ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿಯನ್ನು ಹುಡುಕುತ್ತಾ – ’ಡು ಯು ಮಿಸ್ ತೇಜಸ್ವಿ???’

’ನಾವೀಗ ಹೋಗ್ತಾ ಇರೋದು ಕಾಂಡ್ಯ ಅನ್ನೊ ಜಾಗಕ್ಕೆ’ ಬಾಪು ನಮ್ಮ ಮುಂದಿನ ಪಯಣದ ವಿವರಗಳನ್ನು ಹೇಳಿದರು. ಮಾಗುಂಡಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಕಳಸ-ಬಾಳೆಹೊನ್ನೂರು ರಸ್ತೆಯಲ್ಲಿ ಸಾಗಿ ಬಾಳೆಹೊನ್ನೂರು ಆದ ಮೇಲೆ ಬಲಕ್ಕೆ ತಿರುಗಿ ಹತ್ತು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಜಾಗದ ಹೆಸರೇ ಕಾಂಡ್ಯ. ಈ ಕಾಂಡ್ಯ ಎನ್ನುವ ಜಾಗ ಮುತ್ತೋಡಿ ಮೀಸಲು ಅರಣ್ಯ ವಲಯಕ್ಕೆ ಸೇರಿದ ಭದ್ರಾ ನದಿ ಹರಿಯುವ ಒಂದು ಪ್ರದೇಶ. ದಟ್ಟ ಕಾಡಿನ ಮಧ್ಯದಲ್ಲಿರುವ ತೇಜಸ್ವಿಯವರ ಅಚ್ಚುಮೆಚ್ಚಿನ ಫಿಶಿಂಗ್ಪಾಯಿಂಟ್. ಮಾಗುಂಡಿಯಲ್ಲಿ ಚಿತ್ರೀಕರಣ ಮುಗಿದ ನಂತರ ಬಾಪುರವರು ನಮ್ಮನ್ನು ಕರೆದುಕೊಂಡು ಹೋಗಿದ್ದು ಈ ಜಾಗಕ್ಕೆ.
ಕಾಂಡ್ಯ ತಲುಪುವ ಹಾದಿಯಲ್ಲಿ ಬಾಪುದಿನೇಶ್ ರವರ ಜೊತೆ ನಮ್ಮ ಮಾತುಕತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಸಾಗುತ್ತಿತ್ತು. ಬಾಪು ನಮ್ಮ ಯಾವ ಪ್ರಶ್ನೆಗಳಿಗೂ ಬೇಸರಿಸಿಕೊಳ್ಳದೆ ಉತ್ತರಿಸುತ್ತಿದ್ದರು. ಈ ಮಾತುಕತೆಯ ಮಧ್ಯದಲ್ಲೇ ‘ತೇಜಸ್ವಿಯವರ ಜೊತೆಗಿನ ಒಡನಾಟ ಪ್ರಾರಂಭವಾದ ಬಗೆ ಹೇಗೆಂದು? ಅವರನ್ನು ನಾನು ಕೇಳಿದ ಪ್ರಶ್ನೆಗೆ ಬಾಪು ಹೇಳಿದ ಉತ್ತರದ ಸಾರಾಂಶ ಇಲ್ಲಿದೆ;
‘೨೧ ವರ್ಷದ ಹಿಂದೆ ತೇಜಸ್ವಿಯವರ ಬಳಿ ಡಿಟಿಪಿ ಕೆಲಸ ಮಾಡುತ್ತಿದ್ದ ಅನುಪಮ (ಅನುಪ) ಎನ್ನುವವರ ಬಳಿ ತೇಜಸ್ವಿ ‘ಯಾರಾದ್ರು ಚಿತ್ರಕಲೆ ಕಲಾವಿದ ಇದ್ದರೆ ಹೇಳಿ’ ಎಂದು ಹೇಳಿದ್ದರಂತೆ. ಆ ವಿಷಯವನ್ನು ಅನುಪಮರವರು ಅವರ ದೂರದ ಸಂಬಂಧಿಯಾಗಿದ್ದ ಬಾಪುದಿನೇಶ್ ರವರಿಗೆ ತಿಳಿಸಿದರಂತೆ. ಬಾಪು ಆಗಷ್ಟೇ ಬೆಂಗಳೂರಿನ ಚಿತ್ರಕಲಾಪರಿಷತ್ತಿನಿಂದ ಚಿತ್ರಕಲೆಯ ಪದವಿ ಮುಗಿಸಿ ಬಂದಿದ್ದರಿಂದ ವಿಷಯ ಕೇಳಿ ತೇಜಸ್ವಿಯವರನ್ನು ಭೇಟಿಯಾಗಲು ಅವರ ತೋಟಕ್ಕೆ ಬಂದಿದ್ದಾರೆ. ತೇಜಸ್ವಿ ಬಾಪುರವರವು ಜೊತೆಗೆ ಒಯ್ದಿದ್ದ ಅವರು ಬಿಡಿಸಿದ ಕೆಲವು ಚಿತ್ರಗಳನ್ನು ನೋಡಿ ‘ನಾಳೆಯಿಂದ ಕೆಲಸ ಶುರು ಮಾಡು’ ಎಂದರಂತೆ.
ಹಾಗೆ ತೇಜಸ್ವಿಯವರ ಪುಸ್ತಕಗಳಿಗೆ ಬೇಕಿದ್ದ ಸಾಂದರ್ಭಿಕ ಚಿತ್ರಗಳನ್ನು ಬಿಡಿಸುವ ಮೂಲಕ ಪ್ರಾರಂಭವಾದ ತೇಜಸ್ವಿ-ಬಾಪು ದಿನೇಶ್ ಒಡನಾಟ ಕ್ರಮೇಣ ಅದನ್ನೆಲ್ಲ ಮೀರಿ ಫಿಶಿಂಗ್, ಫೋಟೋಗ್ರಫಿ, ಪ್ರಕೃತಿಯಲ್ಲಿನ ಅಲೆದಾಟ ಹೀಗೆ ತೇಜಸ್ವಿಯವರ ಹಲವು ಆಸಕ್ತಿಗಳಲ್ಲಿ ಭಾಗಿಯಾದರಂತೆ ಬಾಪು ದಿನೇಶ್. ‘ಕೆಲಸ ಇದ್ದಾಗ ಕೆಲಸ, ಬಿಡುವಿದ್ದಾಗ ಫಿಶಿಂಗ್’ಹೀಗೆ ಹಲವಾರು ವರ್ಷ ತೇಜಸ್ವಿಯವರಿಗೆ ಆಪ್ತರಾಗಿ ಅವರ ಹಲವು ಆಸಕ್ತಿ ಹಾಗು ಸಾಹಸಗಳಲ್ಲಿ ಭಾಗಿಯಾಗಿದ್ದವರು ಬಾಪು ದಿನೇಶ್. ಬಾಪು ಪ್ರಾರಂಭದಲ್ಲಿ ತೇಜಸ್ವಿಯವರ ಪುಸ್ತಕಗಳಿಗೆ ಚಿತ್ರಗಳನ್ನು ಬಿಡಿಸುತ್ತಿದ್ದಾಗಿನ ಆಸಕ್ತಿಕರ ಘಟನೆಗಳನ್ನು ಬಾಪು ನಮ್ಮೊಂದಿಗೆ ಹಂಚಿಕೊಂಡು ಹಳೆಯ ನೆನಪುಗಳಿಗೆ ಜಾರಿದರು.
ಒಮ್ಮೆ ಬಾಪು ತೇಜಸ್ವಿಯವರ ಕೃತಿಯ ಮುಖಪುಟಕ್ಕೆಂದು ಒಂದು ಚಿತ್ರ ಬಿಡಿಸಿ ತೇಜಸ್ವಿಯವರಿಗೆ ತೋರಿಸಿದ್ದಾರೆ. ಆ ಚಿತ್ರವನ್ನು ನೋಡಿದ ತೇಜಸ್ವಿ ‘ಇದ್ಯಾಕೊ ಚೆನ್ನಾಗಿಲ್ಲ ಕಣಯ್ಯ, ಬೇರೆ ಚಿತ್ರ ಬಿಡಿಸು’ ಅಂತ ಹೇಳಿದ್ರಂತೆ. ಸರಿ ಆ ಚಿತ್ರವನ್ನು ಕಸದ ಬುಟ್ಟಿಗೆ ಎಸೆದು ಮತ್ತೆ ಗಂಟೆಗಟ್ಟಲೆ ಕೂತು ಮತ್ತೊಂದು ಚಿತ್ರ ಬಿಡಿಸಿ ತೇಜಸ್ವಿಯವರ ಮುಂದೆ ಹಿಡಿದರಂತೆ ಬಾಪು. ಆ ಚಿತ್ರವನ್ನು ವಿವರವಾಗಿ ನೋಡಿದ ತೇಜಸ್ವಿ ‘ಇದೂ ಯಾಕೊ ಚೆನಾಗಿಲ್ಲ ಕಣಯ್ಯ, ಮೊದ್ಲು ಬಿಡ್ಸಿದ್ಯಲ್ಲ ಆ ಚಿತ್ರಾನೇ ಚೆನ್ನಾಗಿದೆ. ಅದನ್ನೇ ತಗೊಂಡು ಬಾ’ ಎಂದರಂತೆ. ಬಾಪು ಕಸದ ಬುಟ್ಟಿ ಹುಡುಕಾಡಿ ಆ ಚಿತ್ರವನ್ನು ಆರಿಸಿಕೊಂಡು ಮುದುರಿಹೋಗಿದ್ದ ಕಾಗದವನ್ನು ಐರನ್ ಮಾಡಿ ತೆಗೆದುಕೊಂಡು ಹೋಗಿ ತೇಜಸ್ವಿಯವರಿಗೆ ಕೊಟ್ಟರಂತೆ. ‘ಹೀಗೆ ಸಾಗುತ್ತಿತ್ತು ನನ್ನ ಚಿತ್ರ ಬಿಡಿಸೊ ಕೆಲಸ’ ಎಂದು ಬಾಪು ೨೦ ವರ್ಷಗಳ ಘಟನೆಯನ್ನು ನೆನಪಿಸಿಕೊಂಡು ನಕ್ಕರು. ನಾನು ನಮ್ಮ ಹುಡುಗರು ಅವರ ನಗುವಿನ ಜೊತೆ ಸೇರಿಕೊಂಡೆವು.
ನಮ್ಮ ವ್ಯಾನು ಬಾಳೆಹೊನ್ನೂರು ತಲುಪಿತ್ತು. ಮಳೆ ನಿರಂತರವಾಗಿ ಸುರಿಯುತ್ತಿತ್ತು. ಸಮಯ ಸಂಜೆ ೪ ಗಂಟೆ ಸುಮಾರು ಆಗಿದ್ದಿರಬಹುದು. ಬಾಳೆಹೊನ್ನೂರಿನ ಬಳಿಯ ಭದ್ರಾ ಸ್ಟಾಪ್ ಎಂಬ ಕಾಫಿ ಡೇ ತರಹದ ದೇಸಿ ಹೋಟೆಲೊಂದರಲ್ಲಿ ಬ್ರೆಡ್ ಆಮ್ಲೆಟ್ ತಿಂದು, ಕಾಫಿ ಕುಡಿದು ಕಾಂಡ್ಯದ ಕಡೆಗಿನ ನಮ್ಮ ಪ್ರಯಾಣ ಮುಂದುವರೆಸಿದೆವು.
ಬಾಳೆಹೊನ್ನೂರಿನ ಕಾಫಿ ಶಾಪಿನಿಂದ ಕಾಂಡ್ಯದ ತೇಜಸ್ವಿಯವರ ಫಿಶಿಂಗ್ಪಾಯಿಂಟ್ ತಲುಪಲು ಇನ್ನು ಸುಮಾರು ಹತ್ತು ಕಿಲೋಮೀಟರ್ ಇತ್ತು. ನಮಗ್ಯಾರಿಗೂ ಪ್ರಯಾಣ ಬೋರೆನಿಸಲು ಅವಕಾಶವೇ ಇರಲಿಲ್ಲ. ಏಕೆಂದರೆ ದಾರಿಯುದ್ದಕ್ಕೂ ಬಾಪು ದಿನೇಶ್ ತೇಜಸ್ವಿ ನೆನಪುಗಳನ್ನು ಮೊಗೆಮೊಗೆದು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಬಾಪು ಹೀಗೆ ಮಾತನಾಡುತ್ತಾ ತೇಜಸ್ವಿಯವರ ಅಪರಿಮಿತ ಕುತೂಹಲ ಕುರಿತು ಮಾತನಾಡಲು ಪ್ರಾರಂಭಿಸಿದರು. ಅವರು ಹೇಳುತ್ತಿದ್ದ ತೇಜಸ್ವಿಯವರ ಕುತೂಹಲ ಕುರಿತ ಆ ಘಟನೆಗಳು ‘ಕುತೂಹಲದ ಪರಮಾವಧಿ’ಯಂತೆ ನಮಗನ್ನಿಸುತ್ತಿತ್ತು. ಅವರು ಹೇಳಿದ ಕೆಲ ಘಟನೆಗಳ ಸಾರ ಇಲ್ಲಿದೆ;
ತೇಜಸ್ವಿಯವರ ಮನೆಯಲ್ಲಿ ಅವರ ನಾಯಿ ಕಿವಿ ಸತ್ತುಹೋದ ಮೇಲೆ ಮರಿ ಅಂತ ಒಂದು ನಾಯಿ ಸಾಕಿದ್ರಂತೆ. ಬಾಪು ದಿನೇಶ್ ತೇಜಸ್ವಿಯವರ ಒಡನಾಟಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ಆ ಮರಿ ಅನ್ನುವ ನಾಯಿಗೆ ತುಂಬಾ ವಯಸ್ಸಾಗಿತ್ತಂತೆ. ಜೊತೆಗೆ ಅಗಾಗ ಅದು ಖಾಯಿಲೆ ಬೀಳ್ತಿತ್ತಂತೆ. ಅದನ್ನು ಪರೀಕ್ಷಿಸಿದ ವೈದ್ಯರು ಅದರ ಹೊಟ್ಟೆಯಲ್ಲಿ ಹುಣ್ಣಾಗಿದೆ ಎಂದು ಹೇಳಿದ್ದರಂತೆ. ಹೀಗೆ ದಿನೇ ದಿನೇ ಅದರ ಖಾಯಿಲೆ ಹೆಚ್ಚಾಗುತ್ತಿದ್ದದ್ದರಿಂದ ‘ಮರಿ’ಅನುಭವಿಸುತ್ತಿದ್ದ ನೋವು, ಹಿಂಸೆ ನೋಡಲಾಗದೆ ಅದಕ್ಕೆ ಡಾಕ್ಟರಿಂದ ಇಂಜೆಕ್ಷನ್ ಕೊಡಿಸಿ ನೆಮ್ಮದಿಯಾಗಿ ಪ್ರಾಣಬಿಡುವ ಹಾಗೆ ಮಾಡಬೇಕೆಂದು ನಿರ್ಧರಿಸಿದ ತೇಜಸ್ವಿ ಬಾಪು ದಿನೇಶರ ಕರೆದುಕೊಂಡು ಪರಿಚಯವಿದ್ದ ಪಶುವೈದ್ಯರೊಬ್ಬರನ್ನು ಕರೆತರಲು ಹೊರಟರಂತೆ. ಇವರಿಬ್ಬರು ಆಸ್ಪತ್ರೆ ತಲುಪಿದ ನಂತರ ತೇಜಸ್ವಿಯವರ ಶ್ರೀಮತಿ ರಾಜೇಶ್ವರಿರವರು ಇವರಿಗೆ ಫೋನ್ ಮಾಡಿ ‘ಡಾಕ್ಟರನ್ನು ಕರೆತರುವ ಅವಶ್ಯಕತೆ ಇಲ್ಲವೆಂದು, ‘ಮರಿ’ ಸತ್ತುಹೋಯಿತೆಂದು’ ತಿಳಿಸಿದ್ದಾರೆ. ‘ಮರಿ’ ಸತ್ತುಹೋದ ಸುದ್ದಿ ತಿಳಿದ ಮೇಲೂ ತೇಜಸ್ವಿ ಡಾಕ್ಟರನ್ನು ಅವರ ಕಿಟ್ ತೆಗೆದುಕೊಂಡು ಜೊತೆಯಲ್ಲಿ ಕರೆದುಕೊಂಡು ತೋಟಕ್ಕೆ ಬಂದರಂತೆ. ಬಾಪು ದಿನೇಶ್ ರಿಗೆ ‘ನಾಯಿ ಸತ್ತು ಹೋದ ಮೇಲೂ ಇವರು ಡಾಕ್ಟರನ್ನು ಯಾಕೆ ಕರೆದುಕೊಂಡು ಹೋಗುತ್ತಿದ್ದಾರೆ?’ ಎಂದು ತಿಳಿಯಲಿಲ್ಲವಂತೆ.
ತೋಟಕ್ಕೆ ಬಂದ ಡಾಕ್ಟರಿಗೆ ‘ಮರಿ’ಯ ಹೆಣ ತೋರಿಸಿ ಅದರ ಹೊಟ್ಟೆ ಬಗೆಯುವಂತೆ ಹೇಳಿದ್ದಾರೆ. ತೇಜಸ್ವಿ ಹಾಗೆ ಹೇಳಿದ ತಕ್ಷಣ ಬಾಪು ಡಾಕ್ಟರರ ಮುಖ ನೋಡಿದ್ದಾರೆ. ಪಾಪ ಆ ಬಡಪಾಯಿ ಡಾಕ್ಟರರ ಮುಖ ಬಿಳಿಚಿಕೊಂಡು ಹರಳೆಣ್ಣೆ ಕುಡಿದವರಂತೆ ಆದರಂತೆ. ಏಕೆಂದರೆ ‘ಮರಿ’ ನಾಯಿಗೆ ‘ಹೊಟ್ಟೆಯಲ್ಲಿ ಹುಣ್ಣಾಗಿದೆ’ ಎಂದು ಹೇಳಿದ್ದು ಇದೇ ಡಾಕ್ಟರ್. ಹಾಗಾಗಿ ತೇಜಸ್ವಿ ನಾಯಿಯ ಹೊಟ್ಟೆ ಬಗೆಯಲು ಹೇಳಿದ ಕೂಡಲೇ ಒಂದು ವೇಳೆ ನಾಯಿಯ ಹೊಟ್ಟೆಯಲ್ಲಿ ಹುಣ್ಣಾಗದಿದ್ದರೆ ಇವರಿಂದ ಬೈಸಿಕೊಳ್ಳಬೇಕಾಗುತ್ತದ್ದಲ್ಲ ಎಂದು ಹೆದರುತ್ತಲೇ ಮರಿಯ ಹೊಟ್ಟೆ ಬಗೆದು ನೋಡಿದ್ದರಂತೆ ಆ ಡಾಕ್ಟರ್. ಬಾಪು ಅವರ ಮುಖದ ಮೇಲಿನ ಭಯ, ಗಾಬರಿಯನ್ನು ಗಮನಿಸುತ್ತಲೇ ಇದ್ದರಂತೆ. ಆದರೆ ಅವರ ಪುಣ್ಯಕ್ಕೆ ನಾಯಿಯ ಹೊಟ್ಟೆಯಲ್ಲಿ ನಿಜವಾಗಿಯೂ ಹುಣ್ಣಾಗಿದ್ದದ್ದರಿಂದ ಆ ಡಾಕ್ಟರ್ ನೆಮ್ಮದಿಯ ನಿಟ್ಟುಸಿರು ಬಿಟ್ಟರಂತೆ! ತೇಜಸ್ವಿ ಅಷ್ಟಕ್ಕೂ ಸುಮ್ಮನಾಗದೆ ನಾಯಿಯ ಹೊಟ್ಟೆಯಲ್ಲಾಗಿದ್ದ ಹುಣ್ಣನ್ನು ಪರಿಶೀಲಿಸಿ ನಾಯಿಗಳಿಗೆ ಈ ರೀತಿ ಹುಣ್ಣು ಏಕಾಗುತ್ತದ್ದೆ? ಅದನ್ನು ನಿವಾರಿಸುವುದು ಹೇಗೆ?’ ಎಂದೆಲ್ಲ ಆ ಡಾಕ್ಟರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸಿಕೊಂಡರಂತೆ. ಆ ಸಂದರ್ಭದಲ್ಲಿ ಆ ಡಾಕ್ಟರ್ ರ ಮುಖದಲ್ಲಾಗುತ್ತಿದ್ದ ಬದಲಾವಣೆಗಳನ್ನು ಬಾಪು ತಮಾಷೆಯಾಗಿ ವಿವರಿಸಿ ಹೇಳಿದರು.
ಮತ್ತೊಂದು ಸಂದರ್ಭದಲ್ಲಿ ಒಂದು ರಾತ್ರಿ ಬಾಪು ತೇಜಸ್ವಿಯವರ ತೋಟದಲ್ಲಿದ್ದಾಗ ಅವರ ತೋಟದ ಒಂದು ಮೂಲೆಯ ಕಾಡಿನಿಂದ ಪ್ರಾಣಿಯೊಂದು ಯಾವುದೋ ಅಪಾಯದಲ್ಲಿ ಸಿಲುಕಿ ಊಳಿಡುತ್ತಿರುವುದು ಕೇಳಿಸಿದಾಗ ಅದೇನೆಂದು ನೋಡಲು ಬಾಪುರನ್ನು ಕರೆದುಕೊಂಡು ತೇಜಸ್ವಿ ಕಾಡೊಳಗೆ ಹೋಗಿದ್ದಾರೆ. ಅಲ್ಲಿ ನರಿಯೊಂದು ಬೇಟೆಗಾರರ ಉರುಳಿಗಿ ಸಿಕ್ಕು ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿತ್ತಂತೆ. ತಕ್ಷಣ ತೇಜಸ್ವಿ ತೋಟಕ್ಕೆ ವಾಪಸ್ ಹೋಗಿ ದೊಡ್ಡ ಗೋಣಿ ಚೀಲವೊಂದನ್ನು ತಂದು ಆ ನರಿಯನ್ನು ಉರುಳಿನಿಂದ ಬಿಡಿಸಲು ಮುಂದಾಗಿದ್ದಾರೆ. ಆ ನರಿ ಅಪಾರವಾದ ನೋವು ಸಿಟ್ಟಿನಲ್ಲಿ ಹತ್ತಿರ ಹೋದವರನ್ನು ಕಚ್ಚಲು ಬರುತ್ತಿತ್ತಂತೆ. ಹಾಗಾಗಿ ಬಾಪುರನ್ನು ಅದರ ಮುಂದೆ ಬಾಯಿಯ ಹತ್ತಿರ ಹೋಗಬಾರದೆಂದು ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ಆ ನರಿಯನ್ನು ಉರುಳಿನಿಂದ ಬಿಡಿಸಿ ಅದನ್ನು ಗೋಣಿಚೀಲದಲ್ಲಿ ಹಿಡಿದು ತೋಟಕ್ಕೆ ತಂದಿದ್ದಾರೆ. ಬಾಪು ‘ಸಾರ್, ಇನ್ಯಾಕ್ ಇದನ್ನ ಇಟ್ಕೊಂಡು, ಕಾಡಿಗ್ ಬಿಟ್ ಬಿಡೋಣ’ಎಂದಾಗ ‘ನಿನಗ್ ಗೊತ್ತಾಗಲ್ಲ ಸುಮ್ನೆ ಅದನ್ನ ತಗೊಂಡ್ ಬಾರಯ್ಯ’ ಎಂದು ಹೇಳಿ ಅವರ ಶ್ರೀಮತಿ ರಾಜೇಶ್ವರಿಯವರನ್ನು ಕರೆದರಂತೆ. ನರಿಯಿದ್ದ ಆ ಚೀಲವನ್ನು ಅವರ ತೋಟದಲ್ಲಿ ಕಾಫಿ ತೂಗಲು ಇಟ್ಟಿದ್ದ ತಕ್ಕಡಿಯ ಮೇಲಿಟ್ಟು ಅದರ ತೂಕ ಪರೀಕ್ಷಿಸಿ ‘ಪರ್ವಾಗಿಲ್ಲ ಕಣಯ್ಯ ಸರಿಯಾಗೆ ಬೆಳೆದಿದೆ. ದೊಡ್ಡದೇ ಇದು’ ಎಂದು ಆ ನರಿಯ ವಯಸ್ಸು ಅಂದಾಜಿಸಿ ಹೇಳಿದರಂತೆ. ನಂತರ ಅದರ ಕಾಲಿಗೆ ಸಿಕ್ಕಿಬಿದ್ದಿರಬಹುದಾದ ಉರುಳಿನ ಕಂಬಿಗಳನ್ನು ಬಿಡಿಸಿ ನಂತರ ಕಾಡಿಗೆ ಬಿಡೋಣ ಎಂದುಕೊಂಡು ನರಿಯಿದ್ದ ಗೋಣಿ ಚೀಲವನ್ನು ನಿಧಾನವಾಗಿ ಹಿಂದಿನಿಂದ ಸ್ವಲ್ಪ ಸ್ವಲ್ಪವೇ ಬಿಚ್ಚುತ್ತಿದ್ದರಂತೆ. ಸ್ವಲ್ಪ ಕಿಂಡಿ ಕಂಡಿದ್ದೇ ಆ ನರಿ ರಾಕೆಟ್ ನಂತೆ ಚೀಲದಿಂದ ಚಿಮ್ಮಿ ಹೊರಬಂದು ಹಿಂತಿರುಗಿಯೂ ನೋಡದಂತೆ ಕಾಡು ಬಿದ್ದು ಓಡಿಹೋಯಿತಂತೆ.
‘ಹೀಗೆ ತೇಜಸ್ವಿಯವ್ರಿಗೆ ಸುತ್ತಾಮುತ್ತಾ ಕಂಡಿದ್ದರಲೆಲ್ಲಾ ತುಂಬಾ ಕುತೂಹಲ ಇತ್ತು. ನಮ್ಮ ಕಣ್ಣಿಗ್ ಕಂಡು ನಾವು ಇಗ್ನೊರ್ ಮಾಡೊ ವಿಚಾರಗಳನ್ನೆಲ್ಲ ಅವ್ರು ಆಸಕ್ತಿಯಿಂದ ಗಮನಿಸಿ ಸ್ಟಡಿ ಮಾಡ್ತಿದ್ರು’ ಎಂದು ಬಾಪು ವಿವರಿಸುತ್ತಿದ್ದರು.
ಅಷ್ಟರಲ್ಲಿ ನಮ್ಮ ವ್ಯಾನು ಮುತ್ತೋಡಿ ಕಡೆಗೆ ಹೋಗುವ ತಿರುವು ರಸ್ತೆಯನ್ನು ಹಿಂದೆ ಬಿಟ್ಟು ದಟ್ಟಕಾಡಿನ ನಡುವಿನ ರಸ್ತೆಯಲ್ಲಿ ಓಡಿ ಬಾಪು ನಿಲ್ಲಿಸಲು ಹೇಳಿದ ಕಾಡಿನ ಮಧ್ಯದ ಒಂದು ಜಾಗದಲ್ಲಿ ನಿಂತಿತು.
‘ಜೋರಾಗ್ ಮಾತಾಡ್ಬೇಡಿ, ಫಾರೆಸ್ಟಿನವರು ನೋಡಿದ್ರೆ ಯಾಕೆ? ಏನು? ಅಂತೆಲ್ಲ ಕೇಳ್ತಾರೆ. ಒಳಗಡೆ ಹೋಗ್ಬೇಕು, ಹುಶಾರಾಗಿ ಬನ್ನಿ’ ಎಂದು ಎಚ್ಚರಿಕೆ ನೀಡುತ್ತಾ ಬಾಪು ಬಿದಿರಿನ ಬೇಲಿಯೊಂದನ್ನು ದಾಟಿ ಮುಂದೆ ಹೋಗುತ್ತಿದ್ದರು. ನಾವು ಅವರನ್ನು ಅನುಸರಿಸಿದೆವು. ಮಳೆಬಂದು ಕೆಸರಾಗಿದ್ದ ಕಾಡಿನ ನಡುವಿನ ಆ ಕಾಲುದಾರಿಯಲ್ಲಿ ನಡೆಯುತ್ತಾ ಹೋಗುತ್ತಿದ್ದಂತೆ ಭೋರ್ಗರೆದು ಹರಿಯುವ ನದಿಯ ಸದ್ದು ಕಿವಿಯ ಮೇಲೆ ಬೀಳುತ್ತಿತ್ತು. ಕೆಲವೇ ನಿಮಿಷಗಳಲ್ಲಿ ಸದ್ದಿನ ಜೊತೆಗೆ ತುಂಬಿ ಹರಿಯುತ್ತಿದ್ದ ಭದ್ರ ನದಿ ಕಾಣಿಸಿಕೊಂಡಿತು. ಮಾಗುಂಡಿಯ ಬಳಿ ಹರಿಯುವ ಭದ್ರಾ ನದಿಯೇ ಇಲ್ಲಿ ಖಾಂಡ್ಯದ ಬಳಿ ಹರಿಯುತ್ತದೆ. ಆದರೆ ಇಲ್ಲಿ ನದಿಯ ವಿಸ್ತಾರ, ಹರಿಯುವ ವೇಗ ಮಾಗುಂಡಿಗಿಂತಲೂ ಹೆಚ್ಚು. ಅಂತಹ ದಟ್ಟ ಕಾಡಿನ ನಡುವೆ ಅದೂ ಮಳೆ ಸುರಿಯುತ್ತಿದ್ದ ಆ ವೇಳೆಯಲ್ಲಿ ಅಲ್ಲಿ ಯಾರೂ ಇರಲಾರರು ಎಂದು ಭಾವಿಸಿಕೊಂಡಿದ್ದ ನಮ್ಮ ಊಹೆ ತಪ್ಪಾಗಿದ್ದು ಸ್ಥಳೀಯವಾಗಿ ತಯಾರಿಸಿಕೊಂಡ ಗಾಳ, ಗಾಳದ ದಾರ ಹಿಡಿದು ನಮಗೆ ಬೆನ್ನು ಮಾಡಿ ನದಿಯ ಕಡೆ ಮುಖ ಮಾಡಿ ಕುಳಿತ್ತಿದ್ದ ಮಧ್ಯವಯಸ್ಸಿನ ವ್ಯಕ್ತಿಯೊಬ್ಬನನ್ನು ಕಂಡ ಮೇಲೆ! ನಮಗಿರಲಿ ಬಾಪುರವರಿಗೂ ಆತನನ್ನು ಕಂಡು ಆಶ್ಚರ್ಯವಾಯಿತೆಂದು ಕಾಣುತ್ತದೆ, ಆ ವ್ಯಕ್ತಿಯನ್ನು ‘ಯಾರು? ಯಾವ ಊರು? ಎಷ್ಟೊತ್ತಿನಿಂದ ಇಲ್ಲಿ ಕುಳಿತ್ತಿದ್ದೀರಿ’ ಎಂದೆಲ್ಲ ವಿಚಾರಿಸಿದರು.
ಆ ವ್ಯಕ್ತಿ ‘ತಾನು ಆ ಕಾಡಿನ ಮಧ್ಯದ ಊರಿನವನೆಂದು, ಮಧ್ಯಾಹ್ನದಿಂದ ನದಿಗೆ ಗಾಳ ಹಾಕಿ ಕುಳಿತ್ತಿದ್ದೇನೆಂದು’ ಬಾಪುರವರಿಗೆ ತಿಳಿಸುತ್ತಿದ್ದ. ನಂತರ ನಮ್ಮ ಚಿತ್ರೀಕರಣ ಪ್ರಾರಂಭವಾಯಿತು. ನಾವು ನದಿಯ ಕೆಲ ಶಾಟ್ಸ್ ತೆಗೆದುಕೊಂಡ ನಂತರ ಬಾಪುರವರು ಮುಂದುವರೆದು ತೇಜಸ್ವಿಯವರ ಫಿಶಿಂಗ್ ಒಡನಾಟದ ಬಗ್ಗೆ ವಿವರಿಸಬೇಕೆಂದು ಕೇಳಿದೆವು. ಬಾಪು ಸ್ವಲ್ಪ ಹೊತ್ತು ಅವರು ತಂದಿದ್ದ ಮೀನು ಹಿಡಿಯುವ ರಾಡು, ರೀಲು, ಗಾಳ ಅದು ಕೆಲಸ ಮಾಡುವ ರೀತಿ ಇವನೆಲ್ಲಾ ವಿವರಿಸಿದರು. ನಂತರ ತೇಜಸ್ವಿ ಜೊತೆಗಿನ ಫಿಶಿಂಗ್ ದಿನಗಳ ನೆನಪುಗಳಿಗೆ ಜಾರಿದರು. ತೇಜಸ್ವಿಯವರೊಂದಿಗೆ ಫಿಶಿಂಗ್ ಆರಂಭಿಸಿದ ಪ್ರಾರಂಭದದಲ್ಲಿ ಬಾಪು ಎದುರಿಸಿದ ಘಟನೆಯೊಂದರ ಸಾರ ಹೀಗಿದೆ;
‘ಅದು ಬಾಪು ತೇಜಸ್ವಿಯವರ ಸಂಪರ್ಕಕ್ಕೆ ಬಂದ ಪ್ರಾರಂಭ. ಬಾಪು ತೇಜಸ್ವಿಯವರೊಂದಿಗೆ ಫಿಶಿಂಗಿಗೆ ಹೋಗಲು ಬಿಗಿಯಾದ ಪ್ಯಾಂಟು, ಬೂಟು, ಕೋಟು, ಹ್ಯಾಟು ಎಲ್ಲಾ ಹಾಕಿಕೊಂಡು ತೇಜಸ್ವಿಯವರ ಎದುರಿಗೆ ನಿಂತಿದ್ದಾರೆ. ತೀರ ಸರಳ ವ್ಯಕ್ತಿತ್ವದ ತೇಜಸ್ವಿ ಇವರ ಅವತಾರವನ್ನು ಕಂಡು ‘ಏನಯ್ಯ ಓಳ್ಳೆ ತಿಮಿಂಗಿಲ ಹಿಡ್ಕೊಂಡ್ ಬರೋನ್ ಥರ ಬಂದಿದ್ದಿಯಲ್ಲ. ಸರಿ ನಡಿ ಇವತ್ತು ತಿಮಿಂಗಿಲನೇ ಹಿಡ್ಕೊಂಡ್ ಬರೋಣ’ ಎಂದು ತಮಾಷೆ ಮಾಡುತ್ತಾ ಇವರನ್ನು ಮೊದಲ ಬಾರಿಗೆ ಖಾಂಡ್ಯಕ್ಕೆ ಮೀನು ಹಿಡಿಯಲು ಕರೆದುಕೊಂಡು ಬಂದಿದ್ದಾರೆ. ಮೊದಲು ಬಾಪುರವರಿಗೆ ಮೀನು ಹಿಡಿಯುವ ರಾಡು, ರೀಲನ್ನು ಬಳಸುವ ವಿಧಾನವನ್ನು ಹೇಳಿಕೊಟ್ಟು ನಂತರ ತೇಜಸ್ವಿ ತಮ್ಮ ಪಾಡಿಗೆ ತಾವು ಒಬ್ಬರೇ ದೂರ ಹೋಗಿ ನದಿಗೆ ಗಾಳ ಹಾಕಿ ಮೌನವಾಗಿ ಕುಳಿತಿದ್ದಾರೆ. ಬಾಪುರವರಿಗೆ ಇದೆಲ್ಲಾ ತುಂಬಾ ಹೊಸ ಅನುಭವಗಳಾದ್ದರಿಂದ ಜೋಶ್ ನಲ್ಲಿ ನದಿಗೆ ಗಾಳ ಎಸೆದು ಕೈಯಲ್ಲಿ ರಾಡು ಹಿಡಿದುಕೊಂಡು ಇಂಗ್ಲೀಷ್ ಸಿನಿಮಾಗಳ ನಾಯಕನ ಠೀವಿಯಲ್ಲಿ ದಂಡೆಯ ಮೇಲೆ ಕುಳಿತ್ತಿದ್ದಾರೆ. ಇವರ ಅದೃಷ್ಟವೋ ದುರಾದೃಷ್ಟವೋ ಗಾಳ ಹಾಕಿದ ಕೆಲವೇ ನಿಮಿಷಗಳಲ್ಲಿ ಭಾರಿ ಗಾತ್ರದ ಮೀನೊಂದು ಇವರ ಗಾಳಕ್ಕೆ ಸಿಕ್ಕಿ ಬಿದ್ದಿದೆ.
ಮೀನು ಗಾಳ ಕಚ್ಚಿದ ಸಂವೇದನೆ ಸಿಕ್ಕ ತಕ್ಷಣ ಮೀನು ಹಿಡಿಯುವ ರಾಡಿನ ಡ್ರ್ಯಾಗ್ ಬಿಗಿಮಾಡಿಬಿಡಬೇಕು. ನಂತರ ಡ್ರ್ಯಾಗನ್ನು ಸ್ವಲ್ಪ ಬಿಟ್ಟು ಮತ್ತೆ ಬಿಗಿ ಮಾಡಿ, ಮತ್ತೆ ಸಡಿಲ ಮಾಡಿ, ಮತ್ತೆ ಬಿಗಿ ಮಾಡಿ ಹೀಗೆ ಆಟವಾಡಿಸಿ ಮೀನನ್ನು ಸುಸ್ತು ಮಾಡಿ ಸೋಲಿಸಿ ದಡಕ್ಕೆ ಎಳೆದುಕೊಳ್ಳಬೇಕು. ಇದನ್ನೆಲ್ಲಾ ತೇಜಸ್ವಿ ಬಾಪುರವರಿಗೆ ಕೂಲಂಕುಷವಾಗಿ ವಿವರಿಸಿ ಹೇಳಿ ನಂತರ ಮಿನು ಅವರ ಪಾಡಿಗೆ ಅವರು ಮೀನು ಹಿಡಿಯುವ ಕೆಲಸದಲ್ಲಿ ತೊಡಗಿದ್ದಾರೆ. ಈಗ ಬಾಪುರವರ ಗಾಳಕ್ಕೆ ಸಿಕ್ಕ ಮೀನು ಗಾಬರಿಯಾಗಿ ಗಾಳ ಕಚ್ಚಿಕೊಂಡು ನೀರಿನೊಳಗೆ ಮಿಸೈಲ್ ನಂತೆ ವೇಗವಾಗಿ ಹೋಗಲು ಪ್ರಾರಂಭಿಸಿದೆ. ಬಾಪು ತಕ್ಷಣ ಕೈಯಲ್ಲಿದ್ದ ಡ್ರ್ಯಾಗ್ ಬಿಗಿ ಮಾಡಿದ್ದರೆ ಸರಿಯಾಗಿರುತ್ತಿತ್ತು. ಆದರೆ ಮೊದಲ ಬಾರಿ ಮೀನು ಗಾಳ ಕಚ್ಚಿದ ರೋಮಾಂಚಕ ಅನುಭವದಲ್ಲಿ ಬಾಪುರವರಿಗೆ ತೇಜಸ್ವಿ ಹೇಳಿಕೊಟ್ಟಿದ್ದ ವಿದ್ಯೆಯೆಲ್ಲವೂ ಸಂಪೂರ್ಣ ಮರೆತು ಹೋಗಿ ಏನು ಮಾಡಬೇಕೆಂದೇ ತೋಚದಾಗಿದೆ. ಮೀನು ಮಾತ್ರ ನೀರಿನೊಳಗೆ ನುಗ್ಗುತ್ತಲೇ ಇದೆ. ಕ್ರಮೇಣ ಬಾಪುರವರ ಕೈಯಲ್ಲಿನ ರಾಡಿನಲ್ಲಿದ್ದ ಮೀಟರುಗಟ್ಟಲೆ ದಾರ ದಾರ ಮುಗಿಯುತ್ತಾ ಬಂದಿದೆ. ಕೈಲಿದ್ದ ದಾರ ಮುಗಿಯುತ್ತಾ ಬಂದಂತೆ ಬಾಪುರವರ ಗೊಂದಲಗಳು ಹೆಚ್ಚಾಗಿ ಏನು ಮಾಡಬೇಕೆಂದು ತೋಚದೆ ಮೀನು ವೇಗವಾಗಿ ಎಳೆದುಕೊಂಡು ಹೋಗುತ್ತಿದ್ದ ದಾರವನ್ನೇ ಕೈಯಲ್ಲಿ ಹಿಡಿದಿದ್ದಾರೆ. ದಾರ ಬೆರಳುಗಳ ಮಧ್ಯೆ ಸಿಕ್ಕಿ ಮೀನು ಎಳೆಯುತ್ತಿದ್ದ ವೇಗಕ್ಕೆ ಕೈ ಕುಯ್ದುಹೋಗಿದೆ. ಜೊತೆಗೆ ದಾರ ರಾಡಿನಿಂದ ತುಂಡಾಗಿ ಮೀನು ಅದನ್ನು ನದಿಯೊಳಕ್ಕೆ ಎಳೆದುಕೊಂಡು ಮಾಯವಾಗಿದೆ.
ಸ್ವಲ್ಪ ಹೊತ್ತಿನ ನಂತರ ವಾಪಸ್ ಬಂದ ತೇಜಸ್ವಿ ಕೈಯೆಲ್ಲ ರಕ್ತಮಾಡಿಕೊಂಡು ಪಿಳಿಪಿಳಿ ಕಣ್ಣುಬಿಡುತ್ತಾ ನಿಂತಿದ್ದ ಬಾಪುರನ್ನು ಕಂಡು ‘ಏನಾಯಿತೆಂದು?’ ವಿಚಾರಿಸಿದಾಗ ಬಾಪು ನಡೆದದ್ದೆಲ್ಲವನ್ನೂ ಅವರಿಗೆ ವಿವರಿಸಿದ್ದಾರೆ. ತೇಜಸ್ವಿ ಬಾಪುರವರ ಮಾತು ಕೇಳಿ ‘ಏನಯ್ಯ ನೀನು…? ಅನ್ಯಾಯವಾಗಿ ದಾರಾನೂ ಕಳಿಸಿಬಿಟ್ಯಲ್ಲ ನೀರಿಗೆ. ಹೋಗ್ಲಿ ಬಿಡು’ ಎಂದು ಅವರನ್ನು ಸಮಾಧಾನಪಡಿಸಿದರಂತೆ. ಅಂತು ತಿಮಿಂಗಿಲ ಹಿಡಿಯುವವರಂತೆ ರೆಡಿಯಾಗಿ ಬಂದಿದ್ದ ಬಾಪು ಮೀನೊಂದರ ದೆಸೆಯಿಂದ ಅನುಭವಿಸಿದ ಫಜೀತಿಯನ್ನು ಮುಗ್ಧವಾಗಿ ನಗುತ್ತಾ ವಿವರಿಸಿದರು. ಹೀಗೆ ನಮ್ಮ ಚಿತ್ರೀಕರಣ ಮುಂದುವರೆಯುತ್ತಿತ್ತು. ದರ್ಶನ್, ಕ್ಯಾಮೆರದಲ್ಲಿ ಬಾಪು ಹೇಳುತ್ತಿದ್ದ ಪ್ರತಿಯೊಂದು ಮಾತನ್ನು ದಾಖಲಿಸುತ್ತಿದ್ದರು.
ಮಳೆಗಾಲವಾದ್ದರಿಂದ ಬೇಗನೆ ಕತ್ತಲಾವರಿಸಿತು. ನದಿಗೆ ದೇಸಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಆ ವ್ಯಕ್ತಿಯ ಗಾಳಕ್ಕೆ ಬರಿ ಸಣ್ಣ ಸಣ್ಣ ಮೀನುಗಳಷ್ಟೇ ಬೀಳುತ್ತಿದ್ದವು. ಗಾಳಕ್ಕೆ ಬಿದ್ದ ಆ ಸಣ್ಣ ಮೀನುಗಳನ್ನೇ ಆತ ತನ್ನ ಚೀಲದೊಳಕ್ಕೆ ಸೇರಿಸುತ್ತಿದ್ದ. ತೇಜಸ್ವಿ ಏನಾದರು ಇವನನ್ನು ನೋಡಿದ್ದರೆ ಸಣ್ಣ ಮೀನು ಹಿಡಿಯುವ ಇವನಿಗೆ ಸರಿಯಗಿ ಸರಿಯಾಗಿ ಬೈಯ್ದುನೀರಿಳಿಸದೆ ಬಿಡುತ್ತಿರಲಿಲ್ಲ ಎಂದುಕೊಂಡೆ. ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಕತ್ತಲಾವರಿಸಿತು. ಅಷ್ಟರಲ್ಲಿ ನಮ್ಮ ಚಿತ್ರೀಕರಣವೂ ಮುಗಿದಿತ್ತು. ಹಾಗಾಗಿ ಖಾಂಡ್ಯದ ಕಾಡಿನಿಂದ ಹೊರಡಲುವಾದೆವು. ಅಲ್ಲಿಂದ ಹೊರಡುವ ಮೊದಲು ಬಾಪು ಖಾಂಡ್ಯಕ್ಕೆ ಮೀನು ಹಿಡಿಯಲು ಬರುತ್ತಿದ್ದಾಗ ಆದ ಘಟನೆಯೊಂದನ್ನು ನಮಗೆ ತಿಳಿಸಿದರು. ಒಮ್ಮೆ ಬಾಪು ಮತ್ತು ತೇಜಸ್ವಿ ಖಾಂಡ್ಯಕ್ಕೆ ಮೀನು ಹಿಡಿಯಲು ತೇಜಸ್ವಿಯವರ ಸ್ಕೂಟರಿನಲ್ಲಿ ಹೋಗುತ್ತಿದ್ದಾರೆ. ತೇಜಸ್ವಿ ಸ್ಕೂಟರ್ ಓಡಿಸುತ್ತಿದ್ದರೆ ಬಾಪು ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದರಂತೆ. ಬಾಳೆಹೊನ್ನೂರಿನ ಬಳಿ ಬರುತ್ತಿದ್ದಾಗ ಹಳ್ಳದಲ್ಲಿ ಸ್ಕೂಟರ್ ಇಳಿದು ಎತ್ತಿ ಹಾಕಿದ್ದರಿಂದ ಹಿಂದೆ ಕುಳಿತಿದ್ದ ಬಾಪು ಸ್ಕೂಟರಿನಿಂದ ಕೆಳಗೆ ಬಿದ್ದಿದ್ದಾರೆ. ತೇಜಸ್ವಿ ಸ್ಕೂಟರ್ ನಿಲ್ಲಿಸಿ ಹಿದೆ ತಿರುಗಿ ನೋಡಿದಾಗ ಬಾಪು ಎದ್ದು ತರಚಿದ ಕೈಕಾಲನ್ನು ಉಜ್ಜಿಕೊಳ್ಳುತ್ತಿದ್ದರಂತೆ. ‘ಏನಯ್ಯ ನೀನು ಸರಿಯಾಗ್ ಸ್ಕೂಟ್ರು ಮೇಲೆ ಕೂರಕ್ ಬರೋದಿಲ್ವಲ್ಲ ನಿನಗೆ’ ಎಂದು ರೇಗಿ ‘ಸರಿ ಬಾ’ ಎಂದು ಅಲ್ಲೇ ಸಮೀಪದಲ್ಲಿದ್ದ ಯಾವುದೋ ಹಳೆಯ ಕಟ್ಟಡದ ಒಳಗಡೆ ಕರೆದುಕೊಂಡು ಹೋಗಿದ್ದಾರೆ. ಆ ಹಳೆಯ ಕಟ್ಟಡದಲ್ಲಿದ್ದ ವ್ಯಕ್ತಿಯೊಬ್ಬ ಇವರಿಬ್ಬರು ಬಂದದನ್ನು ನೋಡಿ ಹೊರಗಡೆ ಇಣುಕಿ ಏನು ಇಲ್ಲದ್ದೂ ಕಂಡು ಯಾರಿವರು ಎಂದು ಯೋಚಿಸುತ್ತಿದ್ದಾಗ ತೇಜಸ್ವಿ ಅಲ್ಲಿದ್ದ ಹತ್ತಿ, ಟಿಂಚರ್ ತೆಗೆದುಕೊಂಡು ಬಾಪುರವರ ಗಾಯಗಳಿಗೆ ಶುಶ್ರೂಷೆ ಮಾಡಿದ್ದಾರೆ. ಬಾಪುರವರಿಗೆ ಆಶ್ಚರ್ಯ, ‘ಈ ಕಾಡಿನ ಮಧ್ಯದಲ್ಲಿ ಯಾವುದಿದು ಆಸ್ಪತ್ರೆ?’ ಎಂದು.
ಎಲ್ಲ ಮುಗಿದ ಮೇಲೆ ಹೊರಗಡೆ ಬಂದು ನೋಡಿದಾಗ ಆ ಕಟ್ಟಡದ ಮೇಲೆ ‘ಪಶುವೈದ್ಯಕೀಯ ಆಸ್ಪತ್ರೆ’ ಎಂದು ಬರೆದಿದ್ದಂತೆ. ಬಾಪು ‘ಏನ್ ಸಾರ್ ದನದ ಆಸ್ಪತ್ರೆಗೆ ಕರ್ಕೊಂಡ್ ಬಂದ್ರಲ್ಲ’ ಎಂದು ಕೇಳಿದಾಗ ‘ಈಗಿನ್ ಕಾಲದಲ್ಲಿ ದನಗಳು, ನಾವು ಎಲ್ಲ ಒಂದೇ ಆಗಿದ್ದಿವಿ. ನಡಿಯಯ್ಯ ಹೋಗೋಣ’ ಎಂದು ಹೇಳಿ ಖಾಂಡ್ಯಕ್ಕೆ ಹೋಗಿ ಫಿಶಿಂಗ್ ಮಾಡಿಕೊಂಡು ಬಂದರಂತೆ.
ಇನ್ನು ಇಂತಹ ಹಲವು ಮರೆಯಲಾಗದ ಘಟನೆಗಳು ಬಾಪುರವರ ಬತ್ತಳಿಕೆಯಲ್ಲಿದ್ದವೇನೋ, ಆದರೆ ಸಮಯ ರಾತ್ರಿ ೮ ಗಂಟೆಯ ಮೇಲಾಗಿದ್ದರಿಂದ ಆ ಕಾಡಿನಲ್ಲಿ ಇರುವುದು ಅಸಾಧ್ಯವೆನ್ನಿಸಿ ಅಲ್ಲಿಂದ ಎಲ್ಲರೂ ಹೊರಡಲನುವಾದೆವು.
ಎಲ್ಲ ಮುಗಿದ ಕಡೆಯಲ್ಲಿ ಅದ್ಯಾಕೆ ಆ ಪ್ರಶ್ನೆ ಕೇಳಬೇಕೆನ್ನಿಸಿತೊ ಗೊತ್ತಿಲ್ಲ ಆದರೆ ಕಡೆಯದಾಗಿ ಬಾಪುರವರನ್ನು ಒಂದು ಪ್ರಶ್ನೆ ಕೇಳಿದೆ, ‘ಸರ್, ಡು ಉ ಮಿಸ್ ಹಿಮ್ ನೌ? ತೇಜಸ್ವಿ ಇಲ್ದೇ ಇರೊ ಸಮಯದಲ್ಲಿ ನಿಮಗೆ ಏನನ್ನಿಸುತ್ತದೆ?’
ಬಾಪು ಕೆಲವು ನಿಮಿಷ ಮೌನವಾದರು. ನನ್ನ ಪ್ರಶ್ನೆಗೆ ಏನು ಉತ್ತರಿಸದೆ ನಂತರ ಕಣ್ಣೆದುರಿಗೆ ಗಾಬರಿ ಬೀಳಿಸುವಂತೆ ಭೋರ್ಗರೆದು ಹರಿಯುತ್ತಿದ್ದ ಭದ್ರೆಯ ಕಡೆಗೊಮ್ಮೆ, ಅದರ ಸುತ್ತಲೂ ದಟ್ಟವಾಗಿ ಬೆಳೆದಿದ್ದ ಪಶ್ಜಿಮಘಟ್ಟದ ಕಾಡಿನ ಕಡೆಗೊಮ್ಮೆದೀರ್ಘವಾಗಿ ನೋಡುತ್ತಾ ಹಾಗೆ ನಿಂತರು.ಅವರ ಮನಸ್ಸಿನಲ್ಲಿ ಗಾಢವಾದದ್ದೇನೋ ಮಥಿಸುತ್ತಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ನಮ್ಮ ಹುಡುಗರಿಗೆ ಅವರನ್ನ ಡಿಸ್ಟರ್ಬ್ ಮಾಡಬೇಡಿ ಎಂದು ಸನ್ನೆ ಮಾಡಿದೆ. ಕಾಡಿನ ಮಧ್ಯದ ಸಂಜೆಗತ್ತಲಿನಲ್ಲಿ ನಮ್ಮ ನಡುವೆ ದೀರ್ಘವಾದೊಂದು ಮೌನ. ಆದರೂ ಕಿವಿಗಡಚ್ಚಿಕ್ಕುವ ಭದ್ರೆಯ ಆ ಭೋರ್ಗರೆತದಲ್ಲಿ ಬಾಪುರವರ ಮನಸ್ಸಿನ ಮಾತುಗಳು ನನಗೆ ಸ್ಪಷ್ಟವಿದೆ. ಮನಸ್ಸಿನ ಆ ಮಾತುಗಳಿಗೆ ಅಕ್ಷರ ರೂಪ ಕೊಟ್ಟು ಅದರ ಅಂದಗೆಡಿಸುವ ಕುಕಾರ್ಯ ಮಾಡುವಷ್ಟು ಅಸೂಕ್ಷ್ಮ ನಾನಾಗಲಾರೆ. ಬಹಳ ಹೊತ್ತಿನ ನಂತರ ಭದ್ರೆಯನ್ನ, ಖಾಂಡ್ಯದ ಆ ದಟ್ಟ ಅರಣ್ಯವನ್ನ ಬಲವಂತವಾಗಿ ಬಿಟ್ಟು ಹೊರಟು ಬಾಪುರನ್ನು ಅವರ ಬಂಕೇನಹಳ್ಳಿಯ ಮನೆ ಸೇರಿಸಿ ನಾನು ನಮ್ಮ ಹುಡುಗರು ಮೂಡಿಗೆರೆಯ ಐಬಿ ಸೇರಿಕೊಂಡೆವು. ದೇಹ ವಿಪರೀತ ದಣಿದಿದ್ದರೂ ಯಾಕೊ ನಿದ್ರೆ ಹತ್ತಿರ ಸುಳಿಯಲೊಲ್ಲದು. ಮನಸ್ಸಿನ ತುಂಬಾ ’ಡು ಯು ಮಿಸ್ ಹಿಮ್ ಸಾರ್?’ ಎಂಬ ಪ್ರಶ್ನೆ ಮತ್ತದಕ್ಕೆ ಪ್ರತಿಕ್ರಿಯೆಯಾಗಿ ಬಂದ ಮೌನ ಪ್ರತಿಕ್ರಿಯೆ ನನ್ನನ್ನು ಇನ್ನಿಲ್ಲದಂತೆ ಡಿಸ್ಟರ್ಬ್ ಮಾಡುತ್ತಿತ್ತು. ಬಾಪುರವರ ಆ ಮೌನಕ್ಕೆ ಏನರ್ಥ ಇರಬಹುದೆಂದು ಇವತ್ತಿಗೂ ಯೋಚಿಸುತ್ತಿದ್ದೇನೆ.
(ಮುಂದುವರೆಯುವುದು…)
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402

‍ಲೇಖಕರು G

18 August, 2013

3 Comments

  1. Vasundhara

    Sir,
    Matte, matte Tejaswi DVDna nodidini sir. nanna life alli avrna nodbeku antha tumba aase ettu. adre aglilla. nimma e prayathnakke hats off sir. nijvaglu miss madkotidivi Tejaswi avaranna.

  2. Parameshwara.K

    ವಸುಂಧರರವರೆ, ತೇಜಸ್ವಿ ನಮ್ಮಿಂದ ಎಲ್ಲೂ ಹೋಗಿಲ್ಲ. ಅವರ ವಿಚಾರಗಳಿಂದ ಅವರೆಂದೆದೂ ಜೀವಂತ.

  3. jayasimha.r mylanahalli

    ಮೌನ ಮಾತಿಗಿಂತ ಹೆಚ್ಚು ಮಾತನಾಡಿತ್ತದೆ.. ಅದನ್ನು ಕೇಳಲು ನಮಗೂ ಕಿವಿ ಇರಬೇಕಲ್ಲವಾ.. ಅದರದೇ ಕೊರತೆ. ಅಭಿನಂದನೆಗಳು ನಿಮಗೆ ಮೌನವನ್ನು ಕೇಳುವ ಮೌನವಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading