ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ತೆಹಮಿನಾ ಎಂಬ ಭರವಸೆ’ – ಚಿತ್ರಾ ಸಂತೋಷ್

ಚಿತ್ರಾ ಸಂತೋಷ್

 
ಪುಸ್ತಕದ ಹೆಸರು: ಆರನೇಯ ಹೆಂಡತಿಯ ಆತ್ಮಕಥೆ
ಪ್ರಕಾಶಕರು: ಸೃಷ್ಟಿ ನಾಗೇಶ್
ಮೂಲ: “ಮೈ ಫ್ಯೂಡಲ್ ಲಾರ್ಡ್’ -ತೆಹಮಿನಾ ದುರಾನಿ
ಕನ್ನಡಕ್ಕೆ ಅನುವಾದ: ರಾಹು


ಬಹಳ ಚೆನ್ನಾಗಿದೆ. ನೀವೂ ಓದಬೇಕು’’ ಗೆಳೆಯರೊಬ್ಬರು ಫೋನಾಯಿಸಿ ಹೇಳಿದ್ರು. ಈ ಪುಸ್ತಕ ಮೂರನೇ ಮುದ್ರಣವಾಗುತ್ತಿದೆ ಮತ್ತೊಬ್ಬರು ಹೇಳಿದ್ರು. ಹಾಗಾದ್ರೆ, “ಚೆನ್ನಾಗಿರಬೇಕು. ನಾವೂ ಓದಬೇಕು’’ ಅಂದುಕೊಂಡೆ. ಬಹುಶಃ ಚೆನ್ನಾಗಿದೆ, ಅದ್ಭುತವಾಗಿದೆ ಎಂದು ಯಾವಾಗಲೂ ನಾನೂ-ಎಲ್ಲರೂ ಬಳಸುವ ಪದಗಳಲ್ಲವೇ?
ಕಳೆದ ವಾರ ಪುಸ್ತಕ ಕೈಗೆತ್ತಿಕೊಂಡಾಗ ಸರಿಸುಮಾರು 600 ಪುಟಗಳ, ಇಷ್ಟೊಂದು ದಪ್ಪದ ಪುಸ್ತಕ ಓದುವ ತಾಳ್ಮೆ ನನಗಿದೆಯೇ? ಮೂರು ತಿಂಗಳ ಮಗು ಬೇರೆ…”ಹೇಗೆ, ಓದುವುದು?’ ಎಂದು ಅನಿಸಿತ್ತು. ಆದರೆ, ಈ ಸೋಮವಾರಕ್ಕೆ ಪುಸ್ತಕ ಓದಿ ಮುಗಿಸಿದ್ದೀನಿ. ಬಹಳಷ್ಟು ದಿನಗಳಿಂದ, ಲಘು ಬರಹಗಳೇ ನನಗಿಷ್ಟವಾಗುತ್ತಿವೆ…ಹೆಚ್ಚು ಪುಟಗಳುಳ್ಳ ಪುಸ್ತಕ ಓದುವ ತಾಳ್ಮೆ ಇಲ್ಲ, ಸಮಯದ ಅಭಾವವೂ ಹೌದು. ಆದರೆ, ಈ ಪುಸ್ತಕವನ್ನು ಒಂದು ವಾರದೊಳಗೆ ಓದಿ ಮುಗಿಸಿದ್ದೇನೆ ಎಂದರೆ, ಆ ಪುಸ್ತಕ ಅದೆಂಥಾ ಮೋಡಿ ಮಾಡಿರಬೇಕು ಹೇಳಿ? ಮೋಡಿ ಅನ್ನೊಂದಕ್ಕಿಂತಲೂ “ಅದೆಂಥಾ ಬದುಕು, ತೆಹಮಿನಾ ದುರಾನಿ’ಯವರದ್ದು ಅನಿಸಿತ್ತು.
ಕ್ಷಮಿಸಿ, ಇನ್ನೊಬ್ಬರ ಖಾಸಗಿ ಬದುಕು ನಮ್ಮನ್ನು ಹೇಗೆ ಸೆಳೆಯುತ್ತೆ? ತೆಹಮಿನಾಳ ವೈಯಕ್ತಿಕ ಬದುಕಿನಲ್ಲಿ ಬೀಸಿದ್ದ “ಮಹಾಚಂಡಮಾರುತ ಮುಸ್ತಾಫಾಖಾರ್’ ಆಕೆಯನ್ನು ಹಿಂಡಿ ಹಿಪ್ಪೆಯಾಗಿಸಿದ್ದ ಕಥೆ ನನ್ನನ್ನು ಹೇಗೆ ಓದಿಸಿಕೊಂಡು ಹೋಯಿತು? ಎಂದುಕೊಂಡಾಗ ನನ್ನ ಬಗ್ಗೆ ನನಗೆ ಒಂಥರಾ ಅನಿಸಿಬಿಟ್ಟಿತು, ಛೇ! ಒಬ್ಬ ಮನುಷ್ಯನ ಖಾಸಗಿ ಬದುಕು , ಮತ್ತೊಬ್ಬ ಮನುಷ್ಯನಿಗೆ ಎಂಥ ಆಸಕ್ತಿಯ ಸಂಗತಿಯಾಗುತ್ತೆ ಎಂದನಿಸಿ ಮನಸ್ಸೊಳಗೆ ಒಂದು ರೀತಿಯ ನೋವು ಮಡುಗಟ್ಟಿಬಿಟ್ಟಿತು. ಇದು ಸಹಜ ಬಿಡಿ.
“ಮೈ ಫ್ಯೂಡಲ್ ಲಾರ್ಡ್’ ಎಂದು ಇಂಗ್ಲೀಷ್ ನಲ್ಲಿದ್ದ ಆ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದು ರಾಹು. ಪಾಕಿಸ್ತಾನದ ರಾಜಕೀಯ-ರಾಜಕಾರಣಿ-ಅಲ್ಲಿನ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿಗತಿ, ಜೊತೆಗೆ ಪುರುಷನೊಬ್ಬನ ಭಂಡತನ
( ಅವನಂಥ ಪುರುಷರು ಭೂಮಿ ಮೇಲೆ ಯಾರೂ ಇರಲಾರರು, ಇರಲೂಬಾರದು) ಈ ಪುಸ್ತಕದಲ್ಲಿದೆ. ತನ್ನ ಆರನೇಯ ಹೆಂಡತಿಯಾಗಿ ತೆಹಮಿನಾಳನ್ನು ಪಡೆದಿದ್ದ ಪಾಳೇಗಾರಿಕೆ ಪ್ರಭು ಮುಸ್ತಫಾಖಾರ್ , ಬಳಿಕ ಅವಳನ್ನು ನಡೆಸಿಕೊಂಡ ರೀತಿ ಇದೆಯಲ್ಲಾ…ಅಬ್ಬಬ್ಬಾ! ಯಾವ ಹೆಣ್ಣಿಗೂ ಅಂಥ ಸ್ಥಿತಿ ಬರಕೂಡದು. ಬಹುಶಃ ತೆಹಮಿನಾ ಆಗಿದ್ದಕ್ಕೆ ಅವನನ್ನು ಸಹಿಸಿಕೊಂಡು ಬದುಕಿ-ಬಾಳಿದ್ದಳು ಅನಿಸುತ್ತೆ. ಬೇರ್ಯಾವ ಹೆಣ್ಣಾಗಿದ್ದರೂ ಅವನ ಪಾಪದ ಕೊಡದಲ್ಲಿ ಮತ್ತೆ ಮತ್ತೆ ಬಿದ್ದು ಒದ್ದಾಡುವ ಸ್ಥಿತಿಯನ್ನು ಎದುರಿಸಲು ಸಿದ್ದಳಿರುತ್ತಿರಲಿಲ್ಲ.
ಮುಸ್ತಫಾ ಲೋಕದ ಕಣ್ಣಿಗೆ ಮಹಾನ್ ನಾಯಕ. ಚತುರ ರಾಜಕಾರಣಿ. ಮಹಾ ಬುದ್ಧಿವಂತ. ಆದರೆ, ತೆಹಮಿನಾಳ ಪಾಲಿಗೆ ಆತ ಹಗರಿರುಳೂ ಕಾಡುತ್ತಾ ಕಾಟ ಕೊಡುವ ಪಿಶಾಚಿ, ವಿಕೃತ ಕಾಮಿ. ಹೆಂಡತಿಯನ್ನು ಬಟ್ಟೆ ಬಿಚ್ಚಿ ನಿಲ್ಲಿಸಿ ಅತ್ಯಂತ ನಿರ್ದಯವಾಗಿ ಬಾಸುಂಡೆ ಬರೋ ತನಕ ಬಡಿಯುವ ಮಹಾಪಾಪಿ ಗಂಡ. ಪ್ರತಿದಿನವೂ ಅವಳು ಅವನದ ನರಕದ ಸೆರೆಯಾಳು. ಒಮ್ಮೊಮ್ಮೆ ಗಂಡನ ವಿಕೃತಕ್ಕೆ ತಿರುಗಿ ಮಾತಾಡಿದಾಗ ಪ್ರಜ್ಞೆ ತಪ್ಪುವಂತೆ ಹೊಡೆದ ಆತ, ಅವಳು ತನ್ನಿಂದ ದೂರಾಗುತ್ತಾಳೆ ಎಂದಾಗ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದ. ಅವಳ ಕಾಲಿಗೆರಗಿ ಕ್ಷಮೆ ಕೇಳುತ್ತಿದ್ದ. ಮರುದಿನ ಮತ್ತದೇ ಹಳೇ ಚಾಳಿ…ಇದನ್ನೇ ನಾಲ್ಕು ಮಕ್ಕಳಾಗುವ ತನಕವೂ ಸಹಿಸಿಕೊಂಡು ಬದುಕಿದ್ದವಳು ತೆಹಮಿನಾ. ಬೆಳ್ಳಿ ಚಿನ್ನದ ಚಮಚಗಳನ್ನೇ ಬಾಯಿಗಿಟ್ಟುಕೊಂಡು ಹುಟ್ಟಿದ ತೆಹಮಿನಾ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್ ಗವರ್ನರ್ ಮಗಳು. ಬಡತನವನ್ನೇ ಕಾಣದ ತೆಹಮಿನಾ ಮುಸ್ತಫಾನ ಗುಲಾಮಳಂತೆ ಬದುಕಬೇಕಾದ ಸ್ಥಿತಿ. ಇನ್ನೊಂದೆಡೆ ಬಾಲ್ಯದಲ್ಲಿ ಅಮ್ಮನ ಕಣ್ಣಿಗೆ ಕಪ್ಪೆಂದೆನಿಸಿಕೊಂಡು ತಿರಸ್ಕಾರಕ್ಕೆ ಒಳಗಾದವಳು….!!
ಓದಿನುದ್ದಕ್ಕೂ ತೆಹಮಿನಾ ಒಂಚೂರು ಮುಚ್ಚಿಡದೆ ಬದುಕನ್ನು ಬಿಚ್ಚಿಟ್ಟಿದ್ದಾಳೆ. ತಾನು ಮಾಡಿದ ತಪ್ಪನ್ನೂ ಹೇಳಿಕೊಂಡಿದ್ದಾಳೆ.
ಯಾರೊಬ್ಬರ ಬದುಕು ನಮ್ಮೆದುರು ತೆರೆದುಕೊಂಡಾಗ “ಇಂಥವರು’’ ಅದೆಷ್ಟು ಜನ ಇದ್ದಾರೋ ಅಂದುಕೊಳ್ಳೋದು ಸಹಜ. ಆದರೆ, ತೆಹಮಿನಾಳ ಆತ್ಮಕಥೆ ಓದಿದಾಗ ನನಗನಿಸಿದ್ದು, ತೆಹಮಿನಾಳಂಥ ಬದುಕನ್ನು ಕಂಡ ಇನ್ನೊಬ್ಬ ಮಹಿಳೆ ಇರಲಿಕ್ಕಿಲ್ಲ. ಈಕೆ ಈಗಲೂ ಹೆಣ್ಣುಮಕ್ಕಳಿಗಾಗಿ, ನೊಂದ ಸಮಾಜಕ್ಕಾಗಿ ಬದುಕನ್ನು ಮುಡಿಪಿಟ್ಟಿದ್ದಾರೆ. ಬದುಕಿನಲ್ಲಿ ಅದೆಂಥಾ ಭರವಸೆ ಇಟ್ಟುಕೊಂಡಿದ್ದಳು ಹೆಣ್ಣುಮಗಳು…? ಆಕೆಯ ಪತಿಯಾಗಿದ್ದ ಮುಸ್ತಫಾಖಾರ್ ನಂಥ ‘ಹೊಲಸು’ ಮನುಷ್ಯ ಇನ್ನೊಬ್ಬನಿರಲಿಕ್ಕಿಲ್ಲ’ ಎಂದು, ಯಾವ ಕ್ಷಮೆಗೂ ಅನರ್ಹನಾದ ಆ ಮನುಷ್ಯ ಇನ್ನೂ ಬದುಕಿದ್ದಾನೆ ಎಂದರೆ….??????!!!!!!
ಕೊನೆ ಮಾತು: ತೆಹಮಿನಾಳ ಬದುಕನ್ನು ಕನ್ನಡಕ್ಕೆ ತಂದಿದ್ದು ಖುಷಿಯ ವಿಚಾರ. ಆಕೆಯ ಬದುಕು ನೊಂದ ಹೆಣ್ಣುಮಕ್ಕಳ ಬದುಕಿಗೆ ಆಶಾಕಿರಣವಾದೀತು. ಕನ್ನಡವನ್ನು ಇಷ್ಟಪಟ್ಟು ಓದುವವರಿಗೆ ಈ ಪುಸ್ತಕ ಅನುವಾದಗೊಂಡಿದ್ದು ಒಳ್ಳೆದೇ ಆಯಿತು. ಅನುವಾದದಲ್ಲಿ ಕೆಲವೊಂದು ಪದಗಳು ಓದುವಾಗ ಪಕ್ಕಾ ಗ್ರಂಥ ಭಾಷೆ ಅನಿಸಿದರೂ, ಸಲೀಸು ಓದಿಗೆ ಅಡ್ಡಿಯಿಲ್ಲ. ನಡು ನಡುವೆ ಇಣುಕುವ ಪಾಕಿಸ್ತಾನದ ರಾಜಕಾರಣದ ವಿದ್ಯಮಾನಗಳು, ರಾಜಕೀಯ ಅಪ್ರಿಯರಿಗೆ ಬೋರ್ ಹೊಡಿಸಲೂಬಹುದು. ಆದರೆ, ಇಷ್ಟಪಟ್ಟು ಓದುವವರಿಗೆ ಇದೇನು ದೊಡ್ಡ ವಿಷ್ಯವಲ್ಲ.
 

‍ಲೇಖಕರು G

15 December, 2014

7 Comments

  1. Anonymous

    naanu odiruve.manakalakuva pusthaka.jothege ee pusthaka nondavarige ,ashaahayaka mahileyarige,bharavaseyannu ,aathmavishvaasvannoo thumbaballavu.illi raahu avaru kooda thumba adbhuthavaagi manasannu hididittukondu oduvanthe anuvaadisiddare.

  2. smitha Amrithraj

    naanu odiruve. yeerigoo odalu kooda koduttiruve.asaahayaka mahileyarige ee pusthaka bharavaseyannu,aatmavishvaasavannoo thumbaballavu.raahu avaru kooda mansannu hididittu kondu oduvanthe adbhuthavaagi anuvaadisiddare.

  3. ಸತ್ಯನಾರಾಯಣ

    ನಾಗೇಶ್ ನನಗೂ ಆ ಪುಸ್ತಕ ಕಳುಹಿಸಿ ಓದಿ ನೋಡಿ ಅಂದಿದ್ದ. ಸಮಯಾಭಾವದಿಂದ ಹಾಗೂ ಅದರ ಗಾತ್ರವನ್ನು ಕಂಡು ಸುಮ್ಮನೆ 1 ತಿಂಗಳು ಇಟ್ಟಿದ್ದೆ (ಆ ಅವಧಿಯಲ್ಲಿ ನನ್ನ ತಂದೆ ಅದನ್ನು ಓದಿ ಮುಗಿಸಿದ್ದರು). ನಂತರ ಅದನ್ನು ಕೈಗೆತ್ತಿಕೊಂಡ ಮೇಲೆ ಕೇವಲ ಒಂದೂವರೆ ದಿನದಲ್ಲಿ ಓದಿ ಮುಗಿಸಿದ್ದೆ! ಅಷ್ಟರ ಮಟ್ಟಿಗೆ ಪುಸ್ತಕ ಚೆನ್ನಾಗಿ ಓದಿಸಿಕೊಂಡು ಹೋಯಿತು. ಅನುವಾದ ಚೆನ್ನಾಗಿದೆ.
    ಇದೊಂದು ಅತ್ಯುತ್ತಮ ಪುಸ್ತಕ. ಪಾಕಿಸ್ತಾನದ ಅಂತರಂಗವನ್ನು ಅರಿಯಬೇಕಾದರೆ ಇಂತಹ ಪುಸ್ತಕವನ್ನು ಓದಲೇ ಬೇಕು. ಪಾಕಿಸ್ತಾನವನ್ನು ಅಲ್ಲಿಯ ಬದುಕನ್ನು ಕುರಿತು ಭಾರತೀಯ ಲೇಕಕರು ಎಷ್ಟೇ ಅದ್ಭುತವಾಗಿ ಬರೆಯಬಲ್ಲವರಾಗಿದ್ದರೂ, ಪಾಕಿಸ್ತಾನದ್ದೇ ಒಬ್ಬ ಬರಹಗಾರ್ತಿಯ ಬರಹ ಹೆಚ್ಚು ಹೆಚ್ಚು ವಾಸ್ತವಿಕತೆಯಿಂದ ಕೂಡಿರುತ್ತದೆ. ಇತ್ತೀಚಿಗೆ ಪಾಕಿಸ್ತಾನದ ವಿದೇಶಾಂಗ ಸಚಿವೆಯಾಗಿದ್ದ ರಬ್ಬಾನಿ ಖರ್ ಎಂಬಾಕೆಯೂ ಈ ಮುಸ್ತಾಫಾ ಖರ್ ನ ಸಂಬಂಧಿಯಂತೆ!
    ಅದೇ ಲೇಖಕಿಯ ‘ಪೀಠಾಧಿಪತಿಯ ಪತ್ನಿ’ ಪುಸ್ತಕ ಕೂಡಾ ನನ್ನ ಓದಿಗೆ ಕಾಯುತ್ತಿದೆ. ನಮ್ಮ ತಂದೆ ಓದುತ್ತಿರುವುದರಿಂದ ನಾನಿನ್ನೂ ಕೈಗೆತ್ತಿಕೊಂಡಿಲ್ಲ.

  4. KB Shadaksharappa

    I have baught almost all books of Rahu Sir.
    I have made may of my frineds and relatives to read them.
    Prof. KB shadaksharappa

  5. srushtinagesh

    ಇದು ನಿಜಕ್ಕು ಅದ್ಭುತವಾದ ಅತ್ಮಕಥನ. ಕನ್ನಡದ ಮಟ್ಟಿಗೆ ಇದು ಹೊಸ ತರಹದ ಅತ್ಮಕಥನ

  6. ಅವಿರತ ಹರೀಶ್

    ಇದು ಪಾಕಿಸ್ತಾನದ ರಾಜಕೀಯ ವ್ಯವಸ್ತೆ ಮತ್ತು ಅಲ್ಲಿನ ಪುರುಷ ಪ್ರಾಧಾನ್ಯ ವ್ಯವಸ್ಥೆಯಲ್ಲಿ ನಲುಗಿದ ತೆಹಮಿನಳ ಹೋರಾಟದ ಬದುಕನ್ನು ಸಮಗ್ರವಾಗಿ ಕಟ್ಟಿಕೊಟ್ಟಿದೆ. ಪ್ರಕಾಶನ ಸ್ೃಷ್ಟಿ ನಾಗೇಶ್ ಅಭಿನಂಧನೆಗಳು

  7. mmshaik

    naanuu odabeku eega…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading