ತಿಥಿ ಚಿತ್ರದ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಸೆಂಚುರಿ ಗೌಡರು ಇನ್ನಿಲ್ಲ.
‘ತಿಥಿ’ ಸಿನೆಮಾ ಮೂಲಕ ಜಾಗತಿಕ ಗಮನ ಸೆಳೆದ ಅದರ ಚಿತ್ರ ರಚನೆಕಾರರಾದ ಈರೇಗೌಡರು ಈ ಬರಹದಲ್ಲಿ ಸೆಂಚುರಿ ಗೌಡರ ಪಾತ್ರ ರೂಪುಗೊಳ್ಳಲು ಕಾರಣವಾದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ
-ಈರೇಗೌಡ
ನೀವು ಒಬ್ಬ ಅದ್ಭುತ ನಟ. ತಿಥಿ ಚಿತ್ರದಲ್ಲಿ ನಿಮ್ಮಿಂದ ಮಾತ್ರ ನಟನೆ ಮಾಡಿಸುವುದು ನನಗೆ ತುಂಬಾ ಸುಲಭವಾಗಿತ್ತು. ಕಾರಣ ಸಣ್ಣ ಸಣ್ಣ ಸೂಕ್ಷ್ಮತೆಗಳು ನಿಮಗೆ ಅರ್ಥವಾಗುತ್ತಿತ್ತು. ಮತ್ತು ನೀವು ಆ ವಯಸ್ಸಿನಲ್ಲೂ ಕೂಡ ಜಾಗರೂಕಾರಾಗಿದ್ದಿರಿ, ನಿಮ್ಮ ಮೊದಲ ಚಿತ್ರದಲ್ಲೇ ಜಗತ್ತಿನಾದ್ಯಂತ ನೀವು ಪಡೆದ ಅಭಿಮಾನ ಸಂಪೂರ್ಣವಾಗಿ ನಿಮಗೆ ಸಲ್ಲಬೇಕು! ವಿಶೇಷವಾಗಿ ಗಾಡ್‌ಫಾದರ್ ಚಿತ್ರದ ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕಾಪೋಲಾ ಅವರ ಮೆಚ್ಚುಗೆಯೂ ನಿಮಗೆ ಸಿಕ್ಕಿದ್ದು ನಮಗೆಲ್ಲ ಹೆಮ್ಮೆಯ ವಿಷಯ.
ತಿಥಿ ಚಿತ್ರದಲ್ಲಿನ ಸೆಂಚುರಿ ಗೌಡರ ಪಾತ್ರ ಹುಟ್ಟಲು ಕಾರಣ ನಿಮ್ಮ ಅಣ್ಣ ಬುಡಿಯಪ್ಪನವರು. ಮಾರ್ಚ್ 2013ರಲ್ಲಿ ಮಂಡ್ಯದ ಮದುವೆ ಮನೆಯಲ್ಲಿ ಅವರನ್ನು ಮೊದಲ ಬಾರಿ ಭೇಟಿಯಾದ ಕ್ಷಣ ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ, ಆ ಭೇಟಿಯಾದ ಕ್ಷಣವೇ ನಮ್ಮಿಬ್ಬರ ನಡುವೆ ಸ್ನೇಹವಾಗಿ ಬದಲಾಗಿತ್ತು.
ಅಲ್ಲಿಂದ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗುವಾಗ ತಮ್ಮ 101 ವರ್ಷದ ಜೀವನಾನುಭವ, ಬದುಕಿನ ಕಥೆಗಳು ಎಲ್ಲವನ್ನೂ ಅವರು ತುಂಬಾ ಸರಳವಾಗಿ ನನ್ನ ಜೊತೆ ಹಂಚಿಕೊಂಡರು. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ನಾನು ಊರು ತಲುಪಿದಾಗ ನಮ್ಮ ಊರಿನ ಬಹುತೇಕ ಎಲ್ಲಾ ಹಿರಿಯರಿಗೆ ಅವರು ಮೊದಲಿನಿಂದಲೇ ಪರಿಚಿತರಾಗಿದ್ದರು. ನಾನು ಅವರನ್ನು ಮೂವತ್ತು ವರ್ಷಗಳ ನಂತರ ನಮ್ಮ ಊರಿಗೆ ಕರೆದುಕೊಂಡು ಬಂದರೂ, ಯಾರೂ ಅವರನ್ನು ಮರೆತಿರಲಿಲ್ಲ. ನನ್ನ ಚಿಕ್ಕಪ್ಪ ಸೇರಿ ಎಲ್ಲರಲ್ಲೂ ಅವರ ಬಗ್ಗೆ ಒಂದು ಆತ್ಮೀಯತೆ ಇತ್ತು. ಅದು ನನಗೆ ಇನ್ನೊಂದು ಅಚ್ಚರಿ! ಜೊತೆಗೆ ನಿಜವಾದ ಸೆಂಚುರಿ ಗೌಡರ ಪಾತ್ರದ ಸೃಷ್ಟಿಗೆ ಮೂಲವಾಯಿತು.
ಚಿತ್ರ ಮಾಡುವ ಮೊದಲೇ ಬುಡಿಯಪ್ಪರವರು ವಿಧಿವಶರಾದಾಗ ಆ ಪಾತ್ರಕ್ಕೆ ಮತ್ತೊಬ್ಬರನ್ನು ಹುಡುಕುವುದು ನನಗೆ ತುಂಬಾ ಕಷ್ಟವಾಗಿತ್ತು. ತಿಂಗಳುಗಳ ಕಾಲ ಮಂಡ್ಯ ಜಿಲ್ಲೇಯಾದ್ಯಂತ ಹುಡುಕಿದರೂ ಎಲ್ಲೆಡೆ ನಿರಾಶೆಯೇ. ಒಂದು ದಿನ ನನ್ನ ಭಾಮೈದ ಮಂಜುನಾಥ್ ಎಲ್, ಭಾವ “ಬುಡಿಯಪ್ಪರವರ ತಮ್ಮ ಒಬ್ಬರು ಇದ್ದಾರೆ, ಯಾಕೆ ಒಮ್ಮೆ ಅವರನ್ನು ನೋಡಬಾರದು?” ಎಂದು ನೀಡಿದ ಸಲಹೆ ಈಗ ನೋಡಿ ನಿಮ್ಮನ್ನು ಜಗತ್ತಿಗೆ ಪರಿಚಯಿಸಿತು. ಇದೆಲ್ಲವೂ ಮೊದಲೇ ವಿಧಿಯ ಯೋಜನೆಯಾಗಿತ್ತೋ ಏನೋ ಅನಿಸುತ್ತದೆ. ಏಕೆಂದರೆ ನೀವು ನಾ ಕಂಡ ಒಬ್ಬ ಅದ್ಬುತ ಕಲಾವಿದರು. ನೀವು ಸಿಕ್ಕದ್ದು ನಮ್ಮ ಜೀವನದ ದೊಡ್ಡ ಅದ್ಭುತ ಕೊಡುಗೆ.
ಅಷ್ಟೊಂದು ಇಳಿ ವಯಸ್ಸಿನಲ್ಲಿಯೂ ನಿಮ್ಮಲ್ಲಿ ಇದ್ದ ಆಲೋಚನೆಯ ಸ್ಪಷ್ಟತೆ, ಸರಳತೆ ನಮ್ಮ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.
ನೀವು ನಮ್ಮ ಮಧ್ಯೆ ಇಲ್ಲದಿದ್ದರೂ, ನಿಮ್ಮ ನಟನೆ, ನಿಮ್ಮ ಬದುಕು, ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಸ್ಮರಣೆ ಸದಾ ನಮ್ಮ ಜೊತೆ ಇರುತ್ತದೆ.
ಶಾಂತಿಯಲ್ಲಿ ವಿಶ್ರಾಂತಿ ಪಡೆಯಲಿ ಸೆಂಚುರಿಗೌಡ್ರೇ!






0 Comments