ತಾಯಿಯ ಕಣ್ಣು
ಮರಾಠಿ ಲೇಖಕರು: ಪ್ರವೀಣ್ ದವಣೆ
ಕನ್ನಡಕ್ಕೆ ಅನುವಾದ: ಅಕ್ಷತಾ ದೇಶಪಾಂಡೆ
ಹತ್ತನೆಯ ತರಗತಿಯಲ್ಲಿ ರ್ಯಾಂಕ್ ಪಡೆದ ಸಲೀಲ್ನನ್ನು ಅಭಿನಂದಿಸಲು ಕೈಯಲ್ಲೊಂದು ಹೂವಿನ ಗುಚ್ಛ ಹಿಡಿದು ಆತನ ಮನೆ ಹುಡುಕುತ್ತ ನಡೆದೆ. ಅಕ್ಕಪಕ್ಕದ ಕೊಳಚೆ -ಪ್ರದೇಶ ನೋಡಿ ಸಲೀಲ್ ಇಂತಹ ಗುಡಿಸಲುಗಳೊಂದರಲ್ಲಿ ವಾಸಿಸುತ್ತಾನೆ ಅನ್ನುವುದನ್ನು ಊಹಿಸಲೂ ಆಗುತ್ತಿರಲಿಲ್ಲ. ಆತನ ಬಟ್ಟೆ ಬರೆ, ವರ್ತನೆ, ವ್ಯಕ್ತಿತ್ವ ನೋಡಿದರೆ ಹಾಗೆನಿಸುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಗೆ ಕಟ್ಟಿದ್ದ ನನ್ನ ಕಲ್ಪನೆ ತಲೆಕೆಳಗಾಗಿತ್ತು. ಸುಮಾರು ಚರಂಡಿಗಳನ್ನು ದಾಟಿ ಎಡತಾಕುತ್ತ ಒಂದು ಅರೆ ಬಿದ್ದ ಗುಡಿಸಿಲೆದುರು ನಿಂತೆ.
`ಅವನು ಇಲ್ಲೇ ಇರುತ್ತಾನೆ’ ಯಾರೋ ಹೇಳಿದರು. ಕತ್ತಲ ಗರ್ಭದಿಂದ ಬೆಳಕು ಹಾದು ಬಂದಂತೆ ಸಲೀಲ್ ನನ್ನ ಸ್ವರ ಕೇಳಿ ಹೊರ ಬಂದ.
`ಸರ್, ನೀವಿಲ್ಲಿ?’ ಆತನ ಸ್ವರದಲ್ಲಿ ಅಶ್ಚರ್ಯವಿತ್ತು.
`ಅಭಿನಂದನೆಗಳು’ ಅನ್ನುತ್ತ ಜೊತೆಯಲ್ಲಿ ತಂದಿದ್ದ ಹೂಗುಚ್ಛವನ್ನು ಆತನ ಕೈಗಿತ್ತೆ. ಹಾಗೆ ನೋಡಿದರೆ ಅಭಿನಂದನೆ ಹೇಳಲು ನನಗಾಗಲೇ ನಾಲ್ಕೈದು ದಿನ ತಡವಾಗಿತ್ತು. ಅಭಿನಂದಿಸುವವರ ಒಂದು ಸರದಿ ಈಗಾಗಲೇ ಮುಗಿದು ರೋಟಿನ್ ಆರಂಭವಾಗಿತ್ತು.
ರ್ಯಾಂಕ್ ಬಂದಿರುವ ಹುಡುಗನ ಮನೆ ಹೀಗೆ? ಗುಡಿಸಿಲಿನ ಪಕ್ಕದಿಂದ ಹಾದು ಹೋಗುವ ರೈಲು ಹಳಿಗಳು, ಯಾವತ್ತೂ ಬರುವ ಹೋಗುವ ರೈಲುಗಳ ಕಿವಿಗಡಚಿಕ್ಕುವ ಶಬ್ದ ಹಾಗೂ ಸತತವಾಗಿ ಬಾಯ್ತೆರೆದು ಕಿರುಚುವ ಲೌಡ್ ಸ್ಪೀಕರುಗಳ ನಡುವೆ ಈತ ಅದು ಹೇಗೆ ಓದುತ್ತಾನೋ? ಆತನನ್ನು ಮತ್ತೆ ಮತ್ತೆ ಅಭಿನಂದಿಸುವಾಗ ನನ್ನ ಮನಸ್ಸು ಗುಡಿಸಿಲಿನೊಳಗಿನ ಕತ್ತಲನ್ನು ಭೇದಿಸುತ್ತ ಪ್ರಶ್ನೆಗಳ ಸುಳಿಯಲ್ಲಿ ಸಿಲುಕುತ್ತಿತ್ತು.
ನಾನಾತನ ಮನೆಗೆ ಹೋಗಿದ್ದು ಆತನಿಗೆ ಖುಷಿ ಕೊಟ್ಟಿತ್ತು. ಹಾಗೆಂದು ಆತ ಮತ್ತೆ ಮತ್ತೆ ಹೇಳಿದ ಕೂಡ. ನನಗೋಸ್ಕರ ಚಹಾ ಮಾಡಲು ಆತ ಒಳಗೆ ಹೋದಾಗ ನಾನು ನಯವಾಗಿಯೇ ನಿರಾಕರಿಸಿದ್ದೆ. ಆದರಾತ ಅದನ್ನು ಕಡೆಗಾಣಿಸುತ್ತ,
`ಚಿಂತಿಸಬೇಡಿ ಸರ್, ನಾನು ತುಂಬ ಒಳ್ಳೆಯ ಚಹಾ ತಯಾರಿಸುತ್ತೇನೆ, ಕೋಳಸೆವಾಡಿಯಲ್ಲಿ ನಾನೊಂದು ಚಹಾದ ಕ್ಯಾಂಟೀನ್ ನಡೆಸುತ್ತೇನೆ’ ಅಂದ.
ಚಹಾದ ಹಬೆಯಿಂದ ವಾತಾವರಣವೂ ಉಲ್ಹಸಿತವಾಯಿತು.
ಮನೆಯಲ್ಲಿ ಆತನೊಡನೆ ಟೈಪಿಂಗ್ ಕಲಿಯುತ್ತಿದ್ದ ಆತನ ಅಕ್ಕ ಹಾಗೂ ಕಿರಾಣಿ ಅಂಗಡಿಯಲ್ಲಿ ಕೂಲಿ ಮಾಡುತ್ತಿದ್ದ ಅವರಪ್ಪ ಇರುತ್ತಿದರು.
`ನಿನ್ನ ತಾಯಿ?’ ಕೇಳಿದೆ.
`ತಾಯಿ ಇಲ್ಲ ಸರ್’.
ಆತನ ಮಾತಿನಿಂದ ಸ್ಥಬ್ದವಾದ ವಾತಾವರಣವನ್ನು ತಿಳಿಗೊಳಿಸುವುದು ಹೇಗೆ? ಅನ್ನುವ ಯೋಚನೆಯಲ್ಲೇ ಕೆಲ ಸಮಯ ಕಳೆದೆ. ಆತ ನಿಜವಾಗಿಯೂ ಉತ್ತಮವಾದ ಚಹಾ ತಯಾರಿಸಿದ್ದ.
ಸಲೀಲ್ ಹಾಗೂ ನನ್ನ ಪರಿಚಯ ಆತ ಹತ್ತನೆ ತರಗತಿಯ ಮಾರ್ಗದರ್ಶನ ಶಿಬಿರಕ್ಕೆ ಬರುತ್ತಿದ್ದಾಗಿನಿಂದಲದ್ದು. ಆಗ ಆತ ಪ್ರತಿದಿನ ಭೇಟಿಯಾಗಿ ಉತ್ತರ ಪತ್ರಿಕೆಗಳನ್ನು ಮತ್ತೆ ಮತ್ತೆ ನನ್ನಿಂದ ಪರಿಶೀಲಿಸಿಕೊಳ್ಳುತ್ತಿದ್ದ. ಆಗ ಆತನನ್ನು ನೋಡಿ ಆತನ ಪರಿಸ್ಥಿತಿಯ ಬಗ್ಗೆ ನನಗೆ ಯಾವುದೇ ಅಂದಾಜಿರಲಿಲ್ಲ. ಹಾಗೆಂದು ನಾನಾತನಿಗೆ ಹೇಳಿದಾಗ ಆತ ಭಾವುಕನಾಗಿ,
`ಸರ್, ಮನುಷ್ಯನ ಪರಿಸ್ಥಿತಿ ಕಣ್ಣಿಗೆ ಕಾಣಲೇ ಬೇಕೆ? ನಮ್ಮ ಕಷ್ಟ, ಬದುಕನ್ನು ನೋಡಿ ಎಲ್ಲರಿಂದ ಅಯ್ಯೋ ಅನಿಸಿಕೊಳ್ಳುವುದರಲ್ಲೇನರ್ಥವಿದೆ? ಇವತ್ತು ನನಗೆ ಅನೇಕ ಪಾರಿತೋಷಕಗಳು ಸಿಗಲಿವೆಯಾದರೂ ನನ್ನ ಮುಂದಿನ ಓದಿಗೆ ಅವು ಸಹಾಯವಾಗಲಾರವು. ಅದಕ್ಕಾಗಿ ನಾನೇ ಕಷ್ಟ ಪಡಬೇಕಿದೆ. ಟೆಲಿವಿಜನ್ನವರು ಬಂದು ಹೋದರು, ಯಾವುದೋ ಒಂದು ಕ್ಲಬ್ನ ಅಧ್ಯಕ್ಷರಂತೂ ಅವರ ಕಾರು ಒಳಗೆ ಬರುವುದಿಲ್ಲವೆಂದರಿತು ಒಳಗೆ ಬರದೆ ಹಾಗೆ ಹೊರಟು ಹೋದರು. ಸರ್, ಪರಿಸ್ಥಿತಿ ಮನುಷ್ಯನನ್ನು ಇರುವುದಕ್ಕಿಂತ ದೊಡ್ಡವನನ್ನಾಗಿ ಮಾಡುತ್ತದೆ’ ಅಂದ.
ಸಲೀಲ್ನ ಹೊಳಪು ಕೇವಲ ರ್ಯಾಂಕಿಗಷ್ಟೇ ಸೀಮಿತವಾಗಿರಲಿಲ್ಲ, ಅದು ಅತನ ಪ್ರತಿಯೊಂದು ವಾಕ್ಯದಿಂದಲೂ, ಆತನ ಕಣ್ಣಿನಿಂದಲೂ ಹೊರಹೊಮ್ಮುತ್ತಿತ್ತು.
`ಎಲ್ಲಿ ಕಲಿತೆ ಇದನ್ನೆಲ್ಲ’ ತಡೆಯಲಾರದೆ ಕೇಳಿದೆ.
`ಅಕ್ಕಪಕ್ಕದ ಮಕ್ಕಳಿಂದ ಸರ್’ ಅಂದ.
ಅರ್ಥವಾಗದೆ ಅವನನ್ನು ಹಾಗೇ ನೋಡಿದೆ.
`ನಾನಿರುವ ಪರಿಸರದ ಮಕ್ಕಳು ಕೇವಲ ಸಮಯ ಕಳೆಯುತ್ತಾ ಓದಲಾಗದೆ ಫೇಲಾಗುತ್ತಾರೆ, ಇಲ್ಲಿ ರಾತ್ರಿಯೆಲ್ಲ ಜೂಜು ನಡೆಯುತ್ತದೆ. ದಹಿಹಂಡಿ, ಗಣಪತಿ, ಹೋಳಿ, ನವರಾತ್ರಿ ಇವು ಅವರ ಉತ್ಪನ್ನದ ಮಾರ್ಗಗಳು, ಕುಡಿಯುತ್ತಾರೆ, ಕುಡಿದು ಜಗಳವಾಡುತ್ತಾರೆ, ಅವರನ್ನು ನೋಡಿ ನಾನು ಅವರಂತಾಗಬಾರದು ಎಂದು ನಿರ್ಧರಿಸಿದೆ. ಇದನ್ನು ನಾನು ಏಳನೆಯ ತರಗತಿಯಲ್ಲಿದ್ದಾಗಲೇ ನಿರ್ಧರಿಸಿದ್ದೆ. ನಾನು ಏಳನೆಯ ತರಗತಿಯಲ್ಲಿದ್ದಾಗಲೇ ನನ್ನ ತಾಯಿ ತೀರಿಕೊಂಡರು, ಇಲ್ಲಿಯೇ ಸಿವಿಲ್ ಆಸ್ಪತ್ರೆಯಲ್ಲಿ. ನ್ಯುಮೋನಿಯಾದಿಂದ.
`ಇದೇ ಪರಿಸ್ಥಿತಿ ಇರೋದಿಲ್ಲಪ್ಪ, ಎಲ್ಲ ಬದಲಾಗುತ್ತೆ, ನಾನು ಧೈರ್ಯ ತುಂಬುವ ರೀತಿಯಲ್ಲೆಂದೆ.
`ಬದಲಾಗುತ್ತಿದೆ ಸರ್, ಬಡತನದ ಬಗ್ಗೆ ಯೋಚಿಸುವುದಕ್ಕೆ ಸಮಯ ಯಾರಲ್ಲಿದೆ? ಅಂದ.
ಹಾಗೆ ನೋಡಿದರೆ ನನ್ನ ಕಣ್ಣು ತುಂಬಿ ಬರುವುದು ಬಹಳ ವಿರಳ, ಹೃದಯದಲ್ಲಿ ಅವಿತಿಟ್ಟ ಕಣ್ಣೀರು ಕಣ್ಣರೆಪ್ಪೆ ದಾಟುವುದು ಬಹಳ ಕಡಿಮೆ.
ನನ್ನ ಹಾಗೂ ಇನ್ನಿತರ ಅನೇಕ ಕಾಲೇಜುಗಳ ಅಕ್ಕಪಕ್ಕ ಹರಟೆ ಹೊಡೆಯುತ್ತ ಕಾಲ ಕಳೆಯುವ ಸಾಕಷ್ಟು ಮಕ್ಕಳು ನೆನಪಾದರು. ಕಾಡು ಘೇಂಡಾಮೃಗಗಳಂತೆ ಬೈಕುಗಳನ್ನು ಓಡಿಸುವ, ಡೋನೇಶನ್ ಹಾಗೂ ಫೇಲ್ ಗಳನ್ನು ಕಟ್ಟಿಯೂ ಕೂಡ ತರಗತಿಗಳಲ್ಲಿ ಕುಳಿತುಕೊಳ್ಳುವುದು ಪಾಪ ಎಂದು ತಿಳಿದುಕೊಳ್ಳುವ ಅನೇಕ ಹುಡುಗರು! ಸಲೀಲ್ ಕೂಡ ಅದೇ ವಯಸ್ಸಿನವನು! ಸಲೀಲ್ನಂತಹ ಅನೇಕ ಮುಖಗಳು ಕೂಡ ನನ ಮನಃಪಟಲದ ಮೇಲೆ ಹಾದು ಹೋದವು.
`ಸಲೀಲ್, ಒಮ್ಮೆ ನನ್ನ ತರಗತಿಗೆ ಬಾ, ಮಕ್ಕಳೆಡನೆ ಸಂವಾದ ನಡೆಸಲು’ ಅಂದೆ.
`ಸರ್, ನನ್ನನ್ನು ಅಷ್ಟು ದೊಡ್ಡವನ್ನಾಗಿ ಮಾಡಬೇಡಿ, ನನ್ನಂತೆ ಕಷ್ಟಪಟ್ಟು ಕಲಿಯುವ ಅನೇಕ ಮಕ್ಕಳಿದ್ದಾರೆ, ಮನಸ್ಸೆಂಬ ವಾಚ್ಮನ್ ಎಚ್ಚರದಿಂದಿದ್ದರೆ ಯಾರೂ ಎನೂ ಹೇಳಿಕೊಡಬೇಕಾಗುವುದಿಲ್ಲ. ನಾವು ಯಾವ ಪರಿಸ್ಥಿಯಲ್ಲಿ ಬದುಕುತ್ತಿದ್ದೇವೆ, ನಮ್ಮ ಹೆತ್ತವರು ಎಷ್ಟು ಕಷ್ಟಪಟ್ಟು ನಮ್ಮನ್ನು ಸಾಕುತ್ತಿದ್ದಾರೆ, ಕಲಿಸುತ್ತಿದ್ದಾರೆ, ಅನ್ನುವ ಅರಿವಿದ್ದರೆ ಶಾಲೆಯಲ್ಲಿ ಕಲಿಸಿದ್ದಷ್ಟೇ ಸಾಕು ಒಳ್ಳೆಯ ಮಾಕ್ರ್ಸಗಳನ್ನು ಪಡೆಯಲು. ಕೋಚಿಂಗ್ ಕ್ಲಾಸೆಸಗಳೆಲ್ಲ ನಿದ್ದೆ ಮಾಡುವ ಮಕ್ಕಳಿಗಾಗಿ ಅಂದ.
ರಿಕ್ಷಾ ಸ್ಟ್ಯಾಂಡಿನವರೆಗೂ ಸಲೀಲ್ ನನ್ನ ಜೊತೆಗೆ ಬಂದ. ಅಲ್ಲಿಯೂ ಸುಮಾರು ಹೊತ್ತು ಮಾತಾಡುತ್ತಿದ್ದ. ಮಾತನಾಡುತ್ತಲೇ ಆತ ಒಮ್ಮೆಲೆ, `ಸರ್, ಅಕ್ಕಪಕ್ಕದ ಮಕ್ಕಳನ್ನು ನೋಡುವಾಗ ನನಗೂ ಕೆಲವೊಮ್ಮೆ ಜೊಂಪು ಹತ್ತುತ್ತದೆ’ ಅಂದ.
`ಏನು ಮಾಡ್ತಿ ಅಂತಹ ಸಮಯದಲ್ಲಿ’. ಕುತೂಹಲದಿಂದ ಕೇಳಿದೆ.
`ನಾನು. . . . ನಾನು ಕೇವಲ ನನ್ನ ತಾಯಿಯ ಕಣ್ಣುಗಳನ್ನು ನೆನೆಸಿಕೊಳ್ಳುತ್ತೇನೆ’.
`ಆಂ?. . . .’
`ಸಾಕಷ್ಟು ಕಷ್ಟ ಪಡುತ್ತಿದ್ದಳಾಕೆ. . . . ಕಾಗದದ ಚೀಲಗಳನ್ನು ತಯಾರಿಸಿ ಮಾರುತ್ತಿದ್ದಳು. ನಾವೆಲ್ಲ ಗೋಂದು, ಕತ್ತರಿ ಹಿಡಿದು ಆಕೆಯ ಅಕ್ಕಪಕ್ಕ ಕೂತು ಆಕೆಗೆ ಸಹಾಯ ಮಾಡುತ್ತಿದ್ದೆವು. ತಂದೆ ಕೆಲಸ ಮಾಡುತ್ತಿದ್ದ ಗಿರಣಿ ಮುಚ್ಚಲ್ಪಟ್ಟ ಮೇಲೆ ವನವಾಸವೇ ನಮ್ಮ ಗತಿಯಾಗಿತ್ತು. ಕಡೆಕಡೆಗಂತೂ ಆಕೆ, `ನಾನಿನ್ನು ಬದುಕುವುದಿಲ್ಲ, ಆದರೆ ನನ್ನ ಕಣ್ಣುಗಳು ಯಾವತ್ತೂ ನಿನ್ನೆಡೆಗೇ ಇರುತ್ತವೆ ಮಗ, ನೀನು ಹೇಗೆ ಕಲಿಯುತ್ತಿ, ಹೇಗೆ ದೊಡ್ಡವನಾಗುತ್ತಿ? ಅನ್ನುವುದನ್ನು ನಾನು ನೋಡುತ್ತಿರುತ್ತೇನೆ’ ಅನ್ನುತ್ತಿದ್ದಳು. ಸರ್, ಆ ಕಣ್ಣುಗಳು ನೆನಪಾಗುತ್ತವೆ ಸರ್!.
`ರಿಕ್ಷಾದಲ್ಲಿ ಕುಳಿತಾಗಲೂ ಆತನ ಮಾತೇ ನೆನಪಾಗುತ್ತಿತ್ತು.
ಬೆಳಿಗ್ಗೆ ಬೇಗ ಏಳಿ, ನಿಮ್ಮ ಪಾಠಗಳನ್ನು ಓದಿಕೊಳ್ಳಿ ಎಂದು ದಿನಂಪ್ರತಿ ಯಾರಾದರೂ ಹೇಳುತ್ತಲೇ ಇರಬೇಕೆ? ಹೆತ್ತವರು ಹೊಟ್ಟೆಗೆ ಬಟ್ಟೆ ಕಟ್ಟಿ ನಮ್ಮನ್ನು ಕಲಿಸುತ್ತಿರುತ್ತಾರೆ ಅನ್ನುವ ಬಗ್ಗೆ ಅರಿವಿರುವವರು ಇಂತಹ ಒಬ್ಬಿಬ್ಬರಷ್ಟೆ.
ಮೊನ್ನೆ ಶಿಕ್ಷಿಕಿಯಾಗಿದ್ದ ತಾಯಿಯೊಬ್ಬಳು ಸ್ಟಾಫ್ ರೂಮಿಗೆ ವಿಷಣ್ಣವದನೆಯಾಗಿ ಬಂದಳು. `ನನ್ನ ಮಗ ಬೆಳಿಗ್ಗೆ ಏಳುವುದೇ ಇಲ್ಲ, ದಿನಾಲೂ ಬೆಳಿಗ್ಗೆ ಏಳರ ಲೆಕ್ಚರ್ ತಪ್ಪಿಸುತ್ತಾನೆ. ನನ್ನ ಮಾತನ್ನು ಕೇಳುವುದಿಲ್ಲ. ಈಗಂತೂ ಕಲಿಯುವುದೇ ಇಲ್ಲ ಅನ್ನುತ್ತಾನೆ’. ಅನ್ನುವಾಗ ಆಕೆ ಅಳುವುದೊಂದು ಬಾಕಿ.
ಸುಂದರವಾದ ಬದುಕೊಂದನ್ನು ರೂಪಿಸುವ ಯೌವ್ವನ ಮುಗಿದ ಮೇಲೆ ಎಷ್ಟೋ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳುತ್ತಾರೆ. ಆದರೆ ಮಿಂಚಿದ ಕಾಲಕ್ಕೆ ಚಿಂತಿಸಿ ಫಲವಿದೆಯೇ? ಬರಿಗೈಯಲ್ಲಿ ಒಂದು ನೀರವ ಮಧ್ಯಾನ್ಹ ಹಾಗೂ ನಿರಾಸೆ ಮೂಡಿಸುವ ಸಾಯಂಕಾಲ ಬಿಟ್ಟರೆ ಉಳಿಯುವುದು ಸೊನ್ನೆ!
ಬೆಳಿಗ್ಗೆ ಏಳುವುದಕ್ಕೆ ಒತ್ತಾಯ, ಕಾಲೇಜಿಗೆ ಹೋಗಲು ಒತ್ತಾಯ, ಪರೀಕ್ಷೆಗೆ ಒತ್ತಾಯ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒತ್ತಾಯ ಅದಕ್ಕೂ ಮುನ್ನ ತರಗತಿ ಅಟೆಂಡ್ ಮಾಡಲು ಒತ್ತಾಯ, ಒತ್ತಾಯದಿಂದ ಹೂವು ಅರಳುತ್ತದೆಯೆ? ವಿದ್ಯಾರ್ಥಿಗಳು ಮನಸ್ಸಿನಲ್ಲಿಯೇ ನಿರ್ಧಾರದ ಕುಡಿಯನ್ನು ಹೊತ್ತಿಸಬೇಕು.
ತಾಯಿಯ ತಂದೆಯ ಕಣ್ಣುಗಳನ್ನು ನೆನೆಸಲು ಅವರು ಸಾಯಲೇ ಬೇಕೆ?
`ನಾವು ತರಗತಿಯಲ್ಲಿ ಗೂಂಡಾಗಿರಿ ಮಾಡುವಾಗ, ಅನವಶ್ಯಕ ಸಮಯ ಹಾಳುಮಾಡುವಾಗ, ಪ್ರಿಲಿಮ್ಸ ಪರೀಕ್ಷೆಗಳಲ್ಲಿ ಸೊನ್ನೆ ಅಂಕಗಳನ್ನು ತರುವಾಗ ಚರ್ಚಗೇಟಿನಿಂದ ಲೋಕಲ್ನಲ್ಲಿ ನೇತಾಡಿಕೊಂಡು ಬರುವ ತಾಯಿ ನೆನಪಾಗುವುದಿಲ್ಲವೆ? ಮಕ್ಕಳಿಗಾಳಿ ಹಣ ಗಳಿಸಲು ಯಾವತ್ತೂ ಮದ್ರಾಸ್-ಹೈದ್ರಾಬಾದ-ಕಲಕತ್ತಾ ಅನ್ನುತ್ತ ಕಂಪನಿಯ ಕೆಲಸಕ್ಕಾಗಿ ಎಡತಾಕಿ ದಣಿಯುವ ತಂದೆ ನೆನಪಾಗುವುದಿಲ್ಲವೆ?
ಮನೆಯಲ್ಲಿ ನಾವು ಚಿಕ್ಕವರೇ ಇರಬಹುದು ಆದರೆ ಬುದ್ಧಿಯಲ್ಲಿ ಸ್ವಲ್ಪ ತಿಳುವಳಿಕೆಯುಳ್ಳವರಾದರೆ ಹೆತ್ತವರ ಬೆವರಿಗೆ ಬೆಲೆ. ಯಶಸ್ಸಿನ ರಾಯಿಸ್ಪ್ಲೇಟ್ ರೆಡಿಮೇಡ್ ಸಿಗುವುದಿಲ್ಲ ಅನ್ನುವುದು ಈಗಲೇ ಅರ್ಥವಾಗಬೇಕು. ಯಶಸ್ಸನ್ನು ಬೇಯಿಸುತ್ತ ಇಡಬೇಕಾಗುತ್ತದೆ. ಪರಿಸ್ಥಿತಿಯ ಕಾವು ಹಾಗೂ ಕೆಲವೊಮ್ಮೆಮಹತ್ವಕಾಂಕ್ಷೆಯ ಇಂಧನದಿಂದ ಬದುಕನ್ನು ಕುದಿಯುತ್ತ ಇಡಬೇಕಾಗುತ್ತದೆ ಅನ್ನುವುದ್ಯಾವಾಗ ಅರ್ಥವಾಗಬೇಕು?
ನಲವತ್ತನೆಯ ವರ್ಷಕ್ಕೆಯೆ?
ನನ್ನಲ್ಲೂ ಎಸ್ಸೆಸ್ಸೆಲ್ಸಿಯ ಫಾರ್ಮ್ ತುಂಬಲು ಹಣ ಇರಲಿಲ್ಲ ಅನ್ನುವುದನ್ನು ಸಲೀಲ್ನನ್ನು ನೋಡಿ ನೆನಪಾಯಿತು. ತಾಯಿಯ ಕೈಯಲ್ಲಿದ್ದ ಕಡೆಯ ಚಿನ್ನದ ಬಳೆಯನ್ನು ಅಡವಿಡಲು ( ಅದೂ ಮತ್ತೆ ಯಾವತ್ತೂ ಸಿಗಲಾರದು ಎಂದು ಗೊತ್ತಿದ್ದರೂ) ಹೊರಟಿದ್ದ ನನ್ನ ತಂದೆ ನೆನಪಾದರು.
ನನ್ನ ತಾಯಿ-`ಇದು ಕೊನೆಯ ಬಳೆ, ಮುಂದೇನು?’ ಅಂದಿದ್ದಳು.
ಮನೆಯಲ್ಲಿಯ ಆ ಕ್ಷಣಗಳು ಇನ್ನೂ ನೆನಪಗುತ್ತವೆ. ನೆಂಟರಿಷ್ಟರು ಮಾಡಿದ ಉಪೇಕ್ಷೆ ನೆನಪಾಗುತ್ತದೆ, ನಿಷ್ಕಾಂಚನ ತಾಯಿಯನ್ನು ಮುಂದೆ ಬರದಂತೆ ತಡೆದ ನೆಂಟರಿಷ್ಟರು ನೆನಪಾಗುತ್ತಾರೆ. ಯಾರದ್ದೋ ಮದುವೆಯಲ್ಲಿ ನಾನಾಕೆಗೆ, `ಇಗೋ, ಈ ನನ್ನ ಸರ ಹಾಕಿಕೋ, ಕೇವಲ ಕರಿಮಣಿ ಚನ್ನಾಗಿರೋಲ್ಲ’ ಅಂದಿದ್ದಕ್ಕೆ ಆಕೆ `ನಾನು ಹೀಗೆ ಬರುವುದರಿಂದ ನಿನಗೆ ನಾಚಿಕೆಯಾಗುತ್ತಿದ್ದರೆ ನಾನು ಬರುವುದಿಲ್ಲ, ಬಂದರೆ ಹೀಗೇ ಬರುತ್ತೇನೆ’ ಎಂದು ನಿರ್ಧಾರದಿಂದ ಹೇಳುವ ತಾಯಿ ನೆನಪಾಗುತ್ತಾಳೆ. ಒಂದಿನ ಆಕೆ ಯಾರೊಡನೆಯೋ ಮಾತಾಡುತ್ತ, `ನನ್ನ ಒಡವೆಗಳನ್ನು ನೋಡುವುದಿದ್ದರೆ ನನ್ನ ಮಗನನ್ನು ನೋಡಿ’ ಅಂದಿದ್ದಳು. ಅ ಒಂದು ವಾಕ್ಯದಿಂದ ಆಕೆ ನನ್ನ ಮೇಲೆ ಎಷ್ಟು ದೊಡ್ಡ ಜವಾಬ್ದಾರಿ ಹೊರಿಸಿದ್ದಳು ಅನ್ನುವುದು ನೆನಪಾಯಿತು.
ಇಂತಹ ಪ್ರಸಂಗಗಳು ಕಷ್ಟ ಪಟ್ಟು ಕಲಿಯುವ ಮಕ್ಕಳ ಜೀವನದಲ್ಲಿ ನಂದದೀಪವಾಗಿ ಬರುತ್ತವೆ. ದಾರಿದ್ರ್ಯತೆ ಮನುಷ್ಯನನ್ನು ಮುಗಿಸುವುದಿಲ್ಲ ಆದರೆ ಆಲಸ್ಯ, ಉದಾಸೀನತೆ, ಧ್ಯೇಯ ಶೂನ್ಯತೆ ಮನುಷ್ಯನನ್ನು ಮುಗಿಸಿಬಿಡುತ್ತವೆ. ಆಶಾ ಭೋಸಲೆಯವರು ಒಮ್ಮೆ ನನಗೆ ಕೊಟ್ಟ ಇಂಟರವ್ಯೂವ್ನಲ್ಲಿ ಹೇಳಿದ ಮಾತೊಂದು ನೆನಪಾಯಿಯು. `ಸುಖಿ ಮನುಷ್ಯ ಯಾವತ್ತೂ ಕಲಾವಂತನಾಗಲು ಸಾಧ್ಯವೇ ಇಲ್ಲ’ ಅಂದಿದ್ದರು. ಜಗತ್ತಿನಲ್ಲಿ ನಾವೆಲ್ಲೇ ಇದ್ದರೂ ನಮಗಾಗಿ ಅಪಾರ ಕಷ್ಟ ಪಡುವ, ಹಾಗೂ ನಂಬಿಕೆಯಿಂದ ಈ ಜಗತ್ತಿನಲ್ಲಿ ಹೆಸರು ಗಳಿಸಲು ನಮ್ಮನ್ನು ಕಳಿಸುವ, ನಮಗಾಗಿ ಕನಸು ಕಾಣುವ ಆ ತಾಯಿಯ ಕಣ್ಣು! ನಮ್ಮ ತಾಯಿಯ ಕಣ್ಣು! ನೆನಪಾದಾಗಲೇ ಸಾಕಷ್ಟು ಪ್ರೇರಣೆ ಕೊಡುವ ಬದುಕು ರೂಪುಗೊಳ್ಳುತ್ತದೆ.








ಬಡತನ ದೂರದಿಂದ ನೋಡುವವರಿಗೆ, ಸ್ವಂತಕ್ಕ ಅನುಭವಿಸಿಲ್ಲದವ್ರಿಗೆ ಈ ಕತಿ
ಅರ್ಥಾನೂ ಆಗಲಿಕ್ಕಿಲ್ಲ…!! ಆದ್ರ ಕಡಿಕಡಿಕ್ಕ ಯಾಕ ಉಪದೇಶದ ರೆಡಿಮೇಡ್ ದಾರಿ ಹಿಡೀತು…?
ನಿಮ್ಮ ಮಾತು ನಿಜ. ಆದರೆ ಸೂಕ್ಷ್ಮ ಮನಸ್ಸಿರುವವರಿಗೆ ಆ ಬೇಗೆ ತಕ್ಷಣ ಅರ್ಥವಾಗುತ್ತದೆ ಅಲ್ಲವೆ? ನಾನು ಮಾಡಿರುವುದು ಅನುವಾದವಾಗಿರೋದರಿಂದ ಕಥೆಯ ಕೊನೆಯನ್ನು ನಾನು ಬದಲಿಸಲಾರೆ ಉಮೇಶ್ ಅವರೆ.
kate eshtu parinaamakaariyaagideyo… ashte parinaamakariyaagide nimmaa anuvaada..
thank u Aparana 🙂
kathe tumba chennagide, chennagibarediddeera. makkalu kannubittu suthalina prapancha nodabeku. badatanada bavane anubhavisabeku. badatana andare avarige bekada vastu , pustaka eerithi agirabahudu. makkalige avashy kathe iddaste sigabeku, kodabeku. when they get things more, life becomes easy for them. to know the value of life children should there things.
ಧನ್ಯವಾದ ಉಮಾಶೇಖರ ಅವರೆ. ನಿಮ್ಮ ಸಲಹೆಯನ್ನು ನಾನು ಒಪ್ಪುತ್ತೇನೆ. ನನ್ನ ತಾಯಿಯೂ ನಮ್ಮನು ಹಾಗೇ ಬೆಳೆಸಿದರೂ ನಾನೂ ನನ್ನ ಮಗಳನ್ನು ಹಾಗೆಯೇ ಬೆಳೆಸುತ್ತಿದ್ದೆನೆ. ಅವಳು ವಸ್ತುವೊಂದನ್ನು ಬೇಡಿದಾಗ ಅವಳಿಗೆ ಆ ವಸ್ತುವಿನ ಅವಶ್ಯಕ್ತೆ ಇದೆಯೇ ಅನ್ನುವುದು ಯೋಚಿಸಿಯೇ ಕೊಡಿಸುತ್ತೆನೆ.
`ನನ್ನ ಒಡವೆಗಳನ್ನು ನೋಡುವುದಿದ್ದರೆ ನನ್ನ ಮಗನನ್ನು ನೋಡಿ’…. ತಾಯ್ತನಕ್ಕೆ ಎಂತಹ ಶಕ್ತಿಯುತವಾದ context! ಮನಮುಟ್ಟುವ ಲೇಖನ, ಅಕ್ಷತಾ.
Thanx Alahlya. 🙂
ಸುಖಿ ಮನುಷ್ಯ ಯಾವತ್ತೂ ಕಲಾವಂತನಾಗಲು ಸಾಧ್ಯವೇ ಇಲ್ಲ 100% nija 🙂