ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿಯನ್ನು ಹುಡುಕುತ್ತಾ – ಜಿ ಹೆಚ್ ನಾಯಕ್ ತೇಜಸ್ವಿಯನ್ನು ನೆನಸಿಕೊಂಡರು

(ಇಲ್ಲಿಯವರೆಗೆ)

ತೇಜಸ್ವಿಯವರ ಕಾಲೇಜು ಅಧ್ಯಾಪಕರಾಗಿದ್ದ ಡಾ|| ಪ್ರಭುಶಂಕರ್ ರವರನ್ನು ಮಾತನಾಡಿಸಿ ಅವರ ನೆನಪಿನಾಳದಿಂದ ತೇಜಸ್ವಿಯವರ ನೆನಪುಗಳನ್ನು ಜೋಪಾನವಾಗಿ ಆರಿಸಿಕೊಂಡ ನಂತರ ನಮ್ಮ ಪಯಣ ಮುಂದುವರೆದಿದ್ದು ಮೈಸೂರಿನ ಕುವೆಂಪುನಗರದ ಕಡೆ. ಏಕೆಂದರೆ  ನಮ್ಮ ಮುಂದಿನ ಚಿತ್ರೀಕರಣವಿದ್ದದ್ದು ಕುವೆಂಪುನಗರದಲ್ಲಿ ವಾಸವಾಗಿರುವ  ತೇಜಸ್ವಿಯವರ ಸುಮಾರು 50 ವರ್ಷಗಳ ಒಡನಾಡಿಯೊಬ್ಬರದ್ದು.  ಹಾಗಾಗಿ ಕುವೆಂಪುನಗರದ ಕಾಮಾಕ್ಷ ಆಸ್ಪತ್ರೆ ಹಿಂಭಾಗದಲ್ಲಿನ ಅವರ  ಮನೆಯ ವಿಳಾಸಕ್ಕೆ ಡಾ||ಪ್ರಭುಶಂಕರ್ ರವರ ಮನೆಯಿಂದ ಹೊರಟ ಹತ್ತೇ  ನಿಮಿಷದಲ್ಲಿ ನಾನು ನಮ್ಮ ತಂಡ ತಲುಪಿಕೊಂಡಿದ್ದೆವು. ಮನೆಯ ಮುಂದಿನ ಚಿಕ್ಕ ಬೋರ್ಡಿನಲ್ಲಿ ಬರೆದಿದ್ದ ’ಜಿ.ಹೆಚ್ ನಾಯಕ್’ ಎಂಬ  ಬೋರ್ಡ್ ಓದುತ್ತಾ ಗೇಟು ತೆಗೆದು ಒಳಹೋಗಿ ಬಾಗಿಲು ಬಡಿದೆವು.

ಆ ಮನೆಯವರು ನಮಗಾಗಿಯೇ ಕಾಯುತ್ತಿದ್ದರೇನೊ ಎಂಬಂತೆ ಮನೆಯ  ಒಳಗಿನಿಂದ ಬಾಗಿಲು ತೆಗೆಯುತ್ತಿರುವ ಸದ್ದಾಯಿತು. ಬಾಗಿಲು ತೆಗೆದ  ಸುಮಾರು 50 ವರ್ಷ ದಾಟಿದ ಹಿರಿಯ ಮಹಿಳೆಯೊಬ್ಬರು ನಮ್ಮನ್ನು ಮನೆಯೊಳಕ್ಕೆ ಸ್ವಾಗತಿಸಿದರು.

ಅವರು ’ಜಿ.ಹೆಚ್ ನಾಯಕ್’ ರವರ ಪತ್ನಿ ಶ್ರೀಮತಿ ಮೀರ. ಒಳ ಹೋಗಿ ಕುಳಿತು ಆ ಪುಟ್ಟ ಮನೆಯ ಒಳಾಂಗಣವನ್ನು ಒಮ್ಮೆ ಸುತ್ತಲೂ ನೋಡುತ್ತಿರಬೇಕಾದರೆ ಒಳಗಿನಿಂದ ಬಿಳಿ ಷರ್ಟು, ಕಪ್ಪನೆಯ ಪ್ಯಾಂಟ್ ಧರಿಸಿದ 70ರ ಆಸುಪಾಸಿನ ವ್ಯಕ್ತಿಯೊಬ್ಬರು ಕೆಮ್ಮಿ ಶಬ್ದ ಮಾಡುತ್ತಾ ಹೊರಬಂದರು. ನಾನು ಮತ್ತು ನಮ್ಮ ತಂಡದ ಹುಡುಗರೆಲ್ಲರೂ ಭಯಭಕ್ತಿಗಳಿಂದ ಎದ್ದು ನಿಂತು ಅವರಿಗೆ ವಂದಿಸಿ ನಮ್ಮ ನಮ್ಮ ಪರಿಚಯ ಮಾಡಿಕೊಂಡೆವು. ಅವರು ನಮ್ಮ ಕಡೆ ನಿಷ್ಕಲ್ಮಶ ನಗೆ ಬೀರಿ ಕುಳಿತುಕೊಳ್ಳಲು ಹೇಳಿದರು. ಆ ಸಜ್ಜನ, ಸುಸಂಸ್ಕೃತ ಹಿರಿಯರು ಪಂಪ ಪ್ರಶಸ್ತಿ ಗೌರವಕ್ಕೆ ಭಾಜನರಾದ ಖ್ಯಾತ ವಿಮರ್ಶಕ ಜಿ.ಹೆಚ್ ನಾಯಕ್ ರವರು.

ಜಿ.ಹೆಚ್ ನಾಯಕ್ ರವರು ತೇಜಸ್ವಿಯವರೊಂದಿಗೆ ಸುಮಾರು ನಲವತ್ತು ವರ್ಷಗಳ ಕಾಲ ಒಡನಾಟವಿಟ್ಟುಕ್ಕೊಂಡಿದ್ದವರು, ಅವರೊಂದಿಗೆ ಕಾಲೇಜು ದಿನಗಳನ್ನು ಕಳೆದವರು, ಅವರ ಬದುಕಿನ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾದವರು. ಅಂತಹ ಹಿರಿಯರೊಬ್ಬರು ತುಂಬು ಮುಗ್ಧತೆಯಿಂದ ಮಗುವಿನಂತೆ ಈಗ ನಮ್ಮ ಮುಂದೆ ಕುಳಿತಿದ್ದರು. ಮೊದಲಿಗೆನಮ್ಮ ತಂಡದ ಪರಸ್ಪರ ಪರಿಚಯವಾದ ನಂತರ ಹಿರಿಯ ವಿಮರ್ಶಕರಾದ ಜಿ.ಹೆಚ್ ನಾಯಕ್ ರವರು ತೇಜಸ್ವಿಯವರ ಒಡನಾಟದ ಕುರಿತು ಮಾತು ಪ್ರಾರಂಭಿಸುವ ಮೊದಲು ಪೀಠಿಕೆಯಾಗಿ ಅವರ ಕಾಲೇಜು ದಿನಗಳ ಕುರಿತು ಮಾತು ಪ್ರಾರಂಭಿಸಿದರು.

Over to ಜಿ.ಹೆಚ್ ನಾಯಕ್ ಸರ್…

’ಆಧ್ಯಾತ್ಮಕ್ಕೆ ಗುರು ಬೇಕು, ಕಾವ್ಯಕ್ಕೆ ಗುರು ಬೇಕೇಬೇಕೆಂದೇನಿಲ್ಲ…!’

“ನಾನು ಉತ್ತರ ಕನ್ನಡ ಜಿಲ್ಲೆಯ ಅಂಕೋಲದವನು. ನನ್ನನ್ನ ಮೈಸೂರಿಗೆ ಓದೋಕೆ ಅಂತ ಕಳಿಸಿದವರು ಸ.ಪ ಗಾಂವ್ಕರ್ ಅಂತ ಒಬ್ಬರು. ಅವರಿಗೆ ಕುವೆಂಪುರವರು ಚೆನ್ನಾಗಿ ಪರಿಚಯ. ಈ ಸ.ಪ ಗಾಂವ್ಕರ್ ಅಂದ್ರೆ ಆ ಭಾಗದಲ್ಲಿ ತುಂಬಾ ದೊಡ್ದ ಹೆಸರು. ಅವರೂ ಕವಿಯಾಗಿದ್ರು, ಬಾಂಬೆ ಸ್ಟೇಟ್ ನಲ್ಲಿ ಮಂತ್ರಿಯಾಗಿದ್ರು, ಆರ್ಯ ಸಮಾಜದ ಮುಖ್ಯ ಪ್ರಚಾರಕರಾಗಿದ್ದರು. ಅವರು ನನ್ನಂತ ಎಷ್ಟೊ ಜನ ಬಡಮಕ್ಕಳಿಗೆ ಓದೋಕೆ ಸಹಾಯ ಮಾಡಿದಾರೆ. ಆ ಮಕ್ಕಳಲ್ಲಿ ನಾನೂ ಒಬ್ಬ. ನಾನು ಮೈಸೂರಿಗೆ ಬರೋಕೆ ಮುಂಚೆ ಅಂಕೋಲದಲ್ಲಿ ಓದ್ತಿದ್ದಾಗ ನಾನು ಕವನ ಗಿವನ ಬರ್ತಾ ಇದ್ದೆ. ಆಗ ಪಾಪ ಅವ್ರಿಗೆ ನಾನೇನೊ ಕವಿಯಾಗಿ ಏನೊ ದೊಡ್ಡವನಾಗ್ತೀನಿ ಅನ್ನೊ ನಂಬಿಕೆ. ಅದಕ್ಕಾಗಿ ‘ನೀನು ಮೈಸೂರಿಗೆ ಹೋಗು ಕುವೆಂಪುರವರನ್ನ ಗುರುವಾಗಿ ಮಾಡ್ಕೊ’ ಅಂತ ಹೇಳಿ ಮೈಸೂರಿನಲ್ಲಿ ಓದೋಕೆ ವ್ಯವಸ್ಥೆ ಮಾಡಿದ್ರು. ಹಾಗಾಗಿ ನಾನು 1954ನಲ್ಲಿ ಮೈಸೂರಿಗೆ ಬಂದೆ.

ನಾನಾಗಿನ್ನು ತುಂಬಾ ಚಿಕ್ಕವನು. ಒಂದಿನ ಸ.ಪ ಗಾಂವ್ಕರ್ ಹೇಳಿದ್ರು ಅಂತ ಹೇಳಿ ಕುವೆಂಪುರವ್ರನ್ನ ನೋಡೋಕೆ ಅಂತ ಅವರ ಮನೆಗೆ ಹೋದೆ. ಅವತ್ತು ಭಾನುವಾರ ಚೆನ್ನಾಗಿ ನೆನಪಿದೆ ನನಗೆ. ಕುವೆಂಪುರವರು ಪ್ರಭುಶಂಕರ್ ರವರ ಜೊತೆಗೆ ಏನೊ ಮಾತಾಡ್ತಾ ಕೂತಿದ್ರು. ಆಗ ಅವರೇ ಪ್ರಭುಶಂಕರ್ ಅಂತಲೂ ಗೊತ್ತಿರಲಿಲ್ಲ ನನಗೆ. ಎರಡು ವರ್ಷ ಆದ್ಮೇಲೆ ಅವರು ನಮಗೆ ಅಧ್ಯಾಪಕರಾಗಿ ಬಂದಾಗಲೇ ಅವರು ಪ್ರಭುಶಂಕರ್ ಅಂತ ಗೊತ್ತಾಗಿದ್ದು. ಹಾಗೆ ಕುವೆಂಪುರವರನ್ನ ನೋಡೋಕೆ ಹೋದಾಗ ನಾನು ನನ್ನ ಒಂದಷ್ಟು ಚೆನ್ನಾಗಿವೆ ಅನ್ನಿಸಿದ ಕವನಗಳನ್ನ ಮುದ್ದಾದ ಹ್ಯಾಂಡ್ ರೈಟಿಂಗಿನಲ್ಲಿ ಬರ್ಕೊಂಡ್ ಹೋಗಿ ಅವರಿಗೆ ತೋರಿಸಿ ಪರಿಚಯ ಮಾಡ್ಕೊಂಡೆ, ‘ನಾನು ಇಂಥವ, ಅಂಕೋಲದಿಂದ ಬಂದಿದ್ದೀನಿ, ಸ.ಪ ಗಾಂವ್ಕರ್ ಅನ್ನೊರು ನನ್ನನ್ನ ಕಳಿಸಿದಾರೆ, ನಾನು ಕವನ ಬರೀತಿನಿ, ನೀವು ನನಗೆ ಗುರುವಾಗ್ಬೇಕು…!’ ಅಂತೆಲ್ಲ ಒಂದೇ ಉಸಿರಿಗೆ ಹೇಳಿಮುಗಿಸಿಬಿಟ್ಟೆ. ಎಲ್ಲಾ ಕೇಳಿಸ್ಕೊಂಡು ಕುವೆಂಪುರವರು ಎದುರಿಗೆ ಕೂತಿದ್ದ ಪ್ರಭುಶಂಕರ್ ರವರಿಗೆ ಸ.ಪ ಗಾಂವ್ಕರ್ ಯಾರು? ಎಷ್ಟು ದೊಡ್ಡೋರು? ಅಂತೆಲ್ಲಾ ಹೇಳಿದ್ರು. ಆಮೇಲೆ ಅವರು ನನ್ನ ಕವನಗಳನ್ನ ಓದಿ ಕೂಡ ನೋಡ್ಲಿಲ್ಲ. ತಗೊಂಡು ಹೋಗಿ ಅವರಿಗೆ ಕೊಟ್ಟಿದಷ್ಟೆ ಭಾಗ್ಯ ನನಗೆ. ಆದರೆ ಅವತ್ತು ಕುವೆಂಪುರವರು ಒಂದು ಮಾತು ಹೇಳಿದ್ರು, ’ಪ್ರತಿಭೆಯ ಕಿಡಿ ಇದ್ದರೆ ತನ್ನಿಂದ ತಾನೇ ಬೆಳಗುತ್ತೆ, ಹಿರಿಯರು ಬರೆದಿದ್ದನೆಲ್ಲಾ ಓದಬೇಕು…’ಅಂದ್ರು. ಆಗ ನನ್ನ ವಯಸ್ಸಿಗೆ ಅವರು ಏನು ಹೇಳಿದ್ರು ಅಂತ ಅರ್ಥಾನೇ ಆಗ್ಲಿಲ್ಲ. ನಂತರ ಇನ್ನೂ ಒಂದು ಮಾತು ಹೇಳಿದ್ರ್, ’ಆಧ್ಯಾತ್ಮಕ್ಕೆ ಗುರು ಬೇಕು, ಕಾವ್ಯಕ್ಕೆ ಗುರು ಬೇಕೇಬೇಕೆಂದೇನಿಲ್ಲ…!’ ಅಂತ ನನಗೆ ಹೇಳ್ಲಿಲ್ಲ ಎದುರಿಗೆ ಕೂತಿದ್ದ ಪ್ರಭುಶಂಕರ್ ಕಡೆ ತಿರುಗಿ ಹೇಳಿದ್ರು. ನನಗೆ ಅದೂ ಅರ್ಥ ಆಗಿರ್ಲಿಲ್ಲ. ಅಲ್ಲಿಂದ ಬಂದವ್ನೆ ಅವರು ಹೇಳಿದ ಮಾತನ್ನ ಪುಸ್ತಕದಲ್ಲಿ ಬರೆದಿಟ್ಟುಕೊಂಡೆ. ಆದರೆ ನನಗಾಗಿದ್ದ ರೋಮಾಂಚನ ಏನು ಅಂದ್ರೆ ’ಕುವೆಂಪು ಅವರಂತಹ ಕವಿಗಳು ನನ್ನಂತ ಸಾಮಾನ್ಯನನ್ನ ಬಹುವಚನದಲ್ಲಿ ಮಾತ್ನಾಡ್ಸಿದ್ರಲ್ಲ’ ಅನ್ನೋದು. ಅದೇ ಮೊದಲ್ನೆ ಸಲ ನನ್ನನ್ನ ಒಬ್ರು ಬಹುವಚನದಲ್ಲಿ ಮಾತಾಡ್ಸಿದ್ದು!

’ಸೀಬಯ್ಯನ ಅಜ್ಜಿ ತಲೆ…!’

ನಂತರ ನಾನು ಮೈಸೂರಿನಲ್ಲಿ ಕಾಲೇಜಿಗೆ ಹೋಗ್ತಾ ಬರ್ತಾ ಒಂದು ಹೆಸರು ಕಿವಿಗೆ ಬೀಳ್ತಿತ್ತು ’ಪೂರ್ಣಚಂದ್ರ ತೇಜಸ್ವಿ…ಪೂರ್ಣಚಂದ್ರ ತೇಜಸ್ವಿ‘ ಅಂತ. ಆ ಹೆಸರು ನಾನು ಕಲ್ಪನೆ ಕೂಡ ಮಾಡಿಕೊಳ್ಳದ ಹೆಸರು. ನನಗೆ ಆಮೇಲೆ ಗೊತ್ತಾಗಿದ್ದು ಪೂರ್ಣಚಂದ್ರ ತೇಜಸ್ವಿ ಅನ್ನೋದು ಕುವೆಂಪುರವರ ಮಗನ ಹೆಸರು ಅಂತ. ಕುವೆಂಪುರವರು ಅವರ ಮಕ್ಕಳಿಗೆ ಹೆಸರುಗಳನ್ನ ತುಂಬಾ ಚೆನ್ನಾಗಿ ಇಡ್ತಿದ್ರು. ಆದರೆ ಅವರನ್ನ ನೋಡಿರಲಿಲ್ಲ. ಸ್ವಾಭಾವಿಕವಾಗಿ ನಾನು ಕುವೆಂಪುರವರಂತಹ ಮಹಾಕವಿಯ ಮಗ ಅಂದರೆ ಹಾಗಿರಬಹುದು, ಹೀಗಿರಬಹುದು ಅಂತ ಕಲ್ಪನೆ ಮಾಡ್ಕೊತಿದ್ದೆ.ಹಾಗಿರಬೇಕಾದ್ರೆ ಒಂದಿನ ಪರೀಕ್ಷೆಗಳು ಬಂದ್ವು. ಆಗ ಕಾಲೇಜಿನ ನೋಟಿಸ್ ಬೋರ್ಡಿನಲ್ಲಿ ಇನ್ನೂ ಎಕ್ಸಾಮ್ ಫೀಸ್ ಕಟ್ಟಿಲ್ಲದೆ ಇರೊರ ಹೆಸರುಗಳನ್ನ ಹಾಕಿದ್ರು. ಅದರಲ್ಲಿ ನನ್ನ ಹೆಸರೇ ಮೊದಲನೆಯದ್ದು! ಸರಿ ನೋಡೋಣ ಅಂತ ಹೇಳಿ ನಾನು ಮೆಟ್ಟಿಲು ಹತ್ಕೊಂಡು ನನ್ನ ಪಾಡಿಗೆ ನಾನು, ನನಗೆ ನನ್ನದೇ ಚಿಂತೆ ತಲೆ ಮೇಲೆ ಬೆಟ್ಟದ ಹಾಗೆ ಇತ್ತಲ್ಲ, ಹಾಗಾಗಿ ನನಗೆ ಸುತ್ತ ಏನಾಗ್ತಿದ್ದೆ, ಯಾರು ಇದಾರೆ ಅಂತಾನೂ ನೋಡದೆ ನನ್ನದೇ ಯೋಚನೇಲಿ ಮೇಲೆ ಹೋಗ್ತಿದ್ದೆ. ಆಗ ಮೇಲುಗಡೆಯಿಂದ ಇಬ್ಬರು ಹುಡುಗರು ಮೆಟ್ಟಿಲು ಇಳಿದು ತುಂಬಾ ಉತ್ಸಾಹದಲ್ಲಿ ಬರ್ತಾ ಇದ್ರು. ನನಗೆ ಅವರ್ಯಾರು, ಏನು ಗೊತ್ತಿರಲಿಲ್ಲ. ಆಗ ಆ ಇಬ್ರು ಹುಡುಗರಲ್ಲಿ ಒಬ್ಬ Question Paperನ ಹೀಗೆ ಸುರುಳಿ ಸುತ್ತಿ ಬಾಯಲ್ಲಿ ಕಚ್ಚಿ ಎರಡು ತುಂಡು ಮಾಡಿ ’ಸೀಬಯ್ಯನ ಅಜ್ಜಿ ತಲೆ…!’ ಅಂತ ಕೂಗ್ತಾ ಅದನ್ನ ಗಾಳೀಲಿ ಮೇಲಕ್ಕೆಸೆದು ಮೆಟ್ಟಿಲಿಳಿದು ಹೊರಟೇ ಹೋದ್ರು. ಸೀಬಯ್ಯ ಆಗ ಕಾಲೇಜ್ ಪ್ರಿನ್ಸಿಪಾಲ್!

ನನಗಾಗ ಮೈಸೂರಿನ ಭಾಷೆ ಸರಿಯಾಗಿ ಗೊತ್ತಿರಲಿಲ್ಲ. ಹಂಗಾಗಿ ಅಜ್ಜಿತಲೆ ಅನ್ನೋದಕ್ಕೆ ಏನರ್ಥ ಅಂತ ಗೊತ್ತಾಗ್ಲಿಲ್ಲ. ಆಗ ಯಾರೋ ಒಬ್ಬ ’ಅವರೇ ಪೂರ್ಣಚಂದ್ರ ತೇಜಸ್ವಿ, ಕುವೆಂಪುರವರ ಮಗ!’ ಅಂದ್ರು. ನನಗೆ ನಂಬೋಕೆ ಆಗ್ಲಿಲ್ಲ. ದೊಡ್ಡವರ ಮಕ್ಕಳು ಹೇಗಿರಬಹುದು ಅಂತ ನಾನು ಊಹಿಸ್ಕೊಂಡಿದ್ದನೊ ಅದಕ್ಕೆ ತದ್ವಿರುದ್ಧವಾದ ಪರಿಸ್ಥಿತಿನಲ್ಲಿ ನಾನು ಅವರನ್ನ ನೋಡಿದ್ದೆ. ’ಕೋಗಿಲೆಯ ಮರಿಯೆಂದು ಕೈ ನೀಡಿದರೆ ಕಾಗೆ ಮರಿ ಸಿಕ್ಕಂತಾಯ್ತು’ ಕುವೆಂಪುರವರದ್ದೇ ಮಾತಿದು. ಹಾಗನ್ನಿಸಿಬಿಡ್ತು ನನಗೆ ತೇಜಸ್ವಿ ಬಗ್ಗೆ. ಯಾಕೊ ಬೇಜವಬ್ದಾರಿ ಹುಡುಗ ಇವನು ಅಂತಾನೂ ಅನ್ನಿಸ್ತು. ಆಮೇಲೆ ನನಗೆ ಮೇಲುಗಡೆ ಹೋಗೋಕೆ ಆಗ್ಲಿಲ್ಲ. ಶಾಕ್ ಆದ ಹಾಗೆ ಆಗಿ ವಾಪಸ್ ಬಂದುಬಿಟ್ಟೆ. ನನ್ನಂತವರು ಓದೋಕೆ ಎಷ್ಟೆಲ್ಲಾ ಕಷ್ಟ ಪಡ್ತೀವಿ, ಆದರೆ ಉಳ್ಳವರ ಮಕ್ಕಳು ನೋಡಿದ್ರೆ ಹೀಗಿರ್ತಾರಲ್ಲ ಅಂತ ಮನಸ್ಸಿನಲ್ಲೇ ಅಂದುಕೊಂಡು ಬಂದೆ. ಅದು ನಾನು ತೇಜಸ್ವಿನ ಮೊದಲ್ನೆ ಸಲ ನೋಡಿದ್ದು”.

ಓ ನೀವು ಪೂರ್ಣಚಂದ್ರ ತೇಜಸ್ವಿ ಅಲ್ವ, ಮಹಾಕವಿ ಕುವೆಂಪುರವರ ಮಗ!

ಎರಡನೇ ಸಲ ನೋಡಿದ್ದು ಸ್ವಲ್ಪ dramatic ಆಗಿದೆ. ತೇಜಸ್ವಿ ಇಲ್ಲಿ (ಮೈಸೂರಿನಲ್ಲಿ) ಸೈನ್ಸ್ ಇಂಟರ್ಮೀಡಿಯಟ್ ಫೇಲ್ ಆದ್ಮೇಲೆ ಶಿಮೊಗ್ಗಕ್ಕೆ ಹೋಗಿ ಸಹ್ಯಾದ್ರಿ ಕಾಲೇಜಿನಲ್ಲಿ ಆರ್ಟ್ಸ್ ತಗೊಂಡು ಓದ್ತಿದ್ರು. ಈ ಕಡೆ ನಾನು ಕಾಲೇಜಿನಲ್ಲಿ ಕಬಡ್ಡಿ ಮತ್ತೆ ವಾಲಿಬಾಲ್ ಚಾಂಪಿಯನ್ ಆಗಿದ್ದೆ. ತುಂಬಾ ಚೆನ್ನಾಗಿ ಆಡ್ತಿದ್ದೆ. ಆಗ ಸ್ಟೇಟ್ ಲೆವೆಲ್ ಕಬಡ್ಡಿ ಛಾಂಪಿಯನ್ ಶಿಪ್ ನ ಒಂದು ಮ್ಯಾಚು ನಮ್ಮ ಮಹಾರಾಜ ಕಾಲೇಜ್ vs ದಾವಣಗೆರೆ ಕಾಲೇಜ್ ಮ್ಯಾಚು ಶಿಮೊಗ್ಗದಲ್ಲಿತು. ನಾನು ಮಹಾರಾಜಸ್ ಟೀಮ್. ಶಿಮೊಗ್ಗದಲ್ಲಿ ನಡೀತಿದ್ದ ಆ ಮ್ಯಾಚ್ ನೋಡೋದಿಕ್ಕೆ ತೇಜಸ್ವಿ ಬಂದು ನಿಂತಿದ್ರು. ಶಿಮೊಗ್ಗ ಸಹ್ಯಾದ್ರಿ ಕಾಲೇಜ್ ಸ್ಟೂಡೆಂಟ್ ಆಗಿದ್ರಲ್ಲ ಆಗ ಹಾಗಾಗಿ. ಮ್ಯಾಚ್ ನಡೀತಿರ್ಬೇಕಾದ್ರೆ ಬಳ್ಳಾರಿಯವನು ಒಬ್ಬ ನಮ್ಮ ಟೀಮಿನ ಪ್ಲೇಯರು ವಿಭೀಷಣ ಅಂತ ಅವನ ಹೆಸರು ಅವನು ಔಟ್ ಆಗಿ ಹೊರಗೆ ಕೂತಿದ್ದ. ಜೊತೆಗೆ ಆಡ್ತಿರ್ಬೇಕಾದ್ರೆ ಅವನಿಗೆ ಕುತ್ತಿಗೆಗೊ, ನರಕ್ಕೊ ಎಲ್ಲೊ ಏಟು ಬಿದ್ದಿತ್ತು. ಕೊನೆಗೆ ಆ ಮ್ಯಾಚ್ ನಾವೇ ಗೆದ್ವಿ. ಗೆದ್ದ ಮೇಲೆ hip hip hurrey… ಮಾಡ್ತೀವಲ್ಲ, ಹಾಗೆ ಮಾಡ್ತಿರ್ಬೇಕಾದ್ರೆ ಆ ವಿಭೀಷಣನಿಗೆ ಏನನ್ನಿಸ್ತೊ ಏನೊ ಏಟುಬಿದ್ದಿದ್ದೆ ಅನ್ನೊದನ್ನ ಮರೆತು ತುಂಬಾ ಉತ್ಸಾಹದಲ್ಲಿ ಎದ್ದು ಓಡಿ ಬಂದು ನಮ್ಮ ಜೊತೆ ಸೇರ್ಕೊಂಡು ಜೋರಾಗಿ hip hip hurrey……ಅಂತ ಕೂಗಿ ದಢಾರ್ ಅಂತ ಕುಸಿದು ಬಿದ್ದುಬಿಟ್ಟ.

ಮ್ಯಾಚ್ ಗೆದ್ದ ಖುಷಿನಲ್ಲಿ ಅವನು ತನಗೆ ಏಟಾಗಿದೆ ಅನ್ನೊದನ್ನೆ ಮರೆತುಬಿಟ್ಟು ನಮ್ಮ ಜೊತೆ ಸೆಲೆಬ್ರೇಟ್ ಮಾಡೋಕೆ ಬಂದ ಅಂತ ಕಾಣುತ್ತೆ. ನಮಗೆ ಕೈಕಾಲೇ ಆಡ್ಲಿಲ್ಲ. ಏನು ಮಾಡ್ಬೇಕು ಗೊತ್ತಾಗ್ದೆ ಅವನನ್ನ ಎತ್ತುಕೊಂಡು ಹೋಗಿ ಒಂದು ರೂಂನಲ್ಲಿ ಮಲಗಿಸಿ ಗಾಳಿ ಹಾಕ್ತಿದ್ವಿ. ನಮ್ಮ ಹಿಂದೆ ತೇಜಸ್ವಿನೂ ಬಂದು ಸುತ್ತಾ ನಿಂತಿದ್ದ ಆ ಗುಂಪಿನಲ್ಲಿ ಮುಂದೆ ನಿಂತ್ಕೊಂಡು ನೋಡ್ತಿದ್ರು. ಸ್ವಲ್ಪ ಹೊತ್ತಾದ್ಮೇಲೆ ಆ ಹುಡುಗನಿಗೆ ಎಚ್ಚರ ಆಯ್ತು. ಅವನು ಕಣ್ಣು ಬಿಟ್ಟ ಕೂಡಲೇ ಒಂಥರ ಅಸ್ವಾಭಾವಿಕವಾಗಿ, ಗಟ್ಟಿ ಧ್ವನೀಲಿ ಎದುರಿಗೆ ನಿಂತಿದ್ದ ತೇಜಸ್ವಿನ ನೋಡಿ “ಓ ನೀವು ಪೂರ್ಣಚಂದ್ರ ತೇಜಸ್ವಿ ಅಲ್ವ ಮಹಾಕವಿ ಕುವೆಂಪುರವರ ಮಗ” ಅಂತ. ನಮಗೆ ಒಂಥರ ಆಶ್ಚರ್ಯ ಆಯ್ತು. ಕೊನೆಗೆ ಇದೆಲ್ಲಾ ಗಲಾಟೆಗಳು ಮುಗಿದ ಮೇಲೆ ತೇಜಸ್ವಿ ನನ್ನ ಹತ್ರ ಬಂದು “ನೀವು ರೈಡಿಂಗು, ಕ್ಯಾಚಿಂಗು ಎರಡರಲ್ಲೂ ತುಂಬಾ ಚೆನ್ನಾಗಿ ಆಡಿದ್ರಿ. ತುಂಬಾ ಒಳ್ಳೆ ಪ್ಲೇಯರ್ ನೀವು” ಅಂತ ನನ್ನ ಆಟದ ಬಗ್ಗೆ ಮೆಚ್ಚು ವ್ಯಕ್ತಪಡಿಸಿದ್ರು. ಅದು ನಾನು ತೇಜಸ್ವಿನ ಎರಡನೆ ಸಲ ನೋಡಿದ್ದು”

ಹೀಗೆ ಜಿ.ಹೆಚ್ ನಾಯಕ್ ರವರು ಸುಮಾರು 60 ವರ್ಷಗಳ ಹಿಂದಿನ ತಮ್ಮ ಕಾಲೇಜು ದಿನಗಳ ಮಧುರ ನೆನಪುಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರ ಹಾಗೂ ತೇಜಸ್ವಿಯವರ ಪ್ರಪ್ರಥಮ ಭೇಟಿಯ ಬಗೆಗಿನ ಸ್ವಾರಸ್ಯಕರ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಅವರು ಕೂತಿದ್ದ ಅವರ ಮನೆಯ ಸೋಫಾದ ಹಿಂದುಗಡೆಯ ಗೋಡೆಯ ಮೇಲೆ ಒಂದು ಕಡೆ ಇವರ ಫೋಟೋ ಮತ್ತೊಂದು ಕಡೆ ಆ ಫೋಟೋಗೆ ಸಮಾನಾಂತರವಾಗಿ ತೇಜಸ್ವಿಯವರ ಫೋಟೋ ತೂಗುತ್ತಿತ್ತು. ಗೆಳೆಯನೊಬ್ಬನ ಫೋಟೋವನ್ನು ಮನೆಯ ಗೋಡೆಯ ಮೇಲೆ ಹಾಕಿಕೊಂಡಿರುವುದನ್ನು ನಾನು ನೋಡಿದ್ದು ತುಂಬಾ ಅಪರೂಪ. ಇಲ್ಲಿ ಇವರ ಮನೆಯಲ್ಲಿ ತೇಜಸ್ವಿಯವರ ಫೋಟೋ ತೂಗುತ್ತಿರುವುದನ್ನು ನೋಡಿ ಇವರ ಹಾಗೂ ತೇಜಸ್ವಿಯವರ ಸ್ನೇಹ, ಒಡನಾಟ, ವಿಶ್ವಾಸಗಳು ಎಷ್ಟಿರಬಹುದೆಂದು ಮನಸ್ಸಿನಲ್ಲೇ ಊಹಿಸುತ್ತಿರಬೇಕಾದರೆ ಜಿ.ಹೆಚ್ ನಾಯಕ್ ರವರೇ ಮಾತು ಮುಂದುವರೆಸಿದರು.

ಇವನೇನ್ ಮಹಾ ಬರೀತಾನೆ, ಅವರಪ್ಪ ಬರೆದು ಕೊಟ್ಟಿರಬೇಕು…!

ಇದಾಗಿ ಒಂದು ವರ್ಷ ಏನೊ ಆಗಿತ್ತು. ಪ್ರಜಾವಾಣಿ ಆ ಕಾಲದಲ್ಲಿ ಸಣ್ಣಕತೆಗಳಿಗೆ ಬಹಳ ಗೌರವಯುತವಾದ ಪ್ರಶಸ್ತಿ ಇಟ್ಟಿತ್ತು. ಮೊಟ್ಟಮೊದಲ ಪ್ರಶಸ್ತಿ ಬಂದಿದ್ದು ರಾಮಚಂದ್ರ ಶರ್ಮರಿಗೆ ’ನಾಡು ಒಡೆಯಿತು’ ಅನ್ನೊ ಕತೆಗೆ ಚೆನ್ನಾಗಿ ನೆನೆಪಿದೆ ನನಗೆ. 1956 ಅಥವ 1957ರಲ್ಲೊ ಇರಬೇಕು ತೇಜಸ್ವಿಗೆ ’ಲಿಂಗ ಬಂದ’ ಅನ್ನೊ ಕತೆಗೆ ಫಸ್ಟ್ prize ಬಂತು ಅಂತ ಅನೌನ್ಸ್ ಆಯ್ತು. ನನ್ನ ಪ್ರಕಾರ ತೇಜಸ್ವಿ ಅಂದ್ರೆ ಒಬ್ಬ ತುಂಟ ಹುಡುಗ, ದೊಡ್ಡವರ ಮಗ ಅಂತ ಅಷ್ಟೇ ಇತ್ತು. ಕುವೆಂಪು ಆಗ ವೈಸ್ ಛಾನ್ಸೆಲರ್ ಆಗಿದ್ರು. 1956 to 1960 ವರೆಗು. ಆ ಪೀರಿಯಡ್ ನಲ್ಲಿ ತೇಜಸ್ವಿಗೆ ಹೀಗೆ ’ಲಿಂಗ ಬಂದ’ ಅನ್ನೊ ಒಂದು ಸಣ್ಣಕತೆಗೆ ಬಹುಮಾನ ಬಂತು ಅಂತ ಗೊತ್ತಾದಾಗ ನನಗೆ ನಂಬೋಕೆ ಆಗ್ಲಿಲ್ಲ. ನನಗಲ್ಲ ಯಾರಿಗೂ ನಂಬೋಕೆ ಆಗಿರ್ಲಿಲ್ಲ. ಯಾಕಂದ್ರೆ ಆ ಕಾಲದಲ್ಲಿ ಅದೊಂದು ಬಹಳ ಪ್ರೆಸ್ಟೀಜಿಯಸ್ ಅವಾರ್ಡ್ ಅದು. ಅಂತ ಒಂದು ಪ್ರಶಸ್ತಿ ತೇಜಸ್ವಿಗೆ ಬರಬಹುದು ಅನ್ನೊ ಕಲ್ಪನೇನೆ ನಮಗಿರಲಿಲ್ಲ. ನನಗಂತು ತೇಜಸ್ವಿ ಬರೀತಾನೆ ಅನ್ನೊ ಆಲೋಚನೆ ಕೂಡ ಇರಲಿಲ್ಲ. ತೇಜಸ್ವಿ ಇಷ್ಟು ಪ್ರತಿಭಾವಂತ ಬರಹಗಾರನ? ಅನ್ನೊ ರೀತಿಯ ಇಂದು ಸಣ್ಣ ಬೆರಗು ಶುರುವಾಯ್ತು ನನಗೆ ಆಗ. ಆದ್ರೂ ನನಗೂ ಅವರಿಗೂ ಆಗ ಹೋಗಿ ಕೇಳೊವಷ್ಟು, ಮಾತಾಡ್ಸೊವಷ್ಟು ಸ್ನೇಹ ಏನು ಇರಲಿಲ್ಲ. ಆದ್ರೆ ಎಷ್ಟೊ ಜನ ಹುಡುಗ್ರು ತುಂಬಾ ಲಘುವಾಗಿ ಮಾತಾಡ್ತಿದ್ರು, “ಬಹುಶಃ ಅವರಪ್ಪ ಬರೆದು ಕೆಲಸಕ್ಕೆ ಬರೋದಿಲ್ಲ ಅಂತ ಕಸದ ಬುಟ್ಟಿಗೆ ಎಸೆದಿದ್ದು ಇವನು ತಗೊಂಡೋಗಿ ಕಳಿಸ್ದ ಅಂತ ಕಾಣ್ತದೆ. ಅದಕ್ಕೆ ಪ್ರಶಸ್ತಿ ಬಂದಿರ್ಬೇಕು. ಇಲ್ಲದಿದ್ರೆ ಇವನೇನ್ ಮಹಾ ಬರೀತಾನೆ…” ಈ ಥರದ ಅಡ್ಡ ಮಾತುಗಳೆಲ್ಲಾ ಕೇಳಿ ಬರ್ತಿತ್ತು.

ನಂತರ ಅವರದ್ದು ಒಂದು ಕವನ ಸಂಕಲನ “ಬೃಹನ್ನಳೆ ಸೋಮುವಿನ ಸ್ವಗತ ಲಹರಿ” ಅಂತ ಒಂದು ಬಂತು “ಹುಲಿಯೂರಿನ ಸರಹದ್ದು” ಅಂತ ಒಂದು ಕಥಾಸಂಕಲನ ಒಂದೇ ಸಲ ಬಂತು. ಅದು ಬಂದ ಮೇಲೆ “ಒಹೋ ಹಿ ಈಸ್ ಎ ರೈಟರ್!” ಅನ್ನೊ ಭಾವನೆ ಬಂದಿದ್ದು ನನಗೆ.

ತೇಜಸ್ವಿ ಬಗ್ಗೆ ಬೆರಗು ಶುರುವಾಗಿದ್ದು ಹಾಗೆ. ಅಲ್ಲಿವರೆಗೂ ತೇಜಸ್ವಿಗೆ ನನ್ನ ಬಗ್ಗೆ ಬೆರಗಿತ್ತು. “ಎಲ್ಲಿಂದ್ಲೊ ಬಂದು, ಎಂಥದ್ದೊ ಫ್ರೀ ಹಾಸ್ಟೆಲ್ಲಿನಲ್ಲಿ ಇದ್ದುಕೊಂಡು Rank ಬಂದುಕೊಂಡು, ಜೊತೆಗೆ ಸ್ಪೋರ್ಟ್ಸ್ ನಲ್ಲೂ ಚೆನ್ನಾಗಿ ಆಡ್ತಾ, ಕಷ್ಟ ಇದ್ರು ಪ್ರತಿಭಾವಂತ” ಅನ್ನೊ ರೀತಿ ಮೆಚ್ಚುಗೆ ಇತ್ತು ಅವರಿಗೆ ನನ್ ಬಗ್ಗೆ. ನಾನು ಮಹಾ ಪ್ರತಿಭಾವಂತ ಅನ್ನೊ ರೀತಿಯಲ್ಲಿ ಕೆಲವು ಫ್ರೆಂಡ್ಸ್ ಹತ್ರ ಹೇಳ್ಕೊಂಡಿದ್ರಂತೆ. ಅದೂ ನನ್ನ ಕಿವಿಗೆ ಬೀಳ್ತಿತ್ತು. ಹೀಗೆ ತೇಜಸ್ವಿಯಂತಹ ತೇಜಸ್ವಿ ಸಾಹಿತಿಯಾಗಿ ರೂಪುಗೊಂಡಿದ್ದರ ಹಾದಿಯನ್ನು ಕಣ್ಣಿಗೆ ಕಟ್ಟುವಂತೆ ಬಿಡಿಸಿಡತೊಡಗಿದರು ಜಿ.ಹೆಚ್ ನಾಯಕ್ ರವರು. ವಯಸ್ಸು 70ರ ಮೇಲಾಗಿದ್ದರೂ, ಅನಾರೋಗ್ಯದ ತೊಂದರೆ ಇದ್ದರೂ ಅವರ ನೆನಪು ಒಂದಿಷ್ಟೂ ಕೂಡ ಮಾಸಿಲ್ಲ ಎಂಬುದಕ್ಕೆ ಅವರ ಧ್ವನಿಯಲ್ಲಿದ್ದ ಖಚಿತತೆಯೇ ಸಾಕ್ಷಿಯಾಗಿತ್ತು. ಆದರೆ ಅವರಿಗೆ ವಯಸ್ಸಿನ ಪ್ರಭಾವದಿಂದಾಗಿ ಕೊಂಚ ಶ್ರವಣ ದೋಷವಿದ್ದುದ್ದರಿಂದ ಅವರನ್ನು ಏನೇ ಕೇಳಬೇಕಾದರೂ ಸ್ವಲ್ಪ ಗಟ್ಟಿಯಾಗಿ ಕೇಳಬೇಕಿತ್ತು. ನಮ್ಮ ಅವರ ಮಾತು ತೇಜಸ್ವಿಯವರ ಸಾಹಿತ್ಯ ಕೃಷಿಯ ಮುಂದಿನ ಹಾದಿಯ ಬಗ್ಗೆ ಸಾಗುತ್ತಿತ್ತು.

ಜಿ.ಹೆಚ್ ನಾಯಕ್ ರವರು ಮುಂದುವರೆಸಿದರು, “ನವ್ಯದಿಂದ ಹೊಸದಿಗಂತದೆಡೆಗೆ!” “ಆಮೇಲೆ ತೇಜಸ್ವಿ ಮೈಸೂರಿಗೆ ವಾಪಸ್ ಬಂದ ಮೇಲೆ ಇಲ್ಲಿ ಗೋಪಾಲಕೃಷ್ಣ ಅಡಿಗರು, ಅವರು ನಮ್ಮ ಅಂಕೋಲೆಯ ಪಕ್ಕದ ಕುಮುಟಾದವರು. ಅವರು ಅಲ್ಲಿ ಕೆನರಾ ಕಾಲೇಜ್ ಅಂತ ಇತ್ತು, ಅದನ್ನೀಗ ಏ.ವಿ ಬಾಳಿಗ ಕಾಲೇಜ್ ಅಂತ ಹೆಸರು ಬದಲಾಯಿಸಿದ್ದಾರೆ, ಅಲ್ಲಿ ಅವರು ಇಂಗ್ಲೀಷ್ ಪ್ರೊಫೆಸರ್ ಆಗಿದ್ರು. 1954ನಲ್ಲಿ ಅಡಿಗರು ಮೈಸೂರಿನ ಫಿಲೋಮಿನಾಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಸಿಕ್ತು ಅಂತ ಹೇಳಿ ಮೈಸೂರಿಗೆ ಬಂದ್ರು. ನಾನು ಅದೇ ವರ್ಷನೇ ಮೈಸೂರಿಗೆ ಓದಕ್ಕೆ ಬಂದವನು. ಆಗ ಅಡಿಗರು ಪ್ರತಿದಿನ ಸಂಜೆ ಇಲ್ಲಿ ದಾಸ್ ಪ್ರಕಾಶ್ ಹೋಟೆಲ್ ಇದೆಯಲ್ಲ ಅದರಿಂದ ಮೂರನೇ ಬಿಲ್ಡಿಂಗಿನಲ್ಲಿ ಕಾಫಿ ಹೌಸ್ ಅಂತ ಒಂದಿತ್ತು ಅಲ್ಲಿಗೆ ಪ್ರತಿದಿನ ಸಂಜೆ ಬರ್ತಿದ್ರು. ಆಗ ಅನಂತಮೂರ್ತಿ, ಕತೆಗಾರ ಕೆ.ಸದಾಶಿವ ಇನ್ನೂ ಕೆಲವರೆಲ್ಲ ಅಲ್ಲಿ ಸೇರಿ ಅಡಿಗರ ಜೊತೆ ಸಾಹಿತ್ಯದ ಚರ್ಚೆ ಮಾಡೋರು. ನವ್ಯ ಸಾಹಿತ್ಯ ಆಗತಾನೆ ಕಣ್ಣುಬಿಡ್ತಿತ್ತಲ್ಲ ಆ ಸಂದರ್ಭ ಅದು.

ಅದೊಂದು ರೀತಿ ಅಡಿಗರ ಅಧ್ಯಕ್ಷತೆಯಲ್ಲಿ ನಡೀತಿದ್ದ ಅಘೋಷಿತ ಸಾಹಿತ್ಯ ಸಭೆ ಅಂತ ಹೇಳಬಹುದು. ಅಲ್ಲಿಗೆ ನಾನು ಹೋಗ್ತಿದ್ದೆ, ತೇಜಸ್ವಿನೂ ಬರ್ತಿದ್ರು. ಆದರೆ ತೇಜಸ್ವಿ ನವ್ಯ ಸಾಹಿತಿಗಳ ಗುಂಪು ಅಂತ ಕರೆಸಿಕೊಳ್ತಿದ್ದ ನಮ್ಮ ಜೊತೆ ಸೇರುತ್ತಿದ್ದದ್ದು ಎಲ್ಲರಿಗೂ ಒಂಥರ ಆಶ್ಚರ್ಯ ಉಂಟುಮಾಡುತ್ತಿತ್ತು. ಅದಕ್ಕೊಂದು ಬಲವಾದ ಕಾರಣ ಇತ್ತು. ಅಡಿಗರು ಕುವೆಂಪುರವರ ’ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಬಗ್ಗೆ ತುಂಬಾ ರೊಚ್ಚಿಗೇಳಿಸುವಂತಹ ಹೇಳಿಕೆ ಕೊಟ್ಟುಬಿಟ್ಟಿದ್ರು, “’ಶ್ರೀ ರಾಮಾಯಣ ದರ್ಶನಂ’ ಗಾತ್ರದಲ್ಲಿ ಮಹಾಕಾವ್ಯವೇ ಹೊರತು ಸತ್ವದಲ್ಲಿ ಅಲ್ಲ!!!” ಅಂತ. ಅದುವರೆಗು ಕುವೆಂಪು ಕಾವ್ಯದ ಬಗ್ಗೆ, ಅದರಲ್ಲೂ ”ಶ್ರೀ ರಾಮಾಯಣ ದರ್ಶನಂ’ ಬಗ್ಗೆ ಅಡ್ಡ ಮಾತು ತೆಗೆಯೋದಿರಲಿ ವಿಮರ್ಶೆಯ ಒಂದು ಮಾತು ಆಡೋದಕ್ಕೂ ಹತ್ತು ಗುಂಡಿಗೆ ಬೇಕು ಅನ್ನೊವಂತಹ ಪರಿಸ್ಥಿತಿ ಇತ್ತು. ಅಂಥ ಕಾಲದಲ್ಲಿ ಅಡಿಗರು ಅದೂ ಬ್ರಾಹ್ಮಣರು ಬೇರೆ ಅವರು ಇಂಥ ಮಾತಾಡಿದ್ದು ಒಂಥರ ಕೈಬಾಯಿ ಸುಟ್ಟುಕೊಳ್ಳುವ ಹೇಳಿಕೆ ಆಗಿತ್ತು. ಹಾಗಾಗಿ ಕಾಫಿ ಹೌಸಿನಲ್ಲಿ ನಡೀತಿದ್ದ ನವ್ಯ ಸಾಹಿತ್ಯಾಸಕ್ತರ ಆ ಸಂಜೆಗಳಿಗೆ ತೇಜಸ್ವಿ ಬರ್ತಾರೆ ಅನ್ನೋದು ಆ ವಲಯದಲ್ಲಿ ಒಂದು ಸುದ್ದೀನೆ ಆಗಿತ್ತು. ಕುವೆಂಪು ಅವರ ಕಾವ್ಯದ ವಿರೋಧಿ ಗುಂಪು ಅನ್ನೊ ಕುಖ್ಯಾತಿಗೆ ಗುರಿಯಾಗಿದ್ದ ನಮ್ಮ ಜೊತೆ ಓಡಾಡುತ್ತಿದ್ದ ತೇಜಸ್ವಿಗೆ ’ಆ ಗುಂಪಿನ ಜೊತೆ ಓಡಾಡಬೇಡ’ ಅಂತ ಹೇಳದೆ ಸ್ವತಂತ್ರವಾಗಿ ಬಿಟ್ಟಿದ್ದಾರಲ್ಲ ಕುವೆಂಪು ಇವರನ್ನ ಅಂತ ಎಲ್ಲರಿಗೂ ಆಶ್ಚರ್ಯ ಆಗಿತ್ತು. ಆ ವಯಸ್ಸಿನಲ್ಲೇ ತನಗೆ ಸರಿಕಂಡದ್ದನ್ನ ಆತ್ಮವಿಶ್ವಾಸದಿಂದ ಮಾಡೊ ತೇಜಸ್ವಿಯ ನೈತಿಕ ಧೈರ್ಯ, ಆತ್ಮವಿಶ್ವಾಸ ಪ್ರಶಂಸನೀಯವಾಗಿತ್ತು.


ಅದನ್ನ ನೆನೆಸ್ಕೊಂಡ್ರೆ ಕುವೆಂಪು ಹಾಗೂ ತೇಜಸ್ವಿ ಇಬ್ಬರ ಬಗ್ಗೇನೂ ಗೌರವ ಭಾವನೆ ಜಾಸ್ತಿ ಆಗುತ್ತೆ. ಕುವೆಂಪುರವರು ಮಗನ ಬರವಣಿಗೆ, ಚಿಂತನೆ, ಹವ್ಯಾಸಗಳಿಗೆ ಅಡ್ಡಿಬರದೆ, ಅವರ ಸ್ವಾತಂತ್ರವನ್ನು ಕಿತ್ತುಕೊಳ್ಳದೆ ಹ್ಯಾಗೆ ನಡಕೊಂಡ್ರು ನೋಡಿ. ಅದಕ್ಕೆ ಇರಬೇಕು ಅವರು ಅಷ್ಟು ದೊಡ್ಡವರಾಗಿದ್ದು. ಅಂಥ ದೊಡ್ಡವರ ಮಗ ತೇಜಸ್ವಿ ಮುಂದೆ ಅಪ್ಪನ ಸಾಹಿತ್ಯಕ್ಕಿಂತಲೂ ಭಿನ್ನವಾದ ಮತ್ತು ಮಹತ್ವದಲ್ಲಿ ಸರಿಸಮಾನ ಅನ್ನೊವಂತಹ ಬೇರೆಯದೆ ಆದ ಶಿಖರ ತಲುಪಿದರು ಅನ್ನೋದೇ ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ನೆನಪಿಡಬೇಕಾದ ಸಂಗತಿ. ಹಾಗೆ ತೇಜಸ್ವಿ ಪ್ರಾರಂಭದಲ್ಲಿ ನವ್ಯರ ಪ್ರಭಾವಕ್ಕೆ ಸಿಕ್ಕು ನವ್ಯರ ಶೈಲಿಯಲ್ಲಿ ಬರವಣಿಗೆ ಮುಂದುವರೆಸಿದ್ರು. ಆ ರೀತಿ ನವ್ಯದ ಧಾಟಿಯಲ್ಲಿ ಆ ಪ್ರಭಾವಕ್ಕೆ ಸಿಕ್ಕು ಬರೆದಂತಹವೆಂದರೆ ’ವ್ಯಕ್ತಿ ವಿಶಿಷ್ಟ ಸಿದ್ದಂತ’ ಅನ್ನುವ ವ್ಯಕ್ತಿ ವಿಶಿಷ್ಟತೆ ಕುರಿತಂಥಹ ಗಂಭೀರವಾದ ವಿಷಯದ ಪ್ರತಿಪಾದನೆ, ‘ಸ್ವರೂಪ’, ‘ನಿಗೂಢ ಮನುಷ್ಯರು’ ಅಂತಹ ಕಿರು ಕಾದಂಬರಿಗಳು, ’ಯಮಳ ಪ್ರಶ್ನೆ’ ನಾಟಕ ಮತ್ತು ಕೆಲವು ಕವಿತೆಗಳು. ಈ ’ಯಮಳ ಪ್ರಶ್ನೆ’ ನಾಟಕದ ಬಗ್ಗೆ ಒಂದು ಘಟನೆ ನೆನಪಾಗ್ತಿದೆ. ತೇಜಸ್ವಿ ’ಯಮಳ ಪ್ರಶ್ನೆ’ ಬರೆಯೊ ಮೊದಲು ನಾನು, ಶ್ರೀರಾಮ್, ಮುಂತಾದ ಕೆಲವು ಗೆಳೆಯರ ಎದುರುಗೆ ಆ ನಾಟಕದ ವಸ್ತು, ವಿಷಯಗಳನ್ನ ನಾಟಕೀಯ ಶೈಲಿಯಲ್ಲಿ ವಿವರಿಸಿದ್ರು. ವಿಚಿತ್ರವಾದ ಅಂಗಭಂಗಿಗಳಲ್ಲಿ, ಒಂದು ರೀತಿ ಹಾಸ್ಯಮಿಶ್ರಿತ ಧ್ವನಿನಲ್ಲಿ ಏರಿಳಿತ ಮಾಡಿ ತುಂಬಾ ಉತ್ಸಾಹದಿಂದ ಅಭಿನಯಿಸಿ ತೋರಿಸಿ ’ರೀ ಯಾರಾದ್ರು ಇದನ್ನ ನಾಟಕ ಆಗಿ ಬರೀರಿ’ ಅಂತ ಹೇಳಿ ಮೂಡಿಗೆರೆಗೆ ವಾಪಸ್ ಹೋಗಿದ್ರು.

ಅವರು ಅದಾಗಲೆ ಮೈಸೂರು ಬಿಟ್ಟು ಮೂಡಿಗೆರೆ ಹತ್ತಿರದ ಜನ್ನಾಪುರದಲ್ಲಿ ಕಾಫಿತೋಟ ಮಾಡೋಕೆ ಅಂತ ಹೋಗಿದ್ರು. ಆದರೆ ನಾವ್ಯಾರೂ ಬರೀಲಿಲ್ಲ ಅಂತಾದ ಮೇಲೆ ತಾವೇ ಅದನ್ನ ಬರೆದು ಅದನ್ನ ನನ್ನ ಕೈಯಲ್ಲಿ ಕೊಟ್ಟು ’ರೀ ನಾಯಕರೆ ಇದಕ್ಕೆ ಮುನ್ನುಡಿ ಬರೀರಿ’ ಅಂದ್ರು. ನಾನು ’ಏನ್ ತೇಜಸ್ವಿ, ತಮಾಷೆ ಮಾಡ್ತಾ ಇದೀರ? ನಾನು ಮುನ್ನುಡಿ ಬರೆಯೋವಷ್ಟು ದೊಡ್ಡ ಸಾಹಿತಿ ಏನ್ರಿ? ಬೇರೆ ಯಾರಾದ್ರು ದೊಡ್ಡವರ ಹತ್ರ ಬರೆಸ್ರಿ…’ ಅಂತ ಹೇಳಿದೆ. ’ಏ ನೀವೇ ಬರೀಬೇಕು ಕಣ್ರಿ. ಆ ದೊಡ್ದ ದೊಡ್ದ ಸಾಹಿತಿಗಳು ಅಂತ ಅಂದುಕೊಂಡಿರೋರಿಗೆಲ್ಲ ಈ ನಾಟಕ ಅರ್ಥ ಆಗೋದಿಲ್ಲ’ ಅಂದರು. ಕೊನೆಗೆ ನಾನು ಎಷ್ಟು ಹಿಂಜರಿದರು ಬಿಡ್ಲಿಲ್ಲ. ’ನೋಡ್ರಿ ನಿಮಗೆ ಅನ್ನಿಸಿದ್ದನ್ನ ನಾಲ್ಕು ಸಾಲೊ, ಎಂಟು ಸಾಲೊ, ಒಂದು ಪೇಜೊ, ಎರಡೊ ಪೇಜೊ ಬರೆದು ಶ್ರೀರಾಮ್ ಕೈಲಿ ಕೊಡಿ. ಪುಸ್ತಕ ಪೂರ್ತಿ ಪ್ರಿಂಟಾಗಿ ಬಂದ್ಮೇಲೆ ಎಲ್ಲರ ಹಾಗೆ ನಾನು ಓದ್ತೀನಿ. ಅಲ್ಲಿವರೆಗೂ ಏನು ಬರೆದ್ರಿ ಅನ್ನೊದನ್ನ ನನಗೆ ಹೇಳ್ಬೇಡಿ. ಅನ್ನಿಸಿದ್ದು ಬರೀರಿ’ ಅಂತ ಹೇಳಿ ಹೊರಟು ಹೋದ್ರು. ನಾನು ಒಂದೂಕಾಲು ಪುಟದಷ್ಟು ಬರೆದು ಶ್ರೀರಾಮ್ ಕೈಯಲ್ಲಿ ಕೊಟ್ಟೆ.


ತೇಜಸ್ವಿ ಹೇಳಿದ ಹಾಗೆ ಪುಸ್ತಕ ಪ್ರಿಂಟ್ ಆದ್ಮೇಲೆ ಅವರು ಅದನ್ನ ಓದಿದ್ದು. ಆಮೇಲೆ ಆ ಪುಸ್ತಕ ಹೊರಬಂದ ಒಂದು ಹದಿನೈದು ದಿನದಲ್ಲಿ ನಾನು ಕುವೆಂಪುರವರನ್ನ ಭೇಟಿಯಾಗೊ ಸಂದರ್ಭ ಬಂತು. ನಮ್ಮ ಅಂಕೋಲೆಯ ಒಂದು ಊರಿನಲ್ಲಿ ಸ್ವಾತಂತ್ರ್ಯ ಹೋರಾಟದ ನೆನಪಿನ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ತೂಗು ಹಾಕೋದಿಕ್ಕೆ ಕುವೆಂಪುರವರ ದೊಡ್ಡ ಭಾವಚಿತ್ರ ಮಾಡಿಸಿಕೊಂಡು ಅದರ ಮೇಲೆ ಅವರ ಹಸ್ತಾಕ್ಷರ ತೆಗೆದುಕೊಂಡು ಊರಿಗೆ ಬರಬೇಕು ಅಂತ ಸ.ಪ ಗಾಂವ್ಕರ್ ಹೇಳಿ ಕಳಿಸಿದ್ರು. ಸರಿ ಅಂತ ಹೇಳಿ ನಾನು ಕುವೆಂಪುರವರನ್ನ ನೋಡೋಕೆ ಅಂತ ಎನ್.ಡಿ ಸುಂದರೇಶ್ ಇದ್ರು ನೋಡಿ ಆಗ (ತೇಜಸ್ವಿ ಸ್ನೇಹಿತರಲ್ಲಿ ಒಬ್ಬರು) ಅವರ ಮೂಲಕ ಸಮಯ ನಿಗದಿ ಮಾಡಿಸ್ಕೊಂಡು ಕುವೆಂಪು ಅವರನ್ನ ನೋಡೋಕೆ ಅಂತ ಅವರ ಮನೆಗೆ ಹೋದೆ. ಹೇಳಿದ ಸಮಯಕ್ಕೆ ಸರಿಯಾಗಿ ಕುವೆಂಪು ಸಿದ್ದರಾಗಿ ಕೂತಿದ್ದರು. ಫೋಟೋ ತೋರಿಸಿ ಅವರ ಸಹಿ ಮಾಡಿಸಿಕೊಂಡೆ. ಸ.ಪ ಗಾಂವ್ಕರ್ ಅವರಿಗೆ ತುಂಬಾ ಬೇಕಾದವರಾಗಿದ್ರಲ್ಲ ಹಾಗಾಗಿ ಅವರ ಕ್ಷೇಮ ಸಮಾಚಾರವನ್ನ ಕುವೆಂಪು ವಿಚಾರಿಸಿಕೊಂಡರು. ಆಗ ನಾನು ಸ್ವಲ್ಪ ಧೈರ್ಯ ಮಾಡಿ ಮಾತಿನ ಮಧ್ಯೆ ತೇಜಸ್ವಿಯ ಬರವಣಿಗೆ ಬಗ್ಗೆ ಏನನಿಸುತ್ತದೆ ಅಂತ ಕೇಳುವ ಧೈರ್ಯ ಮಾಡಿದೆ.

ಅವರು ನಸುನಗು ಮಿಶ್ರಿತ ದನಿಯಲ್ಲಿ ’ಅವನು ಏನು ಮಾಡ್ತಿದ್ದಾನೆ? ಯಾಕೆ ಮಾಡ್ತಿದ್ದಾನೆ? ಒಂದೂ ಸರಿಯಾಗಿ ಗೋತ್ತಾಗೊದಿಲ್ಲ. ಹತ್ತಾರು ಹವ್ಯಾಸಗಳ ಹಿಂದೆ ಬಿದ್ದಿದ್ದಾನೆ. ಸ್ಕೂಟರ್ ಒಂದಿದೆ. ಅದರ ಬೋಳ್ಟುಗಳನ್ನ ಯದ್ವಾತದ್ವಾ ಬಿಚ್ಚೋದು, ಜೋಡಿಸೋದು ಏನೇನೊ ಮಾಡ್ತಿರತಾನೆ. ಗರಾಜಿನವರಿಗೆ ಕೊಟ್ಟು ರಿಪೇರಿ ಮಾಡಿಸು ಅಂದರೆ ’ನನಗೆ ಗೊತ್ತೊರೊವಷ್ಟೆ ಅವರಿಗೂ ಗೊತ್ತಿರೋದು. ಅವರಿಗಿಂತ ಚೆನ್ನಾಗಿ ನಾನೇ ರಿಪೇರಿ ಮಾಡ್ತೀನಿ’ ಅಂತಾನೆ. ಸಿತಾರ್ ಒಂದು ತಂದಿಟ್ಟುಕೊಂಡು ಮನಸ್ಸಿಗೆ ಬಂದಾಗಲೆಲ್ಲಾ ಟೊಂಯ್ ಟೊಂಯ್ ಅನ್ನಿಸ್ತಾ ಇರ್ತಾನೆ. ಸಾಹಿತ್ಯವನ್ನೂ ಬರೀತಿದ್ದಾನೆ. ಒಟ್ಟಿನಲ್ಲಿ ಯಾವುದಾದರು ಒಂದನ್ನ ಗಟ್ಟಿಯಾಗಿ ಹಿಡಿದು ಮಾಡುವ ಸ್ವಭಾವ ಅವನದಲ್ಲ’ ಅಂದ್ರು. ನಾನು ’ಯಮಳ ಪ್ರಶ್ನೆ’ ಅಂತ ಒಂದು ನಾಟಕ ಬಂತಲ್ಲ ಅದರ ಬಗ್ಗೆ ನಿಮಗೆ ಏನನ್ನಿಸ್ತದೆ?’ ಅಂತ ಕೇಳಿದೆ.

ಆ ಪ್ರಶ್ನೆ ಕೇಳಿದ್ದೇ ಕುವೆಂಪುರವರು ದೊಡ್ದ ದನಿಯಲ್ಲಿ ನಗುತ್ತಾ ’ಅವನ ಸ್ನೇಹಿತರು ಯಾರ ಹತ್ತಿರಾವೊ ಮುನ್ನುಡಿ ಬರೆಸಿದ್ದಾನೆ. ಅವರು ’ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಅಪೂರ್ವ ಕೃತಿ, ಅಪರೂಪದ ಕೃತಿ’ ಅಂತ ಏನೊ ಬರೆದುಬಿಟ್ಟಿದ್ದಾರೆ. ಇವನು ಅದನ್ನ ತುಂಬಾ ಸೀರಿಯಸ್ಸಾಗಿ ತಗೊಂಡು ಕಾಲರ್ ಪಟ್ಟಿ ಏರಿಸಿಕೊಂಡು ಓಡಾಡ್ತಿದಾನೆ’ ಅಂತ ಹೇಳ್ತಾ ಜೋರಾಗಿ ನಕ್ಕರು. ಆ ’ಯಮಳ ಪ್ರಶ್ನೆ’ ನಾಟಕಕ್ಕೆ ’ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಅಪೂರ್ವ ಕೃತಿ, ಅಪರೂಪದ ಕೃತಿ’ಅಂತ ಮೆಚ್ಚುಗೆಯಿದ ಕೂಡಿದ ಮುನ್ನುಡಿ ಬರೆದ ಆ ’ಮಹಾ ವಿಮರ್ಶಕ’ ನಾನೇ ಅಂತ ಹೇಳೋಕೆ ನನಗೆ ಧೈರ್ಯ ಬರಲಿಲ್ಲ ಅದು ಅವರಿಗೂ ಗೊತ್ತಾಗಲಿಲ್ಲ. ಹಾಗೆ ಅವರ ಫೋಟೋ ತಗೊಂಡು ವಾಪಸ್ ಬಂದೆ’ ಎಂದು ಹಳೆಯ ಘಟನೆಯನ್ನು ನೆನಪು ಮಾಡಿಕೊಂಡು ಜಿ.ಹೆಚ್ ನಾಯಕ್ ರವರು ತಮ್ಮ ಕಾಲೇಜು ದಿನಗಳ ನೆನಪುಗಳಿಗೆ ಜಾರಿದರು.

ಮಾತಿನ ಮಧ್ಯದಲ್ಲಿ ನಾವು ಜಿ.ಹೆಚ್ ನಾಯಕ್ ರವರ ಪತ್ನಿ ಮೀರನಾಯಕ್ ರವರು ಕೊಟ್ಟಿದ್ದ ಕಾಫಿ ಹೀರಿ ಮುಗಿಸಿದ್ದೆವು. ನಂತರ ಜಿ.ಹೆಚ್ ನಾಯಕ್ ರವರೇ ಮಾತು ಮುಂದುವರೆಸಿದರು, “ನೋಡಿ ಹಾಗೆ ತಂದೆಯ ಹಾದಿಯನ್ನು ಬಿಟ್ಟು ನವ್ಯ ಸಾಹಿತ್ಯ ಪ್ರಕಾರದಲ್ಲಿ ತಮ್ಮ ಸಾಹಿತ್ಯದ ರಚನೆ ಪ್ರಾರಂಭ ಮಾಡಿದ ತೇಜಸ್ವಿ ಮುಂದೆ 1970ರ ದಶಕದ ಪ್ರಾರಂಭದ ಹೊತ್ತಿಗೆ ನವ್ಯಸಾಹಿತ್ಯ ಮಾರ್ಗದ ತೀವ್ರ ವಿಮರ್ಶಕರಾಗಿ ಅಲ್ಲಿಂದಲೂ ಸಿಡಿದೆದ್ದು ತಮ್ಮದೇ ಆದ ಹೊಸ ಮಾರ್ಗವೊಂದನ್ನ ಕಂಡು ಕೊಂಡರಲ್ಲ ಅದು ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಒಂಥರ ರೋಚಕವಾದ ಕಥೆ. ’ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದ ಮುಖಾಂತರ ತೇಜಸ್ವಿಯ ಸಾಹಿತ್ಯದ ಹೊಸದಿಗಂತದ ಕಡೆಯ ನಡಿಗೆ ಪ್ರಾರಂಭ ಆಯ್ತು. ಅವರ ಕಡೆಯ ಕಾದಂಬರಿ ’ಮಾಯಾಲೋಕ’ ದಲ್ಲಿ ನೀವು ಓದಿರಬಹುದು ಅವರು ಮುನ್ನುಡಿಯ ಹಾಗೆ ಬರೆದಿರುವ ಕೆಲವು ಮಾತುಗಳನ್ನ. (ಮಾಯಾಲೋಕದ ಮುನ್ನುಡಿಯಲ್ಲಿ ತೇಜಸ್ವಿಯವರು ಬರೆದ ಸಾಲುಗಳು: “ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿ, ಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನಹರಿಸಿ ಹೊಸ ದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ-ಕೆ.ಪಿ ಪೂರ್ಣಚಂದ್ರ ತೇಜಸ್ವಿ”). ಆ ಸಾಲುಗಳನ್ನ ಸರಿಯಾಗಿ ಓದಿಕೊಂಡ್ರೆ ನಮಗೆ ಗೊತ್ತಾಗುತ್ತೆ ತೇಜಸ್ವಿ ಹೇಗೆ ತಮ್ಮ ಸುತ್ತಮುತ್ತ ಆಗ್ತಿದ್ದ ಬದಲಾವಣೆಗಳಿಗೆ ಒಗ್ಗಿಕೊಳ್ತಿದ್ರು ಮತ್ತು ತಮ್ಮನ್ನ ತಾವು ಹೇಗೆ update ಮಾಡ್ಕೊಳ್ತಿದ್ರು ಅಂತ. ಬದಲಾವಣೆಗಳಿಗೆ ಸ್ಪಂದಿಸುವ, ಸವಾಲುಗಳಿಗೆ ತೆರೆದುಕೊಳ್ಳುವ ಈ ರೀತಿಯ ಸಾಹಿತಿಗಳು ನಮ್ಮಲ್ಲಿ ತುಂಬಾ ಅಪರೂಪ…” ಹೀಗೆ ಜಿ.ಹೆಚ್ ನಾಯಕ್ ರವರೊಳಗಿನ ತೇಜಸ್ವಿ ಸ್ವಲ್ಪ ಸ್ವಲ್ಪವೇ ಅನಾವರಣಗೊಳ್ಳುತ್ತಾ ಹೋದರು.

(ತೇಜಸ್ವಿಯವರೊಂದಿಗಿನ ಜಿ.ಹೆಚ್ ನಾಯಕರ ಒಡನಾಟದ ಉಳಿದ ನೆನಪುಗಳು ಮುಂದಿನ ವಾರ)

 

‍ಲೇಖಕರು avadhi

5 January, 2014

2 Comments

  1. ಜಿ.ಎನ್ ನಾಗರಾಜ್

    ಬಹಳ ಒಳ್ಳೆಯ ಭಾಗ . ತೇಜಸ್ವಿ ಮಾತ್ರವಲ್ಲದೆ ಕುವೆಂಪುರವರ ಬಗ್ಗೆ ಕೂಡ ಹೊಸ ವಿಷಯಗಳನ್ನು ತಿಳಿಸುತ್ತದೆ.ಈಗಾಗಲೇ ಗೊತ್ತಿರುವ ಕೆಲವು ವಿಷಯಗಳ ಜೊತೆಗೆ.

  2. ಬಿ. ಆರ್. ಸತ್ಯನಾರಾಯಣ

    ಸ.ಪ.ಗಾಂವ್ಕರ ಅವರು ಕ್ರೈಮ್ & ಪನಿಷ್ಮೆಂಟ್ ಕಾದಂಬರಿಯನ್ನು ಕನ್ನಡಕ್ಕೆ (ಅಪರಾಧ ಮತ್ತು ಶಿಕ್ಷೆ) ಅನುವಾದಿಸಿದವರು. ಅವರ ನೆನಪು ಮನಸ್ಸಿಗೆ ಮುದ ನೀಡಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading