ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮಿಳ್ಗನ್ನಡ ಬೆಸೆದ ನಲ್ಲತಂಬಿಯವರು…

ಸುಧಾ ಚಿದಾನಂದಗೌಡ

ಅರ್ಧನಾರೀಶ್ವರ ಥಿಯರಿಗೂ ಕಾಫಿ ಸ್ವಾದಕ್ಕೂ ಎಲ್ಲಿಂದೆಲ್ಲಿಯ ನಂಟು?!

ಈ ಸ್ವಾರಸ್ಯದ ಪ್ರಶ್ನೆ ಉದ್ಭವಗೊಳ್ಳುವುದು ನಲ್ಲತಂಬಿಯವರ ಎರಡು ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಮರು ಓದಲು ಆರಂಭಿಸಿದಾಗ. ಕಾಫಿ ಪರಿಸರವನ್ನು ಸೃಷ್ಟಿಸುವ ಸಂದರ್ಭವೂ ವಿಶಿಷ್ಟವೇ. ಆಧುನಿಕ ಬದುಕಿನ ಸ್ಥಿತ್ಯಂತರಗಳಲ್ಲಿ ಒಂದಾದ, ನಮ್ಮ ಅಡುಗೆ ಮನೆಯನ್ನು ಪರ್ಯಾಯದಂತೆ ಆಕ್ರಮಿಸಿಕೊಂಡಿರುವ ಹೋಟೆಲ್, ಪಾರಂಪರಿಕ ಸೊಗಡು, ಘಮ ಇತ್ಯಾದಿ ಕಿರೀಟಗಳನ್ನು ಹೊತ್ತುಕೊಂಡ ಕಾಫಿಯೆಂಬ ಪೇಯ ಇವೆರಡರ ನಡುವಿನ ಮಾನವಿಯ ಸಂಬಂಧಗಳು, ಅವುಗಳನ್ನು ಚಿತ್ರಿಸಿ ಓದುಗರಿಗೆ ದಾಟಿಸಬೇಕಾದ ತಾಂತ್ರಿಕತೆ ಇವೆಲ್ಲವುಗಳ ಕುರಿತು ಕೃತಕವಾಗಿ ಹೆಚ್ಚು ಯೋಚಿಸಿದಂತಿಲ್ಲ ನಲ್ಲತಂಬಿಯವರು.

ಗುಡಿಸಲಲ್ಲಿ ಕುಳಿತಿರುವಾಗ ಬಂದ ಮಳೆಗೆ ಆಸರೆಯಾಗಿ ದೊರಕಿದ ಹೂಬಳ್ಳಿ ಹಬ್ಬಿದ ಹಂದರದಂತೆ ಅವರು ಕೋಶಿಸ್ ನ್ನು ಆಯ್ದುಕೊಂಡಿದ್ದಾರೆ. ಅಲ್ಲಿ ಕಾಫಿ ಕುಡಿಯುವುದು ಮನೆಯೆಂಬ ಅಡುಗೆ ಮನೆಯನ್ನು ಇನ್ನೊಂದು ಆಪ್ತ ಸ್ಥಳಕ್ಕೆ ಸ್ಥಳಾಂತರಿಸಿಕೊಂಡು, ಲೋಕದೊಂದಿಗೆ ಹಸಿವು ಹಂಚಿಕೊಳ್ಳುತ್ತಾ ಬಿಸಿಯೊಂದನ್ನು ಮನಸಿಗೆ ತಾಕಿಸಿಕೊಳ್ಳಲು ಇನ್ನೊಂದು ಜಾಗವನ್ನು ಆರಿಸಿಕೊಂಡಂತಿದೆ.

ಇಷ್ಟಕ್ಕೂ ಕಾಫಿ ಕುಡಿಯಲು ಮಾತ್ರವೇ ಪ್ರಶಸ್ತವಾದ ಆರಿಸಿಕೊಂಡಿದ್ದೇ ನಿಜವಾದರೆ ಅದು ಮನೆಯೇ ಆಗತಕ್ಕದ್ದು, ಅಲ್ಲವೇ?! ಅಲ್ಲಿ ಮನಸಿಗೆ ಬೇಕಾದದ್ದೊಂದು ಆಪ್ತ ಸ್ಪರ್ಷಬೆರೆತ ಬಿಸಿಕಾಫಿ ದೊರಕುತ್ತದೆ. ಆದರೆ ಮನಸಿಗಿರುವ ಹೆಚ್ಚುವರಿ ಆಸೆಗಳೇ ಬೇರೆ. ಯಾರೋ ಮಾಡಿದ ಕಾಫೀ, ಹಂಚಿಕೊಳ್ಳಲು ಯಾರೋ ಕುಳಿತಿರುವ ಎದುರುಗಡೆ ಕುರ್ಚಿ, ಏನೋ ಮಾತುಕತೆಯಾಗಲಿದೆಯೆಂಬ ನಿರೀಕ್ಷೆ ಇವೆಲ್ಲ ಸೇರಿಯಲ್ಲವೇ ವಿಭಿನ್ನ ರೀತಿಯ ಕಾಫಿಯಾಗತಕ್ಕದ್ದು?!

ಇಲ್ಲಿ ಮನೆಯೆಂಬ ನೆಮ್ಮದಿಯ ಸೂರಿನ ವಾತಾವರಣಕ್ಕಿಂತ ಅತ್ಯಂತ ಖಾಸಗಿಯಾದ, ಜತನದಿಂದ ತನ್ನಷ್ಟಕ್ಕೆ ತಾನು ಮಾತ್ರ ರಕ್ಷಿಸಿಟ್ಟುಕೊಂಡಿರುವ, ಲೋಕಕ್ಕೆ ತಿಳಿಯುವುದಾದರೂ ಏಕೆಂಬ ಸ್ವಂತದ ಸಂಗತಿಗಳು ಕಾದಿರುತ್ತವೆ. ಅಲ್ಲಿ ಕಾತರ, ಹುಮ್ಮಸ್ಸು, ಏನಾಗುವುದೋ ಎಂಬ ದುಗುಡ ಇದೆಲ್ಲದರೊಂದಿಗೆ ನೆಮ್ಮದಿ ಇರಲೂಬಹುದು, ಇಲ್ಲದೆಯೂ ಇರಬಹುದು. ಇಡೀ ಜೀವಮಾನದಲ್ಲಿ ನಾನು ಜೀವಿಸಿದ್ದ ಗಳಿಗೆ ಅದು ಮಾತ್ರ ಎನಿಸುವ ಪ್ರೇಮಮಯ ನಿಮಿಷಗಳನ್ನು ದಯಪಾಲಿಸಿದ ಅವಳು ಅಥವಾ ಅವನು ಆ ಕಾಫಿಯೊಂದಿಗೆ ಸಿಗುತ್ತಾನೆ/ಳೆ ಮತ್ತು ಕಳೆದುಹೋಗಿಯೂ ಇರುತ್ತಾನೆ/ಳೆ. ಅದು ಏನು ಬೇಕಾದರೂ ಆಗಬಲ್ಲ ಆತಂಕದ ಸಮಯವೂ ಹೌದು.

ಹೀಗೆಲ್ಲಾ ಇದ್ದರೂ ಕಾಫಿ ಟೇಬಲ್ ನ ಮೇಲೆ ಅಕಸ್ಮಾತ್ ಸಿಕ್ಕಿಬಿಡುವ ಸತ್ಯಗಳು ಕಹಿಯೋ ಸಿಹಿಯೋ ಸತ್ಯಗಳಂತೂ ಹದು, ಅದಕ್ಕಾಗಿಯೇ ಅವುಗಳು ಮುಖ್ಯ. ತನಗೆ ಬೇಡವಾದ ಸತ್ಯ ಅಲ್ಲಿ ಸಿಕ್ಕಿತೆಂದರೆ ಅದನ್ನು ಬೇಡವೆನ್ನಲಾದೀತೇ? ಅದು ಸತ್ಯ. ಅದನ್ನು ಗೌರವದಿಂದ, ಸೌಜನ್ಯದಿಂದ ಕಾಣಲೇಬೇಕು. ತನಗೆ ದುಃಖವೋ, ಅಸಹ್ಯವೋ, ವೈರಾಗ್ಯವೋ ಉಂಟಾಗಿರಬಹುದು. ಆದರೆ ಕೊನೆಗೂ ಆ ಸತ್ಯ ದೊರಕಿದಾಗಲೇ ಬದುಕು ಸ್ಪಷ್ಟವಾಗುವುದು, ಮುಂದಿನ ದಾರಿಯೊಂದು ಗೋಚರಿಸುವುದು.

ಸೋಲೋ ಗೆಲುವೋ, ಹಣ್ಣೋ ಕಾಯೋ, ಸಿಹಿಯೋ ಕಹಿಯೋ ಏನಾದರೇನು ಸತ್ಯವೇ ಅಂತಿಮ. ವಿರಾಗಿಯಾಗುವಿಯೋ, ವಿರಹಿಯಾಗುವೆಯೋ ಇಲ್ಲಾ ಪ್ರೇಮಸಾಫಲ್ಯ ಪಡೆದು ಸಂಸಾರಿಯಾಗುವೆಯೋ, ಅದೆಲ್ಲವನ್ನೂ ಮೀರಿ ದಕ್ಕಿದ ಪ್ರೇಮ ನಿನಗೇ ಬೇಡವೆನಿಸಿ ಮೈಕೊಡಹಿ ಬೇರೆಯದೇ ದಾರಿಯಲ್ಲಿ ಸಾಗುವೆಯೋ ಎಲ್ಲವೂ ಆ ಸತ್ಯದ ಮೇಲೆಯೇ ಅವಲಂಬಿತ. ತನ್ನ ಸ್ವಂತದ ನಿರ್ಧಾರವೂ ಸತ್ಯವನ್ನು ಆಧರಿಸಿಯೇ ಮನಸಿನಲ್ಲಿ ರೂಪುಗೊಳ್ಳುವುದು. ಇವೆಲ್ಲ ಕಾರಣಕ್ಕಾಗಿ ಮನೆಯ ದಿನಬೆಳಗಿನ ಕಾಫಿಗಿಂತ ಸಂಜೆಯ ಈ ಕಾಫಿ ಟೇಬಲ್ ಹೆಚ್ಚು ಸ್ವಂತ, ಆಪ್ತ ಮತ್ತು ಸ್ವಾರಸ್ಯಪೂರ್ಣ ಕೂಡಾ.

ಹೆಣ್ಣುಗಂಡಿನ ಭಾವನೆಗಳು, ಸಾಂಗತ್ಯದ ಟಿಸಿಲುಗಳು, ಅವಳನ್ನು ನಂಬಿ ಅವನೋ, ಅವನನ್ನು ನಂಬಿ ಅವಳೋ ಅವಲಂಬಿಸಿ ತೆಗೆದುಕೊಳ್ಳುವ ನಿರ್ಧಾರಗಳು- ಅದೊಂದು ಬೇರೆಯದೇ ಮುಖ. ಇವೆಲ್ಲವನ್ನೂ ಹೊರತುಪಡಿಸಿ ಶುದ್ಧ ಸ್ನೇಹದ ಅಮೃತಗಳಿಗೆಗಳನ್ನೂ ಸಹಾ ಕಾಫಿ ಮತ್ತು ಆ ಟೇಬಲ್ ದಯಪಾಲಿಸಬಲ್ಲದು. ದುಃಖ ಹೇಳೀಕೊಳ್ಳುವ ಅಥವಾ ಯಾ ವನಕಾರಾತ್ಮಕ ಭಾವನೆಗಳಿಲ್ಲದ ಸುಮ್ಮನೆ ಸ್ನೇಹಿತರಾಗಿರುವ ವಿನಾಕಾರಣದ ಸುಮ್ಮಾನದ ಸಮಯವನ್ನೂ ಇಲ್ಲ ಹೊಂದಬಹುದು. ಯಾರೂ ಇಲ್ಲದ ಏಕಾಂತವನ್ನೂ ಈ ಪೇಯ ಸ್ವಾಗತಿಸುತ್ತದೆ.

‘ಒಬ್ಬಳೇ/ನೇ ಇರುವುದೂ ಒಂದು ಅವಕಾಶ. ನನ್ನನ್ನು ಜೊತೆಗೂಡಿಸಿಕೋ, ನಿನ್ನೊಳು ನೀನಾಗುವ ಜ್ಞಾನಿಯಾಗುವ ಅವಕಾಶ ನಿನ್ನದಾಗಿಸಿಕೋ’ ಎಂದು ಆಗಲೂ ಕಾಫಿ ಮುಗುಳ್ನಗುತ್ತದೆ. ಗಮನಿಸುತ್ತಾ ಜೊತೆಗೂಡುತ್ತದೆ. ಒಬ್ಬರೇ ಕುಳಿತು ಕಾಫಿ ಕೈಗೆತ್ತಿಕೊಂಡರೆ ಅದು ಮತ್ತೊಂದು ಅಂತರ್ಲೋಕ. ಇನ್ನೊಂದು ಕುರ್ಚಿ ಖಾಲಿಯಾಗಿದ್ದರೂ ಕೊರತೆಯೆನಿಸಲಾರದು.  ಕಾಫಿಯ ಸುವಾಸನೆ ಜೀವನದ ಎಲ್ಲಾ ಮಗ್ಗುಲುಗಳನ್ನೂ ವ್ಯಾಪಿಸಿಕೊಳ್ಳುವುದು ಹೀಗೆ.

ವಿನ್ಸೆಂಟ್ ಎಂಬ ವೇದಾಂತವನ್ನೂ ಒಳಗೊಂಡಿರುವ ನಲ್ಲತಂಬಿಯವರ ಕಾಫಿ ಜೀವನದಲ್ಲಿ ಬೇಕಾದ್ದಕ್ಕಿಂತಲೂ ಬೇಡಾದದ್ದೇ ಹೆಚ್ಚಿದೆಯೆಂದು ಹೇಳಿತ್ತಿದೆಯೇನೋ ಎಂಬ ಭಾವನೆ ಹುಟ್ಟಿಸುತ್ತಲೇ ಬದುಕನ್ನು ಸಹ್ಯವಾಗಿಸಲು ವಿರುದ್ಧಲಿಂಗಿಯ ಪ್ರೇಮವಷ್ಟೇ ಅಲ್ಲ ಸ್ನೇಹವೆಂಬ ಅಮೃತವೂ ಬೇಕೆಂದು ಹೇಳುತ್ತದೆ. ಅಷ್ಟಲ್ಲದೆ ಕಾಫಿ ತಂದಿಡುವ ವೇಟರ್ ಒಬ್ಬ ಸ್ನೇಹಿತನಾಗಲು ಸಾಧ್ಯವೇ? ನೋವಿನಲ್ಲಿ, ಯಾತನೆ ವೇದನೆಗಳಲ್ಲಿ ಜೊತೆಯಾಗುವ ಕೃಷ್ಣಸುದಾಮರಂಥಾ ಸ್ನೇಹ ವಿನ್ಸೆಂಟ್ ಮತ್ತು ಕಾಫಿಗುಡುಕರ ನಡುವೆಯೇರ್ಪಟ್ಟು ಅದೊಂದು ರೀತಿಯ ಆಹ್ಲಾದಕರವಾದ ಕೊಡು ಕೊಳ್ಳುವಿಕೆಯ ಬಾಂಧವ್ಯ.

ಕೊಡುವುದು ಕಾಫಿಯನ್ನಷ್ಟೇ ಅಲ್ಲ, ಪರವಾಗಿಲ್ಲ ಜೀವ ಹಿಡಿಯಬಹುದು ಎಂಬಂಥಾ ಸಾಂತ್ವನವನ್ನು. ‘ಕ್ಷಮೆ ಕೇಳಿಬಿಡಿ ಸರ್’ ಎನ್ನುವ ವಿನ್ಸೆಂಟ್ ನಲ್ಲಿ ಬುದ್ಧ ಆವಿರ್ಭವಿಸಿದ್ದಾನೆ ಎನಿಸಿದರೆ ‘ಎಷ್ಟು ದಿನ ಕಾಯುತ್ತೀರಾ ಸಾರ್’ ಎನ್ನುವಾಗ, ‘ಮಾತಿನಲ್ಲಿ ಕಳೆದುಕೊಂಡದ್ದನ್ನೂ ಮೌನದಲಿ ಕಂಡುಕೊಂಡಿರಾ ಸಾರ್’ ಎನ್ನುವಾಗ ಯಾವ ಜನ್ಮದಲ್ಲಿ ರೋಮಿಯೋ ಆಗಿದ್ದ ಇವನು ಎನಿಸುತ್ತದೆ. ಪ್ರೇಮನಿಷ್ಣಾತನೋ? ಆಧ್ಯಾತ್ಮ ಪ್ರವರ್ತಕನೋ? ಒಟ್ಟಾರೆ ಎಲ್ಲ ಬಲ್ಲ ಮಾರ್ಗದರ್ಶಕನೋ ಎಂಬಂತೆ ವಿನ್ಸೆಂಟ್ ನ ದರ್ಶನ.

‘ಕಳೆದುಕೊಳ್ಳದೆ ಪಡೆದವರಿಲ್ಲಾ ಸಾರ್’, ಗೋಳಾಡಿಸುವುದೂ ಸ್ನೇಹದ ಪರಿಯೇ ಸರ್’, ‘ಕೊಟ್ಟದ್ದು ಹೊರೆಯಾಗಿಯು, ಪಡೆದದ್ದು ಋಣವಾಗಿಯು ಇರಬಾರದು ಸಾರ್’, ‘ಮತ್ತೆ ಮರಳಿದರೆ ತೆಕ್ಕೆ ತೆರೆದಿರಬೇಕು ಸಾರ್’‘ನಿರಾಕರಣೆಯನ್ನೂ ಗೌರವದಿಂದ ಸ್ವೀಕರಿಸಿದರೆ ಪ್ರೀತಿ ಸಾರ್’ ‘ಕೈಯೊಡ್ಡುವುದು ಭಿಕ್ಷೆಗಲ್ಲ, ಪ್ರಸಾದಕ್ಕೆ’ ‘ಬೆಳೆಯುವುದಲ್ಲ, ವಿಕಾಸಗೊಳ್ಳುವುದು ಬದುಕು’ ಹೀಗೆ ನಿರಂತರವಾದ ಜೀವನಪ್ರೀತಿಯ ಮಾತುಗಳ ವಿನ್ಸೆಂಟ್ ಕಾಫಿಗೆ ತನ್ನದೇ ಹೊಸ, ತಾಜಾ ರುಚಿಯನ್ನು ಬೆರೆಸುತ್ತಾನೆ. ಅವನೊಂದಿಗೆ ಕವಿ ಸೇರಿಕೊಳ್ಳುವುದು ಹೀಗೆ-

‘ಸತ್ಯವನ್ನು ಬಹಳ ಹತ್ತಿರದಿಂದ

ನೋಡಬಾರದು ಸಾರ್’

ವಿನ್ಸೆಂಟ್ ಕಾಫಿಯನ್ನೇನೋ

ತಂದಿಟ್ಟುಹೋದ, ಈಗ

ನನ್ನ ತಲೆ ಸಿಡಿಯುತ್ತಿದೆ.

ಅದೇನಿದ್ದರೂ ಕಾಫಿಯ ನೈಜತೆ ಹೆಣ್ಣುಗಂಡಿನ ನಡುವಿನದೆಂಬ ಭಾವನೆ ಅದು ಹೇಗೆ ಹುಟ್ಟಿಬೆಳೆಯಿತೋ – ಹಲವು ರೂಪಕಗಳೊಂದಿಗೆ ಇದು ಅರ್ಧನಾರೀಶ್ವರ ಕಲ್ಪನೆಯೊಂದಿಗೆ ಬೆರೆತು ಮತ್ತಷ್ಟು ಸುವಾಸಿತಗೊಳ್ಳುವುದು ಇಂದು ನಿನ್ನೆಯದಲ್ಲ. ನಲ್ಲತಂಬಿಯವರು  ಅರ್ಧನಾರೀಶ್ವರ ಕಾದಂಬರಿಯನ್ನು ಅನುವಾದಿಸುವಾಗ ತಲೆಕೆಟ್ಟು, ಮನಕೆಟ್ಟು ಹಲವು ಕಪ್ ಕಾಫಿ ಆಸ್ವಾದಿಸಿರಲಿಕ್ಕೂ ಸಾಕು. ಅನುವಾದವೆನ್ನುವುದು ಮರುಹುಟ್ಟು.

ಹೆರಿಗೆಯ ನೆತ್ತರಧಾರೆಯಂಥಾ ನೋವು, ಬುದ್ಧಿ ಮನಸುಗಳಲ್ಲಿ ಉದ್ಭವಗೊಳ್ಳದೆ ಅನುವಾದ ಘಟಿಸದು. ಅದರಲ್ಲೂ ಕಾಫಿಗೆ ದೀರ್ಘ ಇತಿಹಾಸವಿರುವಂತೆ ಪೆರುಮಾಳ್ ಮುರುಗನ್ ವ್ಯಕ್ತಿತ್ವಕ್ಕೂ, ದೇವಸ್ಥಾನಗಳ ಕೆಲವು ಆಚರಣೆಗಳಿಗೂ, ದಾಂಪತ್ಯದ ನಡುವಿನ ವೈಯಕ್ತಿಕ ವಿಪ್ಲವಗಳಿಗೂ ಇತಿಹಾಸವಿದ್ದೇ ಇದೆ. ಹಂಚಿಕೊಳ್ಳುವ ಸಂಗಾತಿಗಳಾದ ಅವನು, ಅವಳು ಎಷ್ಟೋ ವರುಷ ಜೊತೆಗಿದ್ದರೂ ಅಪರಚಿತರಾಗುವ, ಒಬ್ಬರಿಗೊಬ್ಬರು ಅರ್ಥವಾದರೂ ಪ್ರತ್ಯೇಕ ಸಮಸ್ಯೆಗಳ ನಡುವೆ ತೊಳಲುವ ಮತ್ತು ಕೆಲವು ಸಲ ಒಬ್ಬರಿಂದ ದೂರವಾಗಿ ತನ್ನ ಸ್ವಂತದ ನಿರ್ಧಾರ ತೆಗೆದುಕೊಂಡು ದ್ವೀಪಗಳಾಗುವ ಸಂದರ್ಭಗಳೂ ಬಾರದೆ ಇರುವುದಿಲ್ಲ.

ಸಂದರ್ಭ ಬೇರೆಯದು, ಸಮಸ್ಯೆ ಬೇರೆಯದು ಅಥವಾ ಜೀವನಶೈಲಿಗಳೂ ಬೇರೆಯದಿರಬಹುದು. ಆದಾಗ್ಯೂ ಮನುಷ್ಯ ತಾನೇ ಸೃಷ್ಟಿಸಿಕೊಂಡಿರುವ ಪರಂಪರೆ, ಸಮುದಾಯಿಕ ಮತ್ತು ಕೌಟುಂಬಿಕ ಚೌಕಟ್ಟುಗಳ ಆಚೆಗೆ ತನ್ನದೇ ಸ್ವಂತದ ಅತಿ ಖಾಸಗಿಯಾದ ಲೋಕವೊಂದರಲ್ಲಿ ತಾನೊಬ್ಬನೇ ಉಳಿಯುವ ಸಂದರ್ಭಗಳು ದುಃಖವನ್ನು, ಅದನ್ನು ನುಂಗಿಕೊಳ್ಳುವ ಒಳ್ಳೆತನವನ್ನು, ಒಂಟಿಯಾಗುಳಿಯುವ ಆಯ್ಕೆಯನ್ನು ಒಪ್ಪಿಕೊಳ್ಳುವುದನ್ನು- ಈ ಎಲ್ಲವೂ ಒಂದಿಲ್ಲೊಂದು ಅಂಶದಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿರುವ ಸರ್ಪಮಂಡಲದಂತೆ ಗೋಚರಿಸುತ್ತದೆ. ಅದು ಗೋಜಲೂ ಹೌದು, ಬದುಕಿನ ಸೌಂದರ್ಯವೂ ಹೌದು.

ತನ್ನೊಳಗಿನ ನೋವು, ಸಂಕಟ, ಹತಾಶೆಗಳನ್ನು ತನ್ನಲೇ ಹುದುಗಿಸಿಕೊಂಡು ಬಾಳು ಮುಂದುವರಿಸುವ ಅನೇಕ ಪಾತ್ರಗಳು ನಮ್ಮ ಕಣ್ಣೆದುರಿಗಿವೆ. ಅವು ಓದುಗರಿಗೆ ಸ್ಫೂರ್ತಿಯನ್ನು, ಮುಂದೆ ಬಾಳುವ ಮಾರ್ಗದರ್ಶನವನ್ನೂ ನೀಡುತ್ತವೆ. ಅರ್ಧನಾರೀಶ್ವರದ ಕಾಳೀ ಮತ್ತು ಪೊನ್ನಾ. ಅವರಿಬ್ಬರ ಆತ್ಮೀಯತೆ ಎಷ್ಟೆಂದರೆ ಅದೆಷ್ಟು ಬಾರಿ ಒಟ್ಟಿಗೆ ಕಾಫಿ ಹಂಚಿಕೊಂಡು ಕುಡಿದರೋ ಎಂಬಷ್ಟು. ಕಾಳಿಯಾಗಲೀ, ಪೊನ್ನಾ ಆಗಲೀ ಒಬ್ಬರನ್ನೊಬ್ಬರು ಬಿಟ್ಟು ಅರ್ಧ ಕಪ್ ಕಾಫಿ ಸಹಾ ಕುಡಿಯಲಾರರೇನೋ ಎಂಬಷ್ಟು. ಆದರೂ ಇಬ್ಬರ ನಡುವೆ ಒಂದು ಸ್ಪೇಸ್‌ನ ಅಗತ್ಯವಿತ್ತೇ? ಹೌದೆನಿಸುತ್ತದೆ.

ವಿವಾದಗ್ರಸ್ತ ಲೇಖಕ ಪೆರುಮಾಳ್ ಮುರುಗನ್ ಫೇಸ್ ಬುಕ್ ನಲ್ಲಿ ಇಂದು ಲೇಖಕ ಸತ್ತ ಎಂದು ಘೋಷಿಸಿಕೊಂಡು ವ್ಯವಸ್ಥೆಯೆದುರು ಮೌನವಾಗಿಬಿಡುವ ಹಂತದಲ್ಲಿರುವಾಗ, ಸುಪ್ರೀಮ್ ಕೋರ್ಟ ತನ್ನ ತೀರ್ಪಿನಲ್ಲಿ, ಯಾವುದೇ ಪುಸ್ತಕವಾಗಿರಲಿ, ಅದು

‘ಇಷ್ಟವಾದ್ರೆ ಪುಸ್ತಕ ಓದ್ರಿ, ಇಲ್ಲದಿದ್ದರೆ ಪಕ್ಕಕ್ಕಿಡಿ’

ಎಂದು ಸ್ಪಷ್ಟವಾಗಿ ಹೇಳಿದಾಗ ಪೆರುಮಾಳ್ ಫೀನಿಕ್ಸ್ ಆದರು. ಅರ್ಧನಾರೀಶ್ವರ ಹೇಳುವ ಪೂರ್ಣಸತ್ಯಗಳು ಮತ್ತೆ ಜನರೆದುರು ಚರ್ಚೆಗೆ ತೆರೆದುಕೊಂಡವು. ಇಂಥ ಸಂದರ್ಭದಲ್ಲೇ ನಲ್ಲತಂಬಿಯವರು ಈ ಕಾದಂಬರಿಯನ್ನು ಕನ್ನಡಕ್ಕೆ ತಂದರು. ಕೋರ್ಟು ಪೆರುಮಾಳ್ ಮುರುಗನ್‌ರನ್ನು ಪ್ರತ್ಯಕ್ಷವಾಗಿ, ಮತ್ತು ಎಲ್ಲ ಪ್ರಗತಿಪರ ಚಿಂತನೆಯ ಲೇಖಕರನ್ನು ಪರೋಕ್ಷವಾಗಿ ನೈತಿಕದೃಷ್ಟಿಯಿಂದ ಬದುಕಿಸಿರುವ ಹೊತ್ತಿನಲ್ಲಿ ಕಾಳಿಮುತ್ತು ನಲ್ಲತಂಬಿಯವರು ತಮಿಳ್ಗನ್ನಡ ಸೇತುವೆಯಂತೆ ಕನ್ನಡಕ್ಕೆ ತಂದಿರುವ ಪೆರುಮಾಳ್ ಮುರುಗನ್ ಕಾದಂಬರಿ ‘ಅರ್ಧನಾರೀಶ್ವರ’ವನ್ನು ಮತ್ತೆಮತ್ತೆ ಮರುಓದಿಗೆ ಒಳಪಡಿಸಬೇಕಿದೆ. ಓದಲೇಬೇಕಾದ ಪ್ರಮುಖ ಕಾದಂಬರಿಗಳಲ್ಲಿ ಇದು ಮುಂಚೂಣಿಯಲ್ಲಿರುವ ಕೃತಿ.

ಗ್ರಾಮೀಣ ಪ್ರದೇಶದ ದೇವತೆಗಳ ಪೂಜೆಯಲ್ಲೊಂದು ಪದ್ಧತಿಯಿದೆ. ದೇವತೆಯ ಪೂಜೆಯನ್ನು ಊರ ಹೊರಬಾಗಿಲಲ್ಲಿ ನೆರವೇರಿಸಿ, ಎಲ್ಲವನ್ನೂ ಅಲ್ಲೇ ಬಿಟ್ಟು ಹಿಂದಿರುಗಿ ನೋಡದಂತೆ ಮನೆಗೆ ಬಂದುಬಿಡಬೇಕು. ಹಿಂದುಗಡೆ ಏನೇ ಆದರೂ, ಶಬ್ಧವಾದರೂ ಆ ಕಡೆ ನೋಡಕೂಡದು. ನೋಡಿದರೆ ಅಮಂಗಳ, ಕೇಡು ಇತ್ಯಾದಿ ನಂಬಿಕೆ. ಸನಾತನದ ಅನೇಕ ಶಿಷ್ಟಾಚಾರಗಳು ಹೀಗೇ ಇವೆ. ಏನೇ ಆದರೂ ಅದರತ್ತ ನೋಡಬಾರದು ಎಂಬುದು ಅನೇಕ ಸಂಕೇತಗಳನ್ನು ಧ್ವನಿಸುತ್ತದೆ. ಏನೆಲ್ಲಾ ನಡೆಯಬಹುದು ನಮ್ಮ ಸುತ್ತಮುತ್ತ, ಆದರೆ ಅದರತ್ತ ನೋಡುವುದು ಶ್ರೇಯಸ್ಸಲ್ಲ, ಕ್ಷೇಮವಲ್ಲ. ಆದ್ದರಿಂದ ಅದು ಇಲ್ಲವೆಂದೇ ಭಾವಿಸಬೇಕು- ಹೀಗೆ ನಂಬಿಸುವುದೇ ಧರ್ಮವೆಂದು ಅನೇಕ ಕಡೆ ಬಿಂಬಿತಗೊಂಡಿದೆ.

‘ಅರ್ಧನಾರೀಶ್ವರ’ದ ಕುರಿತಾದ ಅನೇಕ ಅಭಿಪ್ರಾಯಗಳು ಈ ಮಾದರಿಯವು. ಅಲ್ಲೇನಾದರೂ ನಡೆಯಲಿ, ಅದರ ಕಡೆ ನೋಡಬಾರದು, ಗಮನಿಸಬಾರದು, ಕಮೆಂಟಿಸಬಾರದು, ಟೀಕೆಯಂತೂ ನಿಷಿದ್ಧವೇ ಸರಿ. ತಿರುಚ್ಚಂಗೋಡಿನ ದೇವಾಲಯದ ಶಿವನ ಅರ್ಧನಾರೀಶ್ವರರೂಪದ ಜೊತೆಗೆ ಅಲ್ಲಿರುವ ಒಂದು ಸಂಪ್ರದಾಯ ಈ ಕಾದಂಬರಿಯ ಕೇಂದ್ರವಾದರೂ ನಿಜಕ್ಕೂ ಅದು ಕೇಂದ್ರವಲ್ಲ.

ದಂಪತಿಗಳಿಗೆ ಮಕ್ಕಳಾಗಲಿಲ್ಲವೆಂದಾಗ ದೋಷ ಗಂಡಿನದೂ ಆಗಿರಬಹುದೆಂಬ ಅರಿವು ಸನಾತನದ ಹಿರಿಯರಿಗೆ ಇದ್ದಿರಬಹುದು. ಅಂಥ ಸಂದರ್ಭಗಳಲ್ಲಿ ಆ ದೋಷಕ್ಕೆ ಇದೊಂದು ಪರಿಹಾರವಾಗಲಿ ಎಂಬ ಆಶಯದಿಂದ ಸೃಷ್ಟಿಸಿದ ಕಟ್ಟಳೆ ಒಂದು ರಾತ್ರಿಯ ಲೈಂಗಿಕ ಸ್ವಾತಂತ್ರö್ಯ. ಅದನ್ನು ಉಪಯೋಗಿಸಿಕೊಂಡು ಹೆಣ್ಣು ಗರ್ಭಿಣಿಯಾದರೆ ಅದಕ್ಕೆ ಸಂಪೂರ್ಣ ಸಾಮಾಜಿಕ ಮಾನ್ಯತೆಯುಂಟು. ಗಮನಿಸಿ, ಆ ಒಂದು ರಾತ್ರಿ ಮಾತ್ರ.!! ಕಟ್ಟಳೆಗಳ ಜಾಣತನ ಹೇಗಿದೆ..!! ಕಾದಂಬರಿಯ ಹೃದಯಂಗಮ ಭಾಗ ಪೊನ್ನಾ ತಾಯ್ತನಕ್ಕಾಗಿ ಹಂಬಲಿಸುವ ಪರಿ. ಅಂಥ ಸ್ಥಿತಿಯಲ್ಲಿ ಭರವಸೆಯ ಒಂದೆಳೆ ದೊರಕಿದರೂ ಆಕೆ ಯಾವುದಕ್ಕಾದರೂ ಸಿದ್ಧ. ಅಸಹಾಯಕತೆ ಧೈರ್ಯ ಕೊಡುವುದು ಹೀಗೆ. ಈ ಧೈರ್ಯದ ಹಿಂದಿರುವುದು ಸಮುದಾಯ ಒಪ್ಪಿಕೊಟ್ಟಿರುವ ಅನುಮತಿಗಾಗಿ. ಅನುಮತಿ ಸಿಗದಿದ್ದರೆ..? ಪೊನ್ನಾಳಂಥಾ ಸುಭಗ ಮನಸಿನ ಹೆಣ್ಣು ಧೈರ್ಯ ಮಾಡುತ್ತಿದ್ದಳೇ.?

ಇಲ್ಲಿ ಧೈರ್ಯಭಯದ ಪ್ರಶ್ನೆಗಿಂತ ಹೆಚು ಅಂತರಾತ್ಮದ ಕರೆ ಮುಖ್ಯ ತಾನೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಹೆಣ್ಣುಗಂಡಿನ ಸಂಬಂಧದಲ್ಲಿ ನುಸುಳುವ ಅಭಧ್ರತೆ, ಅತಿಸೂಕ್ಷ್ಮ ಇಷ್ಟಾನಿಷ್ಟಗಳು, ಖಾಸಗಿತನದ ಗಳಿಗೆಗಳಲ್ಲೂ ತಲೆಹಾಕುವ ಸಾಮಾಜಿಕ ಕಟ್ಟಳೆಗಳು, ಅವೈಜ್ಞಾನಿಕ ಆಲೋಚನೆಗಳು… ಇವು ನಿಜಕ್ಕೂ ಕಾದಂಬರಿಯ ಹರಹು. ಇಲ್ಲಿ ಅರ್ಧನಾರೀಶ್ವರ ಹೆಣ್ಣಿಗೆ ಸಹಾಯ ಮಾಡುವ ಆಚಾರವನ್ನೇ ಹೊಂದಿದೆಯೆಂದರೂ ಅದು ನಿಜಕ್ಕೂ ಸಹಾಯವೇ ಅಥವಾ ಹೆಣ್ಣನ್ನು ಮತ್ತು ಸಿಕ್ಕಿಬೀಳುವಂತೆ ಮಾಡುವ ವರ್ತುಲವೇ ಎಂಬುದು ಗಹನವಾದ ಪ್ರಶ್ನೆಯೆಂದರೆ ತಪ್ಪಾಗಲಿಕ್ಕಿಲ್ಲ. ಅತ್ತ ಸಾಮಾಜಿಕ ಒತ್ತಡ ಇತ್ತ ಗಂಡನ ಸೂಕ್ಷ್ಮಜ್ಞತೆ ಜೊತೆಗೆ ತನ್ನೊಳಗಿನ ತಾಯ್ತನದ ಒತ್ತಡ.. ಹೀಗೆ ಮಾನಸಿಕವಾಗಿ ಹೊಯ್ದಾಡಿ ಕೊನೆಗೊಂದು ನಿರ್ಧಾರ ತೆಗೆದುಕೊಂಡು ಬಿಡುವ ಹೆಂಡತಿ, ತಂದೆತನ ಅನಿವಾರ್ಯವೇನೂ ಅಲ್ಲವೆಂದು, ಹೆಂಡತಿ ತನ್ನವಳಾಗಿರುವುದು ದಾಂಪತ್ಯಕ್ಕೆ ಸಾಕು ಎಂದು ನಂಬಿರುವ ಗಂಡ… ಇದು ನಿಜಕ್ಕೂ ಕಾದಂಬರಿಯ ಆತ್ಮ.

ವ್ಯಕ್ತಿಗಳಿಗೆ ಹಿಂಸೆ ಎನಿಸುವುದನ್ನೇ ‘ಧರ್ಮ’ ಎಂದು ಸಮಾಜ ಎಷ್ಟೋ ಬಾರಿ ಏಕೆ ಪಟ್ಟುಹಿಡಿಯುತ್ತದೆ..? ವ್ಯಕ್ತಿಗಳಿಗೆ ಬೇಕಾದ್ದು ಸಮಾಜಕ್ಕೆ ಬೇಡವಾಗುವುದಾದರೂ ಏಕೆ..? ‘ವಿಜ್ಞಾನ’ ಎಂಬುದರ ಪೂರ್ಣಪ್ರಯೋಜನ ಪಡೆದುಕೊಳ್ಳುವವರು ಸಹಾ ಮಕ್ಕಳು, ದಾಂಪತ್ಯ, ಪ್ರೀತಿ ಪ್ರಣಯಗಳ ವಿಷಯದಲ್ಲಿ ಅವೈಜ್ಞಾನಿಕವಾದುದನ್ನೇ ಧರ್ಮ ಎಂದುಕೊಳ್ಳುವುದು ಏಕೆ..? ಸಂಕುಚಿತ ಭಾವನೆಗಳಿಂದ ಕೂಡಿದ, ಇತರರನ್ನು ನೋಯಿಸುವ ವ್ಯಕ್ತಿಗಳು ಹಾಗೆ ಮಾಡುವಾಗ ಸಂಕೋಚ, ದಾಕ್ಷಿಣ್ಯ ಸ್ವಲ್ಪವಾದರೂ ಅನುಭವಿಸಬಾರದೇಕೆ..?

ಹಾಗೆ ಸುತ್ತಲಿನ ಪರಿಸರ ಯಾವುದನ್ನು ಅನೈತಿಕವೆನ್ನುತ್ತೇವೋ ಅದರತ್ತ ತಾನಾಗಿಯೇ ದೂಡುತ್ತದಲ್ಲ.. ಇಲ್ಲಿ ಯಾರದು ತಪ್ಪು..? ಯಾರದು ಸರಿ..? ಕಥಾನಾಯಕಿಗೆ ಮಕ್ಕಳಾಗಿಲ್ಲವೆಂದು ಶುಭಕಾರ್ಯಗಳಲ್ಲಿ ಅವಳನ್ನು ದೂರವಿಡುವ ಹೆಂಗಳೆಯರು ಏಕಷ್ಟು ಸ್ಯಾಡಿಸ್ಟಗಳಾಗಿರುತ್ತಾರೆ..? ಅವರಿಗೆ ಅರಿವನ್ನು ನೀಡುವ ಕಾರ್ಯಕ್ರಮವೂ ಔಪಚಾರಿಕವಾಗಿ ನಡೆಯಲೇಬೇಕೇ..? ತಮ್ಮಷ್ಟಕ್ಕೆ ತಾವು ತಿಳಿದುಕೊಂಡು, ತಿದ್ದಿಕೊಳ್ಳುವ ಹೃದಯವಂತಿಕೆ, ಬುದ್ಧಿವಂತಿಕೆ ಜೀವನಪರ್ಯಂತ ಅನೇಕರಿಗೆ ಬರುವುದೇ ಇಲ್ಲವಲ್ಲ.. ಏಕೆ..? ಹೀಗೆ ಅನೇಕ ಪ್ರಶ್ನೆಗಳನ್ನು ಎತ್ತುತ್ತ ಹೋಗುವ ಈ ಕಾದಂಬರಿ ಉತ್ತರವನ್ನು ಅವರವರೇ ನಿರ್ಧರಿಸಲು ಬಿಟ್ಟುಬಿಡುತ್ತದೆ.

ಪೆರುಮಾಳ್ ಮುರುಗನ್ ರ ಯಶಸ್ಸು ಎಲ್ಲಿದೆಯೆಂದರೆ ಅವರು ಯಾವ ಜಡ್ಜಮೆಂಟನ್ನೂ ಕೊಡುವುದಿಲ್ಲ. ಹೀಗಿದೆ ಇದು ಎಂದು ಮಾತ್ರ ಹೇಳಿದ್ದಾರೆ. ಆದರೆ ಅವರ ಗ್ರಹಿಕೆ ಅದ್ಭುತವಾಗಿ ಕೆಲಸ ಮಾಡಿದೆ. ಗ್ರಹಿಕೆಯ ಉದ್ದೇಶ ನೇರ ಮತ್ತು ಸ್ಪಷ್ಟವಾಗಿರುವುದು ಕಾದಂಬರಿ ಚರ್ಚಿತಗೊಳ್ಳಲು ಕಾರಣವಾಯ್ತು. ವಿಷಯಸಾಂದ್ರತೆ ಎಷ್ಟು ದಟ್ಟವಾಗಿದೆಯೋ ಭಾಷೆ ಅಷ್ಟು ಸರಳವಾಗಿದೆ. ಜನಪದದ ಸಹಜಕೊರಳಿನಿಂದ ಬಂದಂತಿರುವ ಆಡುಮಾತು, ಅದನ್ನು ಅಷ್ಟೇ ಸಹಜತೆಯಿಂದ ಕನ್ನಡಕ್ಕೆ ತಂದಿರುವ ನಲ್ಲತಂಬಿಯವರ ಭಾಷೆಯ ಪರಿಪಕ್ವತೆಯಿಂದಾಗಿ ಕಾದಂಬರಿ ಅನೇಕಬಾರಿ ಓದಿಸಿಕೊಂಡರೂ ಆಶ್ಚರ್ಯವಿಲ್ಲ.

ಇದು ಸಾಮಾಜಿಕ ನೆಲೆಗಟ್ಟಿನ ಸಂಗತಿಯಾಯಿತು. ಖಾಸಗಿತನದ ಭಾವುಕತೆಯ ದೃಷ್ಟಿಕೋನದಿಂದ ಅಳೆದಾಗ ಈ ಕಥೆಗೆ ಬೇರೆಯದೇ ಒಂದು ಆಯಾಮ ದೊರಕುತ್ತದೆ. ಸ್ತ್ರೀ ಪುರುಷ ಬಾಂಧವ್ಯದ ಪೊಸೆಸಿವ್‌ನೆಸ್, ತನ್ನದೆನ್ನುವ ಪ್ರೀತಿ ಕಳೆದುಹೋಗುವ ಭೀತಿಯಲ್ಲಿ ನರಳುವ ಮನಸು, ಖಂಡುಗಪ್ರೀತಿ ಗಂಡನಿಂದ ದೊರಕಿದರೂ ಸಮಾಜ ಬಯಸುವುದನ್ನೂ (ಅರ್ಥಾತ್ ಮಗುವನ್ನು) ಪಡೆದುಕೊಳ್ಳಬೇಕು ಎಂದುಕೊಳ್ಳುವ ಹೆಣ್ಣು ನಿಜಕ್ಕೂ ಪ್ರೀತಿಯನ್ನು ಅರ್ಥಮಾಡಿಕೊಳ್ಳದೇ ಹೋದಳೇ..? ಅಥವಾ ಗಂಡ ಇದನ್ನೂ ಒಪ್ಪಿಕೊಳ್ಳಲಿ ಎಂಬ ಆಸೆಯೇ? ಗಂಡಸು ಇನ್ನೊಬ್ಬಳೊಂದಿಗೆ ಇದ್ದಿದ್ದರೆ ತಾನು ಸಹಿಸುತ್ತಿರಲಿಲ್ಲವೇ..? ಹಾಗೇ ಇದೂ ಎಂದು ಅವಳಿಗನಿಸಿರಲೂಬಹುದು. ಇದು ಸರಿತಪ್ಪಿನ ಪ್ರಶ್ನೆಯಾಗಿ ಉಳಿಯದೆ ವೈಯಕ್ತಿಕ ಭಿನ್ನತೆಯನ್ನು ಪ್ರತಿನಿಧಿಸುತ್ತದೆ.

ಮಾಸ್ತಿಯವರ ‘ವೆಂಕಟಿಗನ ಹೆಂಡತಿ’ ತಿರುಗಿ ಮನೆಗೆ ಬರುವುದಿಲ್ಲವೇ..? ಬಂದಾಗ ವೆಂಕಟಿಗ ಮೌನವಾಗಿದ್ದು ಸ್ವಾಗತಿಸುವುದಿಲ್ಲವೇ? ಇದಕ್ಕೆ ವಿರುದ್ಧವಾಗಿ ‘ನಿಲ್ಲುನಿಲ್ಲೇ ಪತಂಗ..’ ಎಂದು ತನ್ನೊಳಗನ್ನು ತಾವೇ ಸುಟ್ಟುಕೊಂಡವರು ಇದ್ದಾರೆ. ಅಂಥ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ಯೇ ಖಾಸಗಿತನದ ಸಮಸ್ಯೆ ಬಂದಾಗ ಜರ್ಝರಿತರಾಗಿ ಹೋಗುತ್ತಾರೆ. ಕೌಟುಂಬಿಕ ಸಾವುಗಳನ್ನು ಅತ್ಮಹತ್ಯೆಯನ್ನು ಕಣ್ಣೆದುರೇ ಕಾಣಬೇಕಾಗಿ ಬಂದು ತತ್ತರಿಸಿಹೋಗುತ್ತಾರೆ. ಅಂಥದ್ದರಲ್ಲಿ ಲೈಂಗಿಕ ಸ್ವಾತಂತ್ರ್ಯವನ್ನು ಒಂದು ಧಾರ್ಮಿಕಕಟ್ಟಳೆಯೇ ಆಚರಣೆಯ ರೂಪದಲ್ಲಿ ಕೊಟ್ಟಾಗ ಯಾವ ಹೆಣ್ಣಾದರೂ ಏಕೆ ಬಳಸಿಕೊಳ್ಳಬಾರದು…?

ನಿಜ, ಪರಪುರುಷನೊಟ್ಟಿಗೆ ಒಂದು ರಾತ್ರಿ ಕಳೆಯುವ ಅವಕಾಶವನ್ನು ಆ ದೇವಾಲಯದ ಸಂಪ್ರದಾಯವೇ ಕೊಟ್ಟಿರಬಹುದು. ಆದರೆ ದಾಂಪತ್ಯಪ್ರೀತಿ ಎಂಬುದೂ ಒಂದಿರುತ್ತದಲ್ಲ..? ಭಾವುಕವಾಗಿ ಯೋಚಿಸುವಾಗ ಹಂಚಿಕೊಳ್ಳುವುದು ಅನೇಕ ಬಾರಿ ಸಾವಿಗಿಂತ ಕೆಟ್ಟದ್ದು, ನಿಜವೇ.. ಆದರೆ ವಸ್ತುಸ್ಥಿತಿ ವಿಭಿನ್ನವಾಗಿರುತ್ತದಲ್ಲ… ಅದನ್ನು ತಿರಸ್ಕರಿಸುವುದು ಬದುಕನ್ನು ನಿರಾಕರಿಸಿದಂತೆ. ಹಂಚಿಕೊಳ್ಳದ ಯಾವುದೂ ಪ್ರಕೃತಿಯಲ್ಲಿಲ್ಲ. ನನಗೊಬ್ಬನಿ/ಳಿಗೆ ಎನ್ನುವುದು ಪ್ರಕೃತಿಯ ನಿಯಮಕ್ಕೆ ವಿರುದ್ಧ. ನಿಜಕ್ಕೂ ಆ ಕುರಿತೇ ಪೆರುಮಾಳ್ ಮುರುಗನ್ ಕೇಂದ್ರೀಕರಿಸುವುದು ಎಂದು ತೋರುತ್ತದೆ. ಕಾದಂಬರಿಯ ಅಂತ್ಯ ಕಣ್ಣೀರು ತರಿಸುತ್ತದೆ- ಪ್ರೀತಿಸುವ ಯಾವ ಜೀವಕ್ಕೂ ಈ ಪರಿಯ ನೋವು ಒದಗಬಾರದು ಎನಿಸುತ್ತದೆ.

ಹಾಗೆ ನೋಡಿದರೆ ಈ ಕಾದಂಬರಿಯ ಪಾತ್ರಗಳಲ್ಲಿ ಯಾರೂ ಸುಖವಾಗಿಲ್ಲ.

ತನ್ನದಲ್ಲದ ತಪ್ಪಿಗೆ ಕೆಂಡದ ಮೇಲೆಯೇ ನಡೆಯಬೇಕಾಗಿ ಬರುವ ಪೊನ್ನಾ, ಪ್ರೀತಿಸುತ್ತಲೇ ಅವಳೆನ್ನ ಆಸ್ತಿ ಎಂಬ ಭಾವನೆಯನ್ನು ಒಳಗೆಲ್ಲೋ ಒಂದುಕಡೆ ಹೊಂದಿರುವ ಕಾಳಿ, ತಂತಮ್ಮ ಕ್ಷಿತಿಜಗಳಲ್ಲಿ ಅಸುಖಿಗಳು. ಇನ್ನು ಇವರಿಗೆ ಮಕ್ಕಳಾಗಲಿಲ್ಲವಲ್ಲ ಎಂದು ತಾವೇ ಹೆಚ್ಚಾಗಿ ಚಿಂತಿಸುವ ಬಂಧುಬಾಂಧವರು, ನೆರೆಹೊರೆಯವರೂ ಪರಚಿಂತೆಯಲ್ಲಿ ಮುಳುಗಿ ಅಸುಖಿಗಳು… ಆ ಕ್ಷಣಕ್ಕೆ ಏನು ತೋಚುತ್ತದೋ ಅದನ್ನು ಎಲ್ಲರೂ ಅಪ್ಪಿಕೊಳ್ಳುವವರೇ..

ಈ ಕಾದಂಬರಿ ಬರೆದ ನಂತರ ಪೆರುಮಾಳ್ ಮುರುಗನ್ ಎದುರಿಸಿದ ವಿರೋಧ, ವಿವಾದ ಕಡಿಮೆಯದಲ್ಲ. ‘ನನ್ನೊಳಗಿನ ಕಾದಂಬರಿಕಾರ ಈ ದಿನ ಸತ್ತ’ ಎಂದು ಅತ್ಯಂತ ದುಃಖದಾಯಕ ಫೇಸ್‌ಬುಕ್ ಸ್ಟೇಟಸ್ ಹಾಕಿಕೊಂಡು ಕಣ್ಮರೆಯೇ ಆಗಿಬಿಡಬಹುದಾದ ಅಪಾಯಕ್ಕೊಳಗಾಗಿದ್ದವರು. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲ ಕಡೆಯಿಂದಲೂ ದೌರ್ಜನ್ಯಕ್ಕೊಳಗಾಗುತ್ತಿರುವ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟ ಜೀವದಾಯಿನಿಯಾದ ತೀರ್ಪನ್ನು ಕೊಟ್ಟಿದೆ.

ಕನ್ನಡದ ‘ಅರ್ಧನಾರೀಶ್ವರ’ ಪುಸ್ತಕವನು ಕೈಲಿ ಹಿಡಿದುಕೊಂಡಾಗ ಅಚ್ಚರಿ ಹುಟ್ಟಿಸಿದ್ದು ಅದರ ಸರಳತೆ. ಅತ್ಯುತ್ತಮ ಕ್ವಾಲಿಟಿಯ, ಅಷ್ಟೇ ಸರಳವಾದ ಪುಸ್ತಕವನ್ನು ಗೌರಿಲಂಕೇಶ್ ರೂಪಿಸಿದ್ದಾರೆ. ಇದಕ್ಕೆ ಮುನ್ನುಡಿಯಾಗಿ ಡಾ. ಎಂ. ಎಸ್. ಆಶಾದೇವಿಯವರು ‘ಇದು ಆದಿಮ ಸತ್ಯ ಮತ್ತು ಲೋಕಸತ್ಯಗಳ ನಡುವಿನ ಸಂಘರ್ಷದ ನಿರೂಪಣೆ’ ಎಂದು ಕರೆದಿದಾರೆ. ಸತ್ಯವಾದ ಮಾತು.

‍ಲೇಖಕರು Avadhi

27 April, 2021

1 Comment

  1. shivakumar kampli

    ಚಂದದ ಓದುವ ಕುತೂಹಲ ಹೆಚ್ಚಿಸುವ ಬರಹಕ್ಕೆ ಶುಭಾಶಯಗಳು
    ಒಳ್ಳೆಯ ಬರಹ ನೀಡಿದ ಅವಧಿಗೆ ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading