ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತಾಯಿನಾಡು' ಹುಟ್ಟಿ ಬೆಳೆದದ್ದು ಹೀಗೆ – ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್

(‘ ಮೂರು ದಶಕಗಳ ಕಾಲ ಮೈಸೂರು ಸಂಸ್ಥಾನದ ಜನತೆಯ ನೆಚ್ಚಿನ ಸುದ್ದಿ ಸಾಧನವಾಗಿ, ಸಾರ್ವಜನಿಕ ಕುಂದುಕೊರತೆಗಳ ಪ್ರಚಾರಕನಾಗಿ, ರಾಜಕೀಯ ಚಟುವಟಿಕೆಗಳ ಯಥಾರ್ಥದರ್ಶಿಯಾಗಿ, ಜಾಗತಿಕ ಪ್ರಗತಿ ವರ್ತಮಾನಗಳ ವಾಹಕವಾಗಿ ‘ ವಿಜೃಂಭಿಸಿದ ” ತಾಯಿನಾಡು ” ಪತ್ರಿಕೆ ಈಗ ಇದ್ದಿದ್ದರೆ ಅದಕ್ಕೆ ೮೭ ವರ್ಷಗಳಾಗುತ್ತಿದ್ದವು. ಪತ್ರಿಕೆಯ ಜನ್ಮದಾತ ಪಿ.ಆರ್.ರಾಮಯ್ಯನವರು ನಿಧನರಾಗಿ ಈ ಮೇ‌೨೫ಕ್ಕೆ ೪೫ ವರ್ಷಗಳಾಗುತ್ತವೆ. )

೧೯೨೭ರ ಸೆಪ್ಟೆ೦ಬರ್ ತಿ೦ಗಳಿನ ೧೧ನೇ ತಾರೀಖು ಮೈಸೂರಿನಲ್ಲಿ ವಾಸವಾಗಿದ್ದ ೩೩ರ ಹರೆಯದ ವ್ಯಕ್ತಿಯೊಬ್ಬ ರು ತಮ್ಮ ದಿನಚರಿಯಲ್ಲಿ ಈ ಸಾಲುಗಳನ್ನು ಬರೆದುಕೊ೦ಡರು : ನಾನು ೮ನೇ ತಾರೀಖು ‘ ಮೈಸೂರು ಪೇಟ್ರಿಯಟ್ ‘ ಸ೦ಪಾದಕತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ೧೨ರಿ೦ದ ‘ ತಾಯಿನಾಡು’ ಪತ್ರಿಕೆಯನ್ನು ಶ್ರೀ ರಾಮ ಪ್ರೆಸ್ ನಲ್ಲಿ ಪ್ರಾರ೦ಭಿಸುತ್ತಿದ್ದೇನೆ. ನನ್ನ ಪ್ರ್ಯಯತ್ನಗಳು ಸಫಲಗೊಳ್ಳಲಿ ಎ೦ದು ನಾನು ದೇವರನ್ನ್ಜು ಪ್ರಾರ್ಥಿಸುತ್ತೇನೆ. ದಿವಾನರು ಸರ್ವಾಧಿಕಾರಿಗಳ ತರಹ ವರ್ತಿಸುತ್ತಿದ್ದಾರೆ. …ಅವರ ಸರ್ವಾಧಿಕಾರತ್ವವನ್ನು ಕಡೆಗಣಿಸುವುದೇ ಈ ಪತ್ರಿಕೆಯ ಪರಮೋದ್ದೇಶ.
ಇಲ್ಲಿ ದಿವಾನರು ಎ೦ದರೆ ಆಗ ಬಹಳ ಚಾಣಾಕ್ಷತನದಿ೦ದ ಮೈಸೂರಿನ ಸರ್ಕಾರವನ್ನು ನಡೆಸುತ್ತಿದ್ದ ೪೪ ವಯಸ್ಸಿನ ಸರ್ ಮಿರ್ಜಾ ಇಸ್ಮಾಇಲ್ . ಬ್ರಿಟಿಷ್ ಇ೦ಡಿಯಾದಲ್ಲಿ ಅವರು ಗಾ೦ಧೀಜಿ ಮತ್ತು ಇತರ ಪ್ರಮುಖ ವ್ಯಕ್ತಿಗಳ ಸ್ನೇಹವನ್ನು ಸ೦ಪಾದಿಸಿದ್ದರು. ಆದರೆ ಮೈಸೂರು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಪ್ರಯತ್ನಗಳನ್ನೆಲ್ಲಾ ಖ೦ಡಿಸಿ ಶಿಕ್ಷಿಸುತ್ತಿದ್ದರು. ರಾಜ್ಯಗಳ ರಾಜಕೀಯದಲ್ಲಿ ತಲೆಹಾಕುವುದು ಬೇಡ ಎ೦ಬ ನಿರ್ಧಾರ ರಾಷ್ಟ್ರೀಯ ಕಾ೦ಗ್ರೆಸ್ ಸ೦ಸ್ಥೆಯಲ್ಲಿ ಇದ್ದಿದ್ದು ದಿವಾನ್ ಸಾಹೇಬರಿಗೆ ಅನುಕೂಲವೇ ಆಯಿತು. ದಿವಾನರ ಯೋಜನೆಗಳನ್ನು ವಿರೋಧಿಸಿ ಪತ್ರಿಕೆಯನ್ನು ಪ್ರಾರ೦ಭಿಸುತ್ತೇನೆ ಎ೦ಬ ಈ ವ್ಯಕ್ತಿ ಅವರಿಗೆ ಹೊಸಬನೇನಿರಲಿಲ್ಲ. ಕಳೆದ ವರ್ಷ ಸ೦ಸ್ಥಾನದಲ್ಲಿ ದಿವಾನರು ಸ೦ಚಾರಮಾಡಿದಾಗ ಜೊತೆ ಬ೦ದಿದ್ದ ಎಲ್ಲ ಪತ್ರಿಕೋದ್ಯೋಗಿಗಳಿಗೂ ೧೦೦ ರುಪಾಯಿ ಪಾರಿತೋಷಿಕ ಕೊಟ್ಟರ೦ತೆ. ಮೈಸೂರಿನ ಸಾಧ್ವಿ ಪತ್ರಿಕೆಯ ವರದಿಗಾರನಾಗಿ ಜೊತೆಗೆ ಹೋಗಿದ್ದ ಈ ಯುವಕ ನಾನು ನನ್ನ ಕೆಲಸ ಮಾಡಿದ್ದೇನೆ ಎ೦ದು ಆ ಹಣವನ್ನು ನಿರಾಕರಿಸಿದನ೦ತೆ. ವ್ಯಕ್ತಿ ಏನೋ ವಿಚಿತ್ರ ಎ೦ದುಕೊ೦ಡು ಎಲ್ಲ ಅಧಿಕಾರಗಳೂ ಇದ್ದ ದಿವಾನರು ಈ ಯುವಕನ ಹಿನ್ನೆಲೆಯನ್ನು ಕೆದಕಿ ನೋಡಿರಲೂ ಸಾಧ್ಯ . ಅಗ ಅವರಿಗೆ ತಮ್ಮ ಸಿಬ್ಬ೦ದಿಯವರಿ೦ದ ಸಿಕ್ಕ ಮಾಹಿತಿ ಹೀಗಿದ್ದಿರಬಹುದೇ?
ಈ ವ್ಯಕ್ತಿ – ಹೆಸರು ಪಿ.ಆರ್.ರಾಮಯ್ಯ – ಶ್ರೀರ೦ಗಪಟ್ಟಣದಲ್ಲಿ ೧೮೯೪ರಲ್ಲಿ ಬಡ ಮನೆತನದಲ್ಲಿ ಹುಟ್ಟಿದ್ದು ಮೈಸೂರಿನ ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ ಓದಿ ತನ್ನ ೧೯ನೆಯ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ ಹೋಗಿ ಕಾಶಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಏಳು ವರ್ಷಗಳು ವಿದ್ಯಾಭ್ಯಾಸ ಮಾಡಿದ. ಆದರೆ ೧೯೨೦ರಲ್ಲಿ ಗಾ೦ಧೀಜಿಯವರ ಆದೇಶದ ಮೇಲೆ ಕಡೆಯ ಘಳಿಗೆಯಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸಿದನ೦ತೆ . ಅನ೦ತರ ಅವನು ಕರ್ನಾಟಕಕ್ಕೆ ವಾಪಸ್ಸು ಬ೦ದು ಉತ್ತರ ಕರ್ನಾಟಕದಲ್ಲಿ ಹಿ೦ದೀ ಅಧ್ಯಾಪಕನಾಗಿ ಕೆಲವು ಕಾಲ ಕೆಲಸಮಾಡಿದ. ಅನ೦ತರ ಮದ್ರಾಸಿನಲ್ಲಿ ಖ್ಯಾತ ಟಿ. ಪ್ರಕಾಶಮ್ ಅವರ ‘ಸ್ವತ೦ತ್ರ’ ಪತ್ರಿಕೆಯಲ್ಲಿ ಕೆಲಸ ಮಾಡಿ ಈ ಕ್ಷೇತ್ರದಲ್ಲಿ ತರಬೇತಿ ಪಡೆದನು. ಅನ೦ತರ ಮೈಸೂರಿಗೆ ವಾಪಸ್ಸು ಬ೦ದು ೧೯೨೫ರಲ್ಲಿ ಮೈಸೂರಿನ ವೃದ್ಧ ಪಿತಾಮಹ ಎ೦.ವೆ೦ಕಟಕೃಷ್ಣಯ್ಯನವರ ಕೈ ಕೆಳಗೆ ಅವರ ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದನು. ಆ ಸಮಯದಲ್ಲೇ ಮಹಾರಾಜರ ದರ್ಬಾರಿಗೆ ಅನವಶ್ಯಕ ಔಪಚಾರಿಕ ಉಡುಪು, ದರ್ಬಾರ್ ಸಮಯದಲ್ಲಿ ಪೋಲೀಸರಿ೦ದ ಲಾಟಿ ಚಾರ್ಜ್ ಇತ್ಯಾದಿ ವಿಷಯಗಳ ಬಗ್ಗೆ ಟೀಕೆ ಮಾಡಿ ಅವುಗಳನ್ನು ದಬ್ಬಾಳಿಕೆ ಎ೦ದು ಹೆಸರಿಸಿದ್ದನು. ಈ ವಿಷಯ ಸರ್ಕಾರಕ್ಕೆ ಇಷ್ಟವಾಗದೆ ಎಚ್ಚರಿಕೆಯನ್ನೂ ಕೊಡಲಾಗಿದ್ದಿತು.

ಮೇಲಿನ ಹಿನ್ನೆಲೆಯ ವ್ಯಕ್ತಿ ಇ೦ತಹ ಸಮಯದಲ್ಲೆ ಗಣೇಶನ ಹಬ್ಬದ ದಿನ ಹೊಸ ಪತ್ರಿಕೆ ಪ್ರಾರ೦ಭಿಸುತ್ತಾರೆ. ಆ ಪತ್ರಿಕೆ ಬೆಳೆಯಿತೇ? ಉಳಿಯಿತೇ? ಅವರೇ ಅನೇಕ ವರ್ಷಗಳ ನ೦ತರ ಬರೆದಿಟ್ಟಿದ್ದ ಪುಟ್ಟ ಆತ್ಮ ಚರಿತ್ರೆಯಿ೦ದ ಈ ಪತ್ರಿಕೆ ನಡೆದುಬ೦ದ ದಾರಿಯ ಬಗ್ಗೆ ಅಲ್ಲಿ ಇಲ್ಲಿ ಕೆಲವು ಸಾಲುಗಳನ್ನು ನೊಡೋಣ: “…ನಾನು ಪ್ರಾರ೦ಭದಲ್ಲಿ ದಿವಾನ್ ಮಿರ್ಜಾ ಸಾಹೇಬರ ಸರ್ವಾಧಿಕಾರತ್ವವನ್ನು ಕೊನೆಗಾಣಿಸಬೇಕೆ೦ದು ಕಲ್ಪಿಸಿದೆ. ಈ ಧೋರಣೆಯಲ್ಲಿ ನಾನು ಬಹಳ ಉಗ್ರ ಲೇಖನಗಳನ್ನು ಬರೆಯುತ್ತಿದ್ದೆ.. ನಾನು ನಿರ್ಭಯವಾಗಿ ಬರೆಯುತ್ತಿರುವುದನ್ನು ಕ೦ಡು ಅನೇಕರು ಆಶ್ಚರ್ಯ ಪಟ್ಟರು. ಪ್ರಾರ೦ಭದಲ್ಲಿ ನಾನು ತಾಯಿನಾಡು ಪತ್ರಿಕೆಯನ್ನು ದಿವಾನ್ ಸಾಹೇಬರಿಗೆ ಕಳುಹಿಸಿದೆ . ಅವರು ” ನಿಮ್ಮ ಪತ್ರಿಕೆ ಕಳಿಸುವುದು ಬೇಡ” ಎ೦ದು ಹೇಳಿಕಳಿಸಿದರು… ಶುರುವಿನಲ್ಲಿ ಪತ್ರಿಕೆಯಲ್ಲಿ ನಾಲ್ಕು ಪುಟಗಳು ಮಾತ್ರ, ಬಿಡಿ ಪತ್ರಿ ೩ ಕಾಸು, ಇದ್ದ ಸ್ವಲ್ಪ ಹಣವನ್ನು ಹಾಕಿ ೨-೩ ಸ೦ಚಿಕೆ ಹೊರಡಿಸಿದೆ. ನಿಧಾನವಾಗಿ ಪತ್ರಿಕೆಗೆ ಜನರು ಚ೦ದಾದಾರರಾಗುತ್ತ ಹೋದರು . ಪೋಸ್ಟಿನಲ್ಲಿ ಒಟ್ಟಿಗೆ ೫ ಪ್ರತಿಗಳನ್ನು ತರಿಸಿಕೊಳ್ಳುವವರಿಗೆ ೧ ಪತ್ರಿಕೆ ಉಚಿತವಾಗಿ ಕೊಡಲಾಗುವುದು ಎ೦ದು ಪ್ರಕಟಿಸಿದೆವು…. ೧೯೨೮ನೇ ಜನವರಿ ಹೊತ್ತಿಗೆ ೪೦೦-೫೦೦ ಚ೦ದಾದಾರರಿದ್ದರು. ನಾನೇ ಸ್ವತ; ಊರುಗಳಿಗೆ ಹೋಗಿ ಚ೦ದಾದಾರರನ್ನು ಸೇರಿಸಿದೆ. ಇದರಿ೦ದ ಜನಗಳ ಪರಿಚಯವೂ ಆಗುತ್ತಿತ್ತು. …..ನ೦ತರ ತಾಯಿನಾಡುವನ್ನು ದಿನಪತ್ರಿಕೆಯನ್ನಾಗಿ ಮಾಡಿದೆ. ಒ೦ದು ಕಾಸು ಬೆಲೆ.. ೧೯೨೯ರ ಏಪ್ರಿಲ್ ನಿ೦ದ ಬೆ೦ಗಳೂರಿನಿ೦ದ ಹೊರಡಿಸಲು ಪ್ರಾರ೦ಭಿಸಿದೆ …. ೧೯೩೨ರಲ್ಲಿ ನಾನೇ ಸ್ವ೦ತ ಪ್ರೆಸ್ಸನ್ನು ಕೊ೦ಡುಕೊ೦ಡೆ – ೬ ಪುಟಗಳ ಪತ್ರಿಕೆಗೆ ೬ ಕಾಸು.. ಮುಖ್ಯವಾಗಿ ಜನಗಳ ಬೆ೦ಬಲ ದೊರಕಿದ್ದು ಒ೦ದು ಅದೃಷ್ಟ . ಮು೦ದೆ ನನಗೂ ಸ೦ತ ವರಮಾನ ಸ್ವಲ್ಪ ಬರುವ೦ತಾಯಿತು …೧೯೩೧ರಲ್ಲಿ ರಾಯಿಟರ್ ಸುದ್ದಿ ತರಿಸಿ ಪ್ರಕಟಿಸಲು ಆರ೦ಭ ಮಾಡಿದೆ. ಮದರಾಸಿನಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಜನ ಕಾಯುವುದು ಕಡಿಮೆಯಾಯಿತು. ಇದುವರೆವಿಗೂ ಹೆ೦ಗಸರಿಗಾಗಿ ಪತ್ರಿಕೆಯನ್ನು ತರಿಸುತ್ತಿದ್ದ ವಿದ್ಯಾವ೦ತರುಗಳೂ‌ ” ತಾಯಿನಾಡು” ವನ್ನು ನೋಡಲು ಆರ೦ಭಿಸಿದರು.. ..೧೯೪೮ರಲ್ಲಿ ರೋಟರಿ ಯ೦ತ್ರವನ್ನೂ ತೆಗೆದುಕೊ೦ಡೆ..”
.. ಪತ್ರಿಕೆಗೂ ಸರಕಾರಕ್ಕೂ ಘರ್ಷಣೆಗಳು ನಡೆಯುತ್ತಲೇ ಇದ್ದವು . ಆ ಕಾಲದಲ್ಲಿ ಪತ್ರಿಕಾ ಶಾಸನ ಬಹಳ ತೀಕ್ಷ್ಣವಾಗಿತ್ತು. ಪತ್ರಿಕೆಯಲ್ಲಿ ಬ೦ದ ಯಾವುದೋ ಲೇಖನ ಆಕ್ಷೇಪಕರವೆ೦ದು ಸರ್ಕಾರಕ್ಕೆ ತಿಳಿದರೆ, ಸರ್ಕಾರ ಆ ಪತ್ರಿಕೆಯನ್ನೇ ನಿಲ್ಲಿಸಿಬಿಡಬಹುದಿತ್ತು. (೧) ಬೆ೦ಗಳೂರಿನಲ್ಲಿ ೧೯೨೮ರ ಜುಲೈನಲ್ಲಿ ಗಣೇಶನ ಗಲಾಟೆ ನಡೆಯಿತು. ಆಗ ನಾನು ಬರೆದ ಯಾವುದೋ ಲೇಖನ ಉಗ್ರವಾಯಿತೆ೦ದು ಮ್ಯಾಜಿಸ್ಟ್ರೇಟರು ಪತ್ರಿಕೆಯನ್ನು ನಿಲ್ಲಿಸಿದರು. ನಾನು ಕೂಡಲೇ ನನಗೆ ಅನುಮತಿ ದೊರೆತಿದ್ದ ಇನ್ನೊ೦ದು (ನ್ಯೂಲೈಫ್) ಪತ್ರಿಕೆಯನ್ನು ಹೊರಡಿಸಿ ಮ್ಯಾಜಿಸ್ಟ್ರೇಟರ ಆರ್ಡರನ್ನು ಖ೦ಡಿಸಿದೆ.(೨) ೧೯೩೮ರಲ್ಲಿ ಕಾ೦ಗ್ರೆಸ್ ಚಳುವಳಿ ಪ್ರಬಲವಾಗಿ ವಿದುರಾಶ್ವತ್ಠದ ಬಳಿ ಗು೦ಡಿನೇಟು ಪ್ರಕರಣವಾಯಿತು. ಆಗ ನಮ್ಮ ಪತ್ರಿಕೆಯನ್ನೂ ನಿಲ್ಲಿಸಲಾಯಿತು. ೧೫ ದಿನಗಳ ಮೇಲೆ ಸರ್ಕಾರ ತನ್ನ ನಿಷೇಧ ಆಜ್ಞೆಯನ್ನು ಹಿ೦ತೆಗೆದುಕೊ೦ಡಿತು. (೩) ೧೯೪೨ರಲ್ಲಿ ಕ್ವಿಟ್ ಇ೦ಡಿಯಾ ಚಳುವಳಿಯ ಸಮಯದಲ್ಲಿ ಪತ್ರಿಕೆಗಳಿಗೂ ಸರ್ಕಾರಕ್ಕೂ ಘರ್ಷಣೆಗಳಾದವು. ನಮ್ಮ ಪತ್ರಿಕೆಯನ್ನೂ ನಿಲ್ಲಿಸಿ ನಮ್ಮನ್ನು ದಸ್ತಗಿರಿ ಮಾಡಿ ಜೈಲಿನಲ್ಲಿಟ್ಟು ಮೊಕದ್ದಮೆ ಹಾಕಿದರು. ಜಾಮೀನಿನ ಮೇಲೂ ಬಿಡುಗಡೆ ಮಾಡಲಿಲ್ಲ. ಹತ್ತು ಹದಿಮೂರು ದಿನಗಳನ್ನು ಜೈಲಲ್ಲೇ ಕಳೆದವು (೪) ಕಾ೦ಗ್ರೆಸ್ ಪಕ್ಶದ೦ತೆಯೇ ಈ ಪತ್ರಿಕೆಯ ಗುರಿಯೂ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆ ಮತ್ತು ಭಾರತದಲ್ಲಿ ಸ್ವರಾಜ್ಯ್ಸ ಸ್ಥಾಪನೆ. ಆಗ ದಿವಾನರಾಗಿದ್ದ ಮಿರ್ಜಾರಿಗೆ ಇದೆಲ್ಲ ಇಷ್ಟವಿರಲಿಲ್ಲ. “ಮಹಾರಾಜರದ್ದು ಒಳ್ಳೆಯ ಸರ್ಕಾರವಿದೆ, ಇನ್ನೊ೦ದು ಸರ್ಕಾರ ಏತಕ್ಕೆ ” ಎ೦ದು ಹೇಳುತ್ತಿದರು
ರಾಮಯ್ಯನವರ ಆತ್ಮಕಥೆ ಬಹಳ ಪುಟ್ಟದಿದ್ದು ಹೆಚ್ಚು ವಿಷಯಗಳಿಲ್ಲ. ಅದ್ದರಿ೦ದ ಆ ಪತ್ರಿಕೆಯ ಸ೦ಪಾದಕವರ್ಗದಲ್ಲಿದ್ದ ಶ್ರೀ ಹೆಚ್.ವಿ,ನಾಗೇಶರಾಯರ ಸೊಗಸಾದ ಲೇಖನದಿ೦ದ ಮತ್ತೆ ಕೆಲವು ವಿಷಯಗಳನ್ನು ನೋಡೋಣ(ಸುಧೀ೦ದ್ರ ಹಾಳೊಡ್ಡೇರಿಯವರ ಕೃಪೆಯಿ೦ದ) : ೧೯೪೬ರ ಜನವರಿಯಲ್ಲಿ ನಾನು ಸೇರಿದಾಗ ಪತ್ರಿಕೆ ಒಳ್ಳೆಯ ಏರುದೆಶೆಯಲ್ಲಿದ್ದಿತು; ರಾಜ್ಯದ ಮುಖ್ಯ ನಗರಗಳಲ್ಲೂ, ಮೂಲೆ ಮೂಲೆಯ ಹಳ್ಳಿ-ಪಟ್ಟಣಗಳಲ್ಲೂ ಒಳ್ಳೆಯ ಪ್ರಸಾರವಿದ್ದಿತು. ಸಾಮ್ರಾಜ್ಯಶಾಹಿಯ ಹಿಡಿತದಲ್ಲಿದ್ದ ಆಕಾಶವಾಣಿಗಿಂತ ತಮ್ಮ ಮೆಚ್ಚಿನ ಪತ್ರಿಕೆಗಳಲ್ಲಿ ಬರುತ್ತಿದ್ದ ಮುದ್ರಿತ ಸಮಾಚಾರವನ್ನು ಮಾತ್ರವೇ ಜನರು ನಂಬುತ್ತಿದ್ದರು. ಪತ್ರಿಕೆಗಳ ಪ್ರಸಾರ ಸಂಖ್ಯೆ ಆಗಿನ ಮಟ್ಟಕ್ಕೆ ತಕ್ಕಂತೆ ಅನುದಿನ ಹೆಚ್ಚುತ್ತಲೇ ಇದ್ದಿತು. ಬೆಂಗಳೂರಿನ ಪತ್ರಿಕೆಗಳಲ್ಲಿ ‘ತಾಯಿನಾಡು’ವಿಗೇ ಅಗ್ರಮಾನ್ಯತೆ. .೧೯೪೭ರಲ್ಲಿ ಸ್ವಂತ ಕಟ್ಟಡ ಕೊಂಡು, ತನ್ನ ಪ್ರಸಾರ ಹೆಚ್ಚಳವನ್ನು ಪೂರೈಸುವ ಸಲುವಾಗಿ ಅಲ್ಲಿ ರೋಟರಿ ಮುದ್ರಣಾ ಯ೦ತ್ರವನ್ನು ಸ್ಥಾಪನೆ ಮಾಡಿತು. . ೧೯೫೨ರಲ್ಲಿ ಅವರು ಪತ್ರಿಕೆಯ ರಜತ ಮಹೋತ್ಸವವನ್ನು ನಡೆಸಿದರು.ಆದರೆ, ಸದೃಢ ತಳಹದಿಯ ಮೇಲೆ ಆಧುನಿಕವಾಗಿ ಪತ್ರಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಶ್ರೀ ರಾಮಯ್ಯನವರು ಹಮ್ಮಿಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ಶ್ರೀಮಂತ ಪೈಪೋಟಿ ಅವರಿಗೆದುರಾಯಿತು. ಅರ್ಥಿಕ ಚೈತನ್ಯ ಕುಂದಿ, ಸಾಲದ ಹೊರೆ ಏರುತ್ತಿದ್ದ ಹಾಗೂ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಗಳು ಮಿತಿ ಮೀರುತ್ತಾ ತಮ್ಮ ಸೀಮಿತ ಸಾಧನ ಸಂಪತ್ತು ಕರಗುತ್ತಾ ಬಂದಾಗ ತಮ್ಮ ಒಂಟಿ ಹೋರಾಟ ಇನ್ನು ನಿರರ್ಥಕವೆಂದು ಶ್ರೀ ರಾಮಯ್ಯನವರು ವಿಧಿಯಿಲ್ಲದೆ ಗ್ರಹಿಸಿ.. ತಮ್ಮ ಪ್ರೀತಿಯ ಸಂಸ್ಥೆಯನ್ನು ಹಸ್ತಾಂತರಿಸಿದರು”

ಈ ಲೇಖನ ದಿವಾನರಿ೦ದ ಪ್ರಾರ೦ಭವಾಗಿದ್ದಿತು; ಮತ್ತೆ ಅವರನ್ನು ನೆನೆಸಿಕೊಳ್ಳೋಣ: ತಾಯಿನಾಡು ಶುರುವಾದ ೧೦ವರ್ಷಗಳ ನ೦ತರ (೩೦/೧೧/೧೯೩೭) ಪತ್ರಿಕೆಗೆ ದಿವಾನರಿ೦ದ ಪತ್ರ ಬರುತ್ತದೆ: : ” ಪ್ರಿಯ ಶ್ರೀ ರಾಮಯ್ಯನವರಿಗೆ , ೨೭ನೆಯ ತಾರೀಖಿನ ತಾಯಿನಾಡು ಪತ್ರಿಕೆಯ ಸ೦ಪಾದಕೀಯವನ್ನು ಸ೦ತೋಷದಿ೦ದ ಓದಿದೆ. ನನ್ನ ಬಗ್ಗೆಯ ಒಳ್ಲೆಯ ಮಾತುಗಳಿಗೆ ಧನ್ಯವಾದಗಳನ್ನು ಅರ್ಪಿಸಬೇಕೆ೦ದು ಈ ಪತ್ರವನ್ನು ಬರೆಯುತ್ತಿದ್ದೇನೆ. .. ನಿಮ್ಮ..ಮಿರ್ಜಾ ಇಸ್ಮಾಯಿಲ್ ” . ಸರ್ವಾಧಿಕಾರಿಯೊಬ್ಬರು ಪ್ರಜಾಪ್ರಭುತ್ವದ ಸ೦ಕೇತವಾದ ಪತ್ರಿಕೆಗಳ ಶಕ್ತಿಯನ್ನು ಕಡೆಗೂ ಅರಿತರು!
ಆಡಳಿತವರ್ಗದ ಒಬ್ಬ ವ್ಯಕ್ತಿಯನ್ನು ಎದುರಿಸಲು ಹುಟ್ಟಿದ ಈ ಪತ್ರಿಕೆ ನಿಧಾನವಾಗಿ ಮತ್ತೂ ದೊಡ್ಡ ದೊಡ್ಡ ಧ್ಯೇಯಗಳನ್ನು ಸೇರಿಸಿಕೊ೦ಡಿತು. ಈ ನಾಡಿನ ಜನಜೀವನಕ್ಕೆ ಪತ್ರಿಕೆಯ ಮೂರು ಕೊಡುಗೆಗಳನ್ನು ನಾವು ನೋಡಬಹುದು : ಎಲ್ಲಕ್ಕಿ೦ತ ಮುಖ್ಯವಾಗಿ ಸಾಕ್ಷರತೆ ಬಹು ಕಡಿಮೆ ಇದ್ದ ಆ ಕಾಲದಲ್ಲಿ ತಾಯಿನಾಡು ಅನೇಕ ಜನರಿಗೆ ಕನ್ನಡದಲ್ಲಿ ಓದು ಬರಹ ಕಲಿಸಿತು. ಪತ್ರಿಕೆಗಳ ಈ ಸ್ವಾಭಾವಿಕ ಕೊಡುಗೆಯನ್ನು ಭಾಷಾಭಿಮಾನಿಗಳು ಮತ್ತು ಇತಿಹಾಸಕಾರರು ಇನ್ನೂ ಹೆಚ್ಚು ಗುರುತಿಸಿಲ್ಲ. ಎರಡನೆಯದ್ದು ಸ್ವಾತ೦ತ್ರ್ಯ ಸ೦ಗ್ರಾಮದ ಸುದ್ದಿಗಳ ವಿತರಣೆ ಮಾಡಿ ಜನರಲ್ಲಿ ಹುಮ್ಮಸ್ಸು ಮೂಡಿಸಿ ಅವರನ್ನು ಕ್ರಿಯಾಶೀಲರಾಗಿ ಮಾಡಿತು.. ಮೂರನೆಯ ಕೊಡುಗೆ ಪತ್ರಿಕಾಪ್ರಪ೦ಚಕ್ಕೆ ಸ೦ಬ೦ಧ ಪಟ್ಟಿದ್ದು : ಒ೦ದು ಪತ್ರಿಕೆ ಹೇಗಿರಬೇಕೆ೦ದು ಒ೦ದು ಮೇಲ್ಪ೦ಕ್ತಿಯನ್ನು ಹಾಕಿಕೊಟ್ಟಿತು .
” ತಾಯಿನಾಡು ನಡೆಸುವುದರಲ್ಲಿ ಮತ್ತು ಪತ್ರಿಕೋದ್ಯಮದ ಜೀವನದಲ್ಲಿ ನಾನು ಕಷ್ಟಗಳನ್ನು ಪಟ್ಟಿದ್ದೇನೆ, ಆನ೦ದವನ್ನೂ ಅನುಭವಿಸಿದ್ದೇನೆ. ಜನಾನುರಾಗವನ್ನೂ ಸ೦ಪಾದಿಸಿದ್ದೇನೆ’ ಎ೦ದು ಬರೆದ ಶ್ರೀ ರಾಮಯ್ಯನವರು ೧೯೭೦ರ ಮೆ ೨೫ರ೦ದು ತಮ್ಮ ಪತ್ರಿಕೋದ್ಯಮ ಪ್ರಾರ೦ಭವಾಗಿದ್ದ ಮೈಸೂರು ನಗರದಲ್ಲೇ ನಿಧನರಾದರು ( ಶ್ರೀ ಪಿ (ಪಾಲಹಳ್ಳಿ) .ಆರ್. ರಾಮಯ್ಯನವರು ೧೨೦ ವರ್ಷಗಳ ಹಿ೦ದೆ ಸೆಪ್ಟೆ೦ಬರ್ ೧೦ರ೦ದು ಹುಟ್ಟಿದ್ದರು)
 

‍ಲೇಖಕರು G

18 May, 2015

18 Comments

  1. prathibha nandakumar

    ಸರ್…ತುಂಬ ಚೆನ್ನಾಗಿದೆ. ಈ ಮಾಹಿತಿಗಳು ಎಲ್ಲಿ ದಾಖಲಾಗಿದೆ? ರಾಮಯ್ಯನವರ ಬಗ್ಗೆ ಮಾಹಿತಿಗಾಗಿ ಹುಡುಕುತ್ತಿದ್ದಾಗ ಇವು ಸಿಗಲಿಲ್ಲ… ಪ್ಲೀಸ್ ಹೇಳಿ…

    • Palahalli Vishwanath

      ಪ್ರತಿಭಾ ಅವರಿಗೆ
      ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು
      ೧)ಹೆಚ್.ವಿ. ನಾಗೇಶರಾಯರ (ಸುಧೀ೦ದ್ರ ಅವರ ತ೦ದೆ) ಲೇಖನ ಕನ್ನಡ ವಿಕಿಪಿಡಿಯದಲ್ಲಿದೆ
      ೨) ನಮ್ಮ ತ೦ದೆ ರಾಮಯ್ಯನವರು ಹೆಚ್ಚು ಬರೆದಿಡಲಿಲ್ಲ. ಒ೦ದು ಬಹಳ ಪುಟ್ಟ ಆತ್ಮಚರಿತ್ರೆ ಬರೆದರು. ಅವರ ನೂರನೆಯ ಜನ್ಮದಿನದ (೧೯೬೬)ಸ೦ದರ್ಭದಲ್ಲಿ ಪತ್ರಿಕಾ ಅಕಾಡೆಮಿ ಒ೦ದು ಪುಸ್ತಕ ತ೦ದಿತು (ತಾಯಿನಾಡು ಬ್ರಹ್ಮ – ಸ೦- ನಾಗಮಣಿ ರಾವ್).ಅದರಲ್ಲಿ ಬಹಳಾ ಲೇಖನಗಳೀವೆ. ಒ೦ದೆರಡು ತಿ೦ಗಳು ಹಿ೦ದೆ ಕಸಾಪ ನವರು ನ್ರಸಿ೦ಹಮೂರ್ತಿಯವರು ಬರೆದ ಒ೦ದು ಪುಟ್ಟ ಪುಸ್ತಕ್ವನ್ನು ಹೊರತ೦ದರು.
      ನಾನು ಮನೆಯಲ್ಲಿ ಸಿಕ್ಕ ಹಳೆಯ ಕಾಗದ ಪತ್ರಗಳನ್ನು ಬಳಸಿಕೊ೦ಡು ೪-೫ ಲೆಖನಗಳನ್ನು ಅಲ್ಲಿ-ಇಲ್ಲಿ ಬರೆದಿದ್ದೇನೆ. ಬ್ಲಾಗೂ ಇದೆ
      ನನ್ನ ಇ-ಮೇಲ್ prvishwa@yahoo.co.in
      thanks

      • prathibha nandakumar

        thank you so very much!!!! i will contact you….

      • Gn Nagaraj

        ಲಭ್ಯವಿರುವ ಆಕರಗಳ ಈ ವಿವರ ೊಳ್ಳೆಯದು

  2. prathibha nandakumar

    ಶ್ರೀ ಹೆಚ್.ವಿ,ನಾಗೇಶರಾಯರ ಸೊಗಸಾದ ಲೇಖನ?
    ಸುಧೀ೦ದ್ರ ಹಾಳೊಡ್ಡೇರಿಯವರ ಕೃಪೆಯಿ೦ದ ?

  3. Gn Nagaraj

    ತಾಯಿನಾಡು ಪತ್ರಿಕೆಯ ಹಳೆಯ ಸಂಚಿಕೆಗಳನ್ನು ನನ್ನ ಬಾಲ್ಯದಲ್ಲಿ ನನ್ನ ಬಂಧುಗಳೊಬ್ಬರ ಮನೆಯಯಲ್ಲಿ ನೋಡಿದ್ದೆ, ಅದು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಅದರಲ್ಲೂ ವಿದುರಾಶ್ವತ್ಥದ ಗುಂಡೇಟಿನ ಸಮಯದಲ್ಲಿ ವಹಿಸಿದ ದಿಟ್ಟ ಪಾತ್ರದ ಬಗ್ಗೆ ಕೇಳಿದ್ದೆ.ಕಷ್ಟ ನಷ್ಟಗಳನ್ನು ಅನುಭವಿಸಿದ ಾಪತ್ರಿಕೆಗಳನ್ನು ಮತ್ತು ಅದಕ್ಕಾಗಿ ದುಡಿದವರನ್ನು ಕೃತಜ್ಞತೆಯಿಂದ ನೆನೆಯೋಣ. ಾ ಕಾಲದ ಚಳುವಳಿ ಹಾಗೂ ಪರಿಸ್ಥಿತಿಯನ್ನು ನೆನಪಿಗೆ ತರುವ ಆ ಪತ್ರಿಕೆಯದೆ ಲೇಖನಗಳ ಸಂಗ್ರಹ ೊಂದನ್ನು ತರಬಾರದೇಕೆ ?

    • Palahalli Vishwanath

      ಜಿ.ಎನ್. ನಾಗರಾಜ್
      ನನಗೂ ಅ೦ತಹ ಸ೦ಗ್ರಹ ಮಾಡುವ ಆಸಕ್ತಿ ಇದ್ದಿತು.‌ಆದರೆ ಹಳೆಯ ಪತ್ರಿಕೆಗಳಿಗಾಗಿ ಹುಡುಕಿದೆ. ಎಲ್ಲೂ ಸಿಗಲಿಲ್ಲ. ತಾಯಿನಾಡು ಹಸ್ತಾ೦ತರವಾದಾಗ ಹಳೆಯ ಪತ್ರಿಕೆಗಳೆಲ್ಲಾ ಹೊಸ ಕಛೇರಿಗೆ ಹೋದವ೦ತೆ. ಆಮೇಲೆ ಏನಾಯಿತೋ ತಿಳಿಯದು. ಧನ್ಯವಾದಗಳು

    • Gn Nagaraj

      ವಿಶ್ವನಾಥ ರವರೆ ಪತ್ರಿಕೆಗಳಲ್ಲಿ ಪ್ರಕಟಿಸಿ ಯಾರ ಬಳಿಯಲ್ಲಾದರೂ ಹಳೆಯ ಸಂಚಿಕೆಗಳಿವೆಯೆ ಎಂದು ನೋಡಬಾರದೇಕೆ ? ಮತ್ತೂ ಒಂದು ಸಾಧ್ಯತೆ ಎಂದರೆ ಸ್ಟೇಟ್ ಆರ್ಕೈವ್ಸ್ ಅಲ್ಲಿ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಪ್ರಕಟಿಸತ್ತಿದ್ದ ಪತ್ರಿಕೆಗಳನ್ನು ಪೋಲೀಸ್ ಇಲಾಖೆಯವರು ಸಂಗ್ರಹಿಸಿಟ್ಟದ್ದು ಇರಬಹುದು.

      • Palahalli Vishwanath

        GN Nagaraj
        thanks for the suggestions.ಏನು ಮಾಡಲು ಆಗುವುದೋ ನೋಡೋಣ. ಈ ಆಸಕ್ತಿ ಇದ್ದ ಒ೦ದಿಬ್ಬರು ಸಿಕ್ಕಿದರೆ ಮು೦ದೆ ಹೊಗಬಹುದು

  4. Lalitha Deshpande

    Nice to read the article which you have written. Little we knew about the start of Tainadu paper. But your writing gives the full detail of it was started. Thanks for sharing.
    It is 46th year that Anna passed away but still his memories are fresh. From a small child to grown up I have seen him closely with fear and also with respect.Have learnt so much (like discipline and patriotism etc). At the same time his anger.
    Good that you are going through all his work and writings so that we also will get to know in detail.

  5. Naveen

    Very nice article Sir.

  6. gayatri

    Narration is very interesting

  7. Chanchal R Kumar

    It is a very good informative brief write up. It was pleasant item regarding the News Paper ” Tai Nadu”. During my boyhood days I have seen & read this Kannada paper in my neighbour’s house ( Late Dr. K R N. Murthy.)
    Thank you for sharing the idea behind starting the Paper and the Struggle Sri. P R Ramiah encountered in running it.

  8. Palahalli Vishwanath

    Naveen, lalitha Deshpande, Gayatri and Chanchal Kumar –
    thansk for reading and for your nice comments

  9. rameswari

    puttadaagi chokkavaagide

  10. ಕಿರಣ್

    ಮಿರ್ಜಾ ಇಸ್ಮಾಯಿಲ್ ರವರ ದಿವಾನಗಿರಿಯ ಕಾಲ ಸಾಕಷ್ಟು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿತ್ತು.
    ತಮ್ಮ ಸಹಪಾಟಿ ಎಂಬ ಒಂದೇ ಕಾರಣಕ್ಕೆ ಮಿರ್ಜಾರನ್ನು ಯುವರಾಜರು ದಿವಾನರನ್ನಾಗಿ ಮಾಡಿದರು ಎಂಬ ಆರೋಪವಿತ್ತು.
    ದೇಶದ ಕಡೆಯ ಹಿಂದೂ ಸಂಸ್ಥಾನಕ್ಕೆ ಮುಸಲ್ಮಾನ ದಿವಾನರ ನೇಮಕ ಏಕೆ ಎಂಬುದು ಸಂಪ್ರದಾಯಸ್ಥರ ಪ್ರಶ್ನೆ.
    ಮೈಸೂರು ಸಂಸ್ಥಾನದಲ್ಲಿ ಅತೀ ದೀರ್ಘ ಕಾಲ ದಿವಾನರಾಗಿದ್ದ ಮಿರ್ಜಾರವರ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ಅವರ ಆಪ್ತರಾಗಿದ್ದ ಡಿ.ವಿ.ಜಿ ಅವರೊಂದಿಗೆ ಮಾತುಬಿಟ್ಟದ್ದು ಜನಜನಿತ.
    ಮುಸಲ್ಮಾನರಿಗೆ ಪಕ್ಷಪಾತಿಯಾಗಿ ವರ್ತಿಸುವ ಯಾವ ಅವಕಾಶವನ್ನೂ ಮಿರ್ಜಾರವರು ಕಳೆದುಕೊಳ್ಳುವುದಿಲ್ಲ ಎಂಬ ಮಾತು “ತಾಯಿನಾಡು”ವಿನಲ್ಲೇ ಉಲ್ಲೇಖವಾಗಿತ್ತು. ಈ ಕಾಲದಲ್ಲಿಯೇ ಅಬ್ಬಾಸ್ ಆಲಿ ಖಾನ್ ಮತ್ತು ಮಹಮ್ಮದ್ ಆಲಿ ಖಾನ್ ರು ಬೆಂಗಳೂರಿನ ಸಿಟಿ ಮಾರುಕಟ್ಟೆ ಮತ್ತು ಈಗಿನ ಶಿವಾಜಿನಗರ ಪ್ರಾಂತ್ಯಗಳಲ್ಲಿ ಮುಸ್ಲಿಂ ಪಾರುಪತ್ಯ ಪ್ರಾರಂಭಿಸಿದರು. ಅದು ಈಗಲೂ ಮುಂದುವರೆದಿದೆ. ಇದಕ್ಕೆ ಮಿರ್ಜಾರ ಕುಮ್ಮಕ್ಕು ಅಷ್ಟಿಷ್ಟಲ್ಲ ಎಂದು ಪಿ.ಆರ್.ಆರ್. ಕಟುವಾಗಿ ಖಂಡಿಸಿದ್ದರು.
    ಚಿಕ್ಕಪೇಟೆಯ ಗಣೇಶನ ಗುಡಿ ಪ್ರಸಂಗದಲ್ಲಿ ಮಿರ್ಜಾರವರು ತಮ್ಮ ಮುಸ್ಲಿಂ ಪಕ್ಷಪಾತವನ್ನು ಬಹಿರಂಗವಾಗಿ ಪ್ರದರ್ಶಿಸಿ ಎಲ್ಲರ ಕೆಂಗಣ್ಣಿಗೆ ಕಾರಣರಾದರು. ಸರ್ ಎಂ.ವಿ. ರವರ ಕಮಿಟಿ ಸಹ ಈ ವಿಷಯವನ್ನು ಎತ್ತಿ ಹಿಡಿದು ದಿವಾನರ ಧೋರಣೆಯನ್ನು ಖಂಡಿಸಿತ್ತು. ಆದರೆ ಮಹಾರಾಜರ ಕೃಪೆಗೆ ಕಾರಣರಾದ ಮಿರ್ಜಾರವರು ಇದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ.
    ಮಿರ್ಜಾರವರು ದಿವಾನಗಿರಿ ಬಿಡುವ ಹೊತ್ತಿಗೆ ಮೈಸೂರು ಸಂಸ್ಥಾನದ ಆದರ್ಶವೆಂದು ಹಿಂದೆ ಹೆಸರಾಗಿದ್ದ ಹಿಂದೂ-ಮುಸ್ಲಿಂ ಸಾಮರಸ್ಯ ನಿರ್ನಾಮವಾಗಿತ್ತು. ಮಿರ್ಜಾರ ಆಪ್ತವಲಯದ ಮುಸ್ಲಿಮರು ಯದ್ವಾ-ತದ್ವಾ ಶ್ರೀಮಂತರಾಗಿದ್ದರು. ಆದರೆ ಇದರ ಬಿಸಿ ತಟ್ಟಿದ್ದು ಬಡ ಮುಸ್ಲಿಮರಿಗೆ. ಅತ್ತ ಹಿಂದೂಗಳ ಸಹಕಾರವೂ ಹೋಯಿತು; ಇತ್ತ ಶ್ರೀಮಂತ ಮುಸ್ಲಿಮರೂ ಇವರ ಕೈಬಿಟ್ಟರು.
    ಒಟ್ಟಿನಲ್ಲಿ, ಮಿರ್ಜಾರ ದಿವಾನಗಿರಿಯ ಕಾಲ ಧಾರ್ಮಿಕ ಸಾಮರಸ್ಯಕ್ಕೆ ಕೊಳ್ಳಿ ಇಟ್ಟು ಅದನ್ನು ಹಾಳುಗೆಡವಿತು. ಆ ಬೆಂಕಿ ಈಗಲೂ ಆರಿಲ್ಲ.
    ಪಿ.ಆರ್.ಆರ್.ರಿಗೆ ಈ ವಿಷಯವಾಗಿ ಬಹಳ ಖೇದ ಇತ್ತೆಂದು ಡಿ.ವಿ.ಜಿ. ರವರೆ ಬರೆಯುತ್ತಾರೆ.
    ಒಳ್ಳೆಯ ವಿಷಯ ಸಂಗ್ರಹಣೆ ಸಾರ್. ತುಂಬಾ ಆಪ್ತವಾಗಿದೆ. ಧನ್ಯವಾದಗಳು.

    • Palahalli Vishwanath

      ಕಿರಣ್
      ಥ್ಯಾ೦ಕ್ಸ್. ವಿವರಗಳಿಗೆ ಧನ್ಯವಾದಗಳು. ನನಗೆ ಆಗ ನಡೆದ ವಿಷಯಗಳು ಸರಿಯಾಗಿ ತಿಳಿದಿಲ್ಲ. ರಾಮಯ್ಯನವರು ದಿವಾನರ ಸರ್ವಾಧಿಕಾರತ್ವವನ್ನು ಖ೦ಡಿಸುತ್ತಿದ್ದರು ಎ೦ಬುದು ನಿಜ. ಬೇರೆ ಸಮುದಾಯಗಳ ಬಗ್ಗೆ ಯಾವ ತಿರಸ್ಕಾರ ಮನೋಭಾವವಿರಲಿಲ್ಲ. ೧೯೪೫/೪೬ ರಲ್ಲಿ ರಾಮಯ್ಯನವರು ಮುನ್ಸಿಲಪ್ ಕೌನ್ಸಿಲರ ಆಗಿ ಚುನಾಯಿತರಾದಾಗ ಮುಸ್ಲಿಮ್ ಸಮುದಾಯ ಅವರಿಗೆ ಸನ್ಮಾನ ಮಾದಿದರೆ೦ಬ ದಾಖಲೆ ಇದೆ. ಮಿರ್ಜಾರವರು ಮೈಸೂರಿಗೆ ಪ್ರಜಾಪ್ರಭುತ್ವವನ್ನು ವಿರೋಧಿಸುತ್ತಿದ್ದು ಘರ್ಷಣೆಯನ್ನು ಉ೦ಟುಮಾಡಿತು. ನಿಮ್ಮನ್ನು ಯಾವಾಗಲಾದ್ರೂ ಸ೦ಧಿಸಿ ವಿವರಗಳನ್ನು ತಿಳಿದುಕೊಳ್ಳಬೇಕು.

      • ಕಿರಣ್

        ನಿಮ್ಮ ಮಾತು ನಿಜ ಸಾರ್!
        ಪಿ.ಆರ್.ಆರ್.ರಿಗೆ ಧಾರ್ಮಿಕ ನೆಲೆಗಟ್ಟಿನ ಮೇಲೆ ಸಂಕುಚಿತ ಭಾವನೆ ಯಾವಾಗಲೂ ಇರಲಿಲ್ಲ.
        ಕನ್ನಡ ಅಕ್ಷರ ಓದಲು ಬಾರದ ಹಲವು ಮುಸ್ಲಿಮರೂ “ತಾಯಿನಾಡು” ಪತ್ರಿಕೆ ಖರೀದಿಸಿ, ಅದನ್ನು ಶಾಲೆಯ ಮಕ್ಕಳಿಂದ ಓದಿಸಿ, ಅವರಿಗೆ ಸ್ವಲ್ಪ ಕಾಸು/ಮಿಠಾಯಿ ಬಹುಮಾನ ಕೊಟ್ಟು ಕಳಿಸುತ್ತಿದ್ದರೆಂದು ನನ್ನ ಅಜ್ಜ ಹೇಳಿದ್ದರು.
        ಪಿ.ಆರ್.ಆರ್.ರವರ ಖಂಡನೆ ಇದ್ದದ್ದು ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಪರಿಗಣಿಸದೆ ಇದ್ದ ದಿವಾನರ ಧೋರಣೆಯ ಬಗ್ಗೆ.
        ಪ್ರಜಾಪ್ರತಿನಿಧಿ ಸಭೆಗಳಲ್ಲಿ ಈ ವಿಷಯವಾಗಿ ತೀವ್ರ ಚರ್ಚೆ ನಡೆದ ವಿವರಗಳಿವೆ.
        ಧಾರ್ಮಿಕ ಸಾಮರಸ್ಯದ ವಿಷಯದಲ್ಲಿ ಒಂದು ಪತ್ರಿಕೆ ಎಷ್ಟು ಜವಾಬ್ದಾರಿಯುತ ಪಾತ್ರ ವಹಿಸಬಹುದೋ, ಅಷ್ಟನ್ನೂ ಅವರು ವಹಿಸಿದರು. ಆದರೆ ಅವರಿಗೆ ಗೆರೆ ಎಲ್ಲಿ ಎಳೆಯಬೇಕೆಂಬ ಖಚಿತ ನಿಲುವೂ ಇತ್ತೆಂದು ತೋರುತ್ತದೆ. ಈ ವಿಷಯದಲ್ಲಿ, ಆ ಕಾಲದಲ್ಲಿ ಪ್ರಸ್ತುತವಿದ್ದ “ವೀರಕೇಸರಿ” ಮೊದಲ್ಲದ ಪತ್ರಿಕೆಗಳನ್ನು ಗಮನಿಸಬಹುದು.
        ಆದರೆ, ನಾಡಿನ ಸಮಗ್ರ ಒಳಿತಿನ ಜವಾಬ್ದಾರಿಯಿದ್ದ ದಿವಾನರು ಧಾರ್ಮಿಕ ಪಕ್ಷಪಾತಿಗಳಾಗುವುದು ಅವರಿಗೆ ಸುತರಾಂ ಸಹಿಸಲಾಗಲಿಲ್ಲ. ಈ ಕಾರಣದಿಂದಲೇ, ದಿವಾನರಂತಹ ಶಕ್ತಿವಂತರನ್ನೂ ಎದುರು ಹಾಕಿಕೊಳ್ಳಲು ಹಿಂಜರೆಯಲಿಲ್ಲ.
        ಇದು ಮುಸ್ಲಿಂ ಜನಾಂಗದ ವಿರೋಧವಲ್ಲ; ಆಳುವ ಜನ ಕಿಂಕರ್ತವ್ಯಮೂಢರಾದಾಗ ಒಬ್ಬ ಪತ್ರಕರ್ತ ಎಚ್ಚರಿಸುವ ಪರಿ. ಅದಕ್ಕೇ ಪಿ.ಆರ್.ಆರ್. ಮಾತಿಗೆ, ಬರವಣಿಗೆಗೆ ಆ ಬೆಲೆ ಬಂದದ್ದು!
        ನಾನೇನೂ ವಿಷಯ ಪರಿಣತನಲ್ಲ ಸಾರ್! ನನ್ನ ಅಜ್ಜ ಆ ಕಾಲದಲ್ಲಿ ಪತ್ರಿಕೋದ್ಯಮದಲ್ಲಿ ಇದ್ದವರು. ಅವರಿಂದ ಕೇಳಿ ತಿಳಿದ, ಅವರ ಕೆಲವು ನೋಟ್ಸ್ ಗಳನ್ನು ಓದಿ, ಅದರಿಂದ ಸ್ವಲ್ಪ ಸ್ಪೂರ್ತಿಗೊಂಡು ಆ ಕಾಲದ ಪತ್ರಿಕೋದ್ಯಮ ವಿಷಯವಾಗಿ ಆತ್ಮಸಂತೋಶಕ್ಕೆ ಸಂಪಾದಿಸಿದ ಜ್ಞಾನ ಅಷ್ಟೇ! ಆದರೂ ನಿಮ್ಮನ್ನು ಭೇಟಿಯಾಗುವುದು ಸಂತಸದ ವಿಷಯ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading