
ರಾಜಾರಾಂ ತಲ್ಲೂರು
ಕರ್ನಾಟಕಕ್ಕೆ ಈಗ ತುರ್ತಾಗಿ ಬೇಕಿರುವುದು ಒಂದು ರೋಚಕವಾದ ತಿರುವು. ರಾಜ್ಯದ ಸಾಮಾಜಿಕ, ನೈತಿಕ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಈ ತಿರುವು ಈಗ ಅನಿವಾರ್ಯವೆನ್ನಿಸುವ ಸ್ಥಿತಿ ಬಂದಿದೆ.
“ಸ್ಪಿನ್ ಡಾಕ್ಟರ್ ಗಳು” ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅನಿವಾರ್ಯ. ಇಂದು ಸೋಷಿಯಲ್ ಮೀಡಿಯಾಗಳು ನಾಡಿನ ಕೆನೆಪದರವನ್ನು ಆವರಿಸಿಕೊಂಡಿರುವ ರೀತಿಯಲ್ಲಂತೂ ಸ್ಪಿನ್ ಡಾಕ್ಟರ್ ಗಳ ಸೇವೆ ಅತ್ಯಗತ್ಯ. ದುರಂತ ಎಂದರೆ, ಈವತ್ತು ಈ ಸ್ಪಿನ್ ಡಾಕ್ಟರ್ ಗಳು ತಮ್ಮ ತಮ್ಮ ಕೋರೆ-ದಾಡೆಗಳನ್ನೆಲ್ಲ ಮುಸುಕಿನೊಳಗೆ ತುರುಕಿಸಿಕೊಂಡು ನಾಡಿನ ಮಾಧ್ಯಮದ ಕೋಣೆಗಳನ್ನು ಹೊಕ್ಕು, ಅಲ್ಲಿ ನಿಯಂತ್ರಣ ಸಾಧಿಸಿರುವುದು.
“ಕಪ್ಪು-ಬಿಳಿ” ಸಾಮಾಜಿಕ ತೀರ್ಮಾನಗಳಿಗೆ “ಬಹು ವರ್ಣಗಳ” ಆಯಾಮ ಕೊಡಬೇಕಾದ ಮಹತ್ತರ ಜವಾಬ್ದಾರಿ ಇರುವ ಸ್ಪಿನ್ ಡಾಕ್ಟರ್ ಗಳೆಲ್ಲ ಈಗ ಹಿಮ್ಮುಖ ಹೋಗಲಾರಂಭಿಸಿದ್ದಾರೆ. ಸಮಾಜ “ಸಂಕೀರ್ಣ” ಎಂದು ಅರ್ಥಮಾಡಿಕೊಂಡಿರುವ ಸಮಸ್ಯೆಗಳನ್ನೂ ‘ಅದು ಹಾಗಲ್ಲ ; ಬರೇ ಕಪ್ಪು ಬಿಳಿ’ ಎಂದು ಚೀರಲಾರಂಭಿಸಿದ್ದಾರೆ. ಇದು ಅಪಾಯಕಾರಿ ಸನ್ನಿವೇಶ. ಅಂತಿಮ ಗುರಿಯ ಅರಿವಿಲ್ಲದೆ ಕ್ಷಣಕ್ಷಣಕ್ಕೂ ರೋಚಕ ನವೆಯ ಅನುಭವ ಕೊಡುವ ಈ rat raceಗೆ ಸಮಾಜದ ಸ್ವಸ್ಥ ಮನಸ್ಸುಗಳೆಲ್ಲ ಬಲಿಪಶುಗಳಾಗುತ್ತಿದ್ದಾರೆ.
ಇಂತಹದೊಂದು ಅಸ್ವಾಸ್ಥ್ಯಕ್ಕೆ ಲೇಟೆಸ್ಟ್ ಉದಾಹರಣೆ – ಮಡಿಕೇರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಆತ್ಮಹತ್ಯೆ. ಈ ಅಧಿಕಾರಿಯ ಸಾವಿಗೆ ರಾಜಕೀಯ, ಅಧಿಕಾರಶಾಹಿ ಒತ್ತಡಗಳು ಕಾರಣವಾಗಿರಬಹುದು. ಜೊತೆಗೆ, ಅಧಿಕಾರಿ ತನ್ನ ಸೈದ್ಧಾಂತಿಕ ನಂಬಿಕೆಗಳ ಕಾರಣದಿಂದಾಗಿ ಕರ್ತವ್ಯ ನಿರ್ವಹಣೆಯಲ್ಲಿ ಎಡವಿರಬಹುದು. ಆದರೆ, ಅಂತಿಮವಾಗಿ ಅದು ಸೂಚಿಸುತ್ತಿರುವುದು – ವ್ಯವಸ್ಥೆ ಕೊಳೆತಿದೆ ಎಂಬುದನ್ನೇ .
ನಮ್ಮ ಸ್ಪಿನ್ ಡಾಕ್ಟರ್ ಗಳಿಗೆ ಇದು ಬೇಕಾಗಿಲ್ಲ. ಅವರಿಗೆ ಕಳುಕು ಎಬ್ಬಿಸಲು ಅಗತ್ಯವಿರುವ ಅಸ್ತ್ರಗಳು ಸಿಕ್ಕಿವೆ. ಇದರಲ್ಲೇ ಕಚ್ಚಾಟ-ಗುದ್ದಾಟ ನಡೆದು, ಕೊನೆಯಲ್ಲಿ ಇಡಿಯ ಪ್ರಕರಣ ನಿಂತಲ್ಲೇ ಮಡುಗಟ್ಟಿ, ರಾಜಕೀಯಕ್ಕೆ ದಾಳವಾಗಿ ಹೋಗಲಿದೆ. ಇಲ್ಲಿಂದ ಕಲಿಯಲು ಯಾವ ಪಾಠವೂ ಉಳಿದಿರುವುದಿಲ್ಲ.
ಇಲ್ಲಿ ನಮ್ಮ-ನಿಮ್ಮ ಸಾಮಾನ್ಯ ಕಣ್ಣುಗಳಿಗೆ ಕೂಡ ಸ್ಪಷ್ಟವಾಗಿ ಕಾಣುವ ಕೆಲವು ಅಂಶಗಳಿವೆ. ಅದನ್ನು ತಿಳಿಯಲು ಅರಮನೆಗೇ ಹೋಗಬೇಕೆಂದೇನಿಲ್ಲ; ನೆರೆಮನೆಯೂ ಸಾಕಾಗುತ್ತದೆ. ನೆಮ್ಮದಿಯ ನಾಳೆಗಾಗಿ ತುರ್ತಾಗಿ ರಿಪೇರಿ ಆಗಲೇ ಬೇಕಿರುವ ಅಂತಹ ಕೆಲವು ಅಂಶಗಳೆಂದರೆ:
1. ಸಾರ್ವಜನಿಕ ಬದುಕಿನಲ್ಲಿ ನೈತಿಕತೆಯ ಕೊರತೆ.
2. ದುಡ್ಡಿನ ದರ್ಬಾರು ಏನು ಮಾಡಿದರೂ ಜಯಿಸಿಕೊಳ್ಳುತ್ತದೆ ಎಂಬ ಹುಂಬ ನಂಬಿಕೆ.
3. ಬದುಕಲು ಭ್ರಷ್ಟಾಚಾರ ಅನಿವಾರ್ಯ ಎಂಬ ತೀರ್ಮಾನ.
4. ನಾನು ಮಾತ್ರ ಬದುಕಬೇಕು, ಉಳಿದವರು ಹಾಳಾಗಿ ಹೋಗಲಿ ಎಂಬ ಹಪಾಹಪಿ.
5. ಮಾಡುವ ಕೆಲಸದಲ್ಲಿ ಶ್ರದ್ಧೆಯ ಅಭಾವ.
ಸ್ಪಿನ್ ಡಾಕ್ಟರುಗಳಿಗೆ ಸಮಯ, ತಾಕತ್ತು ಇದ್ದರೆ ಇದರಲ್ಲಿ ಯಾವುದಾದರೂ ಅಂಶಗಳಲ್ಲಿ “ರೋಚಕ” ಬದಲಾವಣೆ ತರಲಿ. ನಾಡಿನ ಬದುಕು ಸ್ವಲ್ಪವಾದರೂ ಸಹನೀಯ ಆದೀತು.
[the_ad_placement id=”post-content”]




0 Comments