ಸೂಕ್ಷ್ಮ ಮನಸ್ಸಿನ ಕವಿ ಜಯಂತ ಕಾಯ್ಕಿಣಿರವರು ತೇಜಸ್ವಿಯವರನ್ನು ಕುರಿತ ತಮ್ಮ ನೆನಪಿನ ಸಂಪುಟದ ಮತ್ತಷ್ಟು ಪುಟಗಳನ್ನು ಒಂದೊಂದಾಗಿ ತಿರುವಿಹಾಕುತ್ತಾ ಹೋದರು. ತೇಜಸ್ವಿಯವರ ಕಡೆಯ ಕಾದಂಬರಿ ’ಮಾಯಾಲೋಕ’ದ ಮುನ್ನುಡಿಯಲ್ಲಿ ತೇಜಸ್ವಿಯವರು ಜಯಂತ ಕಾಯ್ಕಿಣಿರವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹಾಗಾಗಿ ಆ ಕಾದಂಬರಿಯ ರಚನೆಯಲ್ಲಿ ಜಯಂತ ಕಾಯ್ಕಿಣಿರವರ ಪಾತ್ರ ಏನಿರಬಹುದೆಂದು ನನಗೊಂದು ಕುತೂಹಲವಿತ್ತು. ಆ ಕುರಿತು ಕಾಯ್ಕಿಣಿರವರಲ್ಲಿ ಪ್ರಸ್ತಾಪಿಸಿದಾಗ ಅವರು ಆ ಕುರಿತ ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.
“ಮಾಯಾಲೋಕದ ಕತೆ”
ಭಾವನಾ ಪತ್ರಿಕೆ ಮೂಲಕ ನನಗೊಂದು ವಿಷುಯಲ್ ಫ್ಲೇರ್ ಇದೆ ಅಂತ ಅವರಿಗೆ ಅನ್ಸಿತ್ತು. ನಾನೇನೂ ಆರ್ಟಿಸ್ಟ್ ಅಲ್ಲ. ಆದರೂ ’ಇಷ್ಟು ಚೆನ್ನಾಗಿ ಆ ಪತ್ರಿಕೆಯನ್ನ ರೂಪಿಸ್ತಿದಾನಲ್ಲ!’ ಅಂತ ಅವರಿಗೊಂದು ಮೆಚ್ಚುಗೆ ಇತ್ತು. ಹೀಗಾಗಿ ಅವರು ‘ಮಾಯಲೋಕ’ ಮಾಡಿದಾಗ ಅದರೊಳಗಡೆ ಚಿತ್ರಗಳನ್ನ ಬಳಸಿದ್ದಾರಲ್ಲ “ಅವುಗಳನ್ನೆಲ್ಲಾ ನೋಡಿ, ಕಾದಂಬರಿ ಓದಿ ಅದರ ಲೇಔಟ್ ಎಲ್ಲ ಸರಿ ಇದೆಯ ಹ್ಯಾಗೆ ನೋಡು” ಅಂತ ಹೇಳಿ ಕಾದಂಬರಿ ನನಗೆ ಕಳಿಸಿ ಕೊಟ್ಟಿದ್ರು.
Usually ಅವರು ಯಾರಿಗೂ ಅವರ ಪುಸ್ತಕಾನ ಪ್ರಕಟಣೆಗೆ ಮುಂಚೆ ಯಾರಿಗೂ ಕೊಡೊಲ್ವಂತೆ. ಆದರೆ ಅದೊಂದನ್ನ ಮಾತ್ರ ನನಗೆ ಕೊಟ್ಟಿದ್ರು. ನಾನು ಅದನ್ನ ಮಹಾದೊಡ್ಡ ನೊಬೆಲ್ ಬಂದ ಥರ ಹೇಳ್ಕೊಂಡು ಓಡಾಡ್ತಿರ್ತೀನಿ “ತೇಜಸ್ವಿಯವರು ನನಗೆ ಅವರ ಪುಸ್ತಕ ಕಳಿಸಿಕೊಟ್ಟಿದ್ರು…” ಅಂತ. ಅದೊಂದು ದೊಡ್ಡ ಖುಷಿ, ಹೆಮ್ಮೆ ನನಗೆ. ಸೊ ಅದನ್ನ ಓದಿ ಒಂದು ಸಜೆಷನ್ ಕೊಟ್ಟಿದ್ದೆ. ಅದು ಅವರಿಗೆ ಬಹಳ ಲೈಕ್ ಆಗಿತ್ತು.
ಅದರಲ್ಲೇನಿತ್ತು ಅಂದರೆ, ನಾವು ತೇಜಸ್ವಿ ಚಿತ್ರಗಳು (ಫೋಟೋಗಳು) ಅಂದ ಕೂಡಲೆನೇ ಬರೀ ಪರಿಸರಕ್ಕೆ ಸಂಬಂಧಪಟ್ಟ ಚಿತ್ರಗಳು ಅಂತ ನಮ್ಮ ತಲೆನಲ್ಲಿ ಕೂತುಬಿಟ್ಟಿದೆ. ‘ತೇಜಸ್ವಿ ಅಂದ್ರೆ ಬರೀ ಕಾಡು, ಪಕ್ಷಿ, ಮರ ಗಿಡ ಫೋಟೋ ತೆಗೆಯೋರು’ ಅಂತ ಅಂದುಕೊಂಡುಬಿಟ್ಟಿರ್ತೀವಿ. ಬಟ್ ಅವರ ಮನುಷ್ಯ ಲೋಕದ ಚಿತ್ರಗಳು ಕೂಡ ಅಷ್ಟೇ ಇಂಟರೆಸ್ಟಿಂಗ್ ಆಗಿವೆ. ಸೊ ನಾನು ಅವರಿಗೆ ಅದನ್ನ ಹೇಳಿದೆ, “ನೀವು ಬರೀ ಪರಿಸರಕ್ಕೆ ಸಂಬಂಧಪಟ್ಟ ಫೋಟೋಗಳನ್ನೇ ಹಾಕಿದ್ರೆ ಅದು ಇನ್ನೊಂದು ರೀತಿ ಸ್ಟಿರಿಯೊಟೈಪಿಕ್ ಆಗಿಬಿಡುತ್ತೆ. ನಿಮ್ಮ ಮನುಷ್ಯರ ಚಿತ್ರಗಳು ಕೂಡ ಅಷ್ಟೇ ಚೆನ್ನಾಗಿವೆ. ಅದನ್ನೂ ಯಾಕೆ ಅಲ್ಲಲ್ಲಿ ಬಳಸಿಕೊಬಾರದು” ಅಂತ.
ಯಾಕಂದ್ರೆ ಪರಿಸರ ಅಂದರೆ ಮನುಷ್ಯರಿಲ್ಲದ ಖಾಲಿ ಗಿಡ, ಮರಗಳ ಪರಿಸರ ಮಾತ್ರ ಅಲ್ವಲ್ಲ. ಮನುಷ್ಯನೂ ಸೇರಿ ತಾನೆ ಪರಿಸರ. ಹಾಗಾಗಿ ನಿಮ್ಮ ಹ್ಯೂಮನ್ ವರ್ಲ್ಡ್ ನ ಚಿತ್ರಗಳು ಮೀನು ಮಾರುತ್ತಿರೋದು, ಆಟೋದಲ್ಲಿ ಹೋಗ್ತಿರೋದು, ಹಳ್ಳಿಗರು ಗುಂಪಾಗಿ ನಿಂತಿರೋದು…ಇನ್ನೂ ಅಂತ ಸಾವಿರಾರು ಫೋಟೋಗಳಿದಾವಲ್ಲ ಅವನ್ನೂ ಬಳಸೋಕೆ ಸಾಧ್ಯಾನ ನೋಡಿ…” ಅಂತ ಹಂಬಲಾಗಿ ಹೇಳಿದ್ದೆ. ಅವರು ’ಹೌದೌದು.’ ಅಂತ ಹೇಳಿ ಕೆಲವು ಅಂತಹ ಫೋಟೋಗಳನ್ನ ಹಾಕಿದ್ರು. ಅದು ಎಷ್ಟು ಚೆನ್ನಾಗಿ ಆ ಕಾದಂಬರಿಗೆ ಹೊಂದಿಕೊಂಡವು ಅಂದ್ರೆ ಇಡೀ ಕಾದಂಬರಿಯನ್ನು ಪ್ರತಿನಿಧಿಸುವ ಚಿತ್ರಗಳಂತೆ ಕಾಣ್ಸೊಕೆ ಶುರುವಾದ್ವು. ಸೊ ಹಾಗೆ ಆ ಕಾದಂಬರಿಯಲ್ಲಿ ನನ್ನದೊಂದು ಅಳಿಲು ಸೇವೆ ಅಂತಾರಲ್ಲ ಅಂತ ಒಂದು small contribution ಅಷ್ಟೆ.” ಕಾಯ್ಕಿಣಿರವರು ಹೇಳಿದ ಹಾಗೆ ತೇಜಸ್ವಿಯವರು ’ಮಾಯಾಲೋಕ’ ಕಾದಂಬರಿಯಲ್ಲಿ ಬಳಸಿರುವ ಮನುಷ್ಯಲೋಕದ ಚಿತ್ರಗಳು ಇಡೀ ಕಾದಂಬರಿಯ ಸತ್ವ ಹೆಚ್ಚಿಸಿವೆ ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ ಸಹ. ಮಾಯಾಲೋಕ ಪ್ರತಿಸಲ ಓದಲು ಕುಳಿತಾಗಲೂ ಅದು ನನ್ನನ್ನು, ಸುತ್ತಲಿನ ಪ್ರಪಂಚವನ್ನೂ ಮರೆಸಿ ತೇಜಸ್ವಿ ಕಟ್ಟಿಕೊಡುವ ’ಮಾಯಾಲೋಕ’ಕ್ಕೆ ಕರೆದುಕೊಂಡು ಹೋಗಿದೆ.ಅದು ತೇಜಸ್ವಿಯ ಬರವಣಿಗೆಯ ತಾಕತ್ತು! ಮುಂದೆ ತೇಜಸ್ವಿಯವರ ಕೃತಿಗಳ ಪಾತ್ರಚಿತ್ರಣದ ಬಗ್ಗೆ ನಾನು ಕೇಳಿದ ಪ್ರಶ್ನೆಗೆ ಕಾಯ್ಕಿಣಿರವರು ಉತ್ತರಿಸತೊಡಗಿದರು,
“ತೇಜಸ್ವಿಯೊಳಗಿನ ಮಾಡ್ರನ್ ಸ್ಪಿರುಚಿಯಾಲಿಟಿ”
“He was very much intense in life. ನಮಗೆ ಅದು ಅವರ ಕೃತಿಗಳಲ್ಲೇ ಗೊತ್ತಾಗುತ್ತೆ. ಮನುಷ್ಯನ ವರ್ತನೆಯಲ್ಲೇ ಅವರಿಗೆ ಅತೀವವಾದ ಆಸಕ್ತಿ. ಮನುಷ್ಯ ಯಾಕೆ ಈ ಸಂದರ್ಭದಲ್ಲಿ ಹೀಗೆ ಬಿಹೇವ್ ಮಾಡ್ತಾನಪ್ಪ ಅನ್ನೋದೆ ಅವರ ಕುತೂಹಲ. ಉದಾಹರಣೆಗೆ ಕರ್ವಾಲೋನೆ ತಗೊಳೋಣ, ಕರ್ವಾಲೋದ ಪೀಕ್ ಪಾಯಿಂಟ್ ನನ್ನ ಪ್ರಕಾರ ಯಾವುದಪ್ಪ ಅಂದ್ರೆ ಒಂದು ಮುನ್ನೂರು ಪುಟಾನೊ, ಮೂರ್ನಾಲ್ಕು ಗಂಟೆನೊ ಓದಿ ನೀವು ಆ ಪೀಕ್ ಪಾಯಿಂಟ್ಗೆ ಹೋಗಿ ತಲುಪಿದ್ರಿ. ಹಾಗೆ ಅಲ್ಲಿಗೆ ಹೋಗಿ ತಲುಪಿದಾಗ ಅಲ್ಲಿವರೆಗೂ ಸಿಗುತ್ತೆ ಸಿಗುತ್ತೆ ಅಂದುಕೊಂಡಿದ್ದ ಆ ಓತಿಕ್ಯಾತ ಮಾಯ ಆಗ್ಬಿಡುತ್ತೆ. ಮಾಯ ಆಗಿಹೋದಾಗ ಕರ್ವಾಲೋ ’ಆಯ್ತು ಬಿಡಿ ಇನ್ನೊಂದು ಸಲ ಬಂದ್ರಾಯ್ತು!’ ಅಂತಾರೆ. ಅವರು ಹಾಗೆ ಹೇಳುವಾಗ ಒಂದು Calmness, ಒಂದು ಕೂಲ್ ಇದೆಯಲ್ಲ..ಅಂದರೆ ’ಏನಪ್ಪ ನಾವು ಇಷ್ಟೆಲ್ಲಾ ಕಷ್ಟಪಟ್ಟು ಬಂದಿದ್ವಿ. ಈಗ ನೋಡಿದ್ರೆ ಅದು ಕೈಗೆ ಸಿಗದೆ ಹಾರಿ ಮಾಯ ಆಗೋಯ್ತು’ ಅಂತ ತಲೆಮೇಲೆ ಕೈಹೊತ್ಕೊಂಡು ನಿರಾಸೆ, ದುಖಃ ತಂದುಕೊಂಡು ಕೂರೋದಿಲ್ಲ ಅವರು. ತುಂಬಾ spirutual ಆದಂತ ಒಂದು ಪ್ರಶಾಂತತೆಯಲ್ಲಿ ಕರ್ವಾಲೋ ’ಮತ್ತೊಮ್ಮೆ ಬರೋಣ ಬಿಡಿ…!’ ಅಂತ ಹೇಳ್ತಾರೆ. ಆ ಪ್ರಶಾಂತತೆ ಇದೆಯಲ್ಲ ಆ ಪ್ರಶಾಂತತೆಯನ್ನ ನಮಗೂ (ಓದುಗರಿಗೆ) ತಂದುಕೊಡುವ ಮಾರ್ಗದಲ್ಲಿ ಆ ಇಡೀ ಕಾದಂಬರಿಯ ಪ್ರಯಾಣ ಇದೆ ಅಂತ ನಾನು ಅಂದುಕೊಂಡಿದೀನಿ. ಕರ್ವಾಲೋನ ನಾನು ಓದಿಕೊಂಡಿದ್ದು ಹಾಗೆ.
ನಾವು ಆ ಜರ್ನಿಯಲ್ಲಿ ಹೋಗಿದ್ರಿಂದ ಕರ್ವಾಲೋಗೆ ಯಾವ ಪ್ರಶಾಂತತೆ ಇದೆಯೊ ಆ ಪ್ರಶಾಂತತೆ ನಮಗೂ ಅನುಭವಕ್ಕೆ ಬರುತ್ತೆ ಹೊರತು ’ಕಾದಂಬರಿ ಓದಿದ್ದೇ ವೇಸ್ಟ್ ಆಗೋಯ್ತು…’ ಈ ಪತ್ತೆದಾರಿ ಕಾದಂಬರಿ ಓದ್ತಾ ಇದ್ದಾಗ ಕ್ಲೈಮ್ಯಾಕ್ಸ್ ನಲ್ಲಿ ಕೊಲೆಗಾರ ಯಾರು ಅಂತ ಗೊತ್ತಾಗ್ದೇ ಇದ್ರೆ ಒಂದು ಹಳಹಳಿ ಆಗುತ್ತಲ್ಲ ಆ ರೀತಿಯ ಹಳಹಳಿ ಕರ್ವಾಲೋದಲ್ಲಿ ಆಗದೇ ಇರೋದೇ ಆ ಕಾದಂಬರಿಯ ನಿಜವಾದ ಶ್ರೇಷ್ಠತೆ ಅನ್ನೋದು ನನ್ನ ಅಭಿಪ್ರಾಯ. ಅದೇ ಥರದ ಇನ್ನೊಂದು ಕಾದಂಬರಿ ಪುರುಷೋತ್ತಮ ಅಂತ, ಯಶವಂತ ಚಿತ್ತಾಲರದ್ದು. ಅದರ ಬಗ್ಗೆಯೂ ನಾನು ಮಾತಾಡ್ತೀನಿ. ಸುಮಾರು ಐದುನೂರು ಪುಟಗಳ ಕೃತಿ ಅದು. ಅದರಲ್ಲೂ ಹಾಗೆ ಇಡೀ ಕಾದಂಬರಿ ಓದ್ತಾ ಲಾಸ್ಟಿಗೆ ಹೋದಾಗ ಕಥಾನಾಯಕನಿಗೆ ತಾಯಿ ತನ್ನವಳಲ್ಲ ಅಂತ ಗೊತ್ತಾಗಿ ಬಿಡುತ್ತೆ! ಇವಳು ತನ್ನ ನಿಜವಾದ ತಾಯಿ ಅಲ್ಲ, ಇವಳು ತನ್ನ ಸಾಕು ತಾಯಿ ಅಂತ. ತಕ್ಷಣ ಅವನು ’ಸೊ ವಾಟ್!!!???’ ಅಂತಾನೆ. ಅಂದರೆ ಅದರಿಂದ ಏನಾಯ್ತಪ್ಪ ಇವಾಗ? ಅದೊಂದು ವಿವರ. ಅದರಿಂದ ಏನು ಬದಲಾಗುತ್ತೆ ಇವಾಗ? ಇಡೀ ಜೀವನ ನಾನು ಅವಳನ್ನ ತಾಯಿ ಅಂತ ನಂಬಿಕೊಂಡು ಒಟ್ಟಿಗೆ ಬಂದಿದ್ದೀವಿ. ಹಾಗಾಗಿ ಆ ಒಂದು ವಿವರದಿಂದ ಏನು ಬದಲಾಗೋದಿದೆ ಇವಾಗ?’ ಅಂತ ಅವನಿಗೇನು ಅನ್ನಿಸ್ತದಲ್ಲ ಅ ಅನಿಸಿಕೆಗೆ, ಪ್ರತಿಕ್ರಿಯೆಗೆ ಓದುಗರನ್ನೂ ಸಜ್ಜುಗೊಳಿಸೊದಿದೆಯಲ್ಲ ಅದು ಕಾದಂಬರಿಯ ಗೆಲವು.
ಇಟ್ಸ್ ಎ ಜರ್ನಿ ಆಫ್ ಎ ಮೈಂಡ್. Similarly ಕರ್ವಾಲೋ ಕೂಡ ಓತಿಕ್ಯಾತ ಕೊನೆನಲ್ಲಿ ತಪ್ಪಿಸಿಕೊಂಡು ಹೋದಾಗ ’ಆಯ್ತು ಟೆನ್ಷನ್ ಯಾಕೆ. ನಾಳೆ ಬರೋಣ, ನಾಡಿದ್ದು ಬರೋಣ, ಮತ್ತೊಂದು ಸಾರ್ತಿ ಬರೋಣ…’ ಅನ್ನೊ ರೀತಿಯ ಮಾನಸಿಕ ಪ್ರಶಾಂತತೆ ಇದೆಯಲ್ಲ ಕಾದಂಬರಿ ಓದ್ತಾ ಕೂತವನಿಗೂ ಅನುಭವಕ್ಕೆ ತಂದುಕೊಡುವುದೇ ಅದರ ಹಿರಿಮೆ. ಮತ್ತೆ ಗುರಿ ತಲುಪುವುದಕ್ಕಿಂತಲೂ ಆ ಪ್ರಯಾಣಾನೇ ಅವರಿಗೆ ಬೇಕಿತ್ತು ಅನ್ನೊ ಥರ. ಆ ಪ್ರಯಾಣದ ಅಂತ್ಯದಲ್ಲಿ ಅವರು ಹುಡುಕಿ ಹೊರಟಿದ್ದು ಸಿಕ್ಕಿಬಿಟ್ಟಿದ್ರೆ ಆ ಇಡೀ ಜರ್ನಿನೇ ವೇಸ್ಟ್ ಆಗಿರೋದು ಅನ್ನೊ ಥರ (ಕಾಯ್ಕಿಣಿರವರ ನಗು).
ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ’ಜರ್ನಿ ಈಸ್ ಮೋಸ್ಟ್ ಇಂಪಾರ್ಟೆಂಟ್ ದ್ಯಾನ್ ದಿ ಡೆಸ್ಟಿನೇಷನ್.’ ’ಗುರಿಗಿಂತ ದಾರಿ ಮುಖ್ಯ.’ ಕೊನೆಗೂ ಜೀವನ ಅಂದರೆ ದಾರಿನೇ ತಾನೆ? ಗುರಿಗಳ ನೆಪ ಇಟ್ಕೊಂಡು ನಡೆಯೊ ದಾರಿ. ಗುರಿಗಳು ಚೇಂಜ್ ಆಗ್ತಿರ್ತಾವೆ. ದಾರಿ ಮಾತ್ರ ಸಾಗ್ತಾನೇ ಇರುತ್ತೆ. ಆ ಥರದ ಒಂದು ರೂಪಕ ಅದು. ಕರ್ವಾಲೋ ಒಂದೇ ಅಲ್ಲ, ಮಾಯಲೋಕನೇ ತಗೊಳಿ, ಅಥವ ಅವರ ಕಥೆಗಳನ್ನ ತಗೊಳಿ ಅಲ್ಲೆಲ್ಲ ಬರೋದು ಕಲಾಯಿ ಹಾಕೋನು, ಮೀನು ಹಿಡಿಯೋನು, ಸಂತೆ ವ್ಯಾಪಾರಸ್ತರು, ಮಾಂಸದ ಅಂಗಡಿಯವನು, ಈ ಥರದ ಸುತ್ತಮುತ್ತಲಿನ ಪಾತ್ರಗಳೇ. ಮತ್ತು ಪ್ರತಿ ವ್ಯಕ್ತಿಗೂ ಒಂದು ವಿಶೇಷತೆ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ. ಕುವೆಂಪುರವರು ’ಪ್ರತಿಯೊಂದು ಜೀವಾನೂ ಅನನ್ಯ, ಇಲ್ಲಿ ಯಾರೂ ಮೇಲಲ್ಲ ಇಲ್ಲಿ ಯಾರೂ ಕೀಳಲ್ಲ…’ ಅಂತಾರಲ್ಲ ಅದನ್ನ ಸಾಕ್ಷಾತ್ ಆಗಿ ನಾವು ಇವರ ಕೃತಿಗಳಲ್ಲಿ ಕಾಣಬಹುದು. ಪ್ರತಿ ವ್ಯಕ್ತಿಗೂ ಒಂದು ಸಿಗ್ನೇಚರ್ ಇರೊ ಹಾಗೆ ಒಂದು ಐಡೆಂಟಿಟೀ ಇದೆ, ಲೈಫ್ ಇದೆ, ಎನರ್ಜಿ ಇದೆ, ಧುಮ್ಮಿಕ್ಕುವ ಜೀವನದ ಹರಿವು ಇದೆ. ಆ ಹರಿವು ಪ್ರತಿಯೊಂದು ಪಾತ್ರ ಚಿತ್ರಣದಲ್ಲೂ ಕಾಣ್ತೀವಿ. ಹಾಗಾಗಿ ತೇಜಸ್ವಿಯವರ ಕೃತಿಗಳಲ್ಲಿ ಯಾರೂ ಸಾಮಾನ್ಯರಲ್ಲ! ತಮಾಷೆಯಾಗಿ ಹೇಳ್ಬೇಕು ಅಂದರೆ ಈ ಫೈರ್ ಫೈಟಿಂಗ್ ಎಕ್ವಿಪ್ಮೆಂಟು ಎಲ್ಲ ಕಡೆಗೂ ಇರುತ್ತೆ. ಆದರೆ ಅದರ ನಿಜವಾದ ಉಪಯೋಗ ಅಥವ ಪ್ರಯೋಜನ ಏನು ಅಂತ ಗೊತ್ತಾಗೋದು ಬೆಂಕಿ ಬಿದ್ದಾಗಲೇ ತಾನೆ. ಹಾಗೆ ಯಾರನ್ನ ನಾವು ’ಅವನೇನು ಬಿಡಪ್ಪ ಆರ್ಡಿನರಿ ಮ್ಯಾನು…’ ಅಂತ ಹಹ…ಕಾಯ್ಕಿಣಿರವರ ಮಾತು ನಿರರ್ಗಳವಾಗಿ ಸಾಗಿತ್ತು. ಅಲ್ಲಿಂದ ಅವರ ಮಾತು ತೇಜಸ್ವಿಯವರ ಕುತೂಹಲ, ಬದುಕಿನ ಬಗೆಗಿದ್ದ ಬೆರಗಿನ ಕುರಿತು ಮುಂದುವರೆಯಿತು.

“ಹುಚ್ಚುಮನಸ್ಸಿನ ಸಾವಿರಾರು ಮುಖಗಳು…”
“ಶಿವರಾಮ ಕಾರಂತರ ಬಗ್ಗೆ ತೇಜಸ್ವಿಯವರಿಗೆ ಬಹಳ ಒಂದು ರೀತಿಯ ತುಡಿತ ಇತ್ತು. ಯಾಕಂದ್ರೆ ಹಿ ವಾಸ್ ಆಲ್ಸೊ ಲೈಕ್ ದಟ್. ಅವರು ಪ್ರೆಸ್ ಹಾಕ್ಕೊಂಡಿದ್ರು, ಪತ್ರಿಕೆ ತಂದ್ರು, ಸಿನಿಮಾನೂ ಮಾಡಿದ್ರು ಒಂದು ಕಾಲದಲ್ಲಿ, ಯಕ್ಷಗಾನ್ ಅಕುಣಿದ್ರು, ಚುನಾವಣೆಗೆ ನಿಂತು ಸೋತರು, ಮುಖ್ಯವಾಗಿ ಏನ್ಸೈಕ್ಲೊಪಿಡಿಯ ಮಾಡಿದ್ರು. ವಿಶ್ವಕೋಶಗಳನ್ನ ಆ ಕಾಲಕ್ಕೆ ಯಾವಾಗ ಇಂಟರ್ನೆಟ್ ಇರಲಿಲ್ಲ, ಡಿಟಿಪಿ ಇರಲಿಲ್ಲ, ಈಮೇಲ್, ಜಿಮೇಲ್ ಇರಲಿಲ್ಲ ಅಂತ ಕಾಲದಲ್ಲೇ ಮಾಡಿದ್ರು. ಕೈಯಲ್ಲಿ ಮೊಳೆ ಜೋಡಿಸಿ, ಕೈಯಲ್ಲಿ ಚಿತ್ರ ಬರೆದು! ನೋಡಿ ಎಷ್ಟು ಮಜ ಇದೆ ತೇಜಸ್ವಿ ಮತ್ತು ಕಾರಂತರ ಮಧ್ಯೆ. ತೇಜಸ್ವಿ ಹ್ಯಾಗೆ ಹಕ್ಕಿಗಳ ಚಿತ್ರಗಳನ್ನ ಕ್ಯಾಮೆರದಲ್ಲಿ ಸೆರೆಹಿಡಿದ್ರೊ ಆ ಚಿತ್ರಗಳನ್ನೆಲ್ಲ ಕಾರಂತರು ಕೈಯಲ್ಲಿ ಬಿಡಿಸಿದ್ದಾರೆ. ಸುಮಾರು ಎರಡು ಸಾವಿರ ಹಕ್ಕಿಗಳ ಚಿತ್ರಗಳನ್ನ ಅವರು ಕೈಯಲ್ಲಿ ಬಿಡಿಸಿದ್ದಾರೆ. ಅದು ಮಂಗಳಗಂಗೋತ್ರಿಯ ಕನ್ನಡ ವಿಭಾಗಕ್ಕೆ ಹೋದರೆ ನಿಮಗೆ ಸಿಕ್ಕುತ್ತೆ ಅವು, ಬ್ರೌನ್ ಎನ್ವಲಪ್ ನಲ್ಲಿ ಹಾಕಿಟ್ಟಿದ್ದರೆ ಅವನ್ನೆಲ್ಲ. ಸೊ ಆ ಥರ ಅವರಿಬ್ಬರ ಮನಸ್ಸು ಒಂದೇ ಥರದ್ದು. ಹುಚ್ಚುಮನಸ್ಸಿನ ಹತ್ತು ಮುಖಗಳಲ್ಲ ಸಾವಿರಾರು ಮುಖಗಳು!
ಇವರಿಬ್ಬರ ಹಂಬಲ ಒಂದೇ ಅದು ಜ್ಞಾನ ಹಂಚಬೇಕು. ಅದೂ ಓದಿನ ಪ್ರಕಾರದಲ್ಲೇ ಸಿಗಲು ಸಾಧ್ಯ ಇರುವ ಜ್ಞಾನ. ನೀವು ನ್ಯಾಷನಲ್ ಜಿಯಾಗ್ರಫಿಕ್ ನಲ್ಲಿ, ಟೆಲಿವಿಷನ್, ಇಂಟರ್ನೆಟ್ ನಲ್ಲಿ ಪರಿಸರ ತೋರಿಸ್ತಾರೆ ನೋಡಬಹುದು ಅಂತ ನ್ನಬಹುದು. ಆದರೆ ಓದಿನಲ್ಲಿ ಮಾತ್ರ ಸಿಗಬಹುದಾದ ವಿಷಯಗಳಿದಾವಲ್ಲ ಅದನ್ನ ಹೆಚ್ಚು ಹೆಚ್ಚು ತಲುಪಿಸಬೇಕು ಅನ್ನೋದು ತೇಜಸ್ವಿ-ಕಾರಂತ ಇಬ್ಬರ ಹಂಬಲವೂ ಆಗಿತ್ತು ಅಂತ ನನಗನ್ಸುತ್ತೆ. ಹಾಗಾಗಿ ತೇಜಸ್ವಿ ಮಾಡಿದ್ದು ಕೆಲವು ಅನುವಾದಗಳು ಅನ್ನಿಸಿದರೂ ಅವೆಲ್ಲ ನಮ್ಮ ನಿಲುಕುಗಳನ್ನ, ಗ್ರಹಿಕೆಯ Antena ಶಾರ್ಪ್ ಮಾಡೋವಂತ ಒಂದು ಪ್ರಯತ್ನ ಅದು. ಹಾಗಾಗಿ ಅವರ ಕತೆ, ಕಾದಂಬರಿ ಬಿಟ್ಟು ಇತರೆ ಕೃತಿಗಳಿದಾವಲ್ಲ, ಜಗತ್ತಿನ ಸೋಜಿಗಗಳ ಬಗ್ಗೆ ಬರೆದಿದ್ದು (ಮಿಲೇನಿಯಂ ಸೀರೀಸ್) ತುಂಬಾ ಗಟ್ಟಿಯಾದ ಅಟ್ ದಿ ಸೇಮ್ ಟೈಮ್ ಕನ್ನಡಕ್ಕೆ ಹೊಸದಾದ ಜ್ಞಾನ ಪ್ರಸರಣದ ಟೂಲ್ಸ್ ಅವು. ಅದನ್ನೇ ನಾನು ಪಠದ ಆಚೆಗಿನ ವಿಷಯಗಳು ಅಂತ ಹೇಳ್ಲಿಕ್ಕೆ ಹೊರಟಿದ್ದು. ’ನಮ್ಮ ಕಣ್ಣಿಗೆ ಕಾಣ್ತಿಲ್ಲ ಆದರೂ ಅದಲ್ಲಿದೆ!’ ಅನ್ನುವ ಹುಡುಕಾಟ, ಕುತೂಹಲ, ಅದಕ್ಕಾಗಿ ಒಂದು ತುಡಿತ ಮತ್ತು ಅದೇ ಒಂದು ಅಧ್ಯಾತ್ಮ. ಆಧ್ಯಾತ್ಮ ಅಂದರೆ ನಾವು ಯಾವುದೊ ರಿಟೈರ್ಮೆಂಟ್ ಸ್ಕೀಮು, ಮಾಡೋಕೆ ಕೆಲ್ಸ ಇಲ್ಲದೇ ಕಣ್ಮುಂಚ್ಚಿಕೊಂಡು ಕೂತು ಧ್ಯಾನ, ಜಪ, ಅದಕ್ಕೆ ಸ್ಪಿರುಚುಯಲ್ ಸೆಂಟರಿಗೆ ಹೋಗ್ಬೇಕು, ಹಿಮಾಲಯಕ್ಕೆ ಹೋಗ್ಬೇಕು…ಇಲ್ಲ ಅದ್ಯಾವುದೂ ಅಲ್ಲ. ಅಧ್ಯಾತ್ಮ ಅಂದರೆ ಇರೋದನ್ನ ಮೀರಿ ನೋಡುವಂತದ್ದು, ಎಲ್ಲಿ ಇದೆವೊ ಅದರ ಆಚೆಗೇನೊ ಇದೆ ಅಂತ ನೋಡೋವಂತದ್ದು. ಮೆಜೆಸ್ಟಿಕ್ ಬಸ್ಟ್ಯಾಂಡ್ ನಲ್ಲೂ ಆಧ್ಯಾತ್ಮ ಸಾಧ್ಯ! ಅನ್ನೊ ತರ ನಮ್ಮ ಮನಸ್ಸುಗಳನ್ನ ಸಜ್ಜುಗೊಳಿಸುವ ತರದ ಕೆಲಸವನ್ನ ಅವರು ಅವರ ಬರವಣಿಗೆನಲ್ಲಿ ಮಾಡಿದಾರೆ.
ಬಹಳ ನಿಸ್ವಾರ್ಥ ಬೇಕು, ಒಬ್ಬ ಬಹಳ ದೊಡ್ಡ ಲೇಖಕ ತಾನು ಸಾವಿರಾರು ಪುಟಗಳನ್ನ Translate ಮಾಡಿ ಕೊಡಬೇಕು ಅಂತ ಅನ್ನಿಸೋದಕ್ಕೆ. ಮತ್ತು ಆ ನಿಸ್ವಾರ್ಥಕ್ಕೆ ಒಂದು ಆಧ್ಯಾತ್ಮ ರೀತಿಯ ಮನಸ್ಸು ಬೇಕು. ಸೊ ನನ್ನ ಪ್ರಕಾರ ಅವರು ತುಂಬಾ ಮಾಡ್ರನ್ ಆದ ಒಬ್ಬ ಸಂತ ನಮ್ಮ ತೇಜಸ್ವಿ. ನಾವ್ಯಾರೂ ಆ ಅಂಶವನ್ನ ಸರಿಯಾಗಿ ಹಿಡಿದಿಲ್ಲ ಅಂತ ನನಗನ್ಸುತ್ತೆ. ಕುವೆಂಪುರವರ ಸಾಹಿತ್ಯದಲ್ಲಿ ಯಾವುದನ್ನ ಜಿ.ಎಸ್ ಶಿವರುದ್ರಪ್ಪನವರು ‘ಸಾಮಾಜಿಕ ಆಧ್ಯಾತ್ಮ’ ಅಂತ ಕರೆದ್ರೊ ಅದನ್ನು ಮೀರಿದ ಇನ್ನೂ ನಗ್ನವಾದ ಆಧ್ಯಾತ್ಮ ತೇಜಸ್ವಿಯವರ ಕೄತಿಗಳಲ್ಲಿದೆ. ಯಾಕಂದರೆ ನಗ್ನತೆಯೇ ಮಗ್ನತೆ ಅಲ್ವ. ನಗ್ನನಾಗೋದು ಮಗ್ನನಾಗೋದು ಎರಡೂ ಒಂದೇ. ಆ ರೀತಿಯ ಮಗ್ನತೆಯಿಂದ ಕೂಡಿದ ಸ್ಪಿರುಚುಯಾಲಿಟಿ ಅವರದ್ದು.
ಯುವಜನಾಂಗಕ್ಕೆ ನಾನು ರಿಕ್ವೆಸ್ಟ್ ಮಾಡೋದು ಇಷ್ಟೆನೆ, ’ನೀವು ಮತ್ತೆ ಮತ್ತೆ ಓದಿ’ ಅಂತ. ಏನೊ ’ಶೋಲೆ’ನ ೧೯೭೩ನಲ್ಲಿ ನೋಡಿಬಿಟ್ಟಿದ್ದೀವಿ ಮತ್ಯಾಕೆ ನೋಡೋದು ಅಂತಲ್ಲ. ‘ಗಾಡ್ ಫಾದರ್’ ಥರದ ಕ್ಲಾಸಿಕ್ ಸಿನಿಮಾಗಳನ್ನ ನೂರು ಸಲ ನೋಡ್ತೀವಿ. ಹಾಗೆ ಕುವೆಂಪು, ತೇಜಸ್ವಿ, ಕಾರಂತ, ಬೇಂದ್ರೆ ಇಂತವರನ್ನೆಲ್ಲ ಮತ್ತೆ ಮತ್ತೆ ಓದಿದಷ್ಟೂ ನಮಗೆ ಹೆಚ್ಚುಹೆಚ್ಚು ಸಿಗ್ತಾ ಹೋಗುತ್ತೆ. ನಿಲುಕುಗಳು ಹೆಚ್ಚಿದ ಹಾಗೆ ಗ್ರಹಿಕೆಗಳೂ ಕೂಡ ಹೆಚ್ಚಾಗುತ್ತವೆ. ಹೀಗಾಗಿ ಮತ್ತೆ ಮತ್ತೆ ಮುಟ್ಟಿನೋಡುವಂತಹ, ಮತ್ತೆ ಮತ್ತೆ ಹೋಗಿ ಮಾತನಾಡಿಸಬೇಕಾದಂತಹ ಮನಸ್ಸುಗಳು ಇವೆಲ್ಲ. ಆಮೇಲೆ ಎಷ್ಟು ಮಜ ಅಂದರೆ ಅವರು ಬರೆದ್ರಲ್ಲ ಅಂತ. ಈಗ ಅವರ ಮನಸ್ಸು ನಮಗೆ ಸುತ್ತಲ್ಲ ಅಂತ. ಹಿಂದೆಲ್ಲ ಹೇಳ್ತಿದ್ರು ’ಐನ್ ಸ್ಟೈನ್ ಅವರ ಮೆದುಳನ್ನ ಅಲ್ಲೆಲ್ಲೊ ತಗೊಂಡೋಗಿ ಇಟ್ಟಿದ್ದಾರಂತೆ…’ ಅಂತ. ಅಲ್ಲಪ್ಪ ಮೆದುಳು ಯಾಕೆ ಇಡಬೇಕು, ಅವರು ಕೆಲಸಾನೇ ಇದೆಯಲ್ಲ ಅವರ ಮನಸ್ಸು, ಮೆದುಳನ್ನ ಹೇಳೋದಿಕ್ಕೆ. ಹಾಗೆ ಲೇಖಕರು ದೈಹಿಕವಾಗಿ ನಮ್ಮ ಜೊತೆಗಿಲ್ಲದಿದ್ದರೂ ಅವರ ಮನಸ್ಸು ಅವರ ಕಿತಿಗಳಲ್ಲಿರುತ್ತೆ. ಈಗ ಓದುವಾಗ ನಮಗೆ ಸಿಗೋದು ಲೇಖಕನ ಮನಸ್ಸು. ಉದಾಹರಣೆಗೆ ಬೇಂದ್ರೆಯವರ ಕಾವ್ಯ ಓದೋಕೆ ಶುರುವಾದರೆ ನಿಮ್ಮ ಮನಸ್ಸಿಗೆ ಕನೆಕ್ಟ್ ಆಗೋದು ಅವರ ಮನಸ್ಸು. ಸೊ ಅವರ ಮನಸ್ಸುಗಳು ಅವರ ಕೃತಿಗಳಲ್ಲಿ ಜೀವಂತವಾಗಿದಾವಲ್ಲ ಆ ಮನಸ್ಸುಗಳು ನಮ್ಮ ಮೂಲಕ ಇನ್ನೂ ಚಲನಶೀಲ ಆಗ್ತವೆ. ಹಾಗಾಗಿ ಈಗಿನ ಒಂದು ಟ್ರೆಂಡ್ ಇದೆಯಲ್ಲ ಯಾರನ್ನ ಕೇಳಿದ್ರೂ ’ಅದಕ್ಕೆ ಸ್ಕೋಪ್ ಏನು?’ ಅಂತ ಕೇಳ್ತಾರೆ. ಹಾಗೆ scope ಓರಿಯೆಂಟೆಡ್ ಆದ, ಯುಟಿಲಿಟಿ ಓರಿಯೆಂಟೆಡ್ಆದ, ಬೆನಿಫಿಟ್ ಓರಿಯೆಂಟೆಡ್ ಆದ ಅಭಿಪ್ರಾಯಗಳನ್ನ ಬಿಟ್ಟು ಪೂರ್ತಿ ನಗ್ನರಾಗಿ ಮಗ್ನರಾಗಿ ನಮ್ಮನ್ನ ಬೆಳೆಯೋದಕ್ಕೆ, ಬೆಳೆಸೋದಕ್ಕೆ ಅವೆಲ್ಲ ಪೊಟೆನ್ಷಿಯಲ್ಸ್ ಅವು. ಸೊ ಹಾಗಾಗಿ ತೇಜಸ್ವಿ ಅಂದರೆಇವತ್ತಿನ ನಮ್ಮ ಎಷ್ಟೊ ವಿಚಾರಗಳಿಗೆ ಬೆಳಕು ತೋರಿಸುವ ಅಂಶ ಅದು.
ಸೊ ‘ತೇಜಸ್ವಿ ಫ್ಯಾಕ್ಟರ್’ ಅಂತ ಹೇಳಿದ್ನಲ್ಲ ರಾಮನ್ ಎಫೆಕ್ಟ್ ಇದ್ದ ಹಾಗೆ, ಸೊ ತೇಜಸ್ವಿ ಎಫೆಕ್ಟ್ ನಮ್ಮೆಲ್ಲರ ಮೇಲೂ ಇದೆ. ಹಾಗಾಗಿ ತೇಜಸ್ವಿ ಅಂದರೆ ನಮ್ಮೆಲ್ಲರ ಪಾಲಿಗೆ ಸಿಕ್ಕಿದ ಹಂಗೆ ಮಾಡಿ ಮರೆಯಾದ ಒಂದು ಹಾರುವ ಓತಿಕ್ಯಾತ! ಆ ರೀತಿ ಕಂಡ ಹಾಗೆ ಮಾಡಿ ಮಾಯವಾದ ಓತಿಕ್ಯಾತವನ್ನ ಹಿಡಿಯುವ, ಹುಡುಕುವ , ಅದನ್ನ ಅನ್ವೇಷಿಸುವ ಪ್ರಯತ್ನಗಳು ನಡಿತಿರಲಿ. ಸಿಗುತ್ತೊ ಬಿಡುತ್ತೊ ಅದು ಸೆಕೆಂಡರಿ. infact ಸಿಗದೇ ಇದ್ದರೇನೇ ಆ ಹುಡುಕಾಟಕ್ಕೊಂದು ಸಾರ್ಥಕತೆ…” ಅಲ್ಲಿಗೆ ಜಯಂತ ಕಾಯ್ಕಿಣಿರವರು ತಮ್ಮ ನೆನಪುಗಳಿಗೆ ಪೂರ್ಣ ವಿರಾಮ ಹಾಕಿದರು. ಸಮಯ ಸಂಜೆ ೫ ಗಂಟೆ ಸುಮಾರು. ಚಿತ್ರೀಕರಣ ಅಲ್ಲಿಗೆ ನಿಲ್ಲಿಸಿ ಜಯಂತ ಕಾಯ್ಕಿಣಿರವರರಿಗೆ ಧನ್ಯವಾದ ಹೇಳಿ ಅವರ ಅಪಾರ್ಟ್ಮೆಂಟಿನ ಅಂಗಳದಿಂದ ನಾನು ನಮ್ಮ ಹುಡುಗರು ಹೊರಟು ಬಂದೆವು. ಅಲ್ಲಿಗೆ ’ಮತ್ತೆ ಮತ್ತೆ ತೇಜಸ್ವಿ’ಯ ಚಿತ್ರೀಕರಣ ಸಂಪೂರ್ಣ ಮುಗಿದಂತಾಯಿತು. ಅಲ್ಲಿಗೆ ೨೦೧೨ರ ಒಂದು ವರ್ಷದ ಅವಧಿಯಲ್ಲಿ ಸುಮಾರು ನಲವತ್ತಾರು ಜನ ತೇಜಸ್ವಿ ಒಡನಾಡಿಗಳನ್ನು ಹುಡುಕಿ ಮಾತನಾಡಿಸಿದ್ದೆವು.
ಜೊತೆಗೆ ತೇಜಸ್ವಿಯವರು ಕ್ರಮಿಸಿದ ಬದುಕಿನ ಹಾದಿಯಲ್ಲಿ ಸಾಗಿ ಅವರ ಹೆಜ್ಜೆಗುರುತುಗಳು ಮೂಡಿದ ಮುಖ್ಯ ಜಾಗಗಳನ್ನು, ಸ್ಥಳಗಳನ್ನು ಚಿತ್ರೀಕರಿಸಿದ್ದೆವು. ಇವೆಲ್ಲ ಸೇರಿಸಿ ಸುಮಾರು ೫೦ ಗಂಟೆಗಳ footage ನಮ್ಮ ಹಾರ್ಡ್ ಡಿಸ್ಕ್ ನಲ್ಲಿ ಭದ್ರವಾಗಿ ಕುಳಿತಿತ್ತು. ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರ ರೂಪಿಸುವ ಹಾದಿಯ ಅತಿಮುಖ್ಯವಾದ ಘಟ್ಟವೊಂದು ಅಲ್ಲಿಗೆ ಮುಗಿದಂತಾಗಿತ್ತು. ಆ ತಕ್ಷಣಕ್ಕೆ ಒಂದು ವರ್ಷ ಅವಧಿ ತೆಗೆದುಕೊಂಡ ಸಾಕ್ಷ್ಯಚಿತ್ರದ ಚಿತ್ರೀಕರಣ ಮುಗಿದ ನೆಮ್ಮದಿ, ನಿರಾಳ ಉಂಟಾದರೂ ನಂತರ ಚಿತ್ರೀಕರಣ ಮುಗಿದು ಹೋಯಿತಲ್ಲ ಅನ್ನುವಂತಹ ಒಂದು ಹಳಹಳಿ ನನ್ನನ್ನೂ ಸೇರಿಸಿ ನಮ್ಮ ತಂಡದ ಹುಡುಗರಿಗೆಲ್ಲಾ ಕಾಡಲು ಪ್ರಾರಂಭವಾಯಿತು. ಸಿನಿಮಾ, ಆಕ್ಟಿಂಗು, ಡೈರೆಕ್ಷನ್ನು ಅನ್ನುವ ತರಲೆ ಜಗತ್ತನ್ನೇ ವೃತ್ತಿಯಾಗಿ ತೆಗೆದುಕೊಂಡಿರುವ ನಾನು ಮುಂದೆ ಯಾವ ತರಹದ ಪ್ರಾಜೆಕ್ಟ್ ಬೇಕಾದ್ರೂ ಮಾಡಬಹುದು. ಆದರೆ ’ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ ನೆಪದಲ್ಲಿ ಕೈಗೊಂಡ ಒಂದು ಪ್ರಯಾಣ ಇದೆಯಲ್ಲ ಅದನ್ನ ಮಾತ್ರ ನಾನು ಯಾವತ್ತೂ ಮರೆಯೋದಕ್ಕೆ ಸಾಧ್ಯವೇ ಇಲ್ಲ. ಕಾರಣ ಈ ಸಾಕ್ಷ್ಯಚಿತ್ರದ ಅನುಭವ ನನ್ನನ್ನ ಯಾವಾಗಲೂ ಬೆಳೆಸುತ್ತಾ ಇದೆ, ಮತ್ತು ಮುಂದೂ ಸಹ ಬೆಳೆಸ್ತಾ ಇರುತ್ತೆ ಅಂತ ನಂಬಿದ್ದೀನಿ.
ಇದು ತೇಜಸ್ವಿ ಕುರಿತ ಸಾಕ್ಷ್ಯಚಿತ್ರ ನನಗೆ ಕೊಟ್ಟ ಧೈರ್ಯ. ಚಿತ್ರೀಕರಣ ಮುಗಿದ ಮರುದಿನವೇ ನಿರ್ಮಾಪಕರನ್ನು ಭೇಟಿಯಾಗಿ ವಿಷಯ ತಿಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಬೇಕಿದ್ದ ಹಣ ಪಡೆದುಕೊಂಡು ಉಳಿದಿದ್ದ ಕೆಲಸ ಶುರುಮಾಡಿಕೊಂಡೆವು. ಎಡಿಟಿಂಗ್, ಮ್ಯೂಸಿಕ್, ನರೇಷನ್ ಮೊದಲಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದು ಸಾಕ್ಷ್ಯಚಿತ್ರ ಅಂತಿಮ ರೂಪ ಪಡೆದುಕೊಳ್ಳಲು ಮತ್ತೆ ಸುಮಾರು ಆರು ತಿಂಗಳು ಹಿಡಿದು ೨೦೧೩ರ ಮೇ ತಿಂಗಳ ಹೊತ್ತಿಗೆ ’ಮತ್ತೆ ಮತ್ತೆ ತೇಜಸ್ವಿ’ ಸಿದ್ದವಾಯಿತು. ಐವತ್ತು ಗಂಟೆಗಳ ಶೂಟಿಂಗ್ ಫುಟೇಜ್ ನ್ನು ಎರಡೂವರೆ ಗಂಟೆಯ ಸಾಕ್ಷ್ಯಚಿತ್ರವನ್ನಾಗಿಸಲು ಅಪಾರ ತಾಳ್ಮೆವಹಿಸಿ ಕೆಲಸ ಮಾಡಿದ ಸಾಕ್ಷ್ಯಚಿತ್ರದ ಸಂಕಲನಕಾರರಾದ ರಾಜೇಶ್ ಮಾಗಡಿ ಮತ್ತು ಭರತ್ ಇಬ್ಬರಿಗೂ, ಮತ್ತು
ಎಡಿಟಿಂಗ್ ಸ್ಟುಡಿಯೊ ಬಿಟ್ಟುಕೊಟ್ಟು ಸಹಕರಿಸಿದ ಸಮಷ್ಟಿ ತಂಡದ ಹಿರಿಯರಾದ ಶ್ರೀ. ರವೀಂದ್ರ ಪೂಜಾರಿಯವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಜೊತೆಗೆ ಗೆಳೆಯ ಹೇಮಂತ, ಕ್ಯಾಮೆರಮನ್ ದರ್ಶನ್, ವೆಂಕಟೇಶ್, ಆನಂದ್, ನಿರ್ದೇಶನ ವಿಭಾಗದ ಸೆಂದಿಲ್, ವಸಂತ್, ಚಿತ್ರೀಕರಣದುದ್ದಕ್ಕೂ ಕಾರಿನ ಸಾರಥಿಯಾಗಿದ್ದನಿತಿನ್ಮತ್ತು ಸಾಕ್ಷ್ಯಚಿತ್ರಕ್ಕೆ ಸಹಕರಿಸಿದ ನನ್ನ ಗೆಳೆಯರೆಲ್ಲರಿಗೂ ಧನ್ಯವಾದಗಳು.ಮುಖ್ಯವಾಗಿ ಸಾಕ್ಷ್ಯಚಿತ್ರ ಮಾಡಿ ಅದನ್ನು ಸುಮ್ಮನೆ ಹಾಗೇ ಬಿಟ್ಟುಬಿಡುವುದಕ್ಕೆ ನಾನು ತಯಾರಿರಲಿಲ್ಲ. ಸಾಕ್ಷ್ಯಚಿತ್ರ ತೇಜಸ್ವಿಯವರ ಓದುಗರು , ಅಭಿಮಾನಿಗಳಿಗೆ ತಲುಪಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು. ಹಾಗಾಗಿ ಆ ಸಂದರ್ಭದಲ್ಲಿ ಗೆಳೆಯ ಹೇಮಂತ ಟೋಟಲ್ ಕನ್ನಡ ಸಂಸ್ಥೆಯ ಲಕ್ಷ್ಮಿಕಾಂತ ರನ್ನು ಪರಿಚಯಿಸಿದ. ಕನ್ನಡದ ಪುಸ್ತಕಗಳು, ಅಪರೂಪದ ಚಲನಚಿತ್ರಗಳನ್ನು ಆಸಕ್ತರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಟೋಟಲ್ ಕನ್ನಡ ಸಂಸ್ಥೆಯ ಲಕ್ಷ್ಮಿಕಾಂತ್ ರವರು ಮೊದಲ ಮಾತುಕತೆಯಲ್ಲೇ ಸಾಕ್ಷ್ಯಚಿತ್ರವನ್ನು ಆಸಕ್ತರಿಗೆ ತಲುಪಿಸಲು ಸಂತೋಷದಿಂದ ಒಪ್ಪಿಕೊಂಡರು.
ಜೂನ್ ೧೫ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಕಡಿದಾಳು ಶಾಮಣ್ಣನವರು ನಮ್ಮ ಮೇಲೆ ಪ್ರೀತಿ ಇಟ್ಟು ಬೆಂಗಳೂರಿನವರೆಗೂ ಬಂದು ’ಮತ್ತೆ ಮತ್ತೆ ತೇಜಸ್ವಿ’ಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಕೊಟ್ಟರು. ಪತ್ರಕರ್ತರಾದ ಜೋಗಿ, ಬಿ.ಎಲ್ ಶಂಕರ್, ನರೇಂದ್ರ ರೈ ದೇರ್ಲ, ಪ್ರೊಫೆಸರ್ ಕೆ.ಸಿ ಶಿವಾರೆಡ್ಡಿರವರು ಹಾಗೂ ನೂರಾರೂ ಜನ ತೇಜಸ್ವಿ ಓದುಗರು, ಅಭಿಮಾನಿಗಳು ಆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಅಲ್ಲಿಂದ ’ಮತ್ತೆ ಮತ್ತೆ ತೇಜಸ್ವಿ’ಯನ್ನು ಸಾವಿರಾರು ಮಂದಿ ನೋಡಿದ್ದಾರೆ, ನೋಡುತ್ತಿದ್ದರೆ. ಅನೇಕರು ಅದರ ಬಗ್ಗೆ ನನಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದಗಳು.
ಮತ್ತೊಂದು ಖುಷಿಯ ವಿಚಾರವೆಂದರೆ’ಅವಧಿ’ ಬಳಗ ಸಾಕ್ಷ್ಯಚಿತ್ರದ ಅನುಭವಗಳನ್ನು ದಾಖಲಿಸಲು ನನಗೆಕೊಟ್ಟ ಈ ಅವಕಾಶ. “’ಮತ್ತೆ ಮತ್ತೆ ತೇಜಸ್ವಿ’ಯ ಅನುಭವಗಳನ್ನು ಲೇಖನ ಮಾಲಿಕೆಯಾಗಿ ಬರೆಯೋಕೆ ಸಾಧ್ಯಾನ ನೋಡಿ…’ ಎಂದು ಹೇಳಿ ಆ ಅನುಭವಗಳನ್ನು ಪ್ರತಿ ಭಾನುವಾರ ’ತೇಜಸ್ವಿಯನ್ನು ಹುಡುಕುತ್ತಾ’ ಲೇಖನ ಮಾಲಿಕೆಯನ್ನಾಗಿ ಬರೆಯಲು ಪ್ರೋತ್ಸಾಹಿಸಿದ ಹಿರಿಯರು, ಹಿತೈಷಿಗಳು ಆದ ಶ್ರೀ.ಜಿ.ಎನ್ ಮೋಹನ್ ರವರಿಗೆ, ಪ್ರತಿವಾರ ’ಪರಮೇಶ್ವರ್ ಆರ್ಟಿಕಲ್…?’ ಎಂದು ರಿಮೈಂಡರ್ ಕಳಿಸಿ ಪ್ರೀತಿಪೂರ್ವಕ ಒತ್ತಾಯ ಹೇರುತ್ತಿದ್ದ ಅಕ್ಕನಂತಹ ಗೆಳತಿ ಸಂಧ್ಯಾರಾಣಿ ಇಬ್ಬರಿಗೂ ಅನಂತಾನಂತ ಧನ್ಯವಾದಗಳು. ಇನ್ನೊಂದಷ್ಟು ಧನ್ಯವಾದಗಳು ಬರವಣಿಗೆಯನ್ನ ತುಂಬಾ ಸೀರಿಯಸ್ಸಾಗಿ ಪ್ರಾಕ್ಟೀಸ್ ಮಾಡದ ನನ್ನಂತವನ ಯದ್ವಾತದ್ವ ಬರವಣಿಗೆಯನ್ನು ಸಹಿಸಿಕೊಂಡು ಓದಿದ ಅವಧಿಯ ಅಪಾರ ಓದುಗ ಸಮುದಾಯಕ್ಕೆ. ’ತೇಜಸ್ವಿಯನ್ನು ಹುಡುಕುತ್ತಾ’ ಅಂತ ಹೇಳಿ ತೇಜಸ್ವಿಯನ್ನು ಹುಡುಕಿದೆವೊ ಬಿಟ್ಟೆವೊ ಗೊತ್ತಿಲ್ಲ. ಆದರೆ ’ಜರ್ನಿ ಈಸ್ ಮೋರ್ ಇಂಪಾರ್ಟೆಂಟ್ ದ್ಯಾನ್ ದಿ ಎಂಡ್’ ಅಂದ ಜಯಂತ ಕಾಯ್ಕಿಣಿರವರ ಮಾತಿನಂತೆ ಹುಡುಕಾಟದ ಅಟೆಂಪ್ಟ್ ಅಷ್ಟೇ ನಾನಿಲ್ಲಿ ಮಾಡಲು ಸಾಧ್ಯವಾಗಿರೋದು. ಇನ್ನು ಮುಂದಕ್ಕೆ ನೀವುಂಟು ತೇಜಸ್ವಿ ಉಂಟು. ನಮಸ್ಕಾರ…
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402




‘ಅವಧಿ’ಯಲ್ಲಿನ ‘ತೇಜಸ್ವಿ’ ಪಯಣದೊಂದಿಗೆ ಭಾನುವಾರ ಶುರುವಾಗುತ್ತಿತ್ತು. ಸರಣಿ ಮುಗಿಯಿತಲ್ಲ ಎಂಬ ಬೇಸರ ಈಗ ಮೂಡಿದೆ. ಇಷ್ಟು ದಿನಗಳ ಕಾಲ ತೇಜಸ್ವಿ ಒಡನಾಡಿಗಳ ಒಡನಾಟದಲ್ಲಿ ವಿಹರಿಸುವಂತೆ ಮಾಡಿದ ಪರಮೇಶ್ವರ ಅವರಿಗೆ ಧನ್ಯವಾದಗಳು.
Dhanyvadagalu anandpyati yavarige
ತುಂಬಾ ಮಿಸ್ ಮಾಡ್ಕೊಳ್ತ್ವಿ..
Please bring into these book.It will be a good thing.Narration is Excellent.It will be a guide for Tejaswi life.
Adbhuta anubhav a. Thanks!
Good one. Best wishes for your future endevour.
ತೇಜಸ್ವಿಯವರನ್ನು ಮತ್ತೆ ಅವರೊಂದಿಗೆ ಒಡನಾಡಿದವರು ಮತ್ತು ಅವರ ಕೃತಿಗಳ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದವರನ್ನು ಪರಮೇಶ್ವರ ಅವರು ಚಿತ್ರವತ್ತಾಗಿ ನಮ್ಮ ಮುಂದಿಟ್ಟಿದ್ದಾರೆ. ತಮ್ಮ ಸಾಕ್ಷ್ಯಚಿತ್ರ ವ್ಯವಸಾಯ ಪ್ರಯತ್ನದ ಮೂಲಕ ತಾವು ಕಂಡುಕೊಂಡದ್ದನ್ನು ಪ್ರಾಂಜಲವಾಗಿ ಚಿತ್ರಿಸಿದ್ದಾರೆ. ಅವರ ತಿಳಿ ಮನಸ್ಸು ಇಷ್ಟವಾಗುವಂಥದ್ದು. ಅವಧಿಗೆ, ಅವಧಿ ಬಳಗಕ್ಕೆ thanks.
dhanyavadagalu nimge. tejaswi avara bagge tilisidakke. prathi ondu sanchikae chennagittu…….
Great thanks !
thanks for such wonderful articles about Tejasvi .
ನಾನು ತಪ್ಪದೆ ಓದುತ್ತಿದ್ದ ಸರಣಿ ಇದು. ತುಂಬಾ ಆಪ್ತವಾಗಿ, ಕಳಕಳಿಯಿಂದ ಕಟ್ಟಿ ತೇಜಸ್ವಿ ಅವರಿಗೆ ಅರ್ಪಿಸಿದ ಕುಸುಮಾಂಜಲಿ ಇದು. ಧನ್ಯವಾದಗಳು.
-ಅನೀಲ ತಾಳಿಕೋಟಿ
ಅಂಕಣ ಮಾಲಿಕೆಯನ್ನು ಓದಿದ, ಮೆಚ್ಚಿದ, ಪ್ರೀತಿಯಿಂದ ಪ್ರತಿಕ್ರಿಯಿಸಿದ ಅವಧಿಯ ಎಲ್ಲಾ ಗೆಳೆಯರಿಗೆ ಅನಂತಾನಂತ ಧನ್ಯವಾದಗಳು….
ಕೆ.ಎಸ್ ಪರಮೇಶ್ವರ್