ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮ್ಮ ಅನುಭವ ಜಗತ್ತನ್ನೇ ಕಥೆಯಾಗಿಸಿ, ನಾಟಕವಾಗಿಸಿ..

ಮುರುಳಿ ಮೋಹನ್ ಕಾಟಿ
ಪ್ರಯೋಗಶೀಲತೆಗೆ ಸದಾ ತುಡಿಯುವ  ’ಸಂವಾದ’ ಈ ಬಾರಿಯೂ ಇದರಿಂದ ಹೊರತಾಗಿಲ್ಲ. ಹೊಸ ಕನಸುಗಳಿಗೆ ನೀರೆರೆಯುತ್ತಾ, ಯುವ ಜನರ ಮಿಡಿತಗಳಿಗೆ ಸ್ಪಂದಿಸುತ್ತಲೇ ಅವರಲ್ಲಿನ ಚೈತನ್ಯಕ್ಕೆ ಬೆಳಕಾಗುತ್ತಿದೆ. ಪ್ರತಿ ಬಾರಿಯಂತೆ ಈ ಸಲವೂ ಭಿನ್ನ ರಂಗಪ್ರಯೋಗಕ್ಕೆ ಇಳಿದಿದೆ. ರಂಗಭೂಮಿಯ ಗಂಧಗಾಳಿಯೂ ಸೋಕದವರಲ್ಲಿ ಅಭಿನಯದ ಒಂದಿಷ್ಟು ಬೀಜ ಬಿತ್ತಿ ಸಜ್ಜುಗೊಳಿಸಿದೆ. ಅದು ಫಸಲಾಗಿ ನಳನಳಿಸುತ್ತದೆಂಬ ಭರವಸೆ ನಮ್ಮಲ್ಲಿಯೂ ಉಸಿರಾಡುತ್ತಿದೆ.
ಜಗದ ಅರಿವಿಗೆ ಬಾರದೆ ಹುದುಗಿರುವ ಎಷ್ಟೋ ಸತ್ಯಗಳಿವೆ. ಅವುಗಳನ್ನು ಬೆನ್ನಟ್ಟಿದಾಗಲೇ ಆಳ-ಅಗಲ ತಿಳಿಯುವುದಲ್ಲದೇ, ತೀವ್ರತೆಯ ಸ್ವರೂಪ ಅರ್ಥವಾಗುವುದು.
ಈ ನಾಟಕದಲ್ಲಿ ತಮ್ಮೊಳಗೇ ಕುಗ್ಗಿ-ಅರಳಿದ ಕಣ್ಣ ರೆಪ್ಪೆಗಳ ತುಡಿತವಿದೆ. ಜಂಜಾಟದ ಬದುಕಿನೊಳಗೆ ಬೆತ್ತಲುಗೊಂಡವರ ಅಸ್ತಿತ್ವವಿದೆ. ಯುವ ಮನಸ್ಸಿನ ತವಕ-ತಲ್ಲಣಗಳನ್ನು ಪ್ರತಿಬಿಂಬಿಸಲಾಗಿದೆ. ಪ್ರತಿಕ್ಷಣ ಕಾಲದ ಕಾಲಡಿಯಲ್ಲಿ ಸಿಲುಕಿ ಅವರು ತಮ್ಮ ಬದುಕನ್ನು ಹೇಗೆ ಸವೆಸುತ್ತಾ ಸಾಗುತ್ತಾರೆ ಎಂಬುದರೊಳಗೆ ಆರ್ಥಿಕ, ಸಾಮಾಜಿಕ ಸ್ಥಿತಿಗಳೊಳಗೆ ಸಿಲುಕಿ ನಲುಗುವ ಮುಗ್ಧ ಮನಸ್ಸುಗಳ ಬದುಕು ಅನಾವರಣಗೊಂಡಿದೆ. ಯಾರಿಗೂ ತೋರಗೊಡದೆ ತಮ್ಮೊಳಗೇ ಬಚ್ಚಿಟ್ಟುಕೊಂಡ ಹಸಿವಿನ ಬುತ್ತಿ ಬೆಳಕಿಗಾಗಿ ತುಡಿಯುತ್ತಿರುತ್ತದೆ. ಅಲ್ಲದೇ ಪುಟ್ಟ ಸಾಂತ್ವನದ ನಿಟ್ಟುಸಿರಿನ ಬೆಚ್ಚನೆಯ ಸ್ಪರ್ಶವ ಬೇಡುತ್ತಿರುತ್ತದೆ. ಇದನ್ನು ಅನುಭವಿಸಿಯೇ ತೀರಬೇಕಾದರೆ ’ಪುರಾಣಂ ಪರಾಭವಂ’ ನಾಟಕ ನೋಡಲೇಬೇಕು.
ಹಳ್ಳಿಗಳು ನಗರಗಳಾಗಿ, ನಗರಗಳು ಮಹಾನಗರಗಳಾಗಿ ರೂಪಾಂತರಗೊಳ್ಳುತ್ತಿರುವ ಸಂಕ್ರಮಣ ಸಂದರ್ಭದಲ್ಲಿ  ಯುವಜನರು ಅನಿವಾರ್ಯತೆಗೆ ಸಿಲುಕಿ, ನೆಲದ ನೆನಪುಗಳನ್ನು ಕೈಬಿಟ್ಟು ಬದುಕಿಗಾಗಿ ಗುಳೆ ಹೋಗಿ ಮಹಾನಗರಗಳಲ್ಲಿ ನೆಲೆನಿಂತಾಗ ಎದುರಾಗುವ ಸವಾಲು, ತಲ್ಲಣಗಳ ನೆರಳಲ್ಲಿ ಬಿಚ್ಚಿಕೊಳ್ಳುವ ನೆನಪುಗಳ ಕಥಾನಕವೇ ’ಪುರಾಣಂ ಪರಾಭವಂ’ ನಾಟಕ.
ಕೌಟುಂಬಿಕ ಒತ್ತಡಗಳಿಂದಾಗಿ ಆಯ್ಕೆಯ ಸ್ವಾತಂತ್ರವಿಲ್ಲದೆ ಯುವಜನರು ಖಿನ್ನತೆಗೆ ಒಳಗಾಗುವುದು, ಸಹಜವಾಗಿ ಚಿಗುರುವ ಪ್ರೀತಿಯು ಜಾತಿ ಧರ್ಮದ ಸಂಕೋಲೆಗೆ ಸಿಲುಕಿ ನರಳುವುದು, ದೇವದಾಸಿ ಪದ್ದತಿ ಕಾರಣಕ್ಕೆ ಅಸ್ತಿತ್ವಹೀನರಾಗುವ ಯುವತಿಯರ ನೋವು, ಬಡತನದ ಕಾರಣಕ್ಕೆ ಕನಸುಗಳೇ ಹುಟ್ಟದೇ ಕಮರುವ ಬದುಕಿನ ಕುರಿತು ಸ್ವಗತ… ಕೊನೆಗೆ ಇವೆಲ್ಲವುಗಳನ್ನು ಮುರಿದು ಪಂಜರವ ದಾಟಿ, ಹಕ್ಕಿಯಂತೆ ಹಾರುವ ಭರವಸೆಯನ್ನು ಈ ನಾಟಕ ಪ್ರಸ್ತುತಪಡಿಸುತ್ತದೆ.
ಈ ನಾಟಕವು ಹಲವು ಕಾರಣಗಳಿಗಾಗಿ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾದ ಪ್ರಯೋಗವಾಗಿದೆ. ನಾಟಕ ತಂಡದಲ್ಲಿ ೨೭ ಯುವಜನರಿದ್ದೂ ಕರ್ನಾಟಕದ ಬೆಳಗಾವಿಯಿಂದ ಕೋಲಾರದವರೆಗೂ, ಮಡಿಕೇರಿಯಿಂದ ಬಳ್ಳಾರಿವರೆಗೂ ಹಲವೂ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಅರವು, ತುಳು, ಬ್ಯಾರಿ, ಉರ್ದು, ಭಾಷೆಗಳ ಹಿನ್ನಲೆಯ ಯುವಜನರು ಈ ತಂಡದಲ್ಲಿ ಇದ್ದಾರೆ.
೨೭ ಜನರು ತಾವು ಅನುಭವಿಸಿದ, ತಾವು ಕೇಳಿದ ಅನುಭವ ಜಗತ್ತುಗಳನ್ನೇ ಕಥೆಯಾಗಿಸಿ, ನಾಟಕವಾಗಿಸಿ, ಹಾಡುಗಳನ್ನು ಬರೆದು, ಸಂಗೀತ-ನೃತ್ಸಂ ಯೋಜಿಸಿ ರೂಪಿಸಿರುವ ಸಮೂಹ ರಚನೆಯ ವಿಶಿಷ್ಟ ನಾಟಕವು ಇದಾಗಿದೆ.

‍ಲೇಖಕರು admin

27 December, 2015

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading