲ್ಲ ಅವ್ರಿಗೆ ಹೇಳ್ದೆ. ಸರಿ ಅವತ್ತಿಗೆ ಆ ಚಾಪ್ಟರ್ ಕ್ಲೋಸ್ ಅಯ್ತು. ಸ್ವಲ್ಪ ದಿವ್ಸ ಆದ್ಮೇಲೆ ಅವ್ರ ಮನೆಗೆ ಹೋದೆ. ತೇಜಸ್ವಿ ನನ್ನನ್ನ ನೋಡ್ದೊರೆ…’ಎಯ್ ದತ್ತ, ಎಷ್ಟ್ ದಿನದಿಂದ ಕಾಯ್ತಿದ್ಯಯ್ಯ ನೀನು ನನ್ ಮೇಲೆ ಸೇಡು ತೀರಿಸ್ಕೊಳ್ಳೊಕೆ’ ಅಂತ ಕೇಳಿದ್ರು. ನನಗೆ ವಿಷ್ಯ ಏನು ಅಂತ ಗೊತ್ತಾಗದೇ ’ಏನಾಯ್ತುಸಾರ್? ಏನ್ವಿಷ್ಯ?’ ಅಂತ ಕೇಳ್ದೆ. ಅದಕ್ಕವ್ರು, ’ಅಲ್ಲಯ್ಯ ಆ ತೂಪುರದ ಹಣ್ಣು ತುಂಬಾ ಸಿಹಿಯಾಗಿರುತ್ತೆ ಹಂಗೆ ಹಿಂಗೆ ಅಂತೆಲ್ಲ ಡೈಲಾಗ್ ಹೊಡೆದ್ಯಲ್ಲಯ್ಯ…ಅದನ್ನ ಬಾಯಲ್ಲಿ ಇಡೋಕೆ ಆಗಲ್ಲ ಅಷ್ಟು ಕಹಿ. ಯಾವತ್ತೊ ತಿಂದಿದ್ದು ಇವತ್ತಿಗೂ ಕಹಿ ಹೋಗಿಲ್ಲ. ಯಾಕಯ್ಯ ಸುಳ್ಳು ಹೇಳ್ದೆ? ಅಂತ ಸರಿಯಾಗಿ ಕ್ಲಾಸ್ ತಗೊಂಡ್ರು. ಅಷ್ಟೊತ್ತಿಗೆ ಅವ್ರ ತೋಟದ ರೈಟ್ರು ಶಿವ ಬಂದ. ಅವ್ನು ನಾನು ಕ್ಲಾಸ್ ಮೇಟ್ಸು. ಅವ್ನು ಬಂದೋನು ವಿಷ್ಯ ಕೇಳಿ ’ಸಾರ್ ತೂಪುರದ ಹಣ್ಣು ಸಿಹಿಯಾಗೇ ಇರುತ್ತೆ. ಆದ್ರೆ ಅದೇ ಜಾತಿದು ಇನ್ನೊಂದು ನಾಯಿ ತೂಪುರ ಅಂತಿದೆ . ಅದು ನೀವೇಳ್ದಾಗೆ ಕಹಿ. ಬಾಯಿಗೆ ಇಡೋಕೆ ಆಗಲ್ಲ. ಅದೇ ತಿಂದಿರ್ಬೇಕು ನೀವು’ ಅಂತ ಎಕ್ಪ್ಲನೇಷನ್ ಕೊಟ್ಟು ನನ್ನನ್ನ ಬಚಾವ್ ಮಾಡ್ದ.
ಅವ್ನು ಹೇಳಿದ್ದೂ ನಿಜಾನೆ. ಪುಣ್ಯ ಅವ್ನು ಬಂದಿದ್ದಕ್ಕೆ ಬದುಕ್ಕೊಂಡೆ ಅವತ್ತು. ಇಲ್ದಿದ್ರೆ ಇನ್ನು ಸರಿಯಾಗಿ ಪೂಜೆ, ಮಂತ್ರಾಕ್ಷತೆ ಎಲ್ಲಾ ಆಗಿರೋದು. ಹಾಗೆ ಅವ್ರು ಏನಾದ್ರು ಒಂದು ಹಿಡಿದ್ರು ಅಂದ್ರೆ ಅದನ್ನ ಸಂಪೂರ್ಣವಾಗಿ ಹುಡುಕಿ, ಶೋಧಿಸಿ ನೋಡೋವರೆಗೂ ಬಿಡ್ತಿರ್ಲಿಲ್ಲ. ಒಂಥರ ಅಡ್ವೆಂಚರಸ್ ನೇಚರ್ರು’ ಎನ್ನುತ್ತಾ ದತ್ತಣ್ಣ ಮಾತಿಗೆ ವಿರಾಮ ಕೊಟ್ಟರು. ಈ ವಿರಾಮದ ಸಮಯದಲ್ಲಿ ಹೊಸದಾಗಿ ಅವರ ಕಲೆಕ್ಷನ್ನಿಗೆ ಸೇರ್ಪಡೆಯಾಗಿದ್ದ ಸ್ತಾಂಪುಗಳು ಹಾಗು ಹಳೆಯ ನಾಣ್ಯಗಳನ್ನು ನಮಗೆ ತೋರಿಸಿದರು. (ಇವರಿಗೆ ಪ್ರಾಚೀನ ನಾಣ್ಯ ನೋಟು, ಸ್ಟಾಂಪ್ ಸಂಗ್ರಹಿಸುವ ಹವ್ಯಾಸವಿರುವ ಬಗ್ಗೆ ಹಿಂದೆ ಬರೆದಿದ್ದೆ). ಇಷ್ಟೆಲ್ಲಾ ಮುಗಿಯುವಷ್ಟರಲ್ಲಿ ಸಮಯ ಸಂಜೆ 5 ಗಂಟೆ. ನಮಗೆ ಸಾಕಷ್ಟು ಮಾಹಿತಿಗಳು ದತ್ತಣ್ಣನವರಿಂದ ಸಿಕ್ಕಿದ್ದವಾದ್ದರಿಂದ ಹೊರಡುವುದು ಸೂಕ್ತವೆಂದುಕೊಂಡು ಅವರಿಗೆ ’ಸರ್, ತೇಜಸ್ವಿಯವರಿಂದ, ಅವರ ಬದುಕಿನಿಂದ ಕಲಿತಿದ್ದು ಅಥವ ಏನಾದ್ರು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದುಂಟ?’ ಕಡೆಯ ಪ್ರಶ್ನೆಯೊಂದನ್ನು ಕೇಳಿದೆ.
ದತ್ತಣ್ಣ ಕಣ್ಣರಳಿಸಿ ’ಖಂಡಿತಾ, ನನ್ನ ಈ ಹವ್ಯಾಸಗಳಿಗೆಲ್ಲಾ ಇನ್ಸ್ಪಿರೇಷನ್ನೇ ತೇಜಸ್ವಿ. ಅವ್ರ ಸಂಪರ್ಕಕ್ಕೆ ಬರದೇ ಹೋಗಿದ್ರೆ ನಾನು ಎಲ್ರ ಥರ ನನ್ ಬಗ್ಗೇನೆ ಯೋಚಿಸ್ತಾ ಸುತ್ತಾ ಗೋಡೆ ಕಟ್ಕೊಂಡು ಇರ್ತಿದ್ನೇನೊ ಅನ್ಸುತ್ತೆ. ಆದ್ರೆ ಅವ್ರು ತೀರಿಕೊಂಡಾಗ ಮೂಡಿಗೆರೆ ಸುತ್ತಮುತ್ತಲಿನ ನಮ್ಮಂತ ಹುಡುಗ್ರಿಗೆಲ್ಲ ದೊಡ್ಡ ಶಾಕ್, ನಾಳೆ ನಮ್ಜೊತೆ ಯಾರು? ಅವ್ರು ಏನೂ ಅಲ್ದೇ ಹೋಗಿದ್ರು ನಮ್ಜೊತೆ ಇದಾರೆ ಅಂದ್ರೆ ಸಾಕಿತ್ತು… ಒಂದು ಕಾನ್ಫಿಡೆನ್ಸು ನಮಗೆ. ನಮ್ಮಂತ ಹುಡುಗರಿಗೆಒಂತರ ಪವರ್ ಅದು. ನಾಳೆ ನಮ್ಜೊತೆ ಯಾರು ಅನ್ನೊ ಪ್ರಶ್ನೇನೆ ನಮಗೆಲ್ಲ ಮೊದಲು ಕಾಡಿದ್ದು. ಅಮೇಲೆ ನಿಧಾನಕ್ಕೆ ಅರ್ಥ ಆಯ್ತು. ದಿನನಿತ್ಯದ ಎಷ್ಟೋ ಕೆಲಸ ಕಾರ್ಯಗಳನ್ನ ಮಾಡಬೇಕಾದ ಸಂದರ್ಭದಲ್ಲಿ ತೇಜಸ್ವಿ ಇದಾರೆ. ಅವ್ರು ಆಡಿದ ಒಂದೊಂದ್ ಮಾತು, ಹಂಚಿಕೊಂಡ ವಿಷಯಗಳು, ಚರ್ಚಿಸ್ತಿದ್ದ ವಿಚಾರಗಳಲೆಲ್ಲಾ ಅವ್ರಿದಾರೆ ಮತ್ತು ಅದೇ ನಿಜವಾದ ತೇಜಸ್ವಿಯಿಸಂ ಅಂತ’ ದತ್ತಣ್ಣನವರ ಕಡೆಯ ಮಾತಿದು.
ಅವರು ಹೇಳಿದ ಪ್ರತಿಯೊಂದು ಮಾತು ಕ್ಯಾಮೆರದಲ್ಲಿ ಸೆರೆಯಾಗಿತ್ತು. ನಮ್ಮ ಹುಡುಗರಿಗೆ ಅಲ್ಲಿಂದ ಪ್ಯಾಕ್ ಅಪ್ ಮಾಡಿಕೊಳ್ಳಲು ಸೂಚಿಸಿದೆ. ಮುಂದಿನ ಹದಿನೈದು ನಿಮಿಷಗಳಲ್ಲಿ ದತ್ತಣ್ಣನವರಿಗೆ ಹಾಗೂ ಅವರ ಶ್ರೀಮತಿಯವರಿಗೆ ಧನ್ಯವಾದ ಹೇಳಿ ನಾವು ನಾಲ್ಕೂ ಜನ ಅವರ ಮನೆಯಿಂದ ಹೊರಟು ಬಂದೆವು. ‘ಒಳ್ಳೊಳ್ಳೆ ವಿಷ್ಯ ಹೇಳಿದ್ರು, ಅಲ್ವ ಡೈರೆಕ್ಟ್ರೆ’ ಎಂದರು ನಮ್ಮ ಕ್ಯಾಮೆರಮನ್ ದರ್ಶನ್. ಹೂಂ…ಎಂದು ತಲೆಯಾಡಿಸಿದೆ. ’ನೆಕ್ಸ್ಟು ಯಾರು ಆ ಡಾಕ್ಟ್ರುದು ತಾನೆ ಶೂಟು?’ ಎಂದ ಹೇಮಂತ. ’ಹೌದು. ಅವ್ರು ೬ ಗಂಟೆ ಮೇಲೆ ಬರೋಕೆ ಹೇಳಿದಾರೆ. ಲ್ಯಾಂಡ್ ಮಾರ್ಕ್ ಕೊಟ್ಟಿದ್ದಾರೆ’ ಎಂದೆ. ನಿತಿನ್ ರಿವರ್ಸ್ ಹಾಕಿ ನಮ್ಮ ಮುಂದೆ ತಂದು ನಿಲ್ಲಿಸಿದ ವ್ಯಾನಿಗೆ ಮೂವರೂ ಹತ್ತಿಕೊಂಡೆವು. ವ್ಯಾನು ತೇಜಸ್ವಿಯನ್ನು ಹತ್ತಿರದಿಂದ ಬಲ್ಲ ಮೂಡಿಗೆರೆಯ ಡಾಕ್ಟರ್ ಒಬ್ಬರ ಆಸ್ಪತ್ರೆಯ ಕಡೆ ಹೊರಟಿತ್ತು.
(ಮುಂದುವರೆಯುವುದು…)
 

‍ಲೇಖಕರು G

September 8, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಎಂ. ಬೈರೇಗೌಡ

    ಪ್ರೀತಿಯ ಪರಮೇಶ್ವರ ಅವರಿಗೆ ನಮಸ್ಕಾರಗಳು
    ಈಗಷ್ಟೇ ನಿಮ್ಮ ತೇಜಸ್ವಿ ಕಥನದ ೀ ಸಂಚಿಕೆಯನ್ನು ಓದಿ ಮುಗಿಸಿದೆ. ಮತ್ತೊಮ್ಮೆ ಕ್ಲೀಷೆ ಎನಿಸಿದರೂ ಆಪ್ತವಾದ ಬರವಣಿಗೆಗೆ ನಿಜಕ್ಕೂ ಮಾರುಹೋಗಿರುವೆ ನಿಮ್ಮ ಅನುಭವದ ಒಂದೊಂದು ಘಟನೆಗಳೂ ಆಪ್ಯಾಯಮಾನವಾಗಿವೆ. ನೀವು ಕೊಡುತ್ತಿರುವ ಒಂದೊಂದು ಕಂತೂ ಹೇಗಿದೆಯೆಂದರೆ ಮುಂದಿನ ಕಂತಿನ್ನು ಓದಲೇಬೇಕೆಂಬ ಹಂಬಲ ಹುಟ್ಟುಹಾಕುವ ಶಕ್ತಿಯಿದೆ. ಖಂಡಿತ ನಿಮ್ಮ ಬರವಣಿಗೆಯ ಒಂದೊಂದೇ ಕ್ಯಾಪ್ಸೊಲ್ ಗಳನ್ನು ನುಂಗುತ್ತೇನೆ. ಅದಕ್ಕೂ ಮುನ್ನ ಇಂಥದೊಂದು ಅವಕಾಶ ಕಲ್ಪಿಸಿಕೊಟ್ಟ ನಿಮಗೆ ಸಮಸ್ತ ಅವಧಿಯ ಓದುಗರ ಪರವಾಗಿ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುವೆ.
    ಡಿ.ಜಿ. ಮಲ್ಲಿಕಾರ್ಜುನ ಅವರು ಕ್ಲಿಕ್ಕಿಸಿರುವ ಫೋಟೋಗಳ ಆಲ್ಬಮ್ “ಕ್ಲಿಕ್” [ಅ]ಸ್ಥಿರ ಚಿತ್ರಗಳು ಹೆಸರಿನಲ್ಲಿ ಈಗಾಗಲೇ ನಮ್ಮ ಪ್ರಗತಿ ಗ್ರಾಫಿಕ್ಸ್ ಮೂಲಕ ಪ್ರಕಟವಾಗಿದೆ. ತೇಜಸ್ವಿ ಬದುಕು ಬರೆಹ ಪುಸ್ತಕ ನನ್ನದೇ ಸಂಪಾದಕತ್ವದಲ್ಲಿ ಡಿ.ಜಿ. ಮಲ್ಲಿಕಾರ್ಜುನ ಅವರು ಕ್ಲಿಕ್ಕಿಸಿರುವ ತೇಜಸ್ವಿ ಕೈಯಲ್ಲಿ ಗಡಿಯಾರವಿರುವ ಫೋಟೋ ಮುಖಪುಟ ಹೊತ್ತು ಬಂದಿದೆ.
    ಈ ವಿಚಾರಗಳನ್ನು ಏಕೆ ಹೇಳಿದೆನೆಂದರೆ: ಈಗಾಗಲೇ ನಿಮಗೆ ತಿಳಿಸಿದಂತೆ ಸಾಧ್ಯವಾದರೆ ಇಂದು ನಿಮ್ಮನ್ನು ಭೇಟಿಯಾಗಬಹುದೆ? ಆ ಎರಡು ಪುಸ್ತಕಗಳನ್ನು ನಿಮಗೆ ತಲುಪಿಸಬೇಕು ಅಷ್ಟು ಮಾತ್ರವಲ್ಲ ನಿಮ್ಮೊಡನೆ ಹರಟೆ ಹೊಡೆದು ಕಾಫಿ ಕುಡಿದು ತೇಜಸ್ವಿ ಕುರಿತ ಸಾಕ್ಷ್ಯ ಚಿತ್ರದ ಡಿ.ವಿ.ಡಿಯನ್ನು ಪಡೆಯಬೇಕೆಂಬ ಹಂಬಲ. ನಿಮಗೆ ಫೋನ್ ಮಾಡುವೆ ಅದಕ್ಕೂ ಮೊದಲು ನೀವು ಅವಧಿಯಲ್ಲಿನ ಈ ಪ್ರತಿಕ್ರಿಯೆ ನೋಡಿದ್ದರೆ ಸಂತೋಷ.
    ನಮಸ್ಕಾರಗಳು
    ಡಾ. ಎಂ. ಬೈರೇಗೌಡ

    ಪ್ರತಿಕ್ರಿಯೆ
  2. shivu K

    ಆತ್ಮೀಯ ಪರಮೇಶ್ವರ್ ಸರ್,
    ನಿಮ್ಮ ತೇಜಸ್ವಿಯವರ ಬಗೆಗಿನ ನಿಮ್ಮ ಎಲ್ಲಾ ಲೇಖನಗಳನ್ನು ಓದಿದ್ದೇನಾದರೂ ಪ್ರತಿಕ್ರಿಯಿಸಲು ಕೆಲಸದ ಒತ್ತಡದಿಂದಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ. ನಿಮ್ಮ ಅನುಭವವನ್ನು ಹೀಗೆ ವೇಗವಾಗಿ ಓದಿ ಮುಗಿಸುವುದಕ್ಕಿಂತ ನಿದಾನವಾಗಿ ಓದಿ enjoy ಮಾಡುತ್ತಾ ತೇಜಸ್ವಿ ಕಾಡು-ನಾಡಿನೊಳಗೆ ಅಡ್ಡಾಡುವುದು ಉತ್ತಮವೆಂದು ನನ್ನ ಭಾವನೆ. ಅದಕ್ಕಾಗಿ ಇವೆಲ್ಲವನ್ನು ಒಟ್ಟುಗೂಡಿಸಿ ಪುಸ್ತಕರೂಪದಲ್ಲಿ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ. ಪುಸ್ತಕವನ್ನು ನಿರೀಕ್ಷಿಸುತ್ತೇನೆ.
    ಶಿವು.ಕೆ

    ಪ್ರತಿಕ್ರಿಯೆ
  3. pranav.k.r

    U rocking param….tejaswi bagge neeveega bardirodu pustaka roopadalli bandre thumbaa chennnagirutthe….next episode tanaka kaayo sahane illa param aadast bega mundina kanthige kaaytideevi….

    ಪ್ರತಿಕ್ರಿಯೆ

Trackbacks/Pingbacks

  1. ’ತೇಜಸ್ವಿಯನ್ನು ಹುಡುಕುತ್ತಾ’ – “ಏಯ್ ಹಜಾಮ…!!!” « ಅವಧಿ / avadhi - [...] ’ತೇಜಸ್ವಿಯನ್ನು ಹುಡುಕುತ್ತಾ’ – “ಏಯ್ ಹಜಾಮ…!!!” September 15, 2013 by Avadhikannada (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: