ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿರುಪತಿ ಭಂಗಿ ಹೊಸ ಕಥೆ: ಅಜ್ಜನ ಹಳೆ ರೇಡಿಯೋ

-ತಿರುಪತಿ ಭಂಗಿ

*

“ಹ್ವಾದ ವರ್ಷ ತಪ್ಪಸಿದ್ಹಂಗ ಈ ವರ್ಷಾ ಏನಾರ ನೇವಾ ಹೇಳಿ ಊರ ಜಾತ್ರಿಗೆ ಬರೂದ ತಪ್ಪಿಸಿದೆಂದ್ರ ಪಾಡ ಇರಂಗಿಲ್ಲ ನೋಡಪಾ” ಅವ್ವ ಗಚ್ಚೆಂಗ ಊರಿಗೆ ಬರಬೇಕಂತ  ತಾಕೀತ ಮಾಡಿದ್ಳು. ಅವ್ವಗ ಈ ಬೆಂಗಳೂರ ಜೀವ್ನಾ ಏನ್‌ ಗೊತ್ತು ಪಾಪ! ಹಳ್ಳಿನೇ ಸ್ವರ್ಗವೆಂದು ತಿಳದ ಬದುಕಿದಾಕಿ, ಹಳ್ಳಿ ಬದುಕಲ್ಲಿಯೇ  ತನ್ನಿಡೀ ಆವಿಷ್ಯ ಕಳೆದಾಕಿ, ಬದುಕಿನ ಆಸರೆಗಾಗಿ ಆಡು,ಎಮ್ಮೆ, ಕುರಿ,ಬೆಕ್ಕು, ನಾಯಿ ಸಾಕಿಕೊಂಡು ಅವುಗಳಂತೇ ಬಾಳ್ವೆ ಮಾಡಿದಾಕಿ. ಅಪ್ಪನನ್ನು ಯಾವಾಗಲೂ ಅನುಮಾನದಿಂದ ನೋಡುತ್ತ ಸಣ್ಣ ಸಣ್ಣ ವಿಷಯಕ್ಕೂ ಅವನನ್ನು ತರಾಟೆಗೆ ತಗೆದುಕೊಂಡು ಮಾತಿನಲ್ಲೇ ಹೆದರಿಸಿ ,ಅವನನ್ನು ಮೂಲಿಯಲ್ಲಿ ಕೂಡಿಸಿ, ಇಡೀ ಮನೆಯ ಜವಾಬ್ದಾರಿ ಹೊತ್ತು ಬೀಗೂವಾಕಿ ನಮ್ಮವ್ವ.

             ಅಜ್ಜನ ಹಳೆ ರೇಡಿಯೋಗೆ ಅಪ್ಪ ಹೊಸ ಸೆಲ್ಲು ಹಾಕಿಕೊಂಡು ಮನೆ ಮುಂದಿನ ಕಟ್ಟೆ ಮೇಲೆ ಕುಳಿತು, ಅದರಲ್ಲಿ ಬರುವ ಪ್ರದೇಶ ಸಮಾಚಾರ, ಚಿತ್ರಗೀತೆ, ಕೇಳುತ್ತ, ಗಣೇಶ ಬೀಡಿಗೆ ಬೆಂಕಿ ಹಚ್ಚಿ, ಹೋಗುಬರುವ ಹೆಂಗಸರನ್ನು ನೋಡುತ್ತ ಹಲ್ಲು ಗಿಂಜಿದಾಗ ಅವ್ವ ಚಾಮುಂಡಿಯಾಗುತ್ತಿದ್ದಳು. ಅವ್ವ ಒಂದೀಟು ಕಪ್ಪಗೆ ದಪ್ಪಗೆ ಇರುವುದರಿಂದ ಅಪ್ಪನ ತೀಟೆ ಬೇರೆ ಹೆಂಗಸರ ಮೇಲೆ ಹರದಾಡುತ್ತಿತ್ತು. ಗಟ್ಟಗಿತ್ತಿ ಅವ್ವ ಅಪ್ಪನನ್ನು ಹೆಡೆ ಮುರಿದ ಹಾವಿನಂತೆ ಯಾವತ್ತೂ ತನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಂಡಿರುತ್ತಿದ್ದಳು. ಅಪ್ಪ ಆಗಾಗ ಒಂದೊಂದು ಸಾರಿ ಅವ್ವನ ಕಣ್ಣು ತಪ್ಪಿಸಿ ಜರೆದು ಹೋಗುತ್ತಿದ್ದ. ಇವರಿಬ್ಬರ ರಗಳೆ ನನ್ನ ಮುಖದ ಮೇಲೆ ಮೀಸೆ ಬಂದರೂ ಇನ್ನೂ ಚಲಾವಣೆಯಲ್ಲಿರುವ ನೋಟಿನಂತೆ ಚಾಲ್ತಿಯಲ್ಲಿಯೇ ಉಳದಿತ್ತು.

              ಒಬ್ಬನೆ ಮಗನೆಂದು ಅವ್ವ ನನ್ನ ಮೇಲೆ ಹೆಚ್ಚು ಕಾಳ್ಜಿ, ಪ್ರೀತಿ ತೋರಿಸಿ, ಮುದ್ದಿನಿಂದ ಬೆಳೆಸಿದಳು.  “ಹತ್ತ ಹೆರುಕಿನ್ನ ಒಂದ ಮುತ್ತ ಹೆತ್ತಿನಿ” ಮನಿ ಮಗ್ಗಲಲ್ಲಿರುವ ಹೆಂಗಸರ ಮುಂದೆ ಜಂಬಾ ಕೊಚ್ಚಿಕೊಂಡು ಹೇಳುವ ಸಲುವಾಗಿಯೇ ನನ್ನ ಕನ್ನಡ ಮೀಡಿಯಂ ಸಾಲಿಗೆ ಹಾಕುವ ಬದಲು ಇಂಗ್ಲೀಷ್‌ ಮಿಡಿಯಂ ಸಾಲೆಗೆ ಅವ್ವ ತುರಕಿ ಬಂದಿದ್ದಳು.  ನಾನು ಮಾತಾಡುವ ಪುಟ್ಟ ಪುಟ್ಟ ಇಂಗ್ಲೀಷ್‌ ಮಾತುಗಳನ್ನು ಮಗ್ಗಲ ಮನೆಯ ಹೆಂಗಸಿರಿಗೆ ಕೇಳಿಸಿ ನನ್ನ ಬಡಿವಾರ ಹೆಚ್ಚಿಸುತ್ತಿದ್ದಳು.  

               ಇಡೀ ಊರಿನಲ್ಲಿ ಇಂಗ್ಲೀಷ್‌ ಕಲಿತ ಪ್ರಾಣಿ ಆಗ ನಾನೊಬ್ಬನೇ. ಊರಿನ ಕೆಲವು ವಾರಿಗೆ ಗೆಳೆಯರು ನನಗೆ “ಬ್ರೀಟಿಷರಿಗೆ ಹುಟ್ಟಿದ ಬಡ್ಡಿ ಮಗಾ ಬಂದ ನೋಡು” ಎಂದು ಹಂಗಿಸಿ ನಗುತ್ತಿದ್ದರು. ಅವರನ್ನು ಎದಿರಿಸುವ ಶಕ್ತಿ  ನನ್ನ ತೋಳ ಬಲದಲ್ಲಿ  ಇಲ್ಲದಕ್ಕೆ ನಾನು ಅವರಾಡುವ ಮಾತು ಕೇಳಿ ಕಿವುಡನಾಗುತ್ತಿದ್ದೆ. ಹೊರಳಿ ಮಾತಾಡುವ ತಾಕತ್ತು ಇಲ್ಲದಕ್ಕೆ ಮೂಕನಾಗುತ್ತಿದ್ದೆ. ಒಂದು ರೀತಿಯಲ್ಲಿ ನಾನು ಊರಲ್ಲಿ ಒಬ್ಬ ಗಾಂದೀ ವಾದಿಯಂತೆ ಬದುಕುತ್ತಿದ್ದೆ. ಸರಕಾರಿ ಸಾಲಿಗೆ ಹೋಗುವ ನನ್ನ ಜೊತೆಗಾರರು ನೇತಾಜಿ, ಭಗತ್‌ ರಂತೆ ತುಂಬಾ ಕಡಕ್ಕಾಗಿ ಇದ್ದರು.

               ನಾನು ಕಲಿತ ವಿದ್ಯೆಗೆ ಕೆಲಸ ಮಾಡಲು ಬೆಂಗಳೂರಿನಂತ ನಗರವೇ ಬೇಕಾಯಿತು. ಅವ್ವ ಅಪ್ಪರನ್ನು ಹಳ್ಳಿಯಲ್ಲಿ ಬಿಟ್ಟು ನಾನು ಬೆಂಗಳೂರಿನ ಕಂಪನಿಯೊಂದರಲ್ಲಿ ಇಡೀ ದಿನ ಕತ್ತೆಯಂತೆ ದುಡಿಯುವ ಕೆಲಸಕ್ಕೆ ಆಯ್ಕೆ ಆಗಿದ್ದೆ. ಇಡೀ ಹಗಲು ಲ್ಯಾಪ್‌ ಟಾಪ್‌ ಬಟನ್‌ ಕಟಕಟ ಕುಟ್ಟುತ್ತ, ಸಂಬಂದ ಸೂತ್ರವಿಲ್ಲದ  ಕಾಣದ ಜಗತ್ತಿನಲ್ಲಿರು ವ್ಯಕ್ತಿಗಳೊಂದಿಗೆ ಸಂದರ್ಶನ, ಗೂಗಲ್‌ ಮೀಟ್‌, ಮಾಡುತ್ತ ಹತ್ತಿರದ ನೂರೆಂಟು ಸಂಬಂಧಗಳನ್ನು ಸಾಯಿಸಿ ಹೊಸದೊಂದು ಬದುಕು ಕಟ್ಟಿಕೊಂಡು ಬದುಕುವುದು ನನಗೂ ರೂಢಿಯಾಗಿತ್ತು.

          ಸಂಜೆಯಾದರೇ ಅವ್ವನ ಪೋನು. ನಿಮ್ಮಪ್ಪ ಇಂದು ಹಿಂಗೆ ಮಾಡಿದ,  ಹಂಗ ಮಾಡಿದ. ನಿಮ್ಮಪ್ಪ ಬರೀ ನಿಮ್ಮಜ್ಜನ ರೇಡಿಯೋ ಹಿಡಿದುಕೊಂಡು ಊರ ಹೊರಗಿರುವ ಹನಮಪ್ಪನ ಗುಡಿಕಡೆ ಹೊಕ್ಕಾನ, ಅಲ್ಲಿ ಅಗಸರ ಗಂಗಿ ಬಟ್ಟಿ ತೊಳಿಯಾಕ ಹೊಕ್ಕಾಳ ಇಂವಗೇನಲ್ಲಿ ಕೆಲಸಾ.. ನೀನರಾ ಅಂವಗ ಉಗದ ಬುದ್ದಿ ಹೇಳೆಂದು ಪೋನ್‌ ಕಟ್ಟ ಮಾಡುತ್ತಿದ್ದಳು. ನನಗೆ ಈ ಸುಡಗಾಡ ಆಫೀಸಿನ ಕಿರಿಕಿರಿಯೊಂದಿಗೆ ಅಪ್ಪನ ತುಂಟಾಟದ ಕಿರಿಕಿರಿಯೂ ಒಂದು ಜೋಡು.

           “ಅಪ್ಪಾ ಏನ್‌ ಮಾಡಾಕತ್ತೀ” ಎಂದು ನಾ ಕೇಳಿದ್ದೇ ತಡಾ “ನೋಡ ಹನಮಂತಾ ಊರಿಗೆ ಬರುವಾಗ ನಿಮ್ಮ ಅಜ್ಜನ ರೇಡಿಯೋಗೊಂದು ಕವರ್‌ ತಗೊಂದ ಬಾರಪ್ಪಾ, ಹಂಗ ಚಲೋ ಕ್ವಾಲ್ಟಿ ಸೆಲ್ಲ ಇದ್ದರ ಅವನ್ನೂ ತಗೊಂದ ಬಾ, ಊಟಾ ಚಲೋತಂಗ ವ್ಯಾಳೆಗ ಸರಿಯಾಗಿ ಮಾಡೂದ ಮರಿಬ್ಯಾಡ, ನಿಮ್ಮವ್ವನ ಮಾತ ಕಿವ್ಯಾಗ ಹಕ್ಕೊಬ್ಯಾಡ ನಾವು ಇಬ್ಬರೂ ಆರಾಮದಿವಿ” ಎಂದು ಮಾರುದ್ದ ಮಾತಾಡಿ ತಾನೇ ಪೋನ್‌ ಕಟ್ಟು ಮಾಡುತ್ತಿದ್ದ. ಗಂಡ ಹೆಂಡರ ಜಗಳದಾಗ ಕೂಸ ಬಡುವಾದಂತೆ  ನನ್ನ ಗತಿ.

           ಹಂಗು ಹಿಂಗೂ ಗುದ್ದಾಡಿ ಗುದಮುರಗಿ ಮಾಡಿ ತಿಂಗಳಿಗೆ ತಪ್ಪದೇ ಹತ್ತುಸಾವಿರ ರೂಪಾಯಿ ಅವ್ವ- ಅಪ್ಪರಿಗೆ ಕಳಿಸುತ್ತಿದ್ದೆ. ಅವ್ವ ನಾ ಕಳಿಸದ ದುಡ್ಡು ಒಂದು ರೂಪಾಯಿನೂ ಕರ್ಚು ಮಾಡದೇ  ಭಾವಿ ಸೊಸೆಗೆ ಬಂಗಾರ ಕರೀದಿಸಿ ಇಡುತ್ತಿದ್ದಳು. “ಯವ್ವಾ ನಾನು ಇಲ್ಲಿ ಹೊಟ್ಟಿ ಕಟ್ಟಿ ನೀವ ಚೆಂದಂಗ ಉಂಡ ತಿಂದ ಇರ್ಲಿ ಅಂತ ಹಣ ಕಳಿಸಿದ್ರ ನೀ ಏನ್‌ ವಣಾ ಕಾರ್ಬಾರ ಮಾಡಾಕತ್ತೀ” ಎಂದು ಅವ್ವನ ಜಾಡಿಸಿದ್ದೆ. “ನಾಳೆ ನಿನ್ನ ಲಗ್ಗನದಾಗ ಹುಡಗೀಗೆ ಬಂಗಾರ ಬುಗಡಿ ಹಾಕೂದ ಇರತೈತಿ, ಅದೆಲ್ಲಾ ನಿನಗ ತಿಳಿಯಂಗಿಲ್ಲ ಹೊಳಿಯಂಗಿಲ್ಲ ಸುಮ್ನಿರಪ್ಪೋ” ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ಳು. “ಏನಾರ ಮಾಡ್ಕೋರವ್ವಾ” ಅಂತ ನಾನು ಪ್ರತಿ ತಿಂಗಳೂ ಹಣ ಕಳಿಸುತ್ತಿದ್ದೆ.

           ಮಗಾ ಬೆಂಗಳೂರಾಗ ದೊಡ್ಡ ಸಾಹೇಬ ಅದಾನಂತ ಇಡೀ ಊರಿನಲ್ಲಿ ಅವ್ವ ಡಂಗೂರ ಸಾರಿದಂತೆ ಸಾರಿ ಸಾರಿ ತನ್ನ ದೊಡ್ಡಸ್ತಿಕೆ ಹೆಚ್ಚಿಸಿಕೊಂಡಿದ್ದಳು. ತಾಯಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ತೀರಗುವಂತೆ ಅಪ್ಪ ಖಾಯಂ ಅಜ್ಜನ ಹಳೆ ರೇಡಿಯೋ ಹೊತ್ತುಕೊಂಡು ಗುಡಿ ಗುಂಡಾರದಲ್ಲಿ ತಂಪನೇ ನೆರಳನ್ನು ಹುಡುಕಿ ರೇಡಿಯೋ ಕಾರ್ಯಕ್ರಮ ಕೇಳುತ್ತ ದಿನವನ್ನು ದೂಡುತ್ತಿದ್ದ.

         ಅವ್ವ ಜಾತ್ರೆಗೆ ಒಂದ ವಾರ ಮೊದಲ ಬರಬೇಕೆಂದು ಕರಾರ ಮಾಡಿದ್ದರಿಂದ ನಾನು ಊರಿಗೆ ಹೋಗಲೇ ಬೇಕಿತ್ತು. ಮನೆಗೆ ಬಣ್ಣ ಸುಣ್ಣ ಬಳೆಯುವ ಕೆಲಸ ನನ್ನ ಪಾಲಿಗೆ ಮೀಸಲಿತ್ತು. ನಮ್ಮ  ಆಫೀಸಿನ ಮ್ಯಾನೇಜರ್‌ ಗೆ ಸತ್ಯ ಹೇಳಿದರೆ ಅವನೆಂದೂ ರಜಾ  ಕೊಟ್ಟವನಲ್ಲ. ಹಿಂಗಾಗಿ ಹಸಿಬಿಸಿ ಸುಳ್ಳೇ ಅವನು ಯಾವತ್ತು ನಂಬುವುದೆಂದು ಅಲ್ಲಿ ಕೆಲಸ ಮಾಡುವ ಮಹಾಶಯರಿಗೆಲ್ಲರಿಗೂ ತಿಳಿದಿತ್ತು. ನಾನು ಒಂದು ಕತೆ ಕಟ್ಟಿ ಸುಳ್ಳು ಹೇಳದೆ. ಹದಿನೈದು ದಿನಾ ರಜಾ ತಗೆದುಕೊಂಡು  ನಮ್ಮೂರ ಕೆಂಪು ಬಸ್ಸು ಏರಿ ಕುಳಿತೆ.

                                                          ******

             ಕೆಂಪೆಗೌಡ ಬಸ್ ನಿಲ್ದಾಣ ದಾಟಿ ನೆಲಮಂಗಲ ಮುಟ್ಟುವ ಹೊತ್ತಿಗೆ ಬಸ್ಸಿನಲ್ಲಿದ್ದವರು ನಿದ್ದೆಗೆ ಶರಣಾಗಿದ್ದರು. ಟ್ರಾಪಿಕ್ಕಿನ ಕಿರಿಕಿರಿಗೆ ಬಸ್‌ ಡ್ರೈವರ್‌ “ನನಗೆ ಈ ನೌಕರಿನೇ ಸಾಕೆನಿಸಿದೆ” ಎಂದು ತನ್ನಷ್ಟಕ್ಕೆ ತಾನು ಒಟಗುಡುತ್ತಿದ್ದ.  ಮೆಜೆಸ್ಟಿಕ್‌ ನಲ್ಲಿ ತಿಂದ ಇಡ್ಲಿ ಸಾಂಬರ್‌ ಹೊಟ್ಟೆಗೆ ಹಿತವೆನಿಸಿ ನಿದ್ದೆಯ ಮಂಪರ ಬಂದಂತಾಯಿತು. ಕಣ್ಣು ಮುಚ್ಚಿದೆ ಎಚ್ಚರಾದಾಗ ಬಸ್ಸು ನನ್ನನ್ನು ಬಾಗಲಕೋಟೆ ಬಸ್‌ ಸ್ಟ್ಯಾಂಡ್‌ ನಲ್ಲಿ ಇಳಿಸಿತ್ತು.  ಒಬ್ಬಾಕಿ ನನ್ನವ್ವ ವಯಸ್ಸಿನವಳು ಬಸ್ಸ ನಿಲ್ಲುವ ಜಾದಲ್ಲಿ ಬಿದ್ದ ಕಸವನ್ನು ಕಸಬರಗಿ ಹಿಡಿದು ಕಸಗೂಡಿಸುತ್ತಿದ್ದಳು. ಮೂಲೆಯಲ್ಲಿದ್ದ ಅಂಗಡಿಯೊಂದರಲ್ಲಿ ಪೇಪರ್‌ ಮಾರುವ ಹುಡುಗರು, ಪೇಪರ್‌ ಹೊಂದಿಸಿಕೊಂಡು ತಮ್ಮ ಸೈಕಲ್‌ ಗೆ ಕಟ್ಟಿಕೊಳ್ಳುತ್ತಿದ್ದರು.  ಒಂದು ಕಡೆ ಹೂವಿನ ಮಾಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುವ ಮದ್ಯ ವಯಸ್ಸಿನ ಹೆಂಗಸು, ಬಸ್‌ ಸ್ಟ್ಯಾಂಡಿನ ಸುತ್ತಲಿದ್ದ ಮರಗಳಲ್ಲಿ ಹಕ್ಕಿಗಳು ಚಿಲಿಪಿಲಿ ದನಿ ಮಾಡುತ್ತ ಬೆಳಗಿನ ಸ್ವಾಗತ ಮಾಡುತ್ತಿದ್ದವು. ಮೂಡನದಲ್ಲಿ ಸೂರ್ಯ ಇನ್ನೂ ಬಂದಿರಲಿಲ್ಲ, ಆದರೆ ನನಗಾಗಿ ಗೆಳೆಯ ಸೂರ್ಯಾ ಕಾದುನಿಂತಿದ್ದ.  ನನ್ನ ನೋಡಿದವನೇ  ಬಳಿ ಬಂದು ಅಪ್ಪಿಕೊಂಡ. “ಕಣ್ಣ ತುಂಬ ಪಿಚ್ಚ ತುಂಬಕೊಂಡೈತಿ ಒಂದ ತಟಗ ಮೊದಲ ಮೋತಿ ತೊಳ್ಕೊರಪಾ ಮಾರಾಯಾ” ಸೂರ್ಯಾ ನನ್ನ ಹಾಳಮಾರಿ ನೋಡಿ ನಕ್ಕೋತ ಹೇಳಿದ.  ಬಾಟಲಿಯೊಳಗಿದ್ದ ನೀರ ಮೋತಿ ಮ್ಯಾಲ ಗೊಜ್ಜಕೊಂಡ ಗಸಗಸಾ ಮೋತಿ ತೊಳದ ಕರಚೀಪಿನಿಂದ ವರಸ್ಕೊಂಡಾಗ ಮನಸ್ಸಿಗೆ ಒಂದೀಟು ನಿಚ್ಚಳನಿಸಿತು. ಅಲ್ಲೇ ಇದ್ದ ಟೀ ಶಾಪ್‌ ನಲ್ಲಿ ಇಬ್ಬರೂ ಟೀ ಕುಡಿದು ಬೈಕ್‌ ಹತ್ತಿ ಊರ ಹಾದಿ ಹಿಡಿದೆವು.

             “ಹೆಲ್ಮೇಟ್‌ ಇಲ್ಲೇನು” ಅಂದೆ.

 “ಇದನೇನ ಬೆಂಗಳೂರ ಮಾಡಿಯೇನ್‌ ಈ ಸಿಟಿಯಾಗ ಪೋಲಿಸ್ರ ಏಳಬೇಕಾದ್ರ ಹೊತ್ತ ನೆತ್ತಿಗೆ ಬರ್ಬೇಕೆಂದು” ನಕ್ಕು ಗಾಡಿಯ ಸ್ಪೀಡು ಹೆಚ್ಚಿಸಿದ. 

            “ಮತ್ತೇನಪಾ ಊರಾಗ ವಿಶೇಷಾ” ಅಂದೆ. ಜಾತ್ರಿಯ ಸಲುವಾಗಿ ಮನಿಗೆ ಬಣ್ಣಾ ಹಚ್ಚುವುದೇ ದೊಡ್ಡ ವಿಶೇಷ ಎಂದು ಸೂರ್ಯ ದೊಡ್ಡ ದನಿಮಾಡಿ ನಗತೊಡಗಿದ.  ಮನೆ ಬಂದೇ ಬಿಟ್ಟಿತು. ಅಪ್ಪ ಅಜ್ಜನ ರೇಡಿಯೋ ಹಿಡಿದುಕೊಂಡು ಕಟ್ಟಿಗೆ ಕುಳಿತಿದ್ದ. ಅವ್ವ ಮನೆಯೊಳಗಿದ್ದಳು. ನನ್ನ ನೋಡಿದ ಕೂಡಲೇ ಅವ್ವ ತಂಬಿಗೆ ನೀರು ತಂದು ಕೈಗಿಟ್ಟಳು. ಅಪ್ಪ ತನ್ನ ರೇಡಿಯೋದ ಸೌಂಡ್‌ ಒಂಚೂರು ಕಮ್ಮಿ ಮಾಡಿ ನನ್ನ ಯೋಗಕ್ಷೇಮ ವಿಚಾರಿಸಿದ. ಗೆಳೆಯ ಸೂರ್ಯ ನನ್ನ ಮನೆಗಿಳಿಸಿದವನೇ ಹೊರಟು ಹೋದ. ಆಗಸದ ಸೂರ್ಯ ಮೂಡಣದಿಂದ ಮೇಲೆದ್ದು ನಾಕೈದು ಮಾರ ಮುಂದೆ ಬಂದಿದ್ದ.

                                                       ******

             ನಾಕೈದು ಗೆಳೆಯರನ್ನು ಕರೆದುಕೊಂಡು ಮನೆಯಲ್ಲಿದ್ದ ಸ್ವಾಮಾನ ಸೊಟ್ಟಿ ಹೊರಗಿಟ್ಟು, ಇಡೀ ಮನೆಯ ದೂಳು ಹೊಡೆದು, ಹಸನುಗೊಳಿಸಿ ಸುಣ್ಣ ಬಣ್ಣ ಬಳೆಯಲು ಸಜ್ಜಾದೆವು. ಅವ್ವ ನಮಗೆ ನೆರುವುವಾದಳು. ಅಪ್ಪ ಅಂದು ಎಮ್ಮೆ ಮೇಸಲು ಊರ ಹೊರಗಿರುವ ಬಯಲಿನತ್ತ ಹೋಗಿದ್ದ.

                 ಚುಮು ಚುಮು ಹೊತ್ತು ಮುನುಗುವ ಹೊತ್ತಿಗೆ ಇಡೀ ಮನೆ ಬಣ್ಣದ ಕೋಳಿಯಂತೆ ಕಾಣುತ್ತಿತ್ತು. ಹೊರಗಿಟ್ಟ ಸ್ವಾಮಾನ ಮತ್ತೆ ಒಂದೊಂದೆ ಜೋಡಿಸುವ ಹೊತ್ತಿಗೆ ಎಲ್ಲರ ಹೊಟ್ಟೆಯಲ್ಲಿ ಇಲಿ ಓಡಾಡುತ್ತಿದ್ದವು. ಅವ್ವ ಆ ಹೊತ್ತಲ್ಲಿ ಬೇರೆ ಅಡುಗೆಯ ಗೊಡುವಿಗೆ ಹೋಗದೇ ಒಂದು ಬೋಗಾಣಿ ತುಂಬ ಉಪ್ಪಿಟ್ಟಿ ತಿರುವಿ, ತಾಟು ತುಂಬಿ ತುಂಬಿ ಕೊಟ್ಟಳು. ಎಲ್ಲರೂ ಉಪ್ಪು ಹುಳಿ, ಕಾರ, ಅನ್ನದೇ ಒಂದೇ ಸಮನೇ ಮುಕ್ಕಿದೆವು. ರೇಡಿಯೋ ಕೇಳುತ್ತ ಕಟ್ಟೆಯ ಮೇಲೆ ಕುಂತಿದ್ದ ಅಪ್ಪನನ್ನು ಅವ್ವ ಕರೆದು  ಅವನಿಗೂ ಉಪ್ಪಿಟ್ಟು ಹಾಕಿ ಕೊಟ್ಟು ತಾನೂ ಹಾಕಿಕೊಂಡು ತಿನ್ನತೊಡಗಿದಳು.

                    ಇದ್ದಕಿದ್ದಂತೆ  ಕರೆಂಟು ಹೋಯಿತು.. ಅವ್ವ ಮೇನಬತ್ತಿ ಹಚ್ಚಿ ಬೆಳಕು ಮಾಡಿದಳು.  ಕತ್ತಲಲ್ಲಿ ಸೂರ್ಯ ಕಂಬಕ್ಕೆ ಅಪ್ಪ ಆನಿಸಿ ಇಟ್ಟ ನಮ್ಮಜ್ಜನ ಹಳೇ ರೇಡಿಯೋ ಗೆ ಕೈ ಬಡಸಿದ. ಹಳೇ ರೇಡಿಯೋ ಪಳ್‌ ಎಂದು ಪಳಗುಟ್ಟಿತು. ಅಪ್ಪ ಉಪ್ಪಿಟ್ಟಿನ ತಾಟನ್ನು ಅಲ್ಲೇ ಬಿಟ್ಟವನೇ ತನ್ನ ಜೀವಕಿಂತ ಹೆಚ್ಚು ಜತನ ಮಾಡಿಕೊಂಡ ಬಂದ ರೇಡಿಯೋ ಹತ್ತಿರ ದಿಗ್ಗನೆದ್ದು ಬಂದನು. ಇಡೀ ರೇಡಿಯೋ ಎರಡು ಹೋಳಾಗಿತ್ತು, ಅದರೊಳಗಿದ್ದ ಕರಿ,ಕೆಂಪು, ನೀಲಿ ಬಣ್ಣದ ವಾಯರ್‌ ಸತ್ತ ಪ್ರಾಣಿಗಳ ಕರಳಂತೆ ಹೊರ ಚೆಲ್ಲಿದ್ದವು. ಅಪ್ಪ ಸಣ್ಣ ಹುಡುಗರಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ. ನನ್ನ ಗೆಳೆಯರೆಲ್ಲರೂ ಗಾಬರಿಯಾದರೂ. ಅವ್ವ ಬಂದು ಅಪ್ಪನ ಕಣ್ಣೀರು ವರೆಸತೊಡಗಿದಳು. ಆಗ ನನಗೆ ಅಪ್ಪ ಹೀಗೇಕೆ ಹುಚ್ಚರಂತೆ ಮಾಡುತ್ತಿದ್ದಾನೆಂದು ಗೆಳೆಯರ ಮುಂದೆ ಅಸಯ್ಯವಾಯಿತು. “ನಾಳೆಗೊಂದು ಹೊಸ ರೇಡಿಯೋ ತಂದ ಕೋಡ್ತನಿ ಸುಮ್ನಿರಪ್ಪೋ” ಎಂದು ಹೇಳಿದೆ. ಅಂವ ಅದಕ್ಕೆ ಒಂದು ಎರಡು ಅನ್ನದೇ ಸುಮ್ಮನೇ ಮನೆಯಲ್ಲಿ ಯಾರನ್ನೋ ಕಳೆದುಕೊಂಡವರಂತೆ ಕಂಬಕ್ಕೆ ಕುಳಿತು “ಅಪ್ಪಾ ಅಪ್ಪಾ, ಅವ್ವಾ ಅವ್ವಾ” ಎಂದು ದುಃಖಪಡತೊಡಗಿದ. ನಾನು ಗೆಳೆಯರನ್ನು ಕರೆದಿಕೊಂಡು ಮನೆಯಿಂದಾಚೆ ಹೋದೆ. ಗೆಳೆಯನಾದ ಸೂರ್ಯ “ನನ್ನಿಂದ ನಿಮ್ಮಪ್ಪನ ರೇಡಿಯೋ ಹಾಳಾತು, ನಾನು ಮನೆಗೆ ಬಣ್ಣ ಹಚ್ಚಲು ಬಂದು ತಪ್ಪು ಮಾಡಿದೆನೇನೋ” ಎಂದು ಹಳಹಳಿಸುತ್ತ ಹೋದ. ಅವನ ಹಿಂದೆ ಉಳಿದ ಗೆಳೆಯರೂ ತಮ್ಮ ತಮ್ಮ ಮನೆಯತ್ತ ನೆಡೆದರು.

            ಮರಳಿ ಮನೆಗೆ ಬಂದಾಗ ಅಪ್ಪನೊಟ್ಟಿಗೆ ಅವ್ವಳೂ ಅಳುತ್ತಿದ್ದಳು. ಆಗ ನನಗೆ ತುಂಬಾ ಅಚ್ಚರಿ ಅನಿಸಿತು. “ಹಿಂಗ್ಯಾಕ ಹುಚ್ಚರಗತೆ ಮಾಡಾಕತ್ತಿರಿ, ಆ ಸೊಟ್ಟ ರೇಡಿಯೋ ಸಲುವಾಗಿ” ಎಂದು ನಾನು ಕೋಪದಿಂದ ಕಿರಚಾಡಿದೆ. ಅವರಿಬ್ಬರೂ ನನ್ನನ್ನು ಒಬ್ಬ ಅಪರಾಧಿಯಂತೆ ಕಾಣತೊಡಗಿದರು.

              ಅಪ್ಪ ತನ್ನ ಬಿಳಿ ಟವಲ್ಲ ಮೇಲೆ ಆ ಒಡೆದು ಹೋದ ರೇಡಿಯೋ ಹಾಕಿಕೊಂಡು ಸತ್ತ ಹೆಣದ ಮುಂದೆ ಕುಂತಂತೆ ಕುಂತು ಕಣ್ಣೀರು ಇಡುವುದು ನನಗೆ ಸಹಿಸಲಾಗದೇ ನಾನೂ ಅವನ ಬಳಿ ಹೋಗಿ ಕುಂತು, ಅವನ ಕೈ ಮುಟ್ಟಿ ಹಿಂಗ್ಯಾಕ ಮಾಡಾಕತ್ತಿ, ಈ ರೇಡಿಯೋದಾಗ ಅಂಥದ್ದೇನೈತೆಂದು ಚೌಕಾಸಿ ಮಾಡಿದೆ. ಆಗ ಅವ್ವ ಕಣ್ಣೊರಿಸಿಕೊಂಡು ಆ ರೇಡಿಯೋದ ಕತಿ ಹೇಳತೊಡಗಿದಳು.

              ನಿಮ್ಮ ಅಜ್ಜನ ಮದವಿಯಾಗಿ ನಿಮ್ಮಜ್ಜಿ ಈ ಮನೆಗೆ ಬರುವಾಗ ವರದಕ್ಷಿಣೆಯಾಗಿ ತಂದ ರೇಡಿಯೋ ಅದು. ಆ ರೇಡಿಯೋದ ಮೇಲೆ ನಿಮ್ಮಜ್ಜ ಪ್ರಾಣನೇ ಇಟ್ಟುಕೊಂಡಿದ್ದ.  ನಿಮ್ಮ ಅಜ್ಜಿ ನಿಮ್ಮಪ್ಪನಿಗೆ ಜೀವಕೊಟ್ಟ ಮೇಲೆ ಕಣ್ಣು ಮುಚ್ಚಿದ್ದಳು. ಅವಳು ಹೋದ ಮೇಲೆ ಅದೇ ರೇಡಿಯೋ ನಿಮ್ಮಜ್ಜಿ ಎಂದು ಭಾವಿಸಿಕೊಂಡು ಬದುಕು ಸಾಗಿಸಿದ್ದ. ಆ ರೇಡಿಯೋಗೆ ಬಿಸಿಲು ಬೆಂಕಿ ಸೊಕದಂತೆ, ನೀರು ಗಾಳಿ ತಾಗದಂತೆ, ನಿಮ್ಮಪ್ಪನನ್ನು ತಾಯಿ ಇಲ್ಲದ ಮಗನೆಂದು ಹೇಗೆ ಜೋಪಾನ ಮಾಡಿದನೋ ಹಾಗೇ ನಿಮ್ಮಜ್ಜಿಯ ನೆನಪಿನ ಕಾಣಿಕೆಯಾದ ಆ ರೇಡಿಯೋವನ್ನು ಜೋಪಾನ ಮಾಡಿಕೊಂಡು ಬಂದಿದ್ದ.

               ಸಂಜೆಯಾದರೆ ಸಾಕು ಊರಿನ ಅನೇಕ ಗಣ್ಯಾತಿಗಣ್ಯರು ನಿಮ್ಮ ಅಜ್ಜನ ಹತ್ತಿರಕ್ಕೆ ರೇಡಿಯೋ ಕಾರ್ಯಕ್ರಮ ಕೇಳಲು ಬರುತ್ತಿದ್ದರು. ಈ ಊರಲ್ಲಿ ಆವಾಗ  ನಿಮ್ಮ ಅಜ್ಜನ ರೇಡಿಯೋ ಒಂದು ಬಿಟ್ಟು ಯಾರ ಮನೆಯಲ್ಲೂ ರೇಡಿಯೋ ಇದ್ದಿರಲಿಲ್ಲ. ವಾರ್ತೆ, ರೈತರಿಗೆ ಸಲಹೆ, ಗೀಗಿಪದಗಳು, ಹಂತಿಪದಗಳು, ಪಾರಿಜಾತ, ನಾಟಕ, ಚಲನಚಿತ್ರ ಗೀತೆಗಳು, ಹವಾಮಾನ ವರದಿ, ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ನಿಮ್ಮಜ್ಜನ ರೇಡಿಯೋದಿಂದ ಇಡೀ ಊರಿನ ಜನ ಕೇಳಿ ತಿಳಿಯುತ್ತಿದ್ದರು.

               “ಇದರಾಗ ನಿಮ್ಮವ್ವನ ನೆನಪ  ಪೂರಾ ತುಂಬೈತೆಪ್ಪಾ, ಅಕೀ ಉಸಿರು ಇದರಾಗ ಐತಿ” ಎಂದು ನಿಮ್ಮಜ್ಜ ಒಂದು ಸಲ ಭಾವುಕನಾಗಿ ನಿಮ್ಮಪ್ಪನಿಗೆ ಹೇಳಿದ ಮ್ಯಾಲ ನಿಮ್ಮಪ್ಪಗ ಆ ರೇಡಿಯೋನ ತನ್ನ ತಾಯಿ ಎಂದು ಅದನ್ನು ಯಾವತ್ತೂ ಎದೆಗವಚಿಕೊಂಡು ಕೂಡತೊಡಗಿದನಂತೆ. ನಿಮ್ಮಜ್ಜನೂ ಹ್ವಾದ ಮೇಲೆ ನಿಮ್ಮಪ್ಪನಿಗೇ ಆ ರೇಡಿಯೋ ನೇ ತಂದೆ- ತಾಯಿ ಆಗಿಬಿಟ್ಟಿತು. ಅದಕ್ಕ ನಿಮ್ಮ ಅಪ್ಪ ಎಲ್ಲಿ ಹ್ವಾದ್ರೂ ಆ ರೇಡಿಯೋ ಹೊತಗೊಂದ ತಿರಗತಾನೆಂದು ಅವ್ವ ರೇಡಿಯೋ ಹಿಂದಿನ ಕತೆ ಹೇಳುವಾಗ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ನಾನೂ ಅಪ್ಪನನ್ನು ಬಿಗಿದಪ್ಪಿ ಗಳಗಳ ಅತ್ತು ಬಿಟ್ಟೆ.  ನಾಳೆನೇ ಪ್ಯಾಟಿಗೆ ಹೋಗಿ ಈ ರೇಡಿಯೋ ರಿಪೇರಿ ಮಾಡಿಸಿಕೊಂಡ ಬರ್ತಿನೆಂದು ಹೇಳಿದಾಗ ಅಪ್ಪ ಗಟ್ಟಿಯಾಗಿ ಉಸಿರು ಬಿಟ್ಟ. ನನ್ನ ಮಾತಿನ ಮ್ಯಾಲ ನಂಬಿಕೆ ಇಟ್ಟು ನಂತರ ಅವ್ವ ಮಾಡಿದ ಉಪ್ಪಿಟ್ಟು ತಿಂದು ಮಲಗಿದ.

                   ಇಡೀ ರಾತ್ರಿ ಅಜ್ಜ ಮತ್ತು ಅಪ್ಪನ ಬದುಕಿನ ಕತೆಯೇ ತಲೆಯಲ್ಲಿ ಕಿರಕಿ ಹೊಡೆಯತೊಡಗಿತು. ಅಜ್ಜ ರೇಡಿಯೋದ ಮೇಲೆ ಇಟ್ಟುಕೊಂಡ ಭಾವುನಾತ್ಮಕ ಸಂಬಂದ ನೆನದು ಬೆರಗಾದೆ. ಅಪ್ಪ ಅಜ್ಜನಗಿಂತ ಮುಂದುವರೆದು ಆ ರೇಡಿಯೋದಲ್ಲಿಯೇ ಹೆತ್ತವರನ್ನು ಕಲ್ಪಿಸಿಕೊಂಡು ಬದಕುವ ಪರಿ ಕಂಡು ತೀರಾ ಸೋತು ಹೋದೆ. ಅಪ್ಪನ ಉಸಿರಾದ ಆ ರೇಡಿಯೋ ನಾಳಿನೇ  ಬಾಗಲಕೋಟೆಗೆ ಹೋಗಿ ರಿಪೇರಿ ಮಾಡಿಕೊಂಡು ಬರಬೇಕೆಂದು ಲೆಕ್ಕಾಚಾರ ಹಾಕಿಕೊಂಡೇ ಮಲಗಿದೆ. ನಿದ್ದೆ ಬರಲಿಲ್ಲ. ಅಪ್ಪನ ಬಿಳಿ ಟಾವಲ್ಲಿನಲ್ಲಿ ಸುತ್ತಿಟ್ಟ ರೇಡಿಯೋ ನೋಡಬೇಕನಿಸಿತು. ಮೇಲೆದ್ದು ನೋಡಲು ಹೋದೆ. ಅಪ್ಪ ಅದನ್ನು ಪಕ್ಕದಲ್ಲಿ ಇಟ್ಟುಕೊಂಡು ಮಲಗಿದ್ದ.  ಮತ್ತೊಮ್ಮೆ ನಾನೇ ಭಾವುಕನಾಗಿ ಬಂದು ಮೋತಿಯ ಮೇಲೆ ಹಾಸಿಗೆ ಹೊತ್ತುಕೊಂಡು ಮಲಗಿದೆ. ನಿದ್ದೆ ಹತ್ತಿರ ಸುಳಿಯಲಿಲ್ಲ. ಅದು  ಪಿಲಿಪ್ಸ್‌ ಕಂಪನಿಯ ರೇಡಿಯೋ ಅದರ ಪೇರಪಾರ್ಟ್ಸ ಸಿಕ್ಕೇ ಸಿಗುತ್ತವೆ ಅನ್ನುವ ನಂಬಿಕೆ  ಮನದಲ್ಲಿ ಮೂಡಿದಾಗ ನನ್ನ ಕಣ್ಣು ಆಗ  ಸಣ್ಣಗೆ ಮುಚ್ಚತೊಡಗಿದವು.

                                                    *******

               ಸೂರ್ಯ ಮತ್ತು ನಾನು ರೇಡಿಯೋ ರಿಪೇರಿ ಮಾಡಿಸಲು ಬಾಗಲಕೋಟೆಗೆ ಬಂದೆವು.  ನಾಕೈದು ಅಂಗಡಿ ಸುತ್ತಿ ಹೈರಾಣಾದೆವು. ಯಾರೂ ಆ ರೇಡಿಯೋ ಸ್ಥಿತಿ ನೋಡಿ ಅದನ್ನು ಕೈಯಿಂದಲೂ ಮುಟ್ಟಲಿಲ್ಲ. ಆಗ ನನಗೆ  ಮನದಲ್ಲಿ ಆತಂಕ ಹೆಚ್ಚಿತು. ಅಪ್ಪನನ್ನು ಸಮಾಧಾನ ಮಾಡುವುದು ಸುಲಭದ ಮಾತಲ್ಲ. ಈ ರೇಡಿಯೋ ರಿಪೇರಿಯಾದರೇ ಮಾತ್ರ ಅಪ್ಪನ ಮುಖದಲ್ಲಿ ನಗು ಕಾಣಬಹುದು. ಇಲ್ಲದಿದ್ದರೇ ಅಪ್ಪ ಈ ರೇಡಿಯೋ ಚಿಂತೆಯಲ್ಲಿಯೇ ಕೊರಗುತ್ತಾನೆಂದು ನನ್ನ ಮನದಲ್ಲಿ ಭಯ ಹೊಕ್ಕಿತು.

               ಹಾಗೆ ಸುತ್ತಾಡುತ್ತ ವಲ್ಲಾಬಾಯಿ ಚೌಕಿಗನಲ್ಲಿರು ಒಂದು ಸಣ್ಣ ಸಂಧಿಯೊಂದರಲ್ಲಿ ಒಂದು ಸಣ್ಣ ಅಂಗಡಿ ಕಣ್ಣಿಗೆ ಬಿದ್ದಿತು.  ಅಲ್ಲೊಬ್ಬ ಅರವತ್ತು ವಯಸ್ಸಿನ ಬಿಳಿ ಗಡ್ಡದಾರಿ ಅಜ್ಜ ಕಣ್ಣಿಗೆ ದೊಡ್ಡದೊಂದು ಕಣ್ಣಡಕ ಹಾಕಿಕೊಂಡು ಕುಳತಿದ್ದ.  ಎರಡು ಹೋಳಾದ ರೇಡಿಯೋ ಅವನ ಮುಂದಿಟ್ಟು “ಅಜ್ಜಾರ ಇದನ್ನ ರಿಪೇರಿ ಮಾಡಿ ಕೊಡ್ರೀ” ಎಂದು ದೈನದಿಂದ ಕೇಳಿದೆ. ಆ ರೇಡಿಯೋ ನೋಡಿ ತನ್ನ ಪಕ್ಕದಲ್ಲಿದ್ದ ಅಂವನ ರೇಡಿಯೋ ಒಮ್ಮೆ ನೋಡಿದ. ಎರಡೂ ಅವಳಿ ಜವಳಿ ಮಕ್ಕಳಂತೆ ಕಂಡವು.  ಈ ಅಜ್ಜ  ರೇಡಿಯೋ ಖಂಡಿತ ರಿಪೇರಿ ಮಾಡಿಯೇ ಮಾಡುತ್ತಾನೆಂಬ ನಂಬಿಕೆ ನನ್ನ ಮನದಲ್ಲಿ ಸುಳಿದಾಡಿತು.

            “ಒಂದು ತಾಸು ಬಿಟ್ಟು ಬನ್ನಿ ರಿಪೇರಿ ಮಾಡಿ ಕೊಡುವೆನೆಂದು”  ಆ ಗಡ್ಡದಾರಿ ಅಜ್ಜ ಹೇಳಿದ್ದು ಕೇಳಿ ನನಗೆ ತಂಬಿಗೆ ಹಾಲು ಗಟಗಟ ಕುಡಿದಷ್ಟು ಆನಂದವಾಯಿತು. ಅಲ್ಲಲ್ಲಿ ನಿಂತು, ಕಬ್ಬಿನ ಹಾಲು ಕುಡಿದು, ಕೆಲಸ ಬಗಸಿ ಇಲ್ಲದೇ ಪ್ಯಾಟಿತುಂಬ ಸುತ್ತಾಡಿ ಒಂದು ತಾಸ ದೂಡಿದೆವು. ಆಗ ಹೊತ್ತು ಹೊರಳಿತ್ತು. ಸೂರ್ಯ  ಪಡುವಣದತ್ತ ಪವಡಿಸುತ್ತಿದ್ದ. ಬಾಗಲಕೋಟೆ ವಲ್ಲಾಬಾಯಿ ಚೌಕಿನಲ್ಲಿ ಹಳ್ಳಿಯ ಜನ ಕೈಚೀಲು ಹಿಡಿದು ಸಂತೆ ಮಾಡುತ್ತಿದ್ದರು. ಬಿಸಿಲಿನ ಹೊಡೆತಕ್ಕೆ ಸೋಡಾದ ಅಂಗಡಿಯ ಮುಂದೆ ಹೆಚ್ಚು ಜನರು ಸೇರಿಕೊಂಡು ತಮ್ಮ ಗಂಟಲಲ್ಲಿದ್ದ ದಗೆಯನ್ನು ತನಿಸಿಕೊಳ್ಳಲು ಸೋಡಾ ಕುಡಿದು ಮೈ-ಮನ ತಂಪು ಮಾಡಿಕೊಳ್ಳುತ್ತಿದ್ದರು.

                ಒಂದು ಗಂಟೆಯ ನಂತರ ಅಂಗಡಿಗೆ ಹೋದೆವು. ಗಡ್ಡದಾರಿ ಅಜ್ಜ ರೇಡಿಯೋ ರಿಪೇರಿ ಮಾಡಿ ನಮ್ಮಜ್ಜನ  ರೇಡಿಯೋದಲ್ಲಿಯೇ  ಹಿಂದೀ ಚಿತ್ರಗೀತೆಗಳನ್ನು  ಹಚ್ಚಿಕೊಂಡು ಕೇಳುತ್ತಿದ್ದ.  ನನಗಾಗ ಆ ಗಡ್ಡದಾರಿ ಅಜ್ಜ ವಿಜ್ಞಾನಿಯಂತೆ ಕಂಡ. ನನಗೆ ಅವನ ಮೇಲೆ ಅಭಿಮಾನ ಹೆಚ್ಚಿತು. “ಎಷ್ಟು ಹಣ” ಎಂದು ಕೇಳಿದೆ. “ನೂರು ರೂಪಾಯಿ ಅಕೈತಿ ಇದ್ದಷ್ಟು ಕೊಡಪ್ಪ”   ಎಂದು  ಗಡ್ಡದಾರಿ ಅಜ್ಜ ಮತ್ತಷ್ಟು ಸರಳತೆ ತೋರಿದ. ನನಗಂತು ಅವನಲ್ಲಿ ನಮ್ಮಜ್ಜನೇ ಕಾಣತೊಡಗಿದ. ನಾನು ಜೋಬಿಗೆ ಕೈ ಹಾಕಿ ಸರಕ್ಕನೇ  ಐದನೂರರ ಎರಡು ನೋಟು  ಮೇಲೆತ್ತಿ ಅವನ ಕೈಗಿಟ್ಟು ಸುಮ್ಮನೇ ನಡೆದು ಬಂದೆ. ಆ ಗಡ್ಡದಾರಿ  ಅಜ್ಜನ ಮುಖದಲ್ಲಿ ಮಂದಹಾಸದ ನಗು ಮೂಡಿತ್ತು. ಅಪ್ಪನ ಕೈಗೆ ಹೋಗಿ ರೇಡಿಯೋ ಕೊಟ್ಟಾಗಲೂ  ಅಂಥದೊಂದು ನಗುವನ್ನು ಮರಳಿ ಮತ್ತೊಮ್ಮೆ ಅಪ್ಪನಲ್ಲೂ ಕಂಡೆ.

                                                          *******

‍ಲೇಖಕರು Admin R

9 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading