ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮ್ಮ ಮನೆಯಲ್ಲೇ ಅನಾಥರಾದವರು..

ತಮ್ಮ ಮನೆಯಲ್ಲೇ ಅನಾಥರಾದವರು

ಕಾಡ ಜೊತೆ ಉಸಿರ ಹಂಚಿಕೊಂಡವರು

……………………………..

ದಿಡ್ಡಳ್ಳಿ ಆದಿವಾಸಿಗಳ ಹೋರಾಟ ಆದಿವಾಸಿಗಳ ಸ್ಥಿತಿಗತಿ ಮತ್ತು ವಾಸ್ತವ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಗಮನಹರಿಸುವಂತೆ ಮಾಡಿದೆ. ಧ್ವನಿ ಇಲ್ಲದ ಮುಗ್ಧ ಮಂದಿಗೆ ಧ್ವನಿಯಾದವರು ಸರ್ಕಾರಕ್ಕೆ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಸಿಕೊಟ್ಟಿದ್ದಾರೆ.

ದಿಡ್ಡಳ್ಳಿಯ ಈ ಘಟನೆ ಆದಿವಾಸಿಗಳ ಹೆಪ್ಪುಗಟ್ಟಿದ ನೋವು, ವಾಸ್ತವ ಪರಿಸ್ಥಿತಿ, ಮುಗ್ಧ ಜೀವಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳದೆ ರೂಪಿತವಾದ , ರೂಪಿತವಾಗುತ್ತಿರುವ ಅರ್ಥಹೀನ ಯೋಜನೆಗಳ ಅವಲೋಕನದ ಅಗತ್ಯತೆಯನ್ನು ಮತ್ತೆ ನೆನಪಿಸುತ್ತಿದೆ.

ಹೆಗ್ಗಡದೇವನಕೋಟೆಯಲ್ಲಿನ ಪಯಣ

ಆದಿವಾಸಿಗಳ ಜೊತೆ ಮಾತು ಮಂಥನ

ಮೂರು ವರುಷಗಳ ಹಿಂದೆ ಹೆಗ್ಗಡದೇವನಕೋಟೆಯ ನಿರಾಶ್ರಿತ ಜೇನುಕುರುಬರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮೈಸೂರಿನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಶಿಳ್ಳನಕಟ್ಟೆ ಪುಟ್ಟ ಗ್ರಾಮಕ್ಕೆ ಪಯಣ ಬೆಳೆಸಿತ್ತು ನಮ್ಮ ತಂಡ. ಸಂಜೆ ತಲುಪಿದಾಗ ಎಲ್ಲವು ಇದ್ದು ಅನಾಥರನ್ನಾಗಿ ಮಾಡಿದಂತೆ ಕಾಣುತ್ತಿದ್ದ ಜೇನುಕುರುಬರ ಗುಡಿಸಲ ಕಂಡಾಗ ಅಭಿವೃದ್ಧಿಪಥದಲ್ಲಿ ನಾವಿಟ್ಟ ಹೆಜ್ಜೆಯನ್ನು ನಾವೇ ಅಣಕ ಮಾಡುವಂತೆ ಭಾಸವಾಯಿತು. ಆರೋಗ್ಯವಿಲ್ಲದ ಪರಿಸರ, ಕನಸುಗಳಿಲ್ಲದ ಕಣ್ಣುಗಳು ನಮ್ಮನ್ನು ಎದುರುಗೊಂಡವು. ಚಿಂದಿಬಟ್ಟೆಯನ್ನು ಹಾಕಿದ ಆ ಹಿರಿಜೀವದ ಅಂಗಿಯಲ್ಲಿ ಇನ್ನು ಹರಿಯಲು ಜಾಗವೇ ಇರಲಿಲ್ಲ.

ಒಬ್ಬೊಬ್ಬರನ್ನೇ ಮಾತಿಗೆಳೆಯಲು ಆರಂಭಿಸಿದೆ. ಕತ್ತಲ ಸರಿಸಲು ಹಾಕಿದ್ದ ಬೆಂಕಿ ಉರಿಯುತ್ತಿತ್ತು. ಎಣ್ಣೆ ಹಾಕದ ಕೂದಲು ಬೀಸೋ ಗಾಳಿಗೆ ಚೂರು ಹಾರುತ್ತಿತ್ತು. ಮಕ್ಕಳು ಹೆಂಗಸರು, ವಯಸ್ಸಾದವರು ಎಲ್ಲರು ಅಲ್ಲಿದ್ದರು. ರಾತ್ರಿ ಊಟಕ್ಕೆ ರಾಗಿ ಮುದ್ದೆ, ಜೊತೆಗೆ ಬೇಯಿಸಿದ ಟೊಮ್ಯಾಟೋ, ಮೆಣಸು …

ಹಸಿದ ಹೊಟ್ಟೆಗಳಿಗೆ  ಇಷ್ಟಿದ್ದರೆ ಸಾಕಿತ್ತು. ನಾಳೆಯ ಬಗ್ಗೆ ಕನಸುಗಳಿಲ್ಲ, ಹಾಗೆಂದು ಬೇರೆಯರ ಬಗ್ಗೆ ಕೆಟ್ಟ ಮಾತುಗಳಿಲ್ಲ, ಅಲ್ಲಿ ಕಂಡಿದ್ದು ಮುಗ್ಧತೆ ಅಷ್ಟೇ.

ಬಯಲೇ ಹಾಸಿಗೆ, ಮೇಲೆ ಆಕಾಶ. ನಿದ್ದೆಗೆ ಜಾರುವ ಸಮಯ . ಅಲ್ಲಿದ್ದ ದೇವಮ್ಮನನ್ನು ಕೇಳಿದೆ. ಹಾವು , ಚೇಳು ಕಚ್ಚಿದ್ರೆ ಹೇಗೆ?

ಹಣೇಲಿ ಬರೆದ್ರೆ ಏನು ಮಾಡಕಾಗುತ್ತೆ? ಅಂತ ಆ ಹಿರಿಜೀವ ಹೇಳಿತು. ನಿಜ ಈ ಮುಗ್ಧತೆಯನ್ನೇ ಬಂಡವಾಳವನ್ನಾಗಿಸಿ ಈ ಹಣೆಬರಹವನ್ನು ಬರೆಯುತ್ತಿರುವುದು ನಮ್ಮ ವ್ಯವಸ್ಥೆಯಲ್ಲವೇ? ಕಾಡಿನೊಳಗೆ ಹಾಡಿಯಲ್ಲಿದ್ದ ಈ ಮುಗ್ಧ ಜೀವಿಗಳನ್ನು ಬೀದಿಗೆ ತಂದು ಇಷ್ಟವಿಲ್ಲದ ಜೀವನಕ್ಕೆ ತಳ್ಳಿ, ಕೊಡಬೇಕಾದ ಸೌಲಭ್ಯವನ್ನು ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ನಿಗಾ ಇರಿಸೋರ್ಯಾರು?

ಇಂತಹ ಯೋಚನಯ ಸುಳಿಯ ಗುಹೆಯೊಳಗೆ ಕಳೆದುಹೋದ ಹಾಗಾಯಿತು. ಆಗಲೇ ನಿದ್ದೆ ಮಂಪರು ಹತ್ತಿತ್ತು.

ಮತ್ತೊಂದು ಮುಂಜಾನೆ. ಮತ್ತೊಂದು ದಿನ ತಳ್ಳುವ ಸವಾಲು. ಹಿಂದಿನ ದಿನದ ರಾಗಿ ಮುದ್ದೆಯನ್ನೇ ಮಕ್ಕಳಿಗೆ ನೀರ ಜೊತೆ ಕೊಟ್ಟು ಜೇನುಕುರುಬರು ಕೆಲಸಕ್ಕೆ ಹೋಗಲು ತಯಾರಾಗುತ್ತಿದ್ರು. ಮಧ್ಯಾಹ್ನ ಮಕ್ಕಳು ಹಸಿದ ಹೊಟ್ಟೆಯಿಂದಲೇ ಇರಬೇಕು.

ಹಾಗಾಗಿ ಅಪೌಷ್ಟಿಕತೆ ಸಾಮಾನ್ಯ. ಹೀಗಾಗಿ ಮಕ್ಕಳ ಸಾವು ಕೂಡ ಸಂಭವಿಸಿದೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಸತೀಶ್ ಆರಾಧ್ಯ ತಿಳಿಸಿದ್ರು. ಮಾನೇಮೂಲೇಹಾಡಿಯಲ್ಲಿ ಕಂದಮ್ಮ ಒಂದು ಸಾವನ್ನಪ್ಪಿದ್ದ ಘಟನೆಯನ್ನು ವಿವರಿಸಿದ್ರು. ಹಾಗಂತ ಜೇನುಕುರುಬರಿಗಾಗಿ ಯೋಜನೆಯಿಲ್ಲವೆಂದಲ್ಲ. ಜೇನುಕುರುಬರ ಯೋಜನೆಯಡಿ ತಿಂಗಳಿಗೆ 15 ಕೆಜಿ ರಾಗಿ, ಬೆಲ್ಲ, ಮೊಟ್ಚೆ ಕೊಡಬೇಕೆಂದು ಇದೆ. ಆದರೆ ಇವರನ್ನು ಗುರುತಿಸುವ ಪ್ರಕ್ರಿಯೆಯೇ ಆರಂಭವಾಗಿಲ್ಲ, ಇವರಿಗಾಗಿ ಮೀಸಲಿಡುವ ಕೋಟಿ ಕೋಟಿ ಹಣ ಅದ್ಯಾವ ಅಧಿಕಾರಿಗಳ ಬಂಗಲೆಗಾಗಿ ಖರ್ಚಾಗಿದೆಯೋ? ಯಾವ ಹೊಸ ಕಾರು ಮನೆ ಸೇರಿದೆಯೋ ಕೇಳೋರ್ಯಾರು ?

ಸಂಶೋಧಕ ಕ್ಷೀರಸಾಗರ 1990 ರ ವೇಳೆ ನಡೆದ ದಾರುಣ ಘಟನೆ ನೆನಪಿಸಿದ್ರು. ಹಸಿವಿನಿಂದ 8 ಮಕ್ಕಳು ಸತ್ತ ವಿಷಯ ಪಾರ್ಲಿಮೆಂಟ್ ನಲ್ಲಿ ಚರ್ಚೆಯಾದ ಬಗೆ ಅದರ ತೀವ್ರತೆಯನ್ನು ನೆನಪುಮಾಡಿಕೊಂಡರು.ಹಾಗಂತ ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿ ಉಳಿಯಲಿಲ್ಲ. ಎಚ್ಚರಿಕೆ ವಹಿಸಿದ್ದರೆ ನಮ್ಮ ಕಣ್ಣಿಗೆ ಬೀಳುವ ದೃಶ್ಯಗಳು ಜೀವಂತವಾಗಿರುತ್ತಿರಲಿಲ್ಲ. ಅಥವಾ ಹಾಲನ್ನೇ ಕಾಣದ ಮಕ್ಕಳ ಮುಖಗಳು ನಮಗೆ ಕಾಣಸಿಗುತ್ತಿರಲಿಲ್ಲ. ಹಾಗೇ ಅಲ್ಲಿದ್ದ ತಾಯಿಯನ್ನು ಮಾತಾಡಿಸಿದೆ.

ಲಕ್ಷ್ಮಿ  ಅವರನ್ನು ಮಾತಿಗೆಳೆದೆ

ನಿಮ್ಮ ಮಕ್ಕಳ ಬಗ್ಗೆ ಕನಸುಗಳಿಲ್ವಾ?

ಕನಸುಗಳಿದೆ .ಆದರೆ ಏನು ಮಾಡೋಕಾಗುತ್ತೆ?

ನಿಮ್ಮ ಮಗುವಿಗು ಹಾಲು ಕೊಡಬೇಕೆಂದು ಅನ್ನಿಸಲ್ವಾ?

ಅನ್ನಿಸುತ್ತೆ ಆದ್ರೆ ದುಡ್ಡಿಲ್ಲ.

ಮಧ್ಯಾಹ್ನ ಮಕ್ಕಳು ಹಸಿದ ಹೊಟ್ಟೆಯೊಂದಿಗೆ ಇರಬೇಕಾ?

ಇನ್ನೇನು ಮಾಡೋಕಾಗುತ್ತೆ? ರಾತ್ರಿವರೆಗು ಉಪವಾಸವೇ ಇರಬೇಕು.

ಅಷ್ಟರಲಿ ಬಟ್ಟಲಲ್ಲಿ ನೀರು ಕುಡಿವ ಮುಗ್ಧ ಕಂದಮ್ಮನ ಮುಖ ನನ್ನಲ್ಲಿ ಪಾಪಪ್ರಜ್ಞೆಯನ್ನು ಹುಟ್ಟುಹಾಕುವ ಮುಗ್ಧತೆಯನ್ನು ಪ್ರತಿಫಲಿಸುವಂತಿತ್ತು.

ಕಾಕನಕೋಟೆಯಲ್ಲಿ ಕಾಡಿದ ಮುಖಗಳು

ಶಿಳ್ಳನಕಟ್ಟೆಯಿಂದ ನಮ್ಮ ತಂಡದ ಪಯಣ ಸಾಗಿದ್ದು ಕಾಕನಕೋಟೆ ಕಡೆಗೆ. ಕಾಕನಕೋಟೆಯ ಒಳಗೆ ಹಾಡಿಯಲ್ಲಿದ್ದ ಯಜಮಾನ ಮಾಸ್ತಿ ಮುಖದಲ್ಲೊಂದು ಮುಗ್ಧ ನಗು. ಜೊತೆಗೆ ಕಾಡಿನ ಹೊರಗಿರುವ ವೇದನೆ. ಭಾವನೆಗಳನ್ನು ಅರ್ಥಮಾಡಿಕೊಳ್ಳದ ವ್ಯವಸ್ಥೆಯ ಬಗ್ಗೆ ನೋವು. ಹಳೆಯ ದಿನಗಳನ್ನು ಮೆಲುಕುಹಾಕಿ ಎಂತಹ ಚೆನ್ನಾಗಿತ್ತು ಆ ದಿನಗಳು ಎನ್ನೋವಾಗ ಕಣ್ಣಲ್ಲೇನು ಹೊಳಪು. ಆ ಹೊಳಪನ್ನು ಎಸಿ ರೂಮಿನಲ್ಲಿ ಕುಳಿತು ತಯಾರಿಸಿದ ಯೋಜನೆಗಳು ಮಾಸುವಂತೆ ಮಾಡಿರೋದಂತು ಸತ್ಯ.

ಅಷ್ಟರಲ್ಲಿ ಅರಳು ಹುರಿದಂತೆ ಮಾತಾಡುವ ಪುಟ್ಟಮ್ಮ ಮಾತಿನ ಧಾಟಿಗೆ ಬೆಚ್ಚಿ ಬಿದ್ದಿದ್ದೆ. ಕಾಡಿನೊಳಗಿರೋ ನಮ್ಮನ್ನೇ ಪ್ರಶ್ನಿಸುತ್ತಾರೆ. ಹೊರದಬ್ಬುತ್ತಾರೆ. ಕಾಡನ್ನು ನಾವು ರಕ್ಷಿಸುತ್ತೇವೆ. ನಮ್ಮನ್ನೇ ದೂರ ಮಾಡಿ ಕಾಡು ಲೂಟಿ ಮಾಡೋಕೆ ಹೊರಟಿದ್ದಾರೆ, ಅಧಿಕಾರಿಗಳನ್ನು ಪುಟ್ಟಮ್ಮ ತರಾಟೆಗೆ ತೆಗೆದುಕೊಳ್ಳುತ್ತಿದ್ದ ರೀತಿ ಆತ್ಮ ಮುಟ್ಟಿಕೊಳ್ಳುವ ಹಾಗಿತ್ತು.

ಆದಿವಾಸಿಗಳನ್ನು ನಮ್ಮ ವ್ಯವಸ್ಥೆ ನೋಡಿದ ದೃಷ್ಟಿಕೋನವೇ ಸರಿಯಿಲ್ಲ, 1972 ರಲ್ಲಿ ಜಾರಿಗೆ ತಂದ ಅರಣ್ಯ ಸಂರಕ್ಷಣೆ ಕಾಯಿದೆಯಿರಬಹುದು, ಕಬಿನಿ ಡ್ಯಾಮ್ ಗಾಗಿ 119 ಹಾಡಿಗಳಲ್ಲಿ 16 ಹಾಡಿ ಹೊರತುಪಡಿಸಿ ಉಳಿದ ಹಾಡಿಗಳ ಆದಿವಾಸಿಗಳನ್ನು ಹೊರಗೆ ಹಾಕಲಾಯಿತು. ಆದ್ರೆ ಉದ್ಯೋಗ, ಮನೆ, ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲೇ ಇಲ್ಲ. ಪರಿಣಾಮ ಇನ್ನು ಒಕ್ಕಲೆಬ್ಬಿಸಿದ ಕುಟುಂಬಗಳ ಬದುಕು ಅಸ್ಥಿರತೆಯೆಡೆಗೆ ಸಾಗಿದೆ. ಸಮಸ್ಯೆಯ ಧ್ವನಿ ಸ್ವಲ್ಪ ಗಟ್ಟಿಗೊಂಡಾಗ ಏನೋ ಮಾಡುವ ಭರವಸೆ ಕೇಳಿಬರುತ್ತದೆ ಮತ್ತೆ ಮೆಲ್ಲನೆ ನಿಧಾನವಾಗಿ ಮಾಯವಾಗುತ್ತದೆ.

ಆದಿವಾಸಿಗಳ ಸಮಸ್ಯೆಗೆ ಪರಿಹಾರ ಶಾಶ್ವತವಾಗಬೇಕಾದ್ರೆ ಅವರ ಮಧ್ಯೆ ಇದ್ದು ಕೆಲಸ ಮಾಡುವ ಅಧಿಕಾರಿ ವರ್ಗವಿರಬೇಕು. ಮಧ್ಯೆ ಅವರಿಗಾಗಿ ತುಡಿಯುವ ಜನಪ್ರತಿನಿಧಿಗಳು ಬೇಕು. .

ಇಲ್ಲವಾದರೆ ಈ ನೋವಿನ ಕಥೆಗೆ ಕೊನೆಯೆಂಬುದಿಲ್ಲ. ತಮ್ಮ ಮನೆಯಲ್ಲೇ ಅನಾಥರಾದವರ ಅಳಲು ನಿಲ್ಲುವುದೇ ಇಲ್ಲ.

 

ಮುಂದಿನ ವಾರ ಮತ್ತೊಂದು ಕವರೇಜ್ ನ ನೆನಪಿನೊಂದಿಗೆ ವಾಪಾಸಾಗುವೆ.

ಜ್ಯೋತಿ ಇರ್ವತ್ತೂರು

‍ಲೇಖಕರು Admin

26 December, 2016

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Gayatri Badiger, Dharwad

    mam super.. thank you..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading