ತೇಜಸ್ವಿಯನ್ನು ಹುಡುಕುತ್ತಾ : ತೇಜಸ್ವಿಯವರ ಆಪ್ತಮಿತ್ರ ಶ್ರೀರಾಮ್ ನೆನಪುಗಳು

(ಇಲ್ಲಿಯವರೆಗೆ…)

ಹಾಗೆ ಅಂದು ಜಿಕೆವಿಕೆಯ ಆವರಣದಲ್ಲಿ ತೇಜಸ್ವಿಯವರ ವಿಜ್ಞಾನಿ ಮಿತ್ರರಿಂದ ಅವರ ನೆನಪುಗಳನ್ನು ಕೇಳಿದ ನಂತರ ಸುಮಾರು ಮೂರ್ನಾಲ್ಕು ದಿನ ಚಿತ್ರೀಕರಣ ನಡೆಸದೆ ಸುಮ್ಮನಿರಬೇಕಾಯಿತು. ಕಾರಣ ಅತಿಪ್ರಮುಖರಾದ ಇಬ್ಬರು ಹಿರಿಯ ತೇಜಸ್ವಿ ಒಡನಾಡಿಗಳನ್ನು ಮಾತನಾಡಿಸಲು ಅವರ ಅನುಕೂಲದ ಸಮಯ ಕೇಳಿದ್ದೆವು. ಹಾಗಾಗಿ ಅವರು ಅವರ ಅನುಕೂಲಕರ ಸಮಯ ಖಚಿತಪಡಿಸುವವರೆಗೂ ನಾವು ಕಾಯಲೇಬೇಕಿತ್ತು. ಹಾಗೆ ಕಾಯುತ್ತಿದ್ದ ಸಂದರ್ಭದಲ್ಲಿ ನನಗೆ ಮೈಸೂರಿನಲ್ಲಿ ಮಾತನಾಡಿಸದೆ ಉಳಿದುಹೋಗಿದ್ದ ತೇಜಸ್ವಿಯವರ ಪರಮಾಪ್ತ ಗೆಳೆಯರೊಬ್ಬರ ನೆನಪಾಯಿತು.
ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಆ ತೇಜಸ್ವಿ ಒಡನಾಡಿಗಳು ’ಅನಾರೋಗ್ಯ ಪೀಡಿತರಾಗಿ’ ಆಸ್ಪತ್ರೆಗೆ ಸೇರಿಕೊಂಡಿದ್ದರಿಂದ ಅವರೊಂದಿಗೆ ಮಾತುಕತೆ ನಡೆಸಲಾಗದೆ ವಾಪಸ್ ಬಂದಿದೆವು. ಆದರೆ ತೇಜಸ್ವಿ ಕುರಿತ ಸಾಕ್ಷ್ಯಚಿತ್ರಕ್ಕೆ ಅವರ ನೆನಪುಗಳು ಅತಿಮುಖ್ಯವಾಗಿ ಬೇಕಾಗಿದ್ದವು. ಹಾಗಾಗಿ ಒಂದು ದಿನ ಬೆಳಿಗ್ಗೆ ನಾನು ’ಟ್ರೈ ಮಾಡಿ ನೋಡೋಣ..’ ಎಂದು ಮೈಸೂರಿನ ಅವರ ಮನೆಯ ನಂಬರಿಗೆ ಫೋನ್ ಮಾಡಿದೆ. ಆ ಕಡೆಯಿಂದ ನಾನು ಮಾತನಾಡಬೇಕಿದ್ದ ಆ ಹಿರಿಯರ ಮಗ ಫೋನ್ ಎತ್ತಿಕೊಂಡು ನಂತರ ಅವರ ತಂದೆಗೆ ಫೋನ್ ವರ್ಗಾಯಿಸಿದರು. ಮೊದಲಿಗೆ ಅವರ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡ ನಂತರ ನಾನು ಅವರಿಗೆ ತೇಜಸ್ವಿಯವರ ಸಾಕ್ಷ್ಯಚಿತ್ರಕ್ಕಾಗಿ ಅವರ ಸಂದರ್ಶನ ಬೇಕಾಗಿರುವುದಾಗಿ ಹೇಳಿದೆ.
ಅವರಿನ್ನು ಸಂಪೂರ್ಣ ಗುಣಮುಖರಾಗಿಲ್ಲದೇ ಇದ್ದರೂ ವಿಷಯ ಕೇಳಿದ ತಕ್ಷಣ ’ಯಾವಾಗ ಬೇಕಾದ್ರೂ ಬನ್ನಿ..’ ಎಂದು ಹೇಳಿದರು. ಹಾಗಾಗಿ ಮರುದಿನವೇ ನಾನು ನಮ್ಮ ತಂಡದೊಂದಿಗೆ ಮೈಸೂರಿನ ಅವರ ಮನೆಗೆ ಹೋಗಿ ಆ ಹಿರಿಯ ತೇಜಸ್ವಿ ಗೆಳೆಯರನ್ನು ಕಂಡೆ. ಅವರ ಆರೋಗ್ಯ ಇನ್ನೂ ಸಂಪೂರ್ಣ ಸುಧಾರಿಸಿಲ್ಲ ಎಂಬುದು ಅವರ ದೇಹಭಾಷೆಯಲ್ಲೆ ಗೊತ್ತಾಗುತ್ತಿತ್ತು. ಅವರ ಕಣ್ಣುಗಳಲ್ಲಿ ವಿಪರೀತ ದಣಿವು ತುಂಬಿಕೊಂಡಿದ್ದನ್ನೂ ನಾನು ಗಮನಿಸಿದೆ. ಆದರೂ ಆ ಹಿರಿಯರು ಬರೀ ತೇಜಸ್ವಿ ಎಂಬ ಹೆಸರು ಕೇಳಿಯೇ ಎದ್ದು ಲವಲವಿಕೆ ತಂದುಕೊಂಡು ನಮ್ಮೊಂದಿಗೆ ಮಾತಿಗೆ ಅಣಿಯಾದರು.
ಆ ಹಿರಿಯ ಜೀವದ ಹೆಸರು ಶ್ರೀರಾಮ್ ಉರುಫ್ ಬಿ.ಎನ್ ಶ್ರೀರಾಮ ಉರುಫ್ ಪುಸ್ತಕ ಪ್ರಕಾಶನದ ಶ್ರೀರಾಮ್. ’ಪರಿಸರದ ಕತೆ’ ಓದಿದ್ದರೆ ಅದರಲ್ಲಿ ’ಕಿವಿಯೊಡನೆ ಒಂದು ದಿನ’ ಎಂಬ ಕತೆಯಲ್ಲಿ ತೇಜಸ್ವಿಯವರೊಂದಿಗೆ ಸೇರಿ ದಡಿಯ ಹಂದಿಯೊಂದನ್ನು ಹೊಡೆದು ಅದು ಆ ತೋಟದವರ ಕಣ್ಣಿಗೆ ಬಿದ್ದರೆ ಹೊಡೆದ ಹಂದಿಯಲ್ಲಿ ಅರ್ಧ ಪಾಲು ಕೊಡಬೇಕಾಗುತ್ತದೆ ಎಂದು ತಿಳಿದಾಗ ಆ ದಡಿಯ ಹಂದಿಯನ್ನು ಒಬ್ಬರೇ ಹೆಗಲ ಮೇಲೆ ಹೊತ್ತುಕೊಂಡು ಕಿವಿಯೊಂದಿಗೆ ಓಡಿಹೋಗುವ ಶ್ರೀರಾಮ್ ಎಂಬ ಪಾತ್ರವೊಂದು ನೆನಪಿರಲೇಬೇಕು. ಅಂದು ದಡಿಯ ಹಂದಿಯನ್ನು ಹೊತ್ತುಕೊಂಡು ಓಡಿಹೋದ ಆ ಶ್ರೀರಾಮರೇ ಈಗ ನನ್ನ ಮುಂದೆ ತೇಜಸ್ವಿ ನೆನಪುಗಳನ್ನು ಹಂಚಿಕೊಳ್ಳಲು ಕುಳಿತಿದ್ದ ಬಿ.ಎನ್ ಶ್ರೀರಾಮ್. ಸದ್ಯತೇಜಸ್ವಿಯವರೊಂದಿಗೆ ಸೇರಿ ಆರಂಭಿಸಿದ ಪುಸ್ತಕ ಪ್ರಕಾಶನದ ಜವಾಬ್ದಾರಿ ಹೊತ್ತಿರುವ ಶ್ರೀರಾಮ್ ನಮ್ಮೊಂದಿಗೆ ತೇಜಸ್ವಿ ನೆನಪುಗಳನ್ನು ಹಂಚಿಕೊಳ್ಳಲಾರಂಭಿಸಿದ್ದು ಹೀಗೆ,
“ಕಾಲೇಜು ದಿನಗಳ ಗೆಳೆತನದ ನೆನಪುಗಳು”
“ನಾನು ೧೯೬೦-೬೧ರಲ್ಲಿ ಬಿ.ಎ ಓದೋಕೋಸ್ಕರ ಮಹಾರಾಜ ಕಾಲೇಜು ಮೈಸೂರಿಗೆ ಬಂದೆ. ಆಗ್ಲೇನೇ ಒಂದು ಸಣ್ಣಕತೆ ಬರೆದು ತುಂಬಾ ಪಾಪ್ಯುಲರ್ ಆಗಿದ್ರು ತೇಜಸ್ವಿ. ಬಟ್ ಬಂದ ತಕ್ಷಣ ನನಗೆ ಅವ್ರ ಪರಿಚಯ ಆಗಿರ್ಲಿಲ್ಲ. ಸ್ವಲ್ಪ ದಿನ ಆದ್ಮೇಲೆ ರೈತ ಸಂಘದ ಎನ್.ಡಿ ಸುಂದರೇಶ್ ಇದ್ರಲ್ಲ ಅವ್ರು ಮೈಸೂರಿಗೆ ಬಂದ್ರು ಬಿ.ಎ ಓದೋದಕ್ಕೆ. ಅವ್ರು ನನಗೆ ತುಂಬಾ ಆಪ್ತರಾದ್ರು. ಅದಾದ್ಮೇಲೆ ಒಂದಿನ ಅವ್ರು ನನಗೆ ’ಏಯ್ ತೇಜಸ್ವಿನ ಪರಿಚಯ ಮಾಡಿಸ್ತೀನಿ ಬನ್ರಿ’ ಅಂತೇಳಿ ಅವ್ರನ್ನ ನನಗೆ ಪರಿಚಯ ಮಾಡ್ಸಿದ್ರು. ಅಷ್ಟೊತ್ತಿಗಾಗ್ಲೆ ರೈತಸಂಘದ ಕಡಿದಾಳು ಶಾಮಣ್ಣ ಅವರು ಅವ್ರ ತಮ್ಮ, ತಂಗಿರೆಲ್ಲ ಒಂಟಿಕೊಪ್ಪಲಿನಲ್ಲಿ ರೂಂ ಮಾಡ್ಕೊಂಡು ಓದ್ತಾ ಇದ್ರು. ಸೊ ನಾವು ಮೂವ್ವರು ಫಸ್ಟು ಗೆಳೆಯರಾದ್ವಿ. ಇವರಿಬ್ರಿಗೂ ಕಾಮನ್ ಫ್ರೆಂಡ್ ಅಲ್ವ ತೇಜಸ್ವಿ, ಸೊ ಹಾಗೆ ನನಗೂ ಫ್ರೆಂಡ್ ಆದ್ರು. ಆಮೇಲೆ ಪ್ರತಿದಿವ್ಸ ಅವ್ರನ್ನ ನಾವು ಭೇಟಿ ಮಾಡ್ತಾ ಇದ್ವಿ. ಹಾಗೆ ಭೇಟಿ ಮಾಡ್ತಿದ್ದಾಗ ಗೊತ್ತಾಗಿದ್ದು ಅಂದ್ರೆ ನನಗೂ ತೇಜಸ್ವಿಗೂ ಸಮಾನವಾದ ಅಂಶಗಳು ಜಾಸ್ತಿ ಇದಾವೆ ಅಂತ. ನಮ್ಮ ಚರ್ಚೆಲಿ ಯಾವಾಗ್ಲೂ ಸಾಹಿತ್ಯ, ರಾಜಕೀಯ ತುಂಬಾ ಇರೋದು. ಆಗ್ಗೆನೆ ನಮ್ಮ ಭಾರತದ ರಾಜಕೀಯದ ಮೇಲೆ ಲೋಹಿಯಾ ತುಂಬಾ ಪ್ರಭಾವ ಬೀರುತ್ತಾ ಇದ್ರು.

ಆಗ ಕಾಂಗ್ರೆಸ್ ವಿರುದ್ಧ, ನೆಹರು ವಿರುದ್ಧ ಮಾತ್ನಾಡೋರೇ ಇರ್ಲಿಲ್ಲ, ಮಾಧ್ಯಮಗಳು ಮಾತ್ನಾಡ್ತಿರ್ಲಿಲ್ಲ. ಅಂತ ಸಂದರ್ಭದಲ್ಲಿ ಲೋಹಿಯಾ ನೆಹರೂನ ಮತ್ತು ಕಾಂಗ್ರೆಸ್ಸನ್ನ ತುಂಬಾ ತೀವ್ರವಾಗಿ ಕ್ರಿಟಿಸೈಸ್ ಮಾಡ್ತಾ ಇದ್ರು. ನಾವು ತುಂಬಾ ಆಸ್ಥೆಯಿಂದ ಅವರ ಭಾಷಣಗಳನ್ನ, ಲೇಖನಗಳನ್ನ ಓದೋದಿಕ್ಕೆ ಶುರುಮಾಡಿದ್ವಿ. ಹಾಗೆ ಓದ್ತಿರಬೇಕಾದ್ರೇನೇ ಅವರ ಶಿಷ್ಯರೊಬ್ಬರು ಕರ್ನಾಟಕದಲ್ಲೇ ಇದಾರೆ, ಅವರು ’ಶಾಂತವೇರಿ ಗೋಪಾಲ ಗೌಡ’ ಅನ್ನೋದು ನಮಗೆ ಗೊತ್ತಾಯ್ತು. ಹಾಗಾಗಿ ನಾವು ಲೋಹಿಯಾ ಮತ್ತು ಗೋಪಾಲಗೌಡ್ರ ಕಡೆ ವಾಲಿದ್ವಿ. ತೇಜಸ್ವಿ, ನಂಜುಂಡಸ್ವಾಮಿ, ಇನ್ನೊಬ್ಬರು ಲಾಯರ್ ನಾಗರಾಜ್ ಅಂತ ಒಬ್ರಿದ್ರು ಅವರು, ಪಾ.ಮಲ್ಲೇಶ್, ದೇವನೂರು ಮಹಾದೇವ, ರಾಮಚಂದ್ರ ದೇವ, ಶಬ್ಬೀರ ಮಹಮ್ಮದ್ ಮುಸ್ತಫ, ಅನಂತಮೂರ್ತಿ ತಮ್ಮ ಗುರುರಾಜ, ಸು.ರಮಾಕಾಂತ, ಕತೆಗಾರ ವೀರಭದ್ರ, ಶಿವತೀರ್ಥನ್ ಹೀಗೆ ಇನ್ನೂ ಅನೇಕರು ನಮ್ಮ ಕಡೆ ಆಕರ್ಷಿತರಾದರು. ಆಮೇಲೆ ನಾವು ಇಡೀ ಕರ್ನಾಟಕದಲ್ಲೇ ’ಸಮಾಜವಾದಿ ಜನ ಸಭಾ’ವನ್ನ ಬೆಳೆಸೋದಕ್ಕೆ ಪ್ರಯತ್ನಪಟ್ವಿ. ಬಹಳ ಜನಕ್ಕೆ ಸಾಹಿತ್ಯ ಮತ್ತು ರಾಜಕೀಯದ ಬಗ್ಗೆ ಒಲವಿರಲಿಲ್ಲ. ನನಗೂ ತೇಜಸ್ವಿಗೂ ಅದರ ಬಗ್ಗೆ ಒಲವಿದ್ದಿದ್ದರಿಂದ ಅದರ ಬಗ್ಗೆ ಮಾತ್ನಾಡೋದು, ಚರ್ಚೆ ಮಾಡೋದು, ಲೇಖನಗಳನ್ನ ಓದೋದು, ಅದನ್ನ ಓದಿದ್ರ? ಇದನ್ನ ಓದಿದ್ರ? ಅಂತ ಪರಸ್ಪರ ಚರ್ಚೆ ಮಾಡೋದು…ಹೀಗಾಗಿ ನಾವಿಬ್ರು ತುಂಬಾ ಹತ್ರ ಬಂದ್ವಿ.
ನನ್ನ ಅವರ ಪ್ರಾರಂಭದ ದಿನಗಳವೇನೇ. ನಾನು ಬಿಎ ಅವರು ಎಂಎ ಕೊನೆನಲ್ಲಿದ್ರು ಆಗ. ಮತ್ತೆ ಬಹಳ ರೋಮಾಂಚನಕಾರಿಯಾದ ದಿನಗಳವು. ಆಗ ಹುಡುಗ್ರು ಭ್ರಷ್ಟರಾಗಿರ್ಲಿಲ್ಲ. ಈಗಿನ ಹುಡುಗ್ರನ್ನ ಭ್ರಷ್ಟರನ್ನ ಮಾಡೋದು ಬಹಳ ಸುಲಭ. ಆಮೇಲೆ ಮಂತ್ರಿಗಳು ಕರೆಸಿದ್ರು, ವೈಸ್ ಛಾನ್ಸೆಲರ್ ಕರ್ಸಿದ್ರು ಅಂತ ನಾವೇನು ಎಕ್ಸೈಟ್ ಆಗ್ತಿರ್ಲಿಲ್ಲ. ಅವನು ಕರ್ಸಿದ್ದ, ಹೋದ್ವಿ, ಬಂದ್ವಿ ಹೀಗಿರ್ತಿದ್ವಿ ನಾವು. ಹದಿಮೂರು ರೂಪಾಯಿ ಫೀಸ್ ಜಾಸ್ತಿ ಮಾಡಿದ್ದಕ್ಕೆ ನೂರಿಪ್ಪತೈದು ದಿನ ಸ್ಟೈಕ್ ಮಾಡಿದ್ವಿ ಇಡೀ ಕರ್ನಾಟಕದಲ್ಲಿ, ಐದು ಪೈಸೆ ಇಡ್ಲಿಗೆ ಜಾಸ್ತಿ ಮಾಡಿದಕ್ಕೆ ೯೦ ಡೇಸ್ ಸ್ಟ್ರೈಕ್ ಮಾಡಿದ್ವಿ ಆಗ. ಆಗಿನ ಕಾಲದ ವಿದ್ಯಾರ್ಥಿಗಳ ಆದರ್ಶಗಳೇ ಹಾಗಿದ್ವು. ಒಂದು ಕಾಲ್ ಮೈಸೂರಿನ ವಿದ್ಯಾರ್ಥಿ ಒಕ್ಕೂಟ ಕೊಡ್ತು ’ಆಹಾರದ ಬೆಲೆಗಳು ಜಾಸ್ತಿ ಆಗಿವೆ. ನಾಳೆಯಿಂದ ಯಾರೂ ಕಾಲೇಜಿಗೆ ಹೋಗ್ಬಾರ್ದು’ ಅಂದ್ರೆ ಯಾರೂ ಕಾಲೇಜಿಗೆಹೋಗ್ತನೇ ಇರ್ಲಿಲ್ಲ. ಈಗ ಆ ಒಗ್ಗಟ್ಟು ಎಲ್ಲೂ ಕಾಣೋದೇ ಇಲ್ಲ. ಸ್ವಾರ್ಥ, ಭ್ರಷ್ಟಾಚಾರ, ಸ್ವಹಿತಾಸಕ್ತಿಗಳು ಜಾಸ್ತಿ ಆಗಿ ಗುಂಪುಗಳೆಲ್ಲಾ ಸಣ್ಣ ಸಣ್ಣದಾಗಿ ಒಡೆದುಹೋಗಿರೋದ್ರಿಂದ ಯಾವ ಚಳುವಳಿಗಳು ಇವತ್ತು ಯಶಸ್ವಿಯಾಗೋದೇ ಇಲ್ಲ. ಕೋಣಂದೂರು ಲಿಂಗಪ್ಪ ಇದಾರಲ್ಲ ಅವ್ರಂತೂ ಕನ್ನಡದ ಬಗ್ಗೆ ತುಂಬಾ ಹೋರಾಟ ಮಾಡ್ತಾ ಇದ್ರು” ಶ್ರೀರಾಮ್ ರವರು ಅವರ ಆಪ್ತ ಸ್ನೇಹಿತನ ಮತ್ತು ೬೦ರ ದಶಕದ ಅವರ ಕಾಲೇಜು ದಿನಗಳ ನೆನಪುಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದು ಹೀಗೆ. ಅನಾರೋಗ್ಯದ ಕಾರಣದಿಂದಾಗಿ ಅವರ ದೇಹ ಬಳಲಿದ್ದರೂ ಅವರ ಧ್ವನಿ ಖಚಿತತೆಯಿಂದ ಕೂಡಿತ್ತು. ಮನಸ್ಸು ಹಳೆಯ ದಿನಗಳ ಮಧುರ ನೆನಪುಗಳ ಸಿಹಿಯನ್ನು ಸವಿಯುತ್ತಿದ್ದುದ್ದರಿಂದ ಕಣ್ಣುಗಳಲ್ಲಿ ಒಂದು ಬಗೆಯ ಮುಗ್ಧತೆ, ಹೊಳಪು ಹೊರಸೂಸುತ್ತಿತ್ತು. ಅವರ ನೆನಪುಗಳು ಕ್ರಮೇಣ ತೇಜಸ್ವಿಯವರ ಓದಿನ ಬಗ್ಗೆ ತಿರುಗಿತು,
“Rank ಬಂದು ಯಾರನ್ನ ಉದ್ದಾರ ಮಾಡ್ಬೇಕು…?”
“ಅವರು ತುಂಬಾ ಬುದ್ದಿವಂತರೇನೆ. ಆದ್ರೆ ಹಲ್ಮುಡಿ ಕಟ್ಟಿ ನಾನು Rank ಬರ್ಬೇಕು, ಎಲ್ಲರನ್ನೂ ಮೀರಿಸಿ ಮಾರ್ಕ್ಸ್ ತಗೋಬೇಕು, ಈಗೆಲ್ಲ ಮಾಡ್ತಾರೆ ನೋಡಿ ಮಕ್ಕಳು ಮಾಡ್ತಾರೆ, ಪೇರೆಂಟ್ಸು ಮಾಡ್ತಾರೆ ಆ ಥರ ಛಲದಿಂದ ಅವರು ಓದ್ತಾ ಇರ್ಲಿಲ್ಲ. ’ವಿಷಯಾನ ತಿಳ್ಕೊಂಡ್ರೆ ಸಾಕು. Rank ಬಂದ್ರೆ ಏನು? ಬರ್ದಿದ್ರೆ ಏನು?’ ಅನ್ನೊ ಒಂದು ಮನೋಭಿಪ್ರಾಯ. ಕೆರಿಯರಿಸ್ಟ್ ಅಲ್ಲ ಅವರು. ಈಗಿನ ಎಲ್ಲ ತಂದೆ ತಾಯಿಗಳು ಹುಟ್ಟುಟ್ತಾನೆ ಕೆರಿಯರಿಸ್ಟ್ ಆಗಿರ್ತಾರೆ. ’ಏನ್ ಓದಿದ್ರೆ ಏನಾಗ್ಬಹುದು? ಏನ್ ತಗೊಂಡ್ರೆ ಏನ್ ಮುಂದಕ್ಕಾಗ್ತೀವಿ? ಯಾವುದ್ರಲ್ಲಿ ಆಪರ್ಚುನಿಟೀಸ್ ಇದೆ?’ ಹಿಂಗೆ ಏನೇನೊ ಯೋಚ್ನೆ ಮಾಡ್ತೀವಿ ನೋಡಿ. ಆದ್ರೆ ಅವರು ಆ ಥರ ಯೋಚ್ನೆ ಮಾಡ್ದೋರಲ್ಲ. ಅವರು ಸುಮ್ನೆ ’ಕನ್ನಡ ಸಾಹಿತ್ಯ ಓದ್ಬೇಕು ಓದ್ತೀನಿ, ಅರ್ಥ ಆಗುತ್ತ ಅರ್ಥ ಆಗುತ್ತೆ, ಯಾರಾದ್ರು ಕೇಳಿದ್ರೆ ಅದರ ಬಗ್ಗೆ ಮಾತಾಡ್ಬೇಕ ಮಾತಾಡ್ತೀನಿ’ ಹಾಗೆ ಗೊತ್ತಿಲ್ದೆ ಏನ್ ಇರ್ಲಿಲ್ಲ. ಸೊ ಒಂದು Rank ತೆಗಿಬೇಕು ಅನ್ನೊ ಹಟ ಇರ್ಲಿಲ್ಲ ಅವರಲ್ಲಿ. ಮೂಲಭೂತವಾಗಿ ಒಳ್ಳೆ ಮನುಷ್ಯರಾದ್ರೆ ಸಾಕು, ಜೀವನ ಚೆನ್ನಾಗಿ ಮಾಡಿದ್ರೆ ಸಾಕು ಅನ್ನೋದಷ್ಟೆ ಅವರ ಬೇಸಿಕ್ ಗುಣ” ಶ್ರೀರಾಮ್ ತೇಜಸ್ವಿಯವರಿಗೆ ಫಾರ್ಮಲ್ ಶಿಕ್ಷಣದ ಬಗ್ಗೆ ಇದ್ದ ದೃಷ್ಟಿಕೋನವನ್ನ ನಮಗೆ ತಿಳಿಸಿದ್ದು ಹಾಗೆ. ನಂತರ ನಾನು ’ಪರಿಸರದ ಕತೆ’ಯಲ್ಲಿ ತೇಜಸ್ವಿಯವರು ಪ್ರಸ್ತಾಪಿಸಿರುವ ಶಿಕಾರಿಯ ಅನುಭವಗಳ ಬಗ್ಗೆ ಪ್ರಸ್ತಾಪಿಸಿದೆ. ನಾನು ಪ್ರಸ್ತಾಪಿಸಿದ ಆ ವಿಷಯ ಕೇಳಿದ ಕೂಡಲೆ ನಗಲು ಪ್ರಾರಂಭಿಸಿದ ಅವರು ಆ ದಿನಗಳ ಮಧುರ ನೆನಪುಗಳನ್ನು ಹಂಚಿಕೊಳ್ಳಲಾರಂಭಿಸಿದರು,
“ಹಂಟರ್ ತೇಜಸ್ವಿ…”
“ತೇಜಸ್ವಿಗೆ ಇಲ್ಲಸ್ಟ್ರೇಟೆದ್ ವೀಕ್ಲಿ ಥರ ಕನ್ನಡದಲ್ಲಿ ಒಂದು Magzine ಮಾಡ್ಬೇಕು ಅಂತ ತುಂಬಾ ಆಸೆ ಇತ್ತು. ಒಂದ್ಸಲ ನಮ್ಮನ್ನೆಲ್ಲಾ ಸೇರ್ಸಿ ಒಂದು ಕೇಳಿದ್ರು, ’ನಾನು ಒಬ್ನೆ ಇದನ್ನ ಮಾಡೋಕಾಗೋದಿಲ್ಲ. ನಾನು ಈ ಪತ್ರಿಕೆಯನ್ನ ರೂಪಿಸಬಹುದು. ಆದ್ರೆ ಇದರ ಪ್ರಿಂಟಿಂಗ್ ಒಬ್ರು ನೋಡ್ಕೋಬೇಕಾಗುತ್ತೆ, ಪ್ರೆಸ್ ಒಬ್ರು ನೋಡ್ಕೊಬೇಕಾಗುತ್ತೆ, ಮಾರ್ಕೆಟಿಂಗ್ ಒಬ್ರು ನೋಡ್ಕೊಬೇಕಾಗುತ್ತೆ. ನಿಮ್ಮಲ್ಲಿ ಯಾರ್ಯಾರು ಯಾವ ಯಾವ ಜವಬ್ದಾರಿ ತಗೊಳ್ಳೊಕೆ ರೆಡಿ ಇದೀರ’ ಅಂತ. ಆಗ ಒಬ್ಬೊಬ್ರು ಒಂದೊಂದು ಕಾರಣ ಹೇಳಿದ್ರು, ಒಬ್ರು ರಾಜಕೀಯಕ್ಕೆ ಹೋಗ್ತೀನಿ ಅಂದ್ರು, ಒಬ್ರು ಓದ್ಬೇಕು ಅಂದ್ರು, ಹೀಗೆ ಯಾರೂ ಅವ್ರಿಗೆ ಸರಿಯಾಗಿ ಹೆಗಲು ಕೊಡ್ಲಿಲ್ಲ. ಆಗ ತೇಜಸ್ವಿ ಒಂಟಿಯಾದ್ರು. ಆಗ ಯೋಚ್ನೆ ಮಾಡಿ ’ಇದು ನನ್ನಿಂದಾಗೊಲ್ಲ. ನಾನು ವ್ಯವಸಾಯ ಮಾಡ್ತೀನಿ’ ಅಂತ ಹೇಳಿ ಅವರು ಸೀದ ಮೂಡಿಗೆರೆಗೆ ಹೋಗಿ ತೋಟ ಮಾಡಿದ್ರು. ಅದೇ ಸಮಯಕ್ಕೆ ಸರಿಯಾಗಿ ನನಗೆ ಶೃಂಗೇರಿನಲ್ಲಿ ಕಾಲೇಜು ಮೇಷ್ಟ್ರು ಕೆಲಸ ಸಿಕ್ತು. ಆಗ ತೇಜಸ್ವಿ ಮೂಡಿಗೆರೆ ಹತ್ರ ಭೂತನಕಾಡು ಅಂತ ಒಂದಿದೆ, ಅಲ್ಲಿ ನಮ್ಮ ಗೆಳೆಯ ವಾಸು ಅಂತಿದಾರೆ, ಅವರ ಮನೆಲಿರ್ತಾ ಇದ್ರು. ಆಗ ರಸ್ತೆನೇ ಇರ್ಲಿಲ್ಲ ಸರಿಯಾಗಿ. ಟಾರ್ ರಸ್ತೆಗಳಂತು ಬಹಳ ಅಪರೂಪ. ಚಿಕ್ಕಮಗಳೂರು ಟು ಕೊಪ್ಪ ಟಾರ್ ರಸ್ತೇನೇ ಇರ್ಲಿಲ್ಲ. ಬರೀ ಮಡ್ ರೋಡು. ಅದ್ರಲ್ಲಿ ಬಸ್ನಲ್ಲಿ ಓಡಾಡ್ಬೇಕಿತ್ತು. ಬಹಳ ಹಿಂಸೆ, ಈ ಕಡೆಯಿಂದ ಆ ಕಡೆಗೆ ಹೋಗಿ ಬಂದ್ರೆ ನಮ್ಮ ಷರ್ಟುಗಳೆಲ್ಲಾ ಕೆಂಪಗಾಗಿರೋವು, ಆ ಥರದ ರಸ್ತೆ ಅದು.
ಆಗ ನಾನು ಒಬ್ನೆ ಶೃಂಗೇರಿನಲ್ಲಿ ಇದ್ನಲ್ಲ ಬೋರ್ ಆಗ್ಬಿಡೋದು. ಅದಕ್ಕೆ ಪ್ರತಿವಾರ ನಾನು ಬಸ್ ಹಿಡ್ಕೊಂಡು ತೇಜಸ್ವಿ ಇದ್ದ ಭೂತನಕಾಡಿಗೆ ಬರ್ತಾ ಇದ್ದೆ. ಆಗ ನಾನು Youngsterru, ತೇಜಸ್ವಿನೂ Youngsterru. ಆಗಂತೂ ತೇಜಸ್ವಿಗೆ ಶಿಕಾರಿ ಅಂದ್ರೆ ಒಂಥರ ಅಬ್ಸೆಷನ್ನು. ಶಿಕಾರಿ ಅಂದ್ರೆ ಏನಾದ್ರು ಭೇಟೆ ಆಡ್ಬೇಕು, ಎಂತೆತವೊ ಮಿಕಗಳನ್ನ ಹೊಡಿಬೇಕು ಅಂತೇಳಿ ಬಹಳ ಪ್ರಯತ್ನ ಪಡೋರು. ಆಗ ಅವ್ರತ್ರ ಒಂದು ಡಬಲ್ ಬ್ಯಾರೆಲ್ ಗನ್ನಿತ್ತು, ಜೊತೆಗೆ ಬೇಟೆ ಆಡೋಕೆ ತುಂಬಾ ಜಾಗಗಳಿದ್ವು, ನಾನು ಪ್ರತಿವಾರ ಅಲ್ಲಿಗೆ ಹೋಗ್ತಿದ್ದೆ, ಆಮೇಲೆ ಪ್ರಾಣಿ ಪಕ್ಷಿಗಳನ್ನ ನೋಡಿದ್ರೆ ಮಾಂಸ ಸಿಗುತ್ತೆ ಅನ್ನೊ ಮಾಂಸ ಲೋಭ ಬೇರೆ, ಈ ರೀತಿಯಾಗಿ ಪ್ರತಿ ವಾರ ಶನಿವಾರ, ಭಾನುವಾರ ನಾವಿಬ್ರು ಸೇರ್ಕೊಂಡು, ಎಷ್ಟು ಸಾಧ್ಯವೊ ಅಷ್ಟು ಸುತ್ತಿ, ಎಷ್ಟು ಸಾಧ್ಯವೊ ಅಷ್ಟು ಹೊಡೆದು, ಅದನ್ನ ತೃಪ್ತಿ ಆಗೊವಷ್ಟು ತಿಂದು ಆಮೇಲೆ ಸೋಮವಾರ ಕಾಲೇಜಿಗೆ ಹೋಗ್ತಾ ಇದ್ದೆ” ಕಡೆಯ ಮಾತು ಹೇಳುವಾಗ ಅವರ ಮುಖದ ಮೇಲೆ ತುಂಟ ಹುಡುಗನೊಬ್ಬನ ಕಳೆ ಎದ್ದು ಕಾಣುತ್ತಿತ್ತು.
ಅವರು ಮುಂದುವರೆಸಿದರು, “ಅವರತ್ರ ಒಂದು ನಾಯಿ ಇತು, ’ಕಿವಿ’ಅಂತ, ವೆರಿ ಇಂಟೆಲಿಜೆಂಟ್ ಡಾಗ್ ಅದು. ಶಿಕಾರಿ ವಿಷಯದಲ್ಲಿ ಬಹಳ ಬುದ್ದಿವಂತ ನಾಯಿ ಅದು. ಅದನ್ನ ನಾವು ಕರ್ಕೊಂಡು ಹೋಗ್ತಾ ಇದ್ವಿ. ಅದು ಸುಮಾರಾಗಿ ಎಲ್ಲಾ ನಾಯಿಗಳ ಹಾಗೆ ಬೊಗುಳ್ತಾ ಇತ್ತು. ಆದ್ರೆ ಪ್ರಾಣಿಗಳ ಸುಳಿವು ಸಿಕ್ರೆ ಅದರ ವಾಯ್ಸ್ ಬದಲಾಗೋದು! ನಮಗೆ ಅದು ಕೂಗಿದ ತಕ್ಷಣ ಗೊತ್ತಾಗೋದು, ’ಇದು ಪ್ರಾಣಿಯನ್ನ ನೋಡಿದೆ’ ಅಂತ ನಾವು ಅಲರ್ಟ್ ಆಗ್ತಾ ಇದ್ವಿ. ಅದೊಂತರ ರಿಲೇಶನ್ಷಿಪ್ ಅಂಡ್ ಎಕ್ಸ್ಪೀರಿಯನ್ಸ್ ಅದು. ಪ್ರಾಣಿಯನ್ನ ನೋಡ್ಬಿಟ್ಟು ಅದಕ್ಕೆ ತಲೆ ಕೆಟ್ಟೋಗೋದು, ಅದರ ವಾಯ್ಸ್ ಕೇಳಿ ನಾವು ಅಲರ್ಟ್ ಆಗಿ, ಮೈ ರೋಮಾಂಅಚಿತರಾಗಿ ಗನ್ನುಗಳಿಡ್ಕೊಂಡು ಎಲ್ಲಿ ಬರಬಹುದು? ಯಾವ ಪ್ರಾಣಿ ಬರಬಹುದು? ಅಂತ ನಾವು ಕಾಯ್ತಾ ಇರೋವು. ಆಮೇಲೆ ನಾವಿಬ್ರೇ ಹೋಗ್ತಿದ್ವಿ ಶಿಕಾರಿಗೆ, ಟು ಮ್ಯಾನ್ ಆರ್ಮಿ ನಮ್ದು. ಅದಕ್ಕೆ ಪ್ರಾಣಿ ತಪ್ಪಿಸ್ಕೊಂಡು ಹೋಗ್ಬಾರ್ದು ಅಂತ ಅವರು ನನ್ನ ಕೈಗೆ ಪೆಟ್ಲಂಗೋವಿ ಅಂತ ಸಲ್ಫರ್ ಹಾಕಿ ಒಂದು ಪೈಪ್ ಥರ ಮಾಡಿಕೊಟ್ಟಿರೋರು ನನಗೆ. ಅದನ್ನ ಅದರಲ್ಲಿ ಹಾಕ್ಬಿಟ್ಟು ಹೊಡುದ್ರೆ ಅದು ’ಢಂ’ ಅನ್ನೋದು. ’ಓ ಈ ಕಡೆಯಿಂದ ಶಬ್ದ ಬರ್ತಾ ಇದೆ’ ಅಂತ ಹೇಳಿ ಹಂದಿ ಆ ಕಡೆ ಓಡೋಗೋದು. ತೇಜಸ್ವಿ ಆ ಕಡೆ ಗನ್ ಹಿಡ್ಕೋಂದು ಕಾಯ್ತಾ ಇರೋರು. ಹಂದಿ ಅವರ ಕಡೆ ನುಗ್ಗಿ ಬರ್ತಿದ್ರೆ ಅವರು ಅದನ್ನ ಶೂಟ್ ಮಾಡಿ ಬಲಿ ಹಾಕಿರ್ತಿದ್ರು. ಹೀಗೆ ಪ್ರತಿವಾರ ನಮ್ಮ ಡ್ಯೂಟಿ ರೆಗ್ಯುಲರ್ ಆಗಿ ನಡೀತಾ ಇತ್ತು. ಆಮೇಲೆ ನಮ್ದು ಈ ಕಡೆ ಢಂ ಢಂ ಕೇಳ್ಸಿದ್ರೆ ಆಕಡೆ ಮನೆಯವ್ರು ಓ ಯಾವ್ದೊ ಬಲಿ ಬಿತ್ತು ಅಂತೇಳಿ ಅವರು ರೋಮಾಂಚಿತರಾಗಿ ಖಾರ, ಮಸಾಲೆ ರೆಡಿಮಾಡ್ಕೊಳ್ತಿದ್ರು. ಹೀಗೆ ಒಳ್ಳೆ ದಿನಗಳವು. ಬೇಕಾದಷ್ಟು ಸಲ ಸಿಕ್ಕಿವೆ, ಎಷ್ಟೊ ಸಲ ಬರಿ ಕೈಯಲ್ಲಿ ಬಂದಿದ್ದು ಇದೆ.
ಒಂದ್ಸಾರ್ತಿ ಅಂತು ಎಮ್ಮೆ ಥರ ಇರೊ ಒಂದು ಹಂದಿ ನಮ್ಮ ಕಣ್ಣೆದುರುಗೇ ನಡ್ಕೊಂಡು ಹೋಯ್ತು. ಇವರು ಗನ್ ತಗೊಂಡು ಅದರ ಕಡೆ ಶೂಟ್ ಮಾಡಿದ್ರು. ಆದರೆ ಅದರ ಅದೃಷ್ಟ ಚೆನ್ನಾಗಿತ್ತೊ ಏನೊ ಗನ್ ಬರೀ ಟಪ್ ಅಂತೆ ಹೊರತು ಹೊಡಿಲೇ ಇಲ್ಲ. ನಾನು ’ಏನ್ರಿ ಇದು ತೇಜಸ್ವಿ ಹೀಗಾಗೋಯ್ತು? ಅಷ್ಟು ಒಳ್ಳೆ ಹಂದೀನ ಬಿಟ್ಟುಬಿಟ್ರಲ್ರಿ?’ ಅಂದ್ರೆ ಅವರು ’ಎಲ್ಲಿ ಹೋಗುತ್ತೆ ಬಿಡ್ರಿ. ಇವತ್ತಲ್ಲ ನಾಳೆ ಸಿಕ್ಕೇ ಸಿಗುತ್ತೆ’ ಅಂತ ಸಮಾಧಾನ ಹೇಳಿದ್ರು. ಆಮೇಲೆ ನಾಯಿನ ಕಾಫಿ ತೋಟಕ್ಕೆ ಕರ್ಕೊಂಡ್ ಹೋದ್ರೆ ಕಾಫಿ ತೋಟದ ಕೆಳಗಿರೊ ಕಾಡುಕೋಳಿಗಳನ್ನ ಹಾರಿಸೋದು ಅದು. ಹಾರಿಸಿದ್ರೆ ಇವ್ರಿಗೆ ಫ್ಲೈಯಿಂಗ್ ಶಾಟ್ ಹೊಡೆಯೋಕೆ ಇಂಟರೆಸ್ಟ್ ಇರೋದು. ಅಂದ್ರೆ ನಾವು Magzineಗಳಲ್ಲಿ, ಇಂಗ್ಲೀಷ್ ಸಿನಿಮಾಗಳಲ್ಲಿ ಡಕ್ಕು, ಘೀಸು ಇವನ್ನೆಲ್ಲಾ ಫ್ಲೈಯಿಂಗ್ ಶಾಟ್ ಹೊಡೆದು ಬೀಳಿಸ್ತಾರೆ ಅಂತ ಕೇಳಿರ್ತಿದ್ವಿ, ನೋಡಿರ್ತಿದ್ವಿ. ಅದಕ್ಕೆ ತೇಜಸ್ವಿ ’ರೀ ಏನ್ರಿ ಆ ನನ್ಮಕ್ಳು ಹೊಡೀತಾರೆ ನಾವು ಹೊಡ್ಯಕ್ಕಾಗಲ್ವ…ನೋಡಣ..’ ಅಂತೇಳಿ ನಾಯಿನ ಬಿಟ್ಟ ತಕ್ಷಣ ಅದು ಕಾಡುಕೋಳಿಗಳನ್ನ ಹಾರಿಸೋದು, ಇವರು ಫ್ಲೈಯಿಂಗ್ ಶಾಟ್ ಹೊಡ್ದು ಬೀಳಿಸ್ತಾ ಇದ್ರು. ಹೀಗೆ ಅವರಿಗೆ ಶಿಕಾರಿ ಅಂದ್ರೆ ಒಂಥರ ರೋಮಾಂಚನ ಇತ್ತು. ಆಮೇಲೆ ಅದು ಕ್ರಮೇಣ ಕಡಿಮೆ ಆಯ್ತು.

ಒಂದ್ಸಲ ಅವರು ರೈಫಲ್ ನಿಂದ ಯಾವ್ದೊ ಪ್ರಾಣಿ ಕಡೆ ಫೈರ್ ಮಾಡಿದಾರೆ. ಅದು ಅದು ಹ್ಯಾಗಾಯ್ತೊ ಗೊತ್ತಿಲ್ಲ ಒಟ್ನಲ್ಲಿ ಅದು ಸೀದ ಬಂದು ತೇಜಸ್ವಿ ಮನೆ ಮಿರರ್ ಗೆ ಹೊಡೆದಿತ್ತು! ಅವರ ಹೆಂಡ್ತಿ ಆಗ ತಾನೆ ಆ ಮಿರರ್ ನಲ್ಲಿ ಮುಖ ನೋಡ್ಕೊಂಡು ಹೋಗಿದ್ರಂತೆ. ಆಮೇಲೆ ಅವರ ಮೊದಲ್ನೆ ಮಗಳು ಕೂಡ ಅಲ್ಲೇ ಮಲಗಿದ್ಳು. ನಮಗಂತೂ ಆಶ್ಚರ್ಯ ಆಯ್ತು, ’ಸುಮಾರು ಫರ್ಲಾಂಗ್ ದೂರದಿಂದ ಹೊಡೆದಿದ್ದು ಮನೆ ಒಳಗಡೆ ಹ್ಯಾಗ್ ಬಂತು?’ ಅಂತ. ಮೇ ಬಿ ದ ರೈಫಲ್ ವಾಸ್ ಪವರ್ ಫುಲ್. .೨೨ ರೈಫಲ್ ಅದು. ಎಷ್ಟೊ ಸರ್ತಿ ನಾವು ಎಲ್ಲೊ ಶೂಟ್ ಮಾಡಿದ್ರೆ ಇನ್ನೆಲ್ಲೊ ಯಾರೊ ’ಅಯ್ಯಯ್ಯೊ…’ ಅಂತ ಕೂಗಿಕೊಳ್ಳೋರು, ನಾವು ಎದ್ದು ಬಿದ್ದು ಓಡಿಬರ್ತಾ ಇದ್ವಿ. ಹಿಂಗೆಲ್ಲ ಆಗಿದೆ (ನಗು). ಹಂಗೇನೆ ಅನೇಕ ಘಟನೆಗಳಾಗಿವೆ. ಒಂದ್ಸಾರಿ ಇವರೇ ಶಿಕಾರಿಗೆ ಹೋಗಿದ್ದಾಗ ಹಂದಿ ಅಂತ ತಿಳ್ಕೊಂಡು ಯಾರೊ ಮನುಷ್ಯನಿಗೆ ಏಟು ಬಿದ್ದಿದೆ. ಅಂದ್ರೆ ಪ್ರಾಣಾಪಾಯ ಏನು ಆಗ್ತಿರ್ಲಿಲ್ಲ. ಆಮೇಲೆ ಒಂದ್ಸಾರ್ತಿ ನಾವಿಬ್ರೂ ಶಿಕಾರಿ ಮಾಡ್ತಿರ್ಬೇಕಾದ್ರೆ ನಮಿಬ್ರಿಗೂ ಗೆಳೆಯರು, ತೇಜಸ್ವಿಗೆ ನೆಂಟ್ರು ಹರೀಶ್ ಅಂತ ಒಬ್ರು ಬಂದ್ರು, ಸಂಜೆ ೬ ಗಂಟೆ ಹೊತ್ತಿಗೆ. ಅವರು ಬಂದು ’ನಿಮ್ಮಿಬ್ರುನ್ನು ಒಳಕ್ಕೆ ಹಾಕಿದ್ರೇನೆ ಪ್ರಾಣಿಗಳು ಉಳಿಯೋದು..’ ಅಂತ ತಮಾಷೆಗೆ ಹೇಳಿದ್ರು. ತೇಜಸ್ವಿ ’ಏಯ್ ಬಾರೊ…’ ಅಂತೇಳಿ ಅವ್ರನ್ನ ಮನೆಗೆ ಕರ್ಕೊಂಡ್ ಹೋಗಿ ನಾವು ಶಿಕಾರಿ ಮಾಡಿದ್ದ ಪ್ರಾಣಿಗಳ ಮಾಂಸದ ಅಡಿಗೆ ಮಾಡ್ಸಿ ಚೆನ್ನಾಗಿ ತಿನ್ಸಿ ’ಬಡ್ಡಿಮಗನೆ ನಿನ್ನ ನಿಯತ್ತು ಕೆಡ್ತು ಹೋಗು. ಇನ್ನು ನೀನೇನೂ ಹೇಳಕ್ಕಾಗಲ್ಲ…’ ಅಂತ ಹೇಳಿ ಅವರನ್ನ ಕಳಿಸಿದ್ರು.
ಹಾಗೆ ಇನ್ನೊಂದಿವ್ಸ ಅವರ ತೋಟದಲ್ಲಿರಬೇಕಾದ್ರೆ ತೇಜಸ್ವಿಒಂದು ಹಕ್ಕಿ ಫೋಟೋ ತೆಗೆಯೋದಿಕ್ಕೆ ಪ್ರಯತ್ನ ಪಟ್ರು. ಆ ಹಕ್ಕಿ ಫೋಟೋ ತೆಗೆಯೋಕೆ ಪ್ರಯತ್ನ ಪಡ್ತಾ ಪಡ್ತಾ ಹತ್ರ ಹತ್ರ ಹೋಗ್ತಾನೇ ಇದಾರೆ, ಅದು ಇವ್ರನ್ನ ನೋಡ್ಲು ಇಲ್ಲ, ಹೆದರ್ಕೊಂಡು ಹಾರಲೂ ಇಲ್ಲ. ಆಮೇಲೆ ನಮಗೆ Realise ಆಯ್ತು ಅದಕ್ಕೊಂದು ಕಣ್ಣಿಲ್ಲ ಅಂತ! ಆ ಕಣ್ಣೇನಾಗಿದೆ ಅಂದ್ರೆ ಕಾಡಿಗೆ ಬೆಂಕಿ ಬಿದ್ದಾಗ ಆ ಜ್ವಾಲೆಯ ಉರಿಗೆ ಸಿಕ್ಕಿ ಅದರ ಒಂದು ಕಣ್ಣು ಕುರುಡಾಗಿತ್ತು. ಅವತ್ತು ತೇಜಸ್ವಿಗೆ ತುಂಬಾ ಬೇಸರ ಆಯ್ತು. ಆಮೇಲೆ ಅವರು ಕಾಡಿಗೆ ಬೆಂಕಿ ಬೀಳೋದ್ರಿಂದ ಅಲ್ಲಿನ ಪ್ರಾಣಿ ಪಕ್ಷಿಗಳಿಗೆ ಆಗೊ ಅಪಾಯಗಳ ಬಗ್ಗೆ ತುಷಾರ ಪತ್ರಿಕೆಗೆ ಒಂದು ಲೇಖನಾನೇ ಬರೆದ್ರು.ಆಮೇಲೆ ಒಂದಿವ್ಸ ನಾವು ಮನೆಲಿರಬೇಕಾದ್ರೆ ಅಲ್ಲಿ ಮೂಡಿಗೆರೆ ಹತ್ರ ’ಗಾಂಧಿ ಘರ್’ ಅಂತ ಒಂದಿದೆ, ಅಲ್ಲಿನ ಕೆಲವು ಯುವಕರೆಲ್ಲಾ ಇವರ ಗೆಳೆಯರಾಗಿದ್ರು. ಅವರು ಬಂದು ’ಶಿಕಾರಿಗೋಗೋಣ ಬನ್ನಿ’ ಅಂತ ಕರೆದ್ರು. ಇವರಿಗೆ ಅದರ ಹಿಂದೆ ಕೆಲವು ಘಟನೆಗಳಾಗಿ ಶಿಕಾರಿ ಹೋಗೋದು ಬೇಡ ಅಂತ ಅರೆಮನಸ್ಸಿನಲ್ಲಿದ್ರು. ಆದ್ರೆ ಅವರು ಬಹಳ ಬಲವಂತಪಡ್ಸಿದ್ರು. ಆದ್ರೂ ಇವರು ’ಇಲ್ಲ ನಾನು ಬರೋದಿಲ್ಲ. ನನ್ನ ಸ್ನೇಹಿತರು ಬಂದಿದಾರೆ’ ಅಂದ್ರು. ಅವರಿಗೆ ಆಶ್ಚರ್ಯ ಆಗೋಯ್ತು. ಯಾಕಂದ್ರೆ ಅವರು ನನ್ನೂ ನೋಡಿದ್ರೂ, ನಾವಿಬ್ರೂ ಶಿಕಾರಿಗೆ ಅಂತ ಎಷ್ಟು ಸುತ್ತುತಿದ್ವಿ ಅನ್ನೋದನ್ನೂ ನೋಡಿದ್ರು. ಅದಕ್ಕೆ ’ಯಾಕೊ ತೇಜಸ್ವಿ ಒಂಥರ ಇದಾರಲ್ಲ’ ಅಂದ್ಕೊಂಡು ಹೋಗ್ಲಿ ನಿಮ್ಮ ನಾಯಿನಾದ್ರೂ ಕಳ್ಸಿ ಅಂತ ಅಂದ್ರು. ಸರಿ ಅಂತ ನಾಯಿನ ಕಳಿಸಿದ್ವಿ. ಅದು ಕುಣಿದಾಡ್ಕೊಂಡು ಅವರ ಜೊತೆ ಹೋಯ್ತು.
ಒಂದೈದು ನಿಮಿಷ ಆದ್ಮೇಲೆ ನಮಗೆ ಒಂದು ರೀತಿ ಕಳವಳ ಶುರುವಾಯ್ತು, ’ಈ ಮುಂಡೆಗಂಡ್ರು ಎಲ್ಲಿ ಹೋಡಿತಾರೊ? ಯಾವ್ದುಕ್ಕೆ ಹೊಡಿತಾರೊ? ಒಂದ್ವೇಳೆ ನಾಯಿಗೆ ಗುರಿಯಿಟ್ಟು ಹೊಡುದ್ರೆ ಏನ್ರಿ ಮಾಡೋದು ಅಂತೇಳಿ ನಾವು ಹೋದ್ವಿ. ನಾವು ಗನ್ ತಗೊಳ್ದೇ ಹೋದ್ವಿ. ಯಾಕಂದ್ರೆ ಗನ್ ಕೈಲಿದ್ರೆ ಒಂದು ರೀತಿ ಟೆಂಪ್ಟೇಷನ್ ಇರುತ್ತೆ ಅಂತ ಗನ್ ಮನೇಲೇ ಬಿಟ್ಟು ಹೋದ್ವಿ. ನಾವು ಹಾಗೆ ಹೋಗ್ತಿರ್ಬೇಕಾದ್ರೆ ನಮ್ಮ ನಾಯಿ ಬೊಗುಳ್ತು. ನಮಗೆ ಗೊತ್ತಾಗೋಯ್ತು, ’ಇಲ್ಲಿ ಹಂದಿ ಇದೆ. ಅದು ನೋಡಿದೆ’ ಅಂತ. ಹಾಗಂದುಕೊಂಡು ಹೋಗ್ತಿರ್ಬೇಕಾದ್ರೆ ಅವರ್ಯಾರೊ ಢಂ ಅನ್ಸಿದ್ರು. ಢಂ ಅನ್ಸಿದ್ ಕೂಡ್ಲೆ ನಾಯಿ ’ಕುಯುಂಕ್..’ ಅಂದ ಶಬ್ದ ಕೇಳಿಸ್ತು. ನಮಗೆ ಗೊತ್ತಾಗೋಯ್ತು ನಾಯಿಗೆ ಏಟು ಬಿತ್ತು ಅಂತ. ’ಬಿತ್ತು ಕಣ್ರಿ ಕಿವಿಗೆ ಸರಿಯಾಗಿ’ ಅಂದ್ರು ತೇಜಸ್ವಿ. ತಕ್ಷಣ ನಾವು ’ಕಿವಿ, ಕಿವಿ, ಕಿವಿ…’ ಅಂತ ನಾಯಿನ ಜೋರಾಗಿ ಕರೆದ್ವಿ. ನಮ್ಮ ಧ್ವನಿ ಗೊತ್ತಿತ್ತಲ್ಲ ಅದಕ್ಕೆ ಬದುಕಿದ್ರೆ ನಮ್ ಕಡೆ ಓಡಿಬರ್ಲಿ ಅಂತ. ಹಾಗ್ ಕರೀತಿರ್ಬೇಕಾದ್ರೆ ದೂರದಲ್ಲಿ ಕಿವಿ ನಮ್ ಕಡೆ ಓದಿ ಬರ್ತಿರೋದು ಕಾಣುಸ್ತು. ನಮಗೆ ಸ್ವಲ್ಪಮಟ್ಟಿಗೆ ಹೋದ ಜೀವ ಬಂದಂಗಾಯ್ತು. ಓಡಿ ಬಂದ ತಕ್ಷಣ ತೇಜಸ್ವಿ ಅದರ ಮೈಯನ್ನೆಲ್ಲ ಸೂಕ್ಷ್ಮವಾಗಿ ನೋಡಿದ್ರು. ಅವರು ಚರೆ ಹಾಕೊಂಡು ಬೇಟೆ ಆಡಿದ್ರಿಂದ ಅದರ ಚೂರುಗಳು ನಾಯಿಯ ಬೆನ್ನಿಗೆಲ್ಲ ಬಿದ್ದಿತ್ತು. ಅವ್ರಿಗೆ ತುಂಬಾ ಬೇಜಾರಾಯ್ತು. ಯಾಕಂದ್ರೆ ಅವರು ಆ ನಾಯಿನ ತುಂಬಾ ಪ್ರೀತಿಸ್ತಾ ಇದ್ರು.
ಸರಿ ನಾವು ಆ ನಾಯಿನ ಎತ್ಕೊಂಡು ಮನೆಗೆ ಹೋಗಿ ಅದಕ್ಕಾಗಿರೊ ಗಾಯಗಳನ್ನ ಇಲಾಜು ಮಾಡ್ತಾ ಇದ್ವಿ. ಕತ್ಲಾಗ್ತಾ ಬಂತು, ಆ ಶಿಕಾರಿದಾರರು ಒಬ್ಬೊಬ್ರೇ ಒಬ್ಬೊಬ್ರೇ ನಿಧಾನವಾಗಿ ಟವೆಲ್ ತಲೆ ಮೇಲೆ ಹಾಕ್ಕೊಂಡು, ಸಪ್ಪೆ ಮುಖ ಮಾಡ್ಕೊಂಡು ಬಂದ್ರು ಮನೆ ಮುಂದಕ್ಕೆ. ಅವ್ರ ಮುಖಗಳನ್ನ ನೋಡ್ತಿದ್ದಂಗೆ ತೇಜಸ್ವಿ ’ಶ್ರೀರಾಮ್ ಕೆಟ್ವಿ ಕಣ್ರಿ ನಾವು..’ ಅಂದ್ರು. ನಾನು ’ಯಾಕ್ರಿ?’ ಅಂದೆ. ’ಆ ಸೂಳೆಮಕ್ಳು ಬರ್ತಾ ಇರೊ ಅವತಾರ ನೋಡಿ. ಏನೋ ಅನಾಹುತ ಮಾಡ್ಕೊಂಡೇ ಬರ್ತಾ ಇರೊ ಹಾಗಿದ್ದಾರೆ ಆ ಆಯೋಗ್ಯರು’ ಅಂದ್ರು. ಅವರು ಒಂದಿಪ್ಪತ್ತೈದು ಮೂವತ್ತು ಜನ ಇದ್ರು. ಅವ್ರಲ್ಲಿ ಒಬ್ಬ ’ಅಲ್ಲ ಸ್ನೇಹ ಅಂದ್ರೆ ಏನು! ಫ್ರೆಂಡ್ಷಿಪ್ಪು ಅಂದ್ರೆ ಏನು! ಒಗ್ಗಟ್ಟು ಅಂದ್ರೆ ಏನು!’ ಅಂತ ಅಸಂಗತ ನಾಟಕದ ಸ್ಟೈಲ್ ನಲ್ಲಿ ಮಾತಾಡ್ತಾ ಬಂದ. ’ಏನ್ರೊ ಬಾಯಿ ಬಿಡ್ರೊ’ ಅಂತ ತೇಜಸ್ವಿ ಕೇಳಿದ್ರು. ಅವರು ಯಾರೂ ಬಾಯಿ ಬಿಟ್ಟು ಏನೂ ಹೇಳ್ಲಿಲ್ಲ. ಆದ್ರೆ ಆ ಗುಂಪಿನಲ್ಲಿ ಒಬ್ಬ ನರಳಾಡ್ತಿರೊ ಸದ್ದು ನಮ್ಮ ಕಿವಿಗೆ ಬಿತ್ತು. ನಾವು ಗಾಬರಿಯಾಗಿ ಏನು ಅಂತ ಹತ್ರ ಹೋಗಿ ನೋಡಿದ್ರೆ ಅವರು ಹೊಡೆದ ಗುಂಡು ಅವನಿಗೆ ಬಿದ್ದುಬಿಟ್ಟಿದೆ! ಅವನು ಭಯಂಕರ ನೋವಿನಿಂದ ಹೃದಯವಿದ್ರಾವಕವಾಗಿ ನರಳಾಡ್ತಿದಾನೆ.
ಅಷ್ಟೊತ್ತಿಗಾಗ್ಲೆ ಶಿಕಾರಿ ಮಾಡೋದು ಸ್ಟ್ರಿಕ್ಟ್ ಆಗೋಗಿತ್ತು. ಗನ್ ಲೈಸೆನ್ಸ್ ಇಲ್ಲದೇ ಶಿಕಾರಿ ಮಾಡೊ ಹಾಗಿರ್ಲಿಲ್ಲ. ಆದ್ರೆ ಅವರ್ಯಾರ ಹತ್ರಾನೂ ಗನ್ ಲೈಸೆನ್ಸ್ ಇರ್ಲಿಲ್ಲ. ಗನ್ ಶಾಟ್ ಬಿದ್ದಿದೆ ಕಾಲಿಗೆ. ಎಲ್ಲಿ ತೆಗ್ಸಿದ್ರು ಡಾಕ್ಟ್ರು ಪೊಲೀಸಿನವರಿಗೆ ಹೇಳ್ತಾರೆ. ತೇಜಸ್ವಿಗೆ ತುಂಬಾ ಭಯ ಆಗೋಯ್ತು. ಎಲ್ಲಾ ಭಯಕ್ಕಿಂತ ’ಇಂತವರ ತೋಟದಲ್ಲಿ ಹಿಂಗಾಯ್ತಂತೆ’ ಅಂತ ನನಗೆ ಬೈಯಲ್ಲ ಕಣ್ರಿ, ‘ಕುವೆಂಪು ಮಗ ಅಂತೆ ಹೊಡೆದಿದ್ದು’ ಅಂತ ಪೇಪರಿನವ್ರು ಬರೀತಾರೆ. ಅದೇ ಕಣ್ರಿ ನನಗೆ ಬಹಳ ಭಯ ಅಂತ ತೇಜಸ್ವಿ ಹೇಳಿದ್ರು. ಯಾಕಂದ್ರೆ ಅವರು ಎಲ್ಲೇ ಹೋದ್ರೂ ಅವರ ತಂದೆಯ ಕೀರ್ತಿ ಅವರಿಗೆ ಬಿಟ್ಟೂಬಿಡದೇ ಸುತ್ತಿಕೊಂಡಿರೋದು. ಅವರು ಬಹಳ ಶ್ರಮ ಪಡಬೇಕಾಯ್ತು ಆ ಕೀರ್ತಿಯ ವಲಯದಿಂದ ಬಿಡಿಸಿಕೊಂಡು ಆಚೆ ಬರೋದಿಕ್ಕೆ. ಅಂತಾದ್ರಲ್ಲಿ ಹೀಗಾಯ್ತಲ್ಲ ಅಂತ ಹೇಳಿ ಅವ್ರಿಗೆ ತುಂಬಾ ಬೇಜಾರಾಯ್ತು. ಆಮೇಲೆ ನಮ್ಮ ನಾಯಿನ ಮನೆ ಒಳಕ್ಕೆ ಹಾಕಿ ನಾನು ಅವರು ಸ್ಕೂಟ್ರು ತಗೊಂಡು ಒಬ್ರು ಡಾಕ್ಟ್ರು ಮನೆಗೆ ಹೋದ್ವಿ. ಅಲ್ಲೊಬ್ರು ಡಾಕ್ಟ್ರಿದ್ರು. ಅವ್ರಿಗೆ ತೇಜಸ್ವಿನ ಕಂಡ್ರೆ ತುಂಬಾ ಗೌರವ ಅವ್ರಿಗೆ. ನಾವು ಆ ಡಾಕ್ಟ್ರು ಮನೆಗೆ ಹೋದ್ವಿ. ಇವ್ರಿಗೆಲ್ಲಾ ಹೇಳಿದ್ವಿ ’ಅಲ್ಲಿಗೆ ಬನ್ರೊ’ ಅಂತ.
ತೇಜಸ್ವಿ ಬಂದುಬಿಟ್ರು ಅಂತ ಹೇಳಿ ತೇಜಸ್ವಿಗೆ ಬಾರಿ ಖುಷಿ ಆಗೀಯ್ತು. ಏನು ಹೆಂಡ್ತಿಗೆ ಕಾಫಿ ತಗೋಬಾ ಅಂತಾರೆ, ಟೀ ತಗೊ ಬಾ ಅಂತಾರೆ, ಕೇಕ್ ತಗೋ ಬಾ ಅಂತಾರೆ…ನಮಗೆ ಯಾವುದ್ರಲ್ಲೂ ಇಂಟರೆಸ್ಟ್ ಇಲ್ಲ. ನಮ್ಮ ಭಯಾನೇ ಬೇರೆ. ಆಮೇಲೆ ಸ್ವಲ್ಪ ಹೊತ್ತು ಉತ್ಸಾಹದಲ್ಲಿದ್ದ ಡಾಕ್ಟ್ರು ನಿಧಾನವಾಗಿ ನಮ್ಮ ಮುಖಗಳನ್ನನೋಡಿ ’ವಾಟ್ ಹ್ಯಾಸ್ ಹ್ಯಾಪನ್ಡ್ ಮಿಸ್ಟರ್ ತೇಜಸ್ವಿ..?’ ಅಂತ ಕೇಳಿದ್ರು. ಅವಾಗ ನಿಧಾನವಾಗಿ ಈ ಕತೆ ಹೇಳಿದ್ವಿ. ’ಡೋಂಟ್ ವರಿ. ಐ ವಿಲ್ ಗೆಟ್ ಇಟ್ ಆಲ್ರೈಟ್. ಹ್ಯಾವ್ ಟೀ…!’ ಅಂತೇಳಿ ಹೆಂಡ್ತಿ ಕೈಯಲ್ಲಿ ಟೀ ಕೊಡ್ಸಿದ್ರು. ನಾವು ಟೀ ಕುಡಿಯೊ ಅಷ್ಟೊತ್ತಿಗೆ ಈ ಮುಠ್ಠಾಳರೆಲ್ಲಾ ಬಂದ್ರು. ಆಮೇಲೆ ಅವ್ರನ್ನ ಆ ಡಾಕ್ಟ್ರಿಗೆ ಒಪ್ಪಿಸ್ಬಿಟ್ಟು ನಾವು ವಾಪಸ್ ಬಂದ್ವಿ. ಆದ್ರೂ ಆ ಇಡೀ ದಿವ್ಸ ನಾವು ಡಿಸ್ಟರ್ಬ್ ಆಗಿದ್ವಿ. ಈ ರೀತಿ ಅವ್ರಿಗೆ ಅನುಭವಕ್ಕೆ ಬಂದ ಘಟನೆಗಳು ಮತ್ತು ಆ ಕುರುಡು ಹಕ್ಕಿಯನ್ನ ನೋಡಿದು ನೋಡಿ ಅಲ್ಲಿಂದ ಅವ್ರಿಗೆ ಪರಿಸರದ ಬಗ್ಗೆ ಆಸಕ್ತಿ, ಪ್ರೀತಿ ಬಂದು ಕ್ರಮೇಣ ಶಿಕಾರಿಯಿಂದ ವಿಮುಖರಾದ್ರು. ಬಹುಶಃ ಅವತ್ತು ಮುಟ್ಟಿದ ಗನ್ನು ಮತ್ತೆ ಶಿಕಾರಿಗೆ ಅಂತ ಅವ್ರು ಅದನ್ನ ಉಪಯೋಗಿಸಿದ್ದೇ ಇಲ್ಲ…
(ಹುಡುಕಾಟ ಮುಂದುವರೆಯುವುದು…)
 

‍ಲೇಖಕರು G

March 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: