ಆಟದ ಗೊಂಬೆ
-ತಿರುಪತಿ ಭಂಗಿ
ಮಗ್ಗಿ ಓದುತ್ತ ಕುಳಿತಿದ್ದ ಪರಮನಿಗೆ ಅವನ ಎಡಗಡೆ ಕಿಡಕಿಯಲ್ಲಿ ಯಾರೋ ಸರಿದು ಹೋದಂತನಿಸಿತು. ಹನ್ನೆರಡ ಮಗ್ಗಿ ಓದುತ್ತಿದ್ದ ಪರಮ. ಮರಳಿ ಎರಡರ ಮಗ್ಗಿಯಿಂದ ಓದಲು ಶುರು ಮಾಡಿದ. ಮತ್ತೆ ಹನ್ನೆರಡಕ್ಕೆ ಬಂದಾಗ ಆಗಲೂ ಆ ಕಿಡಕಿಯಲ್ಲಿ ಯಾರೋ ಇಣುಕಿ ನೋಡಿದಂತನಿಸಿತು. ಗೋಡೆಯ ಮೇಲೆ ಸಮಯ ನೋಡಿದ. ಬರೀ ಹತ್ತು ಗಂಟೆಯಾಗಿ ಮೇಲೆ ಹದಿನಾರು ನಿಮೀಷವಾಗಿತ್ತು. ಅವರಪ್ಪ ಕ್ರೈಂ ಸ್ಟೋರಿ ನೋಡುತ್ತಿದ್ದ. ಅಕ್ಕ ಗಣಿತ ಲೆಕ್ಕ ಪ್ರ್ಯಾಕ್ಟೀಸ್ ಮಾಡುತ್ತ ತನ್ನನ್ನು ತಾನು ಮರೆತಿದ್ದಳು.
ಕಿಡಕಿಯಲ್ಲಿ ಯಾರೋ ಸರಿದು ಹೋದರು? ಕಳ್ಳರೇನಾದ್ರೂ ಬಂದಿರಬಹುದೇ? ಅಪ್ಪನಿಗೆ ಹೇಳಿದ್ರೆ ಆತ ಏನನ್ನಬಹುದು? “ನಮ್ಮನಿಗೆ ಯಾವ ಕಳ್ಳ ಬರ್ತಾನೋ ಪುಣ್ಯಾತ್ಮಾ ಸುಮ್ನ ಮಲಗು” ಇದೆ ಅಂವ ಕೊಡುವ ಸರಳ ಉತ್ತರ. ಇಲ್ಲಾ ಬಾಗಿಲು ತಗೆದು ಬ್ಯಾಟ್ರಿ ಹಿಚಗಿ ಮನೆ ಸುತ್ತ ಒಮ್ಮೆ ಸುತ್ತಿ ಬರಬಹುದು. ಇದನ್ನು ಬಿಟ್ರೆ ಬೇರೇನೂ ನೆಡೆಯಲು ಸಾದ್ಯವಿಲ್ಲ. ಪರಮ ಅಲ್ಲೇ ತನ್ನ ಪುಸ್ತಕವನ್ನು ಸುತ್ತಿಟ್ಟು ಹೊರಳಿದ, ಸಣ್ಣಗೆ ನಿದ್ದೆ ಆವರಿಸಿತು.
ಸುರೇಶ ಟಿ,ವ್ಹಿ, ನೋಡುತ್ತ ಕೈಯೊಳಗಿದ್ದ ಮೊಬೈಲ್ ಗ್ಯಾಲರಿ ತಗೆದು, ಹೆಂಡತಿ ಜೊತೆ ಕ್ಲಿಕ್ಕಿಸಿಕೊಂಡ ನಾಲ್ಕುನೂರಕ್ಕೂ ಹೆಚ್ಚು ಪೋಟೋಗಳನ್ನು ಒಂದೊಂದೆ ನೋಡುತ್ತ, ಆ ನೆನಪುಗಳ ಗುಂಟ ಹೋಗಿ ಕಣ್ಣೀರಲ್ಲಿ ಕೈತೊಳೆಯತ್ತ. ಅರ್ಚನಾ..! ಹೇಳದೆ ಕೇಳದೆ ಬಿಟ್ಟು ಹೋದೆಲ್ಲೆ ಎಂದು ಒಬ್ಬನೇ ಸಾಕಾಗುವರೆಗೂ ಅತ್ತು ಅತ್ತು ತನ್ನ ಎದೆ ಭಾರ ಕರಗಿಸಿಕೊಂಡು, ಅದೇ ಸೋಪಾದ ಮೇಲೆ ಹೊರಳಿ ಮಕ್ಕಳ ಭವಿಷ್ಯದ ಚಿಂತೆ ಮಾಡುತ್ತ ಅರಿವಿಲ್ಲದೇ ನಿದ್ದೆಗೆ ಶರಣಾಗಿದ್ದ.
“ಹತ್ತನೇ ತರಗತಿಯಲ್ಲಿ ನೀನೇ ಮೊದಲು ಬರಬೇಕು ಮಗಳೇ” ಅವರವ್ವ ಹೇಳಿದ ಮಾತನ್ನೇ ಪದೆಪದೆ ಕಣ್ಣ ಮುಂದೆ ತಂದುಕೊಂಡು, ಒಬ್ಬಳೇ ಅತ್ತು. ಅವ್ವನಿಲ್ಲದ ಕೊರಗು ತನಗಿಲ್ಲ ಅನ್ನುವ ಹಾಗೆ ತನ್ನ ತಂದೆ ಹಾಗೂ ತಮ್ಮನೆದುರು ನಟಿಸಲು ರುಕ್ಕು ಸದಾ ಪ್ರಯತ್ನಿಸುತ್ತಿದ್ದಳು.
ಒಂದೊಂದು ಸಲವಂತು ಪರಮ ತಾಯಿ ನೆನಸಿಕೊಂಡು ಮುಗಿಲು ಹರೆದು ಬೀಳುವಂತೆ ಕಿರಚಿ ಅಳುತ್ತಿದ್ದ. ಸುರೇಶ ಅವನನ್ನು ರಮೀಸಲು ಹರಸಾಹಸವನ್ನು ಮಾಡಬೇಕಾಗುತ್ತಿತ್ತು. ರುಕ್ಕು ಏನೇನೋ ಹೇಳಿ ಅವನನ್ನು ರಮಿಸಲು ಆಗದಿದ್ದಾಗ ತಾನೂ ಅವನೊಟ್ಟಿಗೆ ಅಳತೊಡಗುವಳು. ಆಗ ಸುರೇಶ ಆಕಾಶದ ಕಡೆ ಮುಖಮಾಡಿ ನಿಂತು ಕಾಣದ ದೇವರಿಗೆ ಸಾಕಾಗುವರೆಗೂ ಬೈದು ತನ್ನ ಸೆಡವು ಕರಗಿಸಿಕೊಳ್ಳುತ್ತಿದ್ದ.
ತಾಯಿ ನೆನಪು ಮಕ್ಕಳಿಗೆ ಬರದಂದೆ ಅರ್ಚನಾ ಹೇಗೆ ಅವರಿಬ್ಬರನ್ನು ಸಂಬಾಳಿಸುತ್ತಿದ್ದಳೋ, ಉಣಿಸುತ್ತಿದ್ದಳೋ, ನಗಿಸುತ್ತಿದ್ದಳೋ ಅವಳಿಗಿಂತ ಒಂದು ಗುಂಜಿಯಷ್ಟು ಹೆಚ್ಚು ಪ್ರೀತಿಯನ್ನು ಧಾರೆಯರೆದು ಅವಳ ನೆನಪು ಬಾರದಂತೆ, ಅವರು ಬಿಕ್ಕಿ ಬಿಕ್ಕಿ ಅಳದಂತೆ ಎಚ್ಚರವಹಿಸುತ್ತಿದ್ದ.
ಆದರೂ ಪರಮನನ್ನು ನಿಭಾಯಿಸುವುದು ಸುರೇಶನಿಗೆ ಒಮ್ಮೊಮ್ಮೆ ಕಷ್ಟವೆನಿಸುತ್ತಿತ್ತು. ಶಾಲೆಯಲ್ಲಿ ಅಂವನ ಗೆಳೆಯರೆಲ್ಲರೂ ಪ್ರೊಗ್ರಸ್ ಕಾರ್ಡ್ ಗೆ ತಮ್ಮ ತಾಯಿ ಸಹಿ, ತಂದೆಯ ಸಹಿ ಮಾಡಿಸಿಕೊಂಡು ಹೋಗಿರತ್ತಿದ್ದರು. ತನ್ನ ಪ್ರೋಗ್ರಸ್ ಕಾರ್ಡಗೆ ಬರೀ ಅಪ್ಪನ ಸಹಿ ಅಷ್ಟೇ ಇರುವುದು ಕಂಡು ಶಾಲೆಯಲ್ಲಿಯೇ ಅಳುತ್ತ ಕುಂತಾಗ ಅಲ್ಲಿದ್ದ ಶಿಕ್ಷಕರು ಸುರೇಶನಿಗೆ ಪೋನ್ ಮಾಡಿ ಕರಿಸಿ, ಪರಮನನ್ನು ಕಳಿಸಿ ಕೊಡುತ್ತಿದ್ದರು. “ಅವ್ವಾ ಇಷ್ಟ್ಯಾಕ ಲಗೂನ ಸತ್ತಳೂ, ನಮ್ಮ ಗೆಳೆಯರಿಗೆಲ್ಲರಿಗೂ ಅವ್ವಾ ಅದಾಳ, ನನಗೊಬ್ಬನಿಗೇ ಅಷ್ಟೇ ಇಲ್ಲ” ಎಂದು ಮನೆಯಲ್ಲಿ ಮತ್ತೆ ರಂಪಾಟ ಹಿಡಸಿಬಿಡುತ್ತಿದ್ದ. ಸುರೇಶನಿಗೆ ಮಗನನ್ನು ಬೈಬೇಕೋ, ಹೊಡೆದು ಬುದ್ದಿ ಹೇಳಬೇಕೋ, ರಮೀಸಿದರೇ ಎಷ್ಟು ರಮಿಸುವುದು? ಈ ದೇವರುಗಳಿಗೆ ತಾಯಿಯ ಪ್ರೀತಿಯ ಮಹತ್ವವಾದರೂ ತಿಳಿದಿದೆಯೋ ಇಲ್ಲವೋ? ಎಳೆ ಮಕ್ಕಳ ಬದುಕಿಗೆ ತಾಯಿ ಎಷ್ಟು ಮುಖ್ಯ ಅನ್ನುವುದು ಗೊತ್ತಿದ್ದರೇ ಲೋಕದಲ್ಲಿ ಅನಾಥಾಶ್ರಮಗಳೇ ಇರುತ್ತಿರಲಿಲ್ಲ. ಸುರೇಶನಿಗೆ ದೇವರಬಿಟ್ಟು ಬೈಯ್ಯಲೂ ಯಾರೂ ಇರಲಿಲ್ಲ. ಅತ್ತು ಅತ್ತು ಪರಮ ಎಷ್ಷೋ ಹೊತ್ತಿನ ಮೇಲೆ ಸುಮ್ಮನಾದ.

ರುಕ್ಕು ಇನ್ನೂ ಓದುತ್ತಲಿದ್ದಳು. ಆಗಲೇ ಅವರಪ್ಪನಿಗೆ ನಿದ್ದೆ ಆವರಿಸಿತ್ತು. ಪರಮ ಮೊದಲೇ ಮಲಿಗಿರುವುದು ಅವಳ ಅರುವಿಗಿತ್ತು. ಓದಿ ಓದಿ ಅವಳಿಗೂ ನಿದ್ರಾ ದೇವಿ ಆಹ್ವಾನ ಮಾಡತೊಡಗಿದಳು. ರುಕ್ಕು ನಿದ್ರೆಯ ಮಂಪರಿನಲ್ಲಿದ್ದಳು, ಒಳಗಿದ್ದ ಕೋಣೆಯಲ್ಲಿ ಯಾರೋ ಗುಣುಗುಣು ಮಾತಾಡಿದಂತನಿಸಿತು. ಪಕ್ಕನೆ ಎಚ್ಚತ್ತು ಕೋನಿಯೊಳಗೆ ಹೋಗಿಬಂದಳು.ತಮ್ಮ ಬಾಯಿತೆರೆದು ಮಲಗಿದ್ದ. ಕಪಾಟಿನಲ್ಲಿದ್ದ ಗೊಂಬೆ ಅವನ ಪಕ್ಕದಲ್ಲಿ ಮಲಗಿತ್ತು. ಮೊದಲೊಮ್ಮೆ ಅಂವನು ಮಲಗಿದಾಗ ರುಕ್ಕು ಆ ಕೋಣೆಗೆ ಬಂದಾಗ ಆ ಗೊಂಬೆ ಇರಲಿಲ್ಲ. ಅದು ಹೇಗೆ ಅವನ ಹತ್ತಿರ ಬಂದಿರಬಹುದೆಂಬ ಸಂದೇಹ ಅವಳ ಮನದಲ್ಲಿ ಮೂಡಿತು. ಪರಮೂನೇ ನಂತರ ಎಚ್ಚೆತ್ತು ಅದನ್ನು ತಂದು ಜೊತೆಯಲ್ಲಿ ತಂದಿಟ್ಟುಕೊಂಡು ಮಲಗಿರಬೇಕೆಂದು ತಿಳಿದು, ಮತ್ತೆ ಆ ಗೊಂಬೆಯನ್ನೆತ್ತಿಕೊಂಡು ಹೋಗಿ, ಅದೇ ಕಪಾಟಿನಲ್ಲಿಟ್ಟು, ತಮ್ಮನ ಬಳಿ ಬಂದು ಮಲಗಿದಳು. ಗೋಡೆಯ ಮೇಲಿನ ಗಡಿಯಾರ ಸಮಯ ಹನ್ನೆರಡು ಗಂಟೆ ಎಂದು ಡಂಗರ ಹೊಡೆಯುತ್ತಿತ್ತು. ರುಕ್ಕು ಮಲಗಿದಳು, ಕಿಡಕಿಯಿಂದ ತಂಪಾಗಿ ಬೀಸುವ ಗಾಳಿ ಅವಳ ಮೈಗೆ ತಾಗಿದಾಗ ಹಿತವೆನಿಸಿ ನಿದ್ದೆ ಬೇಗನೆ ಹತ್ತಿತು.
ಬೆಳಗೆದ್ದು ನೋಡಿದಾಗ ಆ ಗೊಂಬೆ ಪರಮನ ಹತ್ತಿರವೇ ಇತ್ತು. ರುಕ್ಕುಗೆ ಅದು ವಿಚಿತ್ರವೆನಿಸಿತು. ಇಲ್ಲೇನೋ ನೆಡೆಯುತ್ತಿದೆ ಎಂಂದು ರುಕ್ಕು ಅವರಪ್ಪನಿಗೆ ಹೇಳಿದಳು. ಅವನು ನಕ್ಕು ಸುಮ್ಮನಾದನು.
******
ಪರಮ ಮತ್ತು ರುಕ್ಕು ಶಾಲೆಗೆ ಹೋದ ಮೇಲೆ ಸುರೇಶ ರೆಡಿಯಾಗಿ ಮನೆಗೆ ಬೀಗ ಜಡೆದು ತಾನೂ ಬ್ಯಾಂಕ್ ಗೆ ಹೋದನು. ಮಕ್ಕಳ ಹತ್ತಿರವೂ ಒಂದು ಬೀಗದ ಕೈ ಇರುತ್ತಿತ್ತು. ಶಾಲೆ ಬಿಟ್ಟಮೇಲೆ ಮನೆಗೆ ಬಂದು , ಕೈಕಾಲು ತೊಳೆದು, ಅಪ್ಪ ಬೇಕರಿಯಲ್ಲಿ ತಂದಿಟ್ಟ ತಿಂಡಿ ತಿನಿಸು ಬಾಯಚಪ್ಪರಿಸಿ, ಹೋಮ್ ವರ್ಕ್ ಮಾಡಲು ಅವನಿಬ್ಬರ ಮಕ್ಕಳು ದಿನವೂ ಅನಿಗೊಳ್ಳುತ್ತಿರುವುದು ದಿನಚರಿಯಾಗಿತ್ತು.
ಸುರೇಶ ಬ್ಯಾಂಕಿನ ಎಲ್ಲ ವ್ಯಹಾರ ಮುಗಿಸಿ ತಡವಾಗಿ ಮನೆಗೆ ಬರುತ್ತಿದ್ದ. ಬಂದವನೇ ತಾನೂ ಪ್ರೆಶ್ಯೆಪ್ ಆಗಿ ಅಡುಗೆ ಕೋಣೆ ಹೊಕ್ಕು ಮಕ್ಕಳಿಗೆ ಬಿಸಿ ಬಿಸಿ ಅಡುಗೆ ಮಾಡುತ್ತಿದ್ದ. ಮುಂಜಾನೆಯೂ ಅಷ್ಟೆ ಬೇಗನೆದ್ದು ಮಕ್ಕಳಿಗೆ ಉಪ್ಪಿಟ್ಟೋ, ಅವಲಕ್ಕಿಯೋ, ಪುಲಾವೋ ಏನೋ ಒಂದನ್ನು ಮಾಡಿ, ಅವರಿಗೆ ಡಬ್ಬಿ ಕಟ್ಟಿ, ರೆಡಿ ಮಾಡುತ್ತಿದ್ದ. ಮನೆಯ ಮುಂದೇ ಸ್ಕೂಲ್ ಬಸ್ಸ ಬರುತ್ತಿತ್ತು. ಮಕ್ಕಳಿಗೆ ಶಾಲೆಗೆ ಹೋಗಲು, ಬರಲು ಯಾವ ಅಡತಡೆಯೂ ಇರಲಿಲ್ಲ.
ಪರಮ ಒಂದು ರೂಮಿನಲ್ಲಿ, ರುಕ್ಕು ಒಂದು ರೂಮಿನಲ್ಲಿ ಕುಳಿತು ತಮ್ಮ ಪಾಡಿಗೆ ತಾವು ಅಭ್ಯಾಸ ಮಾಡುತ್ತಿದ್ದರು. ಪರಮ ಕುಳಿತ ರೂಮಿನ ಕಿಟಕಿಯಲ್ಲಿ ಯಾರೋ ನಿಂತು ಹೋದಂತನಿಸಿತು. ಪರಮ ಎದ್ದು ಹೋಗಿ, ಕಿಟಕಿಯಲ್ಲಿ ಕತ್ತು ತುರುಕಿ ಹೊರಗೆ ದಿಟ್ಟಿಸಿದ. ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ಮತ್ತೆ ಅದೆ ಕಿಟಕಿಯಲ್ಲಿ ದೃಷ್ಟಿ ನೆಟ್ಟು ಕನ್ನಡ ಪದ್ಯವನ್ನು ಕಂಠಪಾಟ ಮಾಡುತ್ತಿದ್ದ. ಸರಸರನೇ ಹೆಂಗಸೊಬ್ಬಳು ಹಾಯ್ದು ಹೋದದ್ದು ಪರಮ್ಯಾ ನಿಚ್ಚಳವಾಗಿ ಗಮನಿಸಿದ. ಈ ಸಾರಿ ಪರಮನಿಗೆ ಕಿಡಕಿ ಹತ್ತಿರ ಹೋಗಿ ಇಣುಕಿ ನೋಡುವ ಧೈರ್ಯ ಆಗಲಿಲ್ಲ. ಮನೆಯ ಸುತ್ತ ಕಂಪೌಂಡ್ ಇತ್ತು ಒಳಗೆ ಬರದಂತೆ ಅವರಪ್ಪ ಕಬ್ಬಿನದ ಕಟಂಜರಿ ಮಾಡಿಸಿದ್ದದ್ದು ಗೊತ್ತಿತ್ತು. ಇಷ್ಟಿದ್ದರೂ ಒಳಗೆ ಯಾರು ಬಂದಿರಬಹುದೆಂದು. ಅಂಜುತ್ತ ಓಡಿ ಹೋಗಿ ಅವರಕ್ಕನ ಮುಂದೆ ಹೇಳಿದ. ಅವಳಿಗೆ ನಿನ್ನೆಯಿಂದಲೇ ಒಂದು ಅನುಮಾನ ಎದೆಯಲ್ಲಿ ಹುಟ್ಟಿಕೊಂಡಿತ್ತು. ಆ ವಿಷ್ಯಯ ಪರಮನಿಗೆ ಹೇಳಿದರೆ ಹೆದರಿ ಗಿದರ್ಯಾನೆನೋ ಅನ್ನುವ ಕಾರಣಕ್ಕೆ “ಅಲ್ಯಾರ ಬರ್ಬೇಕೋ ಮಾರಾಯಾ, ಹೂವಿನ ಬಳ್ಳಿ ಕೆಳಗಿಂದ ಮ್ಯಾಲ ಏರ್ಯಾವಲ್ಲಾ, ಅವೇ ಗಾಳಿಗೆ ಹೊಯ್ದಾಡಿರ್ತಾವೆ” ಅಂದ್ಳು. ಆದ್ರೂ ಅಂದು ಅವನಿಗೆ ಧೈರ್ಯ ಸಾಲದೆ ಅವರ ಅಕ್ಕನ ಹತ್ತಿರ ಕುಳಿತೇ ಓದತೊಡಗಿದ.
“ಊಟ ರೆಡಿ ಇದೆ ಬರ್ರೋ” ಸುರೇಶ ಕೂಗುವುದೇ ತಡ, ಇಬ್ಬರೂ ಪುಸ್ತಕ ಮಡಚಿಟ್ಟು ಓಡಿದರು.
ಅಪ್ಪ ಚಪಾತಿ ಮಾಡಿದ್ದ, ದಾಲ್ ಮಾಡಿದ್ದ,ಜೀರಾ ರೈಸ್ ಮಾಡಿದ್ದ. ರುಕ್ಕುವಿಗೆ ನಂಬಲಾಗಲಿಲ್ಲ. ಉಪ್ಪಿಟ್ಟು,ಅವಲಕ್ಕಿ, ಅನ್ನ, ಸಾಂಬರ್ ಚಿತ್ರಾನ್ ಬಿಟ್ಟು ಮಾಡಲು ಪರಿತಪಿಸುವ ಅಪ್ಪ, ಸೇಮ್ ಟು ಸೇಮ್ ದಿನಾಲೂ ಅವ್ವ ಅಡುಗೆ ಮಾಡುವಂತೆ ಮಾಡಿದಾಗ ರುಕ್ಕು ಮತ್ತು ಪರಮ ಅಚ್ಚರಿಗೊಂಡರು. ಅಪ್ಪನ ಮುಖವನ್ನೇ ನೋಡುತ್ತ ರುಕ್ಕು “ಇದು ಹೇಗಪ್ಪಾ ನಿನ್ನ ಕೈಯಿಂದ ಈ ರೀತಿ ಅಡುಗೆ” ಅಂದ್ಳು. ನಿಮಗಾಗಿ ಮಕ್ಕಳೆ ಎಂದು ಸುರೇಶ ನಕ್ಕ. ರುಕ್ಕುಳಿಗೆ ಅವನ ನಗೆ ಥೇಟ್ ಅವ್ವನಂತೆ ಅನಿಸಿತು.
ಎಲ್ಲರೂ ಊಟ ಮಾಡಿದರು. ಸುರೇಶ ಟಿ.ವಿ ನೋಡುತ್ತ ಕುಳಿತ. ರುಕ್ಕು ಉಂಡ ತಟ್ಟೆ ಬೆಳೆಗ್ಗೆ ತೊಳೆದರಾಯಿತೆಂದು, ಎತ್ತಿಟ್ಟಳು.ತನ್ನ ಓದಿನ ಕೋಣೆ ಹೊಕ್ಕು ಅಭ್ಯಾಸ ಮಾಡಲು ಅನಿಯಾದಳು. ಅಪ್ಪ ಎಷ್ಟು ಅದ್ಭುತವಾಗಿ ಅಡುಗೆ ಮಾಡುವುದು ಕಲಿತು ಕೊಂಡಿದ್ದಾನೆ. ನಾನು ಅವ್ವನಂತೆ ಅಡುಗೆ ಮಾಡುವುದನ್ನು ಕಲಿಯಬೇಕು. ಅಪ್ಪಾ ದನಿದು ಬಂದಿರುತ್ತಾನೆ. ಅವನ ಗೋಳು ಯಾರು ಕೇಳಬೇಕು. ರುಕ್ಕು ಪುಸ್ತಕ ಹಿಡಿದಿದ್ದಳು ಆದ್ರೇ ಅವಳ ಮನಸ್ಸು ಅವರಪ್ಪ ಮಾಡಿದ ಅಡುಗೆಯತ್ತಲೇ ಇತ್ತು.
ಪರಮ ಉಂಡವನೇ ಅಕ್ಕನ ಬಾಜು ಹೊರಳಿದ. ಸುರೇಶ ಮೊಬೈಲ್ ಗ್ಯಾಲರಿ ತಗೆದು ಅರ್ಚನಾಳ ಭಾವಚಿತ್ರಕ್ಕೊಂದು ಮುತ್ತಿಟ್ಟು ಅಂದು ಬೇಗನೆ ಮಲಗಿದ. ರುಕ್ಕು ಒಬ್ಬಳೇ ಕೋಣಿಯಲ್ಲಿ ಓದುತ್ತಿದ್ದಳು. ಅಡುಗೆ ಮನೆಯಲ್ಲಿ ಏನೋ ಸಪ್ಪಳಾದಂತೆ ಅನಿಸಿತು. ರುಕ್ಕು ಕೈಯಲ್ಲಿದ್ದ ಪುಸ್ತಕ ಪಕ್ಕಕ್ಕಿಟ್ಟು ಏನಿರಬಹುದೆಂದು ಅಡುಗೆ ಮನೆಗೆ ಹೋದಾಗೊಂದು ಅಚ್ಚರಿ ಕಾದಿತ್ತು. ಆಗತಾನೆ ಉಂಡು ಎತ್ತಿಟ್ಟ ತಟ್ಟೆಗಳನ್ನು ತೊಳೆದು ನೀಟಾಗಿ ಇಡಲಾಗಿತ್ತು. ಈ ಕೆಲಸ ಅಪ್ಪಾ ಯಾವಾಗ ಮಾಡಿದ? ಬೆಳಗ್ಗೆ ನಾನು ಬೇಗ ಏಳುವುದಿಲ್ಲವೆಂದು ಈಗಲೆ ತೊಳಿದಿಟ್ಟಿರಬಹುದೆಂದು ರುಕ್ಕು ಅಪ್ಪನ ಮೇಲೆ ಕರುಣೆ ತೋರುತ್ತ, ಅವ್ವನ ಪ್ರೀತಿಯನ್ನು ಅಪ್ಪ ಕೊಡುತ್ತಿರುವ ಅರಿವು ರುಕ್ಕುವಿನಲ್ಲಿ ಆ ಕ್ಷಣ ಮನದಲ್ಲಿ ಮೂಡಿತು. ರುಕ್ಕು ಮತ್ತೆ ರೂಮಿಗೆ ಬಂದ್ಳು. ಪರಮನ ಪಕ್ಕದಲ್ಲಿ ಗೊಂಬೆ ಮಲಗಿತ್ತು. ಈ ಕಳ್ಳ ನಾನಿಲ್ಲದಾಗ ಹೋಗಿ ಗೊಂಬೆ ತಗೆದುಕೊಂಡು ಬಂದು ಮಲಗಿದ್ದಾನೆಂದು ರುಕ್ಕು ಖಾತ್ರಿ ಮಾಡಿಕೊಂಡು ಮತ್ತೆ ಓದಲು ಅನಿಯಾದಳು.
ಯಾರೋ ಅಳುವ ದನಿ ರುಕ್ಕುವಿನ ಕಿವಿಗೆ ಅಪ್ಪಳಿಸಿತು. ಹಿಂತಾ ಹೊತ್ತಲ್ಲಿ ಯಾರಿರಬಹುದು? ಮಕ್ಕಳಂತು ಅಲ್ಲಾ. ದನಿ ಮಾತ್ರ ದೊಡ್ಡವರದೇ, ಅದು ಹೆಂಗಸರದು, ಆ ದನಿ ತನಗೆ ಗೊತ್ತಿದ್ದ ದನಿ ಅನಿಸಿತು. ಪರಮ ಗೊಂಬೆಯ ಮೇಲೆ ಕೈ ಹಾಕಿ ಮಲಗಿದ್ದ. ನಿದ್ದಿಗಣ್ಣಲ್ಲಿ “ಅವ್ವಾ ಅವ್ವಾ ನೀ ಎಲ್ಲಿದ್ದಿಯಾ, ನಮನ್ಯಾಕ ಬಿಟ್ಟ ಹ್ವಾದೀ” ಎಂದು ಬಡಬಡಿಸುತ್ತಿದ್ದ. ರುಕ್ಕು ಪರಮನ ಮೈ ಮುಟ್ಟಿ ಅಲುಗಿಸಿದಳು. ಆಗ ಪರಮ ಸುಮ್ಮನಾದ. ರುಕ್ಕು ಎದ್ದು ಕೋಣಿಯಿಂದ ಹೊರಬಂದು, ಗೋಡೆಯ ಮೇಲಿರುವ ಅವರವ್ವನ ಪೋಟೋ ನೋಡುತ್ತ ಕಣ್ಣೀರಾದಳು. ಕಣ್ಣೊರಸಿಕೊಳ್ಳುತ್ತ ಬಂದು ಮಲಗಿದಳು. ಮಲಗಿದಲ್ಲಿಯೇ ಮತ್ತೆ ಅವರವ್ವನ ನೆನಪು ಒತ್ತರಸಿ ಬಂದಾಗ ಮತ್ತೇ ಬಿಕ್ಕಿದಳು. ಆ ರಾತ್ರಿ ಗೊಂಬೆ ರುಕ್ಕುವಿನ ಪಕ್ಕದಲ್ಲಿ ಅವಳಿಗಂಟಿಕೊಂಡೇ ಮಲಗಿತ್ತು.
*******
ರುಕ್ಕು ಪರೀಕ್ಷೆ ಬರೆದು ತುಂಬಾ ಖುಷಿಯಲ್ಲಿದ್ದಳು. “ನಿಮ್ಮವ್ವನ ಕನಸಿನಂತೆ ಶಾಲೆಗೆ ನೀನೆ ಮೊದಲು ಬರುವೇ ತಾನೇ ಮಗಳೆ” ಎಂದು ಸುರೇಶ ಮಮತೆಯಿಂದ ಮಗಳನ್ನು ಮಾತಾಡಿಸಿದ. ಆಗ ರುಕ್ಕು ಗಳಗಳ ಅಳತೊಡಗಿದಳು. ಮಕ್ಕಳೆದರೂ ಅಪ್ಪಿತಪ್ಪಿ ಅವರವ್ವನ ನೆನಪು ತಗೆಯಲೇ ಬಾರದು. ಅರೆತು ಮರೆತು ತೆಗೆದರೆ ಅವರನ್ನು ನಾನೇ ಮುದ್ದಾಮ್ ಕಣ್ಣೀರು ಹಾಕಿಸಿದಂತಾಗುವುದೆಂದು ಅರಿತ,
ಪರಮನ ಪರೀಕ್ಷೆ ಮುಗಿದಿತ್ತು. ಹೋದ ವರ್ಷ ಅಜ್ಜಿ ಊರಲ್ಲಿ ಇದ್ದು ರಜಾ ದಿನಗಳನ್ನು ಕಳೆದ ನೆನಪು ರುಕ್ಕು ಮಾಡಿಕೊಂಡಳು. ಅವ್ವ ಹೋದ ಮೇಲೆ. ಅಜ್ಜ- ಅಜ್ಜಿ ಅಪ್ಪನಿಗೆ ಅವಮಾನಿಸಿದರು. “ನನ್ನ ಮಗಳನ್ನು ನೀನೇ ನುಂಗಿ ನೀರುಕುಡಿದೆ” ಎಂದು ಸರಾಪಿಸಿದರು. ನನ್ನ ಮಗಳೇ ಹೋದ ಮೇಲೆ ಈ ಮೊಮ್ಮಕಳ ಗೊಡವೇ ನಮಗೇಕೆಂದು ಹೋದವರು ನಮ್ಮನ್ನು ಈ ರಜಾ ದಿನಗಳಿಗೆ ಅವರು ತಮ್ಮೂರಿಗೆ ಕರೆಯುವುದುಂಟೆ. ಚೆ ಚೆ ಕನಸಿನ ಮಾತು.
ಅಪ್ಪನಂತ ಸಂಬಾವಿತ ಜೀವಿ ಈ ಭೂಮಂಡಲದಲ್ಲಿಯೇ ಇಲ್ಲ. ಅವ್ವನನ್ನು ಒಂದು ದಿನವೂ ಬೈದವನಲ್ಲ, ಗದರಿಸಲಿಲ್ಲ, ಅಧಿಕಾರ ಚಲಾಯಿಸಲಿಲ್ಲ, ನೌಕರಿಯ ಧರ್ಪ ತೋರಲಿಲ್ಲ. ಅವ್ವಳೇ ಸಾಕಷ್ಟು ಸಲ ಎದರು ವಾದಿಸುತ್ತಿದ್ದಳು, ಒಂದೊಂದು ಬಾರಿ ಬೈದದ್ದು ಇದೆ. ಇಂಥ ಅಪ್ಪ ಸಿಕ್ಕದ್ದು ನಮ್ಮ ಪೂರ್ವದ ಪುಣ್ಯ. ರುಕ್ಕು ಕುಳಿತಲ್ಲಿಯೇ ತನ್ನ ನೆನಪಿನ ಬುತ್ತಿ ಉಚ್ಚಿ ಮೆಲಕು ಹಾಕುತ್ತಿದ್ದಳು.
ಅರ್ಚನಾ ಸತ್ತಿದ್ದು ಆಕಾಸ್ಮಿಕವಲ್ಲ. ಅದೊಂದು ದುರಂತ. ಸುರೇಶ ಹೆಂಡತಿಯ ಸಲುವಾಗಿಯೇ ಒಂದು ಹೊಸ ಸ್ಕೂಟಿ ಖರಿದಿಸಿದ್ದ. ಅರ್ಚನಾಳ ತಂದೆ ತಾಯಿ ಇದನ್ನು ವಿರೋಧಿಸಿದರೂ ಅರ್ಚನಾಳೆ ಮಕ್ಕಳನ್ನು ಶಾಲೆಗೆ ಬಿಡಲು, ತರಕಾರಿ ತರಲು, ನನಗೂ ಬೇಕಲ್ಲವೇ? ಇಡೀ ರಸ್ತೆಯ ತುಂಬೆಲ್ಲ ಈಗ ಮಹಿಳೆಯರೇ ಹೆಚ್ಚು, ಕಾರು, ಸ್ಕೂಟಿ ಓಡಿಸುತ್ತಿದ್ದಾರೆ, ನಾನು ಸ್ಕೂಟಿ ಕಲಿತರೆ, ಓಡಿಸಿದರೆ ತಪ್ಪೇನಿದೆ ಎಂದು ವಾದಿಸಿದಳು. “ನೀ ಇರುವವಳು ನಮಗೊಬ್ಬಳೆ ಮಗಳೆ ನಾಳೆ ಏನಾದ್ರೂ ಹೆಚ್ಚು ಕಮ್ಮಿಯಾದ್ರೆ?” ಅವರ ತಂದೆ ಅಸಮಾಧಾನದಿಂದ ನುಡಿದ. “ನೋಡ್ರೀ ಈಗ ಹೈಸ್ಕೂಲ್ ಹುಡುಗಿಯರೇ ಬರ್ ಬರ್ ಹೊಡೆದಾಡುವಾಗ ನಿಮ್ಮ ಮಗಳಿಗೆ ಆ ಸ್ಕೂಟಿ ಯಾವ ಲೆಕ್ಕ”ವೆಂದು ಹೇಳುತ್ತ ಸುರೇಶ ನಕ್ಕ. “ಅಳಿಯಂದಿರೆ ನೀವು ಈ ಸ್ಕೂಟಿಯ ಹುಳು ಅವಳ ತೆಲೆಯಲ್ಲಿ ಬಿಡಬಾರದಿತ್ತು. ಇದೆಲ್ಲ ನಿಮ್ಮದೆ ಕಿತಾಪತಿ. ಈಗಲೂ ಕಾಲ ಮಿಂಚಿಲ್ಲ. ಆ ಸ್ಕೂಟಿಯ ಬೆಲೆ ಎಷ್ಟು ಹೇಳಿ ನಾನು ಕೊಡುತ್ತೇನೆ. ಆದ್ರೆ ದಯವಿಟ್ಟು ಅವಳ ಕೈಗೆ ಅದನ್ನು ಕೊಡಬೇಡಿ” ಎಂದು ಮಗಳ ಮೇಲಿನ ಕಾಳ್ಜಿಗೆ ಅರ್ಚಾನಾಳ ತಂದೆ ಅಳೆಯನ ಮುಂದೆ ಅಂಗಲಾಚಿದರು. ಸುರೇಶನಿಗೆ ಅದೆಕೋ ಒಂಥರಾ ಅನಿಸಿತು, “ಆಯ್ತು ಕೊಡಲಾರೆ, ನೀವು ಆ ವಿಚಾರ ಬಿಟ್ಟು ನಿರುಮ್ಮಳಾಗಿರಿ”, ಎಂದು ಸುರೇಶ ಅವರಿಗೆ ಹೇಳಿದಾಗ ಅವರ ಮನಸ್ಸು ಹಗುರಾಯಿತು.
ಸುರೇಶ ಬ್ಯಾಂಕ್ ಗೆ ಹೋದ , ಮೊಮ್ಮಕ್ಕಳು ಸ್ಕೂಲ್ ಗೆ ಹೋದರು. ಆಗ ಅರ್ಚನಾ ಒಬ್ಬಳೇ ಮನೆಯಲ್ಲಿ ಇದ್ದಾಗ ಅವಳತಂದೆ ತಾಯಿ ಊರಿಗೆ ಹೋಗುವ ಮೊದಲು ಮತ್ತೊಮ್ಮೆ “ತಂಗಿ ಸ್ಕೂಟಿ ಉಸಾಬರಿ ಮಾಡ್ಬೇಡ” ಎಂದು ಗಿಳಿಗೆ ಹೇಳಿದಂತೆ ಹೇಳಿ ಹೋಗಿದ್ದರು, ಅರ್ಚನಾ ಅವರನ್ನು ಸಮಾಧಾನ ಪಡಿಸಲು, ಹೂಂ ಎಂದು ಹೇಳಿ ಅವರನ್ನು ಊರಿಗೆ ಬಿಳ್ಕೊಟ್ಟಳು.
ಶನಿವಾರ, ರವಿವಾರ ಸುರೇಶ ಹೆಂಡತಿಗೆ ಸ್ಕೂಟಿ ಅಬ್ಯಾಸ ಮಾಡಿಸತೊಡಗಿದ. ಅರ್ಚನಾ ಒಂದೇ ತಿಂಗಳಲ್ಲಿ ಸ್ಕೂಟಿ ಓಡಿಸುವುದು ಅಚ್ಚುಕಟ್ಟಾಗಿ ಅಡುಗೆ ಮಾಡುವುದು ಕಲಿತಂತೆ ಸ್ಕೂಟಿ ಓಡಿಸುವುದೂ ಕಲಿತಳು.
ಅರ್ಚನಾ ಸ್ಕೂಟಿ ಕಲಿತ ಮೇಲೆ ಯಾವುದಕ್ಕೂ ಅವಳು ಸುರೇಶನ ಹಾದಿ ಕಾಯುತ್ತಿರಲಿಲ್ಲ, ತರಕಾರಿ ಬೇಕಾದ್ರೇ ಅವಳೇ ಮಾರ್ಕೇಟಗೆ ಹೋಗುತ್ತಿದ್ದಳು, ಮಕ್ಕಳನ್ನು ಶಾಲೆಗೆ ಕಳಿಸುವುದು, ಕರೆದುಕೊಂಡು ಬರುವುದು ಮಾಡತೊಡಗಿದಳು. ಸುರೇಶನಿಗೆ ಹೆಂಡತಿ ಸ್ಕೂಟಿ ಕಲಿತ ಮೇಲೆ ಒಂದಿಷ್ಟು ಕೆಲಸ ಕಡಿಮೆಯಾಗಿ ಅವನು ಹಾಯಾಗಿದ್ದ.
ಅದೊಂದು ದಿನ ಇಳುಹೊತ್ತಿನ ಸಮಯದಲ್ಲಿ ಅರ್ಚನಾ ಸ್ಕೂಟಿ ಓಡಿಸಿಕೊಂಡು, ಮಾರ್ಕೇಟ್ ಗೆ ಹೊರಟಿದ್ದಳು, ಆ ನಗರದ ರಾಜಕೀಯ ಪುಡಾರಿಯ ಮಗ ಮೋಬೈಲಲ್ಲಿ ಮಾತಾಡುತ್ತ ಕಾರ ಶರವೇಗದಲ್ಲಿ ಓಡಿಸಿಕೊಂಡು ಹೋಗುತ್ತಿದ್ದ. ದಾರಿಯ ಅಕ್ಕಪಕ್ಕ ಇದ್ದವರು ಅಂವನನ್ನು ಬೆರಗಾಗಿ ನೋಡುತ್ತಿದ್ದರು. ನಗರದಲ್ಲಿ ಎದ್ವಾ ತದ್ವಾ ಸ್ಪೀಡಲ್ಲಿ ಓಡಿಸುತ್ತಿದ್ದ ಕಾರನ್ನು ನಿಲ್ಲಿಸಿ ದಂಡ ಬಿಗಿಯುವ ತಾಕತ್ತು ಅದೇ ರೋಡ್ ಮೇಲೆ ನಿಂತ ಟ್ರಾಪಿಕ್ ಪೋಲಿಸರಿಗೂ ಬರಲಿಲ್ಲ. ಆ ಧೈರ್ಯ ಅಧಿಕಾರ ಮತ್ತು ಹಣದ ಮುಂದೆ ಮಂಡೆಯೂರಿತ್ತು.
ಅರ್ಚನಾಳ ಸ್ಕೂಟಿಗೆ ಹಿಂದಿನಿಂದ ಗುದ್ದಿ ಬರಗುಡುತ್ತ ಹೋದ ಆ ಪುಡಾರಿ ಮುಂದಾಗವ ಅನಾಹುತಕ್ಕೆ ತನ್ನ ಮೇಲೆ ಯಾವ ಅಪಾದನೆ ಬಾರದಂತೆ, ಮುಂದೆ ಹೋಗಿ ಪೋಲಿಸರ ಕೈ ಬಿಸಿ ಮಾಡಿ ಪರಾರಿಯಾಗಿದ್ದ. ಅರ್ಚನಾ ಹೆಣವಾಗಿ ಮಲಗಿದ್ದಳು. ಇಡೀ ನಗರದ ಜನರು ಅವಳ ಹೆಣದ ಸುತ್ತ ನಿಂತು ಮರಕವ್ಯಕ್ತಪಡಿಸುತ್ತಿದ್ದರು. ಆ ಪುಡಾರಿಗೆ ಶಾಪ ಹಾಕುತ್ತಿದ್ದರು. “ಲೈಸನ್ಸ ಇಲ್ಲದೆ ಹಿಂಗ ಗಾಡಿ ಓಡಿಸೋದು ಎಷ್ಟ ಅಪರಾದ ಅನ್ನುದ ಗೊತ್ತಾತಿಲ್ಲೋ, ಸರಕಾರ ಹೆಲ್ಮೆಂಟ್ ಹಾಕೂವ ರೂಲ್ಸ್ ಸುಮ್ಮ ಸುಮ್ನ ಮಾಡೆತೇನೂ” ಎಂದು ಅಲ್ಲಿದ್ದ ಪೋಲಿಸಪ್ಪ ಸತ್ತ ಹೆಣದ ಮುಂದೆ ನಿಂತು ಗುಡುಗುತ್ತಿದ್ದ. ಸುರೇಶ ಬ್ಯಾಂಕಿನಿಂದ ಬಂದು ಹೆಂಡತಿಯ ಗತಿ ನೋಡಿ ಬೋರಾಡಿದ. ಅರ್ಚನಾಳ ತಂದೆ ತಾಯಿ ಸುರೇಶನನ್ನು ಅಂದು ಬೈದು ಹೋದವರು ಮರಳಿ ಅವನ ಮನೆ ಬಾಗಿಲು ತುಳಿದಿರಲಿಲ್ಲ. ಮೊಮ್ಮಕಳ ಮಾರಿ ಕೂಡಾ ನೋಡುವಷ್ಟು ಪ್ರೀತಿ ಅವರ ಎದೆಯಲ್ಲಿ ಉಳಿಯದೆ ಮಗಳ ಸಾವಿನೊಂದಿಗೆ ಅದು ಬತ್ತಿಹೊಗಿತ್ತು.
*****
ಆ ದಿನ ಸುರೇಶನೇ ಗಾಬರಿಯಾಗಿದ್ದ.
ದಿವಾನ ಕಾಟಾದ ಮೇಲೆ ಮಲಗಿದ್ದವನ ಬಾಜು ಗೊಂಬೆ ಇರುವುದು ಕಂಡಿತು. ರುಕ್ಕುನೋ ಪರಮನೋ ಇಲ್ಲಿ ತಂದಿಟ್ಟಿರಬಹುದೆಂದು ಅಂದುಕೊಂಡು ಆ ಗೊಂಬೆಯನ್ನೆತ್ತಿಕೊಂಡು ಹೋಗಿ ಶೋಕೆಸ್ ನಲ್ಲಿ ಇಟ್ಟು ಗ್ಲಾಸ್ ಸರಿಸಿದ. ಆ ಶೋಕೆಸ್ ನಲ್ಲಿ ಗೊಂಬೆ ತುಂಬಾ ಶೋಬಾಯಮಾನವಾಗಿ ಕಾಣತೊಡಗಿತು. ರುಕ್ಕು ಮತ್ತು ಪರಮ ಆ ಗೊಂಬೆ ನೋಡಿ “ಅಬ್ಬಾ.! ಎಷ್ಟು ಸೊಗಸಾಗಿ ಕಾಣುತ್ತಿದೆ” ಎಂದು ಉದ್ಗಾರ ತೆಗೆದರು.
ಮರುದಿನ ಆ ಗೊಂಬೆ ರುಕ್ಕು ಮತ್ತು ಪರಮನ ಮದ್ಯಲ್ಲಿ ಮಲಗಿರುವುದು ಕಂಡು ಸುರೇಶ ಆ ಕ್ಷಣ ದಿಗಿಲಾದ. ಮಕ್ಕಳು ನನಗಿಂತ ಮೊದಲೇ ಮಲಗಿದ್ದಾರೆ. ಅವರು ಮಲಗಿದಾಗ ಈ ಗೊಂಬೆ ಶೋಕೇಸ್ ನಲ್ಲಿಯೇ ಇತ್ತು. ಅದನ್ನು ರಾತ್ರಿ ಇಬ್ಬರಲ್ಲೊಬ್ಬರು ಯಾರೋ ಎತ್ತಿಕೊಂಡು ಹೋಗಿರಬಹುದೆಂದು ಸ್ನಾನ ಮಾಡಿ, ತಿಂಡಿ ತಿಂದು ಬ್ಯಾಂಕ್ ಗೆ ಹೋದ.
ರುಕ್ಕು ಪರಮ ಮತ್ತೆ ಈ ಗೊಂಬೆಯನ್ನು ಶೋಕೇಸ್ ನಿಂದ ತಂದಿದ್ದಾನೆಂದು ಮತ್ತದೆ ಜಾಗಕ್ಕೆ ಹೋಗಿಟ್ಟಳು. ರುಕ್ಕು ತಡವಾಗಿ ಎದ್ದಿದ್ದರಿಂದ ಅವರಪ್ಪಾ ಸ್ನಾನ ಮಾಡಿ, ತಿಂಡಿತಿಂದು ಹೋಗಿದ್ದು ಅರಿತಳು. ಪರಮ ಮತ್ತು ರುಕ್ಕು ತಾವೂ ಸ್ನಾನ ಮಾಡಿ ಅವರಪ್ಪ ಮಾಡಿಟ್ಟ ಪುಳೀವಗರ ರುಚಿ ಸವಿದರು. ಅರ್ಧ ಓದಿಟ್ಟ ಗೀತಾನಾಗಭೂಷಣರ “ಬದುಕು” ಕಾದಂಬರಿಯ ಪುಟ ತಿರುವಿ ರುಕ್ಕು ಓದತೊಡಗಿದಳು. ಪರಮ ಟಿ.ವಿ ಮುಂದೆ ಟಿಕಾನಿ ಹೂಡಿದ.
ಆ ಗೊಂಬೆ ಓದುತ್ತ ಕುಳಿತ ರುಕ್ಕುವಿನ ಬಾಜು ಬಂದು ಕುಳಿತಿತ್ತು. ಆಗ ರುಕ್ಕು ನಡುಗಿದಳು, ಮೈ ಬೆವರೊಡೆಯಿತು. ಅವಳಿಗೆ ಆ ಕ್ಷಣ ಮನದಲ್ಲಿ ಮೂಡಿದ್ದು ಈ ಗೊಂಬೆಯನ್ನು ಹೊರಗೆ ಬಿಸಾಕಬೇಕು. ಈ ಸಂಗತಿ ಪರಮನಿಗೆ ತಿಳಿಸಬಾರದು, ಹೇಳಿದರೆ ಹೆದರಿ ಏನೇನು ಮಾಡವನೋ ಆಭಯದಿಂದ ರುಕ್ಕು ಅವನಿಗೆ ತಿಳಿಸದೆ, ಆ ಗೊಂಬೆಯನ್ನು ಮನೆಯ ಕಂಪೌಂಡಿನಾಚೆ ಮುಳ್ಳು ಕಂಟಿಯಲ್ಲಿ ಯಾರಿಗೂ ಕಾಣದಂತೆ ಎಸಿದು ಬಂದು ನಿರಾಳವಾಗಿ ಮತ್ತೆ ಓದಲು ಕುಳಿತಳು.
ಸುರೇಶ ಬ್ಯಾಂಕಿನಿಂದ ಬಂದವನು ಒಂಥರಾ ಇದ್ದ ಅವನ ಮುಖ ಸಪ್ಪಾಗಿರುವುದು ರುಕ್ಕು ಗಮನಿಸಿದಳು.
ಯಾಕಪ್ಪ ತಲೆ ನೋವಾ? ಯಾಕಿಷ್ಟು ಡಲ್ಲಾಗಿರುವೇ ? ಕೇಳಿದಳು.
“ಬ್ಯಾಂಕ್ ರಗಳೇ ಮಗಳೆ,” ಅಂದ.
“ಅದೆಂಥದ್ದು?”
“ಅಯ್ಯೋ ಅದೇ ಮ್ಯಾನೇಜರ್ ಕಿರಕಿರಿ ಅಮ್ಮಾ”
“ಏನಾದ್ರೂ ಬೈದ್ರಾ?”
“ದೊಡ್ಡ ಜಗಳವೇ ಆಯ್ತು”
“ಅವನ ಜೊತೆ ನಿನ್ಯಾಕೆ ಜಗಳಕ್ಕಿಳಿದೆ ಅಪ್ಪಾ”
“ಬಡ್ಡಿ ಮಗಾ ಬಡವರ ದುಡ್ಡು ನುಂಗಿ ನೀರ ಕುಡಿಬೇಕಂತಾನೆ” ಅದಕ್ಕೆ ಜಗಳ ಮಾಡಿದೆ.
“ಯಾವದ ದುಡ್ಡು, ಅಂವ್ಯಾಕೆ ನುಂಗಿದ, ನಿನಗು ಅದಕ್ಕು ಏನಪ್ಪಾ ಸಂಬಂದ?” ಅವರಪ್ಪನೊಂದಿಗೆ ಮಾತಾಡುತ್ತಲೇ ಬಿಸಿ ಬಿಸಿ ಕಾಫಿ ಮಾಡಿ ಕೊಟ್ಟಳು ರುಕ್ಕು.
“ಬಡ ರೈತರ ಬೆಳೆ ಹಾನಿ ಯಲ್ಲಿ ಕತ್ರಿ ಹಾಕಿದ್ದ, ನಾ ಹಿಡಿದು, ಉಗಿದೆ, ನನ್ನ ನೀರಲಿಲ್ಲದ ಜಾಗಕ್ಕೆ ಹಾಕಸ್ತಿನೆಂದು ಸವಾಲ್ ಮಾಡಿದ, ಅದಕ್ಕೆ ನಾನು ಸಿಡಿದೆದ್ದು ಹಿಗ್ಗಾಮುಗ್ಗಾ ಜಾಡಿಸಿದೆ, ಅದೇ ಜಗಳ ಅಷ್ಟೇ” ಎಂದು ಸುರೇಶ ಮಗಳಿಗೆ ಹೇಳುತ್ತ. ಕುಂತ ಜಾಗದಲ್ಲಿಯೇ ಹೊರಳಿದ. ರುಕ್ಕು ಅವರಪ್ಪನ ತಲಿಗೆ ಒಂದಿಷ್ಟು ಜಂಡುಬಾಮ್ ಸವರಿದಳು.
ರಾತ್ರಿಯ ಅಡುಗೆ ಸಿದ್ದವಾಗಿತ್ತು.ಎಲ್ಲರೂ ಉಂಡು ಹುಡುಗರಿಬ್ಬರು ಮಲಗಿದರು, ಸುರೇಶ ಎಚ್ಚರಿದ್ದ. ಇದ್ದಕಿದ್ದಂತೆ ಅವನ ಲಕ್ಷ ಶೋಕೇಸ್ ಕಡೆ ಹೋಯಿತು, ಅಲ್ಲಿ ಗೊಂಬೆ ಇರಲಿಲ್ಲ. ಹುಡುಗರು ಮನೆಯಲ್ಲಿರ್ತಾರೆ, ಆಟಾಗೀಟಾ ಆಡಲೇನದ್ರೂ ತಗೆದುಕೊಂಡಿರಬಹುದೆಂದು ಅರಿತು ತನೂ ಮಲಗಿದ. ರಾತ್ರಿ ಯಾರೋ ಅವನ ಪಕ್ಕದಲ್ಲಿ ಕುಳಿತು ತಲೆ ಸವರಿದಂತೆ ಅನಿಸಿತು. ಥಟ್ಟನೇ ಎಚ್ಚರಾಗಿ ಕಣ್ಣುಬಿಟ್ಟು ಕುಳಿತ. ಯಾರೂ ಇರಲಿಲ್ಲ. ಅವನ ಹತ್ತಿರ ಗೊಂಬೆ ಮಲಗಿತ್ತು. ಇದು ಇಲ್ಲಿ ಹೇಗೆ ಬಂತು? ಎಂದು ಅನುಮಾನಿಸಿ ಲೈಟ್ ಹಚ್ಚಿದ. ರಾತ್ರಿ ಎರಡು ಗಂಟೆಯಾಗಿತ್ತು. ಮಕ್ಕಳು ಮಲಗೇ ಇದ್ದರು. ಇದೇನು ವಿಚಿತ್ರ ಮಲಗುವಾಗ ನನ್ನ ಬಳಿ ಇರಲಿಲ್ಲ. ಈಗ ನನ್ನ ಪಕ್ಕದಲ್ಲಿದೆಯಲ್ಲ, ಅದುವಲ್ಲದೆ ನನ್ನ ತಲೆಯನ್ನು ಯಾರೋ ಸವರಿದಂತಾಯಿತಲ್ಲ ಅದು ಹೇಗೆ? ನನಗೇನಾದ್ರೂ ಕನಸು ಗಿನಸು ಬಿದ್ದರಬಹುದೇ? ಸುರೇಶ ತನ್ನ ತಳಮಳಕ್ಕೆ ನೂರೆಂಟು ದಾರಿ ಹುಡುಕಿದ ಸರಿ ಯಾವುದೆನ್ನುವುದು ಅವನ ತರ್ಕಕ್ಕೇ ಬರಲಿಲ್ಲ. ಮತ್ತೆ ಗೊಂಬೆಯನ್ನು ಇಟ್ಟು ಶೋಕೆಸ್ ನ ಗ್ಲಾಸ್ ಎಳೆದ. ನಾಳೆ ಈ ಗೊಂಬೆಯನ್ನು ಕಾಣಬಾರದ ಜಾಗಕ್ಕೆ ಕಳಿಸಬೇಕೆಂದು ವಿಚಾರಿಸಿದ ಬೆಳಕು ಮೂಡುವ ಹೊತ್ತಿಗೆ ಅವನಿಗೆ ನಿದ್ದೆಯ ಜಂಪು ಹತ್ತಿತು.
ರುಕ್ಕು ಎಲ್ಲರಿಗಿಂತ ಮೊದಲೆದ್ದಳು. ಮೋತಿ ತೊಳೆದು ಹಲ್ಲುಜ್ಜುತ್ತ ನಿಂತವಳಿಗೆ ಶೋಕೇಸ್ ನಲ್ಲಿ ಕಂಡದ್ದು ಅದೇ ಗೊಂಬೆ. ಅವಳಿಗೆ ಪರಮಚ್ಚರಿ. ಮನೆಯಲ್ಲಿ ಏನೋ ಒಂದು ಜಾದೂ ನೆಡೆಯುತ್ತಿದೆ.ಶೋಕೆಸ್ ತಗೆದು ಅದನ್ನು ತಳಬುಡವೆಲ್ಲ ವೀಕ್ಷಣೆ ಮಾಡಿದರೂ ಅದೇ ಗೊಂಬೆ. ನಿನ್ನೇ ಕಂಟಿಯಲ್ಲಿ ಎಸೆದು ಬಂದಿದ್ದೆ. ಮತ್ತೆ ಇಲ್ಲಿ ಹೇಗೆ ಬಂತು. ನಿಗೂಡತೆ ಹೆಚ್ಚಿತು. ರುಕ್ಕು ಬೆಚ್ಚಿದಳು.
ಸುರೇಶ ಕಣ್ಣುತಿಕ್ಕುತ್ತ ಮೇಲೆದ್ದ. ರುಕ್ಕುವಿನ ಕೈಯಲ್ಲಿದ್ದ ಆ ಆಟದ ಗೊಂಬೆ ನೋಡಿ. “ಓ ಹೋ ಈ ಗೊಂಬೆಯ ಕಿತಾಪತಿ ಇವಳದಾ?” ಮುಖತೊಳೆದು ಕಾಫಿ ಕುಡಿದ. ರುಕ್ಕು ಗೊಂಬೆಯನ್ನು ಟಿಪಾಯಿ ಮೇಲೆ ಇಟ್ಟು ಹೋಗಿದ್ದಳು. ಇಂದು ನಿನಗೊಂದು ಗತಿ ಕಾಣಿಸಬೇಕೆಂದಿದ್ದೇ ಮಕ್ಕಳಿಗೆ ನೀನಂದ್ರೇ ಇಷ್ಟ, ನಿನ್ನೊಟ್ಟಿಗೆ ಆಡುತ್ತಾರೆ. ಅದನ್ನು ಪುಟ್ಟ ಮಗುವಿನಂತೆ ಕೈಯಲ್ಲಿ ಹಿಡಿದು ಮುದ್ದಿಸಿದ. ಮತ್ತಲ್ಲೆ ಮಗಳಿಟ್ಟ ಜಾಗದಲ್ಲಿಟ್ಟು ಸ್ನಾನದ ಕೋಣಿ ಹೊಕ್ಕ.
ತಂದೆ ಬ್ಯಾಂಕ್ ಗೆ ಹೋದ ಮೇಲೆ ರುಕ್ಕು ಆ ಗೊಂಬೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಳು. ಇಡೀ ದಿನ ತನ್ನ ಹತ್ತಿರದಲ್ಲಿಯೇ ಆ ಗೊಂಬೆಯನ್ನು ಇಟ್ಟುಕೊಂಡು ಓದತೊಡಗಿದ್ದಳು. ಆ ಗೊಂಬೆ ಅವಳ ಹತ್ತಿರವೇ ಇತ್ತು. ಆ ಗೊಂಬೆಯ ಮೇಲಿದ್ದ ಅನುಮಾನ ಅವಳೆದೆಯಿಂದ ಆಗಷ್ಟೇ ಕರಗಿತು.
ಓದುತ್ತ ಆ ಹಗಲೇ ರುಕ್ಕು ಹಾಸಿಗೆಯಲ್ಲಿ ಹೊರಳಿದಳು. ನಿದ್ದೆ ಹತ್ತಿತು. ಅವೆಳೆದ್ದು ಕುಂತಾಗ ಆ ಗೊಂಬೆಯನ್ನು ಪರಮ ತನ್ನ ತೊಡೆಯ ಮೇಲೆ ಇಟ್ಟುಕೊಂಡು ಅದರ ತಲೆ ಸವರುತ್ತಿದ್ದ.
ಮ್ಯಾನೇಜರ್ ಬೈಕ್ ಮೇಲಿಂದ ಬಿದ್ದು ಕಾಲು ಮುರಿದುಕೊಂಡಿದ್ದ. ನಿನ್ನೇ ತಾನೇ ಸುರೇಶನೊಂದಿಗೆ ಹಣಗಲ ಸೋಸಿ, ನಿನ್ನ ನೀರಿಲ್ಲದ ಜಾಗಕ್ಕೆ ಅಟ್ಟುತ್ತೇನೆಂದು ಶಪತ ಮಾಡಿದ್ದ. ಇಂದು ಅವನೇ ಕಾಲು ಮುರಿದುಕೊಂಡು ಹಾಸಿಗೆ ಮೇಲೆ ಒರಗಿದ್ದ. ಬ್ಯಾಂಕಿನ ಎಲ್ಲ ಸಿಬ್ಬಂದಿಗಳು ಮ್ಯಾನೇಜರ ನೋಡಲು, ಮಾತಾಡಿಸಲು, ಬ್ಯಾಂಕ್ ಅವಧಿ ಮುಗಿದ ಮೇಲೆ ಹೋಗುವುದಾಗಿ ಮಾತಾಡಿಕೊಂಡರು. ಸುರೇಶನಿಗೆ ಅನಿವಾರ್ವವಾಯಿತು. ಮನುಷ್ಯನಿಗೆ ಅನುವು ಆಪತ್ತು ಬಂದಾಗ ಸ್ಪಂದಿಸದಿದ್ರೆ ಅವನು ಮನುಷ್ಯನೇ ಅಲ್ಲಾ. ಮ್ಯಾನೇಜರ್ ಆಡಿದ ಮಾತು ಪಕ್ಕಕ್ಕೆ ಸರಿಸಿ, ನಾಕು ಆಪಲ್ ಹಣ್ಣು, ಎರಡು ಬಿಸಕಿಟ್ ತಗೆದುಕೊಂಡು ತನ್ನ ಸಿಬ್ಬಂದಿ ಜೊತೆಗೆ ಮ್ಯಾನೇಜರ ನೋಡಲು ಅವರ ಮನೆಗೆ ಹೋದ.
ಹಾಸಿಗೆ ಮೇಲೆ ನರಳುತ್ತ ಬಿದ್ದಿದ್ದ ಮ್ಯಾನೇಜರ್ ತನ್ನ ಸಿಬ್ಬಂದಿಗಳು ಬಂದಾಗ ತನ್ನ ನೋವನ್ನು ನುಂಗಿ ತುಸು ಅವರೊಟ್ಟಿಗೆ ಆದ ಗಟನೆ ಹಂಚಿಕೊಂಡ, ಸುರೇಶನ ನೋಡಿದ ಕೂಡಲೇ ಅವನ ದೊಡ್ಡಸ್ತಿಕೆ, ಅಧಿಕಾರದ ದಾಹ ನೆಲಕ್ಕುರುಳಿ ಮಣ್ಣು ಗೂಡಿತ್ತು. ಸುರೇಶ ಮ್ಯಾನೇಜರ್ ಯೋಗಕ್ಷೇಮ ವಿಚಾರಿಸಿದ. ನಿನ್ನೆ ನೆಡೆದ ಘಟನೆ ಒಂದು ಕನಸೆಂದು ಮರೆತು ಬಿಡು ಸುರೇಶ ಎಂದು ದೈನಾಸದಿಂದ ನುಡಿದ. ಅವನ ಹೆಂಡತಿ ಎಲ್ಲರಿಗೂ ಕುಡಿಯಲು ಕಾಫಿ ಕೊಟ್ಟಳು. ಎಲ್ಲರೂ ಕಾಫಿ ಕುಡಿಯುತ್ತಿದ್ದರು. ಸುರೇಶ್ ಕಾಫಿ ಕುಡಿಯುತ್ತ ಮ್ಯಾನೇಜರ್ ಮನೆಯನೊಮ್ಮೆ ಕಣ್ಣಲ್ಲೇ ಸರ್ವೆ ಮಾಡಿದ. ಮ್ಯಾನೇಜರ್ ಮನೆಯ ಗಾಜಿನ ಶೋಕೇಸ್ದಲ್ಲಿ ಅವರ ಮನೆಯಲ್ಲಿದ್ದಂತ ಆಟದ ಗೊಂಬೆಯೊಂದು ಸುರೇಶನ ಮನಸನ್ನು ಕದಡಿತು. ಅರೇ ಇದು ನಮ್ಮನೆಯಲ್ಲಿದ್ದ ಗೊಂಬೇ..! ಅವನ ಎದೆಭಾವದಲ್ಲಿ ಮೂಡಿದ ಭಾವನೆ ಎಷೋ ಹೊತ್ತು ಕರಗಲೇ ಇಲ್ಲ.
ಸುರೇಶ ಮನೆಗೆ ಬಂದಾಗ ಮಗ ಟಿ.ವಿ ನೋಡುತ್ತ ಗೊಂಬೆಯ ಮೈ ಸವರುತ್ತ ಕುಳಿತಿದ್ದು ಕಂಡು ಸಮ್ಮನೇ ನಕ್ಕ.
******
ರುಕ್ಕುವಿನ ರಿಸೆಲ್ಟ್ ಬಂದಿತ್ತು. ಶಾಲೆಗೆ ಅವಳೇ ಮೊದಲ ರ್ಯಾಂಕ್. ಎಲ್ಲ ಶಿಕ್ಷಕರೂ, ಗೆಳೆಯರು, ಗೆಳತಿತರೂ ಅವಳಿಗೆ ಅಭಿನಂದನೆ ಹೇಳಿದ್ದೇ ಹೇಳಿದ್ದು. ಶಾಲೆಯಲ್ಲಿ ಹೆಚ್ಚು ಹೊತ್ತು ನಿಲ್ಲದೆ ಮನೆಗೋಡಿ ಬಂದಳು. ಪರಮ “ಅಕ್ಕಾ ಏನಾತು ನಿನ್ನ ರಿಸೇಲ್ಟ್” ಅಂದ. “ಮೊದಲ ರ್ಯಾಂಕ್ ನಂದೇ” ಅಂದಳು. ಅಂವ ಮರು ಮಾತಾಡದೇ ಟಿ.ವಿ ನೋಡುತ್ತ ಕುಳಿತಿದ್ದ. ರುಕ್ಕು ರೂಮಿನೊಳೆಗೆ ಕುಳಿತು ತನ್ನ ತಾಯಿ ನೆನೆಸಿಕೊಂಡು ಬಿಕ್ಕತೊಡಗಿದಳು. “ಅವ್ವ ಇದ್ರೇ ತುಂಬಾ ಖುಷಿ ಪಡುತ್ತಿದ್ಳು” ಎಂದು ತಾಯಿ ನನೆದು ಹಾಸಿಗೆ ಮೇಲೆ ಶರಣಾದಳು. ಆಗವಳ ಪಕ್ಕದಲ್ಲಿ ಆ ಗೊಂಬೆ ಇತ್ತು. ರುಕ್ಕು ಆ ಗೊಂಬೆಯನ್ನು ಹಿಡಿದು ಮುದ್ದಾಡಿದಳು. ಪರಮ ಅದನ್ನು ಕಂಡು “ನಮ್ಮಕ್ಕಾ ಬರಬರುತ್ತಾ ಸಣ್ಣ ಹುಡುಗಿ ಯಾಗುತ್ತಿದ್ದಾಳೆಂದು” ನಕ್ಕ. ರಜಾ ದಿನಗಳ ಹೋಮ್ ವರ್ಕ ಮಾಡಲು ಪಾಟಿ ಚೀಲದ ಮುಂದೆ ಕುಂತ. ರುಕ್ಕು ಅಡುಗೆ ಮನಿ ಹೊಕ್ಕಳು.
ಕೇಸರಿಬಾತ್ ಕ್ಯಾರೇಟ್ ಹಲ್ವಾ ಕಂಡಿತು.ಅಪ್ಪ ನನಗಾಗಿ ಮಾಡಿಟ್ಟಿದ್ದಾನೆಂದು ರುಕ್ಕು ಬಾಯಿ ಚಪ್ಪರಿಸಿದಳು.
ಮದ್ಯಾನ ಪೋನ್ ಮಾಡಿ ಅಪ್ಪನಿಗೆ ತನ್ನ ರೀಸೆಲ್ಟ ತಿಳಿಸಿದ್ದಳು ರುಕ್ಕು. ಸುರೇಶ ಬ್ಯಾಂಕಿನ ಸಿಬ್ಬಂದಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದ. ಮನೆಗೆ ಬರುವಾಗ ಮಕ್ಕಳಿಗಾಗಿ ಕುಂದಾ, ಧಾರವಾಡ ಮಿಶ್ರಾ ಪೇಡಾ ತಂದಿದ್ದ. ಮಗಳಿಗೆ ಸಿಹಿ ತಿಸಿ ತಾನೂ ತಿಂದಿದ್ದ. ಅಡುಗೆ ಮನಿಗೆ ಹೋದಾಗ ಕ್ಯಾರೇಟ್ ಹಲ್ವಾ ಅವನ ಗಮನ ಸೆಳೆಯಿತು. ಅಬ್ಬಾ.! ಮಗಳು ಹಲ್ವಾ ಮಾಡುವುದೂ ಕಲಿತಿದ್ದಾಳೆಂದು ಒಂದಿಷ್ಟು ತಿಂದು “ಮಗಳೇ ಹಲ್ವಾ ಸೂಪರಿದೆ ಅಮ್ಮಾ” ಅಂದ. “ಹೌದಪ್ಪಾ ಬಾರೀ ಸ್ವಾದಿಷ್ಟವಾಗಿದೆ” ನಾನೂ ತಿಂದೆ ಅಂದ್ಳು.
“ಇಂದು ರಾತ್ರಿ ಎಲ್ಲರೂ ಹೊರಗಡೆ ಊಟಕ್ಕೆ ಹೋಗೋಣ”ವೆಂದು ಸುರೇಶ ಮಕ್ಕಳಿಗೆ ಹೇಳಿದ. ಮಕ್ಕಳಿಬ್ಬರೂ ಸಂಬ್ರಮಿಸಿದರು. ಕಾರ್ ಒಯ್ಯೋದೋ.. ಸ್ಕೂಟಿ ಒಯ್ಯೋದೋ ಸುರೇಶನ ಮನದಲ್ಲಿ ಗೊಂದಲ. ಕಡೆಗೂ ಪರಮ ಕಾರ್ ಚಾವಿ ಹಿಡಿದು ಹೋಗಿ ಎಲ್ಲರಿಗಿಂತ ಮೊದಲೇ ಕಾರಲ್ಲಿ ಹೋಗಿ ಕುಳಿತುಕೊಂಡ.
ಕಾಮತ್ ಹೊಟೇಲ್ ನತ್ತ ಸುರೇಶನ ಕಾರ್ ಓಡುತ್ತಿತ್ತು. ರಸ್ತೆಯಲ್ಲಿ ಆ ಸಂಜೆಗತ್ತಲ್ಲಿ ಜನ ಗಿಜಿಗಿಜಿ .ನೀಧಾನವಾಗಿ ಸುರೇಶ ರೂಟ್ ಬದಲಿಸಿ ಒಳದಾರಿ ಹಿಡಿದು. ಮಾರ್ಕೇಟ್ ರೋಡ್ ಕ್ರಾಸ್ ಮಾಡಿದ. ಅಲ್ಲಿ ರಸ್ತೆಯ ಮೇಲೆ ಮಂದಿ ಗುಬಗುಡಿದ್ದರೂ, ಐದಾರು ಪೋಲಿಸರ ಜೀಪುಗಳು, ಏನಾಗಿರಬಹುದೆಂದು ಸುರೇಶ ಕಾರ್ ಒಂದು ಕಡೆ ನಿಲ್ಲಿಸಿ, ನಿಂವು ಒಂತಟಗ ಕಾರಲ್ಲೇ ಕುಂದ್ರಿ ಎಂದು ಮಕ್ಕಳಿಗೆ ಹೇಳಿ ಸುರೇಶ ಆ ಗದ್ದಲ ಸೀಳಿ ಹೋಗಿ ಏನಾಗಿದೆ ಎಂದು ಗಮನಿಸಿದ. ಪೋಲಿಸಪ್ಪನ ಮೇಲೆ ಲಾರಿ ಹರಿದು ಹೋಗಿತ್ತು. ಅವನ ದೇಹದ ಯಾವ ಭಾಗವೂ ಖೂನುಸಿಗುಂತಿರಲಿಲ್ಲ. “ಇಂವಾ ಭಾಳ ಲಂಚಾ ತಗೋತಿದ್ದ ಅದಕ್ಕ ದೇವ್ರ ಇಂವಗ ಇಂಥಾ ಸಾವ ಕೊಟ್ಟಾ ನೋಡು” ಆ ಜನರ ಮದ್ಯ ಒಬ್ಬ ಮಾತಾಡಿದ ದನಿ ಸುರೇಶನ ಕಿವಿಗೆ ಅಪ್ಪಳಿಸಿತು. ಆ ಸತ್ತ ಹೆಣದ ಪಕ್ಕದಲ್ಲಿ ಒಬ್ಬ ಹುಡುಗನ ಕೈಯಲ್ಲಿ ಒಂದು ಆಟದ ಗೊಂಬೆ ಸುರೇಶನ ಮನಸನ್ನು ಸೆಳೆಯಿತು. “ನಮ್ಮನೆಯಲ್ಲಿ ಇದ್ದ ಗೊಂಬೆ, ಮ್ಯಾನೇಜರ್ ಮನೆಯಲ್ಲಿ ಕಂಡ ಗೊಂಬೆ, ಆ ಹುಡುಗನ ಕೈಯಲ್ಲಿರುವ ಗೊಂಬೆ ಥೇಟ್ ಒಂದೇ ಅಲ್ಲವೇ” ಅನ್ನುತ್ತ ಬಂದು ಕಾರು ಹತ್ತಿದ. ರಸ್ತೆ ಬದಲಿಸಿಕೊಂಡು ಹೋಗಿ ಹೊಟೇಲ ತಲುಪಿದ.
ವೇಟರ ತಿಂಡಿ ತಿನಿಸಿನ ದೊಡ್ಡ ಹೊತ್ತಿಗೆ ತಂದು ಅವರ ಟೇಬಲ್ ಮೇಲಿಟ್ಟು ಹೋದ. ರುಕ್ಕು ಪರಮರಿಬ್ಬರೂ ಪುರಿ ಊಟ ಆರ್ಡರ್ ಮಾಡಿದರೂ. ಸುರೇಶನೂ ಮಕ್ಕಳೊಂದಿಗೆ ಅದನ್ನೇ ಹೇಳಿದ. ಊಟ ಮಾಡಿದ ಮೇಲೆ ಎಲ್ಲರೂ ಆಸ್ಕ್ರೀಮ್ ತರಸಿಕೊಂಡು ತಿನ್ನತೊಡಗಿದರು. ಮಾಲಿಕನ ಎಡಗಡೆ ಬಾಜೂವಿನ ಕಪಾಟಿನಲ್ಲಿ ಗೊಂಬೆ ಇರುವುದನ್ನು ನೋಡಿ. ಪರಮಾ “ಅಪ್ಪಾ! ಅಲ್ಲಿ ನೋಡು, ನಮ್ಮನೆಯಲ್ಲಿರುವಂತದ್ದೇ ಗೊಂಬೆ ಇಲ್ಲೂ ಇದೆ” ಎಂದು ಕಿರಚಿದ. ಆಟದ ಗೊಂಬೆ ಎಂದ ಮೇಲೆ ಎಲ್ಲಾ ಕಡೆ ಇರುತ್ತವೆ, ಒಬ್ಬೊಬ್ರು ದೃಷ್ಠಿಗೊಂಬೆ ಎಂದು ಬಾವಿಸಿ ತಂದಿಡುವುದು ಸಹಜವೆಂದು ಮಗನಿಗೆ ಹೇಳುತ್ತ ಬಿಲ್ ಕೌಂಟರ್ ಗೆ ಹೋದ. ರುಕ್ಕು ಆ ಗೊಂಬೆಯನ್ನೇ ನೋಡುತ್ತ ಮೈಮರೆತಳು. ರುಕ್ಕು ಎಂದು ಅವರಪ್ಪ ಕೂಗಿದಾಗ ಅದನ್ನು ತಿರುಗಿ ತಿರುಗಿ ನೋಡತ್ತಲೇ ಬಂದು ಕಾರ್ ಹತ್ತಿದಳು.
ಮೊನ್ನೆ ಕಂಟೆಯಲ್ಲಿ ಎಸೆದ ಗೊಂಬೆ ಮನೆಗೆ ಮತ್ತೆ ಮನೆಗೆ ಹೇಗೆ ಬಂದಿತು. ಅಪ್ಪ ತರಲೂ ಸಾದ್ಯವಿಲ್ಲ. ಪರಮ ಅಂಥ ಸಾಹಸ ಮಾಡುವವನೇ ಅಲ್ಲ. ಈ ಸಾರಿ ಆ ಗೊಂಬೆಯನ್ನು ಮಂಗಮಾಯ ಮಾಡಬೇಕೆಂದು ಲೆಕ್ಕಹಾಕಿಕೊಂಡಳು. ಸುರೇಶ ಕಾರ್ ಓಡಿಸಿತ್ತಿದ್ದ. ಪರಮ ಮುಂದೆ ಕುಳಿತು ಬೆರಗಾಗಿ ದಾರಿ ನೋಡುತ್ತಿದ್ದ. ರುಕ್ಕು ಗೊಂಬೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದಳು.
*******
ಬೆಳಗಾಗುತ್ತಿದ್ದಂತೆ ರುಕ್ಕು ಅಡುಗೆ ಮನೆಯ ಕೋಣಿಗೆ ಹೋದಳು. ಉಪ್ಪಿಟ್ಟಿನ ಪರಿಮಳ ಅಡುಗೆ ಮನೆ ತುಂಬಿಕೊಂಡಿತ್ತು. ಅಪ್ಪ ಎಷ್ಟು ಬೇಗನೆದ್ದು ಉಪ್ಪಿಟ್ಟು ಮಾಡಿಟ್ಟಿದ್ದಾನಲ್ಲಾ ? ಅನ್ನುತ್ತ . ಓ ಇಂದು ರವಿವಾರ ಬೇಗನೆದ್ದು ಉಪ್ಪಿಟ್ಟು ಮಾಡಿಟ್ಟು ವಾಕ್ ಮಾಡಲು ಹೋಗಿರುತ್ತಾನೆಂದು ರುಕ್ಕು ಖಚಿತಪಡಿಸಿಕೊಂಡು, ಸ್ನಾನ ಮಾಡಿ ಉಪ್ಪಿಟ್ಟು ತಿನ್ನತೊಡಗಿದಳು. ಉಪ್ಪಿಟ್ಟು ತಿನ್ನುತ್ತ ಗೊಂಬೆಯತ್ತ ಕಣ್ಣಾಡಿಸಿದಳು. ಗೊಂಬೆ ಎಲ್ಲೂ ಕಾಣಲಿಲ್ಲ. ಅರೇ ಇದೇನೂ ವಿಚಿತ್ರ! ರಾತ್ರಿ ಕಂಡದ್ದು ಈಗ ಅದರ ಸುಳಿವಿಲ್ಲ ಅಂದುಕೊಂಡವಳೇ ಕೈ ತೊಳೆದು, ಮತ್ತೇ ಎಲ್ಲಾ ಹುಡುಕಿದಳು. ಕಾಣಲಿಲ್ಲ. ಅಪ್ಪ ಏನಾದ್ರೂ ತಗೆದುಕೊಂಡು ಹೋಗಿರಬಹುದಾ? ಚೇ.ಚೇ . ಆ ಗೊಂಬೆ ಜೊತೆ ಆಡಲು ಅವನೇನು ಚಿಕ್ಕ ಮಗುನಾ? ಆಗ ಸುರೇಶ ಬರುವುದು ಕಂಡಳು. ಅವನ ಕೈಯಲ್ಲಿ ಏನೂ ಇರಲಿಲ್ಲ. ಕಾದಂಬರಿ ಓದುತ್ತ ಕುಳಿತಳು.
ಸುರೇಶ ಸ್ನಾನ ಮಾಡಿದ ಉಪ್ಪಿನ ಪರಿಮಳ ಅವನನ್ನು ಅಡುಗೆ ಮನೆಯತ್ತ ಸೆಳೆಯಿತು. ಮಗಳು ಉಪ್ಪಿಟ್ಟು ಮಾಡಿದ್ದಾಳೆ. ಅದು ಚೆನ್ನಾಗಿರುವುದಕ್ಕೇ ಅದರ ಪರಿಮಳವೇ ಸಾಕ್ಷಿ ಎಂದು. ಬಾಯಿಚೆಪ್ಪರಿಸತೊಡಗಿದ. ರುಕ್ಕು ಉಪ್ಪಿಟ್ಟು ತಿಂದಿರುವ ಕುರುಹು ಇತ್ತು.
ಪರಮ ತಡವಾಗಿ ಎದ್ದು ಕಣ್ಣೊರಸಿಕೊಂಡು ಬರತೊಡಗಿದ. ರುಕ್ಕು ಅವನು ಎದ್ದ ಹಾಸಿಗೆ ತಗೆಯುದಿಲ್ಲ ಅನ್ನುವುದು ತಿಳಿದು ತಾನೇ ತಗೆಯಲು ಹೋದಳು. ಆಗ ಹಾಸಿಹೆಯಲ್ಲಿ ಗೊಂಬೆ ಕಂಡಿತು. ಅರೇ ನೀನು ಇಲ್ಲಿದಿಯಾ ನಿನಗಿದೆ ಇಂದು ರುಕ್ಕು ವಟಗುಡಿದಳು. ಸುರೇಶ “ಯಾಕೆ ಮಗಳೇ ಕರೆದೆಯಾ?” ಅಂತ ಕೇಳಿದ . “ಇಲ್ಲಪ್ಪಾ” ಎಂದು ರುಕ್ಕು ಆ ಗೊಂಬೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಗಂಟು ಬಿಗಿದಿಟ್ಟಳು. ಅವರಪ್ಪನ ಹತ್ತಿರ ಹೋಗಿ ಕುಳಿತು “ಸಂಜೆ ನದಿ ದಡದತ್ತ ಹೋಗಿ ಬರೋಣ” ಎಂದು ಹೇಳಿದಳು. “ಆಯ್ತಮ್ಮಾ ಹೋಗೋಣ”ವೆಂದು ಸುರೇಶ ಹೇಳಿ ಲ್ಯಾಪ್ ಟಾಪ್ ಆನ್ ಮಾಡಿ ತನ್ನ ಬ್ಯಾಂಕಿನ ಕೆಲಸವನ್ನು ಮಾಡುತ್ತ ಕುಳಿತ.
ಸಂಜೆಯಾದ ಮೇಲೆ ಮೂವರು ನದಿ ದಡದ ಕಡೆ ಸ್ಕೂಟರ್ ಮೇಲೆ ಹೋದರು. ಕ್ಯಾರಿಬ್ಯಾಗ್ ನಲ್ಲಿ ರುಕ್ಕು ಗೊಭೆಯನ್ನಿಟ್ಟುಕೊಂಡಿದ್ದಳು. ಸುರೇಶ ಅದೇನಮ್ಮಾ ಎಂದು ಕೇಳಿದ. ಪೂಜಾ ಮಾಡಿದ ಹೂಪತ್ರೆಗಳು ,ನದಿಗೆ ಹಾಕಲು ತಂದಿರುವುದಾಗಿ ಹೇಳಿದಳು. ನದಿಗೆ ಹಾಕು ಮೊದಲೇ ಒಂದು ಸಾರಿ ಕ್ಯಾರಿ ಬ್ಯಾಗ್ ಬಿಚ್ಚಿ ಗೊಂಬೆ ಇರುವುದನ್ನು ಕಚಿತ ಪಡಿಸಿಕೊಂಡು, ಮತ್ತೆ ಗಟ್ಟಿಯಾಗಿ ಕಟ್ಟಿ, ಕೈ ಬೀಸಿ ರುಕ್ಕು ಎಸೆದಳು .ಪ್ಲಾಸ್ಟಿಕ್ ಕವರ್ ನೀರಿನಲ್ಲಿ ತೇಲಿಕೊಂಡು ಹೊರಟಿತು. ಅದು ಮರೆಯಾಗುವರೆಗೂ ರುಕ್ಕು ಅದನ್ನೇ ದಿಟ್ಟಿಸುತ್ತ ನಿಂತುಕೊಂಡಳು.
ರಾತ್ರಿ ಹೊರಗಡೆ ಊಟ ಮಾಡಿಕೊಂಡು ಮೂವರು ಮನೆ ತಲುಪಿದರು. ನೋಡಿದರೆ ಶೋಕೆಸ್ ನಲ್ಲಿ ಅದೆ ಗೊಂಬೆ! ರುಕ್ಕುವಿನ ಎದೆ ನೀರಾಯಿತು. ಅಪ್ಪಾ ಎಂದಳು.ಸುರೇಶ ಯಾಕಮ್ಮಾ ಅಂದ. ಗೊಂಬೆಯತ್ತ ನಡಗುತ್ತ ಭಯಗೊಂಡು ಕೈ ಮಾಡುತ್ತ ಮೂರ್ಚೆ ಹೋದಳು. ಎಚ್ಚರಾದಾಗ ಆ ಗೊಂಬೆ ಅವಳ ಬಳಿಯಲ್ಲಿತ್ತು. ಸುರೇಶ ಪೋನ್ ನಲ್ಲಿಗೆ ಯಾರೊಟ್ಟಿಗೆ ಮಾತಾಡುತ್ತಿದ್ದ. ಪರಮ ಯಾವುದೋ ಪುಸ್ತಕ ಓದುತ್ತ ಕುಳಿತಿದ್ದ.
ಹೊಳೆಯಲ್ಲಿ ಎಸೆದು ಬಂದಿದ್ದೇ. ಎಸೆಯುವಾಗ ನೋಡಿದ್ದೆ. ಒಳಗೆ ಗೊಂಬೆ ಇತ್ತು. ಅಪ್ಪನಿಗೆ ಈಗ ಹೇಳಿದ್ರೆ ಅಂವಾ ನೀ ಪೂಜಾ ಸಾಮಾನಂದಿ, ಈಗ ಗೊಂಬೆ ಅಂತಿಯಾ ಹುಚ್ಚರಂತೆ ಆಡಬೇಡ ಎಂದು ಅನಬಹುದು. ನಾಳೆ ಈ ಗೊಂಬೆಗೆ ಅಂತ್ಯ ಹೇಳೇ ಹೇಳುವೆ ಎಂದು ರುಕ್ಕು ಅದನ್ನು ದುರುಗುಟ್ಟಿದಳು. ಆ ಗೊಂಬೆ ಅವಳನ್ನು ನೋಡಿ ನಕ್ಕಿತು.
*******
ಸುರೇಶ ಬ್ಯಾಂಕ್ ಗೆ ಹೊರಟಿದ್ದ. ದಾರಿಯಲ್ಲಿ ಜನ ಗುಂಪುಗುಡಿದ್ರು. ನನ್ನ ಅರ್ಚನಾ ಇಲ್ಲೇ ಅಲ್ಲವೇ ಪ್ರಾಣ ಕಳಿದುಕೊಂಡದೆಂದು ನೆನಿಸಿಕೊಂಡ. ಮತ್ಯಾರಿಗೇನಾಯಿತೆಂದು ಅಲ್ಲೊಬ್ಬನ ವಿಚಾರಿಸಿದ. “ನಮ್ಮೂರಿನ ಪೀಡೆ ತೊಲಗಿತು ಬಿಡಿ ಸಾರ್” ಅಂದ. ಯಾರೀ ಅಂತ ಮರಳಿ ಕೇಳಿದೆ. ಅವ್ನೆ ರಾಜಕೀಯ ಪುಡಾರಿಯ ಮಗಾ ಕರಣಾಕರ ಸೆಟದಾನೆ ಅಂದ. ಅರ್ಚನಾಳಿಗೆ ಕಾರು ಹಾಯಿಸಿ ಕೊಂದವ ಇವ್ನೆ ತಾನೆ. ಅಂದವನೇ ಬೈಕ್ ಬದಿಗೊತ್ತಿ ಹೋಗಿ ನೋಡಿದ. ನಿಂತ ಲೈಟ್ ಕಂಬಕ್ಕೆ ಗುದ್ದಿದ್ದ. ತಲೆ ಎರಡು ಹೋಳಾಗಿತ್ತು. ಕಾರೂ ಕೂಡಾ ನೆಗ್ಗಿ ನೆಲ್ಲಿಕಾಯಿ ಆಗಿತ್ತು. ಕಾರಲ್ಲಿ ಗೊಂಬೆಯ ಗೊಚರ ಆಗಿದ್ದು ಸುರೇಶನಿಗೆ ದಿಗಿಲಾಗಿತ್ತು. ಅಲ್ಲಿದ್ದವರೆಲ್ಲ ಸತ್ತವನ ತಲೆಯಿಂದ ಸುರಿದ ರಕ್ತ, ಅವನ ದೇಹದ ಕಡೆ ಗಮನ ಹರಿಸಿದರೆ. ಸುರೇಶನಿಗೆ ಆ ಕಾರಿನಲ್ಲಿರುವ ಗೊಂಬೆಯತ್ತಲೇ ಗಮನ ಹೆಚ್ಚಿತು. ಗೆದ್ದೆನೆನ್ನುವ ಹುರುಪಿನಲ್ಲಿ ಬೈಕ್ ಓಡಿಸಿಕೊಂಡು ಸುರೇಶ ಬ್ಯಾಂಕ್ ತಲುಪಿದ ಅವನ ಮುಖದಲ್ಲಿ ಹೆಚ್ಚು ಲವಲವಿಕೆ ಮೂಡಿತ್ತು.
ಅಂದು ರಾತ್ರಿ ಇಡೀ ಸುರೇಶನಿಗೆ ಹೆಂಡತಿಯೇ ನೆನಪಾದಳು. ನಿನ್ನ ಕೊಂದವನು ಇಂದು ಹ್ವಾದ. ನನಗೆ ಸಮಾಧಾನವಾಯಿತು ಅರ್ಚನಾ ಎಂದು ಭಾವುಕನಾಗಿ ಅತ್ತು. ಹೆಂಡತಿಯ ಪೋಟೋ ನೋಡುತ್ತ ನೋಡುತ್ತ ನಿದ್ದೆಗೆ ಜಾರಿದ.
ರುಕ್ಕು ಅವರಪ್ಪ ಬ್ಯಾಂಕ್ ಗೆ ಹೋದ ನಂತರ ಮನೆ ಹಿಂದಿರುವ ಕಂಪೌಂಡ ಒಳಗೆ ಒಂದು ಮಳ ತಗ್ಗು ಅಗೆದು ಗೊಂಬೆಯನ್ನು ಹೂತಿಟ್ಟು ಬಂದಿದ್ದಳು. “ಈಗ ಹೆಂಗಾಸಿ ಬರ್ತಿ ಬಾರವ್ವಾ” ಅಂದು ಆ ಗೊಂಬೆಗೆ ಸವಾಲ್ ಹಾಕಿ ಅದರ ಮೇಲೊಂದು ಕಲ್ಲು ದಬ್ಬಾಕಿ ಬಂದಿದ್ದಳು.
ಚಿಂತೆ ಬಿಟ್ಟು ರುಕ್ಕು ಮಲಗಿದ್ದಳು. ನಡುರಾತ್ರಿ ಯಾರೋ ಜೋರಾಗಿ ಅತ್ತಂತೆ ದನಿ ಕೇಳಿಸಿತು. ರುಕ್ಕು ಎಚ್ಚೆತ್ತಳು. ಯಾರಿಗೇನಾಗಿರಬಹುದೆಂದು ಹಳಹಳಿಸಿದಳು. ಬಾಜು ಮನೆಯ ಅಜ್ಜಿಗೆ ವಯಸ್ಸಾಗಿತ್ತು. ಅವಳೇನಾದರೂ ಶಿವನ ಪಾದ ಸೇರಿರಬಹುದಾ? ಕಲ್ಪಿಸಿಕೊಂಡು ಮತ್ತೆ ಹಾಸಿಗೆ ಮುಖದ ಮೇಲೆ ಎಳಿದುಕೊಂಡಳು. ಮತ್ತೆ ದನಿ ಕೇಳಿತು. ಈ ಬಾರಿ ಆ ದನಿ ವಿಚಿತ್ರವಾಗಿ ಕೇಳಿತು. ರುಕ್ಕು ಎದ್ದು ಲೈಟ್ ಬಟನ್ ಹಾಕಿದಳು. ಅಪ್ಪ ಮಲಗಿದ್ದ ಅಂವನ ಪಕ್ಕದಲ್ಲಿ ಅದೇ ಗೊಂಬೆ.! ರುಕ್ಕು ತರತರ ನಡುಗಿದಳು. ಅಳು ದನಿ ಕಡಿಮೆಯಾಗಿತ್ತು. ಆ ಗೊಂಬೆಯನ್ನೇ ದಿಟ್ಟಿಸಿದಳು. ಆ ಗೊಂಬೆಯಲ್ಲಿ ಅವರವ್ವನ ರೂಪ ಕಂಡಂತಾಯಿತು, “ಅವ್ವಾ ಅವ್ವಾ” ಆ ಕ್ಷಣ ರುಕ್ಕು ಒಂದೇ ಸಮನೇ ಕಿರಚಿದಳು. ಸುರೇಶ ಗಡಬಡಿಸಿ ಎದ್ದು ಮಗಳಿಗೇನಾಯಿತೆಂದು ಗಾಬರಿಗೊಂಡ. ರುಕ್ಕು ಆ ಗೊಂಬೆ ನೋಡುತ್ತಾ “ಅವ್ವಾ ಅವ್ವಾ” ಎಂದು ಅಳುತ್ತಿದ್ದಳು. ಸುರೇಶ ಮಗಳನ್ನು ಸಮಾಧಾನ ಪಡಿಸಿ ಅವಳ ಕೈಗೆ ಆ ಗೊಂಬೆಯನಿಟ್ಟು ಮರಳಿ ಮಲಗಿದ. ರುಕ್ಕು ಆ ಗೊಂಬೆಯನ್ನು ತಬ್ಬಿಕೊಂಡು “ಅವ್ವಾ ಅವ್ವಾ” ಎಂದು ಬಿಕ್ಕತೊಡಗಿದಳು. ಆಗ ಆಟದ ಗೊಂಬೆಯಲ್ಲಿ ಮತ್ತೊಮ್ಮೆ ಅವರವ್ವನ ರೂಪ ರುಕ್ಕುವಿಗೆ ಕಂಡು ಕಣ್ಮರೆಯಾದಾಗ “ನನ್ನವ್ವ ನಮ್ಮೊಟ್ಟಿಗೇ ಇದ್ದಾಳೆ, ಇದೇ ಮನೆಯಲ್ಲಿ ಇದ್ದಾಳೆ, ಈ ಆಟದ ಗೊಂಬೆಯಲ್ಲೂ ಇದ್ದಾಳೆ ಅನ್ನುವ ಭಾವ ರುಕ್ಕುವಿನ ಮನತುಂಬಾ ತುಂಬಿಕೊಂಡಾಗ ಎಷ್ಟೋ ಹೊತ್ತು ಅವಳ ಕಣ್ಣುಗಳಲ್ಲಿ ನೀರು ಜೋಗದಂತೆ ಜಾರಿತು. ನಂತರ ಅವಳ ಮನ ಹಗುರಾದಾಗ, ಆ ಆಟದ ಗೊಂಬೆಯನ್ನು ಮುದ್ದಿಸುತ್ತ ಮೈಮರೆತಳು. ಇರುಳ ಚಂದ್ರ ತನ್ನಷ್ಟಕ್ಕೆ ತಾನು ಉರುಳಿ ಹೋಗುತ್ತಿದ್ದ.
*******






0 Comments