‘ಪೂರ್ವಭಾಷಿ’ – ಮೊದಲ ಓದಿನ ಟಿಪ್ಪಣಿಗಳು
ಮುರಳೀಧರ ಉಪಾಧ್ಯ ಹಿರಿಯಡಕ
ಆರ್. ತಾರಿಣಿ ಶುಭದಾಯಿನಿ ಅವರ ನಾಲ್ಕನೆಯ ಕವನ ಸಂಕಲನ – ’ಪೂರ್ವಭಾಷಿ ’(೨೦೧೩). ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ [2013 ] ಪಡೆದಿರುವ ಈ ಸಂಕಲನದಲ್ಲಿ ೪೧ ಕವನಗಳಿವೆ.
ವಡ್ಡಾರಾಧನೆಯ ಹಿನ್ನೆಲೆ ಇರುವ ಎರಡು ಕವನಗಳು ಗಮನ ಸೆಳೆಯುತ್ತವೆ -ತನ್ನ ಮದುವೆ ದಿನದ ಅಲಂಕಾರವನ್ನು ಸೋದರ ಮಾವನಿಗೆ ತೋರಿಸಬೇಕೆಂದು ನಡುರಾತ್ರಿಯಲ್ಲಿ ಮನೆಯಿಂದ ಹೊರಟ ಸುಧಾಮೆಯನ್ನು ಕುರಿತ ಕವನ-’ ರೂಪವಂತ ಹೆಣ್ಣಿನ ಭಾಷೆ ’. ತಪಸ್ವಿಗಳನ್ನು ಅನುಸರಿಸುತ್ತಾ ಮುಂದೆ ತಪಸ್ವಿಯೆ ಆದ ಮಂದಮತಿ ನಂದಿಮಿತ್ರನ ಕತೆ ಆಧರಿಸಿದ ಕವನ-’ ನಂದಿಮಿತ್ರನ ಪ್ರಶ್ನೆಗಳು ’.

ಈ ಸಂಕಲನದ ’ ಮುದ್ದಣ ಮನೋರಮೆ ’ ಸಮಕಾಲೀನ ಕನ್ನಡ ಕಾವ್ಯದ ಒಂದು ಪ್ರಾತಿನಿಧಿಕ ಕವನ-
” ಓ ಪತಿ ದೇವರೇ ಕೇಳಿ,
ನಾನೀಗ ಕತೆ ಕೇಳುವವಳಲ್ಲ
ನಿಮ್ಮ ಕತೆಗಳ ಮಧ್ಯೆ
ನನ್ನ ಕತೆಯ ರೆಕ್ಕೆ ಪುಕ್ಕ
ಸಿಕ್ಕಿಕೊಂಡಿರಬಹುದು
ಮಲ್ಲಿಗೆ ಹೂವಿನಂತೆ ಕಿತ್ತುಕೊಳ್ಳುವೆ ಅದನು.
ಹಕ್ಕಿಯನು ಗಗನಕೆ ದಾಟಿಸಿಬಿಡುವೆ ನೋಡಿ ”
– ಎಂದು ಆರಂಭವಾಗುವ ಕವಿತೆ ನನಗೆ ಇಷ್ಟವಾಯಿತು .
ಕಡೆಂಗೋದ್ಲು ಪ್ರಶಸ್ತಿ ಸ್ವೀಕರಿಸಿದಾಗ ತಾರಿಣಿ ಅವರು ಓದಿದ ಕವನಗಳು- ’ ಸ್ವಾಮಿ ಮೀಯುವನು ಷಣ್ಮುಖಿಯಲ್ಲಿ ’ , ಮತ್ತು ’ ಕುವೆಂಪು ಕಂದ ಸಿಬ್ಬಲು ಗುಡ್ಡೆ ’. (ಅವರ ಕವಿತಾ ವಾಚನದ ಆಡಿಯೊ ಅಂತರ್ಜಾಲದಲ್ಲಿ ಲಭ್ಯವಿದೆ – http://mupadhyahiri.blogspot.in)
ಈ ಸಂಕಲನ ಓದಿ ಮುಗಿಸಿದಾಗ ಕಾಡುವ ಕೆಲವು ಸಾಲುಗಳು –
ಲಿಂಗವೆಂಬ ಘನವ ಇಳಿಸಬಹುದೇ
ಗಂಡು ಹೆಣ್ಣೆಂಬ ದ್ವಿತ್ವಕ್ಕೆ ? ” [ – ಜಗವೆಲ್ಲಾ ಹೆಣ್ಣು ನೋಡಾ ]
ಹಳಸಿದ ವಿಷಾನ್ನವ ಗುಟುಕು ನೀಡಿ
ಭವ ಚಕ್ರ ಮುರಿದವನು ಆ ಚುಂದ
ಅವನಿಗೆ ನನ್ನ ನಮಸ್ಕಾರ .
” ಪಾಯಸದ ಕರುಣೆಯ ತುತ್ತ್ಯಿಟ್ಟು
ಅರಿವಿನ ಮಾಯೆ ಮುಸುಕ ತೆಗೆದಳು
ಆ ಸುಜಾತೆ , ಅವಳಿಗೆ ನನ್ನ ನಮಸ್ಕಾರ . ” (-ತಥಾಗತ ಹೇಳಿದ್ದು)
” ಎಷ್ಟೋ ಸಾಲುಗಳು ಸತ್ತು
ಎಷ್ಟೊ ಪದಗಳು ಹುಟ್ಟಿ
ಒರಟು ತೊಗಟೆ ಚರ್ಮವೆ
ಹಸಿರ ಬಿಟ್ಟು ಕೊಟ್ಟಂತೆ ಕಾವ್ಯ ”
” ಹುಟ್ಟೆಂಬ ಹುಟ್ಟಿಗೆ ಸಾವಿಲ್ಲ
ಇಲ್ಲ ಅಮರ್ತ್ಯದ ಕನಸಿಗೆ
ಕೊನೆಯಿಲ್ಲ , ಬೇಂದ್ರೆ ಕನಸಿದ
ಅಡಿಗ ವಿಷಾದಿಸಿದ ಯುಗಾದಿಗೆ. ” (- ಪುನರಪಿ)
” ಶಬ್ದ ಪಾಚಿಗಟ್ಟಿದ ಮಡುವಿನಲ್ಲಿ
ಕವಿತೆ ಸಿಕ್ಕುಬಿದ್ದಿದೆ.
ಓ ದೇವತೆಗಳೆ ಕರುಣಿಸಿ
ಒಂದು ಶಿಶು ಗೀತೆಯನ್ನು ” ಶಿಶು ಗೀತೆ
ಆರಿಫ್ ರಾಜ ತನ್ನ ಬೆನ್ನುಡಿಯಲ್ಲಿ ತಾನು ಮೆಚ್ಚಿದ ಕವನಗಳನ್ನು ಉಲ್ಲೇಖಿಸಿದ್ದಾರೆ . ಈ ಸಂಕಲನವನ್ನು ಮೆಚ್ಚಿ ಮುನ್ನುಡಿ ಬರೆದಿರುವ ಎಚ್. ಎಸ್. ಶಿವಪ್ರಕಾಶ್ ಯಾವ ಕವನವನ್ನೂ ಉಲ್ಲೇಖಿಸಿಲ್ಲ.
” ಹುತ್ತಗಟ್ಟಿದ ಚಿತ್ತದಲ್ಲಿ ಹೊರಳುವ ಹಾವುಗಳ ಎಳೆಯುವೆ ” ಎನ್ನುವ ’ ಪೂರ್ವಭಾಷಿ ’ ಯ ಕವಯಿತ್ರಿಗೆ ಅಭಿನಂದನೆಗಳು .
ಪೂರ್ವ ಭಾಷಿ’ – ಸಂಕಲನವನ್ನು ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನ ಪ್ರಕಟಿಸಿದೆ .email-gbtmohan@gmail.com






The thoughts, expression, the language so fresh
ಲೇಖನ ಸೊಗಸಾಗಿದೆ. ಕವನ ಸಂಕಲನವನ್ನು ಓದಲು ಪ್ರೇರೇಪಿಸುತ್ತದೆ. ಲೇಖನದಲ್ಲಿ ಉಲ್ಲೇಖಿಸಿರುವ ಸಾಲುಗಳು ನಿಜಕ್ಕೂ ಉತ್ತಮವಾಗಿವೆ. ಲೇಖಕರಿಗೆ ಅಭಿನಂದನೆಗಳು.
ಪ್ರಶಸ್ತಿ ವಿಜೇತ ಮೇಡಂ ಗೆ ಹೃತ್ಪೂರ್ವಕ ಅಭಿನಂದನೆಗಳು.