ಸುರೇಶ್ ನಾಗಲಮಡಿಕೆ
ಎ ಕೆ ಹಂಪಣ್ಣ ಅವರು ಇದುವರೆಗೆ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಉಳಿರಂಪಿಗೆ ಎಂಬುದು ಈಚಿನ ಕವನ ಗುಚ್ಚವಾಗಿದೆ. ಎಂಬತ್ತರ ದಶಕದಲ್ಲಿ ಮೊದಲ ಸಂಕಲನ ‘ದನಿಗಳು’ ಪ್ರಕಟವಾಗಿತ್ತು. ಈ ಸಂದರ್ಭದಲ್ಲಿ ದಲಿತ ಬಂಡಾಯವೆಂಬ ಶಬ್ದಗಳು ಸಾಕಷ್ಟು ಶಬ್ದ ಮಾಡಿದ್ದವು. ಒಂದು ಕಡೆ ಸಿದ್ದಲಿಂಗಯ್ಯನವರ ಆಕ್ರೋಶವೂ ಮತ್ತೊಂದು ಕಡೆ ದೇವನೂರ ಅವರ ಅಂತರ್ಜಲದಂತೆ ಒಡಮೂಡಿದ ಪ್ರತಿಭಟನೆಗಳು ಬೆನ್ನಲ್ಲೇ ಇದ್ದವು. ಇವರ ಮಧ್ಯೆ ಕೆ.ಬಿ ಸಿದ್ದಯ್ಯ ತಳಲೋಕವೊಂದರ ಪುರಾಣವೊಂದನ್ನು ಶೋಧಿಸುವ ಗುಂಗಿನಲ್ಲಿ ಬರೆದರು. ಬಕಾಲ ದಕಾಲ ಮುಂತಾದವರ ಮುಖೇನ ಆದಿಮಲೋಕವೊಂದರ ಎಚ್ಚರವನ್ನು ಪರಿಚಯಿಸಿದರು. ಇವರ ನಡುವೆ ಮೂಡ್ನಾಕೂಡು ಮಾಲಗತ್ತಿ ಮುಂತಾದವರು ಬರೆಯುತ್ತಿದ್ದರು ಹಂಪಣ್ಣನವರ ಕಾವ್ಯ ಇವರೆಲ್ಲರ ಮದ್ಯೆ ಸದ್ದು ಮಾಡದೇ ತನ್ನದೇ ಆದ ಒಳದಾರಿಗಳನ್ನು ಕಂಡುಕೊಂಡಿದೆ. ಇವರ ಕಾವ್ಯ ದಲಿತ-ಬಂಡಾಯದ ನಡುವೆ ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ ಇವರಿಗೆ ತನ್ನ ಲೋಕವೊಂದನ್ನು ಸಂಪೂರ್ಣವಾಗಿ ಬದಲಿಸುತ್ತೇನೆ ಎಂಬ ಹುಸಿ ನಂಬಿಕೆ ಇಲ್ಲ. ಆ ಬಗೆಯ ಲೋಕವನ್ನು ಅವರು ಆದಿಮ ಎಂದು ಕರೆಯುವಾಗ ಅದಕ್ಕೊಂದು ಚರಿತ್ರೆಯನ್ನು ಕಟ್ಟುವುದಕ್ಕೆ ಪ್ರಯತ್ನಿಸುತ್ತಾರೆ. ನಮ್ಮ ಆದಿಮ ಲೋಕಗಳಿಗೆ ಚರಿತ್ರೆ ಎಂಬುದು ಕನಸಿನ ಮಾತು. ಚರಿತ್ರೆಯನ್ನು ನಿರ್ಮಿಸುವ ಎಲ್ಲಾ ತಾಕತ್ತು ಇದ್ದರೂ ಬಾಹ್ಯದ ದಾಳಿಗಳಿಂದ ಭಗ್ನಗೊಳಿಸಿಕೊಂಡವರು. ಹಂಪಣ್ಣ ಅವರ ಕಾವ್ಯದ ಹುಡುಕಾಟದ ಹಾದಿಗಳಲ್ಲಿ ಇದು ಒಂದು. ಆಪ್ತ ಲೋಕವೊಂದನ್ನು ನಿರ್ಮಾಣ ಮಾಡುವಾಗ ನೆನಪು ಮತ್ತು ವರ್ತಮಾನಗಳು ಮುಖಾಮುಖಿಯಾಗುತ್ತವೆ. ನೆನಪು ಬಂದಾಗ ತನ್ನ ಪರಂಪರೆಯನ್ನು ಗೌರವಿಸುವುದರ ಮೂಲಕ ವರ್ತಮಾನದಲ್ಲಿ ಅದು ಇರುವ ಜಾಗ ಅಸ್ತಿತ್ವದ ಪುನರ್ ಅವಲೋಕನವನ್ನು ಮಾಡುತ್ತದೆ. ಹೀಗೆ ಅಭಿವ್ಯಕ್ತಿಸುವಾಗ ಹಂಪಣ್ಣ ಅವರ ಕಾವ್ಯ ಸಮಕಾಲೀನ ರಾಜಕಾರಣವನ್ನು ಎದುರುಗೊಳ್ಳುವುದು ಮಹತ್ವದ ವಿಚಾರ. ಅದರಲ್ಲಿ ಆದಿಮ ಲೋಕವನ್ನು ಮೇಲೆತ್ತುವ ಬಯಕೆಯಿಂದ ಬಂದ ರಾಜಕೀಯವನ್ನು ಇವರ ಕಾವ್ಯ ಸಂಪೂರ್ಣವಾಗಿ ಪರೀಕ್ಷಿಸುತ್ತದೆ. ವರ್ತಮಾನದಲ್ಲಿ ಅದರ ವಿಫಲತೆಗಳನ್ನು ನಿರ್ಭಯವಾಗಿ ಬಯಲು ಮಾಡುತ್ತದೆ. ಪ್ರಾರಂಭದಲ್ಲಿ ಅಂಬೇಡ್ಕರ್ ಅವರ ನಿಲುವುಗಳು ಅಷ್ಟಾಗಿ ಪ್ರಭಾವ ಬೀರಿಲ್ಲದಿರುವುದು. ಗಾಂಧೀ ತತ್ವಗಳು ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೇ ಮೂಡುವುದು ಕಾಣಬಹುದು. ಶ್ರಮಲೋಕವೆಲ್ಲಾ ಆದಿಮವೇ ಎಂದು ಇವರ ಕಾವ್ಯ ನಂಬಿದಂತಿದೆ.
ಆದಿಮ ಲೋಕದಲ್ಲಿ ಬರುವ ಹಿರಿತಲೆಗಳು ಶ್ರಮವನ್ನೆ ನಂಬಿಕೊಂಡು ಬಾಳಿದವರು. ಅವರ ಜೀವ ಪ್ರೀತಿಯನ್ನು, ಶ್ರಮವನ್ನು ಅನಾವರಣಗೊಳಿಸುವಾಗ ಹಂಪಣ್ಣನವರ ಕಾವ್ಯ ಎಲ್ಲೂ ನಿಜದನೆಲೆಯನ್ನು ಹುಸಿಮಾಡುವುದಿಲ್ಲ. ಕೇವಲ ಇದನ್ನು ಹಾಗೆಯೇ ಅಭಿವ್ಯಕ್ತಿಪಡಿಸಿದರೆ ವಾಚ್ಯವೂ ಆಗಿಬಿಡುವ ಸಂಭವವಿತ್ತು. ಆದರೆ ತಲ್ಲಣಗಳನ್ನು ಹೇಳುತ್ತಲೇ ಮತ್ತೂ ಕೆಲಕಡೆ ಅಕ್ಷರಲೋಕ ಅವರನ್ನು ನಂಬಿಸಿ ದಿಕ್ಕು ತಪ್ಪಿಸಿದ ಪ್ರಮೇಯಗಳನ್ನು ಹೊರಗೆಡುವುತ್ತದೆ. ಅಂತರಾಳದಲ್ಲೇ ಸಮಾನತೆಯ ಗೆರೆಗಳು ಅಳಿಸಿಹೋಗುವುದನ್ನು ಪ್ರಶ್ನಿಸುತ್ತಾ ಹೋಗುತ್ತದೆ. ಕನಸುಗಳನ್ನು ಕಂಡ ಸಮುದಾಯಗಳ ಗತಿಯಾದರು ಯಾವ ಬಗೆಯಲ್ಲಿದೆ? ಅವು ನನಸಾಗುವ ಹಂತದಲ್ಲಿದ್ದಾವೋ ಅಥವಾ ಕಮರಿಹೋಗಿವೆಯೋ
ನನಗೀಗ ಕನಸುಗಳನ್ನು
ಕಲೆಹಾಕುವ ಹುಚ್ಚು
ಯಾರು ಏನೇ ಅಂದರೂ
ಹಿಡಿದಿರುವ ಕೆಚ್ಚು
ಹೆಪ್ಪುಗಟ್ಟಿದ ಕನಸುಗಳ
ಹುಡುಕುವುದೆಂದರೆ
ಶವಕ್ಕೆ ಚಟ್ಟಕಟ್ಟುವಷ್ಟೇ ಸಲೀಸು
ಪ್ರಸ್ತುತ, ಯಾರಾದರೂ
ಘನ ಕನಸುಗಾರರು
ನಿಮ್ಮಲ್ಲಿದ್ದರೆ ಪರಿಚಯಿಸಿ (ಪುಟ – 6 ಆದಿಮಕನ್ಯೆ)
ಪರಂಪರೆಯ ನೋವನ್ನು ವರ್ತಮಾನದ ಸ್ಥಿತಿಯನ್ನು ಏಕತ್ರಗೊಳಿಸುವ ಶಕ್ತಿ ಈ ಸಾಲುಗಳದು. ತಳ ಸಮುದಾಯಗಳ ಪ್ರಾಮಾಣಿಕ ಕನಸುಗಾರರ ಪರಿಸ್ಥಿತಿ ಇದೇ ಅಲ್ಲವೇ. ಚಳುವಳಿಗಳಿಂದ ಪಾಠ ಕಲಿತವರು ಸಿದ್ದಾಂತ ತತ್ವಗಳಿಂದ ಎಚ್ಚರಿಸಹೊರಟವರ ಸಾಧನೆಗನ್ನು ಇದು ಎದುರುಗೊಳ್ಳುತ್ತದೆ..
ಎತ್ತ ಹೋದವು ಮೈಲುದ್ದದ ಆದರ್ಶಗಳು
ಸಿಕ್ಕವರಿಗೆ ಸೀರುಂಡೆ ಅವಕಾಶಗಳು
ಮುಪ್ಪರಿಗೊಂಡ ಸಂತ ತಂತಾನೆ ಎದ್ದು
ತುತ್ತಿನಲಚೀಲ ತುಂಬಿದಂತೆ ತುಂಬಲೊಲ್ಲದು (ಪುಟ 7 ಆದಿಮಕನ್ಯೆ)
ಎಂಬ ಸಿಟ್ಟು ಕೂಡ ಅದನ್ನೇ ಸೂಚಿಸುತ್ತದೆ. ಚಳುವಳಿಗಳಿಂದ ಹೊರಗೆ ನಿಂತವರ ಪ್ರತಿಕ್ರಿಯೆಯಾಗಿಯೂ ಕಾಣುತ್ತದೆ, ಹಂಪಣ್ಣನವರ ಈ ಬಗೆಯ ಹೇಳಿಕೆಗಳು ಕೂಡಾ ಸಾದಾ ಆಗುವ ಹಂಬಲದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತವೆ. ಏಕೆಂದರೆ ಯಾವುದೇ ಸಮುದಾಯಗಳ ಆದಿಮ ಚರಿತೆಯೂ ಮುನ್ನಲೆಗೆ ಬರಬೇಕಾದರೆ ನಿರಂತರ ಶ್ರಮ ತಾಳ್ಮೆಗಳು ಅಗತ್ಯವೆಂಬ ಭಾವನೆಯೂ ಅವರಲ್ಲಿದೆ. ಅವರ ಇಡೀ ಅಂದರೆ ಇದುವರೆಗಿನ ನಾಲ್ಕು ಸಂಕಲನಗಳಲ್ಲಿ ನಾಲ್ಕು ಸಾಲಿನ ನುಡಿಯನ್ನು ಬಳಸುವಾಗೆಲ್ಲ ಈ ಬಗೆಯ ನಿಲುವುಗಳನ್ನೇ ತಳೆಯುತ್ತಾರೆ. ನನಗೆ ತಿಳಿದ ಮಟ್ಟಿಗೆ ಇವರ ಕಾವ್ಯಗುಣ ಪಕ್ವಗೊಂಡಿರುವುದು ಮಾಗಿರುವುದು ಈ ನಾಲ್ಕು ಸಾಲಿನ ನುಡಿಯನ್ನು ಮುರಿದು ಬರೆದಾಗ, ಶೊಷಣೆ ಮತ್ತು ಹಸಿವನ್ನು ಅರ್ಥಮಾಡಿಕೊಂಡವರು ಮಾನವತೆಯ ಕುರಿತು ಮಾತನಾಡುತ್ತಾರೆ. ಹಂಪಣ್ಣ ಅವರ ಕಾವ್ಯದ ಮೇಲೆ ಗಾಂಧಿ ಚಿಂತನೆಗಳು ಪ್ರಭಾವ ಬೀರಿದ್ದವೋ ಅಥವಾ ಅದು ಒಳ ಅನುಭವದ ಕಾವೋ ಗೊತ್ತಿಲ್ಲ. ಆದರೆ ಹೃದಯದ ಬಗ್ಗೆ ಮಾತನಾಡುವಾಗ ಹಂಪಣ್ಣ ಅವರ ಕಾವ್ಯ ಭಾವುಕವಾಗುತ್ತದೆ. ತಳಸಮುದಾಯಗಳನ್ನು ಮೊದಲು ಅರಿತುಕೊಳ್ಳುವುದೇ ದೊಡ್ಡ ಆದರ್ಶವೆಂದು ಅವರ ಕಾವ್ಯ ನಂಬುತ್ತದೆ.
ದು:ಖದ ದೆಲೆ ದುಪ್ಪಟ್ಟು
ಆದ ದಿನ ರಕ್ಕಸ ನಗು
ಬೇಡ ಬೇಡ
ಹೃದಯದೊಳಗೊಂದು
ಹೃದಯವಿಟ್ಟು ಅದರ
ಮೇಲೊಂದು ಹಣತೆಯಿಟ್ಟು
ಮೈ – ಮನ ಹಗುರವಾಗಿಸುವ
ಬೆಳಕಿನ ಕಿರಣಗಳು
ಗುಡಿಸಲು ಕಡೆಗೆ ಬೀಳಲಿ
ಬಿಕ್ಕಳಿಕೆ ನೆಲ ಸವರಲಿ
ಬನ್ನಿ ಹಬ್ಬ ತಬ್ಬುವ (ಪುಟ 19-20 ಆದಿಮಕನ್ಯೆ)
ಈ ಬಗೆಯ ಮಾತುಗಳು ತನ್ನ ಅವಮಾನವನ್ನು ಒಪ್ಪಿಕೊಂಡವಲ್ಲ. ಬದಲಾಗಿ ಮುಗ್ಧಲೋಕವೊಂದರ ಚಿಂತನಾ ಕ್ರಮ. ಗಾಂಧೀ ಬಯಸಿದ್ದು, ಆದಿಮಲೋಕ ಬಯಸಿದ್ದು ಹೀಗೆ ಅಲ್ಲವೇ. ಹೃದಯ ಸಂವಾದ ನಡೆದಾಗ ಸಮಾನತೆಯೂ ನೆಲಸುತ್ತದೆ. ಹಣತೆ, ಗುಡಿಸಲು ಹಬ್ಬ, ಏಕಕಾಲಕ್ಕೆ ಮನುಷ್ಯನ ಬದುಕಿನ ಲಯವನ್ನೇ ಹೇಳುತ್ತವೆ. ಈ ಲಯವನ್ನು ಒಡೆದವರು ಒಡೆದದ್ದು ಎಲ್ಲಿ ಎಂಬ ಪ್ರಶ್ನೆಗಳೂ ಕವಿಯ ಮನಸ್ಸನ್ನು ಉದ್ದಕ್ಕೂ ಕಾಡುತ್ತವೆ. ಕೊನೆಗೆ
ದಕ್ಕಲಾರದವನು ದಕ್ಕಿಸಿಕೊಳ್ಳುವ
ಪರಿಗೆ, ಬೆರಗಾಗಿ ಆತು ನಿಂತು
ಹಿಂದಲ ಊರು ಹಿಂದಾಯ್ತು
ಮುಂದಲ ಊರು ಮುಂದಾಯ್ತು (ಪುಟ 59- ಆದಿಮಕನ್ಯೆ)
ಎಂಬ ನಿಲುವಿಗೆ ಬರುತ್ತಾರೆ. ಸಿದ್ದಯ್ಯ, ಶಿವತೀರ್ಥನ, ಒಳಗೊಂಡಂತೆ ತಮ್ಮ ಕುಲಮೂಲ ಪುರಾಣಗಳ ಶೋಧನೆ ಮುಖೇನ ಎತ್ತಿಕೊಳ್ಳುವ ಪ್ರಶ್ನೆಗಳು ಮತ್ತು ಅವಕ್ಕೆ ನಮ್ಮ ವಿಮರ್ಶಕರು ಕಂಡುಕೊಂಡ ಉತ್ತರ ನಮ್ಮ ಮುಂದಿದೆ. ಹಂಪಣ್ಣ ತಮ್ಮ ಕಾವ್ಯದಲ್ಲಿ ಮುಖ್ಯವಾಗುವುದು ಅಪ್ಪ, ಅವ್ವ, ಅಜ್ಜಿ, ಇವರ ಮೂಲಕವೇ ಒಂದು ಪುರಾಣವನ್ನು ಹೆಣೆಯುತ್ತಾರೆ. ಆ ಮೂಲಕವೇ ತಾತ್ವಿಕತೆಯೊಂದನ್ನು ರೂಪಿಸಿಕೊಳ್ಳುತ್ತಾರೆ. ಕೇವಲ ಹೀಗೆ ವೈಯುಕ್ತಿಕ ವಲಯವನ್ನು ಮಾತ್ರ ಕಾವ್ಯದಲ್ಲಿ ಹಣೆದು ಸಹಾನುಭೂತಿಯನ್ನು ಗಿಟ್ಟಿಸಿಕೊಂಡವರು ನಮ್ಮಲ್ಲಿ ಸಾಕಷ್ಟು ಜನ ಇದ್ದಾರೆ. ಆದರೆ ಹಂಪಣ್ಣನವರ ಕಾವ್ಯ ಭಿನ್ನವಾಗುವುದು ಆ ಮುಗ್ಧಲೋಕವನ್ನು ನೆನಪಿಸಿಕೊಳ್ಳುತ್ತಲೇ ವರ್ತಮಾನದಲ್ಲಿ ನಡೆದಿರುವ ನಡೆಯುತ್ತಿರುವ ಸಂಗತಿಗಳನ್ನು ಎದುರುಗೊಳ್ಳುತ್ತಾರೆ. ತಣ್ಣಗೆ ಸಿಟ್ಟಾಗುತ್ತಾರೆ. ಇಲ್ಲಿಯೇ ಹುಸಿ ಬಂಡಾಯ ದನಿಗಳು ಇವರ ಕಾವ್ಯವನ್ನು ಆವರಿಸದೆ ಅಪಾಯದಿಂದ ತಪ್ಪಿಸಿಕೊಂಡಿವೆ ಎನ್ನಬಹುದು. ಹೀಗಾಗಿಯೇ ವರ್ತಮಾನದ ಸಂಗತಿಗಳಿಗೆ ಚರಿತ್ರೆ ಪುರಾಣಗಳ ನೆನಪು ಸಿಹಿಯಾಗದೆ ಕಾಡಿ ಕರಗಿಸುವ ನೆನಪು ಅನುಸಂಧಾನದಲ್ಲಿ ನಿರೀಕ್ಷೆಯ ನಿಲುವನ್ನು ದೃಢವಾಗಿಸಿ ಹವಣಿಸುವ ಭಾವ ಸಂಕಲ್ಪ. ಇದು ಹಂಪಣ್ಣನವರ ಕಾವ್ಯದೊಡಲ ಬಗೆಬೇರು ಎಂಬ ಎಸ್ ಜಿ ಸಿದ್ದರಾಮಯ್ಯನವರ ಮಾತುಗಳನ್ನು ಒಪ್ಪಬಹುದು.
ದುಡಿದುಡಿದು ಸೊಂಟ ಮುರಿದು
ಇಪ್ಪತ್ತು ದಿನದ ಬಾಣಂತಿ
ಒಪ್ಪೊತ್ತು ಗಂಜಿಯಿಲ್ಲದೆ
ಟೋಕಿಯಿಂದ ಬೆಂಕಿಗೆ ನೆಗೆದದ್ದು
ಹೇಗಿರಬೇಡ (ಪುಟ 66 – ಆದಿಮಕನ್ಯೆ)
ಅವ್ವ ನನ್ನತ್ತ ಬರುತ್ತಾಳೆ ದಿನವೂ
ಬಂದಂತೆ ನನ್ನೊಳಗಿನ ಲೋಕ
ಪರಿವತರ್ಿತಗೊಂಡು ಎರಗಿದ
ದುಮ್ಮಾನ ಸಡಿಲಗೊಂಡಿತ್ತು (ಪುಟ 15 – ದೀಪವಂಶ)
ಭಾವಗಳು ಕುದಿದು ಕುಪ್ಪಳಿಸಿ ಬಂದುದುರಿದವು
ಬೆದರದ ಭಾಷೆಯೊುಂದು ನ್ಯಾಯದ ಬೆಲೆ ಅರಿತಿದ್ದ
ಅಪ್ಪ ಕಣದಲ್ಲಿ ಕಾಳು ಕಡಿ ಕಡ್ಡಿ
ವಿಂಗಡಿಸುತ್ತಾ ಸುಂಕು ಧೂಳು ಬೇರೆಯಾಗಿಸುತ್ತಾ
ಗಟ್ಟಿಕಾಲಿನೆಡೆಗೆ ತದೇಕ ನೋಟ ಈಚಲು
ಪೊರಕೆ ತಿರುಗಿಸುವ ಪರಿ ಕಲೆಯ ಕಲೆ. (ಪುಟ 38 – ದೀಪವಂಶ)
ಕುದಿಸಿದ ಬಿಸಿ ನೀರಲ್ಲಿ ರಂಪಿಗೆ ಅದ್ದಿ
ಮಸೆ ಮಸೆದು ನೀಟಾಗಿ ಮೆಟ್ಟು ಅಟ್ಟೆ
ಕೊಯ್ವಾಗ ಹದಗೊಳಿಸಿ ಬಿಸುಪು ಮಾಡುವಾಗ
ಅಡಿಗಲ್ಲು ನೆಲದ ಮೇಲೆ ಬಿಗಿಕಲ್ಲು. (ಪುಟ 26 – ಉಳಿರಂಪಿಗೆ)

ಕಾಯಕದ ಸತ್ವವನ್ನು ಒಂದು ಚೌಕಟ್ಟಿಗೆ ಎಳೆದು ತಂದರೆ ಸಾಲದು. ಕಾಯ-ಕಾಯಕದ ಸೃಜನಶೀಲತೆಯೂ ಮುಖ್ಯವಾಗಬೇಕು. ಕೆಳವರ್ಗದ ವಚನ ಪರಂಪರೆ ಕಾಯಕದ ಸೃಜನಶೀಲತೆಯನ್ನು ಅರಿತುಕೊಂಡೇ ಕಾಯದ ಬಗೆಗೆ ಚಿಂತಿಸಿದವರು. ಹಂಪಣ್ಣನವರ ಕಾವ್ಯಕ್ಕೆ ಈ ಎಚ್ಚರವಿದೆ. ಕೇವಲ ಕಾಯಕದ ಕಲೆಯನ್ನು ಕಲ್ಪಿಸಿಕೊಡುವುದು ಮಾತ್ರವಲ್ಲ ವರ್ತಮಾನದಲ್ಲಿ ಆ ಕಾಯಕಗಳು ಎದುರುಗೊಳ್ಳುವ ಸವಾಲುಗಳು ಪ್ರಧಾನವಾಗುತ್ತವೆ. ಈ ಬಗೆಯ ಆದಿಮ ಕಾಯಕಗಳು ಕೇವಲ ನೆನಪಾಗುವುದು ಮಾತ್ರವಲ್ಲ ತನ್ನನ್ನು ಎಚ್ಚರದ ಲೋಕವೊಂದಕ್ಕೆ ಕರೆದೊಯ್ದು ಆಗುವಿಕೆಯ ಧಾರೆಗೆ ಸೆಳೆದುಕೊಳ್ಳುತ್ತವೆ. ಹಾಗಾಗಿ ಮೂಲ ಕಾಯಕಗಳನ್ನು ಮರೆಯುವುದು ಅವಮಾನವೆಂದು ಭಾವಿಸುವುದಾಗಲೀ ಆತ್ಮವಂಚನೆಯ ಸಂಗತಿಯಾಗುತ್ತದೆ. ಅಲ್ಲಮನೊಂದಿಗೆ ನಡೆಸುವ ಪದ್ಯವೊಂದು ಹಂಪಣ್ಣನವರ ಮಹಾತ್ವಾಕಾಂಕ್ಷಿ ಕವಿತೆಯಾಗಿದೆ. ಅಲ್ಲಮನ ವ್ಯಕ್ತಿತ್ವ ಆತನ ಸಾಧಕತನಗಳು ವರ್ತಮಾನಕ್ಕೆ ಅಗತ್ಯವಾಗುವುದು ಯಾವ ಬಗೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಇದುವರೆಗೆ ಅಲ್ಲಮನನ್ನು ಕನ್ನಡ ಲೋಕ ಗ್ರಹಿಸಿರುವುದು ಅನುಭಾವ ನೆಲೆಯಲ್ಲಾದರೆ ಈ ಕವಿತೆ ಸಾಮಾಜಿಕ ಮತ್ತು ರಾಜಕೀಯ ನೆಲೆಯಲ್ಲಿ ಗ್ರಹಿಸುತ್ತದೆ. ಅಲ್ಲಮನಂಥ ದೊಡ್ಡ ಅನುಭಾವಿಗಳನ್ನು ಈ ನೆಲೆಯಲ್ಲಿ ನೋಡುವುದು ಸವಾಲೇ ಸರಿ ಮಾತ್ರವಲ್ಲ ಈ ಕವಿತೆ ಕವಿಯ ಒಟ್ಟು ಕಾವ್ಯದ ಇಚ್ಚಿತ ಆಶಯವನ್ನು ಪೂರೈಸುತ್ತದೆ. ತನ್ನ ಆದಿಮ ಲೋಕಕ್ಕೂ ಅಲ್ಲಮನಿಗೂ ಸೇತುವೆಯಾಗಿ ಕೆಲಸಮಾಡುತ್ತದೆ. ಚರಿತ್ರೆ ಎನ್ನುವುದು ಕೇವಲ ಗತದ್ದು ಎಂಬ ನಂಬಿಕೆಯನ್ನು ಪ್ರಶ್ನಿಸುತ್ತದೆ. ಅಲ್ಲಮನಂತವರು ವರ್ತಮಾನದ ಬಯಕೆಗಳಿಗೆ ಉಸಿರಾಡುವುದು ಹೀಗೆ.
ಸಿಡಿಲೆಂಬ ಒಡಲೊಳಗೆ ಸೇರಿ ಕುಂತೀತು ಬಂದು ಬಿಡು
ಪ್ರಭುವೇ ಬದುವಾತುರದಲಿ ಬಯಲಿರದ ಬೇಲಿಯಿಂದ
ಬಯಲಲ್ಲಿ ಬಯಲಾಗೋಣ ಕಾಯುತ್ತಾ ನಿಂತಾರವರು
ಬಹುಕಾಲದಿಂದ ಎಂಬಂತೆ ಜೋಗಿ ಜಂಗಮರು ಸಿದ್ಧರು
ಮಾದಾರರು ಹೊಲೆಯರು ಹಿಂಡುಗಟ್ಟಿ ಕಹಳೆ ಕೊಂಬು
ಕೈಲಿಡಿದು ಮೊಳಗಿ ಇಳೆಗೆ ಇಂಬು ನೀಡಿ ಮಾತು
ಮಾತಿನ ನಡುವೆ ಎಂಥ ಕಂಪನ ಕದಳಿ ಬನದ ಹಣ್ಣು
ಕತ್ತಲ ಬೆಳಕಲಿ ಅಲ್ಲಿರಲಿ ಇದ್ದಂತೆಯೇ ಇರಲಿ
ಬಲೆಯ ಮುಂದಿನ ಬೆಂಕಿ ಜ್ವಾಲೆಯಲ್ಲಿ ಅವ್ವ
ಜೋಳದ ರೊಟ್ಟಿ ಬಡಿಯುತ್ತಾ ಬಡಿಯುತ್ತಾ ಚಕ್ರಾಕಾರ
ತಿದ್ದುತ್ತ ತಿದಿಯಾಗುತ್ತಾ ಒತ್ತೊಮ್ಮೆ ಬರುವ ಕಣ್ಣೀರು (ಪುಟ – 21-22 ಉಳಿರಂಪಿಗೆ)
ಹಂಪಣ್ಣನವರ ಕಾವ್ಯದ ಮತ್ತೊಂದು ನೆಲೆ ದಲಿತ ರಾಜಕಾರಣದ ಸೋಲು ವಿಫಲತೆಗಳನ್ನು ಎದುರಾಗುವುದು ಮತ್ತು ಪ್ರಶ್ನಿಸುವುದು. ದೀಪವಂಶದಿಂದ ಹೋದವರು ದೀಪದಿಂದ ತಾವು ಮಾತ್ರ ಬೆಳಕಿನಲ್ಲಿದ್ದು ಆದಿಮ ಲೋಕವನ್ನು ಕತ್ತಲಲ್ಲೇ ಬಿಡ್ಡಿರುವ ವಿದಾನವನ್ನು ಇವರ ಕಾವ್ಯ ರೂಪಕಾರ್ತಕವಾಗಿ ಹಿಡಿದಿಟ್ಟಿದೆ. ಬಹುಶ: ಎಂಬತ್ತರ ದಶಕದಲ್ಲಿ ಬಂದ ಈ ಬಗೆಯ ಕಾವ್ಯ ಸಾಮಾನ್ಯವಾಗಿ ಎದುರುವಗೊಂಡ್ಡಿದ್ದು ರಾಜಕಾರಣದ ಭ್ರಮನಿರಸನವನ್ನೇ ಅನಿಸುತ್ತದೆ. ಸಾಹಿತ್ಯ ಮತ್ತು ರಾಜಕಾರಣವನ್ನು ತಾತ್ವಿಕ ಆಯಾಮಗಳಲ್ಲಿ ಅದ್ವ್ಯೆತಗೊಳಿಸುವಾಗ ಶ್ರೀ ಸಾಮಾನ್ಯನನ್ನು ಎಲ್ಲಿರಸಬೇಕೆಂಬ ಪ್ರಶ್ನೆ ಅವರಿಗೆದುರಾಗಿ ಇವತ್ತಿಗೂ ದೃಢವಾಗಿ ನಿಲ್ಲಲಾರದೆ ಒದ್ದಾಡುವ ಪರಿ ಕಾಣಿಸುತ್ತಿದೆ. ಬಕಾಲ ಮುನಿ, ದಕ್ಕಾಲರ ಮೂಲಕ ದಲಿತಲೋಕವೊಂದನ್ನ ಹೊಸ ಬಗೆಯಲ್ಲಿ ಕಂಡುಕೊಂಡ ಸಿದ್ದಯ್ಯನವರು ಈಚಿನ ಗಲ್ಲೆಬಾನಿಯಲ್ಲಿ ಸಮಕಾಲೀನ ದಲಿತ ರಾಜಕಾರಣವನ್ನು ಸಂಪೂರ್ಣವಾಗಿ ಪ್ರಶ್ನಿಸುತ್ತಾರೆ ಶಿಕ್ಷಿತಲೋಕವೊಂದು ಸೃಷ್ಟಿಸಿರುವ ಎಡ-ಬಲಗಳನ್ನೂ ಸಿದ್ದಯ್ಯ ಎದುರುಗೊಂಡಂತೆ ಹಂಪಣ್ಣ ಕೂಡಾ ಎದುರಿಸಿದ್ದಾರೆ. ದಲಿತರಲ್ಲಿನ ಎಡ-ಬಲಗಳನ್ನು ತಮ್ಮ ಸ್ವಾರ್ಥಕ್ಕಾಗಿ ಸೃಷ್ಟಿಸಿದ ರಾಜಕಾರಣವು ಮೂಲ ಮಾನವತೆಯನ್ನು ಮರೆತಿದೆ. ಗ್ರಾಮ ದಲಿತ, ನಗರ ದಲಿತ ಜಗತ್ತುಗಳಾಗಿ ಸೃಷ್ಟಿಯಾಗಿದೆ. ಬುದ್ಧ ಅಂಬೇಡ್ಕರ್ರನ್ನು ಅವರು ನಂಬಿದ ನಿಲುವುಗಳಿಗೆ ತಾವು ನಡೆದುಕೊಳ್ಳದೇ ತಾವು ನಂಬಿದ ನಿಲುವುಗಳಿಗೆ ಅವರನ್ನು ಬಳಸಿಕೊಳ್ಳುತ್ತಿರುವ ಪರಿ ಪ್ರಸ್ತುತ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣದಲ್ಲಿ ಚಾಲ್ತಿಯಲ್ಲಿದೆ.
ಸಿದ್ಧರಾಮರ ಹುಡಿಕಿ ಹೋಗುವ ಗೋರಕ್ಷನಿಗೆ
ರಕ್ಷೆಯಾಗುವ ಬಯಕೆ ಇತ್ತೇ ಕೆದಕುತ್ತಾ ಉದ್ದೇಶ
ಸಾಫಲ್ಯ ಸಾರಲೆಂದು ಮಾನವಂತರಿವರು ನೇರ
ನುಡಿ ಬಸಿರಾಗಿಸಿ ಮನಗುದಿತ ಕಡಿಮೆಯಾಗಿಸಿ
ತಥಾಗತ ಬರುವಿಕೆಯತ್ತ ಅದೇ ಜಗತ್ತು. (ಪುಟ 64 – ದೀಪವಂಶ)
ಅವರು ಇವರಾಗಲಿಲ್ಲ ಇವರು ಅವರಾಗಲಿಲ್ಲ
ಚುಕ್ಕಿ ಬೆಳಕಾಗದೇ ಮರ ನೆರಳಗಲಿಲ್ಲ
ಇರುವ ಬರುವ ಯುಗಮಾನ ಬಂದಾಯ್ತು ತಲ್ಲಣ
ದಾರಿಯುದ್ಧ ನೆನೆದಂತೆ ನೆನೆಯುತ್ತಾ ಹೊರಟರೆ (ಪುಟ 65 – ದೀಪವಂಶ)
ಹಂಪಣ್ಣರ ಕಾವ್ಯ ಕೆಳವರ್ಗದ ವಚನಕಾರರನ್ನೂ ಮತ್ತು ಬುದ್ಧಲೋಕವನ್ನು ಏಕತ್ರಗೊಳಿಸಿ ಸಮಕಾಲೀನಗೊಳಿಸುವ ಪರಿ ಆಸಕ್ತಕರವಾಗಿದೆ. ಈ ಎರಡೂ ವಿಚಾರಗಳನ್ನು ಅವರು ಸಮಕಾಲೀನ ಸಾಂಸ್ಕೃತಿಕ ರಾಜಕಾರಣದಲ್ಲಿ ಗಭರ್ೀಕರಿಸಿ ಗ್ರಹಿಸುತ್ತಾರೆ. ಕೊನೆಗೆ ಕಾಲವೆನ್ನುವುದು ಮಹಾಪುರುಷರನ್ನು ನೆನೆಯುವ ಬೇರುಗಳು ಕೊಳೆತುಹೋಗಿವೆ. ಎಂಬುದು ಅವರ ಕಾವ್ಯ ನಂಬಿದಂತಿದೆ. ಅವರು ಸಿಟ್ಟಾಗುವುದು ಇವತ್ತಿನ ರಾಜಕಾರಣವನ್ನು ಕುರಿತು. ಹೋರಾಟಗಳು ನಮಗೆ ಏನನ್ನು ಕಲಿಸಬೇಕು ಎಂಬ ಪ್ರಶ್ನೆಯನ್ನು ಎದುರುಗೊಂಡು ಆ ಹೋರಾಟದ ಉದ್ದೇಶಗಳು ಈಡೇರಿದರೆ ಸಾಕೇ? ಅದರ ಹಿಂದಿನ ಮಾನವತ್ವವನ್ನು ನೆಲೆಗೊಳಿಸಬೇಡವೇ? ಎಂಬ ಸಂಗತಿಗಳು ಮುಖ್ಯವಾಗುತ್ತವೆ. ವ್ಯಕ್ತಿಯ ಆದರ್ಶಗಳು ವಾಸ್ತವ ಪ್ರಜ್ಞೆಯನ್ನು ಏನು ಮಾಡುತ್ತಿವೆ. ಆದರ್ಶ ಮತ್ತು ಪ್ರಾಮಾಣಿಕತೆಗಳನ್ನು ಇಂದಿನ ಕೆಳವರ್ಗದ ರಾಜಕಾರಣ ಹೇಗೆ ಗ್ರಹಿಸುತ್ತದೆ ಎಂಬ ಪ್ರಶ್ನೆಗಳನ್ನೆಲ್ಲಾ ಇವರ ಕಾವ್ಯ ಕೇಳಿಕೊಂಡಿದೆ. ಕೆಲವು ಬಾರಿ ಎಲ್ಲರೂ ತಾವು ಪ್ರಾರಂಭದಲ್ಲಿ ನಂಬಿದ ಮೌಲ್ಯಗಳನ್ನು ಮರೆತು ಬಿಟ್ಟಿರುವುದನ್ನು ಆತ್ಮಾವಲೋಕನದ ಕಕ್ಷೆಯಲ್ಲಿ ಬಂದಿವೆ, ಎಷ್ಡರಮಟ್ಟಿಗೆಂದರೆ
ಎದ್ದೆದ್ದು ಮುಂದೆ ಬಂದವರು
ವಿಷಯ ಲಂಪಟರಾಗಿ ಅಧಿಕಾರದ ಅಧಿಕ ಗತ್ತು
ರೂಢಿಸಿ ಹಿಂದೆ ಬಿದ್ದವರೇ ಝಾಡಿಸಿ ಹೊಡೆಯುತ್ತಾ
ಮತ್ತೆ ಮತ್ತೆ ನಾಗಾಲೋಟದತ್ತ
ಯಾರದೋ ಮನೆಯ ಪಂಜು ನಿಗಿ ನಿಗಿ
ನಿರಾಳವೆನಿಸುತ್ತಲ್ಲ
ಜೀತಜಾಲದ ತಿಳಿಗೊಳ (ಪುಟ 51 – ಉಳಿರಂಪಿಗೆ)
ನೈತಿಕತೆಯ ಸೋಗಲಾಡಿತನ ಅನೈತಿಕತೆಯ ಪರದಾಟ
ಪರಿ ಪರಿ ತೊಳಲಾಟ ಕತ್ತಲು ಬೆಳಕುಗಳ ಅಂತರವಿಲ್ಲದಾಟ
ಬಂದವರು ಬಂದರು ಕೈ ಕುಲುಕಿದರು ಹಲ್ಲು ಬಿಟ್ಟು ನಕ್ಕರು
ಅಂತರಾಳವ ತೆರೆಯದಾದರೂ ಶ್ವೇತವಸ್ತ್ರವ ಕಲಕಲಾರದೆ (ಪುಟ 70 – ಉಳಿರಂಪಿಗೆ)
ಈ ಬಗೆಯ ಸಾಲುಗಳು ಕೇವಲ ದಲಿತ ರಾಜಕಾರಣಕ್ಕೆ ಮಾತ್ರವಲ್ಲ ಎಲ್ಲಾ ಬಗೆಯ ರಾಜಕಾರಣಕ್ಕೂ ಸಾಕ್ಷಿಯಾಗುತ್ತಿದೆ. ಸಿದ್ಧಾಂತಗಳನ್ನು ಯಾವ ಬೆಗೆಯಲ್ಲಿ ಎಲ್ಲಿ ರೂಢಿಗೆ ತರುತ್ತಾರೆ ಎಂಬುದು ಮುಖ್ಯವಾದ ವಿಚಾರವೇ. ಇವರ ಮಧ್ಯೆ ಬೇರೆಯವರು ಬೇಯುತ್ತಲೇ ಇದ್ದಾರೆ. ಹಂಪಣ್ಣನವರ ಕಾವ್ಯ ಎಗ್ಗಿಲ್ಲದೆ ಇವುಗಳನ್ನು ಎದುರುಗೊಂಡಿದೆ. ಕಾವ್ಯಗುಣದ ಮಾತಿಗೆ ಬಂದರೆ ಆಗಲೇ ಹೇಳಿದಂತೆ ಅವರು ನಾಲ್ಕು ಸಾಲಿನ ನುಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಕು. ಆ ಬಗೆಯ ಪದ್ಯಗಳಲ್ಲಿ ನಾವು ಗಟ್ಟಿಯಾದ ಕಾವ್ಯದನಿಯನ್ನು ಕ್ವಚತ್ತಾಗಿ ಕೇಳಬಹುದು. ಆದರೆ ಉಳಿದ ಕವಿತೆಗಳು ಸಾಕಷ್ಟು ಯಶಸ್ಸು ಪಡೆದಿವೆ. ಅಲ್ಲಮ, ತಥಾಗತನ ಬಗ್ಗೆ, ಅವ್ವ ಮುಂತಾದವರ ಕುರಿತು ಕವಿತೆಗಳು ವಾಚ್ಯದಿಂದ ದೂರಾಗಿ ರೂಪಕವಾಗಿ ಕಾಣಿಸಿಕೊಂಡಿವೆ. ಬಂಢಾಯದ ಲಯ ಅಂದರೆ ಯಾರನ್ನು ಗುರಿಯಾಗಿಸಿಕೊಂಡು ಪ್ರತಿಭಟಿಸುವ ಗುಣವಿರುತ್ತದೋ ಆ ಬಗೆಯ ಕವಿತೆಗಳು ವಾಚ್ಯವನ್ನೇ ಹೆಚ್ಚು ನಂಬಿಕೊಳ್ಳಬೇಕಾಗುತ್ತದೆ. ಇದು ಸಾಮಾನ್ಯವೂ ಕೂಡಾ. ಆದರೆ ಹಂಪಣ್ಣನವರ ಕಾವ್ಯ ಇದರಿಂದ ಪಾರಾಗಿ ಇನ್ನೂ ಮುಂದುವರೆಯುವ ಆಸಕ್ತಿ ತೋರಿಸಿದೆ.








ನಿಮ್ಮ ವಿಶ್ಲೇಷಣೆಗಳು ಒಂದಕ್ಕಿಂತ ಒಂದು ಚಲೋ ಬರ್ತಿವೆ ಸರ್,