ಜಿ ಎನ್ ಮೋಹನ್

ಇಂದಿನಿಂದ 5 ದಿನಗಳ ಕಾಲ ರಂಗ ನಿರಂತರ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ವನ್ನು ಹಮ್ಮಿಕೊಂಡಿದೆ. ಈ ಉತ್ಸವದ ಮುಖ್ಯ ಆಕರ್ಷಣೆ ತಾಯಿ ಲೋಕೇಶ್ ಅವರ ರಂಗಭೂಮಿ ಛಾಯಾಚಿತ್ರಗಳ ಪ್ರದರ್ಶನ.
—-

‘ನನ್ನ ಕ್ಯಾಮೆರಾಗೆ ನಾಟಕ ಎಂದರೆ ಹಬ್ಬ’ ಎಂದು ಸಂಭ್ರಮದಿಂದ ಕಣ್ಣರಳಿಸಿದವರು ತಾಯಿ ಲೋಕೇಶ್. ಕನ್ನಡ ರಂಗಭೂಮಿಯನ್ನು ಕ್ಯಾಮೆರಾ ಕಣ್ಣಿನಿಂದ ಹಿಂಬಾಲಿಸಿದವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಅಂತಹ ವಿರಳರ ಸಾಲಿನಲ್ಲಿ ನಿಂತವರು ತಾಯಿ ಲೋಕೇಶ್. ಇವರ ಕ್ಯಾಮೆರಾಗೆ ‘ರಾಮಾಯಣ ದರ್ಶನಂ’ ಹೇಗೆ ಪರಿಚಿತವೋ ಅಂತೆಯೇ ‘ಒಡಲಾಳ’ ಸಹಾ, ಕನ್ನಡ ರಂಗಭೂಮಿ ಹೇಗೆ ಪರಿಚಿತವೋ ಹಾಗೆಯೇ ಬೆಂಗಾಲಿ, ಮರಾಠಿ, ಮಲಯಾಳಿ ರಂಗಭೂಮಿ. ರವೀಂದ್ರ ಕಲಾಕ್ಷೇತ್ರ ಹೇಗೆ ಪರಿಚಿತವೋ ಹಾಗೆಯೇ ವಿಜಯನಗರ ಬಿಂಬದ ‘ಸರಳಾಂಗಣ’ವೂ.
ತಾಯಿ ಲೋಕೇಶ್ ಅವರ ಫೇಸ್ ಬುಕ್ ಪುಟಕ್ಕೆ ಕಾಲಿಟ್ಟರೆ ಸಾಕು ಕನ್ನಡ ರಂಗಭೂಮಿಯಲ್ಲಿ ಒಂದು ಸುತ್ತು ಹಾಕಿ ಬಂದಂತಾಗುತ್ತದೆ. ಕನ್ನಡ ರಂಗಭೂಮಿಯ ಶಿಶಿರ, ವಸಂತವೂ.., ಏಳು ಬೀಳುಗಳೂ, ಸಂಭ್ರಮ ಕಣ್ಣೀರು ಎಲ್ಲವೂ ಗೊತ್ತಿಲ್ಲದಂತೆ ಇವರ ಕ್ಯಾಮೆರಾದ ಪುಟ್ಟ ಗೂಡಿನೊಳಗೆ ಮನೆಮಾಡಿಕೊಂಡಿದೆ. ಮಂಡ್ಯದ ಈ ‘ಮಳವಳ್ಳಿ ಎಕ್ಸ್ ಪ್ರೆಸ್’ ರಂಗಕ್ಕೆ ಮನಸೋತದ್ದು ಇನ್ನೂ ಬದುಕಿಗೆ ಸರಿಯಾಗಿ ಕಣ್ಣು ಬಿಡುವ ಮೊದಲೇ. ಹೈಸ್ಕೂಲ್ ಶಿಕ್ಷಣಕ್ಕಾಗಿ ವಿದ್ಯಾವರ್ಧಕ ಸಂಘ ಶಾಲೆ ಸೇರಿದಾಗ ಅಲ್ಲಿನ ಕೈಲಾಸಂ ನಾಟಕಗಳಲ್ಲಿನ ಅಭಿನಯ ಇವರನ್ನು ರಂಗ ಯಾತ್ರೆಗೆ ಸಜ್ಜು ಮಾಡಿಬಿಟ್ಟಿತ್ತು. ಅದೇ ಸೆಳೆತದಿಂದಾಗಿ ಇವರು ಕಾಲೇಜು ಶಿಕ್ಷಣಕ್ಕೆ ಬಾಗಿಲು ಬಡಿದದ್ದು ಎಂ ಇ ಎಸ್ ಕಿಶೋರ ಕೇಂದ್ರವನ್ನು. ನಾಟಕದಲ್ಲಿ ಡಿಪ್ಲೊಮೊ ಪಡೆದಾಗಲೂ ಸಹಾ ಇವರಿಗೆ ತಾನು ರಂಗದ ಹೊರಗೆ ನಿಂತು ರಂಗಭೂಮಿಯನ್ನು ಸೆರೆ ಹಿಡಿಯುತ್ತೇನೆ ಎಂದು ಗೊತ್ತಿರಲಿಲ್ಲ. ಆದರೆ ಯಾವಾಗ ಮಾಧ್ಯಮ ಅಕಾಡೆಮಿಯ ಫೋಟೋ ಜರ್ನಲಿಸಂ ಕಮ್ಮಟಕ್ಕೆ ಸೇರಿದರೋ ಇವರ ರಂಗಭೂಮಿ ಆಸಕ್ತಿ ಕ್ಯಾಮೆರಾದ ಜೊತೆ ಕೈ ಕುಲುಕಿತು. ಅಲ್ಲಿಂದ ತಾಯಿ ಲೋಕೇಶ್ ಹಿಂದಿರುಗಿ ನೋಡಿಲ್ಲ.
ಇವರ ಹೆಸರಿನ ಜೊತೆಗೆ ‘ತಾಯಿ’ ಸೇರಿಕೊಂಡ ಬಗೆಯೂ ಕುತೂಹಲಕರ. ನಾನು ಅಪ್ಪನನ್ನು ಕಳೆದುಕೊಂಡಾಗ ನನಗೆ ಕೇವಲ ಮೂರು ವರ್ಷ. ನನ್ನ ತಾಯಿ ನಾವು ಮೂವರು ಮಕ್ಕಳನ್ನು ಬೆಳೆಸಿದ ಬಗೆ ಕಣ್ಣಿಗೆ ಕಟ್ಟಿದಂತಿದೆ. ಒಂದು ಕನಸನ್ನು ಸಾಕಾರ ಮಾಡಲು ಗೊತ್ತಿರುವುದು ತಾಯಿಗೆ ಮಾತ್ರ. ಹಾಗಾಗಿ ನನಗೂ ನನ್ನ ಕನಸನ್ನು ಸಾಕಾರಮಾಡಿಕೊಳ್ಳಲು ತಾಯಿಯೇ ಸ್ಪೂರ್ತಿ. ಆದ್ದರಿಂದ ನನ್ನ ತಾಯಿಯನ್ನು ಸದಾ ಸ್ಮರಿಸಲು ನನ್ನ ಹೆಸರಿಗೆ ಅದನ್ನು ಸೇರಿಸಿಕೊಂಡೆ ಎನ್ನುತ್ತಾರೆ. 2006 ರಿಂದಲೇ ಗುಬ್ಬಚ್ಚಿಯಂತಾ ಕ್ಯಾಮೆರಾದಲ್ಲಿ ರಂಗ ನಾಟಕಗಳನ್ನು ಕ್ಲಿಕ್ಕಿಸುತ್ತಿದ್ದ ಲೋಕೇಶ್ ತಮಗೆ ದೊರೆತ ಪುಟ್ಟ ಸಂಭಾವನೆಯಲ್ಲಿ ಕ್ಯಾಮೆರಾ ಕೊಳ್ಳಲು ಹೋದಾಗ ಕಾದದ್ದು ನಿರಾಸೆ. ಬೇಕಾದಷ್ಟು ಹಣ ಇಲ್ಲದಾಗ ಮತ್ತೆ ತಾಯಿ ತನ್ನ ಉಡಿಯಲ್ಲಿ ಕಟ್ಟಿಕೊಂಡಿದ್ದ ಉಳಿಕೆಯ ಹಣವನ್ನು ಮೊಗೆದುಕೊಟ್ಟರು. ಆ ತಾಯಿ, ಆ ಕ್ಯಾಮೆರಾ ಇಂದಿಗೂ ನನ್ನನು ಕೈ ಹಿಡಿದು ನಡೆಸುತ್ತಾ ಬಂದಿವೆ ಎನ್ನುತ್ತಾರೆ.

‘ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿನ್ನೂ ಕೇಳುತಿದೆ..’ ಎನ್ನುವಂತೆ ತಾಯಿ ಲೋಕೇಶ್ ಅವರನ್ನು ಇತರ ರಂಗ ಛಾಯಾಗ್ರಾಹಕರಿಂದ ಭಿನ್ನವಾಗಿಸಿದ್ದು ಅವರು ನಾಟಕದೊಳಗೆ ಕಾಣಿಸದೆ ಹರಿಯುವ ಶಾಲ್ಮಲೆಯನ್ನು ಹಿಡಿದಿಡುವ ರೀತಿಯಿಂದ. ‘ನಾನು ನಟ, ಜೊತೆಗೆ ರಂಗಭೂಮಿಯ ಹಲವು ಕೆಲಸಗಳಲ್ಲಿ ಕೈಗೂಡಿಸಿದವನು. ಅದಕ್ಕೇ ಇರಬೇಕು ನಟರ ಒಳಗೆ ಅರಳಿ ನಿಲ್ಲುವ ಭಾವ ನನಗೆ ಗೊತ್ತಾಗಿ ಹೋಗುತ್ತದೆ ಅನಿಸುತ್ತದೆ. ಇದಲ್ಲದೆ ರಂಗಭೂಮಿ ನನಗೆ ಕೂತ ಕಡೆ ಕೂರುವುದನ್ನು ಕಲಿಸಿಲ್ಲ. ಬೇರೆಯವರಿಗೆ ಒಂದೇ ಕಡೆಯಿಂದ ಕಾಣಿಸುವ ನಾಟಕ ನನಗೆ ಹಲವು ಕೋನದಿಂದ ಕಾಣಿಸಿದೆ. ಈ ಎಲ್ಲವೂ ನನ್ನ ಕ್ಯಾಮೆರಾದೊಳಗೆ ದಾಖಲಾಗಿದೆ’ ಎನ್ನುತ್ತಾರೆ.
ತಾಯಿ ಲೋಕೇಶ್ ಫೋಟೋಗಾಗಿ ನಾಟಕವನ್ನು ಹಿಡಿದು ನಿಲ್ಲಿಸುವುದಿಲ್ಲ, ಬದಲಿಗೆ ನಾಟಕಕ್ಕೆ ಬೇಕಾದಂತೆ ತಮ್ಮ ಕ್ಯಾಮೆರಾ ಕಣ್ಣನ್ನು ಪಳಗಿಸುತ್ತಾರೆ. ಇದೇ ಬಹುಷಃ ಇವರ ಯಶಸ್ಸಿನ ಗುಟ್ಟು. ನಿನ್ನೊಡನಿದ್ದೂ ನಿನ್ನಂತಾಗದೆ ಎನ್ನುವ ಜಾಯಮಾನ ಲೋಕೇಶ್ ಅವರದ್ದಲ್ಲ. ನನ್ನ ಛಾಯಾಚಿತ್ರಗಳು ಎಲ್ಲಾ ನಾಟಕಗಳಿಗೆ ಋಣಿಯಾಗಿದೆ. ಅಂತಹ ಪ್ರಸಾಧನ, ವೇಷ ಭೂಷಣ, ಅಂತಹ ರಂಗಸಜ್ಜಿಕೆ, ಅಂತಹ ಬೆಳಕಿನ ವಿನ್ಯಾಸ ಇಲ್ಲದಿದ್ದರೆ ನನ್ನ ಛಾಯಾಗ್ರಹಣವೂ ಸೊರಗಿ ನಿಲ್ಲುತ್ತಿತ್ತು ಎಂದು ಭಾವುಕರಾಗುತ್ತಾರೆ. ಸಿ ಬಸವಲಿಂಗಯ್ಯ, ಶಶಿಧರ ಅಡಪ ತಮ್ಮ ಯಾನದಲ್ಲಿ ಒದಗಿ ಬಂದ ರೀತಿಯನ್ನು ಸ್ಮರಿಸುತ್ತಾರೆ.
ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಓದುತ್ತಿದ್ದಾಗ ಬೆಳಗಿನ ವೇಳೆ ಕೊರಿಯರ್ ದಾಟಿಸುವ ಕೆಲಸವನ್ನು ಲೋಕೇಶ್ ಮಾಡುತ್ತಿದ್ದರು. ಕನ್ನಡ ಚಿತ್ರರಂಗದ ಘಟಾನುಘಟಿಗಳಿಗೆ ಕೊರಿಯರ್ ಕೈಗಿಡುತ್ತಲೇ ಇವರೊಳಗೂ ಒಂದು ಬೆಳ್ಳಿ ಬೆಳಕಿನ ಕನಸು ಬಿದ್ದಿತು. ಬೇಕೆಂದದ್ದನ್ನು ಕೈಗೆಟುಕಿಸಿಕೊಳ್ಳದೆ ಬಿಡುವುದು ಗೊತ್ತಿಲ್ಲದ ಲೋಕೇಶ್ ಈಗ ಗಾಂಧಿನಗರಕ್ಕೆ ಸಾಕಷ್ಟು ಗೊತ್ತಿರುವ ಸಹಾಯಕ ನಿರ್ದೇಶಕ ಕೂಡಾ. ‘ರಾಜಧಾನಿ’ ಸಿನೆಮಾದಿಂದ ಆರಂಭವಾದ ಇವರ ಸಿನೆಮಾ ಪಯಣ ಇವರೊಳಗೆ ಇನ್ನೂ ಕನಸಿನ ರಂಗವಲ್ಲಿ ಇಡುತ್ತಲೇ ಇದೆ. ಒಂದು ಬಗಲಲ್ಲಿ ರಂಗಭೂಮಿಯನ್ನೂ, ಇನ್ನೊಂದು ಬಗಲಲ್ಲಿ ಸಿನಿಮಾವನ್ನೂ ಲೋಕೇಶ್ ಸಂಬಾಳಿಸುತ್ತಿದ್ದಾರೆ.
‘ರಂಗನಿರಂತರ’ ತಂಡ ಹಮ್ಮಿಕೊಂಡಿರುವ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ದಲ್ಲಿ ಇದೇ ಮೊದಲ ಬಾರಿಗೆ ತಾಯಿ ಲೋಕೇಶ್ ಅವರು ಸೆರೆ ಹಿಡಿದ ನಾಟಕಗಳ ಛಾಯಾಚಿತ್ರ ಪ್ರದರ್ಶನವಿದೆ. 2005ರಲ್ಲಿ ನಾನು ಸಂಸ ರಂಗಮಂದಿರದಲ್ಲಿ ‘ಬೆಲ್ಚಿ’ ನಾಟಕದಲ್ಲಿ ಅಭಿನಯಿಸಿದಾಗ ನನ್ನೆದುರು ಸಿಜಿಕೆ ಸರ್ ಇದ್ದರು. ಅವರ ಕನಸಿನ ಕೂಸಾದ ‘ಬೆಲ್ಚಿ’ ನಮ್ಮ ಮೂಲಕ ಬಿಚ್ಚಿಕೊಳ್ಳುತ್ತಿತ್ತು. ಅನಂತಹ ನಿರ್ದೇಶಕರ ಉತ್ಸವದಲ್ಲಿ ನನ್ನ ಛಾಯಾಚಿತ್ರ ಪ್ರದರ್ಶನ ಇರುವುದು ಒಂದು ವಿಸ್ಮಯ ಎನ್ನುತ್ತಾ ತಾಯಿ ಲೋಕೇಶ್ ಭಾವುಕರಾಗುತ್ತಾರೆ.














'ತಾಯಿ' ಲೋಕೇಶ್ ಎಂಬ ರಂಗ ಕ್ಯಾಮೆರಾ ಕಣ್ಣು





ಬರಹ, ಚಿತ್ರಗಳು ಸೂಪರ್.
ನಿಜಕ್ಕೂ ನಾಟಕದ ಚಿತ್ರಗಳು ರಂಗವಿದ್ಯಾರ್ಥಿಗಳಿಗೆ ಒಂದು learning tool ಇದ್ದಂತೆ. ಅವು ಏನನೆಲ್ಲ ಕಲಿಸಬಲ್ಲವು.ಲೋಕೇಶ್ ರ ಚಿತ್ರಗಳನ್ನ ಹಾಗೆ ನೋಡಬೇಕಿದೆ.