ಕೆ ವಿ ತಿರುಮಲೇಶರ ಕವಿತೆಗಳನ್ನು ಗಾಢವಾಗಿ ಓದಿ
ಅವರ ಕೃತಿಯ ಒಳಗೆ ಸದಾ ಸುತ್ತಾಡುವ ಥರಾವರಿ ಬೆಕ್ಕುಗಳನ್ನೆಲ್ಲಾ
ಒಂದು ಹಿಡಿಯಲ್ಲಿ ಹಿಡಿಯುವ ಪ್ರಯತ್ನ ಇಲ್ಲಿದೆ.

ಬೆಕ್ಕಿನ ಯಾವ ಮಂತ್ರಕ್ಕೂ
ಚಿತ್ರದಿಂದೇಳದಿರಿ ಮೀನುಗಳೇ
ಕಬಳಿಸುವ ಕಾತರವಲ್ಲದೆ
ಇನ್ನೇನೂ ಕಾಣೆ…

ಹಸಿದಂತಿಲ್ಲ ನಿದ್ದೆಗಣ್ಣೂ ಅಲ್ಲ
ಹೊಂಚು ಸಂಚು ಏನೂ ಕಾಣಿಸುತ್ತಿಲ್ಲ
ಮುಗ್ಧತೆ ಅಂತ ಫಕ್ಕನೆ ತೀರ್ಪು ನೀಡುವಂತೆಯೂ ಇಲ್ಲ …
ನಿರ್ಲಿಪ್ತ ನೋಟದೊಳಗೇನಿದೆಯೋ ಜಾಲ
ಎಷ್ಟೆಂದರೂ ಅದು ಮಾರ್ಜಾಲ…

ಮುದ್ದಾಗಿದ್ದರೂ ಬೆಕ್ಕಿಗೆ ಒಳ್ಳೆಯ ಹೆಸರಿಲ್ಲ
ಮುದ್ದಿಸಬಾರದೆಂದಲ್ಲ

ಬಾಲ ಸುರುಳಿ ಸುತ್ತಿ
ಮೊಗ ನೆಲಕ್ಕೊತ್ತಿ ಕಣ್ಣು ಮುಚ್ಚಿ
ಧ್ಯಾನಕ್ಕಿದು ಸರಿಯಾದ ಭಂಗಿಯೆನಿಸಿದರೂ
ಮನಸು ಅಧ್ಯಾತ್ಮದಾಳಕ್ಕಿಳಿದಿದೆಯೇ
ಎಂಬುದೀಗ ಪ್ರಶ್ನೆ
ಬಯಸಿದ್ದು ಎದುರು ಹಾದರೆ
ಬೆಕ್ಕುಪಾಧ್ಯಾಯರು
ಠಣ್ಣನೆ ಜಿಗಿಯುವ ಸಾಧ್ಯತೆಯಿದ್ದು
ಧ್ಯಾನ ಅಧ್ವಾನವಾಗುವ ಅಪಾಯವಿದೆ






0 Comments