ತುಟಿಯ ಘಮ ಸಿಗರೇಟು ಬಿಟ್ಟಿದ್ದಕ್ಕೆ ಸಾಕ್ಷಿ ಹೇಳಿತ್ತು..

ಶಮ ನಂದಿಬೆಟ್ಟ

ಬಹು ದಿನಗಳಿಂದ ಮನದಾಳದಲ್ಲಿ ಹಾಗೇ ಬಚ್ಚಿಟ್ಟಿದ್ದ ಅಪೂರ್ಣ ಕನಸಿನ ತುಂಡೊಂದನ್ನು ಎದೆಗೊತ್ತಿಕೊಂಡು ನೇವರಿಸಿದಂತೆ ಪಕ್ಕದ ಸೀಟಿನಲ್ಲಿ ಕೂತಿದ್ದ ಅಪ್ಸರೆಯನ್ನು ನೇವರಿಸಿದ ಅವನು. ಹಳೆಯ ಗಮ್ಯ ಹೊಸ ದಾರಿ ಎರಡೂ ಜತೆಯಾಗಿ ಕೈ ಹಿಡಿದು ಸಾಗಿದಂತೆ. ಮಾತಾಡದೇ ಮೆಲ್ಲಗೇ ಬಿಡಿಸಿಕೊಂಡಳು. ಅವನ ಕಣ್ಣ ಹೊರಳಿಕೆ, ಸಲಿಗೆಯ ಸಣ್ಣದೊಂದು ಕದಲಿಕೆ, ಅಪ್ಯಾಯತೆಯ ನೋಟ, ಅಲ್ಲಿಂದ ಇಲ್ಲಿವರೆಗೂ ಒಂದು ಮಾತೂ ಆಡದಿದ್ದರೂ ಕಣ್ಣಂಚಲ್ಲಿ ಮೂಡಿದ ಬಯಕೆಯ ಕಿಚ್ಚು, ಮುಚ್ಚಿಡಲೆಳಸಿದಷ್ಟೂ ಉಕ್ಕಿ ಬರುವ ಉನ್ಮತ್ತತೆ, ಬಳಸಿದ ಕೈಗಳ ಬಿಸಿ, ತುಟಿಗಳ ಪ್ರಚ್ಛನ್ನ ಕಿಡಿಯನ್ನ ಅರಿಯದವಳಲ್ಲ ಅವಳು. ಅವಳಿಗಷ್ಟೇ ಅರಿವಾಗುವಂತೆ ಕಂಪಿಸಿದ್ದಳು.

ಅಡಿಗರ ಕವನ ನೆನಪಾಗಿತ್ತು.

“ಮರದೊಳಗಡಗಿದ ಬೆಂಕಿಯಂತೆ ಎಲ್ಲೋ ಮಲಗಿದೆ ಬೇಸರ;
ಏನೋ ತೀಡಲು ಎಲ್ಲೋ ತಾಗಲು ಹೊತ್ತಿ ಉರಿವುದು ಕಾತರ”.

ಹುಡುಗ ಹೊಸಬನೇನಲ್ಲ. ಮುನಿದು ದೂರವಾಗಿ ವರ್ಷ ಕಳೆದಿತ್ತಲ್ಲ ಸ್ಪರ್ಶಕ್ಕೆ ಏನೋ ಹೊಸತನ. ವರ್ಷಗಳ ವಿರಹದುರಿಗೆ ಗಾಳಿ ಸೋಕಿತ್ತು. ಕೋಪಕ್ಕೆ ಕಾರಣವೂ ದೊಡ್ಡದೇನಲ್ಲ. ಸಿಗರೇಟು ಇವಳಿಗಾಗದು; ಬಿಡಲು ಅವನಿಗಾಗದು. ಹಠಕ್ಕೆ ಬಿದ್ದರೆ ಜಗಮೊಂಡು ಹುಡುಗಿ. ಮಟ ಮಟ ಮಧ್ಯಾಹ್ನ ಸೂರ್ಯನಷ್ಟೇ ಬಿಸಿಯಾಗಿ ಬಂದು ಎದುರು ನಿಲ್ಲಿಸಿಕೊಂಡು ಕೇಳಿದ್ದಳು. “ಸಿಗರೇಟು ಬಿಡ್ತೀಯಾ ನನ್ನ ಬಿಡ್ತೀಯಾ ?” ಒರಟು ಹುಡುಗನಿಗೆ ಇವಳ ಹಠಕ್ಕೆ ಮಣಿಯಲಾಗದು; ಒಳಗಿನ ಗಂಡು ಸೋತ ಹಾಗಾಗುತ್ತಾ ? ಒಮ್ಮೆ “ಹೂಂ” ಅಂದರೆ ಮತ್ತೆ ಮತ್ತೆ ಹೀಗೇ ಆಳುವುದಕ್ಕೆ ಶುರುವಿಟ್ಟರೆ ? ಬೇಡ… ನಿರ್ಧಾರ ಮಾಡಿದ್ದ. ಆದರೆ ಅಂಥವನಿಗೂ ನಿನ್ನ ಬಿಡ್ತೀನಿ ಅನ್ನುವುದಾಗಲಿಲ್ಲ; ಎಲ್ಲೋ ನೋಡುತ್ತ “ಸಿಗರೇಟು ಬಿಡಲ್ಲ; ಅಡ್ಜಸ್ಟ್ ಮಾಡ್ಕೋ” ಅಂದಿದ್ದ. ಮರು ಮಾತಾಡದೆ, ಕನಿಷ್ಟ ಜಗಳಕ್ಕೂ ನಿಲ್ಲದೇ ಸ್ಕೂಟಿ ಭರ್ರೋ ಅನ್ನಿಸಿ ಹೋದವಳು ಹೀಗೆ ಸಿಕ್ಕಿದ್ದು ಇವತ್ತೇ.

ಪರಿಚಯವಾಗಿದ್ದೂ ವಿಶಿಷ್ಟವಾಗಿಯೇ. ಸಿಗರೇಟು ಸೇದುವ ಅಭ್ಯಾಸವಿದೆ ಅಂತ ಗೊತ್ತಾದರೆ ಸಾಕು ಅವರ ಬಳಿ ಜಗಳಕ್ಕೆ ಬಿದ್ದು ಚಟ ಬಿಡಿಸುವ ಇವಳನ್ನ ಕರೆದು ಪ್ರಿನ್ಸಿಪಾಲ್ ಹೇಳಿದ್ದರು. “ಇದನ್ನು ಕಾಲೇಜಿನಾಚೆಗೂ ವಿಸ್ತರಿಸೋಣ; ಒಂದು ಕ್ರಿಯೇಟಿವ್ ಐಡಿಯಾ ಹುಡುಕು”. ಒಂದಿಡೀ ದಿನ ಕಾಲೇಜಿನ ಅಷ್ಟೂ ಮಂದಿ ಇಂತಿಷ್ಟು ಜನ ಅಂತ ಗ್ರೂಪ್ ಮಾಡಿಕೊಂಡು ಆಸುಪಾಸೆಲ್ಲ ಸುತ್ತೋದು; ಸಿಗರೇಟು ಸೇದುವವರನ್ನು ಕಂಡಾಗೆಲ್ಲ ಸಿಗರೇಟು ತೊಗೊಂಡು ಇನ್ಯಾವತ್ತೂ ಸೇದದಂತೆ ಪ್ರಾಮಿಸ್ ಮಾಡಿಸ್ಕೊಂಡು ಗುಲಾಬಿ ಕೊಡೋದು. ನೂರರಲ್ಲಿ ಹತ್ತು ಜನ ಬಿಟ್ರೂ ಸಾಕು, ಸಾರ್ಥಕವೇ. ಐಡಿಯಾ ಎಲ್ಲರಿಗೂ ಹಿಡಿಸಿತ್ತು. ಎಲ್ಲರೂ ಹೂ ತೊಗೊಂಡು ಪ್ರಾಮಿಸ್ ಮಾಡಿದ್ರೆ ಆರನೇ ಕ್ರಾಸ್ ಬಸ್ ಸ್ಟ್ಯಾಂಡ್ ಪಕ್ಕ ಪಲ್ಸರ್ ನಿಲ್ಲಿಸಿಕೊಂಡು ಹೊಗೆ ಬಿಡುತ್ತಿದ್ದ ಇವನು ಮಾತ್ರ ಸಿಗರೇಟು ಕೈಗೆ ಕೊಡದೆ ಹೊಸಕಿ ಹಾಕಿ ಹೂ ಕೊಟ್ಟ ಹುಡುಗಿಗೆ “ಐ ಲವ್ ಯು ಟೂ” ಅಂದುಬಿಟ್ಟಿದ್ದ. ತುಂಟನ ಕಣ್ಣ ಸುಳಿಗೆ ಸಿಲುಕಿದ್ದಳು ಮತ್ಸ್ಯ ಕನ್ನಿಕೆ.

ಹೊಗೆಯನ್ನ ಕಂಡರೇ ಸಿಡಿದು ಬೀಳುವವಳನ್ನು ಸೆಳೆದದ್ದು ಯಾವುದು ಇವತ್ತಿಗೂ ಪ್ರಶ್ನೆಯೇ. ಜತೆಯಲ್ಲಿದ್ದವರಿಗ್ಯಾರಿಗೂ ಕೇಳಿಸದಂತೆ ಹೇಳಿದ್ದ ಜಾಣ್ಮೆಯಾ ? ಕಣ್ಣ ತುಂಟತನಕ್ಕಂಟಿದ್ದ ಗಾಂಭಿರ್ಯವಾ ? ಉಳಿದವರ ಹಾಗೆ ಬೆಪ್ಪುತಕ್ಕಡಿಯಾಗದೇ ಲವ್ ಯೂ ಅಂದ ಪ್ರತ್ಯುತ್ಪನ್ನಮತಿಯಾ ? ವಾಪಾಸ್ ಬರೋ ಹೊತ್ತಿಗೆ “ಫೈನಲ್ ಬಿ.ಕಾಂ.” ಹುಡುಗಿ ಹೇಳಿದ್ದು ಅವನಿಗೆ ಸ್ಪಷ್ಟವಾಗಿತ್ತು. ಕಾಲೇಜಿನ ಹೆಸರು ಬೇಕಿರಲಿಲ್ಲ. ಹಾಕಿದ್ದ ಟೀಶರ್ಟ್ ಮೇಲಿತ್ತು.

b3410488b6de8b4cbc24342e9fa48d45

ಇದಾಗಿ ನಲ್ವತ್ತೆಂಟು ಗಂಟೆಗಳೊಳಗೆ ಇವಳ ಹೆಸರೇನು ಜಾತಕ ಸಮೇತ ಬಂದು ಪಾರ್ಕ್ ಮಾಡಿದ್ದ ಸ್ಕೂಟಿ ಮೇಲೆ ಕೂತಿದ್ದ ಸಾಫ್ಟ್^ವೇರ್ ಓದಿದ ಹಾರ್ಡ್ ಚೆಲುವ. ಕಾಯುತ್ತಿದ್ದವಳು ಗಾಡಿ ಕೀ ಕೊಟ್ಟು ಹಿಂದೆ ಕೂತಿದ್ದಳು. ಸಂಜೆ ಅವಳನ್ನ ಮನೆಗೆ ಬಿಡೋ ಹೊತ್ತಿಗೆ ಸ್ಕೂಟಿಗೂ ನಾಚಿಕೆ ಸುರಿಯುತ್ತಿತ್ತು. ಕಾಲೇಜು ಮುಗಿಯೋದರೊಳಗೆ ಸಿಟಿಯೊಳಗಿನ ಅಷ್ಟೂ ಕಲ್ಲುಬೆಂಚುಗಳಿಗೆ, ಆಸುಪಾಸಿನ ಪಾನಿಪೂರಿ ಗಾಡಿಯವರಿಗೆ, ಕಬ್ಬಿನ ಜ್ಯೂಸ್ ಅಂಗಡಿಗಳಿಗೆ, ದೇವಸ್ಥಾನದ ಮುಂದಿನ ಭಿಕ್ಷುಕರಿಗೆ ಎಲ್ಲರಿಗೂ ಇವರು ಪರಿಚಯ.

“ಹುಡುಗಿ ಇನ್ನೆರಡು ವರ್ಷ ಓದು ಮುಗಿಸಿದ ನಂತರವೇ ಮದುವೆ; ಅಲ್ಲಿವರೆಗೂ ಊರಾಚೆ ಹೋಗೋ ಹಾಗಿಲ್ಲ” ಎರಡೂ ಮನೆಗಳಲ್ಲಿ ಕಟ್ಟಪ್ಪಣೆಯಾಗಿತ್ತು. ಸಿಗರೇಟು ಅಪ್ಪನನ್ನ ಬಲಿ ತೆಗೆದುಕೊಂಡ ಕಥೆ ಹೇಳಿ ನೊಂದುಕೊಂಡವಳು “ನೀನೂ ಬಿಟ್ಬಿಡು” ಇದ್ದ ಬುದ್ಧಿಯೆಲ್ಲ ಖರ್ಚು ಮಾಡಿ ಅನುನಯಿಸಿದ್ದಳು. ಒಂದು ಅಪ್ಪುಗೆಗೂ ಬಿಡದವಳು “ದಿನಾ ಒಂದು ಮುತ್ತು ಕೊಡ್ತೀನೋ” ಅನ್ನುವಷ್ಟಾಗಿದ್ದಳು. ಭಂಡ ಗಂಡು ಕೇಳಲಿಲ್ಲ. ಕೊನೆಗೆ ಎದುರಾ ಬದುರು ನಡೆದು ಹೋದರೂ ಮನದ ಮಾತಿಗೆ ಮೌನದ ಬೇಲಿ ಅನ್ನುವಲ್ಲಿಗೆ ಬಂದು ಮುಟ್ಟಿತ್ತು. ಮನೆಯಲ್ಲಿದರ ಸುಳಿವೂ ಸಿಗದಂತೆ ಗುಟ್ಟಾಗಿಡುವ ಜಾಣ್ಮೆ ಇಬ್ಬರಲ್ಲೂ ಕಮ್ಮಿಯಿರಲಿಲ್ಲ.

ಆದರೆ ಪ್ರೀತಿಗೆಲ್ಲಿಯ ಮುನಿಸು ? ಪ್ರತಿ ಬಾರಿ ನೋಡಿದಾಗಲೂ ಕೊಳಕ್ಕೆ ಕಲ್ಲು… ನೀರು ಕಲಕುತ್ತಿತ್ತು. ಅಂಗಾಲಿಗೆ ಚುಚ್ಚಿದ ಬಿದಿರ ಮುಳ್ಳು ಒಳಗಡೆಯೇ ಮುರಿದಂತೆ. ಅವಳನ್ನು ಕೂರಿಸಿಕೊಂಡು ಸುತ್ತಿದ ಪಲ್ಸರ್ ಅವಳಿಲ್ಲದೇ ಹೊರಡಲು ಕೇಳುತ್ತಿರಲಿಲ್ಲ. ಅಂವ ಕಾರಿಗೆ ಶಿಫ್ಟ್ ಆಗಿದ್ದ. ಅದೂ ಅವಳಿಷ್ಟದ ಪುಟಾಣಿ ಕಾರು. ಖಾಲಿ ಮನಸ್ಸಿನ ಭಾರ ಹೊರಲಾಗದೇ ಹೊರುತ್ತಿದ್ದರಲ್ಲ ಇಬ್ಬರೂ… ಇದು ಗೊತ್ತಿದ್ದೇ ತಾನು ವಿದೇಶಕ್ಕೆ ಹೋಗುವ ಮುನ್ನ ಗೆಟ್ ಟುಗೆದರ್ ಇಟ್ಟುಕೊಂಡು ಇಬ್ಬರನ್ನೂ ಕರೆದಿದ್ದ ಗೆಳೆಯ.

ಅವನಿಗೆ ಅರಿವಿದೆ ಸುಲಭಕ್ಕೆ ಅಳಿಯುವ ಪ್ರೇಮವಲ್ಲ ಇದು… ಕಟ್ಟಿದ ಒಡ್ಡು ಬಿಚ್ಚಿದರೆ ಮೊದಲಿನಂತೆ ಅಮೃತವಾಹಿನಿ. ಇಬ್ಬರ ವಿರಹದ ಮೂಟೆಗೂ ಹೆಗಲು ಕೊಡಬಲ್ಲ ತಾನು ಹೋದರೆ ಕಂದಕ ಇನ್ನೂ ಹೆಚ್ಚಾಗುತ್ತದೆ. ತಾನು ಹಾರುವ ಮುನ್ನ ಹೇಗಾದರೂ ಒಂದು ಮಾಡುವ ನೆಪವಷ್ಟೇ ಈ ಪಾರ್ಟಿ. “ಸ್ಕೂಟಿ ತೊಗೊಂಡು ಬರ್ಬೇಡ; ರಾಜ ನಿನ್ನ ಪಿಕ್ ಮಾಡ್ತಾನೆ. ಅವನು ನಿಮ್ಮನೆ ಕಡೆ ಏನೋ ಕೆಲಸಕ್ಕೆ ಬಂದವನು ಹಾಗೇ ಇಲ್ಲಿಗೆ ಬರ್ತಿದಾನಂತೆ” ಮೊದಲೇ ಹೇಳಿದ್ದ. ತನ್ನ ರಾಜನೇ ಬಂದಿದ್ದರೆ… ಮನಸ್ಸು ಪಿಸುಗುಟ್ಟಿದಾಗ ಕಾಜಲ್ ಕೆನ್ನೆ ವರೆಗೂ ಇಳಿದಿತ್ತು.

ಪ್ರತಿಯೊಂದರಲ್ಲೂ ಶಿಸ್ತಿನಿಂದ ಪ್ಲಾನ್ ಮಾಡುವವಳಿಗೆ ಅವತ್ಯಾಕೋ ವಾಪಾಸ್ ಬರುವ ಬಗ್ಗೆ ಯೋಚನೆಯೇ ಬಂದಿರಲಿಲ್ಲ. “ನಾ ಹಾಡ್ತೀನಿ ಇವತ್ತು; ನಿನ್ನ ಕೊಳಲು ತೊಗೊಂಬಾ; ನಾ ಬರೋದಿನ್ನು ಎರಡು ವರ್ಷದ ನಂತ್ರ. ಇವತ್ತು ಜತೇಲಿ ಖುಷಿಯಾಗಿರೋಣ” ಇವನಿಗೂ ಅಪ್ಪಣೆಯಾಗಿತ್ತು. ಅದೂ ಇವರಿಗಾಗೇ… ಅವನ ಹಾಡು… ಇವನ ಕೊಳಲು… ನಡುವೆ ಇಬ್ಬರಿಗೂ ಆತು ಕೂತು “ಆಹಾ ಸ್ವರ್ಗದ ಸಂಭ್ರಮ” ಎನ್ನುತ್ತಿದ್ದಳಲ್ಲ ಭಾವಬಿಂದುವಿನಂಥ ಹುಡುಗಿ. ಮಾತಲ್ಲಿ ಹೇಳಲಾಗದ ಅದೆಷ್ಟನ್ನೋ ಹಾಡಾಗಿಸಿ ಸುಲಭವಾಗಿ ಹೇಳಿಬಿಡಬಹುದು… ಮುನಿಸು ಕರಗಲೇ ಬೇಕು… ಗೆಳೆತನದ ಆರ್ದ್ರ ಮನಸಿನ ಹಂಬಲ.

ಮೊದಲೇ ಮಾತಾಡಿಕೊಂಡಿದ್ದರೇನೋ ಎಂಬಂತೆ “ಮುನಿಸು ತರವೇ ಮುಗುದೇ… ಹಿತವಾಗಿ ನಗಲೂ ಬಾರದೇ..” ಯಿಂದ ಶುರುವಾದ ಹಾಡುಗಳ ಧಾರೆ “ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ” ನಲ್ಲಿ ಮುಗಿದಿತ್ತು. ನಡುವೆ ಅವಳು ಎದ್ದು ಹೋಗಿದ್ದು ಅಳುವುದಕ್ಕೇ ಅನ್ನೋದು ಮೂವರಿಗಷ್ಟೇ ತಿಳಿದ ಗುಟ್ಟು. ಪಾರ್ಟಿ ಮುಗಿಯುವಷ್ಟರಲ್ಲಿ ಗಂಟೆ ಹನ್ನೊಂದು ಮೀರಿತ್ತು. ಆವಾಗ ಎಚ್ಚರಾಗಿತ್ತು; ರಾಜ ಹೋಗಿ ಅದೆಷ್ಟೋ ಹೊತ್ತಾಗಿದೆ. ಉಳಿದವರ್ಯಾರೂ ತನ್ನ ಮನೆ ಕಡೆಯಿಂದ ಹೋಗೋರು ಇಲ್ಲ; ಈ ನಡುರಾತ್ರಿಯಲ್ಲಿ ಅಷ್ಟು ದೂರ ಬೈಕ್ ಮೇಲೆ ಕೂತು ಹೋಗುವಷ್ಟು ಸಲಿಗೆಯೂ ಇಲ್ಲ. ಜಗಳಕ್ಕೆ ಬಿದ್ದವಳನ್ನು ಸಮಾಧಾನಿಸುತ್ತ “ಹೋಗ್ಲಿ ಬಿಡು ಇಷ್ಟೊತ್ತಲ್ಲಿ ಕ್ಯಾಬ್ ಮಾಡೋದಕ್ಕಿಂತ ಅವನ ಜತೆ ಹೋಗೋದೇ ಸೇಫ್ ಕಣೇ. ನಾ ಏನು ಬೇಕಂತ ಹೀಗ್ ಮಾಡ್ಲಿಲ್ಲ. ಈಗ ಎಲ್ಲಾರೆದುರು ಮರ್ಯಾದೆ ಕಳೀಬೇಡ್ವೇ. ಜಗಳಕ್ಕೆ ಅಂತಲೇ ನಾಳೆ ಸಿಗ್ತೀನಿ” ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿದ್ದ ಗೆಳೆಯ. “ನಿನ್ನಂಥವಳ ಪ್ರೀತಿಯ ಕರೆ ಆತ್ಮನ ಮೊರೆ ದೇವರಿಗೂ ಕೇಳಿಸುತ್ತೆ ಕಣೇ” ಹೃದಯ ಪಿಸುಗುಟ್ಟಿತ್ತು. ಮೌನವಾಗಿ ಕಾರಲ್ಲಿ ಕೂತಿದ್ದಳು. ಅಕ್ಕರೆಯಿಂದ ತಬ್ಬಿ ಕಣ್ಣು ಮಿಟುಕಿಸಿದ ಗಳೆಯನಿಗೆ ಕಣ್ಣಲ್ಲೇ ಥ್ಯಾಂಕ್ಸ್ ಹೇಳಿ ಕಾರು ಸ್ಟಾರ್ಟ್ ಮಾಡಿದ್ದ.

ಹೊರಟು ಹತ್ತೇ ನಿಮಿಷಕ್ಕೆ ಕಾರಿನ ಗ್ಲೂವ್ ಕಂಪಾರ್ಟ್^ಮೆಂಟ್ ತೆರೆದವಳಿಗೆ ನೀರಿನ ಬಾಟಲ್ ಕೊಟ್ಟಿದ್ದ. ಬೇಡವೆಂದು ತಲೆಯಾಡಿಸಿದ್ದಳು. ಅವನಿಗೆ ಥಟ್ಟನೇ ಹೊಳೆದಿತ್ತು. ಹುಡುಕಿದ್ದು ನೀರನ್ನಲ್ಲ; ಸಿಗರೇಟ್ ಪ್ಯಾಕೆಟ್. “ಸಿಗರೇಟ್ ಬಿಟ್ಟೆ” ಅವನ ಮಾತು “ಒಪ್ಪಿಸಿಕೊಳ್ಳೇ” ಅಂದಂತೆ ಕೇಳಿಸಿತ್ತವಳಿಗೆ. ಇಳಿಯೋ ಹೊತ್ತಿಗೆ ಮಿಂಚಿನಂತೆ ಬರಸೆಳೆದು ತುಟಿಗೆ ಮುದ್ರೆಯೊತ್ತಿದ್ದ. ತುಟಿಯ ಘಮ ಸಿಗರೇಟು ಬಿಟ್ಟಿದ್ದಕ್ಕೆ ಸಾಕ್ಷಿ ಹೇಳಿತ್ತು. ಮೊದಲ ಮುತ್ತಿನ ಮತ್ತಲ್ಲಿ ಕಳೆದು ಹೋದವಳು ತೇಲುತ್ತಲೇ ಇಳಿದು ಹೋಗಿದ್ದಳು. ಮನೆ ತಲುಪಿ ಮೊಬೈಲ್ ಡಾಟಾ ಆನ್ ಮಾಡಿದವಳಿಗೆ ಕಾದಿತ್ತು “ನಿನ್ನ ಮುತ್ತಿಗಿಂತ ಹೆಚ್ಚು ಮತ್ತೇರಿಸುವ ತಾಕತ್ತಿಲ್ಲ ಸಿಗರೇಟಿಗೆ” ವಾಟ್ಸಾಪ್ ಮೆಸೇಜು. “ಮುತ್ತಿನ ಪಸೆ ತುಟಿಯಿಂದ ಆರುವ ಮೊದಲೇ ಪಲ್ಸರ್ ತೊಗೊಂಬಾ” ಉತ್ತರ ಕಳಿಸಿ ಮಲಗಿದವಳಿಗೆ ಮಗುವಿನಂಥ ನಿದ್ದೆ. ಬೆಳಗ್ಗೆ ಸೂರ್ಯ ಎಬ್ಬಿಸಲು ಬರುವಾಗ ಯಾವತ್ತಿಗಿಂತ ಹೆಚ್ಚು ಕೆಂಪಾಗಿದ್ದ.
🎺🎺🎺🎺🎺🎺
Feeling ಮತ್ತೆ ಸೇರುವ ಸಂಭ್ರಮ ಗುಣಿಸಲೆಂದೇ ವಿರಹಿಗಳಾಗಬೇಕು

‍ಲೇಖಕರು admin

December 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Chandraprabha B

    ಇದು ಲೇಖನವಲ್ಲ, ಕವನ ಎಂಬಷ್ಟು ಲಾಲಿತ್ಯಪೂರ್ಣವಾಗಿದೆ. ವಸ್ತುವಿನಲ್ಲಿನ ಲಯ ಓದಿಸಿಕೊಂಡು ಹೋಗುತ್ತದೆ…ಅಭಿನಂದನೆಗಳು, ಶಮಾ.

    ಪ್ರತಿಕ್ರಿಯೆ
  2. Chaithra

    Superb !! ಪ್ರೀತಿ ಎಲ್ಲಾನೂ ಮಾಡಿಸುತ್ತೆ ! ಅವನು ಸಿಗರೇಟ್ ಬಿಟ್ಟಿರಬಹುದು, ಕಥೆಯಲ್ಲಿ. ನನ್ನ ಜೀವನದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕಲೆಯನ್ನು ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿದ್ದೇನೆ . ಎಲ್ಲ ಅವನಿಗಾಗಿ, ಅವನು ಮೊಗೆ ಮೊಗೆದು ಸುರಿಯುತ್ತಿರುವ ಪ್ರೀತಿಗಾಗಿ !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: